ಶನಿವಾರ, ಆಗಸ್ಟ್ 31, 2013

ಎಂ. ವಿ. ರಾಜಮ್ಮ

ಎಂ. ವಿ. ರಾಜಮ್ಮ

ಚಿತ್ರರಂಗದ ಪ್ರಸಿದ್ಧ ಅಭಿನೇತ್ರಿ, ಚಿತ್ರರಂಗದ ಪ್ರಥಮ ನಿರ್ಮಾಪಕಿ, ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ಎಂ.ವಿ. ರಾಜಮ್ಮನವರು ಮಾರ್ಚ್ 10, 1921ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ ಜನಿಸಿದರು. ತಂದೆ ಜಮೀನ್ದಾರರಾಗಿದ್ದ ನಂಜಪ್ಪ, ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದ ಗೀಳು ಹತ್ತಿಸಿಕೊಂಡಿದ್ದ ರಾಜಮ್ಮನವರು  ಶಾಲಾ ರಂಗಭೂಮಿಯಿಂದಲೇ ರಂಗ ಪ್ರವೇಶ ಪಡೆದವರು. ಶಾಲೆಯ ವಾರ್ಷಿಕೋತ್ಸವದಲ್ಲಿ ಕೃಷ್ಣಲೀಲಾನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ಜನಮೆಚ್ಚುಗೆ ಪಡೆದ ಬಾಲನಟಿ.

ರಾಜಮ್ಮನವರು ಆಂಧ್ರದ ಹೆಸರಾಂತ ನಟ ವೇಮೂರಿ ಗಗ್ಗಯ್ಯನವರು ವಹಿಸುತ್ತಿದ್ದ ಯಮಧರ್ಮರಾಯ, ಕಂಸ, ಜರಾಸಂಧ, ಶಿಶುಪಾಲ, ದಕ್ಷ, ಮೈರಾವಣ ಮೊದಲಾದ ದೈತ್ಯ ಪಾತ್ರಗಳನ್ನು, ವೀರಾವೇಶದ ಅಭಿನಯವನ್ನು ನೋಡಿ ಸ್ಪೂರ್ತಿಗೊಂಡು ರಂಗಭೂಮಿಗೆ ಪಾದಾರ್ಪಣ ಮಾಡಿದರು. ಅಂದಿನ ದಿನಗಳಲ್ಲಿ  ಸ್ತ್ರೀ ಪಾತ್ರಧಾರಿಗಳು ದೊರಕದೆ ಸುಬ್ಬಯ್ಯನಾಯ್ಡು, ರಾಜ್‌ಕುಮಾರ್, ನಾಗೇಂದ್ರರಾವ್ ಮೊದಲಾದವರೇ ನಾಟಕಗಳಲ್ಲಿ ಸ್ತ್ರೀಪಾತ್ರ ನಿರ್ವಹಿಸುತ್ತಿದ್ದ ಕಾಲ.  ಅಂತಹ ಕಾಲದಲ್ಲಿ ದಿಟ್ಟತನದಿಂದ ರಂಗಭೂಮಿಗೆ ಆಗಮಿಸಿದ ಎಂ.ವಿ. ರಾಜಮ್ಮನವರು ಮಹಮದ್ ಪೀರ್ ಅವರ ಶ್ರೀ ಚಂದ್ರಕಲಾ ನಾಟಕ ಮಂಡಲಿಯಿಂದ ಅಭಿನಯದ ಆಹ್ವಾನವನ್ನು ಸ್ವೀಕರಿಸಿದರು.  ಸಂಸಾರ ನೌಕ’, ‘ಗೌತಮಬುದ್ಧನಾಟಕಗಳಲ್ಲಿ ಸರಳಮತ್ತು ಯಶೋಧರಪಾತ್ರಗಳನ್ನು  ನಿರ್ವಹಿಸಿದರು.  ರಾಜಮ್ಮನವರ ಭಾವಪ್ರಧಾನ ಅಭಿನಯದಿಂದ ರಂಗಭೂಮಿಯ ಪ್ರೇಕ್ಷಕವರ್ಗ ಮೂಖವಾಗಿತ್ತು. ಅಭಿನಯ ಲಾಲಿತ್ಯ, ಗೀತೆಗಳ ಮಾಧುರ್ಯ, ವೇಷಭೂಷಣಗಳಿಂದ ಜನ ಮೆಚ್ಚುಗೆಗಳಿಸಿದ ರಾಜಮ್ಮನವರು  ಶ್ರೇಷ್ಠನಟಿ ಪಟ್ಟವನ್ನು ಅಲಂಕರಿಸಿದ್ದರು.  ಆರಂಭದಲ್ಲಿ ಚಂದ್ರಕಲಾ ನಾಟಕ ಮಂಡಳಿಯಲ್ಲಿ ನಟಿಯಾಗಿದ್ದಾಗಲೇ ವೀರಪ್ಪ ಅವರನ್ನು ಮದುವೆಯಾದರು. ನಂತರ ಮದರಾಸಿಗೆ ಹೋಗಿ ನೆಲೆಸಿದರು.

1936ರಲ್ಲಿ ಸಂಸಾರ ನೌಕಚಲನಚಿತ್ರದಲ್ಲಿ ಅಭಿನಯಿಸುವುದರೊಂದಿಗೆ  ಎಂ. ವಿ. ರಾಜಮ್ಮನವರ  ಬಣ್ಣದ ಬದುಕಿನಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿತು. ಬಿ.ಆರ್. ಪಂತುಲು, ಎಚ್.ಎಲ್.ಎನ್. ಸಿಂಹ, ಡಿಕ್ಕಿ ಮಾಧವರಾವ್, ಜಿ.ವಿ. ಕೃಷ್ಣ ಮೊದಲಾದ ಕಲಾವಿದರ ನಿಕಟವರ್ತಿಯಾಗಿದ್ದ ಅವರು  ಕನ್ನಡವೇ ಅಲ್ಲದೆ  ತೆಲುಗು ತಮಿಳು ಚಿತ್ರರಂಗಗಳಲ್ಲೂ ತಮ್ಮ ಕಾರ್ಯಕ್ಷೇತ್ರವನ್ನು ವ್ಯಾಪಿಸಿಕೊಂಡಿದ್ದರು.  ಪಂತಲು - ರಾಜಮ್ಮ ಅವರ ತಾರಾಜೋಡಿ ಎರಡು  ದಶಕಗಳ ಕಾಲ ಹೆಸರು ಮಾಡಿತ್ತು.  60ಕ್ಕೂ ಹೆಚ್ಚು ಕನ್ನಡಚಿತ್ರ, 80ಕ್ಕೂ ಹೆಚ್ಚು ತಮಿಳು ಹಾಗೂ 20ಕ್ಕೂ ಹೆಚ್ಚು ತೆಲುಗು ಹಾಗೂ 1 ಹಿಂದಿ ಚಿತ್ರದಲ್ಲಿ ನಟಿಸಿರುವ ರಾಜಮ್ಮ ಅವರು ಬಹುಭಾಷಾ ನಟಿಯಾಗಿದ್ದರು. ರಾಜ್ ಕುಮಾರ್, ಶಿವಾಜಿ ಗಣೇಶನ್, ಎಂ ಜಿ ರಾಮಚಂದ್ರನ್ ಅಂತಹ ತಾರೆಯರಿಗೆ ಪ್ರಸಿದ್ಧ ಚಿತ್ರಗಳಲ್ಲಿ ತಾಯಿಯಾಗಿ ನಟಿಸಿದ ಪ್ರಖ್ಯಾತಿ ರಾಜಮ್ಮನವರದು.

ಕನ್ನಡ ಚಿತ್ರಗಳಾದ ರತ್ನಗಿರಿ ರಹಸ್ಯ, ಮೊದಲತೇದಿ, ಸ್ಕೂಲ್‌ಮಾಸ್ಟರ್, ಚಿನ್ನದಗೊಂಬೆ, ಮಕ್ಕಳರಾಜ್ಯ, ಕಿತ್ತೂರು ಚೆನ್ನಮ್ಮ, ಸತಿಶಕ್ತಿ, ದುಡ್ಡೇ ದೊಡ್ಡಪ್ಪ, ಎಮ್ಮೆ ತಮ್ಮಣ್ಣ, ಮಾಲತಿ ಮಾಧವ, ಶ್ರೀಕೃಷ್ಣದೇವರಾಯ, ದಾರಿ ತಪ್ಪಿದ ಮಗ  ಮುಂತಾದ ಚಿತ್ರಗಳಲ್ಲಿ  ನಿರ್ವಹಿಸಿದ ಪಾತ್ರಗಳಿಗಾಗಿ ರಾಜಮ್ಮನವರಿಗೆ  ಅಪಾರವಾದ  ಕೀರ್ತಿ ಸಂದಿತು.  1943ರಲ್ಲಿ ರಾಧಾರಮಣಚಿತ್ರವನ್ನು  ನಿರ್ಮಿಸಿದ ಎಂ. ವಿ. ರಾಜಮ್ಮನವರು  ಚಿತ್ರರಂಗದ  ಪ್ರಥಮ ನಿರ್ಮಾಪಕಿ ಎನಿಸಿದರು. ಈ ಚಿತ್ರದ ಮೂಲಕ  ಜಿ.ವಿ. ಅಯ್ಯರ್, ಬಾಲಕೃಷ್ಣ ಅವರಂತಹ ಮಹಾನ್ ಪ್ರತಿಭೆಗಳು ಚಿತ್ರರಂಗಕ್ಕೆ ಸಂದವು. ಆ ನಂತರ ಪದ್ಮಿನಿ ಪಿಕ್ಚರ್ಸ್ ಸಹಯೋಗದಲ್ಲಿ ಇವರು ನಿರ್ಮಿಸಿದ ಮಕ್ಕಳರಾಜ್ಯಜನಪ್ರಿಯತೆ ಗಳಿಸಿತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸೋಲುಂಡ ಅವರು, ಚಿತ್ರನಿರ್ಮಾಣವನ್ನು ಕೈಬಿಟ್ಟು ಅಭಿನಯದಲ್ಲಿ ಮುಂದುವರೆದರು.  ಸ್ಕೂಲ್‌ಮಾಸ್ಟರ್, ಕಿತ್ತೂರು ಚೆನ್ನಮ್ಮ ಅಭಿನಯಕ್ಕಾಗಿ  ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪದಕಗಳು ಅವರಿಗೆ ಸಂದವು.

ಈ ಮಹಾನ್ ಸಾಹಸಿಕಲಾವಿದೆ ಎಂ. ವಿ. ರಾಜಮ್ಮನವರು ಜುಲೈ 6, 2000ದ ವರ್ಷದಂದು ಈ ಲೋಕವನ್ನಗಲಿದರು.  ಈ ಮಹಾನ್ ಕಲಾಚೇತನಕ್ಕೆ  ನಮ್ಮ ನಮನಗಳು. 


ಮಾಹಿತಿ ಕೃಪೆ:  ಕಣಜ ಮತ್ತು ಕನ್ನಡರತ್ನ.ಕಾಂ.

Tag: M. V. Rajamma

ಕಾಮೆಂಟ್‌ಗಳಿಲ್ಲ: