ಶುಕ್ರವಾರ, ಆಗಸ್ಟ್ 30, 2013

ಮಾಧವಗುಡಿ

ಮಾಧವಗುಡಿ

ಗಾನ ಭಾಸ್ಕರಬಿರುದಾಂಕಿತರಾದ  ಮಾಧವಗುಡಿ’  ಹಿಂದೂಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತ ಹೆಸರು.    ಮಾಧವಗುಡಿ ಅವರು ಈ ಲೋಕದಿಂದ ಅಗಲಿದ ದಿನ ಏಪ್ರಿಲ್ 22, 2011.  ಹಿಂದೂಸ್ಥಾನಿ ಸಂಗೀತದ ಗುರುಶಿಷ್ಯ ಪರಂಪರೆಯಲ್ಲಿ ಪಂ. ಭೀಮಸೇನ ಜೋಶಿ ಅವರ ಬಳಿ ಬಹಳಷ್ಟು ವರ್ಷಕಾಲ ಅಭ್ಯಾಸ ನಡೆಸಿದ ಪಂ. ಮಾಧವ ಗುಡಿ ಅವರದು ಕಿರಣಾ ಘರಾಣೆಯಲ್ಲಿ ದೊಡ್ಡ ಹೆಸರು. 

ಮಾಧವಗುಡಿಯವರು 1941ರ ವರ್ಷದಲ್ಲಿ ಜನಿಸಿದರು.  ಪಂ. ಗುಡಿ ಅವರ ಮನೆಯಲ್ಲಿ ಸಂಗೀತದ ವಾತಾವರಣ.  ತಂದೆ ಗುರುರಾಜಾಚಾರ್ಯ ಕೀರ್ತನಕಾರರು.  ಸಂಸ್ಕೃತ, ಶ್ಲೋಕ, ಕೀರ್ತನೆ ಮನೆಯಲ್ಲಿ ದಿನನಿತ್ಯ ಕೇಳಿ ಕೇಳಿ ಪುಟ್ಟ ಅವರಿಗೆ ಮಗುವಿದ್ದಾಗಲೇ ಸಂಗೀತದತ್ತ ಒಲವು ಮೂಡಿತು.  ಮೊದಲ ಗುರು ನಾಗೇಶರಾವ ದೇಶಪಾಂಡೆ ಅವರಲ್ಲಿ ಆರಂಭಿಕ ಶಿಕ್ಷಣ ಕಲಿತರು. 

ಮಗನ ಸಂಗೀತ ಆಸಕ್ತಿಯನ್ನು ಗುರುತಿಸಿದ ತಂದೆ ಗುರುರಾಜಾಚಾರ್ಯರು ಇದನ್ನು ಪಂ. ಜೋಶಿ ಅವರ ಗಮನಕ್ಕೆ ತಂದರು.  ಪುಟ್ಟ ಬಾಲಕ ಮಾಧವ ಗುಡಿ ಜೋಶಿ ಅವರ ಮುಂದೆ ಹಾಡಿದಾಗ ಆ ಮಹಾನ್ ಗಾಯಕನಿಗೆ ಅಚ್ಚರಿ ಜತೆಗೆ ಸಂತೋಷ ಉಂಟಾಯಿತು.  ಅಂದಿನಿಂದಲೇ ಶಿಷ್ಯನನ್ನಾಗಿ ಮಾಡಿಕೊಂಡು ನಿರಂತರ ಸಂಗೀತಾಭ್ಯಾಸಕ್ಕೆ ಅನುಮತಿ ನೀಡಿದರು.

ಮಾಧವಗುಡಿ ಮೆಟ್ರಿಕ್ ಪರೀಕ್ಷೆ ನಂತರ ಪುಣೆಯಲ್ಲಿ ಭೀಮಸೇನ ಜೋಶಿ ಅವರ ಮನೆಯಲ್ಲೇ ವಾಸ್ತವ್ಯ ಹೂಡಿ ಗುರುಶಿಷ್ಯ ಪರಂಪರೆಯಲ್ಲಿ ಸಂಗೀತ ಮುಂದುವರೆಸಿದರು.  ಗುರು ಸೇವೆ, ಸಂಗೀತ ಸೇವೆ ನಿರಂತರವಾಗಿ ನಡೆಯಿತು.  ಮೊದ ಮೊದಲು ಪಂ. ಜೋಶಿ ಅವರ ಸಂಗೀತ ಕಚೇರಿಗಳಿಗೆ ತಂಬೂರಿ ಸಾಥಿ ನೀಡುತ್ತಿದ್ದ ಪಂ. ಗುಡಿ ನಂತರ ಅವರ ಜತೆಜತೆಯಲ್ಲಿಯೇ ಸಹಗಾಯನವನ್ನೂ ನಡೆಸಿದರು.

ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಗುರುಶಿಷ್ಯ ಪರಂಪರೆಗೆ ವಿಶೇಷ ಮಹತ್ವ.  ಒಬ್ಬ ಗುರುವಿಗೂ ಶಿಷ್ಯನಿಗೂ ಭಾವನಾತ್ಮಕ ಮತ್ತು ವೃತ್ತಿಪರ ಸಂಗೀತ ಸಂಬಂಧ ಬೆಸೆಯುವುದು, ಗಟ್ಟಿಯಾಗುವುದು, ನೆಲೆಗೊಳ್ಳುವುದು ಈ ಪರಂಪರೆಯಲ್ಲಿ ಮಾತ್ರ.  ಹಿಂದೂಸ್ತಾನಿ ಸಂಗೀತದಲ್ಲಿ ದಂತಕಥೆಯಾಗಿದ್ದ ಪಂ. ಭೀಮಸೇನ ಜೋಶಿ ಅವರ ಆಪ್ತ ಶಿಷ್ಯ ಪಂ. ಮಾಧವ ಗುಡಿ ಅವರದು ಅಪ್ಪಟ ಗುರು-ಶಿಷ್ಯಪರಂಪರೆ.  ಸುಮಾರು 28 ವರ್ಷಗಳ ಕಾಲ ಈ ಪರಂಪರೆಯಲ್ಲಿ ಅಭ್ಯಾಸ ಮಾಡಿ ಅವರ ಪರಮ ಶಿಷ್ಯರೆಂದೇ  ಪ್ರಖ್ಯಾತರಾಗಿತಾವೂ ಅಪ್ರತಿಮ ಸಂಗೀತಗಾರ ಎಂದು ಪಂ. ಮಾಧವ ಗುಡಿ ಹೆಸರುಗಳಿಸಿದವರು.

ಪಂ. ಗುಡಿ ಅವರು ಕಿರಾಣ ಘರಾಣೆ ಗಾಯಕಿಜತೆಗೆ ದಾಸವಾಣಿ, ಸಂತವಾಣಿ, ಅಭಂಗಗಳನ್ನೂ ಸೊಗಸಾಗಿ ಹಾಡುತ್ತಿದ್ದರು.  ಸಂಗೀತ ಸಾಹಿತ್ಯಗಳ ತವರೂರು ಎಂದೇ ಖ್ಯಾತವಾದ ಧಾರವಾಡದಲ್ಲಿ ನೆಲೆಸಿದ್ದ ಪಂ. ಗುಡಿ ಅವರು ಜೀವನದುದ್ದಕ್ಕೂ ಸ್ವರಸರಸ್ವತಿಯ ಆರಾಧನೆ ನಡೆಸಿದರು.  ಪಂ. ಭೀಮಸೇನ ಜೋಶಿ ಅವರೊಂದಿಗೆ ಸುದೀರ್ಘ ಅವಧಿಯಲ್ಲಿ ಸಹಗಾಯನವನ್ನೂ ನಡೆಸಿದ ಈ ವಿಶಿಷ್ಟ ಗಾಯಕರು  ತಮ್ಮ ಗುರು ಧ್ವನಿಯ ಪ್ರತಿಧ್ವನಿ’  ಎಂದೂ ಗುರುತಿಸಿಕೊಂಡು ಸಂಗೀತ ಲೋಕದಲ್ಲಿ ಮನೆಮಾತಾದರು. 

ಪಂ. ಜೋಶಿ ಅವರ ಧ್ವನಿಯ ಮಾರ್ದವತೆ ಕಂಪು ಕೇಳಲು ಬಂದವರಿಗೆ ಸಹಗಾಯಕನೊಬ್ಬ ಅಷ್ಟೇ ಲೀಲಾಜಾಲವಾಗಿ ನಾದ ಸುಧೆ ಹರಿಸುವುದನ್ನು ಕೇಳುವ ಸುಯೋಗವೂ ಒದಗುತ್ತಿತ್ತು.  ವಿದೇಶಗಳಲ್ಲೂ ನಡೆಸಿದ ಸಹಗಾಯನದಿಂದ ಮಾಧವ ಗುಡಿ ಅವರನ್ನು ಪಂ. ಜೋಶಿ ಅವರಂತೆಯೇ ಸಂಗೀತಪ್ರಿಯರು ಪ್ರೀತಿಸಲಾರಂಭಿಸಿದರು.  ಇದು ಗುಡಿ ಅವರಿಗೆ ಸಂಗೀತದಲ್ಲಿ ಇನ್ನೂ ಎತ್ತರಕಕ್ಕೇರಲು ಸಹಕಾರಿಯಾಯಿತು.  ಗುರುವಿಗೆ ತಕ್ಕ ಶಿಷ್ಯಎಂಬ ಮಾತನ್ನು ಅಕ್ಷರಶಃ ಪಾಲಿಸಿದ ಮಾಧವ ಗುಡಿ ಅವರು ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಹೊಸ ಭಾಷ್ಯ ಬರೆದರು.

ಪಂ. ಮಾಧವ ಗುಡಿ ಅವರು ರಾಜ್ಯದ ನಾನಾ ಭಾಗಗಳಲ್ಲದೆ ಮುಂಬಯಿ, ಕೊಲ್ಕತ್ತ, ದೆಹಲಿ, ಪುಣೆ, ಹೈದರಾಬಾದ್ಗಳಲ್ಲಿ ಸಂಗೀತ ಸುಧೆ ಹರಿಸಿದ್ದಾರೆ.  ಸಿಂಗಪುರ ಕನ್ನಡ ಸಂಘ ಏರ್ಪಡಿಸಿದ್ದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಹಾಡಿ ಅಪಾರ ಮೆಚ್ಚುಗೆ ಗಳಿಸಿದರು.  ಅಮೇರಿಕ ಇಂಗ್ಲೆಂಡ್, ದುಬೈಗಳಲ್ಲಿ ಪಂ. ಭೀಮಸೇನ ಜೋಶಿ ಜತೆ ಸಹಗಾಯನ ನಡೆಸಿ ಹೆಸರುವಾಸಿಯಾದರು.

ಪಂ. ಮಾಧವ ಗುಡಿ ರಿಯಾಜ್ ಬಹಳ ಕಟ್ಟುನಿಟ್ಟು.  ಸುಮಾರು ಐದಾರು ಗಂಟೆ ಕಾಲ ನಿರಂತರ ರಿಯಾಜ್ ಮಾಡುತ್ತಿದ್ದರು.  ತಮ್ಮ ಶಿಷ್ಯರಿಂದಲೂ ಇದನ್ನೇ ನಿರೀಕ್ಷೆ ಮಾಡುತ್ತಿದ್ದರು.  ರಿಯಾಜ್ ವಿಷಯದಲ್ಲಿ ಅವರು ಶಿಷ್ಯರೊಂದಿಗೆ ಎಂದೂ ರಾಜಿಯಾಗುತ್ತಿರಲಿಲ್ಲ.  ಹೀಗಾಗಿ ಅವರ ಶಿಷ್ಯರು ಹೆಚ್ಚು ಕಾಲ ಅವರ ಬಳಿ ನಿಲ್ಲುತ್ತಿರಲಿಲ್ಲ ಎಂಬುದು ಕೂಡಾ ಅವರ ನಿಕಟವರ್ತಿಗಳ ಅನಿಸಿಕೆ. 

ಮಾಧವಗುಡಿಯವರು ತಮ್ಮಂತೆ ತಮ್ಮ ಮಕ್ಕಳನ್ನೂ ಸಂಗೀತದಲ್ಲಿ ಬೆಳೆಸಿದರು.  ಮಗ ಪ್ರಸನ್ನ ಗುಡಿ ಅವರು ಶಾಸ್ತ್ರೀಯ ಸಂಗೀತದಲ್ಲಿ ಉದಯೋನ್ಮುಖ ಕಲಾವಿದರಾಗಿ ರೂಪುಗೊಂಡರು.  ಇತ್ತೀಚಿನ ವರ್ಷದಲ್ಲಿ ಧಾರವಾಡದಲ್ಲಿ ಸತತ 24 ಗಂಟೆ ಕಾಲ ಹಾಡಿದ ಪ್ರಸನ್ನ ಗುಡಿ ಗಿನ್ನೆಸ್ ದಾಖಲೆ ನಿರ್ಮಿಸಿದರು. 

ಮಗನ ದಾಖಲೆಯಿಂದ ಅತ್ಯಂತ ಸಂತಸಗೊಂಡ ಪಂ. ಮಾಧವ ಗುಡಿ ಅವರ ಪ್ರತಿಕ್ರಿಯೆ ಹೀಗಿತ್ತು: ನನ್ ಇಷ್ಟು ವರ್ಷದ ಸಂಗೀತ ಜೀವನ ಸಾರ್ಥಕ ಆಗ್ಯಾದ.  ಇದ್ರಿಂದ ನಂ ಮಗನ ಸಂಗೀತ ಜೀವನಕ್ಕೆ ಒಂದು ತಿರುವು ಸಿಕ್ಕ ಹಾಗಾತು.  ಸಂಗೀತ ಸಾಧನೆಯ ಛಲ ಅವನಲ್ಲಿ ಅದ.  ಯೋಗ್ಯ ವೇಳೆಯಲ್ಲಿ ಅದು ಫಲಿಸಿತು.  ತುಂಬಾ ಸಂತೋಷ ಆತು”.  ತಂದೆಯ ಸಂಗೀತ ಹಾದಿಯನ್ನು ಮುಂದುವರೆಸಿದ ಮಗನ ಸಾಧನೆ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕಾದ ದೊಡ್ಡ ಲಾಭ.

ಪಂ. ಮಾಧವ ಗುಡಿ ಅವರು ಪಂ. ಭೀಮಸೇನ ಜೋಶಿ ಅವರನ್ನು ಅನುಸರಿಸಿ ಹಾಡಿದರೂ ಕಿರಾಣಾ ಘರಾಣೆಯ ವಿಶಿಷ್ಟ ಗಾಯಕಿಯನ್ನು ತಮ್ಮದೇ ಶೈಲಿಯಲ್ಲಿ ರೂಢಿಸಿಕೊಂಡು ಹಾಡಲಾರಂಭಿಸಿದರು.  ಈ ಘರಾಣೆಯ ರಾಗಾಲಾಪ, ವೈವಿಧ್ಯಮಯ ತಾನ್ ಗಳ ಸುರಿಮಳೆ, ಸಪ್ತಸ್ವರಗಳ ಕಲಾತ್ಮಕ ಜೋಡಣೆ, ಅದ್ಭುತ ಉಸಿರು ನಿಯಂತ್ರಣ ಸಾಮರ್ಥ್ಯ, ಕಲಾತ್ಮಕ ಸರ್ಗಮ್ಅವರ ಗಾಯನಕ್ಕೆ ವಿಶೇಷ ಕಳೆ ಕಟ್ಟುವಂತಾಯಿತು.  ಪಂ. ಮಾಧವ ಗುಡಿ ಅವರ ಗಾಯನ ಶೈಲಿ ವಿಶಿಷ್ಟವಾದದ್ದು.  ಕಿರಾಣಾ ಘರಾಣೆಯ ಬಂದೀಷ್ ಅನ್ನು ವಿಲಂಬಿತ್ ನಲ್ಲಿ ಹಾಡುವಾಗ ತಬಲಾ ಲಯ ಸ್ಪಷ್ಟವಾಗಿರಬೇಕು.  ಬೋಲ್ಗಳು ಗಾಯನಕ್ಕೆ ಪೂರಕವಾಗಿರಬೇಕು ಎಂದು ಅವರು ಅಪೇಕ್ಷಿಸುತ್ತಿದ್ದರು.

ಗುಲ್ಬರ್ಗದ ಖ್ಯಾತ ಗೀತರಚನೆಕಾರ ದೇವರಾಜ ದೇಶಮುಖ ಅವರು ರಚಿಸಿದ ಆವ ರೋಗವು ಎನಗೆ ದೇವ ಧನ್ವಂತರಿಗೀತೆ ಅವರಿಗೆ ಬಹಳ ಪ್ರಿಯವಾಗಿತ್ತು.  ಗುಲ್ಬರ್ಗಕ್ಕೆ ಸುಮಾರು 40 ವರ್ಷ ಕಾಲ ಪ್ರತೀ ವರ್ಷ ಬಂದು ಹಾಡುವಾಗಲೂ ಈ ಹಾಡನ್ನು ಅವರು ಹಾಡುತ್ತಿದ್ದರು.

ಗುಲ್ಬರ್ಗದಲ್ಲಿ ಖ್ಯಾತ ಸಮಾಜಸೆವಕರಾಗಿದ್ದ ದಿ. ಅನಂತರಾವ ದೇಶಮುಖ ಅವರ ವಾಡೆಯಲ್ಲಿ ಪ್ರತೀವರ್ಷ ಏರ್ಪಡಿಸುತ್ತಿದ್ದ ಅಮಾಷ ಉತ್ಸವದಲ್ಲಿ ಸುಮಾರು 30 ವರ್ಷ ಸತತವಾಗಿ ಸಂಗೀತ ಕಛೇರಿ ನೀಡಿದರು.  ಅವರು ಹಾಡುವಾಗ ಸಮಯದ ಪರಿವೆಯೇ ಇರುತ್ತಿರಲಿಲ್ಲ.  ಅಷ್ಟು ತನ್ಮಯರಾಗಿ ಹಾಡುತ್ತಿದ್ದರುಎನ್ನುತ್ತಾರೆ ಪಂ. ಗುಡಿ ಅವರೊಂದಿಗೆ ಬಹಳ ವರ್ಷ ಕಾಲ ಒಡನಾಡಿಯಾಗಿದ್ದ ಸಂಗೀತಗಾರ ಪಂ. ಮಹೇಶ ಈ ಬಡಿಗೇರ. 

ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಪ್ರಹರದ ಮೇಲೆ ರಾಗಗಗಳನ್ನು ಹಾಡುವುದು ಪದ್ಧತಿ.  ಪ್ರತಿ ಪ್ರಹರಕ್ಕೆ ಅನುಗುಣವಾಗಿ ರಾಗಗಳನ್ನೂ ಆಯ್ಕೆ ಮಾಡಿ ಹಾಡುತ್ತಿದ್ದುದು ಪಂ. ಗುಡಿ ಅವರ ಮತ್ತೊಂದು ವೈಶಿಷ್ಟ್ಯ.  ಸಾಯಂಕಾಲದ ಹೊತ್ತು ಪೂರಿಯಾ ಕಲ್ಯಾಣ್, ಯಮನ್, ಮಾರ್ವ ರಾಗಗಳು ಅವರ ಸಿರಿಕಂಠದಲ್ಲಿ ಅರಳುತ್ತಿದ್ದವು.  ತಾನ್ಗಳು ಮಳೆಯಂತೆ ಸುರಿಯುತ್ತಿದ್ದವು.  ವಿಲಂಬಿತ್ ಮುಗಿಸಿ ದೃತ್ ಗೆ ಬರುವಾಗ ಕೇಳುಗರು ಸಂಪೂರ್ಣವಾಗಿ ಸಗೀತದಲ್ಲಿ ಮುಳುಗಿರುತ್ತಿದ್ದರು.  ಅಹೋರಾತ್ರಿ ಸಂಗೀತೋತ್ಸವದಲ್ಲಿ ಮಧ್ಯರಾತ್ರಿ ಹಾಡುವಾಗ ದರ್ಬಾರಿ, ಅಸಾವರಿ, ತೋಡಿ, ಭೈರವ್ ರಾಗಕ್ಕೆ ಆದ್ಯತೆ.

ಸಂಗೀತದ ಗಂಭೀರ ಪ್ರಕೃತಿಯ ರಾಗವನ್ನೇ ಹೆಚ್ಚು ಇಷ್ಟಪಡುತ್ತಿದ್ದ ಪಂ. ಮಾಧವ ಗುಡಿ  ಅವರು ಲಲಿತ್, ಭೂಪ್, ಯಮನ್ ಮುಲ್ತಾನಿ, ದರ್ಬಾರಿ ಕಾನಡ, ಕೋಮಲ ರಿಷಬದ ಅಸಾವರಿ ಮುಂತಾದ ರಾಗಗಳನ್ನು ಬಹುವಾಗಿ ಮೆಚ್ಚಿ ಅದನ್ನೇ ತಮ್ಮ ಕಚೇರಿಗಳಲ್ಲಿ ಮನಮುಟ್ಟುವಂತೆ ಪ್ರಸ್ತುತಪಡಿಸುತ್ತಿದ್ದರು. 

ತಮ್ಮ ಗುರು ಪಂ. ಜೋಶಿ ಅವರು ರಾಗ ಸಂಯೋಜನೆ ಮಾಡಿದ ಬಂದೀಷ್ ಗಳಿಗೆ ಪಂ. ಗುಡಿ ಅವರ ಕಛೇರಿಯಲ್ಲಿ ಆಧ್ಯತೆ.  ಹಾಗೆಯೇ ಮಂತ್ರಾಲಯ ರಾಘವೇಂದ್ರರಾಯರ, ದತ್ತಾತ್ರೇಯ ದೇವರ ಮೇಲಿನ ಅನೇಕ ರಚನೆಗಳನ್ನು ಪಂ. ಗುಡಿ ಅವರು ಭಾವಪೂರ್ಣವಾಗಿ ಹಾಡುತ್ತಿದ್ದರು.  ಮರಾಠಿ ಅಭಂಗಳೂ ಇವರ ಸಿರಿಕಂಠದಲ್ಲಿ ಮಾರ್ದನಿಸುತ್ತಿತ್ತು.

ಸಂಗೀತ ಕಲಾವಿದರಿಗೆ ಶ್ರೋತೃ ಪ್ರೀತಿಬಹುದೊಡ್ಡ ಪ್ರಶಸ್ತಿ.  ಪಂ. ಮಾಧವ ಗುಡಿ ಅವರಿಗೆ ಇದು ಧಾರಾಳವಾಗಿ ಸಿಕ್ಕಿತು.  ಜತೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾಶ್ರೀ, ಗಾನ ಭಾಸ್ಕರ, ಗಾನ ಕಲಾತಿಲಕ, ಅಮೆರಿಕದಲ್ಲಿ ಸಂಗೀತ ರತ್ನಇವೇ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ.  ಇಂಥ ಅಪ್ರತಿಮ ಗಾಯಕ ಏಪ್ರಿಲ್ 22, 2011 ಸ್ವರ ಶಾರದೆಯ ಪದತಲದಲ್ಲಿ ಲೀನರಾದರು.  ಇವರು ಸಂಗೀತಕ್ಕೆ ನೀಡಿದ ಅಮೂಲ್ಯ ಕೊಡುಗೆ ಮಾತ್ರ ಎಂದಿಗೂ ನಿತ್ಯನೂತನ.


ಮಾಹಿತಿ ಕೃಪೆ: ಸುಧಾ ವಾರಪತ್ರಿಕೆಯಲ್ಲಿ ಮೂಡಿಬಂದ ಉಮಾ ಅನಂತ್ ಅವರ ಲೇಖನ

Tag: Madhava Gudi

ಕಾಮೆಂಟ್‌ಗಳಿಲ್ಲ: