ಬುಧವಾರ, ಆಗಸ್ಟ್ 28, 2013

ಸೌಂದರ್ಯ

ಸೌಂದರ್ಯ

ಸೌಂಧರ್ಯದ ಖನಿ ಈ ಸೌಂದರ್ಯ.  ಅವರ ಹುಟ್ಟು ಹಬ್ಬ ಜುಲೈ 18ರಂದು.  ಆದರೆ ಆಕೆಯಿಲ್ಲದೆ ಆಕೆಯ ಹುಟ್ಟುಹಬ್ಬವನ್ನು ನೆನೆಯುವ ವಿಧಿಯ ವಿಪರ್ಯಾಸ ನಮ್ಮ ಮುಂದಿದೆ.

ಬದುಕು ವ್ಯಕ್ತಿಗಳ ಬದುಕನ್ನು ನಡೆಸುವ ಪರಿಯೇ ವಿಚಿತ್ರ.  ಆಕೆ ಎಂ.ಬಿ.ಬಿ.ಎಸ್ ಓದುತ್ತಿದ್ದರು.  ತಂದೆ ಚಿತ್ರ ನಿರ್ಮಾಪಕರು ಮತ್ತು ಲೇಖಕರು.  ಮನೆಗೆ ಬಂದವರೊಬ್ಬರು ಚಿತ್ರದಲ್ಲಿ ನಟಿಸುವಂತೆ ಕೇಳಿದರು.  ಒಂದು ಚಿತ್ರ ಎಂಬುದು ಎರಡು ಮೂರಾಗಿ ಕಡೆಗೆ ವಿದ್ಯಾಭ್ಯಾಸಕ್ಕೆ ಕೊನೆ ಹಾಡಿದರು.  ಕನ್ನಡದಲ್ಲಿ ಪ್ರಾರಂಭದಲ್ಲಿ ಕೆಲವೊಂದು ಚಿತ್ರಗಳಲ್ಲಿ ಸೌಮ್ಯಳಾಗಿ ಮೂಡಿದರೂ ಪ್ರತಿಭೆಗಳನ್ನು ಬಳಸುವುದರಲ್ಲಿ ಯಾವಾಗಲೂ ನಿಧಾನವಾದ ನಮ್ಮ ಚಿತ್ರರಂಗ ಕಣ್ಣುಬಿಡುವುದರಲ್ಲಿ ಸೌಂದರ್ಯ ತೆಲುಗು, ತಮಿಳು, ಮಲಯಾಳಗಳಲ್ಲಿ ಅಪಾರ ಬೇಡಿಕೆಯ ನಟಿಯಾಗಿಬಿಟ್ಟಿದ್ದರು.  ಹಿಂದಿಯಲ್ಲಿ ಕೂಡಾ ಸೂರ್ಯವಂಶವೆಂಬ ಚಿತ್ರದಲ್ಲಿ ನಟಿಸಿದರು.  ತಮಿಳಿನಲ್ಲಿ ರಜನಿಕಾಂತರೊಂದಿಗೆ ನಟಿಸಿದ ಅರುಣಾಚಲಂ ಮತ್ತು ಪಡಿಯಪ್ಪ ಚಿತ್ರಗಳು ಜಯಭೇರಿ ಬಾರಿಸಿದ್ದವು.  ಆ ಚಿತ್ರಗಳಲ್ಲಿ ಸೌಂದರ್ಯ ಸೊಗಸಾಗಿ ಅಭಿನಯಿಸಿದ್ದರು.

ಕನ್ನಡದಲ್ಲಿ  ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ ಮುಂತಾದ  ಚಿತ್ರಗಳಿಗೆ ಆಗಾಗ ಬಂದು ಹೋಗಿದ್ದರು.  ಅವರ ಕನ್ನಡದಲ್ಲಿನ ಪ್ರಧಾನ ಪ್ರವೇಶವೆಂದರೆ ಗಿರೀಶ್ ಕಾಸರವಳ್ಳಿಯವರ  ದ್ವೀಪಚಿತ್ರ.  ಈ ಚಿತ್ರದ ನಿರ್ಮಾಪಕಿಯಾಗಿ ಮತ್ತು ನಟಿಯಾಗಿ ಅವರು ಕನ್ನಡಕ್ಕೆ ದೊರಕಿದ ಬಗೆಯನ್ನು ಸಾರಲೋ ಎಂಬಂತೆ ಆ ಚಿತ್ರ ಅತ್ಯುತ್ತಮ ಚಿತ್ರಕ್ಕೆ ನೀಡಲಾಗುವ ಕೇಂದ್ರ ಸರ್ಕಾರದ ಸ್ವರ್ಣಕಮಲಪ್ರಶಸ್ತಿ ಗಳಿಸಿತು.  ಚಿತ್ರನಟಿಯಾಗಿ ಅವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ನಟಿ ಪ್ರಶಸ್ತಿ  ದಕ್ಕಲಿಲ್ಲವಾದರೂ ನಿರ್ಮಾಪಕಿಯಾಗಿ ಸ್ವರ್ಣಕಮಲ ಪ್ರಶಸ್ತಿಯನ್ನು ಗಳಿಸುವ ಗೌರವ ಅವರದಾಯಿತು.  ಆ ಚಿತ್ರಕ್ಕಾಗಿನ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಂದಿತು. 

ಸೌಂದರ್ಯ ಕನ್ನಡಕ್ಕೆ ನೀಡಿದ ಮತ್ತೊಂದು ಪ್ರಧಾನ ಕೊಡುಗೆ ಎಂದರೆ ಡಾ. ಎಸ್. ಎಲ್. ಭೈರಪ್ಪನವರ ಶ್ರೇಷ್ಠ ಕಾದಂಬರಿಯಾದ ಗೃಹಭಂಗಕಾದಂಬರಿ ಆಧರಿಸಿದ ಅದೇ ಹೆಸರಿನ ದೂರದರ್ಶನ ಧಾರಾವಾಹಿಯನ್ನು ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಮೂಲಕ ನಿರ್ಮಿಸಿದ್ದು.  ಇದು ಸಾರ್ವಕಾಲಿಕವಾಗಿ ದೂರದರ್ಶನದಲ್ಲಿ  ಕಂಡ ಅತ್ಯಂತ ಮನೋಜ್ಞ ಧಾರವಾಹಿಗಳಲ್ಲಿ ಒಂದಾಗಿ ನೆಲೆನಿಲ್ಲುವಂತದ್ದಾಗಿದೆ.

ಸೌಂದರ್ಯ ಅವರು ಕನ್ನಡದಲ್ಲಿ ಮರೆಯಲಾಗದಂತಹ ಛಾಪನ್ನು ಉಳಿಸಿ ಹೋಗಿದ್ದು ನಾಗವಲ್ಲಿಯಾಗಿ ಆಪ್ತಮಿತ್ರ ಚಿತ್ರದಲ್ಲಿ ನೀಡಿದ ಅಭಿನಯದಿಂದ.  ಆ ಚಿತ್ರದಲ್ಲಿ  ವಿಷ್ಣುವರ್ಧನ, ಸೌಂದರ್ಯ ಮತ್ತು ಅವಿನಾಶ್ ಒಬ್ಬರನ್ನೊಬ್ಬರು ಮೀರಿಸುವಂತಹ ಅಭಿನಯ ನೀಡಿ ಆ ಚಿತ್ರ ರೀಮೇಕ್ ಆದರೂ ಕನ್ನಡದ ಒಂದು ಅವಿಸ್ಮರಣೀಯ ಚಿತ್ರವನ್ನಾಗಿಸಿದ್ದಾರೆ.  ಮುಂದಿನ ಆಪ್ತರಕ್ಷಕದಲ್ಲಿ ಅಭಿನಯಿಸಲು ಸೌಂದರ್ಯರು ಬದುಕಿರಲಿಲ್ಲ.  ಆಪ್ತರಕ್ಷಕ ಪ್ರೇಕ್ಷಕ ನೋಡುವ ವೇಳೆಗೆ ಆಪ್ತರಕ್ಷನೂ ಉಳಿದಿರಲಿಲ್ಲ!

ಸೌಂದರ್ಯ ಅದೇ ತಾನೇ ರಘು ಎಂಬುವರನ್ನು ವಿವಾಹವಾಗಿದ್ದರು.  ಅನಾಥ ಮಕ್ಕಳಿಗೆ ಶಾಲೆ ನಿರ್ಮಿಸಿದ್ದರು.  ಸಮಾಜಕ್ಕೆ ಏನನ್ನಾದರೂ ಮಾಡುವ ಕಳಕಳಿ ಅವರಲ್ಲಿತ್ತು.  ಒಂದಷ್ಟು ಬುದ್ಧಿಶಕ್ತಿಜನಪ್ರಿಯತೆ, ಜನಪರ ಕಾಳಜಿ ಎಲ್ಲಾ ಇದ್ದ ಸೌಂದರ್ಯ ಕೇವಲ ಬೊಂಬೆ ಎನಿಸದೆ ಏನಾದರೂ ಮಾಡುವ ಎಂದು ರಾಜಕೀಯಕ್ಕೆ ಬರುವ ಸಿದ್ಧತೆಯಲ್ಲಿದ್ದುದು ಜನಮಾನಸದಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿತ್ತು.  ಆದರೆ ಅದ್ಯಾವುದೂ ಆಗಲಿಲ್ಲ. 

ಏಪ್ರಿಲ್ 17, 2004ರ ದಿನದಂದು  ಸಣ್ಣ ವಿಮಾನದಲ್ಲಿ ರಾಜಕೀಯ ಪ್ರಚಾರಕ್ಕಾಗಿ ಪಯಣಿಸುತ್ತಿದ್ದ ಸೌಂದರ್ಯ ತಮ್ಮ ಸಹೋದರ ಅಮರನಾಥರ ಜೊತೆಯಲ್ಲಿ ಅಮರಯಾತ್ರೆಗೆ ಹೊರಟಿದ್ದು ಈ ಸೌಂದರ್ಯ ಎಂಬ ಹುಡುಗಿಯ ಜೊತೆಗೆ ಹಲವು ಸೌಂದರ್ಯಗಳಿಗೆ ಇತಿಶ್ರೀಯಾಗಿಬಿಟ್ಟಿತು.  ಹೀಗಾಗಿ ಈ ಹುಡುಗಿಯ ಹುಟ್ಟು ಹಬ್ಬದಲ್ಲಿ ಆಕೆಯ ಕುರಿತಾಗಿ ನೆನಪಿನ ಭಾರವಾದ ಹೃದಯದಲ್ಲಿ ಗೌರವಗಳನ್ನರ್ಪಿಸುವುದಷ್ಟೇ ನಮಗುಳಿದಿರುವ ಸೌಭಾಗ್ಯ.  ಈ ಹುಡುಗಿಯ ಆತ್ಮ ಚಿರಶಾಂತಿಯಲ್ಲಿರಲಿ.

Tag: Soundarya

ಕಾಮೆಂಟ್‌ಗಳಿಲ್ಲ: