ಬುಧವಾರ, ಆಗಸ್ಟ್ 28, 2013

ವಚನ ಪಿತಾಮಹ ಫ. ಗು. ಹಳಕಟ್ಟಿ


ಫ. ಗು. ಹಳಕಟ್ಟಿ

ಒಮ್ಮೆ ಕನ್ನಡದ ಕಣ್ವ ಆಚಾರ್ಯ ಬಿ.ಎಂ.ಶ್ರೀಕಂಠಯ್ಯನವರು ಬಿಜಾಪುರಕ್ಕೆ ಬಂದಿಳಿದಾಗ  ಒಬ್ಬರು ಕೇಳಿದರಂತೆ – “ಇತಿಹಾಸ ಪ್ರಸಿದ್ಧವಾದ ಗೋಳಗುಮ್ಮಟವನ್ನು ನೋಡುವಿರಾ?”  ಅದಕ್ಕೆ ನಕ್ಕು  ಬಿ.ಎಂ.ಶ್ರೀ ಅವರು ಉತ್ತರಿಸಿದರಂತೆ ಮೊದಲು ನಾನು  ವಚನಗುಮ್ಮಟವನ್ನು ನೋಡಬೇಕಾಗಿದೆಎಂದು.  ಆ ವಚನ ಗುಮ್ಮಟವೇ ವಚನ ಪಿತಾಮಹರೆಂದು ಖ್ಯಾತನಾಮರಾದ ರಾವಬಹದ್ಧೂರ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು. 

ಫ.ಗು.ಹಳಕಟ್ಟಿ ಅವರು  ಹುಟ್ಟಿದ್ದು 1880ರ ಜುಲೈ 2 ರಂದು ಧಾರವಾಡದಲ್ಲಿ. ತಂದೆ ಗುರುಬಸಪ್ಪ ಹಳಕಟ್ಟಿ ತಾಯಿ ದಾನಾದೇವಿ.  ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ತಂದೆ ಗುರುಬಸಪ್ಪ ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು. ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ "ವಾಗ್ಭೂಷಣ"ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.

ಹಳಕಟ್ಟಿಯವರು ತಮ್ಮ ಹುಟ್ಟೂರು ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿ 1896ರಲ್ಲಿ ಮೆಟ್ರಿಕ್ ಮುಗಿಸಿದರು. ನಂತರ ಮುಂದಿನ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲಿನ ಸೇಂಟ್ ಝೇವಿಯರ್ ಕಾಲೇಜು ಸೇರಿದರು. ಅಲ್ಲಿ ಕನ್ನಡ ಪುರೋಹಿತ ಆಲೂರು ವೆಂಕಟರಾಯರು ಇವರ ಸಹಪಾಠಿಗಳಾಗಿದ್ದರು. ಆ ಸಂದರ್ಭದಲ್ಲಿ ಮುಂಬಯಿಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಜನರಲ್ಲಿದ್ದ ಗುಜರಾತಿ ಮತ್ತು ಮರಾಠಿ ಭಾಷಾಭಿಮಾನ, ಕನ್ನಡದವರಲ್ಲಿ ತಮ್ಮ ಭಾಷೆಯ ಬಗ್ಗೆ ಇದ್ದ  ನಿರಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು. ಕನ್ನಡಿಗರು ಎಚ್ಚರಗೊಳ್ಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದಿಸೆಯಲ್ಲೇ ದೃಢಸಂಕಲ್ಪ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ನಿರತರಾಗಿದ್ದ ಆಲೂರು ಇವರಿಗಾಗ ಸ್ಫೂರ್ತಿಯಾಗಿದ್ದರು.

1901ರಲ್ಲಿ ಬಿ.ಎ. ಪದವಿ ಪಡೆದ ಹಳಕಟ್ಟಿಯವರು 1904ರಲ್ಲಿ ಕಾನೂನು ಪದವೀಧರರಾಗಿ ಬೆಳಗಾವಿಯಲ್ಲಿ ವಕೀಲಿವೃತ್ತಿ ಪ್ರಾರಂಭಿಸಿದರಾದರೂ ಕೆಲವು ತಿಂಗಳುಗಳಲ್ಲೇ ಕಾರಣಾಂತರಗಳಿಂದ ಬೆಳಗಾವಿಯಿಂದ ಬಿಜಾಪುರಕ್ಕೆ ವಾಸ್ತವ್ಯ ಬದಲಾಯಿಸಿದ್ದರು. ಅಲ್ಲಿಂದೀಚೆಗೆ ಬಿಜಾಪುರವನ್ನೇ ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಒಂದೆಡೆ ವಕೀಲಿ ವೃತ್ತಿ, ಮತ್ತೊಂದೆಡೆ ನಾಡು-ನುಡಿಯ ಪ್ರಗತಿಗಾಗಿ ಹಲವು ಹತ್ತು ರೀತಿಯಲ್ಲಿ ದುಡಿಮೆ. ಇದು ಅವರ ನಿತ್ಯ ಕಾಯಕವಾಗಿತ್ತು. ಅದೇ ಸಮಯದಲ್ಲಿ ಚಿಕ್ಕೋಡಿಯ ತಮ್ಮಣ್ಣನವರ ಪುತ್ರಿ ಭಾಗೀರಥಿದೇವಿಯೊಡನೆ ವಿವಾಹವಾಗಿ ಗೃಹಸ್ಥಾಶ್ರಮ ಪ್ರವೇಶಿಸಿದರಾದರೂ ಸಾರ್ವಜನಿಕ ಬದುಕಿನ ಸೇವಾಹಾದಿಯಿಂದ ಹಿಂದೆ ಸರಿಯದೆ ಮತ್ತಷ್ಟು ದೃಢವಾಗಿ ಮುನ್ನುಗ್ಗಿದರು. ಅಪಾರ ಕಾನೂನು ಜ್ಞಾನದಿಂದಾಗಿ ಆ ಭಾಗದ ಪ್ರಸಿದ್ಧ ವಕೀಲರಾಗಿ ರೂಪುಗೊಂಡ ಇವರು ತಮ್ಮ ಜನಪ್ರಿಯತೆಯಿಂದಲೇ 1905ರಲ್ಲಿ ಬಿಜಾಪುರ ನಗರಸಭೆಯ ಶಾಲಾ ಕಾರ್ಯನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ ಮತ್ತು ಜಿಲ್ಲಾ ಗ್ರಾಮಾಂತರ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.  ಆ ಸಮಯದಲ್ಲಿ  ಕನ್ನಡ ಶಾಲೆಗಳ ಅಭ್ಯುದಯಕ್ಕಾಗಿ, ಗ್ರಾಮೀಣ ಜನರ ಉನ್ನತಿಗಾಗಿ ಎಂದೂ ಮರೆಯದಂಥ ಜನಸೇವೆಗೈದ ಹಿರಿಮೆ ಇವರದು. ಅಂತೆಯೇ 1923ರಲ್ಲಿ ಸರ್ಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡರಲ್ಲದೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿಯೂ ಆಯ್ಕೆಗೊಂಡರು. ನಂತರದ ದಿನಗಳಲ್ಲಿ ಮುಂಬಯಿ ವಿಧಾನಪರಿಷತ್ತಿನ ಸದಸ್ಯರಾಗಿ ತಮ್ಮ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು, ಪುಷ್ಠಿಗೊಳಿಸಲು, ಒಟ್ಟಾರೆ ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ದುಡಿದು ಅಜರಾಮರ ಕೆಲಸ ಮಾಡಿದ್ದಾರೆ.

ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು 1920ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು. ಆ ಕಾಲದಲ್ಲಿದು ಶರಣರ ನಾಡಿನಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು. ಆ ನಂತರ ಹಸ್ತಪ್ರತಿ ರೂಪದಲ್ಲಿದ್ದ ಈ ವಚನಸಂಪತ್ತನ್ನು ಸಂಪಾದಿಸಿ ಮುದ್ರಿಸಿ ಪುಸ್ತಕರೂಪದಲ್ಲಿ ಹೊರತರಲು ಮುಂದಾದ ಇವರು ಇದಕ್ಕಾಗಿ 1925ರಲ್ಲಿ ತಮ್ಮ ಸ್ವಂತಮನೆ ಮಾರಿ "ಹಿತಚಿಂತಕ ಮುದ್ರಣಾಲಯ"ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿಮಳೆಯೇ ಶುರುವಾಯಿತು. ನಿಜಕ್ಕೂ ಆಗ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು. ಇವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನದ ಕೃತಿಯೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ.  ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250 ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು.  ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ.

ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ "ವಚನ ಸಾಹಿತ್ಯ ಸಾರ"ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ 1923 ರಿಂದ 1939ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು 175ಕ್ಕೂ ಹೆಚ್ಚೆಂದರೆ  ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಯಾರು ಬೇಕಾದರೂ ಊಹಿಸಬಹುದು.   ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ..... ಮುಂತಾದವುಗಳು ಇವರ ಪ್ರಮುಖ ಕೃತಿಗಳು.

ಪತ್ರಿಕೋದ್ಯಮದಲ್ಲೂ ಬಹಳ ಆಸಕ್ತಿ ಹೊಂದಿದ್ದ ಹಳಕಟ್ಟಿಯವರು 1926ರಲ್ಲಿ ಸಂಶೋಧನೆಗಾಗಿ ಮೀಸಲಾದ ಶಿವಾನುಭವಪತ್ರಿಕೆ ಪ್ರಾರಂಭಿಸಿದರು. ಇದನ್ನು ಸತತವಾಗಿ ನಡೆಸಿಕೊಂಡು ಬಂದ ಇವರು 1951ರಲ್ಲಿ ಇದರ ಬೆಳ್ಳಿಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ಹಾಗೆಯೇ 1927ರಲ್ಲಿ ನವ ಕರ್ನಾಟಕಎಂಬ ವಾರಪತ್ರಿಕೆಯನ್ನೂ ಸಹ ಆರಂಭಿಸಿದ್ದರು. ಈ ಎರಡೂ ಪತ್ರಿಕೆಗಳ ಸಂಪಾದಕ ಮತ್ತು ಪ್ರಕಾಶಕ ಹಾಗೂ ಮುದ್ರಕರಾಗಿ ಹಳಕಟ್ಟಿಯವರ ಪತ್ರಿಕಾರಂಗದ ಸಾಧನೆ ಕೂಡ ಗುರುತರವಾದದ್ದೇ.

ದೂರದೃಷ್ಟಿ ವ್ಯಕ್ತಿತ್ವದ ಹಳಕಟ್ಟಿಯವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಜೊತೆ ಜೊತೆಗೆ ಸಂಘಟನೆ, ಬ್ಯಾಂಕಿಂಗ್, ಕೃಷಿ, ನೇಕಾರಿಕೆ, ಸಹಕಾರಿ ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು 1910ರಲ್ಲಿ ಬಿಜಾಪುರ ಜಿಲ್ಲಾ ಲಿಂಗಾಯುತ ವಿದ್ಯಾವರ್ಧಕ ಸಂಘ (ಬಿ.ಎಲ್.ಡಿ.ಇ)ವನ್ನು ಮತ್ತು 1912ರಲ್ಲಿ ಶ್ರೀ ಸಿದ್ಧೇಶ್ವರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕನ್ನು ಸ್ಥಾಪಿಸಿದ್ದರಲ್ಲದೆ ಗ್ರಾಮೀಣಾಭಿವೃದ್ಧಿ ಸಂಘ, ಒಕ್ಕಲುತನ ಸಹಕಾರಿ ಸಂಘ, ನೇಕಾರರ ಸಂಘ, ಹತ್ತಿ ಮಾರಾಟ ಸಂಘಗಳು ಸೇರಿದಂತೆ ಸಹಕಾರಿ ಸಂಘಗಳನ್ನು ಸಂಸ್ಥಾಪಿಸಿ ತನ್ಮೂಲಕ ಒಟ್ಟಾರೆ ಸಮಾಜಾಭಿವೃದ್ಧಿಗೆ ದುಡಿದ ಅಪರೂಪದ ವ್ಯಕ್ತಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲಿಯೂ  ಇವರು ಮಹತ್ತರ ಪಾತ್ರ ವಹಿಸಿದ್ದರು.

ಇಂಥ ಪ್ರಚಂಡ ಸಾಧಕ ಹಳಕಟ್ಟಿಯವರು 1964ರ ಜೂನ್ 27ರಂದು ನಾಡನ್ನು ಬಿಟ್ಟು ಅಗಲಿದರೂ ಇವರು ಮಾಡಿದ ಸೇವೆ, ಸಾಧನೆ, ತ್ಯಾಗ, ಕಟ್ಟಿ ಬೆಳೆಸಿದ ಸಂಸ್ಥೆಗಳು ಎಲ್ಲಕ್ಕಿಂತ ಮಿಗಿಲಾಗಿ ವಚನ ಸಾಹಿತ್ಯ ಕ್ಷೇತ್ರ ಇವರ ಹೆಸರನ್ನು ಅಜರಾಮರಗೊಳಿಸಿವೆ. ಇವರು ಸಂಸ್ಥಾಪಿಸಿದ ಬಿ.ಎಲ್.ಡಿ.ಇ. ಸಂಸ್ಥೆ ಹಲವು ವರ್ಷಗಳ ಹಿಂದೆ  ಮೂವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹಳಕಟ್ಟಿಯವರ ಸಮಗ್ರ ಸಾಹಿತ್ಯವನ್ನು ಹದಿನೈದು ಸಂಪುಟಗಳಲ್ಲಿ ಪ್ರಕಟಿಸಿದೆ ಎಂದರೆ ಯಾರಿಗಾದರೂ ಅರ್ಥವಾಗುತ್ತದೆ. ಹಳಕಟ್ಟಿಯವರು ಸಂಸ್ಥಾಪಿಸಿದ್ದ ಸಂಸ್ಥೆಯೊಂದರ ಬೆಳವಣಿಗೆಯ ಪರಿ ಎಂಥಾದ್ದೆಂದು!

1920ರಲ್ಲಿ ಮುಂಬಯಿಯ ವಿಧಾನ ಪರಿಷತ್ತಿನ ಸದಸ್ಯತ್ವ, 1926ರಲ್ಲಿ ಬಳ್ಳಾರಿಯಲ್ಲಿ ನಡೆದ 12ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1928ರಲ್ಲಿ ಜರುಗಿದ 3ನೇ ಕರ್ನಾಟಕ ಏಕೀಕರಣ ಪರಿಷತ್ತಿನ ಅಧ್ಯಕ್ಷತೆ,  1931ರಲ್ಲಿ ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತ್ವ, 1933ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷತೆ,  1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಮುಂತಾದವು ಇವರ ಸೇವೆಗೆ ಸಂದ ಗೌರವ ಪುರಸ್ಕಾರಗಳು.

ಹಳಕಟ್ಟಿಯವರು ಬಸವಣ್ಣನವರ ವಚನಗಳನ್ನು ಇಂಗ್ಲಿಷ್ಗೆ ಅನುವಾದಿಸಿ ಇಂಡಿಯನ್ ಆಂಟಿಕ್ವರಿಯಲ್ಲಿ ಪ್ರಕಟಗೊಳಿಸಿದರು.  ಅಷ್ಟೇ ಅಲ್ಲ ವಚನಗಳ ಗಾಯನಕ್ಕೂ ವ್ಯವಸ್ಥೆ ಮಾಡಿಸಿದರಲ್ಲದೆ ಶ್ರೇಷ್ಠ ಸಂಗೀತಕಾರರನ್ನು ವಚನ ಗಾಯನ ರೆಕಾರ್ಡಿಂಗ್ ಗಾಗಿ ಮುಂಬಯಿಯವರೆಗೆ ಕಳುಹಿಸಿದರು.  ಹೀಗೆ ವಚನ ಸಾಹಿತ್ಯದ ಪ್ರಸಾರ ಕಾರ್ಯವನ್ನು ಕೈಗೊಂಡ ಅವರನ್ನು ವಚನ ಪಿತಾಮಹಎಂದು ಕರೆದಿರುವುದು ಉಚಿತವಾಗಿದೆ. 


(ಆಧಾರ:  ಫ. ಗು. ಹಳಕಟ್ಟಿ ಅವರ ಕುರಿತ ಜಿ. ಎಸ್. ಸಿದ್ಧಲಿಂಗಯ್ಯ ಅವರ ಲೇಖನ ಮತ್ತು ಪತ್ರಕರ್ತ ಬನ್ನೂರು ಕೆ. ರಾಜು ಅವರ ಲೇಖನ) ಫೋಟೋ ಕೃಪೆ:  www.kamat.com

Tag: Fa Gu Halakatti

ಕಾಮೆಂಟ್‌ಗಳಿಲ್ಲ: