ಬುಧವಾರ, ಆಗಸ್ಟ್ 28, 2013

ಶಿವರಾಜ್ ಕುಮಾರ್

ಶಿವರಾಜ್ ಕುಮಾರ್

ಟುವ್ವಿ ಟುವ್ವಿ ಟುವ್ವಿ ಎಂದು ಹಾಡುತ್ತ  ಬಂದ ಈ ರಾಜಕುಮಾರರ ಕುವರ ಆಗಲೇ ನೂರು ಚಿತ್ರ ದಾಟಿ ಮುಂದೆ ಸಾಗಿದ್ದಾರೆ.  ಜುಲೈ 12, 1962 ಶಿವರಾಜ್ ಕುಮಾರ್ ಅವರು ಹುಟ್ಟಿದ ದಿನ. ವಯಸ್ಸಿನಲ್ಲೂ ಅರ್ಧ ಸೆಂಚುರಿ ಬಾರಿಸಿ ಮುಂದೆ ಸಾಗಿ ಬಂದಿದ್ದಾರೆ.   ಈ ಹುಡುಗನಿಗೂ ಆಗಲೇ 54 ವರ್ಷವಾಯಿತೇ ಎಂಬ ಕಾಲದ ಓಟದ ಬಗೆಗೆ ಅಚ್ಚರಿಯಾಗುತ್ತದೆ.   ಅವರು ಕಳೆದ 30 ವರ್ಷಗಳಿಂದ ನಿರಂತರವಾಗಿ ಚಿತ್ರರಂಗದಲ್ಲಿದ್ದಾರೆ.

ರಾಜ್ ಕುಮಾರ್ ಅಂತಹ ಮೇರು ವ್ಯಕ್ತಿತ್ವದ ಕಲಾವಿದರೊಬ್ಬರ ಮನೆಯಿಂದ ಬಂದ ಮಕ್ಕಳು ಕಲಾರಂಗಕ್ಕೆ ಬಂದಾಗ ಹಲವಾರು ನೀರೀಕ್ಷೆಗಳಿರುತ್ತವೆ.   ಎಲ್ಲವನ್ನೂ ಹಿರಿಯತನಕ್ಕೆ ಹೋಲಿಸಿ ಎಲ್ಲವೂ ಕಡಿಮೆ ಎಂಬ ಭಾವಗಳು ಮೂಡುವಂತಹ ವಾತಾವರಣಗಳು ಸೃಷ್ಟಿಯಾಗಿ ಬಿಡುತ್ತವೆ.  ಅಷ್ಟೊಂದು ಅಗಾಧತೆಯ ಮುಂದೆ ನನಗೇನಾದರೂ ಮಾಡಲಿಕ್ಕೆ ಸಾಧ್ಯತೆಗಳಿವೆಯೇ ಎಂಬಂತಹ ಸಂದೇಹಗಳು ಸಹಜವಾಗಿ ಮೂಡುತ್ತವೆ.  ಈ ಎಲ್ಲ ಪ್ರಶ್ನೆಗಳನ್ನು ಮೀರಿ ಕನ್ನಡದಂತಹ ಸೀಮಿತ ಮಾರುಕಟ್ಟೆಯಲ್ಲಿ ಆಗಿನ ಪ್ರಭಾವಯುತ ವಿವಿಧ ಪ್ರತಿಭೆಗಳ ನಡುವೆ ತನ್ನದೇ ಆದ ರೀತಿಯಲ್ಲಿ ಬೆಳೆದು ಬಂದವರು ಶಿವು.

ಜಾನಪದ ಭಾವಗಳನ್ನು ಹೊರಹೊಮ್ಮಿಸಿದಂತಹ ಸ್ಥಳೀಯ ಭಾವಗಳಿಗೆ ಸಮೀಪವಾದ ಪಾತ್ರಗಳಿಗೆ ಅತೀ ಸಹಜ ಎಂಬಂತೆ ಮೂಡಿದವರು ಶಿವರಾಜ್.  ಕೇವಲ ತಂದೆ ಪ್ರಸಿದ್ಧರು ಎಂದು ನೇರವಾಗಿ ಚಿತ್ರರಂಗಕ್ಕೆ ಬರದೆ, ಚಿತ್ರರಂಗದ ಕುರಿತು ಕಲಿತು, ವಿವಿಧ ಪ್ರತಿಭೆಗಳಾದ ನರ್ತನ ಮತ್ತಿತರ ಕಲೆಗಳನ್ನು ಆಸಕ್ತಿಯಿಂದ ಅಭ್ಯಾಸಮಾಡಿ   ಮೇಲೆ ಬಂದವರು ಶಿವರಾಜ್.

ಓಂ, ಚಿಗುರಿದ ಕನಸು, ಹೃದಯ ಹೃದಯ, ಜೋಗಿ ಅಂತಹ ಚಿತ್ರಗಳಿಗೆ ರಾಜ್ಯಪ್ರಶಸ್ತಿ ಪಡೆದ ಶಿವರಾಜ್ ಕುಮಾರ್ ಈ ಚಿತ್ರಗಳ ಜೊತೆಗೆ ಮಿಡಿದ ಶೃತಿ, ಎ.ಕೆ. 47, ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಆನಂದ್, ರಥಸಪ್ತಮಿ ಮುಂತಾದ ಸುಂದರ ಚಿತ್ರಗಳಲ್ಲಿ ನಟಿಸಿದ್ದಾರೆ.  

ವಯಸ್ಸಿನಲ್ಲಿ ಅರ್ಧ ಸೆಂಚುರಿ ಬಾರಿಸುವುದರ ಜೊತೆಗೆ, ನೂರೆಂಟು  ಚಿತ್ರಗಳ ತಮ್ಮ ಬಣ್ಣದ ಲೋಕದ ಜೀವನದಲ್ಲೂ ವೈವಿಧ್ಯಮಯವಾಗಿ ಮುಂದುವರೆಯುತ್ತಿರುವ ಶಿವರಾಜ್ ಕುಮಾರ್ ಅವರಿಂದ ಇನ್ನೂ ಅಮೋಘ ಕಲಾಕೃತಿಗಳು ಹೊರಹೊಮ್ಮಲಿ, ಬದುಕು ಸುಖಕರವಾಗಿರಲಿ ಎಂದು ಆಶಿಸುತ್ತಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಹೇಳೋಣ.

Tag: Shivaraj Kumar

ಕಾಮೆಂಟ್‌ಗಳಿಲ್ಲ: