ಶನಿವಾರ, ಆಗಸ್ಟ್ 31, 2013

ಆಧುನಿಕ ಭಾರತದ ಶಿಕ್ಷಣ ಮಾತೆ

ಆಧುನಿಕ ಭಾರತದ ಶಿಕ್ಷಣ ಮಾತೆ
-ರೂಪ ಹಾಸನ

ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳುಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರ್ಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು, ಸಮರ್ಥ ಶಿಕ್ಷಕಿ, ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆಗೆ ಕರತಾಡನದೊಂದಿಗೆ ಗೌರವ ಸೂಚಿಸಿತು. ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದ ಧೀಮಂತ ಮಹಿಳೆ, ತಾಯಿ ಸಾವಿತ್ರಿಬಾಯಿ ಫುಲೆ!

ತಳಸಮುದಾಯ ಹಾಗೂ ಹೆಣ್ಣುಮಕ್ಕಳು ಮೇಲ್ಜಾತಿಗೆ ಸಮಾನವಾದ ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಅದರ ಸಾಕಾರಕ್ಕಾಗಿ ಅನೇಕ ನೋವು, ಅಪಮಾನ, ಸಂಕಟಗಳನ್ನು ಅನುಭವಿಸಿದ ಮಹಿಳೆ, ನಾವೆಲ್ಲರೂ ಕೃತಜ್ಞರಾಗಿರಬೇಕಾದ  ತಾಯಿ ಸಾವಿತ್ರಿಬಾಯಿ ಫುಲೆ. ಇಂದು ತಳ ಸಮುದಾಯಗಳು ಹಾಗೂ ಮಹಿಳೆಯರು ಒಂದಿಷ್ಟಾದರೂ ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತೆ ಆಗಿರುವುದರ ಹಿಂದೆ ಅವರ ಬಹು ದೊಡ್ಡ ಹೋರಾಟವೇ ಇದೆ.

ಒಂದೆಡೆ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯ, ಇನ್ನೊಂದೆಡೆ ತಲೆತಲಾಂತರದಿಂದ ಬಂದ ಪರಂಪರೆಯಂತೆ, ಹಿಂದೂ ಮೇಲ್ಜಾತಿಗಳು ಜಾತಿ-ದೇವರುಗಳ ಹೆಸರಿನಲ್ಲಿ ತಳಸಮುದಾಯಗಳನ್ನು ತುಳಿಯುತ್ತಿದ್ದ ಕಾಲ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲದೆ, ವಿದ್ಯೆ ಪಡೆಯುವುದೇ ಮಹಾ ಪಾಪವೆಂಬಂತಿದ್ದ ಸಂದರ್ಭ.  ಹೆಣ್ಣಿಗೆ ಮದುವೆಯೊಂದೇ ಅಂತಿಮ. ಅವಳೇನೂ ಹೇಳುವಂತಿಲ್ಲ. ಕೇಳುವಂತಿಲ್ಲ. ಇಂತಹ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ದಂಪತಿಗಳು ಹೆಣ್ಣು ಮಕ್ಕಳಲ್ಲಿ ಹತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಇಂದು ಬೆಳಕಾಗಿ ಪಸರಿಸುತ್ತಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 3ನೇ ಜನವರಿ 1831ರಲ್ಲಿ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದ ಸಾವಿತ್ರಿಬಾಯಿಗೆ 9 ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಯಿತು. ಮದುವೆಯ ನಂತರ ಅವರು ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಅವರ ವಿದ್ಯಾಭ್ಯಾಸ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿ.

ಸಗುಣಾ ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸಾವಿತ್ರಿಬಾಯಿ ಹಾಗೂ ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಹಾಗೂ ತಳ ಸಮುದಾಯದವರಿಗೆ ಶಿಕ್ಷಣದ ಬಾಗಿಲನ್ನು ತೆರೆದರು!

1847ರಲ್ಲಿ ನಾರ್ಮನ್ ಶಾಲೆಯಲ್ಲಿ ಕೇವಲ 17 ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿ ಅವರು ಮಹಾರಾಷ್ಟ್ರದಲ್ಲಿ ತರಬೇತಾದ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1848ರಲ್ಲಿ ಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊಟ್ಟಮೊದಲ ಹೆಣ್ಣುಮಕ್ಕಳ ಶಾಲೆಯಲ್ಲಿ (ಭಾರತದಲ್ಲಿ ಎರಡನೆಯದು) ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಪ್ರಾರಂಭಿಸಿದರು. ಮೇಲ್ಜಾತಿ, ತಳಸಮುದಾಯಕ್ಕೆ ಸೇರಿದ 9 ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯ್ತು.

ಆ ಕಾಲದಲ್ಲಿ ಬ್ರಾಹ್ಮಣ ಪುರುಷರ ಹೊರತಾಗಿ ಬೇರೆಯವರಿಗೆ ಅಕ್ಷರ ಕಲಿಯುವ ಅವಕಾಶ ಕಡಿಮೆಯಿತ್ತು. ಅಂಥ ಸಂದರ್ಭದಲ್ಲಿ ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ, ಉಚಿತ ವಿದ್ಯಾದಾನ ನೀಡಲಾರಂಭಿಸಿದ್ದು ಸಂಪ್ರದಾಯಸ್ಥ ಮೇಲ್ಜಾತಿಯವರಿಗೆ ನುಂಗಲಾರದ ತುತ್ತಾಯಿತು. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಲಾಯಿತು. ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನ್ನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು. ಹೀಗೆ ನಿಜವಾದ ಅರ್ಥದಲ್ಲಿ ಆಧುನಿಕ ಭಾರತದ ಶಿಕ್ಷಣ ಮಾತೆಯಾದರು.

ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾದ, ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾದ ಪ್ರಸಂಗಗಳು ಎದುರಾದವು. ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿಗಳು 1848-1852ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣುಮಕ್ಕಳು ಹಾಗೂ ತಳಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿದ ದಾಖಲೆಗಳಿವೆ.

ಈ ಎಲ್ಲ ಶಾಲೆಗಳ ಆಡಳಿತ ಜವಾಬ್ದಾರಿಯನ್ನು ಹೊತ್ತು, ನಿರಂತರವಾದ ಸಾಮಾಜಿಕ ಸಂಘರ್ಷಕ್ಕೆ ಈಡಾಗಿಯೂ ಉತ್ತಮ ಶಿಕ್ಷಣತಜ್ಞೆಯಾಗಿ, ಯಶಸ್ವಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿದ್ದು ಇತಿಹಾಸ ಗರ್ಭದಲ್ಲಿ ಹೂತುಹೋಗಿದೆ. ಕ್ರಾಂತಿಕಾರಿ ಕವಿಯಾಗಿ ಹೋರಾಟದ ಹಾಡುಗಳನ್ನು ರಚಿಸಿದ ಸಾವಿತ್ರೀ ಬಾಯಿ ಅವರ ತೀವ್ರವಾದ ತುಡಿತ ಸಮಾನ ಶಿಕ್ಷಣದ ಕಡೆಗಿದ್ದುದು ಅವರ ಈ ಕವಿತೆಯಿಂದ ಗೋಚರವಾಗುತ್ತದೆ.

ನಡೆ! ಶಿಕ್ಷಣ ಪಡೆ!                                                                                                                                                                                           

ನಿಲ್ಲು! ನಿನ್ನ ಕಾಲ ಮೇಲೆ ನೀನು ನಿಲ್ಲು                                                                                                                           
                                                       
ಪಡೆ ವಿವೇಕ! ಪಡೆ ಸಂಪತ್ತು!  ಇದಕಾಗಲಿ ನಿನ್ನಯ ದುಡಿಮೆ
ಅರಿವಿಲ್ಲದವರಾಗಿ ನಮಗೆ ಕೈ ಜಾರಿತು ಸಕಲವೂ ಪಶುವಾದೆವು, ಇಲ್ಲದಾಗಿ ವಿವೇಕವೂ                                                                                           
ಸಾಕಿನ್ನು ಈ ಜಡತೆ ಸಾಕು                                                                                                                                                     

ನಡೆನಡೆ ಶಿಕ್ಷಣ ಪಡೆ!
ಆಗಲಿ ಕೊನೆ, ದಮನಿತರ ಕಣ್ಣೀರ ಸಂಕಟಕ್ಕೂ ಕೊನೆ
ಇದೊ ಇಲ್ಲಿದೆ! ನಿಮ್ಮ ಕಣ್ಮುಂದೆಯೆ ಬಿದ್ದಿದೆ                                                                                                                                                      

ಶಿಕ್ಷಣದ ರೂಪದಲಿ ಚಿನ್ನದ ಗಣಿಯು                                                                                                                                                 
ತಡವೇಕೆ? ನಡೆನಡೆ ಶಿಕ್ಷಣ
ಪಡೆ!                                                                                                                                                                

ಜಾತಿಯ ಸಂಕೋಲೆ ಕತ್ತರಿಸಿ ನಡೆ.                                                                                                                               

ವೈದಿಕ ಶಾಸ್ತ್ರದ ಕಾಲ್ತೊಡರ ಕಿತ್ತೆಸೆದು ನಡೆ ನಡೆ!

ಅನೇಕ ಸಾಮಾಜಿಕ ಅನಿಷ್ಟಗಳ ಎದುರಿಗೂ ಫುಲೆ ದಂಪತಿಗಳು ಉಗ್ರ ಹೋರಾಟ ನಡೆಸಿದರು. ಹೆಣ್ಣುಮಕ್ಕಳೆಡೆಗೆ ಒಂದು ಸರ್ಕಾರ ವಹಿಸಬಹುದಾದ ಸೂಕ್ಷ್ಮ ಎಚ್ಚರ, ಕಾಳಜಿಗಳನ್ನು ಅವರು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಿದರು. ವಿಧವೆಯರ ಕೇಶಮುಂಡನವನ್ನು ವಿರೋಧಿಸಿ, ಅವರ ಪುನರ್ ವಿವಾಹಗಳನ್ನು ಏರ್ಪಡಿಸಿದರು.

ಕಾಮುಕ ಪುರುಷರಿಗೆ ಬಲಿಯಾಗಿ ಗರ್ಭಧರಿಸುವ ವಿಧವೆಯರಿಗಾಗಿ, ಅವರಿಗೆ ಹುಟ್ಟುವ ಮಕ್ಕಳಿಗಾಗಿ 1863ರಲ್ಲಿ ಬಾಲಹತ್ಯೆ ಪ್ರತಿಬಂಧಕ ಗೃಹ'ಗಳನ್ನು ತೆರೆದರು. ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ ಗುಪ್ತ ಪ್ರಸೂತಿ ಗೃಹ'ಗಳನ್ನು ಸ್ಥಾಪಿಸಿದರು. ಅನೇಕ ಅನಾಥಾಶ್ರಮಗಳೂ ಸ್ಥಾಪನೆಯಾದವು.

ಸ್ವಂತ ಮಕ್ಕಳನ್ನು ಹೊಂದದೆಯೇ ಈ ದಂಪತಿಗಳು ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು. ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದ ಸತ್ಯಶೋಧಕ ಚಳವಳಿ' ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ.

ಜ್ಯೋತಿಬಾ ಫುಲೆಯವರ ಮರಣದ ನಂತರವೂ ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಿಟ್ಟೆ ಸಾವಿತ್ರಿಬಾಯಿ ಫುಲೆಯವರನ್ನು ನಾವಿಂದು ಮರೆತು ಹೋಗಿದ್ದೇವೆಂಬುದೇ ವಿಪರ್ಯಾಸ. ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ಅವರು ನಿಸ್ವಾರ್ಥವಾಗಿ ತೊಡಗಿಕೊಂಡು, ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಕೊನೆಗೆ ಈ ನಮ್ಮ ಶಿಕ್ಷಣದ ತಾಯಿ ತೀವ್ರ ಪ್ಲೇಗ್ ಖಾಯಿಲೆಗೆ ತುತ್ತಾಗಿ ತಮ್ಮ 66ನೇ ವಯಸ್ಸಿನಲ್ಲಿ, 10 ಮಾರ್ಚ್ 1897ರಲ್ಲಿ ಸಾವನ್ನಪ್ಪಿದರು.

ಸಮಾನ ಶಿಕ್ಷಣ, ಸಮ ಸಮಾಜದ ಕನಸು ಕಂಡ ಫುಲೆ ದಂಪತಿಗಳು ಇನ್ನಿಲ್ಲವಾಗಿ ಶತಮಾನವೇ ಕಳೆದುಹೋದರೂ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ! ಜಾಗತೀಕರಣದ ಬಿರುಗಾಳಿ ಮತ್ತು ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಮಹಿಳೆ ಮತ್ತು ತಳ ಸಮುದಾಯ ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೇ ಶಿಕ್ಷಣದ ಹಕ್ಕಿನಿಂದ ವಂಚನೆಗೊಳಗಾಗುತ್ತಿದೆ. ಸಮಾನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂದು `ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ'ಯನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆಪಡುತ್ತಿವೆ. ಆದರೆ ಸಮಾನ ಶಿಕ್ಷಣದ ಜಾರಿಗೆ ಬೇಕಾದಂತಾ ಇಚ್ಛಾಶಕ್ತಿಯ ಕೊರತೆಯಿಂದ ಮನಬಂದಂತೆ ಶಿಕ್ಷಣ ನೀತಿಯನ್ನು ರೂಪಿಸಿಕೊಂಡು, ಶಿಕ್ಷಣ ಖಾಸಗೀಕರಣಕ್ಕೆ ತನ್ನನ್ನು ಒತ್ತೆ ಇಟ್ಟುಕೊಂಡು, ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಮಾರಾಟದ ಸರಕಾಗಿಸಿದೆ. ತಾಯ್ತನದ ತುಡಿತವಿರದ ಲಾಭಕೋರ ಸರ್ಕಾರ, ಸರ್ಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಶಾಲೆಗಳನ್ನೇ ಮುಚ್ಚುತ್ತಿದೆ.

ಸಾವಿತ್ರಿಬಾಯಿಯವರ ಅಂದಿನ ಶ್ರಮ ಸಾರ್ಥಕವಾಗಬೇಕಾದರೆ ಪ್ರಾದೇಶಿಕ ಭಾಷೆಯನ್ನು ಪ್ರಾಥಮಿಕ ಹಂತದಲ್ಲಾದರೂ ಮಾಧ್ಯಮವಾಗುಳ್ಳ ಸಮಗ್ರ ಏಕರೂಪ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ಅದರ ಮೊದಲ ಭಾಗವಾಗಿ ಸರ್ಕಾರ, ಸಾವಿತ್ರಿಬಾಯಿಯವರು ಜನಿಸಿದ ಜನವರಿ 3ನ್ನು ರಾಷ್ಟ್ರೀಯ ಸಮಾನ ಶಿಕ್ಷಣ ದಿನ'ವೆಂದು ಘೋಷಿಸಬೇಕು.

ಈ ಘೋಷಣೆ ಭಾರತದ ಕಗ್ಗತ್ತಲೆಗೆ ಬೆಳಕಾದ ತಾಯಿಯೊಬ್ಬಳ ದಿನಾಚರಣೆ ಆಗುತ್ತದೆ. ಅಂದು ಮಾಮೂಲಿನಂತೆ ಸಾರ್ವತ್ರಿಕ ರಜೆಯನ್ನೇನೂ ಸರ್ಕಾರ ನೀಡುವುದು ಬೇಡ. (ಹೆಣ್ಣುಮಕ್ಕಳಿಗೆ ಯಾವ ರಜಾ ದಿನಗಳಲ್ಲೂ, ನಿವೃತ್ತಿಯ ನಂತರವೂ ಬಿಡುವೆಂಬುದಿರುವುದೇ ಇಲ್ಲ). ಆ ದಿನದಂದು ಸಮಾನ ಶಿಕ್ಷಣ'ದ ಕುರಿತು ಸರ್ಕಾರ ಮತ್ತು ಇತರ ಪ್ರಗತಿಪರ ಸಂಸ್ಥೆಗಳು ಚರ್ಚೆ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳನ್ನು ನಡೆಸಬೇಕಾಗಿದೆ.


ಕೃಪೆ: ಪ್ರಜಾವಾಣಿ

Tag: Savitribai Phule

ಕಾಮೆಂಟ್‌ಗಳಿಲ್ಲ: