ಶನಿವಾರ, ಆಗಸ್ಟ್ 31, 2013

ಭಾರ್ಗವಿ ನಾರಾಯಣ್

ಭಾರ್ಗವಿ ನಾರಾಯಣ್

ಪ್ರಖ್ಯಾತ ರಂಗಭೂಮಿ ಹಿರಿಯ  ಕಲಾವಿದೆ, ದೂರದರ್ಶನ ಧಾರವಾಹಿಗಳ ಮೌಲ್ಯಯುತ ಪಾತ್ರಗಳ ನಿರ್ವಹಣೆಯ ಅನುಭವಿಕ ಪಾತ್ರಧಾರಿ ಎಂದೇ ಪ್ರಸಿದ್ಧರಾಗಿರುವ ಭಾರ್ಗವಿ ನಾರಾಯಣ್ ಅವರು ಫೆಬ್ರುವರಿ 4, 1938ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು.  ತಂದೆ ಡಾ. ಎಂ. ರಾಮಸ್ವಾಮಿ, ತಾಯಿ ನಾಮಗಿರಿಯಮ್ಮ. ಮಹಾರಾಣಿ ಕಾಲೇಜಿನಿಂದ  ಬಿ.ಎಸ್ಸಿ. ಪದವಿ ಪಡೆದ  ನಂತರದಲ್ಲಿ  ಇಂಗ್ಲಿಷ್‌ನಲ್ಲಿ ಎಂ.ಎ. ಪದವಿ ಪಡೆದ ಭಾರ್ಗವಿ ಅವರು ಇ.ಎಸ್.ಐ. ಕಾರ್ಪೊರೇಷನ್ನಿನಲ್ಲಿ ವ್ಯವಸ್ಥಾಪಕರ ಹುದ್ದೆ ನಿರ್ವಹಿಸಿ  1990ರಲ್ಲಿ ಸ್ವಯಂ ನಿವೃತ್ತಿ ಪಡೆದರು.

ಹೈಸ್ಕೂಲಿನಲ್ಲಿದ್ದಾಗಲೇ ರಂಗಭೂಮಿಯ ಬಗ್ಗೆ  ಆಸಕ್ತಿ ಮೂಡಿಸಿಕೊಂಡ ಭಾರ್ಗವಿಯವರು ಉಪಾಧ್ಯಾಯಿನಿಯಾಗಿದ್ದ ವಿಮಲಾರವರ ಪ್ರೋತ್ಸಾಹದಂತೆ ತಮ್ಮದೇ ಗುಂಪುಕಟ್ಟಿಕ್ಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಶಾಲಾ ಕಾಲೇಜುಗಳ ನಾಟಕಗಳಲ್ಲಿ ಭಾರ್ಗವಿಯವರು  ಪ್ರಮುಖ ಪಾತ್ರವಹಿಸಿದ ನಾಟಕಕ್ಕೆ ಬಹುಮಾನ ಗ್ಯಾರಂಟಿ ಎಂಬ ಪ್ರತೀತಿಯಿತ್ತು. ಅವರು ರಾಜ್ಯ ನಾಟಕ ಸ್ಪರ್ಧೆಗಳಲ್ಲಿ ಎರಡುಬಾರಿ  ಉತ್ತಮ ನಟಿಪ್ರಶಸ್ತಿ ಗಳಿಸಿದರು. ರಾಜ್ಯಮಟ್ಟದ ಮಕ್ಕಳ ನಾಟಕ ಸ್ಪರ್ಧೆಗಾಗಿ ಅವರು ಬರೆದು ನಿರ್ದೇಶಿಸಿದ ಮಕ್ಕಳ ನಾಟಕ ಭೂತಯ್ಯನ ಪೇಚಾಟನಾಟಕಕ್ಕೆ 1975ರಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಬಂತು.

ಭಾರ್ಗವಿ ನಾರಾಯಣ್ ಅವರು 1955ರಿಂದಲೂ ಆಕಾಶವಾಣಿಯ ಕಲಾವಿದೆಯಾಗಿ ಭಾಗವಹಿಸಿದ ನಾಟಕಗಳ ಜೊತೆಗೆ ಹಲವಾರು ನಾಟಕಗಳನ್ನೂ ಬರೆದು ನಿರ್ದೇಶಿಸಿದರು. ಪ್ರೊಫೆಸರ್ ಹುಚ್ಚೂರಾಯ ಚಲನ ಚಿತ್ರದಲ್ಲಿನ ನಟನೆಗಾಗಿ ಅವರಿಗೆ  ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಸಂದಿತ್ತು.  ಅವರು ಅನೇಕ ಚಲಚಿತ್ರಗಳಲ್ಲೂ ದೂರದರ್ಶನ ಧಾರಾವಾಹಿಗಳಲ್ಲೂ ಪಾತ್ರ ನಿರ್ವಹಿಸಿದ್ದಾರೆ.    ಭಾರ್ಗವಿ ನಾರಾಯಣರು ಜಿ ಟಿ.ವಿ. ದೈನಿಕ ಧಾರಾವಾಹಿ ಋತುಮಾನಕ್ಕಾಗಿ  ಚಿತ್ರಕಥೆ, ಸಂಭಾಷಣೆ ರಚಿಸಿರುವುದಲ್ಲದೆ, ಬಾಳೇ ಬಂಗಾರ ಕಾರ್ಯಕ್ರಮಕ್ಕೆ ಕ್ರಿಯಾಶೀಲ ಸಲಹೆ ಮಾರ್ಗದರ್ಶನಗಳನ್ನೂ ನೀಡಿದ್ದಾರೆ.  ಉಳಿದಂತೆ ಕೂಡಾ ಅನೇಕ ಟಿ.ವಿ. ಧಾರವಾಹಿಗಳಿಗೂ ಚಿತ್ರಕತೆ, ಸಂಭಾಷಣೆ ರಚಿಸಿರುವ ಭಾರ್ಗವಿ ನಾರಾಯಣ್ ಅವರಿಗೆ , ‘ಕವಲೊಡೆದ ದಾರಿಧಾರಾವಾಹಿಗಾಗಿ ಮಂಗಳೂರಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿ  ಲಭಿಸಿತು. 

ಭಾರ್ಗವಿ ನಾರಾಯಣ್ ಅವರಿಗೆ 1998ರಲ್ಲಿ ಕರ್ನಾಟಕ ನಾಟಕ ಅಕಾಡಮಿಯಿಂದ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ  ಮುಂತಾದ ಅನೇಕ ಗೌರವಗಳು ಸಂದಿವೆ. ನಾಟಕ ಅಕಾಡಮಿಯ ಸದಸ್ಯೆಯಾಗಿಯೂ ಸಹಾ ಅವರು ಸೇವೆ ಸಲ್ಲಿಸಿದ್ದಾರೆ.

ರಂಗಭೂಮಿಯಿಂದ ಪಡೆದ ಅನುಭವದಿಂದ ಅವಿಭಕ್ತ ಕುಟುಂಬವನ್ನು ಪ್ರೀತಿಸುವ, ಎಲ್ಲರೊಡನೆ ಬೆರೆತು ಸಂತೋಷಿಸುವ, ಇರದುದರೆಡೆಗೆ ಜೀವ ತುಯ್ಯದೆ, ಇರುವುದರೆಡೆಗೆ ಸಂತೃಪ್ತ ಭಾವ ತಾಳುವ ತೃಪ್ತ ಕಲಾವಿದೆ ಭಾರ್ಗವಿ ನಾರಾಯಣ್. ರಂಗಭೂಮಿಯಲ್ಲಿ ಮೇಕಪ್ ನಾಣಿ ಎಂದೇ ಪ್ರಸಿದ್ಧರಾಗಿದ್ದ ಬಿ.ಎನ್. ನಾರಾಯಣ್ ಅವರ ಪತಿ.  ಅವರ ಮಕ್ಕಳಾದ ಸುಧಾ ಬೆಳವಾಡಿ ಮತ್ತು ಪ್ರಕಾಶ್ ಬೆಳವಾಡಿ ಸಹಾ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಗಳಲ್ಲಿ ಮಹತ್ಸಾಧನೆ ಮಾಡಿದ್ದಾರೆ.

'ನಾನು ಭಾರ್ಗವಿ' ಎಂಬುದು ಭಾರ್ಗವಿ ನಾರಾಯಣ್ ಅವರ ಆತ್ಮಕಥನ. ಈ ಕೃತಿಗಾಗಿ ಅವರಿಗೆ  ಎಂ. ಕೆ.  ಇಂದಿರಾ ಪ್ರಶಸ್ತಿ  ಲಭಿಸಿದೆ.

ನಾಡಿನ ಹಿರಿಯ ಕಲಾವಿದರಾದ ಭಾರ್ಗವಿ ನಾರಾಯಣ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು. 


ಮಾಹಿತಿ ಕೃಪೆ: ಕಣಜ

Tag: Bhargavi Narayan

ಕಾಮೆಂಟ್‌ಗಳಿಲ್ಲ: