ಗುರುವಾರ, ಆಗಸ್ಟ್ 29, 2013

ಮೈಸೂರು ಮಹಾದೇವಪ್ಪ ಮತ್ತು ಅವರ ಮಕ್ಕಳು ನಾಗರಾಜ್ ಮತ್ತು ಮಂಜುನಾಥ್


ಮೈಸೂರು ಮಹಾದೇವಪ್ಪ ಮತ್ತು ಅವರ ಮಕ್ಕಳು 
ನಾಗರಾಜ್ ಮತ್ತು ಮಂಜುನಾಥ್

ಇಂದು ಸಂಗೀತ ಕ್ಷೇತ್ರದಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಸಹೋದರರೆಂದರೆ ಬಹುದೊಡ್ಡ ಹೆಸರು.  ಇಂದು ಈ ಸಹೋದರರಲ್ಲಿ ಹಿರಿಯರಾದ ಮೈಸೂರು ನಾಗರಾಜ್ ಅವರ ಜನ್ಮದಿನ.  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವಾನ್ವಿತ ವಿದ್ವಾಂಸರಾದ ಮೈಸೂರು ನಾಗರಾಜ್ ಅವರು ಆಗಸ್ಟ್ 27, 1960ರ ವರ್ಷದಲ್ಲಿ ಜನಿಸಿದರು. 

ಮೈಸೂರಿನಲ್ಲಿ ಮಹಾನ್ ವಿದ್ವಾಂಸರಾದ ಮಹಾದೇವಪ್ಪ ಮತ್ತು ಅವರ ಪುತ್ರರಾದ ನಾಗರಾಜ್ ಮತ್ತು ಮಂಜುನಾಥ್ ಅವರನ್ನು ನಾವು ಚಿಕ್ಕಂದಿನಿಂದ ಹಲವಾರು ಕಚೇರಿಗಳಲ್ಲಿ ಕಾಣುತ್ತಾ ಬೆಳೆದವರು.   ಇತ್ತೀಚೆಗೆ ಮೈಸೂರು ವಾಸುದೇವಾಚಾರ್ಯರ ಹೆಸರಿನಲ್ಲಿರುವ ನಾದಬ್ರಹ್ಮದಲ್ಲಿ ನಾಗರಾಜ್ ಮತ್ತು ಮಂಜುನಾಥ್ ಅವರ ಯುಗಳ ಪಿಟೀಲು ವಾದನದ ಅಲೆಯಲ್ಲಿ ತೇಲಿಹೋದ ಪುಣ್ಯವಂತರಲ್ಲಿ ನಾನೂ ಒಬ್ಬನಾಗಿದ್ದೆ.  ಆ ಸಮಯದಲ್ಲಿ ನಿರೂಪಕರು ನುಡಿಯುತ್ತಿದ್ದರು.  ಕಳೆದ ವರ್ಷದಲ್ಲಿ  ಅಮೆರಿಕದಲ್ಲಿ ಏರ್ಪಾಡಾಗಿದ್ದ ಈ ಯುವಕರ ಸಂಗೀತಕಚೇರಿಗೆ ಅನಿರೀಕ್ಷಿತವಾಗಿ ಆಗಮಿಸಿದ ಪಂಡಿತ್ ರವಿಶಂಕರ್ ಈ ಯುವಕರ ವಾದ್ಯವಾದನ ಕೇಳಿ ಸಂತೋಷಪಟ್ಟು ಪ್ರಿನ್ಸಸ್ ಆಫ್ ಇಂಡಿಯನ್ ಮ್ಯೂಸಿಕ್ಎಂದು ಕೊಂಡಾಡಿದರಂತೆ.  ಈ ಯುವಕರ ಸುಶ್ರಾವ್ಯ ಸಂಗೀತವನ್ನು ಪ್ರತೀ ಬಾರಿ ಕೇಳುವಾಗಲೂ ದೊಡ್ಡ ದೊಡ್ಡ ಗೌರವಗಳು ನಮ್ಮವರಿಗೆ ಯಾಕೆ ಬರುವುದಿಲ್ಲ ಎಂಬ ಒಂದು ಪ್ರಶ್ನೆ ಮನದಲ್ಲಿ ತೇಲಿ ಹೋಗುತ್ತಿತ್ತು.  ಕಳೆದ ವರ್ಷದಲ್ಲಿ  ಮೈಸೂರು ನಾಗಾರಾಜ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸ್ವೀಕರಿಸುತ್ತಿರುವ ಚಿತ್ರ ನೋಡಿ ಮನಸ್ಸಿಗೆ ಒಂದು ರೀತಿಯ ಅನಿರ್ವಚನೀಯ ಸಮಾಧಾನ ಮೂಡಿಬಂತು.  ಇದು ಮೈಸೂರು ನಾಗರಾಜ್, ಮೈಸೂರು ಮಂಜುನಾಥ್ ಮತ್ತು ಅವರ ತಂದೆ ಮೈಸೂರು ಮಹಾದೇವಪ್ಪ ಒಟ್ಟಾರೆ ಈ ಮೂರು ಹೆಸರುಗಳ ಜೊತೆ ಇರುವ ಮೈಸೂರು ಮತ್ತು ನಮ್ಮ ಇಡೀ ಕನ್ನಡ ನಾಡಿಗೆ ಸಂದ ಗೌರವವಾಗಿದೆ.  ಇಂದು ಮೈಸೂರು ನಾಗಾರಜ್ ಅವರ ಜನ್ಮದಿನವಾದರೂ ಈ ತಂದೆ ಮಕ್ಕಳಾದ ಈ ಮೂರೂ ವಿದ್ವಾಂಸರ ಕುರಿತು ಈ ಲೇಖನವನ್ನು ಗೌರವಾರ್ಪಣೆಯಾಗಿ ಬಳಸುತ್ತಿದ್ದೇನೆ.

ಒಮ್ಮೆ ಮೈಸೂರು ಆಸ್ಥಾನ ವಿದ್ವಾನ್ ಟಿ. ಪುಟ್ಟಸ್ವಾಮಯ್ಯ ಅವರ ಗಾಯನ ಕಛೇರಿ ಕೊಳ್ಳೆಗಾಲದ ಚಿಕ್ಕಲೂರು ಜಾತ್ರೆಯಲ್ಲಿ ಏರ್ಪಾಟಾಗಿತ್ತು. ವಯೊಲಿನ್ ಸಾಥ್ ಕೊಡುವ ಕಲಾವಿದ ಕಾರಣಾಂತರಗಳಿಂದ ಬಂದಿರಲಿಲ್ಲ. ನಾಟಕಗಳಲ್ಲಿ ಪಿಟೀಲು ನುಡಿಸುತ್ತಿದ್ದ ಹುಡುಗನೊಬ್ಬನನ್ನು ಪುಟ್ಟಸ್ವಾಮಯ್ಯನವರ ಪಕ್ಕದಲ್ಲಿ ಕೂರಿಸಲಾಯಿತು. ಪಿಟೀಲು ಸಾಥ್ ಇಲ್ಲ ಎಂಬ ಅಳುಕಿನಂದಲೇ ಗಾಯನ ಆರಂಭಿಸಿದ ಪುಟ್ಟಸ್ವಾಮಯ್ಯನವರನ್ನು ಆ ನಾಟಕದ ಹುಡುಗ ಬೆರಗುಗೊಳಿಸಿದ.

ಆ ನುಡಿಸಾಣಿಕೆಗೆ ಪುಟ್ಟಸ್ವಾಮಯ್ಯನವರು ಭಾವಪರವಶರಾದರು. ಬಿಲಹರಿ ಮತ್ತು ಹರಿಕಾಂಬೋಧಿ ರಾಗಗಳನ್ನು ಆ ಹುಡುಗ ಪರಿಶುದ್ಧವಾಗಿ ನುಡಿಸಿದ. ಪುಟ್ಟಸ್ವಾಮಯ್ಯನವರ ಗಾಯನ ಮಾಧುರ್ಯಕ್ಕೆ ಆ ಹುಡುಗ ಸೌಂದರ್ಯ ತುಂಬಿದ. ಕಛೇರಿ ಮುಗಿದ ಮೇಲೆ ಪುಟ್ಟಸ್ವಾಮಯ್ಯ ಹೇಳಿದರು; ನೀನು ಇಲ್ಲಿದ್ದುಕೊಂಡು ಏನು ಮಾಡುತ್ತೀಯ, ಪಿಟೀಲು ಎತ್ತಿಕೊಂಡು ಮೈಸೂರಿಗೆ ಬರುತ್ತಿರು....

ಮೊದಲ ಕಛೇರಿಯಲ್ಲೇ ದೊಡ್ಡ ವಿದ್ವಾಂಸರೊಬ್ಬರ ಮನಗೆದ್ದ ಆ ಬಾಲಕ ಅವರ ಆದೇಶದಂತೆ ಕಂಕುಳಲ್ಲಿ ಪಿಟೀಲು ಡಬ್ಬಿ ಇಟ್ಟುಕೊಂಡು ಮೈಸೂರಿಗೆ ಬಂದ. ಪುಟ್ಟಸ್ವಾಮಯ್ಯನವರ ಮನೆಯಲ್ಲೇ ವಾಸ್ತವ್ಯ. ಅಗ್ರಹಾರದ ಖ್ಯಾತನಹಳ್ಳಿ ಹಾಸ್ಟೆಲ್ (ಜೆಎಸ್‌ಎಸ್)ನಲ್ಲಿ ಊಟದ ವ್ಯವಸ್ಥೆ. ಬೆಳಿಗ್ಗೆ ಪಿಟೀಲು ಹಿಡಿದು ಕುಳಿತರೆ ರಾತ್ರಿವರೆಗೂ ಕಠಿಣ ಸಂಗೀತಾಭ್ಯಾಸ. ಗುರುಕುಲ ಮಾದರಿಯ ಕಲಿಕೆ. ಗುರುಗಳ ಸೇವೆಯ ಜೊತೆಗೆ ಸಂಗೀತ ಪಾಠ. ಮೈಸೂರಿಗೆ ಬಂದ ಮೂರು ತಿಂಗಳಲ್ಲಿ ಆ ಯುವಕನ ವಯೊಲಿನ್ ಸಾಥ್ ಮತ್ತೆ ಆರಂಭವಾಯಿತು. ಗುರುಗಳ ಆದೇಶದಂತೆ ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿ ಸೇವೆಯೊಂದಿಗೆ ಅವನ ಸಂಪ್ರದಾಯಬದ್ಧ ಸಂಗೀತ ಕಛೇರಿ ಶುರುವಾಯಿತು. ಆಮೇಲೆ ಆ ಯುವಕ ಹಿಂದೆ ತಿರುಗಿ ನೋಡಿದ್ದಿಲ್ಲ....

ಅವರು ಬೇರಾರೂ ಅಲ್ಲ, 60ರ ದಶಕದಲ್ಲಿ ಮೈಸೂರಿನ ಎಲ್ಲ ಗಾಯನ ಕಛೇರಿಗಳಿಗೆ ಪಿಟೀಲು ಸಾಥ್ ಕೊಡುತ್ತಿದ್ದ ವಿದ್ವಾಂಸ ಮೈಸೂರು ಮಹಾದೇವಪ್ಪ. ಕೊಳ್ಳೆಗಾಲ ತಾಲ್ಲೂಕಿನ ಮುಡಿಗುಂಡಂ' ಗ್ರಾಮದ ಮಹಾದೇವಪ್ಪ ಸಂಗೀತ ವಿದ್ವಾಂಸರಾದದ್ದು ಒಂದು ಆಕಸ್ಮಿಕ. ನಾಟಕಗಳಿಗೆ ಹಾರ್ಮೋನಿಯಂ  ನುಡಿಸುತ್ತಿದ್ದ ತಂದೆ ಸುಬ್ಬಪ್ಪಗೆ ಮಗನನ್ನು ಸಂಗೀತ ಕ್ಷೇತ್ರಕ್ಕೆ ಎಳೆಯುವ ಮನಸ್ಸಿರಲಿಲ್ಲ. ಆದರೆ ಮಹಾದೇವಪ್ಪನವರ ಸಂಗೀತಾಸಕ್ತಿ ಆಗಾಗ ಅಭಿವ್ಯಕ್ತಗೊಳ್ಳುತ್ತಿತ್ತು.

ಶಾಲೆಯಲ್ಲಿ ಪದ್ಯಗಳನ್ನು ರಾಗವಾಗಿ ಹಾಡುವಾಗ ಶಿಕ್ಷಕರು, ನೀನು ಸಂಗೀತ ಕಲಿ ಎನ್ನುತ್ತಿದ್ದರು. ನಾಟಕವೊಂದರಲ್ಲಿ ಬಾಲರಾಜ'ನ ಪಾತ್ರಕ್ಕೆ ಬಣ್ಣ ಹಚ್ಚಿ ಕಂದವೊಂದನ್ನು ಸುಂದರವಾಗಿ ಹಾಡಿ ಒನ್ಸ್ ಮೋರ್' ಗಿಟ್ಟಿಸಿಕೊಂಡಿದ್ದರು. ಆ ನಾಟಕದ ಮೇಷ್ಟ್ರು ಸಿದ್ದಶೆಟ್ಟಿ ಅವರಿಗೆ ಒಂದಷ್ಟು ಸಂಗೀತ ಜ್ಞಾನವೂ ಇದ್ದ ಕಾರಣ ಮಹಾದೇವಪ್ಪನಿಗೆ ವರ್ಣಗಳವರೆಗೆ ಪಾಠ ಹೇಳಿಕೊಟ್ಟಿದ್ದರು.

ಮಹಾದೇವಪ್ಪನವರೊಳಗಿದ್ದ ಸಂಗೀತ ಪ್ರತಿಭೆ ಪುಟ್ಟಸ್ವಾಮಯ್ಯನವರ ಪ್ರಜ್ಞೆಗೆ ಸಿಕ್ಕಿದ್ದೇ ತಡ, ಪ್ರತಿಭೆ ಪ್ರಭೆಯಾಗಿ ನಾಡಿಗೆ ಬೆಳಕು ನೀಡಿತು.

ಆಗಷ್ಟೇ ಆರಂಭವಾಗಿದ್ದ (1954) ಬೆಂಗಳೂರು ಆಕಾಶವಾಣಿ ಮೈಸೂರು ಮಹಾದೇವಪ್ಪನವರನ್ನು ಕೈಬೀಸಿ ಕರೆಯಿತು. ನಿಲಯದಲ್ಲಿ ಹಾಡುತ್ತಿದ್ದ ಖ್ಯಾತನಾಮ ಸಂಗೀತಗಾರರಿಗೆಲ್ಲ ಮಹಾದೇವಪ್ಪ ಪಿಟೀಲು ನುಡಿಸುತ್ತಿದ್ದರು. ಮೈಸೂರಿನಲ್ಲಿ ಆಗ ಪಿಟೀಲು ನುಡಿಸುವವರು ಬಹಳ ಮಂದಿ ಇರಲಿಲ್ಲ. ಹಾಗಾಗಿ ಮಹಾದೇವಪ್ಪ ಬಹು ಬೇಡಿಕೆಯ ಮತ್ತು ಪ್ರಬುದ್ಧ ಪಿಟೀಲು ವಾದಕರಾಗಿದ್ದರು. ಮೈಸೂರು ದಸರಾ ಸೇರಿದಂತೆ ಇತರ ಸಂಗೀತ ಉತ್ಸವಗಳಿಗೆ ಮೈಸೂರಿಗೆ ಬರುತ್ತಿದ್ದ ಮದ್ರಾಸ್ ಸಂಗೀತಗಾರರಿಗೆಲ್ಲಾ ಮಹಾದೇವಪ್ಪ ಸಾಥ್ ಕೊಡುತ್ತಿದ್ದರು.

ಬಾಲಮುರಳಿ ಕೃಷ್ಣರಿಂದ ಹಿಡಿದು ಡಿ.ಕೆ. ಜಯರಾಮನ್, ಮಣಕ್ಕಾಲ್ ರಂಗರಾಜನ್, ಟಿ.ಆರ್. ಸುಬ್ರಮಣ್ಯಂ, ಪಾತೂರು ಸುಬ್ರಮಣ್ಯ, ಟಿ.ಕೆ. ರಂಗಾಚಾರ್ಯ, ಪಿಟೀಲು ಟಿ ಚೌಡಯ್ಯ ಮುಂತಾದವರ ಜೊತೆ ಮಹಾದೇವಪ್ಪ ಪಿಟೀಲು ನುಡಿಸಿದ್ದಾರೆ. ಗೌರಿಕುಪ್ಪಸ್ವಾಮಿ ಮತ್ತು ಆರ್. ಶ್ರೀನಿವಾಸನ್ ಮೈಸೂರಿಗೆ ಬಂದರೆ ಸಾಕು, ಕಡ್ಡಾಯವಾಗಿ ಮಹಾದೇವಪ್ಪ ಅವರೇ ಪಿಟೀಲಿಗೆ ಬೇಕಾಗಿತ್ತು.  ಜೊತೆಗೆ ಅವರ ಕಛೇರಿಗಳಿಗೆ ಜೊತೆಯಾಗಿ ದೇಶದ ಮುಖ್ಯ ಸಂಗೀತ ಸಭಾಗಳಲ್ಲಿ ಮಹಾದೇವಪ್ಪನವರು ಪಿಟೀಲು ನುಡಿಸಿದ್ದಾರೆ. ಮದ್ರಾಸ್, ತಿರುವಯ್ಯಾರ್, ಹೈದರಾಬಾದ್, ದೆಹಲಿ, ತಂಜಾವೂರು, ಕೊಯಮತ್ತೂರು, ಮುಂಬೈಗಳಲ್ಲಿ ಮಹಾದೇವಪ್ಪನವರ ಪಿಟೀಲಿನ ನಾದ ಸುಧೆ ಹರಿದಿದೆ.

1965ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಆರಂಭವಾದ ಲಲಿತ ಕಲಾ ಕಾಲೇಜಿನ ಪಿಟೀಲು ವಿಭಾಗ'ಕ್ಕೆ ಮಹಾದೇವಪ್ಪ ವಿಭಾಗ ಮುಖ್ಯಸ್ಥರಾಗಿ 26 ವರ್ಷ ದುಡಿದಿದ್ದಾರೆ. ಮೈಸೂರಿನಲ್ಲಿ ಮಹಾದೇವಪ್ಪ ಕಟ್ಟಿ ಬೆಳೆಸಿದ ಜೆಎಸ್‌ಎಸ್ ಸಂಗೀತ ಸಭಾ ಸಾಂಸ್ಕೃತಿಕ ರಾಜಧಾನಿಯ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ಕೇವಲ ಮದ್ರಾಸ್‌ನಲ್ಲಿ ನಡೆಯುತ್ತಿದ್ದ ಸಂಗೀತ ವಿಚಾರ ಸಂಕಿರಣ, ಸಮ್ಮೇಳನ, ಮಾತುಕತೆಗಳನ್ನು ಮಹಾದೇವಪ್ಪ ಈ ಸಭಾದ ಮೂಲಕ ಮೈಸೂರಿಗೂ ತಂದರು. ಸಂಗೀತಕ್ಕೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಿದರು.

ಮೈಸೂರು ಮಹಾದೇವಪ್ಪ ಅವರ ಮನಸ್ಸಿನಲ್ಲಿ ಆಗಾಗ ಬೇಸರವೊಂದು ಕಾಣಿಸಿಕೊಳ್ಳುತ್ತಿತ್ತು. ಮೈಸೂರು ಭಾಗದ ಸಂಗೀತಗಾರರ ಮೇಲೆ ಮದ್ರಾಸ್ ಸಂಗೀತ ಮಂದಿಗಿದ್ದ ನಿರ್ಲಕ್ಷ್ಯ ಧೋರಣೆಯಿಂದ ಅವರು ಬೇಸತ್ತಿದ್ದರು. ಕರ್ನಾಟಕ ಶಾಸ್ತ್ರೀಯ ಸಂಗೀತವೆಂದರೆ ಮದ್ರಾಸ್' ಎನ್ನುವ ದುರ್ನುಡಿಯನ್ನು ಮುರಿಯುವ ಗುರಿ ಅವರೊಳಗಿತ್ತು.

ಮದ್ರಾಸ್‌ನವರನ್ನು ದುಡ್ಡು ಕೊಟ್ಟು ಇಲ್ಲಿಗೆ ಕರೆಸುವ ಹಾಗೆ, ಇಲ್ಲಿಯ ಕಲಾವಿದರನ್ನೂ ಅಲ್ಲಿಗೆ ಕರೆಸುವಂತಾಗಬೇಕು ಎನ್ನುವ ಉದ್ದೇಶ ಅವರ ಮನದೊಳಗಿತ್ತು. ಅದಕ್ಕಾಗಿ ಅವರು ತಮ್ಮಿಬ್ಬರು ಮಕ್ಕಳನ್ನು ತಯಾರು ಮಾಡಿದರು. ವಿಶ್ವ ಸಂಗೀತ ಲೋಕದಲ್ಲಿ ಇಂದು ತಾರೆಗಳಾಗಿ ಮಿಂಚುತ್ತಿರುವ ಮೈಸೂರು ನಾಗರಾಜ-ಡಾ. ಮಂಜುನಾಥ ಸಹೋದರರು ಮಹಾದೇವಪ್ಪನವರ ಮಕ್ಕಳು.

ಈ ಮಕ್ಕಳ ಪಾಲಿಗೆ ಮಹಾದೇವಪ್ಪ ಎಲ್ಲ ಅಪ್ಪಂದಿರಂತಿರಲಿಲ್ಲ. ಮಕ್ಕಳು ಇಂಗ್ಲಿಷ್ ಕಾನ್ವೆಂಟಿಗೆ ಹೋಗಿ ಎಲ್ಲಿ ಸಂಗೀತ ಮರೆತು ಬಿಡುತ್ತಾರೋ ಎಂಬ ಆತಂಕದಿಂದ ಅವರನ್ನು ದೊಡ್ಡ ಶಾಲೆಗಳಿಗೆ ಸೇರಿಸಲಿಲ್ಲ, ಸಮೀಪದ ಸರ್ಕಾರಿ ಶಾಲೆಗೆ ಹಾಕಿದರು. ಶಾಲೆ ಕಲಿಕೆಯ ಬಗ್ಗೆ ಅವರು ತಲೆಕೆಡಿಸಿಕೊಳ್ಳಲಿಲ್ಲ. ಆದರೆ ಮಕ್ಕಳ ಪಿಟೀಲು ಕಲಿಕೆಯ ಬಗ್ಗೆ ತಮ್ಮ ಕಛೇರಿಗಳನ್ನು ಬದಿಗೊತ್ತಿ ತರಬೇತಿಯಲ್ಲಿ ತೊಡಗಿದರು.  

ಮಕ್ಕಳಿಬ್ಬರು ಹತ್ತನ್ನೆರಡು ತುಂಬುವಷ್ಟರಲ್ಲೇ ವಿಶ್ವ ವಿಖ್ಯಾತಿಯಾದರು. ಮದ್ರಾಸ್ ಸಂಗೀತಗಾರರು ಮುಟ್ಟದ ಗಟ್ಟಿ ರಾಗಗಳನ್ನು ಲೀಲಾಜಾಲವಾಗಿ ನುಡಿಸಿ ತೋರಿಸಿದರು. ಮಕ್ಕಳ ಕಛೇರಿ ಇದೆ ಅಂದರೆ ಮಹಾದೇವಪ್ಪನವರು ರಾತ್ರಿಯಿಡೀ ನಿದ್ದೆ ಮಾಡುತ್ತಿರಲಿಲ್ಲ, ಅವರ ಹೃದಯ ಬಡಿತ ಇಮ್ಮಡಿಯಾಗುತ್ತಿತ್ತು.  ಅವರ ಮನೆಗೆ ಮದ್ರಾಸ್‌ನಿಂದ ಕಛೇರಿಯ ಕರೆಯೋಲೆಗಳು ಬಂದವು. ಮದ್ರಾಸ್ ಜನ ನಾಗರಾಜ-ಮಂಜುನಾಥರನ್ನು ಆರಾಧಿಸಿದರು. ಅಲ್ಲಿಗೆ ಮೈಸೂರು ಮಹಾದೇವಪ್ಪನವರ ಕನಸು ನನಸಾಗಿತ್ತು.

ಮಹಾದೇವಪ್ಪ ಅವರ ಸಂಗೀತ ಸಾಧನೆಗೆ ಹಲವು ಪ್ರಶಸ್ತಿಗಳು ಸಂದಿವೆ. ಸಂಗೀತ ಕಲಾನಿಧಿ, ಪಳನಿ ಸುಬ್ರಮಣ್ಯ ಪಿಳ್ಳೈರಾಷ್ಟ್ರೀಯ ಪ್ರಶಸ್ತಿ, ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ವಿದ್ಯಾನಿಧಿ, ರಾಜ್ಯೋತ್ಸವ ಪ್ರಶಸ್ತಿ ಅವರನ್ನು ಅರಸಿ ಬಂದಿವೆ. ಇತ್ತೀಚೆಗೆ ಪ್ರತಿಷ್ಠಿತ  ಟಿ. ಚೌಡಯ್ಯ ಪ್ರಶಸ್ತಿ ಅವರ ಮುಡಿಗೇರಿದೆ.

ಇತ್ತೀಚಿನ ವರ್ಷದಲ್ಲಿ  ಮೈಸೂರು ನಾಗರಾಜ್ ಅವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸಂದಿರುವುದು ತಂದೆ ಮಕ್ಕಳ ಈ ತ್ರಿಮೂರ್ತಿವಿದ್ವಾಂಸರ ವಿದ್ವತ್ತಿಗೆ ಒಂದು ದೊಡ್ಡ ಹಿರಿಮೆ.  ಅದಕ್ಕೂ ಮಿಗಿಲಾಗಿ ಇಂದು ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಸಹೋದರರ ಪಿಟೀಲಿನ ಸುಶ್ರಾವ್ಯ ಝೇಂಕಾರ ಇಡೀ ವಿಶ್ವದೆಲ್ಲೆಡೆ ಸಂಗೀತ ರಸಿಕರನ್ನು ಸಮ್ಮೋಹಗೊಳಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತವಲ್ಲದೆ  ಇಂದು ಪ್ರಸಿದ್ಧಿ ಪಡೆದಿರುವ ವಿವಿಧ ಶಾಸ್ತ್ರೀಯ ಜುಗಲ್ಬಂದಿ ಸಂಗೀತ ಕಾರ್ಯಕ್ರಮಗಳಲ್ಲೂ ಈ ಸಹೋದರರ ನಾದದ ಕೈಚಳಕ ಎಲ್ಲೆಡೆ ಪ್ರಸಿದ್ಧಿ  ಪಡೆದಿದೆ.  2013ರ ವರ್ಷ ದಸರಾ ಹಬ್ಬದಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಈ ಸಹೋದರರು ಅಣುರಣಿಸಿದ ನಾದವಂತೂ ಈಗಲೂ ನನ್ನ ಹೃದಯಗಳನ್ನು ತುಂಬಿಕೊಂಡಿದೆ.

ಈ ಮಹಾನ್ ವಿದ್ವಾಂಸರುಗಳ ಸಂಗೀತ ಲೋಕವನ್ನು ಪುನೀತಗೊಳಿಸುತ್ತಲೇ ಸಾಗಲಿ ಎಂದು ಆಶಿಸುತ್ತಾ ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ಮೈಸೂರು ನಾಗರಾಜ್ ಅವರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.


(ಮೈಸೂರು ಮಹಾದೇವಪ್ಪನವರ ಬಗೆಗಿನ ಯೋಗೇಶ್ ಮಾರೇನಹಳ್ಳಿ ಅವರ ಲೇಖನಕ್ಕೆ ಮಹಾದೇವಪ್ಪನವರ ಪುತ್ರರಾದ ಮೈಸೂರು ನಾಗರಾಜ್ ಮತ್ತು ಮೈಸೂರು ಮಂಜುನಾಥ್ ಅವರ ಬಗ್ಗೆ ಒಂದೆರಡು ಮಾತುಗಳನ್ನು ಸೇರಿಸಿ ಈ ಲೇಖನವನ್ನು ಪ್ರಸ್ತುತ ಪಡಿಸಿದ್ದೇನೆ.)

Tag: Mysore Mahadevappa

ಕಾಮೆಂಟ್‌ಗಳಿಲ್ಲ: