ಮಂಗಳವಾರ, ಆಗಸ್ಟ್ 27, 2013

ಎಚ್. ಕೆ. ರಂಗನಾಥ


ಎಚ್. ಕೆ. ರಂಗನಾಥ

ನಾಟಕಕಾರ, ರಂಗತಜ್ಞ, ನಟ, ಸಾಹಿತಿ , ಮಾಧ್ಯಮತಜ್ಞ ಡಾ. ಎಚ್. ಕೆ. ರಂಗನಾಥ ಅವರು ಆಗಸ್ಟ್ 8, 1924ರಂದು  ಮೈಸೂರಿನಲ್ಲಿ ಜನಿಸಿದರು. ತಂದೆ ಎಚ್‌ ಕೃಷ್ಣಸ್ವಾಮಿ ಅವರು ಮತ್ತು  ತಾಯಿ ಚಿನ್ನಮ್ಮನವರು. 

ಮೈಸೂರಿನ ವೀವರ್ಸ್ ಲೇನ್ ಎಂಬ ಹರಹಿನಲ್ಲಿ ವಾಸಮಾಡುತ್ತಿದ್ದ ಕನ್ನಡದ ಹಿರಿಯ ವಿದ್ವಾಂಸರಾದ ಟಿ. ಎಸ್. ವೆಂಕಣ್ಣಯ್ಯನವರ ಮನೆಯ ಎದುರಿಗೆ ಎಚ್. ಕೆ. ರಂಗನಾಥ ಅವರ ಮನೆಯಿತ್ತು.  ಬೆಳಗ್ಗೆ ಎದ್ದು ವೆಂಕಣ್ಣಯ್ಯನವರು ವಾಯುವಿಹಾರಕ್ಕೆ ಹೋಗುತ್ತಿದ್ದುದುಂಟು.  ಹೇಗೋ ಒಂದು ಸಲ ಅವರೊಡನೆ ಹುಡುಗ ರಂಗನಾಥನೂ ವಾಯು ವಿಹಾರಕ್ಕೆ ಹೊರಟುಬಿಟ್ಟ.  ಇದೇ ಅಭ್ಯಾಸವಾಗಿಹೋಯಿತು.  ಈ ವಾಯುವಿಹಾರದ ವ್ಯಾಯಾಮ ರಂಗನಾಥನಿಗೆ ದೊಡ್ಡವರಂತೆ ಬಾಳುವ ಶಿಕ್ಷಣವಾಗಿಹೋಯಿತು.  ಬಾಲಕ ರಂಗನಾಥನೊಡನೆ ಏನೇನೋ ಹರಟುತ್ತ ಅವನನ್ನು ನಗಿಸುತ್ತ ವೆಂಕಣ್ಣಯ್ಯನವರು ಹುಡುಗನಲ್ಲಿ ಅನೇಕ ಭವಿಷ್ಯದ ಕನಸುಗಳನ್ನು ಕಟ್ಟಿಬಿಟ್ಟರು.  ಹೀಗೆ ದೊರೆತ ಜೀವನದರ್ಶನ ರಂಗನಾಥರಿಗೆ ಮುಂದಿನ ಜೀವನದಲ್ಲಿ ವ್ಯವಹರಿಸುವುದಕ್ಕೆ ಸದಾ ಮೇಲ್ಪಂಕ್ತಿಯಾಯಿತು.  ರಂಗನಾಥರು ಕಾಲೇಜು ವಿದ್ಯಾಭ್ಯಾಸವನ್ನು ಮಾಡಬೇಕಾದಾಗ ವೆಂಕಣ್ಣಯ್ಯನವರು ತೀರಿಕೊಂಡರು.  ಆದರೆ ಅವರು ಕಟ್ಟಿದ್ದ ಆದರ್ಶ ಮಾತ್ರ ರಂಗನಾಥರ ಮನಸ್ಸಿನಲ್ಲಿ ಸದಾ ಎಚ್ಚರವಾಗಿತ್ತು. 

ಕಾಲೇಜು ಸೇರುವ ಹೊತ್ತಿಗೆ ಎಚ್. ಕೆ. ರಂಗನಾಥರಿಗೆ ಸಾಕಷ್ಟು ಸಂಗೀತದ ಕಲಿಕೆಯಾಗಿತ್ತು.  ನಾಟಕದಲ್ಲಿ ಪಾತ್ರಗಳನ್ನು ವಹಿಸಿ ನಟಿಸುವ ಹವ್ಯಾಸ ಬೆಳೆಯಿತು.  ಶಿವರಾಮ ಕಾರಂತರ ರಚನೆಯಾದ   ಕಿಸಾಗೋತಮಿನಾಟಕದ ಪ್ರಮುಖ ಹೆಣ್ಣು ಪಾತ್ರವನ್ನು ಅಭಿನಯಿಸಿ ಅತ್ಯಂತ  ಪ್ರಸಿದ್ಧಿಯನ್ನು ಪಡೆದಿದ್ದರು.  ಹೀಗೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖಂಡತ್ವ ಯಾವಾಗಲೂ ಅವರದ್ದಾಗಿತ್ತು.  ಅವರು ವಿಶಿಷ್ಟ ಹಾಸ್ಯ ಪ್ರಜ್ಞೆಯ, ಎಲ್ಲರನ್ನೂ ನಕ್ಕು ನಗಿಸುವ ಮಾತುಗಾರಿಕೆಯ ಸೊಗಸುಗಾರರೆಂದು ಪ್ರಖ್ಯಾತಿ ಪಡೆದಿದ್ದರು.

ಸುಮಾರು 1936ರ ವೇಳೆಗೆ ಮೈಸೂರಿಗೆ ಆಕಾಶವಾಣಿಯ ಪ್ರವೇಶವಾಯಿತು.  ಪ್ರಸಿದ್ಧ ಮನಶಾಸ್ತ್ರಜ್ಞರಾಗಿದ್ದ ಡಾ. ಎಂ. ವಿ. ಗೋಪಾಲಸ್ವಾಮಿಯವರು ತಮ್ಮ ಸ್ವಂತ ಖರ್ಚಿನಿಂದ ಪ್ರಸಾರಮಾಧ್ಯಮವನ್ನು ತಂದು ಹುಟ್ಟು ಹಾಕಿದ್ದರು.  ಆಗ ತಾನೇ ಬಂದ ರೇಡಿಯೋಎಂಬ ಹೆಸರು ಮೈಸೂರಿನ ಜನತೆಯ ಬಾಯಲ್ಲಿ ಚಲಾವಣೆಗೆ ಬಂತು.  ಗೋಪಾಲಸ್ವಾಮಿ ಅವರ ಮನೆಯ ಮಹಡಿಯ ಮೇಲೆ ಈ ಪ್ರಸಾರ ಯಂತ್ರಾಗಾರವು ಸ್ಥಾಪಿತವಾಗಿತ್ತು.  ಸಂಜೆಯ ಹೊತ್ತು ಅವರ ಮನೆಯ ಮುಂದಿನ ಬಯಲಿನಲ್ಲಿ ಜನ ಕಲೆತು ರೇಡಿಯೋ ವಾರ್ತೆಗಳನ್ನೂ ವಿದ್ವಾಂಸರ ಭಾಷಣಗಳನ್ನೂ ಕಿರುನಾಟಕಗಳನ್ನೂ ಕೇಳುತ್ತಾ ಇದ್ದರು.  ಈ ವ್ಯವಸ್ಥೆಯಲ್ಲಿ ಅಂದಿನ ಬಹುತೇಕ ಮೈಸೂರಿನ ವಿದ್ವಾಂಸರ ಜೊತೆಗೆ ರಂಗನಾಥರಿಗೂ ವಾರ್ತೆಗಳನ್ನು ಓದುವ ಅವಕಾಶ ಸಿಕ್ಕಿತು.  ಮುಂದೆ  ಆಕಾಶವಾಣಿ ಪ್ರಾರಂಭಗೊಂಡಾಗ ರಂಗನಾಥರು ಆಕಾಶವಾಣಿಯ ನಾಟಕ ವಿಭಾಗದ ನಿರ್ದೇಶಕರಾಗಿ ಅಪಾರ ಯಶಸ್ಸನ್ನು ಪಡೆದರು.  ಇದಕ್ಕೆ ಮುಂಚಿತವಾಗಿ ಎಚ್. ಕೆ. ರಂಗನಾಥರು ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಕಾಲ ಉಪನ್ಯಾಸಕರಾಗಿದ್ದರು.

ಅಲ್ಲಿಂದ ಮುಂದೆ ಎಚ್. ಕೆ. ರಂಗನಾಥರು ನಾಟಕ ವಿಭಾಗದ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆದು ದೆಹಲಿಯ ಆಕಾಶವಾಣಿ ಕೇಂದ್ರದಲ್ಲಿ ಸಂಗೀತನಾಟಕ ವಿಭಾಗದ ಮುಖ್ಯಾಧಿಕಾರಿಗಳಾಗಿ ಪ್ರಸಾರ ಮಾಧ್ಯಮಕ್ಕೆ ಹಿರಿಮೆಯನ್ನು ತಂದುಕೊಟ್ಟರು.  ಬೆಂಗಳೂರು, ಧಾರವಾಡದ ಆಕಾಶವಾಣಿ ಕೇಂದ್ರಗಳಲ್ಲಿ ಅವರು ಆಕಾಶವಾಣಿಗಾಗಿ ರಚಿಸಿ, ನಿರೂಪಿಸಿ ನಿರ್ದೇಶಿಸಿ, ಪ್ರಸಾರಮಾಡಿದ ರೇಡಿಯೋ ರೂಪಕಗಳು, ನಾಟಕಗಳು ನೂರಾರು. ರಂಗನಾಥ್ ಅವರು ಬೆಂಗಳೂರು ವಿಶ್ವವಿದ್ಯಾಲಯದ  ನಾಟಕ, ಸಂಗೀತ ವಿಭಾಗದ ಪ್ರಾದೇಶಿಕ ನಿರ್ದೇಶಕರಾಗಿ, ಯು.ಜಿ.ಸಿ. ರಂಗತಜ್ಞರಾಗಿಭಾರತೀಯ ವಿದ್ಯಾಭವನದ ಗಾಂಧಿವಿಜ್ಞಾನ ಮತ್ತು ಮಾನವೀಯ ಮೌಲ್ಯ ಕೇಂದ್ರದ ನಿರ್ದೇಶಕರಾಗಿಯೂ  ಸೇವೆ ಸಲ್ಲಿಸಿದ್ದರು.

ನಾಟಕಗಳ ನಿರ್ದೇಶಕ, ಸಂಗೀತದ ಮಾರ್ಗದರ್ಶಕ, ಜಾನಪದ ಕಲೆಗಳ ಪ್ರಸಾರಕ ಮತ್ತು ಸಾಂಸ್ಕೃತಿಕ ವಿನಿಮಯ ವ್ಯವಸ್ಥೆಯ ನಿರ್ಮಾಪಕ ಹೀಗೆ ಹಲವು ದೃಷ್ಟಿಯಿಂದ ರಂಗನಾಥರು ಮಾಡಿದ ಕಾರ್ಯ ಮಹತ್ವದ್ದು.   ಯುನೆಸ್ಕೊ ಫೆಲೊಷಿಪ್‌ ಪಡೆದು ಏಷ್ಯಾ, ಆಫ್ರಿಕಾ ಅಮೆರಿಕಾ ಮುಂತಾದ ಅನೇಕ  ದೇಶಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿ ಭಾರತದ ಕಲೆಯನ್ನು ಪರಿಚಯ ಮಾಡಿದರು.  ಯಕ್ಷಗಾನ, ಸೂತ್ರದ ಗೊಂಬೆಯಾಟ, ತೊಗಲುಗೊಂಬೆಯಾಟ ಮುಂತಾದ ಇತರ ಅನೇಕ ಜಾನಪದ ನೃತ್ಯ ಇತ್ಯಾದಿಗಳನ್ನೆಲ್ಲ ಇತರ ದೇಶಗಳವರಿಗೆ ಪರಿಚಯ ಮಾಡಿಕೊಟ್ಟರು.  ಎಲ್ಲ ಕಡೆ ಜನ ಇವರ ಪ್ರದರ್ಶನಗಳನ್ನು ಮಂತ್ರಮುಗ್ಧರಾಗಿ ವೀಕ್ಷಿಸಿದರು. 

ಡಾ. ಎಚ್. ಕೆ. ರಂಗನಾಥರು ಕನ್ನಡದಲ್ಲಿ ಅನೇಕ ಗ್ರಂಥಗಳನ್ನೂ ಬರೆದಿದ್ದಾರೆ.  ಅವರ ಕನ್ನಡದ ಶೈಲಿಯಲ್ಲಿ ನುಸುಳುತ್ತಿದ್ದ ಲಘುಹಾಸ್ಯದ ಮಿಂಚು ಆ ಕೃತಿಗಳ ವಿಶಿಷ್ಟ ಗುಣವಾಗಿತ್ತು.  ಕೇಂದ್ರ ಸಂಗೀತ ನಾಟಕ ಅಕಾಡಮಿಗಾಗಿ ಅವರು  ಸಂಪಾದಿಸಿಕೊಟ್ಟ ಬೆಳ್ಳಿ ಹಬ್ಬದ  ಸಂಪುಟವು ಭಾರತೀಯ ನೃತ್ಯ ನಾಟಕಗಳಿಗೊಂದು ಆಕರ ಗ್ರಂಥವೆನಿಸಿದೆ. ಕರ್ನಾಟಕ ನಾಟಕದ ಬಗ್ಗೆ ಕರ್ನಾಟಕ ರಂಗಭೂಮಿ (The Karnataka Theatre)’ ಎಂಬುದು ಅವರ ಸಂಶೋಧನಾ ಪ್ರೌಢ ಪ್ರಬಂಧವಾಗಿದೆ.  ದುರಂತ ಮತ್ತು ಇತರ ನಾಟಕ, ಗರೂಡ ಸದಾಶಿವರಾಯರು, ಎ.ವಿ. ವರದಾಚಾರ್ಯರು, ನೆನೆದವರು ಮನದಲ್ಲಿ, ಜೇನಹನಿ (ವ್ಯಕ್ತಿಚಿತ್ರ); ನೆನಪಿನ ನಂದನ (ಆತ್ಮಕಥೆ), ವೈದ್ಯನಲ್ಲದ ಡಾಕ್ಟರು, ಕ್ಯಾಪಿಟಲ್‌ ಪನಿಷ್‌ಮೆಂಟ್ (ನಗೆಬರಹ) ಮುಂತಾದವು ಅವರ ಪ್ರಸಿದ್ಧ ಕೃತಿಗಳಲ್ಲಿ ಸೇರಿವೆ.

ಡಾ. ಎಚ್. ಕೆ. ರಂಗನಾಥರಿಗೆ ಕರ್ನಾಟಕ ನಾಟಕ ಅಕಾಡಮಿ ಫೆಲೋಷಿಪ್‌, ರಾಜ್ಯೋತ್ಸವ ಪ್ರಶಸ್ತಿ, ಮೋತಿಲಾಲ್‌ ವಜ್ರಮಹೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ  ಮುಂತಾದ ಹಲವಾರು ಗೌರವಗಳು ಸಂದಿದ್ದವು. 

ಈ ಮಹಾನ್ ಸಾಧಕರು ಮಾರ್ಚ್ 26, 2003ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.


ಮಾಹಿತಿ ಕೃಪೆ:  ಪ್ರೊ. ಜಿ. ವೆಂಕಟಸುಬ್ಬಯ್ಯನವರ ಸಿರಿಗನ್ನಡ ಸಾರಸ್ವತರುಕೃತಿ ಮತ್ತು ಕಣಜ.

Tag: H. K. Ranganath

ಕಾಮೆಂಟ್‌ಗಳಿಲ್ಲ: