ಸೋಮವಾರ, ಆಗಸ್ಟ್ 26, 2013

ಶ್ರೀ ಅರವಿಂದರು

ಶ್ರೀ ಅರವಿಂದರು

ಮಹಾನ್ ತತ್ವಜ್ಞಾನಿ, ಭಾರತದ  ಸ್ವಾತಂತ್ರ್ಯ ಹೋರಾಟಗಾರ, ಯೋಗಿ ಅರವಿಂದರು ಜನಿಸಿದ್ದು ಆಗಸ್ಟ್ 15, 1872ರಲ್ಲಿ.  ಕಲಕತ್ತೆಯಲ್ಲಿ ಅರವಿಂದರು ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರನಾಗಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯವರು ಅರವಿಂದರಿಗೆ  ಒರೊಬಿಂದೋ ಅಕ್ರಾಯ್ಡ್ ಘೋಷ್ಎಂಬ ಜನ್ಮನಾಮವನ್ನು ಕೊಟ್ಟರು.  ಅಲ್ಲದೆಭಾರತೀಯರ ಅಥವಾ ಭಾರತದ ಪ್ರಭಾವ ತಮ್ಮ ಮಕ್ಕಳ ಮೇಲೆ ಬೀಳಬಾರದೆಂಬ ಉದ್ದೇಶದಿಂದ ಅವರನ್ನು ಇಂಗ್ಲೆಂಡಿಗೆ ರವಾನಿಸಿದರು. ಇಂಗ್ಲೆಂಡಿನಲ್ಲಿಯೇ 13ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದುಕೊಂಡರು. ಹಾಗೆಯೇ, ಅನೇಕ ಯೂರೋಪಿನ ಭಾಷೆಗಳಲ್ಲಿಯೂ ಪ್ರವೀಣರಾದರು.  ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಭಾಷೆಗಳಲ್ಲಿ ಕೆಲವು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿ ಮಾಡುವುದರಿಂದ ನುಣುಚಿಕೊಳ್ಳುವುದರ ಮೂಲಕ  ತಮ್ಮನ್ನು ಅನರ್ಹಗೊಳಿಸಿಕೊಂಡರು.

1893ರಲ್ಲಿ  ಭಾರತಕ್ಕೆ ಹಿಂದಿರುಗಿದ ಅರವಿಂದರು ಬರೋಡದ ಮಹಾರಾಜರ ಆಸ್ಥಾನದಲ್ಲಿ ಉದ್ಯೋಗಸ್ಥರಾದರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರಲ್ಲದೆಭಾರತೀಯ ಭಾಷೆಗಳಾದ ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳುಗಳಲ್ಲಿ  ಪ್ರಭುತ್ವಗಳಿಸಿದರು. ಬಂಗಾಳದ ವಿಭಜನೆಯ ನಂತರ 1906ರಲ್ಲಿ ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದ ಅರವಿಂದರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿದರು.  ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಕೊಂಡು ಬಂದೇ ಮಾತರಂಎಂಬ ಪತ್ರಿಕೆಯ ಸಂಪಾದಕತ್ವವನ್ನೂ ವಹಿಸಿಕೊಂಡರು.  ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಎಂಬ ಚಿಂತನೆಯಿಂದ ವಿಷ್ಣು ಭಾಸ್ಕರ ಲೇಲೆ ಎಂಬ ಯೋಗಿಯನ್ನು ಸಂಧಿಸಿದರು.   ಈ ಯೋಗಿಗಳು ಕಲಿಸಿಕೊಟ್ಟ ವಿಧಾನಗಳನ್ನನುಸರಿಸಿ ತಾವು  ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡುದಾಗಿ ಅರವಿಂದರು ಹೇಳಿದ್ದಾರೆ.   ಅದೇ ವರ್ಷಒಂದು ವರ್ಷಕಾಲದವರೆವಿಗೆ  ಅವರು ಅಲೀಪುರ ವಿಸ್ಫೋಟ ಪ್ರಕರಣದಲ್ಲಿ ವಿಚಾರಣೆಗೊಳಲ್ಪಟ್ಟ ಬಂಧಿಯಾದರು.   ಸೆರೆಮನೆಯಲ್ಲಿದ್ದ ಈ ಅವಧಿಯಲ್ಲಿ ನನಗೆ ಸಗುಣ ಬ್ರಹ್ಮದ ಸಾಕ್ಷಾತ್ಕಾರಪಡೆದುಕೊಳ್ಳುವುದು ಸಾಧ್ಯವಾಯಿತೆಂದೂ ಅರವಿಂದರು ಹೇಳಿಕೊಂಡಿದ್ದಾರೆ.  1909ರ ವರ್ಷದಲ್ಲಿ  ಖುಲಾಸೆಯಾಗಿ ಹೊರಬಂದ ಅರವಿಂದರು, ತಮ್ಮ ಅಂತರಾತ್ಮದಾದೇಶವನ್ನನುಸರಿಸಿ 1910ರಲ್ಲಿ ಪುದುಚೇರಿಗೆ ಬಂದು ಯೋಗಸಾಧನೆಯಲ್ಲಿ  ತೊಡಗಿಕೊಂಡರು.

ಅರವಿಂದರು ಅತೀತ ಮಾನಸ ಯೋಗದ ಪ್ರವರ್ತಕರು.  ಈ ಕೆಲಸದಲ್ಲಿ ಅವರಿಗೆ ಸಹಕಾರಿಯಾದವರು ಮುಂದೆ ಶ್ರೀಮಾತೆ ಎಂದು ಪೂಜನೀಯರಾದ ಮೀರಾ  ಅಲ್ಫಾಸ ಅವರು.  ಅರವಿಂದರಂತೆಯೇ ಸಾಕ್ಷಾತ್ಕಾರಗಳನ್ನು ಪಡೆದುಕೊಂಡ ಶ್ರೀಮಾತೆಯವರು  ಅತೀತ ಮಾನಸಯೋಗವು ಪೃಥ್ವಿಯ ಮುಂದಿನ ವಿಕಸನವನ್ನು ತ್ವರಿತಗೊಳಿಸುವುದೆಂದುಪ್ರತಿಪಾದಿಸಿದರು. 1878ರಲ್ಲಿ ಪ್ಯಾರಿಸ್ಸಿನಲ್ಲಿ ಜನಿಸಿದ ಮೀರಾ ಅಲ್ಫಾಸಾ  ಅವರು ಮೊದಲ ಬಾರಿಗೆ ಪಾಂಡಿಚೇರಿಯ ಅರವಿಂದೋ ಆಶ್ರಮಕ್ಕೆ ಭೇಟಿ ಇತ್ತಿದ್ದು ತಮ್ಮ 36ನೆಯ ವಯಸ್ಸಿನಲ್ಲಿ.   ಪಾಶ್ಚಾತ್ಯ ಸಿರಿವಂತ ಕುಟುಂಬದಲ್ಲಿ ವೈಭೋಗದ ಜೀವನ ನಡೆಸುತ್ತಿದ್ದ ದಂಪತಿಗಳ ಪುತ್ರಿಯಾಗಿದ್ದರೂ ಈಕೆ ಬಾಲ್ಯದಿಂದಲೂ ಕೆಲವು ಅಲೌಕಿಕ ಗುಣ ಸಂಪನ್ನರಾಗಿದ್ದರು.  ಮೀರಾ ಅವರನ್ನು ಭೇಟಿಯಾದ ಪ್ರಥಮ ಸಂದರ್ಭದಲ್ಲಿಯೇ ಅರವಿಂದರು ಆಕೆಯಲ್ಲಿ ಅಂತರ್ಗತವಾಗಿದ್ದ  ಈ ವೈಶಿಷ್ಟ್ಯವನ್ನು ಗುರುತಿಸಿದ್ದರು. 

1920ರಲ್ಲಿ ಮಿರಾ ಅವರು ಶಾಶ್ವತವಾಗಿ ಭಾರತದಲ್ಲಿ  ನೆಲೆಸುವ ಸಂಕಲ್ಪದೊಡನೆ, ಪಾಂಡಿಚೆರಿ ಆಶ್ರಮದ ಏಳ್ಗೆಗಾಗಿ, ಮತ್ತು  ಆ ಮೂಲಕ ಅರವಿಂದರ ಪೂರ್ಣ ಯೋಗಪ್ರಸರಣಕ್ಕಾಗಿ ಟೊಂಕಕಟ್ಟಿ ನಿಂತರು.   ಅರವಿಂದರು ಮೀರಾ ಅವರನ್ನು ತಮಗೆ ಸಮನಾದ ಸಾಧಕಿ ಎಂದೇ ಗೌರವಿಸುತ್ತಿದ್ದರು.  ಅರವಿಂದರ  ಆಶಯದಂತೆ ಶ್ರೀಮಾತೆಯವರು  1926ರಲ್ಲಿ  ಅರವಿಂದೋ ಆಶ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರು.  ಮುಂದಿನ ದಿನಗಳಲ್ಲಿ  ಶ್ರೀಮಾತೆಯವರು ಅರವಿಂದೋ ಇಂಟರ್ ನ್ಯಾಶನಲ್ ಸೆಂಟರ್ ಆಫ್ ಎಜುಕೇಷನ್ಸಂಸ್ಥೆಯನ್ನು ಆರಂಭಿಸಿ ವಿಶ್ವದಾದ್ಯಂತ ಶಿಕ್ಷಣಾರ್ಥಿಗಳಿಗೆ ಮುಕ್ತ ಅವಕಾಶಗಳನ್ನು ಕಲ್ಪಿಸಿಕೊಟ್ಟರು.  ಅರವಿಂದರು ಇಹಲೋಕ ವ್ಯವಹಾರ ಮುಗಿಸಿ ದೀರ್ಘಸಮಾಧಿಗೆ ತೆರಳಿದ ನಂತರ ಶ್ರೀಮಾತೆಯವರು ಆಶ್ರಮದ ಅನುಯಾಯಿಗಳಿಗೆ ಪಥದರ್ಶಕರಾಗಿ ಮುಂದುವರೆದರು. ಮನುಕುಲದ ಐಕ್ಯತೆಯ ಸದುದ್ಧೇಶದಿಂದ ಶ್ರೀಮಾತೆಯವರು ಆರಂಭಿಸಿದ ಅರೋವಿಲ್ಲನಿರ್ಮಾಣಕ್ಕೆ ಯುನೆಸ್ಕೋ ಸಹಾಯ ಹಸ್ತ ಚಾಚಿತು.   ಜಗತ್ತಿನ ಎಲ್ಲಾ ಭಾಗದ, ಎಲ್ಲಾ ವರ್ಗದ, ಎಲ್ಲಾ ವಿಧದ ಜನರು ಶಾಂತಿ-ಸೌಹಾರ್ದದಿಂದ ಬಾಳಬೇಕು ಎನ್ನುವುದು ಈ ನಿರ್ಮಾಣದ ಹಿಂದಿನ ಉದ್ಧೇಶವಾಗಿದೆ.    1968ರಲ್ಲಿ ಉದ್ಘಾಟನೆಗೊಂಡ ಅರೋವಿಲ್ಲಉದ್ಘಾಟನಾ ಸಮಾರಂಭದಲ್ಲಿ 121 ದೇಶಗಳ ಮತ್ತು ಭಾರತದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ತಮ್ಮ ತಮ್ಮ ಪ್ರಾಂತ್ಯದಿಂದ ಒಂದು ಮುಷ್ಠಿ ಮಣ್ಣನ್ನು ತಂದು ಆ ಪ್ರದೇಶದಲ್ಲಿ ಸಂಗಮಗೊಳಿಸಿದರು.  ಇಂದಿಗೆ ಅರೋವಿಲ್ಲಪ್ರದೇಶದಲ್ಲಿ 35 ರಾಷ್ಟ್ರಗಳ ಸುಮಾರು 1700ಜನರು ನೆಲೆಸಿರುವರು.  ಶ್ರೀಮಾತೆಯವರು ತಮ್ಮ 95ನೆಯ ವಯಸ್ಸಿನಲ್ಲಿ ನಿಧನರಾದರು.

ಅರವಿಂದರು ಪ್ರಕೃತಿಯ ವಿಕಸನವು, ಅಧ್ಯಾತ್ಮಿಕ ದೃಷ್ಟಿಕೋನದಿಂದ ಪ್ರಜ್ಞೆಯ ವಿಕಸನವೆಂದೂ, ಭೌತಿಕ, ಪ್ರಾಣ, ಮತ್ತು ಮನಸ್ಸುಗಳು ಕ್ರಮವತ್ತಾಗಿ ಜಡಜಗತ್ತು, ಸಸ್ಯ, ಪಶುಗಳು, ಮತ್ತು ಮನುಷ್ಯನಲ್ಲಿ ಅಭಿವ್ಯಕ್ತಿಯನ್ನು ಪಡೆದುಕೊಂಡಿತೆಂದೂ; ಮುಂದಿನ ವಿಕಸನವು ಮನಸ್ಸನ್ನು ಮೀರಿಸಿದ ಪ್ರಜ್ಞೆಯಯ ಸ್ಥಿತಿಯ ಅಭಿವ್ಯಕ್ತಿಯೆಂದು ಪ್ರಸ್ತುತಪಡಿಸಿದರು.  ಪೌರ್ವಾತ್ಯ ಮತ್ತು ಪಾಶ್ಚಿಮಾತ್ಯ ಅಧ್ಯಾತ್ಮಿಕ ಪರಂಪರೆಗಳು ಸೂಚಿಸುವಂತೆ, ಮನಸ್ಸಿನಾಚೆಯ ಅತಿ ಪ್ರಜ್ಞೆಯಲ್ಲಿ ಸಂತೃಪ್ತಗೊಳ್ಳುವುದಷ್ಟೇ ನಮ್ಮ ಧ್ಯೇಯವಾಗಬಾರದು.   ಭೌತಿಕ ಜಗತ್ತಿಗೂ ಈ ಅನ್ವೇಷಣೆಯ ಗೆಲುವುಗಳನ್ನು ತರಬೇಕು.  ಹಾಗೆ ಮಾಡದೆ  ಅತೀತದಲ್ಲಿ ಲೀನವಾಗಿಹೋಗುವುದು ತರವಲ್ಲ.  ಅತಿ ಪ್ರಜ್ಞೆಯ ಪ್ರಾಪ್ತಿಗಳನ್ನು ಮಾನಸಿಕ, ಪ್ರಾಣಿಕ ಮತ್ತು ಭೌತಿಕಗಳಿಗೂ ಇಳಿಸಬೇಕು ಮತ್ತು ಆ ಮೂಲಕ ನವ ಜೀವಜಾತಿಯನ್ನು, ಅತಿಮಾನವತೆಯನ್ನು ಅಭಿವ್ಯಕ್ತಗೊಳಿಸಬೇಕುಎಂದು ಅಭಿಪ್ರಾಯಪಡುತ್ತಾರೆ.

ಅರವಿಂದರ ಸಮಗ್ರ ವಾಙ್ಮಯವನ್ನು ಅರವಿಂದಾಶ್ರಮವು 35 ಸಂಪುಟಗಳಲ್ಲಿ ಪ್ರಕಟಿಸಿದೆ. ದಿವ್ಯ ಜೀವನ, ಯೋಗ ಸಮನ್ವಯ, ಮಾನವ ಚಕ್ರ, ವೇದ ರಹಸ್ಯ, ಅಗ್ನಿ ಸೂತ್ರಗಳು, ಮಹಾಕಾವ್ಯವೆನಿಸಿರುವ ಸಾವಿತ್ರಿ’, ಯೋಗ ದಾಖಲೆಗಳು, ಯೋಗ ಪತ್ರಗಳು ಮುಂತಾದವು ಅರವಿಂದರ ಶ್ರೇಷ್ಠ ಕೃತಿಗಳ ಸಾಲಿನಲ್ಲಿ ಪ್ರಮುಖವೆನಿಸಿವೆ.  ಮಹರ್ಷಿ ಅರವಿಂದರು ಮಾನವ ಜನಾಂಗಕ್ಕೆ ನೀಡಿದ ಕಾಣಿಕೆಯ ಬಗ್ಗೆ ಗೋಕಾಕರು ವಿವರವಾಗಿ ಬರೆಯುತ್ತಾರೆ. ಅವರು ಹೇಳಿದ ಕೆಲವು ಮಹತ್ವದ ಮಾತುಗಳನ್ನು ಹೀಗೆ ಸಂಗ್ರಹಿಸಬಹುದು:

ಅರವಿಂದರು ತಮ್ಮ ಲೈಫ್ ಡಿವೈನ್ಪುಸ್ತಕದಲ್ಲಿ ನಮಗೆ ಒಂದು ವಿನೂತನ ವಿಶ್ವಶಾಸ್ತ್ರ(ಕಾಸ್ಮಾಲಜಿ) ಹಾಗೂ ತತ್ತಶಾಸ್ತ್ರ (ಮೆಟಫಿಜಿಕ್ಸ್) ನೀಡಿದ್ದಾರೆ. ತಮ್ಮ ದಿವ್ಯ ಜೀವನದಲ್ಲಿ ಹಾಗೂ ಪತ್ರಗಳಲ್ಲಿ ಮನಶ್ಶಾಸ್ತ್ರದ ಬಗ್ಗೆ ಇದ್ದ ತಿಳಿವಳಿಕೆಯಲ್ಲೇ ಕ್ರಾಂತಿಯನ್ನು ತಂದಿದ್ದಾರೆ. ತಮ್ಮ ದಿ ಹ್ಯುಮನ್ ಸೈಕಲ್ಗ್ರಂಥದಲ್ಲಿ ಸಮಾಜಶಾಸ್ತ್ರಕ್ಕೆ ಒಂದು ಹೊಸ ಮಾರ್ಗ ತೋರಿಸಿದ್ದಾರೆ. ಸಾಮಾಜಿಕ ಹಾಗೂ ರಾಜಕೀಯ ವಿವರಗಳನ್ನು ವಿಶ್ಲೇಷಿಸಿ ಅದರಲ್ಲಿ ಅಧ್ಯಾತ್ಮಿಕ ದೃಷ್ಟಿಯ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ಇದೇ ವಿಚಾರ ವಿಸ್ತರಿಸುತ್ತ  ದಿ ಐಡಿಯಲ್ ಆಫ್ ಹ್ಯೂಮನ್ ಯುನಿಟಿ’  ಎಂಬ ಗ್ರಂಥದಲ್ಲಿ ಅರವಿಂದರು ಅಂತಾರಾಷ್ಟ್ರೀಯ ರಾಜಕಾರಣದ ವಿಶ್ಲೇಷಣೆ ಮಾಡಿದ್ದಾರೆ. ತಮ್ಮ ದಿ ಸಿಂಥೆಸಿಸ್ ಆಫ್ ಯೋಗಪುಸ್ತಕದಲ್ಲಿ ಯೋಗ ಮಾರ್ಗವು ನಮ್ಮನ್ನು ಪ್ರಜ್ಞೆಯ ಶ್ರೇಷ್ಠತೆಗೆ ಹೇಗೆ ಒಯ್ಯುವುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಗ್ರಂಥಗಳಾದ  ದಿ ಸಿಕ್ರೆಟ್ ಆಫ್ ದಿ ವೇದ’,  ‘ಎಸ್ಸೇಸ್ ಆನ್ ದಿ ಗೀತಾ’, ಮತ್ತು ಉಪನಿಷತ್ತುಗಳ ಮೇಲಿನ ಬರವಣಿಗೆಗಳು ಭಾರತೀಯ ಪುರಾತನ ಗ್ರಂಥಗಳ ಕ್ರಾಂತಿಕಾರಿ ಅಭ್ಯಾಸಗಳಾಗಿವೆ.   ಭಾಷಾಶಾಸ್ತ್ರ, ಮಾನವಶಾಸ್ತ್ರಗಳ ಮೇಲೆ ಕೂಡ ಬೆಳಕು ಚೆಲ್ಲಿವೆ. ಅವರ ಫೌಂಡೆಶನ್ಸ್ ಆಫ್ ಇಂಡಿಯನ್ ಕಲ್ಚರ್ಪುಸ್ತಕವು  ಭಾರತೀಯ ಸಂಸ್ಕೃತಿಯ ದೇದೀಪ್ಯಮಾನವಾದ ಹೊಸ ವ್ಯಾಖ್ಯಾನವಾಗಿದೆ.  ಅರವಿಂದರ ಮಹಾಕಾವ್ಯ ಸಾವಿತ್ರಿನವಯುಗದ ಮಹಾಕಾವ್ಯವಾಗಿದೆ. ಪೆರಡೈಜ್ ಲಾಸ್ಟ್, ಹೈಪೀರಿಯನ್ಗಿಂತ ಅಧಿಕ ಆತ್ಮಚರಿತ್ರೆಯ ಅಂಶಗಳನ್ನೊಳಗೊಂಡಿದ್ದು ಡಿವೈನ್ ಕಾಮಿಡಿಗಿಂತ ಅಧಿಕ ತೇಜಸ್ವಿಯಾಗಿದೆ. ಇಲಿಯಡ್ ಮತ್ತು ಓಡೆಸ್ಸಿಗಳಿಗಿಂತ ಹೆಚ್ಚು ಮಾನವೀಯ ಗುಣ ಪಡೆದಿದೆ. ಅರವಿಂದರ ಲೈಫ್ ಡಿವೈನ್ಗದ್ಯ ಗ್ರಂಥದಲ್ಲಿರುವ  ಸಾರಸರ್ವಸ್ವವನ್ನೂ  ಸಾವಿತ್ರಿಯಲ್ಲಿ ಸೆರೆಹಿಡಿಯಲಾಗಿದೆ. ಅರವಿಂದರು ಭಾರತೀಯ ಪ್ರೊಮೀಥಿಯಸ್‌ನಂತೆ ಮಾನವರಿಗೆ ಬೆಳಕನ್ನು ತಂದರು. ಪುರಾತನ ಮಹಾ ಕಾವ್ಯವಾದ ಮಹಾಭಾರತವನ್ನು ಬರೆದ ವೇದವ್ಯಾಸರ ತರುವಾಯ ನಾವು ಅರವಿಂದರನ್ನು ನೆನೆಯಬೇಕು. ಹಿಂದೆ ವ್ಯಾಸರು ಮಾಡಿದ ಕಾರ್ಯವನ್ನೇ ಇಂದಿನ ಯುಗದಲ್ಲಿ ಅರವಿಂದರು ಮಾಡಿದ್ದಾರೆ.”  ಹೀಗೆ ವಿ. ಕೃ. ಗೋಕಾಕರು ಅರವಿಂದರನ್ನು ಅಪಾರವಾಗಿ ಸ್ತುತಿಸಿದ್ದಾರೆ.

ಪಂಡಿತ ಮದನ ಮೋಹನ ಮೌಲವೀಯ, ಸುಭಾಷ್ ಚಂದ್ರ ಭೋಸ್, ರವೀಂದ್ರ ನಾಥ್ ಠಾಗೂರ್ ಮುಂತಾದ ಮಹಾನ್ ವ್ಯಕ್ತಿಗಳು ಅರವಿಂದರ ಪ್ರಭಾವಕ್ಕೆ ಒಳಗಾದರು. ವಿ. ಕೃ. ಗೊಕಾಕರಲ್ಲದೆ ದ.ರಾ.ಬೇಂದ್ರೆಕುವೆಂಪು, ಮಧುರ ಚೆನ್ನರು, ಶಂ.ಬಾ.ಜೋಶಿ, ಸ. ಸ. ಮಾಳವಾಡ, ಶಾಂತಾದೇವಿ ಮಾಳವಾಡ, ಸಿಂಪಿ ಲಿಂಗಣ್ಣ  ಮುಂತಾದ ಅನೇಕ  ಮಹಾನ್ ಕನ್ನಡಿಗರೂ ಕೂಡ ಅರವಿಂದರ ಕೃತಿಗಳಿಂದ ಪ್ರಭಾವಿತರಾದವರು.

ದ. ರಾ. ಬೇಂದ್ರೆ ಅವರ ಅರವಿಂದರಿಗೆಕವನ ಇಂತಿದೆ:

ನಿನ್ನಾ ಹುಬ್ಬಿನ ಇಬ್ಬದಿ
ಗರಿ ಚಾಚಿದೆ ಗರುಡ
ಬಾನ್ಗಣ್ಣಾಗಿಹೆ ನೀ, ನಾ
ಗುರಿಯಿಲ್ಲದ ಕುರುಡ.

ಕಣ್ಣೆವೆ ಚಾಟಿಗೆ ಕಟ್ಟಿದೆ
ಆನಂದದ ಹುಟ್ಟು
ಒಳಗಿದೆ ಹೂವರಳಿದವೊಲು
ವಿಶ್ವದ ಇಡಿಗುಟ್ಟು.

ಕೊಡು ತಂದೇ, ಇನ್ನೊಂದೇ
ಒಂದೇ ಬಾಯ್ಕುಟುಕು
ಕೊಡು ತಾಯೇ ಇನ್ನೊಮ್ಮೇ
ಒಮ್ಮೇ ಎದೆಗುಟುಕು.


ಶ್ರೀ ಅರವಿಂದರು ಡಿಸೆಂಬರ್ 5, 1950ರಂದು ಸಮಾಧಿಸ್ಥರಾದರು.  ಈ ಮಹಾನ್ ಋಷಿಸದೃಶ ಮಹಾನ್ ಚೇತನಕ್ಕೆ ನಮ್ಮ ಪ್ರಣಾಮಗಳು.

Tag: Sri Aurobindo

ಕಾಮೆಂಟ್‌ಗಳಿಲ್ಲ: