ಶನಿವಾರ, ಆಗಸ್ಟ್ 31, 2013

ಮೈಕೆಲೇಂಜೆಲೋ

ಮೈಕೆಲೇಂಜೆಲೋ

ವಿಶ್ವಕಂಡ ಮಹಾನ್ ಕಲಾವಿದರಲ್ಲಿ ಶಾಶ್ವತರಾಗಿ ಪ್ರತಿಷ್ಠಾಪಿತರಾಗಿರುವವರು ಮೈಕೆಲೇಂಜೆಲೋ.  ಮಹಾನ್ ಚಿತ್ರಕಾರ, ಶಿಲ್ಪಿ, ವಿನ್ಯಾಸಕಾರ ಹಾಗೂ ಕವಿಯೆನಿಸಿರುವ ಮೈಕೆಲೇಂಜೆಲೋ ಇಟಲಿಯ ಭವ್ಯ ಪುನರುತ್ಥಾನ ಕಾಲದ ಮೇರುಸದೃಶ ಕಲಾವಿದರೆಂದು ಪ್ರಸಿದ್ಧರಾಗಿದ್ದಾರೆ.

ಮೈಕೆಲೇಂಜೆಲೋ ಬೊನೋರೊಟ್ಟಿ ಇಟಲಿಯ ಫ್ಲಾರೆನ್ಸ್ ನಗರದ ಸಮೀಪದ ಕೇಪ್ರೆಸೆ ಎಂಬಲ್ಲಿ ಮಾರ್ಚ್ 6, 1475ರಂದು ಜನಿಸಿದರು.   ಅವರ ತಂದೆ ಆ ಪ್ರಾಂತ್ಯದ ಮ್ಯಾಜಿಸ್ಟ್ರೇಟರಾಗಿದ್ದರು.  ಅವರು ಹುಟ್ಟಿದ ಕೆಲವೊಂದೇ ವಾರಗಳಲ್ಲಿ ಆ ಸಂಸಾರವು ಫ್ಲಾರೆನ್ಸ್ ನಗರದಲ್ಲಿ ನೆಲೆಸಿತು.  1488ರ ವರ್ಷದಲ್ಲಿ ಮೈಕೆಲೇಂಜೆಲೋ ಆ ಕಾಲದ ಚಿತ್ರಕಾರನಾಗಿದ್ದ ಡೊಮೆನಿಕೋ ಘಿರ್ಲ್ಯಾಂಡೈವೋ ಅವರ ಬಳಿ ಪ್ರಾರಂಭಿಕ ತರಬೇತಿ ಪಡೆದುನಂತರದಲ್ಲಿ ಲೋರೆನ್ಸೋ ಡಿಮೆಡಿಸಿ ಅವರ ಆಶ್ರಯದಲ್ಲಿ ಕಲಾ ಕೈಂಕರ್ಯಕ್ಕೆ ತೊಡಗಿದರು.

ಮೆಡಿಸಿ ಅವರು ಫ್ಲಾರೆನ್ಸ್ ನಗರದಿಂದ ಉಚ್ಚಾಟಿಸಲ್ಪಟ್ಟಾಗ ಮೈಕೆಲೇಂಜೆಲೋ ಬೊಲ್ಗೋನ ಎಂಬಲ್ಲಿಗೆ ಹೋಗಿ 1496ರ ವೇಳೆಗೆ ರೋಮ್ ನಗರವನ್ನು ಸೇರಿದರು.  1497ರಲ್ಲಿ ರೋಮ್ ನಗರದಲ್ಲಿ ತಾವು ಸೃಜಿಸಿದ ಪಿಯೇಟಾಎಂಬ ಶಿಲ್ಪದಿಂದ ಪ್ರಖ್ಯಾತರಾದ  ಮೈಕೆಲೇಂಜೆಲೋ ಫ್ಲಾರೆನ್ಸ್ ನಗರಕ್ಕೆ ಶ್ರೇಷ್ಠ ಶಿಲ್ಪಿಯೆಂಬ ಪ್ರಸಿದ್ಧಿಯೊಡನೆ ಹಿಂದಿರುಗಿದರು.  1501ರಿಂದ 1504ರ ಅವಧಿಯಲ್ಲಿ ಅವರು ವಿಶ್ವಪ್ರಖ್ಯಾತವೆನಿಸಿರುವ  ಡೇವಿಡ್ಶಿಲ್ಪವನ್ನು ಮೂಡಿಸಿದರು.  

1505ರಲ್ಲಿ ರೋಮ್ ನಗರದ ಪೋಪ್ ಆಗಿದ್ದ ಜೂಲಿಯಸ್ ಎಂಬಾತ  ಮೈಕೆಲೇಂಜೆಲೋ ಅವರನ್ನು ರೋಮ್ ನಗರಕ್ಕೆ ಹಿಂದಿರುಗಲಾದೇಶಿಸಿ ತನ್ನದೇ ಆದ ಪ್ರತಿಮೆಯನ್ನು ನಿರ್ಮಿಸಲು ಕೇಳಿಕೊಂಡ.  ತಮ್ಮ ಶಿಲ್ಪಗಳನ್ನು ಕೆತ್ತಿಕೊಳ್ಳಬೇಕೆಂಬ ತೆವಲು ಅಂದಿನ ಮಠಾಧಿಪತಿಗಳಲ್ಲೂ ತುಂಬಿ ತುಳುಕುತ್ತಿತ್ತೇನೋ!  ಮೈಕೆಲೇಂಜೆಲೋ ಸ್ವಾಭಿಮಾನಿಯಾದ ವ್ಯಕ್ತಿ.  ತನಗೆ ಸರಿಯಾದ ಗೌರವ ಇಲ್ಲದಿರುವ ಹಸ್ತಕ್ಷೇಪಗಳನ್ನು ಆತ ಸಹಿಸುತ್ತಿರಲಿಲ್ಲ.    ಜೂಲಿಯಸ್ ಹಾಗೂ ಮೈಕೆಲೇಂಜೆಲೋ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದ ಜೂಲಿಯಸ್ಸನ ಈ ಪ್ರತಿಮೆ ಪೂರ್ಣಗೊಳ್ಳಲೇ ಇಲ್ಲ.  ಆದರೆ ಇದೇ ಗೋಪುರದಲ್ಲಿ ಮೋಸಸ್ಸರ ಪ್ರತಿಮೆಯನ್ನು ಅವರು ಮೋಹಕವಾಗಿ ಮೂಡಿಸಿರುವುದು ಗಮನಾರ್ಹವಾಗಿದೆ.   ಮೈಕೆಲೇಂಜೆಲೋ ಅತ್ಯಂತ ಕಠಿಣ ಪರಿಶ್ರಮಿ.   ಅದಕ್ಷರಾದ ಸಹಾಯಕರ ಕೈವಾಡದಲ್ಲಿ ಬಳಲುವುದಕ್ಕಿಂತ ತಮ್ಮ ಸ್ವಯಂಪರಿಶ್ರಮದಲ್ಲೇ ಹೆಚ್ಚು ನಂಬಿಕೆಯಿರಿಸಿಕೊಂಡಿದ್ದರು. 

ಮೈಕೆಲೇಂಜೆಲೋ ಅವರ ಮುಂದಿನ ಮಹತ್ತರವಾದ ಕೊಡುಗೆಯೆಂದರೆ, 1508-1512 ಅವಧಿಯಲ್ಲಿ  ವ್ಯಾಟಿಕನ್ ನಗರದ ಸಿಸ್ಟೀನ್ ಚಾಪೆಲ್ಲಿನ ಮೇಲ್ಚಾವಣಿಯಲ್ಲಿ ಮೂಡಿಸಿದ ಕ್ರಿಸ್ತನ ಜೀವನ ಚರಿತ್ರೆ.  ಈ ದೇವಾಲಯದಲ್ಲಿ ಅನೇಕ ಚಿತ್ರಗಾರರ ಕೈವಾಡ ಅಲ್ಲಿ ಇಲ್ಲಿ ಕಂಡುಬಂದರೂ, ಆಗಿನ ಕಾಲದ ಶಿಲ್ಪಕಲಾ ಚಕ್ರವರ್ತಿಯೆಂದೂ, ಚಿತ್ರಕಲಾ ಸಾರ್ವಭೌಮನೆಂದೂ, ವಿಶಾಲ ಕೀರ್ತಿಯನ್ನು ಪಡೆದಿದ್ದ ಮೈಕೆಲೇಂಜೆಲೋ ಚಿತ್ರಿಸಿರುವ ಕ್ರಿಸ್ತನ ಜೀವನ ಚರಿತ್ರೆಯ ಚಿತ್ರಗಳು ಅನುಪಮ, ಅದ್ವಿತೀಯ. 

ಅಂದಿನ ಪೋಪ್ ಆಗಿದ್ದ  ಲಿಯೋ ಎಕ್ಸ್  ಎಂಬಾತ ಫ್ಲಾರೆನ್ಸ್ ನಗರದ ಸಾನ್ ಲೊರೆನ್ಜೊ ಚರ್ಚಿನ ಮುಖಜ ಭಾಗವನ್ನು ಪುನರ್ ನಿರ್ಮಿಸುವ ಕಾರ್ಯವನ್ನು  ಮೈಕೆಲೇಂಜೆಲೋ ಅವರಿಗೆ ವಹಿಸಿದ್ದರೂ, ಹಣಕಾಸಿನ ಪರಿಸ್ಥಿತಿಯಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.  ಆದರೆ ಇಲ್ಲಿಂದ ಮೈಕೆಲೇಂಜೆಲೋ ಒಬ್ಬ ವಾಸ್ತುವಿನ್ಯಾಸಕಾರರಾಗಿ ತಮ್ಮ ಚಟುವಟಿಕೆಗಳನ್ನು ಪ್ರಾರಂಭಿಸಿರುವುದು ಕಾಣಬರುತ್ತದೆ.  ಸಾನ್ ಲೋರೆನ್ಸೋದ  ಮೆಡಿಸಿ ಚಾಪೆಲ್ಲಿನ, ಗಿಲಿಯಾನೋ ಮತ್ತು ಲೋರೆನ್ಸೋ ಡಿಮೆಡಿಸಿ ಮುಂತಾದ ಸ್ಮಾರಕಗಳ ವಿನ್ಯಾಸಕಾರರಾಗಿ ಮೈಕೆಲೇಂಜೆಲೋ ಅವರ ನೈಪುಣ್ಯತೆ ವಿಜ್ರಂಭಿಸಿದೆ.

1534ರಲ್ಲಿ ರೋಮ್ ನಗರಕ್ಕೆ ಹಿಂದಿರುಗಿದ ಮೈಕೆಲೇಂಜೆಲೋ ಸಿಸ್ಟೀನ್ ಚಾಪೆಲ್ಲಿನ ಗೋಡೆಯ ಮೇಲೆ ದಿ ಲಾಸ್ಟ್ ಜಡ್ಜ್ಮೆಂಟ್ಎಂಬ ಮನಮೋಹಕ ಚಿತ್ರವನ್ನು ಮೂಡಿಸಿದರು.  1546ರಿಂದ ಕಟ್ಟಡ ವಿನ್ಯಾಸಕಾರರಾಗಿ  ತಮ್ಮನ್ನು ತೊಡಗಿಸಿಕೊಂಡಿದ್ದ ಮೈಕೆಲೇಂಜೆಲೋ ಸೇಂಟ್ ಪೀಟರ್ಸ್ ಚರ್ಚ್ ಅಂತಹ ಮಹಾನ್ ನಿರ್ಮಾಣಗಳಲ್ಲಿ ತಮ್ಮ ಸಮಯವನ್ನು ಹೆಚ್ಚು ವಿನಿಯೋಗಿಸಿದರು. 

ಹೀಗೆ ಶಿಲ್ಪ, ಕಲಾಚಿತ್ರಣ, ಸ್ಮಾರಕ ವಿನ್ಯಾಸಗಳ ಮಹಾನ್ ಕೊಡುಗೆಗಳನ್ನು ನೀಡಿ ತನ್ನ ಪ್ರತೀ ಕಾಯಕದಲ್ಲೂ ಮಹಾಕಾವ್ಯವನ್ನೇ ತೆರೆದಿಟ್ಟ ಅಮರ ಕಲಾಕಾರರಾದ ಮೈಕೆಲೇಂಜೆಲೋ ಫೆಬ್ರವರಿ 18, 1564ರಲ್ಲಿ ಈ ಲೋಕವನ್ನಗಲಿದರು.  

ಮೈಕೆಲೇಂಜೆಲೋ ಅವರ ಹೆಸರನ್ನು ಕೇಳಿದಾಗ ಕನ್ನಡದ ಮಹಾನ್ ಕಾದಂಬರಿಕಾರ ಕೆ. ವಿ. ಅಯ್ಯರ್ ಅವರ ರೂಪದರ್ಶಿಕಾದಂಬರಿ ಇನ್ನಿಲ್ಲದಂತೆ ನೆನಪಾಗುತ್ತದೆ.  ಹಾಗಾಗಿ ಈ ಬರಹಕ್ಕೆ ಚಿತ್ರವಾಗಿ ಆ ಪುಸ್ತಕಕ್ಕೆ ಸುಂದರವಾಗಿ ಮೂಡಿರುವ ಚಂದ್ರನಾಥ ಆಚಾರ್ಯರ ಮುಖಪುಟದ ವಿನ್ಯಾಸವನ್ನೇ ಉಪಯೋಗಿಸಿದ್ದೇನೆ.   ರೀಡರ್ಸ್ ಡೈಜೆಸ್ಟ್ಇಂಗ್ಲಿಷ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ಒಂದು  ಕಿರುಗತೆಯ ಆಧಾರದ ಮೇಲೆ, ಯೂರೋಪಿಯನ್ ಶಿಲ್ಪಕಲೆಯ ಪರಮಾಚಾರ್ಯರೆಂದು ಪ್ರಖ್ಯಾತರಾದ  ಮೈಕೆಲೇಂಜೆಲೋ ಅವರಿಗೆ ಫ್ಲಾರೆನ್ಸ್ ನಗರದ ಚರ್ಚಿನಲ್ಲಿ ಏಸುವಿನ ಜೀವನಕ್ಕೆ ಸಂಬಂಧಿಸಿದ ಕಲಾಸೃಷ್ಟಿಯ ಹಿನ್ನೆಲೆಯಲ್ಲಿ ಬಾಲ ಏಸುವನ್ನು, ಏಸುವಿಗೆ ಮುಂದೆ ದ್ರೋಹ ಬಗೆದ ಜೂದಾಸನನ್ನು ಚಿತ್ರಸುವಲ್ಲಿ ಒದಗಿಬಂದ ಒಬ್ಬನೇ ರೂಪದರ್ಶಿ ಎರ್ನೆಸ್ಟೋವಿನ ಜೀವಿತದ ಏರು-ಬೀಳುಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಿರುವ ಕಾದಂಬರಿ ರೂಪದರ್ಶಿ’.  ರೂಪದರ್ಶಿಗಳ ನೆವದಲ್ಲಿ ಅಲ್ಲಿ ಮೈಕೆಲೇಂಜೆಲೋ ಅವರು ಅನ್ವೇಷಿಸುವುದು ಒಳಿತು-ಕೆಡುಕಗಳ ಸ್ವರೂಪವನ್ನು, ಅವುಗಳ ಆವಿಷ್ಕಾರಕ್ಕೆ ಕಾರಣವಾಗುವ ಜೀವನಪರಿಸ್ಥಿತಿಯನ್ನು.  ಕೆ. ವಿ. ಅಯ್ಯರ್ ಅವರ ಅಧ್ಬುತ ಕಲ್ಪನಾಕೌಶಲ್ಯ, ಕಾದಂಬರಿ ರಚನಾಸಾಮರ್ಥ್ಯ ರೂಪದರ್ಶಿಯಲ್ಲಿ ತನ್ನ ಪರಾಕಾಷ್ಠೆಯನ್ನು ಮುಟ್ಟಿದೆ. 

ಮೈಕೆಲೇಂಜೆಲೋ ಕುರಿತ ತೇಜಸ್ವಿನಿ ನಿರಂಜನರ ಈ ಅನುವಾದಿತ ಕವನ ಕೂಡಾ ಹೃದಯಕ್ಕೆ ಹತ್ತಿರವಾಗುತ್ತದೆ.

ಯೂರೋಪು ಖಂಡದ ಆತ್ಮವೇ ನಡುಗಿದ ಕಾಲವದು
ಮೈಕೆಲೇಂಜೆಲೋ
ಗೋಲದ ಕೆಳಗೆ
ರೋಮಿನಲ್ಲಿ
ದೇವರ ಹತ್ತಿರ
ಗಾರೆಯವನ ತೊಟ್ಟಿಲಲ್ಲಿ ತೂಗುತ್ತ
ಆರಾಧನಾ ಮಂದಿರ, ಛತ್ತು, ಗೋಡೆಗಳ ಮೇಲೆ
ಚಿತ್ರ ಬಿಡಿಸಿದ

ಕೆಳಗೆ ಬಗ್ಗಿ
ಆತ ನೋಡಿದ
ಜಗಳಾಡುವ ಜನರನ್ನು
ಘೋರ ಯುದ್ಧಗಳನ್ನು:
ಮೇಲಿನಿಂದ ಗಟ್ಟಿಯಾಗಿ ಹೇಳಿದ:
"ಶಾಂತಿ! ಶಾಂತಿ!
ಇಲ್ದಿದ್ರೆ ನನ್ನ ಕುಂಚವನ್ನು ಕೆಳಕ್ಕೆಸೆದು
'ಜಗತ್ತಿನ ಸೃಷ್ಟಿ'ಯನ್ನು ನಿಲ್ಲಿಸೇನು!"


ಈ ಮಹಾನ್ ಕಲಾಕಾರನ ಸೃಷ್ಟಿಯನ್ನು ಕಂಡು ಅನುಭಾವಿಸಿದವರೇ ಧನ್ಯರು.

Tag: Michaelenjalo

ಕಾಮೆಂಟ್‌ಗಳಿಲ್ಲ: