ಸೋಮವಾರ, ಆಗಸ್ಟ್ 26, 2013

ಸಿ. ಕೆ ಪ್ರಹ್ಲಾದ್


ಸಿ. ಕೆ ಪ್ರಹ್ಲಾದ್

ನಮ್ಮ ಕನ್ನಡಿಗಾರದ ಕೊಯಂಬತ್ತೂರು ಕೃಷ್ಣರಾವ್ ಪ್ರಹ್ಲಾದ್  ಮ್ಯಾನೇಜ್ಮೆಂಟ್  ಗುರುಎಂದು ವಿಶ್ವದಾದ್ಯಂತ ಪ್ರಖ್ಯಾತರಾದವರು.  ಅವರು ಜನಿಸಿದ್ದು ಆಗಸ್ಟ್ 8, 1941ರ ವರ್ಷದಲ್ಲಿ.  ಪ್ರಹ್ಲಾದ್ ಅವರು ಸಾಂಸ್ಥಿಕ ಅಭಿವೃದ್ಧಿ, ಆಡಳಿತ, ಅಧ್ಯಯನ, ಅಧ್ಯಾಪನ ಮತ್ತು ಆಡಳಿತ ಶಾಸ್ತ್ರದಲ್ಲಿನ ಸಂಶೋಧನಾ ಕ್ಷೇತ್ರಗಳಲ್ಲಿ ಮಾಡಿದ ಕೆಲಸ ಸ್ಮರಣೀಯವಾದದ್ದು.

ಪ್ರಹ್ಲಾದ್ ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ ಯೋಜನಾ ಶಾಸ್ತ್ರದ ಪ್ರಾಚಾರ್ಯರಾಗಿದ್ದರು.  ಆಡಳಿತ ಶಾಸ್ತ್ರದಲ್ಲಿ ಪ್ರಖ್ಯಾತವಾಗಿರುವ ಕೋರ್ ಕಾಂಪಿಟೆನ್ಸಿ ಮತ್ತು ಬಿ ಓ ಪಿ ಅಥವಾ ಬಾಟಮ್ ಆಫ್ ದಿ ಪಿರಮಿಡ್ತತ್ವಗಳ ಜನಕರೆಂದು ಅವರು ಜಗತ್ಪ್ರಸಿದ್ಧರು. 

ತಮಿಳುನಾಡಿನ ಕೊಯಂಬತ್ತೂರು ನಗರದಲ್ಲಿ ಕನ್ನಡ ಮಾತನಾಡುವ ಕುಟುಂಬದ ಸಂಸ್ಕೃತ ವಿದ್ವಾಂಸರ ಹನ್ನೊಂದು ಮಕ್ಕಳಲ್ಲಿ ಒಂಭತ್ತನೆಯವರಾಗಿ  ಜನಿಸಿದ ಪ್ರಹ್ಲಾದ್ ಅವರು ಭೌತಶಾಸ್ತ್ರದ ಪದವೀಧರರಾಗಿ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಯೂನಿಯನ್ ಕಾರ್ಬೈಡ್ ಸಂಸ್ಥೆಯ ಅಧಿಕಾರಿಯಾಗಿ ನೇಮಕಗೊಂಡಿದ್ದರು.   ಅಲ್ಲಿ ನಾಲ್ಕು ವರ್ಷ ನೌಕರಿಯಲ್ಲಿದ್ದ ಪ್ರಹ್ಲಾದರು ಅಹಮದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. 

ಮುಂದೆ ಪ್ರಹ್ಲಾದರು ಹಾರ್ವರ್ಡ್ ವ್ಯಾಪಾರ ಶಾಲೆಯಲ್ಲಿ ಕೇವಲ ಎರಡೂವರೆ ವರ್ಷಗಳ ಕ್ಷಿಪ್ರ ಅವಧಿಯಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳ ಆಡಳಿತಎಂಬ ವಿದ್ವತ್ಪೂರ್ಣ ಡಾಕ್ಟರೇಟ್ ಪ್ರಬಂಧ ಮಂಡಿಸಿದ ಕೀರ್ತಿಯನ್ನು ಮುಡಿಗೇರಿಸಿಕೊಂಡರು.  ಅವರಿಗೆ 1975ರಲ್ಲಿ ಹಾರ್ವರ್ಡಿನ ಪ್ರತಿಷ್ಟಿತ ಡಿ.ಬಿ.ಎ. ಪದವಿ ಸಂದಿತು. 

ಹಾರ್ವರ್ಡಿನಿಂದ ಹಿಂದಿರುಗಿದ ಪ್ರಹ್ಲಾದರು ಅಹಮಾದಾಬಾದಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರೊಫೆಸರ್ ಆಗಿ ಬಂದು ಅತೀ ಕಡಿಮೆ ಅವಧಿಯಲ್ಲಿಯೇ ಅಲ್ಲಿಂದ ಅಮೆರಿಕಕ್ಕೆ ತೆರಳಿ, ಕೆಲವೇ ವರ್ಷಗಳಲ್ಲಿ ಮಿಚಿಗನ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ಅಡ್ಮಿನಿಷ್ಟ್ರೇಶನ್ ವಿಭಾಗದ ಪ್ರಮುಖ ಪ್ರಾಧ್ಯಾಪಕರಾಗಿ ರೂಪುಗೊಂಡರು.  2005ರ ವರ್ಷದಲ್ಲಿ ಪ್ರಹ್ಲಾದರಿಗೆ ಆ ವಿಶ್ವವಿದ್ಯಾಲಯವು ಅತ್ಯಂತ ಪ್ರತಿಷ್ಠಿತ ಪ್ರೊಫೆಸರ್ ಎಂಬ ಉಚ್ಚತಮ ಗೌರವವನ್ನು ನೀಡಿ ಗೌರವಿಸಿತು.

ತೊಂಭತ್ತರ ದಶಕದಲ್ಲಿ ವಿಶ್ವದ ಪ್ರತಿಷ್ಠಿತ ಸಂಸ್ಥೆಯಾದ  ಫಿಲಿಪ್ಸ್ಅತ್ಯಂತ ತೊಂದರೆಗೆ ಸಿಲುಕಿದ್ದ ಪರಿಸ್ಥಿತಿಯಲ್ಲಿ ಜಾನ್ ಟಿಮ್ಮರ್ ಅವರಿಗೆ ಆ ಸಂಸ್ಥೆಯನ್ನು ಪುನರುತ್ಥಾನ ಗೊಳಿಸುವ ಬಗೆಗೆ ಪ್ರಹ್ಲಾದರು ಹಾಕಿಕೊಟ್ಟ ಯೋಜನೆ, ಫಿಲಿಪ್ಸ್ ಸಂಸ್ಥೆಯು ಅಪೂರ್ವ ರೀತಿಯಲ್ಲಿ  ಪುನರುತ್ಥಾನಗೊಳ್ಳಲು ಸಹಾಯಕವಾಗಿಪ್ರಹ್ಲಾದ್ ಅವರನ್ನು ಕೀರ್ತಿಶಿಖರಕ್ಕೇರಿಸಿತು.  ಆ ಸಂದರ್ಭದಲ್ಲಿ ಅವರು ಎರಡು ಮೂರು ವರ್ಷಗಳ ಅವಧಿಯವರೆಗೆ ಫಿಲಿಪ್ಸ್ ಸಂಸ್ಥೆಯ ಪುನಃಶ್ಚೇತನಕ್ಕೆ ಹೆಗಲು ನೀಡಿದ್ದರು.  

ಸಿ. ಕೆ ಪ್ರಹ್ಲಾದರು ‘Core Competence’ ಎಂಬ ವಿಶ್ವ ಪ್ರಸಿದ್ಧ ಕೃತಿಗೆ ಗ್ಯಾರಿ ಹ್ಯಾಮೆಲ್ ಅವರೊಂದಿಗೆ ಜೋಡಿಯಾಗಿ ಬರವಣಿಗೆ ನಡೆಸಿದರು.  ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಖ್ಯಾತವಾದ ಕೃತಿಗಳಾಗಿರುವ ಗ್ಯಾರಿ ಹ್ಯಾಮೆಲ್ ಅವರೊಂದಿಗೆ ರಚಿಸಿದ ‘Competing for the Future’, ವೆಂಕಟ್ ರಾಮಸ್ವಾಮಿ ಅವರೊಂದಿಗಿನ ‘The Future of Competition’ ಮತ್ತು ಅವರ ಸ್ವಯಂರಚನೆಯಾದ ‘The Fortune at the Bottom of the Pyramid: Eradicating Poverty through Profits’ ಕೃತಿಗಳಿಂದ ಪ್ರಹ್ಲಾದ್ ಅವರ ಹೆಸರು ವಿಶ್ವದೆಲ್ಲೆಡೆ ಜನಜನಿತಗೊಂಡಿತು.  ಎಪ್ರಿಲ್ 2008ರಲ್ಲಿ ಪ್ರಕಟಗೊಂಡ ಎಂ. ಎಸ್. ಕೃಷ್ಣನ್ ಅವರೊಂದಿಗೆ ಬರೆದ The New Age of Innovation’ ಪ್ರಹ್ಲಾದರ ಕೊನೆಯ ಕೃತಿ.

ಪ್ರಹ್ಲಾದ್ ಅವರು ತಾವೇ ಹುಟ್ಟುಹಾಕಿದ್ದ ಪ್ರಜಾ ಇನ್ಕಾರ್ಪೋರೆಶನ್’ ಸಂಸ್ಥೆಯ ಮುಖ್ಯಸ್ಥರಾಗಿದ್ದರು.  ಸಾಮಾನ್ಯ ಮನುಷ್ಯನಿಗೂ  ಯಾವುದೇ ಅಡೆತಡೆಯಿಲ್ಲದೆ  ಮಾಹಿತಿ ದೊರಕಬೇಕು ಎಂಬ  ಧ್ಯೇಯದಿಂದ ಮೊದಲ್ಗೊಂಡು ಉತ್ತಮ ರೀತಿಯ  ಸಾಂಸ್ಥಿಕ ಆಡಳಿತ ನಿರ್ವಹಣೆಗೆ ಹೊಸ ಹೊಸ ವಿಧಿವಿಧಾನಗಳನ್ನು ದೊರಕಿಸಿಕೊಡುವುದು ಈ ಪ್ರಜಾ ಸಂಸ್ಥೆಯಪರಮಗುರಿಯಾಗಿತ್ತು.  ಆ ಸಂಸ್ಥೆ ಕಾಲಾನಂತರದಲ್ಲಿ ಟಿಬ್ಕೋ ಸಂಸ್ಥೆಯ ಸ್ವಾಮ್ಯಕ್ಕೆ ಒಳಪಟ್ಟಿತು. 

ವಿಶ್ವದ ಐವತ್ತು ಶ್ರೇಷ್ಠ ಆಡಳಿತ ಚಿಂತಕರಲ್ಲಿ ಒಬ್ಬರೆಂದು ಟೈಮ್ಸ್ ಪತ್ರಿಕೆ  ಪ್ರಹ್ಲಾದರಿಗೆ ಗೌರವ ಸಲ್ಲಿಸಿದರೆ  'ಹಾರ್ವರ್ಡ್ ವಿಶ್ವವಿದ್ಯಾಲಯದ ಶ್ರೇಷ್ಠ'ರೆಂದು ಬ್ಯುಸಿನೆಸ್ ನ್ಯೂಸ್ಅವರನ್ನು ಕೊಂಡಾಡಿತು.  ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.  ಇದಲ್ಲದೆ ಆಡಳಿತ ಕ್ಷೇತ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಹೆಸರಿನಲ್ಲಿ ನೀಡುವ ಉನ್ನತ ಪ್ರಶಸ್ತಿ, ಕೊರ್ನಿವಸ್ ವಿಶ್ವವಿದ್ಯಾಲಯದ ಮಹಾನ್ ಗೌರವ ಇವೇ ಮುಂತಾದ ಬಹುತೇಕ ಗೌರವಗಳು ಸಿ, ಕೆ. ಪ್ರಹ್ಲಾದರಿಗೆ ಸಂದಿತ್ತು. 

ಏಪ್ರಿಲ್ 16, 2010ರಂದು  ನಿಧನರಾಗುವುದಕ್ಕೆ ಕೆಲವು ತಿಂಗಳ ಹಿಂದೆ  ಪ್ರಹ್ಲಾದರು ತಮ್ಮ ಉಪನ್ಯಾಸವೊಂದರಲ್ಲಿ, ಭಾರತದಲ್ಲಿ ತುಂಬಿರುವ ಭ್ರಷ್ಟಾಚಾರದ ಬಗೆಗೆ  ಮಂಡಿಸಿದ ಮಾಹಿತಿ ಅತ್ಯಂತ ಗಮನ ಸೆಳೆಯುವಂತದ್ದಾಗಿದೆ.

“ಭಾರತದಲ್ಲಿ ನಡೆದಿರುವ ಭ್ರಷ್ಟಾಚಾರದ ಒಟ್ಟು ಮೊತ್ತ 250,000 ಕೋಟಿ ರೂಪಾಯಿಗಳನ್ನೂ ಮೀರಬಹುದು ಮತ್ತು ಇದರಲ್ಲಿ ನಮ್ಮ ರಾಜಕಾರಣಿಗಳ ಮತ್ತು ಚುನಾವಣಾ ಪ್ರತಿನಿಧಿಗಳ ಪಾತ್ರ ಮಹತ್ವದ್ದು” ಎಂದು  ಸಿ.ಕೆ. ಪ್ರಹ್ಲಾದ್ ತಮ್ಮ ಉಪನ್ಯಾಸದಲ್ಲಿ ತಿಳಿಸಿದ್ದರು.  “ಚುನಾವಣಾ ಪ್ರಚಾರಗಳ ಸಂದರ್ಭಗಳಲ್ಲಿ ರಾಜಕಾರಣಿಗಳು ಹಣದ ಹೊಳೆ ಹರಿಸುತ್ತಾರೆ ಮತ್ತು ಗೆದ್ದ ನಂತರ ಅದನ್ನು ವಾಪಸ್ ಪಡೆಯಲು ಯತ್ನಿಸುತ್ತಾರೆ; ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಲು ಇದೇ ಮೂಲ ಕಾರಣ” ಎಂದು ಅವರು ಅಭಿಪ್ರಾಯಪಟ್ಟಿದ್ದರು. .

“2009ರ ಲೋಕಸಭಾ ಚುನಾವಣೆಗಳಿಗೆ ಭಾರತವು ಸುಮಾರು 10,000 ಕೋಟಿ ರೂಪಾಯಿಗಳನ್ನು ವ್ಯಯಿಸಿತು. ಇಲ್ಲಿ ಚುನಾವಣಾ ಆಯೋಗವು 1,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದರೆ, 700 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ವೆಚ್ಚ ಮಾಡಿದವು. ಉಳಿದ 8,000 ಕೋಟಿ ರೂಪಾಯಿಗಳು ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದ ವೆಚ್ಚವಾದವು.  ರಾಜ್ಯಗಳ ಚುನಾವಣೆಗಳ ವೆಚ್ಚವನ್ನೂ ಇದಕ್ಕೆ ಸೇರಿಸಿದರೆ ಭಾರತದ ಚುನಾವಣಾ ವೆಚ್ಚವೇ 25,000 ಕೋಟಿ ರೂಪಾಯಿಗಳನ್ನು ದಾಟುತ್ತದೆ” ಎಂದು ಪ್ರಹ್ಲಾದ್ ಅವರು ಈ ಸಂದರ್ಭದಲ್ಲಿ ಅಂಕಿ-ಅಂಶ ಸಮೇತವಾಗಿ ವಿವರಿಸಿದ್ದರು..

“ಕೇವಲ ಒಂದು ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ನಡೆಯುವ ಭ್ರಷ್ಟಾಚಾರ 25,000 ಕೋಟಿಗಳನ್ನು ಮೀರುತ್ತದೆ ಎನ್ನುವಾಗ, ಇದುವರೆಗೆ ನಡೆದಿರುವ ನಡೆದಿರುವ ಭ್ರಷ್ಟಾಚಾರದ ಮೊತ್ತ 250,000 ಕೋಟಿ ರೂಪಾಯಿಗಳನ್ನೂ ಮೀರಬಹುದು” ಎಂಬುದು ಅವರ ಅಂದಾಜಾಗಿತ್ತು.  “ಖಾಸಗಿ ಕಂಪನಿಗಳು ಅಥವಾ ವ್ಯಕ್ತಿಗಳು ರಾಜಕೀಯ ಪಕ್ಷಗಳಿಗೆ ನಿಧಿಗಳನ್ನು ನೀಡುವ ಮತ್ತೊಂದು ಅರ್ಥವೆಂದರೆ ಅದನ್ನು ಸಮರ್ಥವಾಗಿ ವಾಪಸ್ ಪಡೆಯುತ್ತೇವೆ ಎಂಬ ಭರವಸೆ. ಇದು ಒಂದು ರೀತಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಚುನಾವಣೆಗಳಲ್ಲಿ ಹಣ ಹೂಡಿಕೆ ಮಾಡುವುದು. ಹೂಡಿಕೆದಾರರು ಕನಿಷ್ಠ ತಾವು ಹಾಕಿದ ಮೊತ್ತದ 10ರಷ್ಟು ಪಾಲನ್ನು ಪಡೆಯದೆ ಬಿಡುವುದಿಲ್ಲ ಎಂದು ಅವರು ವಿವರಿಸುವ ಮೂಲಕ ಭ್ರಷ್ಟಾಚಾರ ಎಲ್ಲಿಂದ, ಹೇಗೆ ಹುಟ್ಟುತ್ತದೆ ಎಂಬುದನ್ನು ಪ್ರಹ್ಲಾದ್ ಮನೋಜ್ಞವಾಗಿ  ವಿವರಿಸಿದ್ದರು.

ಹೀಗೆ ಎಲ್ಲ ರೀತಿಯಲ್ಲಿ ಉತ್ಕೃಷ್ಟ ಚಿಂತಕರಾಗಿ ಲೋಕಕ್ಕೆ ತಿಳುವಳಿಕೆ ನೀಡುವ ಮತ್ತು ಮಾರ್ಗದರ್ಶಕರಾಗಿದ್ದ ಪ್ರಹ್ಲಾದರು ಕೇವಲ ತಮ್ಮ 68ನೆಯ ವಯಸ್ಸಿನಲ್ಲಿ ನಿಧನರಾದರು.  ಅವರು ಕೊನೆಯಲ್ಲಿ ಮಾಡಿದಂತಹ ಭಾಷಣಗಳಿಂದ ಮತ್ತು ತಿಳುವಳಿಕೆ ಮಾರ್ಗದರ್ಶನಗಳಿಂದ ನಮ್ಮ ಭಾರತೀಯ ಸಮಾಜದ ಕಣ್ಣುಗಳನ್ನು ಇನ್ನಷ್ಟು ತೆರೆಯುವಂತಿದ್ದರೆ ಮತ್ತಷ್ಟು ಚೆನ್ನಿತ್ತು.


ಈ ಮಹಾನ್ ಆಡಳಿತ ಪ್ರಾಚಾರ್ಯರ ಮಹಾನ್ ಚೇತನಕ್ಕೆ ನಮ್ಮ  ಗೌರವದ ನಮನಗಳು.

Tag: C. K. Prahlad

ಕಾಮೆಂಟ್‌ಗಳಿಲ್ಲ: