ಗುರುವಾರ, ಆಗಸ್ಟ್ 29, 2013

ವಾರೆನ್ ಬಫೆಟ್

ವಾರೆನ್ ಬಫೆಟ್

ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರರಾಗಿದ್ದು ಮಹಾನ್ ದಾನಿಯಾಗಿ ರೂಪುಗೊಂಡ  ವಾರೆನ್ ಬಫೆಟ್ ಅವರ ಜನ್ಮದಿನ ದಿನಾಂಕ 30 ಆಗಸ್ಟ್ 1930.  ಪುಟ್ಟ ವಯಸ್ಸಿನಲ್ಲೇ ಕೋಕಾ ಕೋಲಾ ಕ್ಯಾನುಗಳನ್ನು ಲಾಭಕ್ಕೆ ಮಾರಿ, ಪೇಪರ್ ಹಾಕಿ ದುಡ್ಡು ಮಾಡಿ, ವಿಶ್ವದ ಹಣಕಾಸೆಂಬ ಮಾಯೆಯ ಲೋಕದಲ್ಲಿ ನಿರಂತರವಾಗಿ ಆರು ದಶಕಗಳಿಗೂ ಹೆಚ್ಚು ಕಾಲ ಶ್ರೇಷ್ಠ ಹೂಡಿಕೆದಾರನಾಗಿಯೇ ಉಳಿದ ಈ ವಿಸ್ಮಯಕಾರಿ ಉದ್ಯಮಿಗಳ ಬಗ್ಗೆ ಲಕ್ಷಾಂತರ ಗ್ರಂಥಗಳೇ ಮೂಡಿ ಬಿಟ್ಟಿವೆ.  ಇವೆಲ್ಲದರ ನಡುವೆ ಆತ ತಾನು ಎಂದೋ ಕೊಂಡ ಹಳೆಯ ಮನೆಯಲ್ಲೇ ವಾಸವಾಗಿದ್ದಾರೆ.  ಮೊಬೈಲು, ಹಾಳು ಮೂಳು ಇತ್ಯಾದಿ ಉಪಯೋಗಿಸುವುದಿಲ್ಲ. ತಮ್ಮ ಕಾರನ್ನು ತಾವೇ ನಡೆಸುತ್ತಾರೆ.  ಮನೆಯಲ್ಲಿ ಆಳು ಕಾಳುಗಳ ಬಾಬತ್ತಿಲ್ಲ.   ಅವರಷ್ಟು ಸಮರ್ಥವಾಗಿ ವ್ಯಾಪಾರೀ ಉದ್ಯಮಗಳ ಜಾತಕವಾದ 'ಬ್ಯಾಲೆನ್ಸ್ ಷೀಟ್'ಗಳನ್ನು ಓದುವವರು ಮತ್ತೊಬ್ಬರಿಲ್ಲ.   2008ರ ವರ್ಷದಲ್ಲಿ  ವಿಶ್ವದಲ್ಲೇ  ಅತ್ಯಂತ  ಶ್ರೀಮಂತರೆನಿಸಿದ್ದ  ಈತ  ತಮ್ಮ ಬಹುಪಾಲು  ಶ್ರೀಮಂತಿಕೆಯನ್ನು  ಸಮಾಜಸೇವೆಗೆ  ಕೊಟ್ಟನಂತರವೂ  ಈಗಲೂ   66.4 ಬಿಲಿಯನ್  ಡಾಲರ್  ಮೌಲ್ಯವುಳ್ಳ  ವಿಶ್ವದ  ನಾಲ್ಕನೇ  ದೊಡ್ಡ  ಶ್ರೀಮಂತರಾಗಿದ್ದಾರೆ.

ವಾರೆನ್ ಬಫೆಟ್ ಕೆಲವು   ವರ್ಷದ ಹಿಂದೆ  ಹೇಳಿದ ಒಂದು ಮಾತು ನೆನಪಾಗುತ್ತದೆ.  "ನನ್ನ ಮಕ್ಕಳಿಗೆ ಏನನ್ನೂ ಮಾಡಲಿಚ್ಚಿಸಿದರೂ ಅದಕ್ಕೆ ಬೇಕಾಗುವಷ್ಟು ಹಣವನ್ನು ನಾನು ಮುಡಿಪಾಗಿಡಬಯಸುತ್ತೇನೆ.  ಆದರೆ ಅವರಿಗೆ ಏನನ್ನೂ ಮಾಡದೆ ಇದ್ದು ಬಿಡೋಣ ಎಂದೆನಿಸುವ  ಕ್ಷುದ್ರ ರೀತಿಯ  ಬದುಕಿಗೆ ಮಾತ್ರ  ನಾನು ಕಾಸು ಕೊಡಲು ತಯಾರಿಲ್ಲ".  ಹಣ ಗಳಿಸಿದವನಿಗೆ ಮಾತ್ರ ಹಣದ ಬೆಲೆ ಗೊತ್ತಿರುತ್ತದೇನೋ.  ಇತ್ತೀಚಿನ ವರ್ಷಗಳಲ್ಲಿ ಈ ಮಹಾನ್ ಶ್ರೀಮಂತ ತಮ್ಮ ಬಹುತೇಕ ಸಂಪತ್ತನ್ನು ಮತ್ತೊಬ್ಬ ಮಹಾನ್ ಶ್ರೀಮಂತ ಬಿಲ್ ಗೇಟ್ಸ್ ಸ್ಥಾಪಿಸಿದ ಗೇಟ್ಸ್ ಮಿಲಿಂದ ಫೌಂಡೇಷನ್ನಿಗೆ ತನ್ನ ಬಹುತೇಕ ಆಸ್ತಿಯನ್ನು ಬರೆದುಕೊಟ್ಟರು.   ವಾರೆನ್ ಬಫೆಟ್, ಬಿಲ್ ಗೇಟ್ಸ್  ಮತ್ತು  ಫೇಸ್ಬುಕ್ ನಿಮಾತೃ ಮಾರ್ಕ್  ಜೂಕರ್  ಬರ್ಗ್ ತಮ್ಮ  ಗಳಿಕೆಯಲ್ಲಿ  ಕಡೇ ಪಕ್ಷ  ತಮ್ಮ ಸಂಪತ್ತಿನ ಶೇಕಡಾ  50ರಷ್ಟನ್ನು  ಸಮಾಜಕ್ಕೆ  ಕೊಡುಗೆಯಾಗುವ  ನೀಡುವ  ‘ಗಿವಿಂಗ್  ಪ್ಲೆಡ್ಜ್’ ಒಡಂಬಡಿಕೆಗೆ ಸಹಿ ಹಾಕಿದ್ದು, ಇದು  ವಿಶ್ವದ ಇತರ  ಸಂಪತ್ಭರಿತ ವ್ಯಕ್ತಿಗಳನ್ನು ಈ ನಿಟ್ಟಿನಲ್ಲಿ ಪ್ರೇರಿಸುವ  ಉದ್ಧೇಶವನ್ನು ಹೊಂದಿದೆ.  ವೈಯಕ್ತಿಕವಾಗಿ  ಬಫೆಟ್  ತಮ್ಮ ಶೇಕಡಾ  99ರಷ್ಟೂ  ಸಂಪತ್ತನ್ನೂ  ಸಮಾಜಕ್ಕೆ  ಮೀಸಲಿರಿಸುವುದಾಗಿ  ಘೋಷಿಸಿದ್ದಾರೆ.  ಇವಿಷ್ಟೇ  ಅಲ್ಲದೆ  ಪರಮಾಣು  ಭೀತಿ ನಿವಾರಣೆಹೆಣ್ಣು ಮಕ್ಕಳ  ಕ್ಷೇಮಾಭಿವೃದ್ಧಿಯಂತಹ  ಮಹತ್ವದ  ಧ್ಯೇಯಗಳಿಗಾಗಿ  ಸಹಾ  ಹಣಸಂಗ್ರಹ  ಮಾಡಿಕೊಟ್ಟಿದ್ದಾರೆ. 

ವಾರೆನ್ ಬಫೆಟ್ ಅವರ ಬಗ್ಗೆ ಮತ್ತಷ್ಟು ಅಧ್ಯಯಿಸ ಹೊರಟಾಗ ಕಣ್ಣಿಗೆ ಬಿದ್ದದ್ದು ವಿಶ್ವೇಶ್ವರ ಭಟ್ಟರ ಈ ಲೇಖನ.

ಹಣಗಳಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. 
- ವಿಶ್ವೇಶ್ವರ್‌ ಭಟ್‌

ಹಣದ ಹಿಂದೆ ಬಿದ್ದವ ಕೊನೆಗೆ ದುಡಿದಿದ್ದೆಲ್ಲವನ್ನೂ ದಾನ ಮಾಡಿ ಬಿಟ್ಟ!

ಹಣ ಗಳಿಸುವ ಒಂದು ಅದ್ಬುತವೆಂದರೆ ಅದಕ್ಕೆ ಮಿತಿಯೆಂಬುದೇ ಇಲ್ಲ. ಎಲ್ಲದಕ್ಕೂ   ಹಣ ಟಣ ಅಂತಾರೆ. ಆದರೆ ಹಣಗಳಿಸುವ ವಿಷಯದಲ್ಲಿ ಅದಕ್ಕೂ ಮೀರಿ ಗಡಿ ಹಾಕಿದರೆ, ಅದನ್ನೂ ದಾಟಿ ಹೋಗಬಹುದು. ಅಂದರೆ ಎಷ್ಟು ಬೇಕಾದರೂ ಹಣ ಸಂಪಾದನೆ ಮಾಡಬಹುದು. ಈ ಮಾತು ಯಾರಿಗೆ ಬೇಕಾದರೂ ಅನ್ವಯಿಸಬಹುದು. ಹಣ ಗಳಿಸುವುದರಲ್ಲಿ ಮತ್ತೊಂದು ಮಜಾ ಏನೆಂದರೆ, ಇದಕ್ಕೆ ಯಾವುದೇ ಅರ್ಹತೆ ಬೇಕಿಲ್ಲ. ಡಿಗ್ರಿ ಆಗಿರಬೇಕೆಂದಿಲ್ಲ. ಸರ್ಟಿಫಿಕೇಟ್‌ನ ಅಗತ್ಯವಿಲ್ಲ. ಜಾತಿ ಕುಲದ ಭೇದ-ಭಾವವಿಲ್ಲ. ಯಾರಾದರೂ ಆಗಬಹುದು, ಎಷ್ಟು ಬೇಕಾದರೂ ಗಳಿಸಬಹುದು.

ಹಣಗಳಿಕೆಗೆ ಮಾತ್ರ ಯಾವುದೇ, ಯಾರದೇ ನಿಯಂತ್ರಣ ಇಲ್ಲ. ಹಣ ಗಳಿಸದಿರುವುದಕ್ಕೆ ಸಹ ನೀವು ಮಾತ್ರ ಕಾರಣ ರಾಗಬಹುದು. ಈ ವಿಶ್ವದಲ್ಲಿ ಹಣಗಳಿಸುವ ಸ್ವಾತಂತ್ರ್ಯ ಹಾಗೂ ಅವಕಾಶ ಎಲ್ಲರಿಗೂ ಇದೆ. ಇದನ್ನು ಯಾರು ಗರಿಷ್ಠ ಬಳಸಿಕೊಳ್ಳುತ್ತಾರೋ ಅವರು ಗರಿಷ್ಠ ಸಂಪಾದಿಸುತ್ತಾರೆ.

ನೀವು ವಾರೆನ್‌ ಬಫೆಟ್‌ ಹೆಸರನ್ನು ಕೇಳಿರಬಹುದು. ಬಿಲ್‌ಗೇಟ್ಸ್ ನಂತರ ವಿಶ್ವದ ಎರಡನೆ ಅತ್ಯಂತ ಶ್ರೀಮಂತ. ಬರ್ಕ್‌ಫೈರ್‌ ಹಾಥವೇ ಕಂಪೆನಿಯ ಮಾಲೀಕ.ಇದೊಂದು ಇನ್‌ವೆಸ್ಟ್‌ಮೆಂಟ್‌ ಕಂಪೆನಿ. ವಾರೆನ್‌ ಬಫೆಟ್‌ ಈಗ 66.4 ಶತಕೋಟಿ ಡಾಲರ್‌ ಶ್ರೀಮಂತ. ಅವನೆಷ್ಟೇ ಧನಿಕನಿರಬಹುದು ಇಂದಿಗೂ ಆತ 1958ರಲ್ಲಿ ಖರೀದಿಸಿದ ಪುಟ್ಟ ಮನೆಯಲ್ಲಿ ವಾಸವಾಗಿದ್ದಾನೆ. ಬಫೆಟ್‌ಗೆ ಹಣ ಗಳಿಸುವುದರ ಹೊರತಾಗಿ ಮತ್ತೇನೂ ಗೊತ್ತಿಲ್ಲ ಎಂದು ಹೇಳುವವರೂ ಅವನ ಜೀವನಶೈಲಿ ಕಂಡು ಬೆರಗಾಗುತ್ತಾರೆ.

ಹಣವನ್ನು ಯಾರು ಮೋಹಿಸುತ್ತಾರೋ ಅವರು ಮಾತ್ರ ಹಣ ಮಾಡುತ್ತಾರೆ ಎಂಬುದು ಬಫೆಟ್‌ನೇ ಹೇಳಿದ ಮಾತು. ಹಣದ ಹಿಂದೆ ಬೀಳದೇ ಹಣ ಗಳಿಸುವುದು ಅಸಾಧ್ಯವೆಂಬುದು ಅವನದೇ ಘೋಷವಾಕ್ಯ. ಇದನ್ನು ಆತ ತನ್ನ ಜೀವನದಲ್ಲಿ ಅಕ್ಷರಶಃ ಪಾಲಿಸಿದ್ದರಿಂದ ಅವನಿಗೆ ಅಷ್ಟೊಂದು ಗಳಿಸಲು ಸಾಧ್ಯವಾಯಿತು.

ಆದರೆ ಈ ಬಫೆಟ್‌ ಅದೆಂಥ ಆಸಾಮಿ ನೋಡಿ, ಒಂದು ದಿನ ಅವನಿಗೆ ಏನನಿಸಿತೋ ಏನೋ, ತಾನು ದುಡಿದಿದ್ದರಲ್ಲಿ ಶೇ.83ರಷ್ಟು ಹಣವನ್ನು ಅಂದರೆ ಸುಮಾರು 30 ಶತಕೋಟಿ ಡಾಲರ್‌ನ್ನು ಬಿಲ್‌ಗೇಟ್ಸ್ ಹಾಗೂ ಆತನ ಪತ್ನಿ ಸ್ಥಾಪಿಸಿದ `ಬಿಲ್‌ ಆ್ಯಂಡ್‌ ಮೆಲಿಂದಾ ಗೇಟ್ಸ್ ಫೌಂಡೇಶನ್‌'ಗೆ ದಾನ ನೀಡುವುದಾಗಿ ಘೋಷಿಸಿಬಿಟ್ಟ.

ಅಮೆರಿಕದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಮೊತ್ತದ ದಾನವನ್ನು ಇಂದಿಗೂ ಯಾರೂ ಮಾಡಿಲ್ಲ. ಅದೇನು ಸಣ್ಣ ಮಾತೇನು? ತನ್ನ ಜೀವಿತ ಅವಧಿಯಲ್ಲಿ ಗಳಿಸಿದ ಮುಕ್ಕಾಲು ಪಾಲು ಹಣವನ್ನು ಆತ ದಾನವಾಗಿ ನೀಡಿದ್ದ ಅಲ್ಲಿಯ ತನಕ ಹಣದ ಹಿಂದೆ ಬಿದ್ದ ಮನುಷ್ಯ, ಡಾಲರ್‌ ಡಾಲರ್‌ ಕೂಡಿಹಾಕಿದವ ಏಕಾಏಕಿ ತಾನು ದುಡಿದಿದ್ದೆಲ್ಲವನ್ನೂ ವಿಶ್ವದ ಅತಿ ಶ್ರೀಮಂತನ ಜೋಳಿಗೆಗೆ ಹಾಕುವುದಿದೆಯಲ್ಲ ಅದು ಅಸಾಧಾರಣ ಸಂಗತಿಯೇ.

ಅಲ್ಲಿಯ ತನಕ ಹಣವೆಂದರೆ ಬಾಯಿಬಾಯಿ ಬಿಡುತ್ತಿದ್ದ ಬಫೆಟ್‌, ತಾನು ದುಡಿದಿದ್ದೆಲ್ಲವನ್ನೂ ಸಮಾಜ ಕಾರ್ಯಕ್ಕೆ ಧಾರೆಯೆರೆದಿದ್ದ. ಹಣದ ಹಿಂದೆ ಬಿದ್ದ ಬಫೆಟ್‌ನ ಆ ಶಕ್ತಿ ಯಾವುದು? ಹಣದ ಮೋಹ ತೊರೆಯುವಂತೆ ಮಾಡಿದ ಆತನ ಈ ಶಕ್ತಿ ಯಾವುದು? ಹಣದ ಹುಚ್ಚಿಗೆ ಬಿದ್ದವ, ಅದರಲ್ಲಿ ಯಶಸ್ವಿಯಾದವ, ಹೇಗೆ ಇದ್ದಕ್ಕಿದ್ದಂತೆ ಹಣದ ಬಗ್ಗೆ ಮೋಹ ಕಳಚಿಕೊಂಡ? ಹಣದ ಹುಚ್ಚಿಗೆ ಸಿಕ್ಕಿ ಬೀಳದಿದ್ದರೆ, ಹಣವನ್ನು ಬದುಕಿನಂತೆ, ಉಸಿರಿನಂತೆ, ರಕ್ತದಂತೆ ಪ್ರೀತಿಸಿದವನಿಗೆ, ಇದು ತನ್ನದಲ್ಲ ಎಂದು ಸುಮ್ಮನೆ ದಾನ ಮಾಡಲು ಹೇಗೆ ಸಾಧ್ಯವಾಯಿತುಹಣದ ಕುರಿತು ಇದ್ದ ಹುಚ್ಚು ವೈರಾಗ್ಯವಾಗಿ ಹೇಗೆ ಪರಿವರ್ತಿತಗೊಂಡಿತು?

ಹಣದ ಮಹಾತ್ಮೆಯೇ ಅದು. ಅದು ಎಂಥವನನ್ನಾದರೂ ಪರಿವರ್ತಿಸುತ್ತದೆ. ಅದು ಒಳ್ಳೆಯದೂ ಇರಬಹುದು, ಕೆಟ್ಟದ್ದೂ ಇರಬಹುದು. ಆದರೆ ಬಫೆಟ್‌ ಒಳ್ಳೆಯ ಉದ್ದೇಶಕ್ಕಾಗಿ ತನ್ನ ಹಣವನ್ನೆಲ್ಲ ದಾನ ಮಾಡಿದ. ಒಂದು ಹಂತದಲ್ಲಿ ಬಫೆಟ್‌ಗೆ ಅನಿಸಿರಬೇಕು. `ಸಾಕು ದುಡಿದಿದ್ದು, ಇನ್ನೆಷ್ಟು ದುಡಿಯಬೇಕು?' ಎಂದು. ಅಮೆರಿಕದಲ್ಲಿಯೇ `ಅತ್ಯಂತ ದೊಡ್ಡ ಕೊಡುಗೈ ದಾನಿ' ಎಂದು ಕರೆಸಿಕೊಳ್ಳುವ ಆಸೆ ಅವನಿಗೆ ಇದ್ದಿತ್ತಾ? ಇದ್ದಿರಲೂಬಹುದು. ಅದಕ್ಕಾಗಿಯೇ ಆ ಪರಿ ದುಡಿದನಾ? ಯಾಕಿರಲಿಕ್ಕಿಲ್ಲ?


ಹಣವನ್ನು ಹಣವಂತರನ್ನು ಹೀಗೇ ಎಂದು ಹೇಳಲಾಗುವುದಿಲ್ಲ.

Tag: Warren Buffett

ಕಾಮೆಂಟ್‌ಗಳಿಲ್ಲ: