ಗುರುವಾರ, ಆಗಸ್ಟ್ 29, 2013

ಕೆ ಕೆ ಹೆಬ್ಬಾರ್


ಕೆ ಕೆ ಹೆಬ್ಬಾರ್

ಭಾರತೀಯ ಚಿತ್ರಕಲಾವಿದರಲ್ಲಿ ಚಿಂತನಶೀಲ ಕಲಾವಿದರೆಂದೇ ಪ್ರಖ್ಯಾತರಾದ  ಕಟ್ಟಿಂಗೇರಿ ಕೃಷ್ಣ ಹೆಬ್ಬಾರರು ಜೂನ್ 15, 1911ರಂದು  ಉಡುಪಿಯ ಬಳಿಯ ಕಟ್ಟಿಂಗೇರಿಯಲ್ಲಿ ಜನಿಸಿದರು. ತಂದೆ ನಾರಾಯಣ ಹೆಬ್ಬಾರರು ಮತ್ತು ತಾಯಿ ಸೀತಮ್ಮನವರು.  ಹೆಬ್ಬಾರರ ಶಾಲಾ ವಿದ್ಯಾಭ್ಯಾಸ  ಉಡುಪಿಯ ಮಿಷನ್ ಹೈಸ್ಕೂಲಿನಲ್ಲಿ ನೆರವೇರಿತು.  ಚಿಕ್ಕಂದಿನಿಂದಲೇ  ಉಡುಪಿಯ ದೇವಸ್ಥಾನಗಳಲ್ಲಿ ಕಂಡ ರವವಿರ್ಮನ ಚಿತ್ರಗಳು ಅವರ  ಅಂತರಂಗದಲ್ಲಿ ಚಿತ್ರಕಲೆಯ  ಕುರಿತಾದ  ಆಸಕ್ತಿಗಳು  ನೆಲೆಸುವಂತೆ  ಮಾಡಿದವು.  

ತಮ್ಮ  ತಂದೆಯ ಅಕಾಲ ಮರಣದಿಂದಾಗಿ  ಅವರ ಬದುಕು ಅತಂತ್ರವಾಯಿತಾದರೂ ಧೃತಿಗೆಡದೆ ಕಲಾಭ್ಯಾಸಕ್ಕೆ ತೊಡಗಿ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್‌‌ಸ್ಟಿಟ್ಯೂಟ್ ಸೇರಿದರು.  ಆದರೆ ಅಲ್ಲಿನ ಶಿಕ್ಷಣ ರೀತಿ ಅವರಿಗೆ ರುಚಿಸದೆ ಮುಂಬಯಿಯ ಪ್ರತಿಷ್ಟಿತ ಜೆ.ಜೆ. ಕಲಾಶಾಲೆ ಸೇರಿ  ಡಿಪ್ಲೊಮ ಪದವಿ ಪಡೆದರು.  ಹೆಬ್ಬಾರರು  ಬೌದ್ಧ ಸಂಸ್ಕೃತಿಯನ್ನು ಬಿಂಬಿಸುವ ಎರಡನೆಯ ಶತಮಾನದ ಕಾರ್ಲಿಗುಹೆಗಳನ್ನು ಸಂದರ್ಶಿಸಿ ಬರೆದ ಚಿತ್ರಕ್ಕೆ 1941ರಲ್ಲಿ ಕೋಲ್ಕತ್ತಾದ ಅಕಾಡಮಿ ಆಫ್ ಫೈನ್ ಆರ್ಟ್ಸ್ ನಿಂದ  ಚಿನ್ನದ ಪದಕ ಲಭಿಸಿತು.

ಕೆ ಕೆ ಹೆಬ್ಬಾರರು 1939ರಲ್ಲಿ ತಾವು ಕಲಿತ ಜೆ.ಜೆ. ಕಲಾಶಾಲೆಯಲ್ಲೇ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು.   ಸಾಮಾಜಿಕ ಪರಿಸರಕ್ಕೆ ತೀಕ್ಷ್ಣವಾದ ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಚಿತ್ರಗಳನ್ನು ಅವರು  ರಚಿಸಿದರು. ಮುಂಬಯಿಯ ಬಳಿಯ ಬೆಹರಾಂ ಪಾಡಾದಲ್ಲಿ ನಡೆದ ಜಾತೀಯ ಹತ್ಯಾಕಾಂಡದ ನೋವಿನಿಂದ ಬರೆದ ಚಿತ್ರಗಳು. ಹಸಿವು, ಭಿಕ್ಷುಕರು, ನಿರಾಶ್ರಿತರು, ನೀರಿನ ದೊಡ್ಡ ದೊಡ್ಡ ಕೊಳಾಯಿಗಳಲ್ಲಿ ವಾಸಿಸುವ ಶೆಲ್ಟರ್ರ್‌‍, ಹಿರೋಷಿಮಾದ ಅಣುಬಾಂಬಿನಿಂದ ಸರ್ವನಾಶವನ್ನು ನೆನಪಿಸುವ ಹೊಲೋಕ್ಯಾಫ್ಲೈ, ಹೀಗೆ ನೋವು, ಹಸಿವು, ಕ್ರೌರ್ಯ, ಬಡತನ ಇವುಗಳೇ ಹೆಬ್ಬಾರರ ರಚನೆಯ ವಸ್ತುಗಳಾದವು

ಕೆ ಕೆ ಹೆಬ್ಬಾರರ ಟು ಮೈಡನ್ ಹುಡ್ಚಿತ್ರಕ್ಕೆ ಮುಂಬಯಿ ಆರ್ಟ್ ಸೊಸೈಟಿಯ ಚಿನ್ನದ ಪದಕ ದೊರೆಯಿತು.  ಹೆಬ್ಬಾರರ  ಕಲಾಪರಿಶ್ರಮಕ್ಕೆ ಅನೇಕ  ಬಹುಮಾನ  ಪುರಸ್ಕಾರಗಳು ಸಂದವು.  ಇಷ್ಟೆಲ್ಲಾ ಸಾಧಿಸಿದರೂ ಇನ್ನೂ ಕಲಿಯುವ ಉತ್ಸುಕತೆ ಹೊಂದಿದ್ದ ಹೆಬ್ಬಾರರು ಹೆಚ್ಚಿನ ಕಲಾಭ್ಯಾಸ ಮತ್ತು  ಅಧ್ಯಯನಕ್ಕಾಗಿ ಯೂರೋಪಿನತ್ತ ಪ್ರವಾಸ ಹೊರಟರು. ಪ್ಯಾರಿಸ್ಸಿನ ಅಕಾಡಮಿಯ ಜ್ಯೂಲಿಯನ್‌ನಲ್ಲಿ ಪ್ರೊ. ಕಾವೈಲ್ಸ್ ಅವರ ಬಳಿ ಶ್ರದ್ಧಾಪೂರ್ವಕ ಅಧ್ಯಯನ ನಡೆಸಿದರು.  ಇದಲ್ಲದೆ 1953ರಲ್ಲಿ ಸಾಂಸ್ಕೃತಿಕ ತಂಡದ ಸದಸ್ಯರಾಗಿ ಯೂರೋಪಿನ ಪೂರ್ವ ಪಶ್ಚಿಮ ರಾಷ್ಟ್ರಗಳ ಸಂದರ್ಶನ ಮಾಡಿದರು.

ಹೆಬ್ಬಾರರ ಬರ್ತ್ ಆಫ್ ಪೊಯಿಟ್ರಿರಾಮಾಯಣದ ರಚನೆಯನ್ನು ಸಂಕೇತಿಸುವ ಚಿತ್ರಇದು  ಕಲಾ ಪಂಡಿತರ ಮೆಚ್ಚುಗೆಗೆ ಪಾತ್ರವಾಯಿತು. ಮಾಹೀಂದರ್ಗಾ ಚಿತ್ರಕ್ಕೆ 1955ರಲ್ಲಿ ಲಲಿತ ಕಲಾ ಅಕಾಡಮಿ ಬಹುಮಾನ ಸಂದಿತು. ಜೋಪಡಿಗಳಲ್ಲಿ ಗಣೇಶೋತ್ಸವ, ರ್ಯಾಗ್‌ಪಿಕರ್ಸ್, ಮುಂಬಯಿಯ ಕೋಮು ಗಲಭೆ ಮುಂತಾದ ಪ್ರಸಿದ್ಧ ಚಿತ್ರಗಳನ್ನು ಹೆಬ್ಬಾರರು ರಚಿಸಿದರು.

ಇಂದು ಹೆಬ್ಬಾರ್‌ರ ಕಲಾಕೃತಿಗಳನ್ನು ಭಾರತೀಯ ಕಲಾ ಇತಿಹಾಸದಲ್ಲಿ ಬಹಳಷ್ಟು ಪ್ರಭಾವಿ ಎಂದು ಪರಿಗಣಿಸಲಾಗಿದೆ. ವೆನಿಸ್‌ ಬಯೆನ್ನೇಲ್‌, ಸಾವೊ ಪಾಲೊ ಆರ್ಟ್‌ ಬಯೆನ್ನಿಯಲ್‌ ಹಾಗೂ ಟೊಕಿಯೊ ಬಯೆನ್ನೇಲ್‌ ಸೇರಿದಂತೆ ವಿಭಿನ್ನ ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಹೆಬ್ಬಾರರು ಭಾಗವಹಿಸಿದ್ದರು.

ಕೇಂದ್ರ ಹಾಗೂ ರಾಜ್ಯ ಲಲಿತ ಕಲಾ ಅಕಾಡಮಿ ಅಧ್ಯಕ್ಷ ಪದವಿ, ಭಾರತ ಸರಕಾರದ ಪದ್ಮಶ್ರೀ, ಪದ್ಮ ಭೂಷಣ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕಲಾವಿದ ವೆಂಕಟಪ್ಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ  ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಕೆ ಕೆ ಹೆಬ್ಬಾರರನ್ನು ಅರಸಿ ಬಂದವು. 

ಯಾವುದೇ ಕಲಾವಿದ ತನ್ನ ಊರು, ಪರಿಸರ, ಅಲ್ಲಿನ ಸಂಸ್ಕೃತಿ, ಜಾನಪದ ಮರೆತು ಕಲಾಕೃತಿ ರಚಿಸುವುದು ಸರಿಯಲ್ಲಎಂಬುದು ಹೆಬ್ಬಾರರ ನಂಬಿಕೆಯಾಗಿತ್ತು.  ಕೆ.ಕೆ.ಹೆಬ್ಬಾರರು ಹುಟ್ಟಿದ್ದು ಕಟ್ಟಿಂಗೇರಿಯಾದರೂ ಬಳಿಕ ಮುಂಬೈನಲ್ಲಿಯೇ ನೆಲೆನಿಂತರು. ಆದರೂ ಅವರು ಹುಟ್ಟೂರನ್ನು ಯಾವತ್ತೂ ಮರೆಯಲಿಲ್ಲ. ಕಲಾಕೃತಿಗಳನ್ನು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವಲ್ಲಿ ಬಹಳಷ್ಟು ಯುವ ಕಲಾವಿದರಿಗೆ ಅವರು ನೆರವಾದರು.

ಈ ಮಹಾನ್ ಸಾಧಕರಾದ ಕೆ ಕೆ ಹೆಬ್ಬಾರರು 1996ರ ವರ್ಷದಲ್ಲಿ ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನಗಳು. 


Tag: K. K. Hebbar

ಕಾಮೆಂಟ್‌ಗಳಿಲ್ಲ: