ಬುಧವಾರ, ಆಗಸ್ಟ್ 28, 2013

ಸೌರವ್ ಗಂಗೂಲಿ

ಸೌರವ್ ಗಂಗೂಲಿ

ಕಲ್ಕತ್ತೆಯ ಪ್ರಿನ್ಸ್, ದಾದಾ ಸೌರವ್ ಗಂಗೂಲಿ ಹುಟ್ಟಿದ ಹಬ್ಬ ಜುಲೈ 8.   ಹುಟ್ಟಿದ ವರ್ಷ 1972.  ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ  ಲಾರ್ಡ್ಸ್ನಲ್ಲಿ 131ರನ್ ಬಾರಿಸಿ ಭಾರತ ತಂಡಕ್ಕೆ ಹೊಸತನ ತಂದ ಹುಡುಗ.  ಅದೇ ಟೆಸ್ಟ್ ಪಂದ್ಯದಲ್ಲೇ ರಾಹುಲ್ ದ್ರಾವಿಡ್ ಕೂಡಾ ತಮ್ಮ ಟೆಸ್ಟ್ ಜೀವನ ಪ್ರಾರಂಭಿಸಿ ಶತಕದ ಅತೀ ಸಮೀಪದಲ್ಲಿ ಔಟಾದರು.  ರಾಹುಲ್ ಮತ್ತು ಸೌರವ್ ಒಂದು ರೀತಿಯಲ್ಲಿ ವಿಭಿನ್ನ ಮನೋಧರ್ಮದ ವ್ಯಕ್ತಿತ್ವ ಹೊಂದಿದ್ದರೂ ಈ ಈರ್ವರು ಸಚಿನ್ ಮತ್ತು ಲಕ್ಷ್ಮಣ್ ಜೊತೆಗೆ ಭಾರತಕ್ಕೆ ಅತ್ಯಂತ ಶ್ರೇಷ್ಠ ಬ್ಯಾಟಿಂಗ್ ಶಕ್ತಿಯ ಅಡಿಪಾಯ ಹಾಕಿದರು ಮತ್ತು ಈ ನಾಲ್ವರು ಸೇರಿ ಭಾರತದ ಕ್ರಿಕೆಟ್ಟಿಗೆ ಹೊಸ ಚರಿತ್ರೆಯನ್ನೇ ಬರೆದರು.

ಸೌರವ್ ಭಾರತ ತಂಡಕ್ಕೆ ನಾಯಕನಾದಾಗ ಅದುವರೆಗೆ ಭಾರತಕ್ಕೆ ಒದಗಿದ ನಾಯಕರಲ್ಲೆಲ್ಲಾ ಹೋಲಿಸಿದಾಗ ಒಂದು ರೀತಿಯ ವಿಭಿನ್ನತೆ ತಂದರು ಎನಿಸುತ್ತದೆ.  ಬಹುಷಃ ಅವರಿಗೆ ದೊರೆತ ತಂಡ ಕೂಡಾ ಅದುವರೆಗೆ ಭಾರತಕ್ಕೆ ದೊರೆತ ತಂಡಗಳಿಗಿಂತ ಸ್ವಲ್ಪ ಹೆಚ್ಚಿನ ಶಕ್ತಿಯದು ಎಂಬುದು ಕೂಡಾ ಅಷ್ಟೇ ನಿಜ.  ಇವೆಲ್ಲದರ ಜೊತೆಗೆ ತಾನು ಆಡುತ್ತಿರುವ ಪಂದ್ಯದಲ್ಲಿ ಗೆಲ್ಲಲೇಬೇಕೆಂಬ ಒಂದು ಮನೋಭಾವ ಗಂಗೂಲಿಯ ಕಣ್ಣುಗಳಲ್ಲಿ ಸದಾ ಗೋಚರಿಸುತ್ತಿತ್ತು.  ಅದು ಸದಾ ಕಾಲದಲ್ಲಿ ಆತನಿಗೆ ಗೆಲುವು ತಂದಿಲ್ಲದಿದ್ದರೂ ತಂಡಕ್ಕೆ ಇನ್ನೂ ಹೆಚ್ಚಿನ ಗೆಲ್ಲಬೇಕೆಂಬ ಮನೋಭಾವ ತಂದಿರುವುದಂತೂ ಖಂಡಿತ ನಿಜ.

ಗಂಗೂಲಿ  ತನ್ನ ಧೈರ್ಯ ತೋರುವುದಕ್ಕೆ, ತನಗನ್ನಿಸಿದನ್ನು ಮಾಡುವುದಕ್ಕೆ, ಆಡುವುದಕ್ಕೆ ಹಿಂದೆ ಮುಂದೆ ನೋಡಿದವರಲ್ಲ.   ಆವರ ನಾಯಕತ್ವದ ಸಮಯದಲ್ಲಿ ದ್ರಾವಿಡ್, ಲಕ್ಷ್ಮಣ್, ಕುಂಬ್ಳೆ ಮತ್ತು ಸಚಿನ್ ಅಸಾಮಾನ್ಯ ಶಕ್ತಿ ತಂದಿದ್ದರು ಎಂಬುದರ ಹೊರತಾಗಿ ಕೂಡಾ ಯುವರಾಜ್ ಸಿಂಗ್, ಮಹಮ್ಮದ್ ಕೈಫ್, ಹರ್ಭಜನ್ ಸಿಂಗ್, ವೀರೇಂದ್ರ ಸೆಹವಾಗ್, ಜಹೀರ್ ಖಾನ್ ಅಂತಹ ಪ್ರತಿಭೆಗಳು ಪೋಷಣೆಗೊಂಡು ಮುಂಬಂದ ದಶಕದಲ್ಲಿ ಭಾರತ ತಂಡದ ಮಹತ್ವದ ಶಕ್ತಿಗಳಾಗಿ ರೂಪುಗೊಂಡರು.

ಹಲವು ಸಲ ಆತ ಫಾರಂ ಕಳೆದುಕೊಂಡರು, ಗ್ರೆಗ್ ಚಾಪೆಲ್ ಭಾರತಕ್ಕೆ ಕಾಲಿಡುವುದಕ್ಕೆ ಕಾರಣವೂ ಆಗಿ ಆತನ ಹಗೆಯೂ ಅವರೇ ಆದರು.  ಇಷ್ಟರ ನಡುವೆಯೂ ಆತ ಹನ್ನೊಂದು ಸಾವಿರಕ್ಕೂ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ರನ್ನು ಗಳಿಸಿ ವಿಶ್ವದ ಒಂದು ದಿನಗಳ ಪಂದ್ಯಗಳಲ್ಲಿ ಅತ್ಯಂತ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.  ಭಾರತ ತಂಡವನ್ನು ಅಂದಿನ ಅತ್ಯಂತ ಶ್ರೇಷ್ಠ ತಂಡವಾದ ಆಸ್ಟ್ರೇಲಿಯಾ ತಂಡಕ್ಕೆ ಅತೀ ಸಮೀಪಕ್ಕೆ ತಂದು ನಿಲ್ಲಿಸಿದ ಅವರ ಶ್ರಮ ಕೂಡಾ ಮಹತ್ವವಾದದ್ದು.  ಟೆಸ್ಟ್ ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಅವರು ಸಾಧಿಸಿದ ಜಯ ಭಾರತದ ಇನ್ಯಾವುದೇ ನಾಯಕನಿಗಿಂತ ಹೆಚ್ಚಿನದು.  ಟೆಸ್ಟ್ ಪಂದ್ಯಗಳಲ್ಲಿ ಅವರು ಸುಮಾರು 7000 ರನ್ನುಗಳ ಸಮೀಪಕ್ಕೆ ಬಂದಿದ್ದರು.  2003ರ ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಫೈನಲ್ ತಲುಪಿದ ಗಳಿಗೆಗಳಲ್ಲಿ ಅವರ ಶ್ರಮ ಹಿರಿದಾದದ್ದು.  ವಿಶ್ವಕಪ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಕೂಡಾ ಗಂಗೂಲಿ ಅವರದ್ದೇ.

ಹಲವು ರೀತಿಯಲ್ಲಿ ತನ್ನ ಆಟದಲ್ಲಿ, ತನ್ನ ನಡೆಯಲ್ಲಿ, ನಾಯಕತ್ವದಲ್ಲಿ ಹಲವು ರೀತಿಯಲ್ಲಿ ಉತ್ತಮತೆಗೆ ಮತ್ತು ಕೆಲವೊಂದು ರೀತಿಯಲ್ಲಿ ಹೀಗಿರಬಾರದಿತ್ತು ಎಂದು ಕೂಡಾ ಅನಿಸುವಂತೆ ಮಾಡಿದ ವಿಶಿಷ್ಟ ವ್ಯಕ್ತಿ ಗಂಗೂಲಿ.

ನಮ್ಮ ಸೌರವ್ ದಾದಾಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ.

Tag: Saurav Ganguly

ಕಾಮೆಂಟ್‌ಗಳಿಲ್ಲ: