ಗುರುವಾರ, ಆಗಸ್ಟ್ 29, 2013

ಕಿರಣ್ ಬೇಡಿ

ಕಿರಣ್ ಬೇಡಿ

ಸರ್ಕಾರಿ ಸೇವೆಯಲ್ಲಿ, ಸಾರ್ವಜನಿಕ ಜೀವನದಲ್ಲಿ    ಹೇಗೆ  ಉತ್ತಮ  ಸೇವೆ  ಸಲ್ಲಿಸಬಹುದೆಂಬುದಕ್ಕೆ  ಮಾರ್ಗದರ್ಶಿಯಾದವರು ಕಿರಣ್ ಬೇಡಿ.  ಮುಂದೆ  ಅವರು  ರಾಜಕಾರಣಿಯಾಗಿ  ಮತ್ತು  ಪ್ರಸಕ್ತದಲ್ಲಿ  ಪುದುಚೇರಿಯ  ಲೆಫ್ಟಿನೆಂಟ್  ಗವರ್ನರ್  ಆಗಿರುವ  ಸುದ್ಧಿಗಿಂತ  ಅವರ  ಸರ್ಕಾರಿ  ಸೇವೆಯಲ್ಲಿ  ಅಪರೂಪವಂತೆನಿಸಿದ  ಸೇವೆ  ಮಹತ್ವದ್ದು.    ಕಿರಣ್ ಬೇಡಿ ಅವರು ಜನಿಸಿದ ದಿನ ಜೂನ್ 9. 1949.

ಭಾರತದಲ್ಲಿ ಪೋಲೀಸ್ ಸೇವೆ ಸೇರಿದ ಮೊದಲ ಭಾರತೀಯ ಮಹಿಳೆ ಕಿರಣ್ ಬೇಡಿ. ಅವರು  ಉತ್ತಮ  ಟೆನಿಸ್  ಆಟಗಾರ್ತಿಯೂ  ಆಗಿದ್ದವರು.   ಕಿರಣ್ ಬೇಡಿ ಪಂಜಾಬ್‌ನ ಅಮೃತಸರದಲ್ಲಿ 1949ರ  ಜೂನ್ 9ರಂದು ಜನಿಸಿದರು. ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ, ಕಾನೂನು ಹಾಗೂ ಡಾಕ್ಟರೇಟ್ ಪದವಿ ಪಡೆದ ಕಿರಣ್ ಬೇಡಿ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು.  ಆದರೆ ಮನದಾಳದ ಆಸೆಯ ಕರೆಗೆ ಓಗೊಟ್ಟು ಪೊಲೀಸ್ ಅಧಿಕಾರಿಯಾದರು.  ಒಂದು ಕಡೆ ಸಾಹಸ, ಮತ್ತೊಂದು ಕಡೆ ಅಪನಂಬುಗೆ, ದರ್ಪ, ಒತ್ತಡ, ಹಿಂಸೆ ಹೀಗೆ ವೈವಿಧ್ಯಮಯ ಚಿತ್ರಣ ನೀಡುವ ಪೋಲೀಸ್ ಇಲಾಖೆಯಲ್ಲಿ ಕಿರಣ್ ಬೇಡಿ ತಮ್ಮದೇ ಆದ ಹೊಸ ಭಾಷ್ಯ ಬರೆದರು.

ಕಿರಣ್ ಬೇಡಿ ಅವರು ಪೊಲೀಸ್ ವೃತ್ತಿಯಲ್ಲಿ ಎದುರಿಸಿರುವ ಸವಾಲುಗಳಂತೆ ಗಳಿಸಿದ ಯಶಸ್ಸು ಹಾಗೂ ಜನಪ್ರಿಯತೆ ಕೂಡಾ ಅಪಾರ. ಗಣ್ಯವ್ಯಕ್ತಿಗಳ ಭದ್ರತೆ, ಸಂಚಾರ ಸಮಸ್ಯೆಗಳ ನಿವಾರಣೆ, ಮಾದಕವಸ್ತು ಚಟುವಟಿಕೆಗಳ ನಿಯಂತ್ರಣ ಮುಂತಾದ ಹಲವು ರೀತಿಯ ಸವಾಲುಗಳನ್ನುರಾಜಕೀಯ ಒತ್ತಡಗಳನ್ನು, ಸಾಮರ್ಥ್ಯ ತೋರಿದಾಗಲೆಲ್ಲಾ ನಿಷ್ಕ್ರಿಯರನ್ನಾಗಿಸುವಂತಹ  ರಾಕ್ಷಸೀಯ ಭಯ ಹುಟ್ಟಿಸುವ ವ್ಯವಸ್ಥೆಗಳನ್ನುಹೀಗೆ  ಯಾವುದಕ್ಕೂ ಅಂಜದೆ, ಅಳುಕದೆ  ಧೈರ್ಯವಾಗಿ ಎದುರಿಸಿ ಕಿರಣ್ ಬೇಡಿ ಅವರು ತೋರಿದ ಸಾಮರ್ಥ್ಯ ಅಸಾಧಾರಣವಾದದ್ದು. 

ಸಿನಿಮಾಗಳ ದೆಸೆಯಿಂದಲೋ, ಭ್ರಷ್ಟತೆ, ಒರಟು ತನಗಳ ಮೇಲ್ಮೈಯಿಂದಲೋ ಯಾವಾಗಲೂ ದೊಣ್ಣೆ ತಿರುಗಿಸುವ, ಅವಾಚ್ಯ ಪದ ಪ್ರಯೋಗಗಳ ಚಿತ್ರಣ ಕಾಣುವ ಪೋಲೀಸ್ ಇಲಾಖೆಗೆ ಸವಿನಯ ಸ್ಪರ್ಶ ಮುಖೇನ ಕ್ರಾಂತಿ ತರುವ ವಿಶಿಷ್ಟ ಪ್ರಯೋಗ ನಡೆಸಿದವರು ಕಿರಣ್ ಬೇಡಿ. ಎಲ್ಲ ರೀತಿಯ ಕುಖ್ಯಾತಿಗಳಿಗೆ ಪ್ರಖ್ಯಾತವಾಗಿದ್ದ  ತಿಹಾರ್ ಜೈಲಿನಲ್ಲೂ ಇವರು ಕೈಗೊಂಡ ಸುಧಾರಣೆಗಳು ಮಹತ್ವದ್ದೆನಿಸಿವೆ.

ಕಿರಣ್ ಬೇಡಿ ವಿಶ್ವಸಂಸ್ಥೆಯ ಶಾಂತಿಪಾಲನಾ ವಿಭಾಗದ ಸಲಹೆಗಾರರಾಗಿ ಸಹಾ ಕೆಲಸ ನಿರ್ವಹಿಸಿದ್ದಾರೆ.  ಅಲ್ಲಿ ಕೂಡಾ  ಇವರ ಸೇವೆಗೆ ಮೆಚ್ಚುಗೆಯಾಗಿ ವಿಶ್ವಸಂಸ್ಥೆ ಪದಕ ನೀಡಿ ಗೌರವಿಸಿದೆ. ಕಿರಣ್ ಬೇಡಿ ಅವರಿಗೆ ಸಂದಿತವಾಗಿರುವ ಅಂತರ ರಾಷ್ಟ್ರೀಯ ಪ್ರಶಸ್ತಿಯಾದ  ರಾಮನ್ ಮ್ಯಾಗ್ಸೇಸೆ ಪುರಸ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರ ಕೀರ್ತಿ ಜ್ಯೋತಿಯಾಗಿ  ಬೆಳಗಿರುವ ಕುರುಹಾಗಿದೆ. 

ಕಿರಣ್ ಬೇಡಿ ಅವರಿಗೆ ಪೋಲೀಸ್ ಪ್ರಧಾನ ಹುದ್ದೆ ನೀಡಬೇಕಾದ್ದನ್ನು ತಪ್ಪಿಸಿ ಕೀಳುತನ ಪ್ರದರ್ಶಿಸಿದ ಆಡಳಿತ ವ್ಯವಸ್ಥೆ, ಮತ್ತು ಆ ಕೀಳುತನಕ್ಕೆ  ಬೇಕಿದ್ದ ಬೆಂಬಲ ನೀಡಿದ ಆಷಾಢಭೂತಿ ಆಡಳಿತ ಪಕ್ಷ, ಇಂತದ್ದನ್ನು ವಿರೋಧಿಸಿದರೆ ನಾಳೆ ನಮಗೆ ಆಪತ್ತು ಎಂದುಕೊಂಡ ವಿರೋಧಪಕ್ಷ ಹಾಗೂ  ಇವೆಲ್ಲಾ  ನಡೆವಾಗ  ಒಬ್ಬರು   ಶ್ರೇಷ್ಠ ಅಧಿಕಾರಿ  ಎಂದು ಕೇವಲ ಬಾಯಿಚಪಲ ತೋರಿ ಅವರಿಗೆ  ನ್ಯಾಯ ದೊರಕದಿದ್ದಾಗ ವಿರೋಧಿಸದ ಸಮಾಜ ಎಂಬ  ನಾವು ಇವುಗಳೆಲ್ಲದರ ಬಗ್ಗೆ ಹೇಳುವುದಕ್ಕೇನಿದೆ?

ಮುಂದೆ  ಹಲವಾರು ಸಮಾಜದ ಉಪಯೋಗಿ ವ್ಯವಸ್ಥೆಗಳಿಗೆ ನಿರಂತರ ಬೆನ್ನೆಲುಬಾದವರು ಕಿರಣ್ ಬೇಡಿ.  ಅಣ್ಣಾ ಹಜಾರೆ ಅವರು  ಆರಂಭಿಸಿದ್ದ ಭ್ರಷ್ಟಾಚಾರ ವಿರುದ್ಧದ ಚಳುವಳಿಯಲ್ಲಿ ಸಹಾ  ಕಿರಣ್ ಬೇಡಿ ಸಕ್ರಿಯರಾಗಿದ್ದರು.  ಇದೇ ಚಳುವಳಿಯಲ್ಲಿ  ಕಿರಣ್  ಬೇಡಿ  ಅವರ  ಜೊತೆಗೆ  ಕ್ರಿಯಾಶೀಲರಾಗಿದ್ದ  ಅರವಿಂದ್  ಕೇಜ್ರೀವಾಲ್ ಮತ್ತವರ  ಇತರ  ಗೆಳೆಯರು   ರಾಜಕೀಯದತ್ತ  ಮುಖ  ಮಾಡಿ  ತಮ್ಮದೇ ‘ಆಮ್  ಆದ್ಮಿ’ ಪಕ್ಷ  ನಿರ್ಮಿಸಿದರೆ,  ನರೇಂದ್ರ  ಮೋದಿ  ಅವರನ್ನು  ಬೆಂಬಲಿಸಿದ  ಕಿರಣ್  ಬೇಡಿ  ಭಾರತೀಯ  ಜನತಾ ಪಕ್ಷಕ್ಕೆ  ಬಂದರು.  ಕೇಜ್ರೀವಾಲರಿಗೆ  ದೆಹಲಿಯಲ್ಲಿ  ಸೃಷ್ಟಿಯಾಗಿದ್ದ  ಅಪಾರ  ಜನಪ್ರಿಯತೆಯ ಮುಂದೆ  ದಿಢೀರ್   ಎಂದು ಅವರ  ವಿರುದ್ಧದ   ಮುಖ್ಯಮಂತ್ರಿ  ಅಭ್ಯರ್ಥಿಯಾಗಿ  ಬಂದ  ಕಿರಣ್  ಬೇಡಿ  ಮತ್ತು  ಅವರ  ಭಾಜಪಾ  ಭಯಂಕರ  ಸೋಲು  ಕಂಡದ್ದೂ  ಅಲ್ಲದೆ,  ಕಿರಣ್  ಬೇಡಿ  ಅವರಿಗೆ  ರಾಜಕೀಯದಲ್ಲಿ  ಬೇಕಾದ  ಚಾಕಚಕ್ಯತೆ   ಕೂಡಾ  ಕಡಿಮೆಯದ್ದು  ಎಂಬುದನ್ನು  ಕೂಡಾ  ದೇಶದ  ಜನತೆ  ಕಾಣುವಂತಾಯಿತು.  ಈ  ರಾಜಕೀಯ  ಹೋರಾಟಕ್ಕಾಗಿ  ಕಿರಣ್  ಬೇಡಿಯವರಿಗೆ  ಇತ್ತೀಚೆಗೆ ಕೇಂದ್ರ  ಸರ್ಕಾರ  ಪುದುಚೆರಿ  ರಾಜ್ಯದ  ಲೆಫ್ಟಿನೆಂಟ್  ಗೌರ್ನರ್  ಹುದ್ಧೆಯನ್ನು  ಸಮಾಧಾನಕರ  ಬಹುಮಾನವೆಂಬಂತೆ  ನೀಡಿದೆ.  ಆದರೆ  ಇವೆಲ್ಲವುಗಳ  ಅಚೆಯಲ್ಲಿ  ಅವರು  ಪೋಲಿಸ್  ಇಲಾಖೆಯಲ್ಲಿ  ಮಾಡಿದ  ಧೈರವ್ಯಂತ  ಸೇವೆ ಮತ್ತು  ಜಡ್ಡುಗಟ್ಟಿದ  ವ್ಯವಸ್ಥೆಗೆ  ಸೆಡ್ಡು  ಹೊಡೆದಂತೆ  ನಿರ್ವಹಿಸಿದ  ನಿಷ್ಟಾವಂತ  ಸೇವೆ  ಮರೆಯಲಾಗದ್ದು. 


ಕಿರಣ್ ಬೇಡಿ ಅವರ ರಾಜಕೀಯದ  ಬದುಕು  ಮುಂದೆ  ಹೇಗೆ  ಹೋದೀತು  ಎಂದು  ಊಹಿಸುವುದು ಕಷ್ಟ.  ಆದರೆ    ಅಂದು ಸರ್ಕಾರಿ  ಸೇವೆಯಲ್ಲಿ ಅವರು  ತೋರಿದ    ಹೃದಯವಂತ, ನಿಷ್ಠಾವಂತ ಮತ್ತು  ಸತ್ಯಕ್ಕೆ ತಲೆ ಎತ್ತಿ ನಿಲ್ಲುವ ವ್ಯಕ್ತಿತ್ವ  ಮರೆಯಲಾಗದ್ದು.  

Tag: Kiran Bedi

ಕಾಮೆಂಟ್‌ಗಳಿಲ್ಲ: