ಸೋಮವಾರ, ಆಗಸ್ಟ್ 26, 2013

ಎ ಎಸ್ ಮೂರ್ತಿ

ಎ ಎಸ್ ಮೂರ್ತಿ

ಆಕಾಶವಾಣಿ ಈರಣ್ಣನೆಂದೇ ಪ್ರಸಿದ್ಧರಾಗಿದ್ದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ಎಲ್ಲವೂ ಆಗಿದ್ದ ಎ.ಎಸ್. ಮೂರ್ತಿಯವರು ಆಗಸ್ಟ್ 16, 1929ರಂದು  ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕಲಾಮಂದಿರದ ಸ್ಥಾಪಕರಾದ ಅ.ನ. ಸುಬ್ಬರಾಯರು ಮತ್ತು  ತಾಯಿ ಗೌರಮ್ಮನವರು. ಮೂರ್ತಿಯವರ ಪ್ರಾರಂಭಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನೆರವೇರಿತು. ಎಸ್.ಎಸ್.ಎಲ್.ಸಿ. ಮುಗಿಸಿದ ನಂತರ ಕ್ಯಾಲಿಕೊ ಮಿಲ್ಸ್ನಲ್ಲಿ ಕೆಲಕಾಲ ಉದ್ಯೋಗ ಮಾಡಿದರು. ಅವರಿಗೆ ಕಲೆ, ಸಾಹಿತ್ಯ, ನಾಟಕ ಮುಂತಾದವು ತಂದೆಯಿಂದ ಬಂದ ಬಳುವಳಿಯಾಗಿತ್ತು.  ಹೀಗಾಗಿ ಅವರು  ಆಯ್ದುಕೊಂಡ ಕ್ಷೇತ್ರ ನಾಟಕರಂಗ.

ಮುಂದೆ ಆಕಾಶವಾಣಿ ಸೇರಿದ ಎ ಎಸ್ ಮೂರ್ತಿಯವರು  ಆಕಾಶವಾಣಿಯಲ್ಲಿ ನಾಟಕಗಳನ್ನು ಬರೆದು ನಿರ್ದೇಶಿಸುತ್ತಾ ನಡೆಸಿದ ಕಾರ್ಯಕ್ರಮಗಳು ಅಸಂಖ್ಯವಾದವು.  ವೆಂಕಣ್ಣನ ಸಾಹಸಗಳು ಮತ್ತು ಮನೆಮಾತು ಕಾರ್ಯಕ್ರಮಗಳು ಅವರ ಜನಪ್ರಿಯತೆಯನ್ನು ಮನೆಮನೆಗೂ ಕೊಂಡೊಯ್ದಿತ್ತು.  ಪ್ರತಿದಿನ ಬೆಳಿಗ್ಗೆ ಅವರು ತಮ್ಮ  ಒಂದು ಮಾತುವಿನ ಈರಣ್ಣನಾಗಿ  ನಡೆಸಿಕೊಡುತ್ತಿದ್ದ ಕಾರ್ಯಕ್ರಮ  ಸಮಾಜದ ಪ್ರಸ್ತುತ ಸಮಸ್ಯೆಗಳಿಗೆ ಅತ್ಯಂತ ಸಮರ್ಥವಾಗಿ ಕನ್ನಡಿ ಹಿಡಿಯುವಂತಿದ್ದವು.   ಜನಪರ ಕಾಳಜಿಯ ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಂದ ಪ್ರತಿಸ್ಪಂದನ ಅಪರಿಮಿತವಾದದ್ದು.  ಕಾಫೀನೇ ಕುಡೀಲಿಲ್ಲಎಂಬ ಮಾತಿಗೆ ಅಯ್ಯೋs... ಮರ್ತೇ ಬಿಟ್ಟೆಎಂಬ ಅವರ ಮಾತು ಇಂದೂ ನಮ್ಮ ಕಿವಿಗಳಲ್ಲಿ ಅಣುರಣಿಸುವಂತಿದೆ.

ಚಿತ್ರನಾಟಕ ತಂಡ ಕಟ್ಟಿದ ಎ. ಎಸ್. ಮೂರ್ತಿಯವರು  ಹಲವಾರು ನಾಟಕಗಳ ಪ್ರಯೋಗ ಮಾಡಿದರು. ತಿ.ತಾ.ಶರ್ಮ, ವೈಎನ್ಕೆ, ಶ್ರೀರಂಗ, ಲಂಕೇಶ್, ದಾರರಥಿ ದೀಕ್ಷಿತ್ ಮುಂತಾದವರೆಲ್ಲರ ನಾಟಕಗಳಿಗೆ ಮೂರ್ತಿ ರಂಗರೂಪ ಕೊಟ್ಟರು. ಅವರು 1964ರಲ್ಲಿ ಹುಟ್ಟುಹಾಕಿದ  ಅಭಿನಯತರಂಗದ ಮೂಲಕ  ಸಾಹಿತ್ಯ, ಸಂಸ್ಕೃತಿ ಅಧ್ಯಯನ, ರಂಗಶಾಲೆ ಮುಂತಾದವುಗಳ ಪ್ರಾರಂಭ ಮಾಡಿದರು. ಈ ಸಂಸ್ಥೆಯಿಂದ ನಾಟಕರಂಗ, ದೂರದರ್ಶನ, ಸಿನಿಮಾಗಳಿಗೆ ಅಸಂಖ್ಯಾತ ಕೊಡುಗೆಗಳು ಲಭ್ಯವಾದವು.

ಮುಂದೆ ಬಿಂಬಸಂಸ್ಥೆಯನ್ನು ಪ್ರಾರಂಭಿಸಿದ ಎ ಎಸ್ ಮೂರ್ತಿಯವರು ಹನುಮಂತನಗರ ಮತ್ತು ವಿಜಯನಗರದಲ್ಲಿ ಮಕ್ಕಳಿಗಾಗಿ ಕಲೆ, ರಂಗಾಸಕ್ತಿ ಶಿಬಿರಗಳನ್ನು ಮೂಡಿಸತೊಡಗಿದರು.  ಅಭಿನಯ ತರಂಗದಿಂದ ಭಾನುವಾರದ ರಂಗಶಾಲೆಯ ಪ್ರಾಂಶುಪಾಲರಾಗಿ ಅಶೋಕಬಾದರದಿನ್ನಿ, ಬಿ. ಚಂದ್ರಶೇಖರ್, ಎಚ್.ಜಿ. ಸೋಮಶೇಖರ್‌ರಾವ್, ಗೌರಿದತ್ತು ಮುಂತಾದವರ ಸೇವೆ ಹೊರಹೊಮ್ಮುವಂತಾಯ್ತು.

ನಾಟಕಗಳನ್ನು ಜನರೆಡೆಗೆ ಕೊಂಡೊಯ್ಯಲು ಎ ಎಸ್ ಮೂರ್ತಿಯವರು ಕಟ್ಟಿದ ಬೀದಿನಾಟಕ ತಂಡ ಗೆಳೆಯರ ಗುಂಪು’.  ಈ ತಂಡದ ಮೂಲಕ  ರಾಜಾಜಿನಗರದ ರಾಮಮಂದಿರದ ಬಳಿ ಅವರು ಪ್ರದರ್ಶಿಸಿದ ಮೊದಲ ನಾಟಕ ಕಟ್ಟು’.  ಮುಂದೆ ಅವರು ಇದೇ ಮಾದರಿಯಲ್ಲಿ ಅಸಂಖ್ಯಾತ ನಾಟಕಗಳನ್ನು ಮೂಡಿಸಿದರು.  ಬೊಂಬೆ ನಾಟಕ ಪ್ರದರ್ಶನಗಳನ್ನೂ ಪ್ರಾರಂಭಿಸಿದರು.  ಲೇಖಕಿಯರ ಸಂಘಟನೆಗೆ ಒತ್ತಾಸೆ ನೀಡಿದರು. 

ಬರಹಗಾರರಾಗಿ ಎ. ಎಸ್. ಮೂರ್ತಿಯವರು  ಅಧ್ಯಕ್ಷತೆ, ಕುಡ್ಕ, ಹುಚ್ಚ, ನಿರೀಕ್ಷೆ, ಶುದ್ಧಶುಂಠಿ, ಲೇಡೀಸ್ ಓನ್ಲಿ, ಡನ್‌ಲಪ್‌ಗರ್ಲ್, ಚೈನಾದೋಸ್ತಿ, ಜನ್ಮಾಂತ್ರೀಯ ಮುಂತಾದ 80ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದರು.. ಮಕ್ಕಳಿಗಾಗಿಯೇ ಎ. ಎಸ್. ಮೂರ್ತಿಯವರು ಮಲೆಯ ಮಕ್ಕಳು, ಸೋಲದ ಸೋಲಿಗರು, ಜಂಬೂಸವಾರಿ ಮುಂತಾದ ಸುಮಾರು 20 ನಾಟಕಗಳನ್ನು ರಚಿಸಿದ್ದಾರೆ.  ಸಂಗೀತ ಸಂಸ್ಕಾರ, ಟ್ವಿಂಕಲ್ ಟ್ವಿಂಕಲ್ ಮೊದಲಾದುವು ಬೊಂಬೆ ನಾಟಕಗಳು.  ಕಟ್ಟು, ನಿಜವ ಹೇಳಬಲ್ಲಿರಾ, ಬಸ್‌ಸ್ಟಾಪ್, ಕುರ್ಚಿ ಮೊದಲಾದ ಸುಮಾರು 30 ಬೀದಿ ನಾಟಕಗಳನ್ನು ರೂಪಿಸಿದರು. ಇದಲ್ಲದೆ ಅವರು  ಕವಿತೆಗಳಿಗೆ ನೀಡಿದ  ರಂಗರೂಪಗಳು, ರೇಡಿಯೋ ನಾಟಕಗಳು ಮುಂತಾದವು ಅನೇಕವಿವೆ.  ಅವರು  ಚಲನಚಿತ್ರಗಳಿಗೆ  ಸಂಭಾಷಣೆ ಬರೆದಿದ್ದಾರೆ. ಸಿನಿಮಾ, ದೂರದರ್ಶನಗಳಲ್ಲಿ ನಟಿಸಿದ್ದಾರೆ.  ಹಲವಾರು ಸಾಂಸ್ಕೃತಿಕ ವಿಷಯಗಳ ಬಗ್ಗೆ  ಲವಲವಿಕೆಯ ಅಸಂಖ್ಯಾತ ಉಪನ್ಯಾಸಗಳನ್ನು ನೀಡಿದ್ದಾರೆ.  ಸಾಂಸ್ಕೃತಿಕ ವಾತಾವರಣ, ಕನ್ನಡ ಪರ ಚಿಂತನೆ ಎಲ್ಲೇ ಇದ್ದರೂ ಎ ಎಸ್ ಮೂರ್ತಿ ತಮ್ಮ ಬೈಕ್ ಹತ್ತಿ ಹೊರಟುಬಿಡುತ್ತಿದ್ದವರು.  ಯುವಪ್ರತಿಭೆಗಳ ಜೊತೆ ತಾವೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಒಂದಾಗಿ ನಿಂತು ಪ್ರೋತ್ಸಾಹಿಸುವುದರಲ್ಲಿ ಅವರದ್ದು ಎತ್ತಿದ ಕೈಯಿ.

ಎ ಎಸ್ ಮೂರ್ತಿಯವರಿಗೆ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಂಗ ನಿರಂತರ ಪ್ರಶಸ್ತಿ ಮುಂತಾದ ಹಲವಾರು ಗೌರವಗಳು ಸಂದಿದ್ದವು.


ಈ ಎ ಎಸ್ ಮೂರ್ತಿ ಎಂಬ ನಿರಂತರ ಕ್ರಿಯಾಶೀಲ, ಸೃಜನಶೀಲ, ಸಾಂಸ್ಕೃತಿಕ ವ್ಯಕ್ತಿತ್ವವನ್ನು ನೆನೆದವರಿಗೆಲ್ಲ ಸ್ಫೂರ್ತಿ ಉಕ್ಕಿ ಹರಿಯುತ್ತದೆ.  ಈ ಹಿರಿಯರು ಡಿಸೆಂಬರ್ 18, 2012ರಂದು ಈ ಲೋಕವನ್ನಗಲಿದರು.  ಅವರು ಮಾಡಿಹೋದ ಕೆಲಸ ಮತ್ತು ನೆನಪು ಅಪಾರ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

Tag: A. S. Murthy

ಕಾಮೆಂಟ್‌ಗಳಿಲ್ಲ: