ಮಂಗಳವಾರ, ಆಗಸ್ಟ್ 27, 2013

ಕಿಶೋರ್ ಕುಮಾರ್

ಕಿಶೋರ್ ಕುಮಾರ್

ಕಿಶೋರ್ ಕುಮಾರ್ ಚಿತ್ರರಂಗ ಕಂಡ ಮಹಾನ್ ಪ್ರತಿಭೆ.   ಒಬ್ಬ ನಟ, ಹಾಸ್ಯನಟ, ಚಿತ್ರಕತೆಗಾರ, ನಿರ್ಮಾಪಕ, ನಿರ್ದೇಶಕ, ಸಂಕಲನಗಾರ, ಹಾಡುಗಾರ, ಗಾನಸಾಹಿತ್ಯ ರಚನಕಾರ, ಸಂಗೀತ ನಿರ್ದೇಶಕ, ಇತ್ಯಾದಿ, ಇತ್ಯಾದಿ. ಈ ಚಿತ್ರರಂಗದ ಮಹಾನ್ ಕಲಾವಿದ  ಸಿನೆಮಾ ಕ್ಷೇತ್ರದಲ್ಲಿ ಕೈಯಾಡಿಸದ ಕ್ಷೇತ್ರವೇ ಇಲ್ಲ ಎನ್ನಬಹುದು. ಶಾಸ್ತ್ರೀಯವಾಗಿ ಯಾವೊಂದೂ ಅಭ್ಯಾಸ ನಡೆಸದ ಈತ ಒಬ್ಬ ಮಹಾನ್ ಕಲಾವಿದಾನಾಗಿ ಮೆರೆದದ್ದು ಚಿತ್ರರಂಗದ ಅವಿಸ್ಮರಣೀಯ ಘಟನೆಗಳಲ್ಲೊಂದು.  ಉನ್ನತ ಶಾರೀರವುಳ್ಳ  ಧ್ವನಿಯ ಈತ, ಪ್ರೀತಿ ಪ್ರೇಮಗಳು ತುಂಬಿದ, ಹುಚ್ಚು ಹರಿದ, ಭಾವುಕತೆ ತುಂಬಿದ ಎಲ್ಲ ರೀತಿಯ ಚಿತ್ರ ಸಾಹಿತ್ಯಗಳಿಗೆ  ಜೀವ ತುಂಬಿದ ರೀತಿ ಅನನ್ಯವಾದದ್ದು.  ಆತನ ಧ್ವನಿಯನ್ನು ಹತ್ತು ಹಲವರು ಅನುಕರಿಸಿರಬಹುದೇ ವಿನಃ ಆತನ ಗಾನದಲ್ಲಿ ಅಂತರ್ಧ್ವನಿಯಾಗಿ ಹೊರಹೊಮ್ಮುತ್ತಿದ್ದ ಭಾವುಕತೆ ಮಾತ್ರ ಆತನೊಬ್ಬನಿಗೆ ಸಾಧ್ಯವಿದ್ದು , ಇನ್ನಾರಿಗೂ ಅದರ ಸಾಮೀಪ್ಯವನ್ನು ಕೂಡಾ ತಲುಪಲು ಸಾಧ್ಯವಿಲ್ಲ ಎಂಬುದು ಸರ್ವವೇದ್ಯ. 

ಮಧ್ಯಪ್ರದೇಶದ ಖಾಂಡ್ವಾದಲ್ಲಿ ಜನಿಸಿದ, ಬೆಂಗಾಲಿ ಮನೆತನದ, ಅಭಾಸ್ ಕುಮಾರ್ ಗಂಗೂಲಿ ಎಂಬ ನಿಜ ನಾಮಧೇಯದ ಈ ಗಾಯಕ ಸಾಮ್ರಾಟ ಜನಿಸಿದ್ದು  ಆಗಸ್ಟ್ 4, 1928ರಂದು.

ಆಗಿನ ಕಾಲದ ಜನಪ್ರಿಯ ನಟ ಅಶೋಕ್ ಕುಮಾರರ ಕಿರಿಯ ಸಹೋದರನಾದ ಈತನಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಒಲವು. ಸಂಗೀತವನ್ನು ಶಾಸ್ತ್ರೀಯ ರೀತಿಯಲ್ಲಿ ಅಭ್ಯಾಸ ಮಾಡದೇ ಇದ್ದರೂ ಬರೇ ಹುಟ್ಟು ಪ್ರತಿಭೆಯಿಂದ, ಸ್ವಪ್ರಯತ್ನದಿಂದ ಅದ್ಭುತ ಹಾಡುಗಾರನಾಗಿ ಬೆಳೆದು ತನ್ನ ಆರಾಧ್ಯ ದೈವರಾದ  ಹಾಡುಗಾರ ಕೆ. ಎಲ್. ಸೈಗಲ್ ಅವರನ್ನು ಕಾಣಬೇಕು, ಅವರಂತೆಯೇ ಹಾಡುಗಾರನಾಗಬೇಕು ಎಂಬ ಹೆಬ್ಬಯಕೆಯೊಂದಿಗೆ ತರುಣ ಕಿಶೋರ್ ಮುಂಬೈಯಲ್ಲಿ ಬಂದಿಳಿದ. ಆದರೆ, ಅಲ್ಲಿನ ಜನ, ಅತನನ್ನು ಆತನ ಅಣ್ಣನಂತೆಯೇ ಒಬ್ಬ ನಟನನ್ನಾಗಿ ತಯಾರು ಮಾಡಲು ಹೊರಟರು. ತನಗೆ ಆಸಕ್ತಿಯಿಲ್ಲದ ನಟನೆಯಿಂದ ನುಣುಚಿಕೊಳ್ಳಲು ಈತ ಮಂಗನಂತೆ, ಹುಚ್ಚನಂತೆ ಕ್ಯಾಮರಾದ ಮುಂದೆ ವರ್ತಿಸಲು ತೊಡಗಿದ. ಆ ವರ್ತನೆ ಕಿಶೋರನನ್ನು ಐವತ್ತು ಮತ್ತು ಅರವತ್ತರ  ದಶಕದ ಒಬ್ಬ ಹೆಸರಾಂತ ಹಾಸ್ಯನಟನನ್ನಾಗಿ ರೂಪಿಸಿತು. ನ್ಯೂ ಡೆಲ್ಲಿ’, ‘ಆಶಾ’, ‘ಚಲ್ತಿ ಕ ನಾಮ್ ಗಾಡಿ’, ‘ಹಾಲ್ಫ್ ಟಿಕೆಟ್’, ‘ಪಡೋಸನ್ಚಿತ್ರಗಳಲ್ಲಿ ಮೆರೆದ ಆತನ ಸೌಂದರ್ಯ ಮತ್ತು ಅಭಿನಯ ಪ್ರತಿಭೆಗಳು ಅವಿಸ್ಮರಣೀಯವಾದದ್ದು.   ಐವತ್ತರ ದಶಕದಲ್ಲಿ ಆತ ಅಂದೋಲನ್’, ‘ನೌಕ್ರಿ’, ‘ಮುಸ್ಸಾಫಿರ್ಅಂತಹ ಚಿತ್ರಗಳ ನಾಯಕ ನಟರೂ ಆಗಿದ್ದರು. 

ಕಿಶೋರ್ ಕುಮಾರರ ನೆಚ್ಚಿನ ಕ್ಷೇತ್ರ ಹಿನ್ನಲೆಗಾಯನ.  ಎಸ್. ಡಿ. ಬರ್ಮನ್  ಕಿಶೋರರಲ್ಲಿ ಅಡಗಿದ್ದ ಗಾಯನ ಪ್ರತಿಭೆಯನ್ನು ಹೊರತೆಗೆದವರಲ್ಲಿ ಪ್ರಮುಖರು.  ಅಂದಿನ ದಿನದಲ್ಲಿ ಕೆ. ಎಲ್. ಸೈಗಾಲರನ್ನು ಅನುಕರಿಸಿ ಹಾಡುತ್ತಿದ್ದ ಕಿಶೋರ್ ಕುಮಾರರಲ್ಲಿ ಸ್ವಂತಿಕೆಯ ಭಾವವನ್ನು ಉದಯಿಸಿ ಆತನನ್ನು ವಿಶಿಷ್ಟನನ್ನಾಗಿ ರೂಪಿಸಿದ ಕೀರ್ತಿ ಎಸ್. ಡಿ. ಬರ್ಮನರಿಗೆ ಸಲ್ಲುತ್ತದೆ.  ಮುಂಜಿಮ್’, ‘ನೌ ದೋ ಗ್ಯಾರಹ್ಮುಂತಾದವು ಎಸ್. ಡಿ. ಬರ್ಮನ್ ಮತ್ತು ಕಿಶೋರ್ ಜೋಡಿಯ ಪ್ರಾರಂಭಿಕ ಚಿತ್ರಗಳು.  ಎಸ್. ಡಿ. ಬರ್ಮನ್ ಅಲ್ಲದೆ ಸಲೀಲ್ ಚೌಧುರಿ ಅವರ ನೌಕ್ರಿಚಿತ್ರದ  ಛೋಟಾ ಸಾ ಘರ್ ಹೋಗಾ’, ಸಿ ರಾಮಚಂದ್ರ ಬೊರಾಲರ  ಆಶಾಚಿತ್ರದ ಈನ ಮೀನ ದೇಖ’, ಶಂಕರ ಜೈ ಕಿಷನ್ ಅವರ ಜೊತೆಗಿನ ನ್ಯೂ ಡೆಲ್ಲಿಚಿತ್ರದ ನಖ್ರೆವಾಲೀ’, ರವಿ ಅವರ ಜೊತೆಗಿನ ದಿಲ್ಲಿ ಕಾ ತುಗ್ಚಿತ್ರದ  ಸಿ ಎ ಟಿ ಕ್ಯಾಟ್ ಮಾನೆ ಬಿಲ್ಲಿ’  ಇವೆಲ್ಲಾ ಐವತ್ತರ ದಶಕದ  ಜನಪ್ರಿಯ ಗೀತೆಗಳು.  ಮುಂದೆ ಆತ ಇನ್ನುಳಿದ ಪ್ರಮುಖ ಸಂಗೀತ ನಿರ್ದೇಶಕರಾದ ಲಕ್ಮೀಕಾಂತ್ ಪ್ಯಾರೇಲಾಲ್ಕಲ್ಯಾಣ್ ಜಿ ಆನಂದ್ ಜಿಖಯ್ಯಾಮ್, ಆರ್ ಡಿ ಬರ್ಮನ್  ಅಂತಹ ಎಲ್ಲಾ ಶ್ರೇಷ್ಠ ಸಂಗೀತ ನಿರ್ದೇಶಕರ ಬಳಿಯೂ ಹಾಡಿದರು. 

1960ರ ದಶಕದಲ್ಲಿ ಕಿಶೋರ್ ಕುಮಾರ್ ಚಿತ್ರರಂಗದ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಲು ಆರಂಭಿಸಿದರು.  1961ರಲ್ಲಿ ಅವರು ಜುಮ್ರೂಎಂಬ ಚಿತ್ರ ನಿರ್ದೇಶಿಸುವುದರ ಜೊತೆಗೆ ಹಾಡಿನ ಸಾಹಿತ್ಯ ರಚನೆ ಮತ್ತು ಸಂಗೀತ ನಿರ್ದೇಶನಗಳನ್ನೂ ಮಾಡಿದರು.  ಅವರು ನಿರ್ಮಿಸಿ ನಿರ್ದೇಶಿಸಿದ ಇತರ ಚಿತ್ರಗಳೆಂದರೆ ದೂರ್ ಕಾ ರಹಿ’, ‘ದೂರ್ ವಾಡಿಯೋ ಮೇ ಕಹಿನ್’.   ಅರವತ್ತರ ದಶಕದ ಗೈಡ್ ಚಿತ್ರದ ಗಾತಾ ರಹೇ ಮೇರಾ ದಿಲ್’, ‘ಜ್ಯೂಯಲ್ ಥೀಫ್ಚಿತ್ರದ ಯೆಹ್ ದಿಲ್ ನಾ ಹೋತಾ ಬೇಚಾರಅವರಿಗೆ ಅಪಾರ ಯಶಸ್ಸು ತಂದವು. 

ಎಪ್ಪತ್ತರ ದಶಕದಲ್ಲಿ ಆರಾಧನ ಚಿತ್ರ ಕಿಶೋರರನ್ನು ಉತ್ತುಂಗಕ್ಕೆ ಏರಿಸಿತು.  ಆ ಚಿತ್ರದ  ರೂಪ್ ತೇರಾ ಮಸ್ತಾನ’, ‘ಮೇರೆ ಸಪ್ ನೋಂ ಕಿ ರಾಣಿ ಕಬ್ ಆಯೇಗಿತುಇಡೀ ದೇಶವನ್ನು ಹುಚ್ಚೆಬ್ಬಿಸಿತ್ತು.

ಕಿಶೋರರ ಅಮರ ಹಾಡುಗಳನ್ನು ಕೇಳುವುದಿರಲಿ ನೆನೆಯುವುದೇ ಒಂದು ಸೌಭಾಗ್ಯ.  ನೆನೆಪಿಗೆ ಬರುವುದನ್ನು ಹೇಳುವುದಾದರೆ 'ಮೇರೆ ಸಾಮನೆ ವಾಲೀ ಕಿಡಕೀ ಮೆ', ‘ತುಂ ಬಿನ್ ಜಾವೂ ಕಹಾ’, 'ಮಾನಾ ಜನಾಬ್ ನೆ ಪುಕಾರಾ ನಹಿ',  ‘ಗೀತ್ ಗಾತಾ ಹೂ ಮೇ, ಗುನ್ ಗುನಾತಾ ಹೂ ಮೇ’, ‘ಕುಚ್ ತೊ ಲೋಗ್ ಕಹೇಂಗೆ’, ‘ಚಿಂಗಾರಿ ಕೋಯೀ ಭಡ್ಕೆ’, ‘ಮೀತ್ ನಾ ಮಿಲಾರೆ ಮನ್ ಕಾ’, ‘ಪಲ್, ಪಲ್ ದಿಲ್ಕೆ ಪಾಸ್ ತುಮ್ ರಹತಿ ಹೋ’,  ‘ತೆರೆ ಬಿನಾ ಜಿಂದಗಿ  ಸೆ ಕೋಯೀ ಶಿಕ್ ವಾ’, ‘ಇಸ್ ಮೋಡ್ ಪೆ ಜಾತೆ ಹೈ’, ‘ಮೆರಾ ಜೀವನ್, ಕೊರಾ ಕಾಗಜ್, ಕೊರಾ ಹಿ ರಃ ಗಯಾ’, ‘ಮೇರೆ  ಭೀಗಿ ಭೀಗಿ ಸೀ, ಪಲ್ಕೋ ಪೆ’, ‘ಜಿಂದಗಿ ಕೆ ಸಫರ್  ಮೇ ಗುಜರ್ ಜಾತೆ ಹೈ’, ‘ಭಜ ಗೋವಿಂದಂ ಭಜ ಗೋಪಾಲಂ’, ‘ಜೈ ಜೈ ಶಿವ ಶಂಕರ್ರ್’, ‘ಮುಸ್ಸಾಫಿರ್ ಹೋ ಯಾರೋ’, 'ಕೈ ಕೆ ಪಾನ್ ಬನಾ ರಸ್ ವಾಲಾ', 'ಆನೇ ವಾಲಾ ಫಲ್ ಜಾನೇ ವಾಲಾ ಹೈ', 'ಗುಂಗುರೂ ಕಿ ತರಃ', 'ದಿಯೇ ಜಲ್ತೆ ಹೈ', 'ತೆರೇ ಮೇರೇ ಮಿಲನ್ ಕಿ ಯೇಹ್ ರೈನಾ', 'ಮೇರೇ ನೈನಾ',  'ಬೂಲ್ ಗಯಾ ಸಬ್ ಕುಚ್', 'ದಿಲ್ ಖ್ಯಾ ಕರೆ ಜಬ್ ಕಿಸೀಸೆಹೀಗೆ ಅಸಂಖ್ಯಾತ ಹಾಡುಗಳು ನೆನಪಾಗುತ್ತವೆ. 

ಕಿಶೋರ್ ಕುಮಾರ್ ಅವರು ತಮ್ಮ ಕಾಲದ ಬಹುತೇಕ ಪ್ರಸಿದ್ಧ ನಾಯಕರುಗಳಿಗೆ ಹಿನ್ನಲೆ ಗಾಯನ ನೀಡಿದ್ದರು.  ವಿಶೇಷವಾಗಿ ಚಿರ ಯೌವನಿಗರೆಂದು ಪ್ರಸಿದ್ಧರಾದ ದೇವಾನಂದ್ ಮತ್ತು ಸುರದ್ರೂಪಿ ಸೂಪರ್ ಸ್ಟಾರ್ ರಾಜೇಶ್ ಖನ್ನ ಅವರ ಜನಪ್ರಿಯತೆಯಲ್ಲಿ ಕಿಶೋರ್ ಕುಮಾರ್ ಅವರ ಗಾಯನದ ಕೊಡುಗೆ ಮಹತ್ವವಾದದ್ದು.

ಕಿಶೋರ್ ದಾಅವರನ್ನು ನೆನೆದಾಗ ಹಲವು ಕಾರಣಗಳಿಗಾಗಿ  ಕನ್ನಡದ ಕುಳ್ಳ ಏಜೆಂಟ್ ಚಿತ್ರದ ಆಡು ಆಟ ಆಡುನೆನಪಾಗುತ್ತೆ.  ಒಂದು ರೀತಿಯಲ್ಲಿ ಬದುಕನ್ನೂ ಕೂಡಾ ಆಟವನ್ನಾಗಿ ಕಂಡವರು  ಕಿಶೋರ್.  ಬದುಕನ್ನು ಆಟವನ್ನಾಗಿ ಖುಷಿ ಖುಷಿಯಿಂದ ಕಂಡವನೇ ತನ್ನ ಮಿತಿಗಳನ್ನು ಮೀರಿ ತನ್ನೊಳಗಿನ ಕತೆಯನ್ನು ಹೊರತರಬಲ್ಲ.  ಆದರೆ ಈ ಆಟ ಎಂಬುದು ಒಂದು ರೀತಿಯಲ್ಲಿ ಬದುಕನ್ನು ಎತ್ತೆತ್ತಲೋ ಕೊಂಡೊಯ್ದು ಬಿಡುವಂತದ್ದು.  ಇದು ಮಹಾಭಾರತದ ಪಗಡೆ ಆಟದ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸತ್ಯವೋ ಮಾನವನ ಬದುಕಿನ ನಿತ್ಯ ನಡೆ ನುಡಿಗಳಿಗೆ ಕೂಡಾ ತಥಾ  ಅನ್ವಯವಾಗುವಂತದ್ದು.  ಕುಣಿ ಕುಣಿದು ಅಭಿನಯ, ನಟನೆ ಮಾಡಿದ ಕಿಶೋರರು ತಮ್ಮ ವೈಯಕ್ತಿಕ ಬದುಕಿನ ಎಲ್ಲಾ ಎಳೆಗಳನ್ನೂ ಹಾಗೆಯೇ ನೋಡ ತೊಡಗಿದ್ದಿರಬೇಕು.  ಅವರ ಜೀವನದಲ್ಲಿನ ಹಲವು ವಿವಾಹಗಳು, ಚಿತ್ರರಂಗದವರೊಂದಿಗಿನ ಹಲವು ಭಿನ್ನಾಭಿಪ್ರಾಯಗಳು, ಅಶಿಸ್ತಿನ ನಡೆ ನುಡಿ, ಆದಾಯ ತೆರಿಗೆ ಅಧಿಕಾರಿಗಳೊಂದಿಗೆ ಹೋರಾಟ ಹೀಗೆ ಹಲವು ವಿಚಾರಗಳು ಅಂದಿನ ದಿನಗಳಲ್ಲಿ ಅವರನ್ನು ಶಾಶ್ವತ ಸುದ್ಧಿಯಾಗಿಸಿದ್ದವು.  ಇಂದಿರಾ ಗಾಂಧಿ ಅವರ ಟೀಕಾಕಾರರಾಗಿ, ಸಂಜಯ ಗಾಂಧಿಗೆ ಕ್ಯಾರೆ ಅನ್ನದ ಅವರ ನಿರ್ಭಿಡತೆ ಕೂಡಾ, ರಾಜಕಾರಣಿಗಳಿಗೆ ಹೌದಪ್ಪಗಳಾಗಿ ಜೀವನ ನಡೆಸುವ ಸಾಮಾನ್ಯ ರೀತಿಯ  ಸಿನಿಮಾ ಮಂದಿಗಿಂತ ಬೇರೆಯದೇ ಆಗಿತ್ತು.  ಹಾಗಾಗಿ  ಅವರು ಆಕಾಶವಾಣಿ ಅಂತಹ ಪ್ರಸಾರ ಮಾಧ್ಯಮಗಳಿಂದ ಹಲವಾರು  ವರ್ಷ ಆಚೆ ಉಳಿಯುವಂತಾದರೂ ಅವರೆಂದೂ ತಮ್ಮ ನಿಲುವಿನಿಂದ ಕದಲಲಿಲ್ಲ.    ಮಹಾನ್ ಪ್ರತಿಭಾವಂತರಾದ ಈತನ ಜನಪ್ರಿಯತೆಗೆ ಇವೆಲ್ಲಾ ಒಂದಿಷ್ಟೂ ಕುಂದು ತರಲಿಲ್ಲ. 


ಕಿಶೋರ್ ಕುಮಾರ್  ಅವರು ಅಕ್ಟೋಬರ್ 1987ರಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು.  ಅವರು ಹಾಡಿದ ಹಾಡುಗಳು, ಅವರ ಮುದ್ದು ಮುದ್ದಾದ ಅಭಿನಯ, ಇವೆಲ್ಲಾ ಜನಹೃದಯದಲ್ಲಿ ಇಂದಿನ ದಿನದಲ್ಲೂ ತುಂಬುವ ಮುದ ಭಾವ ಅವಿಸ್ಮರಣೀಯವಾದದ್ದು. ಈ ಮಹಾನ್ ಕಲಾವಿದನಿಗೆ ನಮ್ಮ ಅನಂತ ಗೌರವಗಳು.

Tag: Kishore Kumar

ಕಾಮೆಂಟ್‌ಗಳಿಲ್ಲ: