ಗುರುವಾರ, ಆಗಸ್ಟ್ 29, 2013

ಹೊ.ವೆ. ಶೇಷಾದ್ರಿ

ಹೊ.ವೆ. ಶೇಷಾದ್ರಿ

ಬಹುಭಾಷಾ ಕೋವಿದರು, ಉಜ್ವಲ ದೇಶಪ್ರೇಮಿ, ಚಿಂತಕರು, ಖ್ಯಾತ ಲೇಖಕರಾದ ಶೇಷಾದ್ರಿಯವರು ದಿನಾಂಕ 26 ಮೇ 1926ರಂದು  ಹೊಂಗಸಂದ್ರದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯನವರು  ಮತ್ತು ತಾಯಿ ತಾಯಿ ಪಾರ್ವತಮ್ಮನವರು. ಶೇಷಾದ್ರಿಯವರ ವಿದ್ಯಾಭ್ಯಾಸ ನಡೆದುದು ಬೆಂಗಳೂರಿನಲ್ಲಿ. ಶೇಷಾದ್ರಿಯವರು 1946ರಲ್ಲಿ ಸೆಂಟ್ರಲ್ ಕಾಲೇಜಿನಿಂದ ರಸಾಯನ ಶಾಸ್ತ್ರದಲ್ಲಿ ಸ್ವರ್ಣಪದಕದೊಂದಿಗೆ ಎಂ.ಎಸ್ಸಿ. ಪದವಿ ಗಳಿಸಿದರು.

ಶಿಕ್ಷಣ ಪೂರೈಸಿದ ಬಳಿಕ ಸಮಾಜ ಸೇವೆಗಾಗಿ ತಮ್ಮನ್ನು  ಅರ್ಪಿಸಿಕೊಂಡ ಶೇಷಾದ್ರಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ದೇಶದುದ್ದಗಲಕ್ಕೂ ಸಂಚಾರ ಕೈಗೊಂಡರು. ಪ್ರಾರಂಭದಲ್ಲಿ ಬೆಂಗಳೂರು ನಗರದ  ಪ್ರಚಾರಕರ ಜವಾಬ್ದಾರಿ ಹೊತ್ತಿದ್ದ ಶೇಷಾದ್ರಿಯವರು 1953-56ರ ಅವಧಿಯಲ್ಲಿ ಮಂಗಳೂರು ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. 1960ರಲ್ಲಿ ಕರ್ನಾಟಕ ಪ್ರಾಂತ್ಯ ಪ್ರಚಾರಕರಾಗಿಯೂ ಹಾಗೂ 1980ರಲ್ಲಿ ದಕ್ಷಿಣ ಭಾರತದ  ಭಾರತದ ಕರ್ನಾಟಕ, ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳನ್ನೊಳಗೊಂಡ  ಕ್ಷೇತ್ರೀಯ ಪ್ರಚಾರ ಕಾರ್ಯನಿರ್ವಾಹಕರಾಗಿ ಅಪರಿಮಿತ ಸೇವೆಯನ್ನು ಸಲ್ಲಿಸಿದರು. 1987ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸಂಘದ ಅತ್ಯುಚ್ಛ ಜವಾಬ್ದಾರಿಯನ್ನು 9 ವರ್ಷಕಾಲ ನಿರ್ವಹಿಸಿದ ಯಶಸ್ಸು ಶೇಷಾದ್ರಿಯವರದು.

ಹೊ ವೆ ಶೇಷಾದ್ರಿಯವರು ಆರ್ ಎಸ್ ಎಸ್ ಸಂಘಟನೆಯಲ್ಲಿ ಅಸ್ಪೃಶ್ಯತೆಯ ಸಾಮಾಜಿಕ ದೋಷ ನಿವಾರಣೆ. ಮತಾಂತರ ಪಿಡುಗಿನ ನಿವಾರಣೆ, ಸ್ವದೇಶಿ ವಸ್ತು ಬಳಕೆಯ ಆಂದೋಳನ, ಸಂಸ್ಕೃತ ಆಂದೋಳನವೇ ಮುಂತಾದ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದೇಶವ್ಯಾಪಿ ಸಂಚರಿಸಿ ಅಪಾರ ಕಾರ್ಯ ನಿರ್ವಹಿಸುವುದರ ಜೊತೆಗೆ  ಯುವ ಜನಾಂಗಕ್ಕೆ ನಿರಂತರ ಮಾರ್ಗದರ್ಶನ ನೀಡಿದರು.

ಸಂಘದ ವೈಚಾರಿಕ ಹಾಗೂ ಸೈದ್ಧಾಂತಿಕ ಬರಹಗಳನ್ನು ಜನರಿಗೆ ಮುಟ್ಟಿಸುವಲ್ಲಿ ಶೇಷಾದ್ರಿಯವರ  ಆಕರ್ಷಕ ಬರಹಗಳು  ವೈಚಾರಿಕ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ. ಸಮಾಜದೊಂದಿಗೆ ದೊರೆತ ಅವರ ಅನುಭವಗಳು ವಿಕ್ರಮ, ಉತ್ಥಾನ-ಕನ್ನಡ ಪತ್ರಿಕೆಗಳಲ್ಲಿ, ಇಂಗ್ಲಿಷಿನ ಆರ್ಗನೈಸರ್, ಹಿಂದಿಯ ಪಾಂಚಜನ್ಯ ಹಾಗೂ ದೇಶದ ಇತರ ಭಾಷೆಗಳ ನಿಯತ ಕಾಲಿಕೆಗಳಲ್ಲಿ ಲೇಖನ ಮಾಲೆಗಳು, ವಿಮರ್ಶಾತ್ಮಕ ವಿಶ್ಲೇಷಣೆಗಳು, ಪ್ರತಿಪಾದನೆಗಳ ಮೂಲಕ  ನಿರಂತರವಾಗಿ ಹರಿದುಬಂದವು.  ಸರಳ ಶೈಲಿ, ಮನಮುಟ್ಟುವ ನಿರೂಪಣೆ ಶೇಷಾದ್ರಿಯವರ  ಲೇಖನಗಳ ವೈಶಿಷ್ಟ್ಯಗಳು.

ಶೇಷಾದ್ರಿಯವರು ರಚಿಸಿದ ಮಹತ್ವದ ಕೃತಿಗಳೆಂದರೆ ಕನ್ನಡದಲ್ಲಿ ಯುಗಾವತಾರ, ಅಮ್ಮಾ ಬಾಗಿಲು ತೆಗೆ, ಚಿಂತನಗಂಗಾ, ದೇಶ ವಿಭಜನೆಯ ದುರಂತ ಕಥೆ, ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದ ಭುಗಿಲು’, ಲಲಿತ ಪ್ರಬಂಧಗಳ ಸಂಗ್ರಹ ತೋರ್ಬೆರಳು. ಇಂಗ್ಲಿಷ್‌ನಲ್ಲಿ-ಬಂಚ್ ಆಫ್ ಥಾಟ್ಸ್, ದಿ ಟ್ರಾಜಿಕ್ ಸ್ಟೋರಿ ಆಫ್ ಪಾರ್ಟಿಶನ್, ಆರ್‌ಎಸ್‌ಎಸ್-ಎ ವಿಷನ್ ಇನ್ ಆಕ್ಷನ್, ಯೂನಿವರ್ಸಲ್ ಸ್ಪಿರಿಟ್ ಆಫ್ ಹಿಂದೂ ನ್ಯಾಷಲಿಸಮ್, ದಿ ವೇ, ಯೋಗ-ಎ ಸೋಷಿಯಲ್ ಇಂಪರೆಟಿವ್ ಮುಂತಾದುವು. ಹಿಂದಿ ಮತ್ತು ಮರಾಠಿಯಲ್ಲಿ ಕೃತಿ ರೂಪ್ ಸಂಘ ದರ್ಶನ್, ನಾನ್ಯ ಪಂಥ್, ಉಗವೇ ಸಂಘ ಪಹಾಟ್ ಮುಂತಾದವು ಪ್ರಮುಖವೆನಿಸಿವೆ.

ಶೇಷಾದ್ರಿಯವರು ಪ್ರಶಸ್ತಿಗಾಗಿ ಎಂದೂ ಆಶಿಸದಿದ್ದರೂ ಕರ್ನಾಟಕ ಸಾಹಿತ್ಯ ಅಕಾಡಮಿ 1982ರಲ್ಲಿ ಅವರ ಲಲಿತ ಪ್ರಬಂಧಗಳ ಸಂಕಲನ ತೋರ್ಬೆರಳು ಕೃತಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಸದಾ ದೇಶ ಪ್ರೇಮವನ್ನು ನರನಾಡಿಗಳಲ್ಲಿ ತುಂಬಿಕೊಂಡು, ಸಾಮಾಜಿಕ ಅನಿಷ್ಟಗಳ ವಿರುದ್ಧ ಉಪನ್ಯಾಸ, ಬರಹ, ಮಾರ್ಗದರ್ಶನಗಳ  ಮೂಲಕ ಯುವ ಜನತೆಗೆ ದಾರಿದೀಪವಾಗಿದ್ದ ಈ ಮಹಾನ್  ಚೇತನ 2005ರ ಸ್ವಾತಂತ್ರ್ಯೋತ್ಸವದ ಮುನ್ನಾದಿನ ನಂದಿ ಹೋಯಿತು.  ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.


ಮಾಹಿತಿ ಕೃಪೆ: ಕಣಜ
Tag: Hu. Ve. Sheshadri, H. V. Sheshadri

ಕಾಮೆಂಟ್‌ಗಳಿಲ್ಲ: