ಬುಧವಾರ, ಆಗಸ್ಟ್ 28, 2013

ಕರ್ಪೂರ ಶ್ರೀನಿವಾಸರಾವ್

ಕರ್ಪೂರ ಶ್ರೀನಿವಾಸರಾವ್

ವೃತ್ತಿಯಿಂದ ಮಹಾನ್ ಇಂಜಿನಿಯರ್ ಎನಿಸಿ ಪ್ರವೃತ್ತಿಯಿಂದ ಸಾಹಿತಿಗಳಾಗಿಸಾಹಿತ್ಯ ಪೋಷಕರಾಗಿ  ಕಂಗೊಳಿಸಿದ ಮಹಾನ್ ಸಾಧಕರು ಕರ್ಪೂರ ಶ್ರೀನಿವಾಸರಾವ್ ಅವರು.  ಜೂನ್  2 ದಿನಾಂಕ  ಈ  ಮಹನೀಯರ  ಸಂಸ್ಮರಣಾ  ದಿನ.

ಕರ್ಪೂರ ಶ್ರೀನಿವಾಸರಾವ್ ಅವರು 1863ರ ವರ್ಷದಲ್ಲಿ ಬೆಂಗಳೂರಿನಲ್ಲಿ ಜನಿಸಿದರು.  ಅವರ ತಂದೆ ಕರ್ಪೂರ ಸುಬ್ಬರಾವ್.  ಇವರ ಪೂರ್ವಿಕರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ ಬೆಟ್ಟದ ಅಡಿಯಿಂದ ಮುಡಿಯವರೆಗೆ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ಕರ್ಪೂರಎಂಬ ಹೆಸರು ಬಂದಿತಂತೆ.  ಶ್ರೀನಿವಾಸರಾಯರು ಬಿ.ಎಸ್ಸಿ, ನಂತರ ಎಲ್.ಸಿ.ಇ ಪದವಿ ಪಡೆದು ಮುಂಬಯಿಯಲ್ಲಿ ಇಂಜಿನಿಯರ್ ಆಗಿ ಸೇರಿದರು.  ಅಲ್ಲಿಂದ ನಿವೃತ್ತರಾದ ಮೇಲೆ ಇವರ ಸೇವೆಯನ್ನು ಗುರುತಿಸಿದ ಮೈಸೂರು ಸರ್ಕಾರ ಇವರನ್ನು ಚೀಫ್ ಇಂಜಿನಿಯರ್ ಆಗಿ ನೇಮಕ ಮಾಡಿತು. 

ಕರ್ಪೂರ ಶ್ರೀನಿವಾಸರಾವ್ ಅವರು ಕನ್ನಡಾಭಿಮಾನ ಹಾಗೂ ತಾಂತ್ರಿಕ ಪ್ರತಿಭೆಯನ್ನು ಪ್ರದರ್ಶಿಸಿ ಪರಿಷತ್ತಿನ ಚರಿತ್ರೆಯಲ್ಲಿ ಅವಿಸ್ಮರಣೀಯ ವ್ಯಕ್ತಿಯಾಗುಳಿದಿದ್ದಾರೆ.  1931ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರಿಷನ್ಮಂದಿರಕ್ಕೆ ಶಂಕುಸ್ಥಾಪನೆ ಮಾಡಿದ ಗೌರವ ಇವರದು.

ಶ್ರೀನಿವಾಸರಾಯರು ವೃತ್ತಿಯಿಂದ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಸಾಹಿತಿಗಳೆನಿಸಿದ್ದರು.  ಸಂಸ್ಕೃತ, ಇಂಗ್ಲಿಷ್, ಮರಾಠಿ ಹಾಗೂ ಕನ್ನಡ ಭಾಷೆಯಲ್ಲಿ ಪಾಂಡಿತ್ಯಗಳಿಸಿದ್ದರು.  ಸ್ವಾತಂತ್ರ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸದೇ ಇದ್ದರೂ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದರು.  ಕೃಷ್ಣರಾಜಸಾಗರ ಜಲಾಶಯ ನಿರ್ಮಾಣದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.

ಇವರ ಸಾರ್ವಜನಿಕ ಸೇವೆಯನ್ನು ಗುರುತಿಸಿ ಮೈಸೂರು ಸರ್ಕಾರವು  ರಾಜ್ಯಸಭಾ ಭೂಷಣಬಿರುದಿತ್ತು ಗೌರವಿಸಿತ್ತು.  ಕನ್ನಡ ಸಾಹಿತ್ಯ ಪರಿಷತ್ತಿನೊಡನೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಇವರು 1918ರಿಂದ 1933ರ ವರೆಗೆ ಇದರ ಉಪಾಧ್ಯಕ್ಷರಾಗಿದ್ದರು.  ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡದ ನೀಲಿ ನಕ್ಷೆಯನ್ನು ತಾವೇ ತಯಾರಿಸಿ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನು ತಾವೇ ಖುದ್ದಾಗಿ ನಡೆಸಿದ್ದರು.  ಗಾಂಧೀಜಿಯವರ ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾಗಿದ್ದ ಇವರು ಕೊನೆಯ ತನಕ ಖಾದಿಧಾರಿಗಳಾಗಿದ್ದರು.  ಸಾಹಿತ್ಯ ರಚನೆ ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆಸಕ್ತಿ ವಹಿಸಿದ್ದ ಇವರು ಉತ್ತಮ ಪುಸ್ತಕಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದ ಸುಭೋದ ರಾಮಯರಾಯರಿಗೆ ಪುಸ್ತಕ ಪ್ರಕಟಣೆಗೆಂದೇ  ಅಂದಿನ ಕಾಲದಲ್ಲಿ ಒಂದು ಸಾವಿರ ರೂಪಾಯಿಯನ್ನು ಸಹಾಯ ಮಾಡಿದ್ದರು.   ಒಂದು ಶತಮಾನದ ಹಿಂದೆ ಒಂದು ಸಾವಿರ ರೂಪಾಯಿಗೆ ಬಹಳಷ್ಟು ಬೆಲೆ ಇತ್ತು ಎಂಬುದು ನಮಗೆ ತಿಳಿದ ವಿಚಾರ.

ಕನ್ನಡ ಸಾಹಿತ್ಯ ಪರಿಷತ್ತು ಅವರ ಬಹಳಷ್ಟು ಲೇಖನಗಳನ್ನು ಸಂಗ್ರಹಿಸಿ ಸಾಹಿತ್ಯ ಶಾಸ್ತ್ರಎಂಬ ಹೆಸರಿನಲ್ಲಿ ಪ್ರಕಟಿಸಿದೆ.  ಕರ್ಪೂರ ಶ್ರೀನಿವಾಸರಾವ್ ಅವರು 1919ರ ವರ್ಷದಲ್ಲಿ ಹಾಸನದಲ್ಲಿ ನಡೆದ 5ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 

ಈ ಮಹಾನ್ ಚೇತನರಾದ ಕರ್ಪೂರ ಶ್ರೀನಿವಾಸರಾಯರು ಜೂನ್ 2, 1932ರಂದು ಈ ಲೋಕವನ್ನಗಲಿದರು. 

ಮಾಹಿತಿ ಕೃಪೆ:  ಎಸ್. ವಿ. ಶ್ರೀನಿವಾಸರಾವ್ ಅವರ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರುಕೃತಿ. ಪ್ರಕಾಶಕರು ಕನ್ನಡ ಸಾಹಿತ್ಯ ಪರಿಷತ್ತು.


ಚುಕ್ಕಿಚಿತ್ರ ಕೃಪೆ: ಆತ್ಮೀಯ ಗೆಳೆಯರೂ ಮಹಾನ್ ಕಲಾವಿದರೂ ಆದ ಮೋಹನ್ ವರ್ಣೇಕರ್ ಅವರದು

Tag: Karpoora Srinivasa Rao

ಕಾಮೆಂಟ್‌ಗಳಿಲ್ಲ: