ಗುರುವಾರ, ಆಗಸ್ಟ್ 29, 2013

ಭಾರತೀಸುತ

ಭಾರತೀಸುತ

ಗ್ರಾಮೀಣ ಪರಿಸರದ ಹಿನ್ನೆಲೆಯ ಕಾದಂಬರಿಕಾರರಾದ ಶಾನಭಾಗ ರಾಮಯ್ಯ ನಾರಾಯಣರಾವ್ (ಭಾರತೀಸುತ) ಅವರು  ಮಡಿಕೇರಿಯ ಬಳಿಯ ಬಿಳಿಗೇರಿ ಗ್ರಾಮದಲ್ಲಿ ಮೇ 15, 1915ರಂದು ಜನಿಸಿದರು. ತಂದೆ ರಾಮಯ್ಯನವರು ಮತ್ತು  ತಾಯಿ ಸುಬ್ಬಮ್ಮನವರು. ಏಳನೆಯ ತರಗತಿ ಓದುತ್ತಿದ್ದಾಗಲೇ ತಂದೆಯ ಪ್ರೀತಿಯಿಂದ ವಂಚಿತರಾದರು. ಪ್ರೌಢಶಾಲೆ ವ್ಯಾಸಂಗ ಮಾಡುವಾಗ ಪಂಜೆಯವರ ಶಿಷ್ಯರಾಗಿ  ಸಾಹಿತ್ಯ ಸಂಸ್ಕಾರ ಪಡೆದ ಭಾಗ್ಯ ಅವರದ್ದಾಗಿತ್ತು.

ಸ್ವಾತಂತ್ರ್ಯ ಚಳವಳಿಯ ಕಾವಿನಿಂದ ಓದಿಗೆ ತಿಲಾಂಜಲಿ ಕೊಟ್ಟ ಭಾರತೀಸುತರು ಕಣ್ಣಾನೂರು ಹಾಗೂ ತಿರುಚನಾಪಳ್ಳಿ ಸೆರೆಮನೆಗಳಲ್ಲಿದ್ದಾಗ ಗಾಂಧೀ ತತ್ತ್ವಗಳನ್ನು ಮೈಗೂಡಿಸಿಕೊಂಡರು. ಸತ್ಯಾಗ್ರಹಿಯಾದರೂ ಅವರು ರಾಜಕೀಯ ವ್ಯಕ್ತಿಯಾಗಲಿಲ್ಲ. ಬಿಡುಗಡೆಯ ನಂತರ ಕೆಲಕಾಲ ಕಾಫಿ ಎಸ್ಟೇಟಿನಲ್ಲಿ ಗುಮಾಸ್ತೆ ಕೆಲಸ ಮಾಡಿದರು.  1942ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕಗೊಂಡರು. 1945ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ವಿದ್ವಾನ್ ಪದವಿ ಪಡೆದರು.  1973ರವರೆಗೂ ಪ್ರೌಢಶಾಲೆಯಲ್ಲಿ  ಕನ್ನಡ ಪಂಡಿತರಾಗಿ ಸೇವೆ ಸಲ್ಲಿಸಿದರು.

ಭಾರತೀಸುತರ ಕಾದಂಬರಿಗಳಲ್ಲಿ ದಾಂಪತ್ಯ ಜೀವನದ ಸಮಸ್ಯೆಗಳ ಆಳವಾದ ವಿವೇಚನೆ, ಹೆಣ್ಣಿನ ಬಗೆಗಿನ ಸಹಾನುಭೂತಿಯುಳ್ಳ  ದೃಷ್ಟಿಕೋನಗಳು ಪ್ರಮುಖ ಪಾತ್ರವಹಿಸಿವೆ. ಎಡಕಲ್ಲು ಗುಡ್ಡದ ಮೇಲೆ ಮತ್ತು ಸಂತಾನ ಭಿಕ್ಷೆ ಮಾನವೀಯ ದೃಷ್ಟಿಕೋನದ ಕಾದಂಬರಿಗಳೆನಿಸಿವೆ. 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ ಕೀರ್ತಿ ಭಾರತೀಸುತರದು. ಹುಲಿಯ ಹಾಲಿನ ಮೇವು, ಗಿರಿಕನ್ನಿಕೆ, ಬಯಲುದಾರಿ, ಇಳಿದು ಬಾ ತಾಯಿ, ವಕ್ರರೇಖೆ, ಬೆಳಕಿನೆಡೆಗೆ, ಬೆಂಕಿಯ ಮಳೆ, ಅಮಾತ್ಯ ನಂದಿನಿ, ಗಿಳಿಯು ಪಂಜರದೊಳಿಲ್ಲ, ಸಾಧನ ಕುಟೀರ, ಹಾವಿನ ಹುತ್ತ, ದೊರೆ ಮಗಳು ಮುಂತಾದುವು ಭಾರತೀಸುತರ ಪ್ರಮುಖ ಕಾದಂಬರಿಗಳು. ಹುಲಿಬೋನು, ಗಿರಿಕನ್ನಿಕೆ, ಗಿಳಿಯು ಪಂಜರದೊಳಿಲ್ಲ ರಾಜ್ಯ ಸಾಹಿತ್ಯ ಅಕಾಡಮಿ ಪುರಸ್ಕೃತ ಕಾದಂಬರಿಗಳು. ಅವರ ಬಯಲು ದಾರಿ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ ಕೃತಿಗಳು ಚಲನಚಿತ್ರಗಳಾಗಿ ಪ್ರಖ್ಯಾತಗೊಂಡಿವೆ. ಇವರ ಮಿನಿಕಾದಂಬರಿ ವಲ್ಮಿಕಬಹಳಷ್ಟು  ಖ್ಯಾತಿ ಪಡೆದ ಕೃತಿ.

ಶಿಶು ಸಾಹಿತ್ಯದಲ್ಲೂ ಸಾಧನೆ ಮಾಡಿರುವ ಭಾರತೀಸುತರು 25ಕ್ಕೂ ಹೆಚ್ಚು ಶಿಶು ಸಾಹಿತ್ಯ ಕೃತಿಗಳನ್ನು  ರಚಿಸಿ ಮಕ್ಕಳ ಮನಸ್ಸನ್ನು ಗೆದ್ದಿದ್ದಾರೆ. ವಯಸ್ಕರ ಶಿಕ್ಷಣ ಬೆಳವಣಿಗೆಗೂ ಅವರು  ಹಲವಾರು ಕೃತಿ ರಚನೆ ಮಾಡಿದ್ದಾರೆ.  ಪತ್ರಿಕೋದ್ಯಮದಲ್ಲೂ ತಮ್ಮ ಶ್ರಮ ನೀಡಿರುವ ಭಾರತೀಸುತರು ರಾಷ್ಟ್ರಬಂಧು, ಗುರುವಾಣಿ ಮುಂತಾದ ಪತ್ರಿಕೆಗಳನ್ನು ಕೆಲಕಾಲ ನಡೆಸಿದರು.   


ಭಾರತೀಸುತರು ಏಪ್ರಿಲ್ 4, 1976ರಲ್ಲಿ ಈ ಲೋಕವನ್ನಗಲಿದರು.  ಕರ್ಣಾಟಕ ರಾಜ್ಯ ಸಾಹಿತ್ಯ ಅಕಾಡಮಿಯು 1976ರಲ್ಲಿ ಭಾರತೀಸುತರಿಗೆ ಮರಣೋತ್ತರ ಗೌರವವನ್ನು ಘೋಷಿಸಿತು. ಭಾರತೀಸುತರ ಗೌರವಾರ್ಥವಾಗಿ ಸಾಹಿತ್ಯಾಭಿಮಾನಿಗಳು ಬ್ರಹ್ಮಗಿರಿಎಂಬ ಸಂಸ್ಮರಣ ಗ್ರಂಥವನ್ನು ಹೊರತಂದರು.   ಈ ಮಹಾನ್ ಚೇತನಕ್ಕೆ ನಮ್ಮ ಗೌರವಯುತ ಪ್ರಣಾಮಗಳು.

Tag: Bharati Suta

ಕಾಮೆಂಟ್‌ಗಳಿಲ್ಲ: