ಸೋಮವಾರ, ಆಗಸ್ಟ್ 26, 2013

ವರದರಾಜ ಹುಯಿಲಗೋಳ

ವರದರಾಜ ಹುಯಿಲಗೋಳ

ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಗಣ್ಯ ಕೊಡುಗೆ ನೀಡಿರುವ ವರದರಾಜ ಹುಯಿಲಗೋಳ ಅವರು  ಆಗಸ್ಟ್ 13, 1917ರಂದು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು. ಇವರ ತಂದೆ ರಾಜೇರಾಯರು ಮತ್ತು ತಾಯಿ ಗೋದಾವರಿಬಾಯಿಯವರು. ರಂ. ಶ್ರೀ. ಮುಗಳಿಯವರು ಇವರ ಸೋದರಮಾವನವರಾದರೆ ಆಲೂರು ವೆಂಕಟರಾಯರು ಇವರ ಮಾವನವರು.

ವರದರಾಜ ಹುಯಿಲಗೋಳರ ಪ್ರಾರಂಭಿಕ ಶಿಕ್ಷಣ ಮುದ್ದೇಬಿಹಾಳದಲ್ಲಿಯೂ, ಹೈಸ್ಕೂಲು  ಶಿಕ್ಷಣವು ಗದಗದಲ್ಲಿಯೂ ನೆರವೇರಿತು.  ಮುಂದೆ  ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿಗೆ ಸೇರಿ  ಬಿ.ಎ. (ಆನರ್ಸ್) ಪದವಿಎಂ.ಎ. ಪದವಿ ಹಾಗೂ  ಬಿ.ಟಿ. ಪದವಿಗಳನ್ನು ಗಳಿಸಿದರು. 1969ರಲ್ಲಿ ದುರ್ಗಸಿಂಹನ ಪಂಚತಂತ್ರ ಸಮೀಕ್ಷೆಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು.

ಬಿ.ಎ. (ಆನರ್ಸ್) ಪದವಿಯ ನಂತರ ಕೆಲಕಾಲ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಶಿಕ್ಷಣ ವೃತ್ತಿ ಮಾಡಿದ ವರದರಾಜರು  ಎಂ.ಎ. ಪದವಿ ಪಡೆದ  ನಂತರದಲ್ಲಿ ಕೆಲಕಾಲ ಹಾವೇರಿಯಲ್ಲಿ ಅಧ್ಯಾಪಕರ ಹುದ್ದೆ ನಿರ್ವಹಿಸಿದರು.  ನಂತರ ಬಾಸೆಲ್ ಮಿಷನ್ ಜ್ಯೂನಿಯರ್  ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ 1976ರ ವರ್ಷದಲ್ಲಿ ನಿವೃತ್ತರಾದರು.

ವರದರಾಜ ಹುಯಿಲಗೋಳರು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಚಟುವಟಿಕೆಗಳಲ್ಲಿ ಭಾಗಿಯಾಗತೊಡಗಿದ್ದು  ವರುಣಕುಂಜದ ಚಟುವಟಿಕೆಗಳ ಕೇಂದ್ರವಾಗಿದ್ದರು. ಜ್ಯೂನಿಯರ್ ಬಿ.ಎ ವ್ಯಾಸಂಗದಲ್ಲಿದ್ದ ದಿನಗಳಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಸ್ಥಾನಎಂಬ  ಪ್ರಬಂಧಕ್ಕೆ ಬಹುಮಾನ ಪಡೆದಿದ್ದರು. ಅವರ ಸಣ್ಣಕಥೆಗಳು, ಪ್ರಬಂಧಗಳು ಜೀವನಮಾಸ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದವು.

ಮುಂದೆ ವರದರಾಜ ಹುಯಿಲಗೋಳರು ಹಲವಾರು ಕೃತಿರಚನೆ ಮಾಡಿದರು. ಫಲ ಸಂಚಯ, ಚಂದ್ರ-ತಾರೆ, ಬಾಗಿಲು ತೆರೆದಿತ್ತು, ದಯಾಸಾಗರ, ದೀಪವೊಂದು, ನಿನಗೊಂದು ಮಾತು ಮುಂತಾದವು  ಅವರ ಕಥಾಸಂಕಲನಗಳು. ಇತಿ-ಶ್ರೀ, ಕ್ರೂರ ಹಂಬಲ, ಅಂದಿನ ವಸಂತ ತಲೆಕೆಳಕಾಗಿ ನಿಂತ ಮುಂತಾದವು ಕಾದಂಬರಿಗಳು. ಬಾಡಿಗೆಯ ಮನೆ, ಅಮೃತಮತಿ, ದೀಪಾವಳಿ, ಇದ್ದು ಜಯಿಸಬೇಕು, ಕಂದನ ಕಾದುಕೊ ಮುಂತಾದವು ನಾಟಕಗಳು.  ತಿರುಳ್ಗನ್ನಡದ ತಿರುಕ, ಸಾಹಿತಿಗಳೊಡನೆ ಸರಸ, ಡಾ. ಶಂ.ಬಾ.ಜೋಶಿ-೯೫ ಮುಂತಾದವು ಜೀವನ ಚರಿತ್ರೆಗಳು.

ಮಕ್ಕಳ ಸಾಹಿತ್ಯದಲ್ಲೂ ಕೃಷಿ ಮಾಡಿರುವ ವರದರಾಜ ಹುಯಿಲಗೋಳರು ಸಾಹಸ ಜೀವಿಗಳು, ಜನಪದ ಕಥೆಗಳು, ರಾಜೇಂದ್ರ ಪ್ರಸಾದ, ಲೋಕಮಾನ್ಯ ತಿಲಕರು, ಹೋರಾಟದ ವೀರರು, ಕಿಟಲ್, ಹುಯಿಲಗೋಳ ನಾರಾಯಣರಾಯರು, ಆರ್. ಜೆ. ಭಂಡಾರಕರ ಮುಂತಾದ ಅನೇಕ ಕೃತಿಗಳನ್ನು ನೀಡಿದ್ದಾರೆ.

ಮ.ಗು. ಹಂದ್ರಾಳ, ಇತಿಹಾಸ ಮತ್ತು ಸಂಸ್ಕೃತಿ, ದೇಶ ಮತ್ತು ಜನರು, ಆಲೂರು ವೆಂಕಟರಾಯರ ಅಪ್ರಕಟಿತ ಲೇಖನಗಳ ಸಂಕಲನ ಮುಂತಾದವು ಡಾ. ವರದರಾಜಹುಯಿಲಗೋಳರ ಸಂಪಾದಿತ ಕೃತಿಗಳು. 

ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು, ಕನ್ನಡಕ್ಕೆ ಕ್ರೈಸ್ತರ ಕಾಣಿಕೆ, ಪಂಚತಂತ್ರ ಕಥೆಗಳು, ಕನ್ನಡಕ್ಕೆ ವಿದೇಶೀಯರ ಸೇವೆ ಮುಂತಾದವು ವರದರಾಜ ಹುಯಿಳಗೋಳರ ವಿಮರ್ಶಾ ಕೃತಿಗಳು.  ಪಂಚತಂತ್ರದ ಕುರಿತಾದ ವಿಮರ್ಶಾ ಕೃತಿಯನ್ನು ಇಂಗ್ಲಿಷಿನಲ್ಲೂ ಪ್ರಕಟಿಸಿದ್ದಾರೆ.

ವರದರಾಜ ಹುಯಿಲಗೋಳರು ಮಕ್ಕಳ ವಿಶ್ವಕೋಶ ಜ್ಞಾನಗಂಗೋತ್ರಿ ಸಹಾಯಕ ಸಂಪಾದಕರಾಗಿ, ಧಾರವಾಡ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ, ಧಾರವಾಡದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯನಕಾರಿ ಸಮಿತಿಯ ಸದಸ್ಯರಾಗಿ, ಇಂಡಿಯಾ ಗೆಜೆಟಿಯರ್ ಭಾಷಾಂತರದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದರು. ಧಾರವಾಡದಲ್ಲಿ ಕಥೆಗಾರರ ಸಮ್ಮೇಳನ, ಬೆಳಗಾವಿ ಜಾನಪದ ಸಮ್ಮೇಳನ, ಧಾರವಾಡದಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ, ಆಲೂರು ವೆಂಕಟರಾಯರ ಶತಮಾನೋತ್ಸವಗಳ ಯಶಸ್ಸಿನ ರೂವಾರಿಯಾಗಿದ್ದರು.  ಅವರು 1965ರಲ್ಲಿ ಕಾರವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕಥಾಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.

ಡಾ. ವರದರಾಜ ಹುಯಿಲಗೋಳರು ಅಕ್ಟೋಬರ್ 10, 1993ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ

Tag: Vardaraja Huyilagola

ಕಾಮೆಂಟ್‌ಗಳಿಲ್ಲ: