ಸೋಮವಾರ, ಆಗಸ್ಟ್ 26, 2013

ಸುಬೋಧ ರಾಮರಾವ್

ಸುಬೋಧ ರಾಮರಾವ್

ಕನ್ನಡ ನವೋದಯ ಕಾಲದ ಮಹತ್ವದ ಲೇಖಕರಾಗಿ ಸುಬೋಧಎಂಬ ಪ್ರಸಿದ್ಧ ಪತ್ರಿಕೆ ಮತ್ತು ಪ್ರಕಟಣಾಲಯವನ್ನು ಸ್ಥಾಪಿಸಿ ಸುಬೋಧಎಂಬ ಹೆಸರಿನ  ಜೊತೆಯಲ್ಲಿಯೇ ನಿರಂತರವಾಗಿ  ಸ್ತುತಿಸಲ್ಪಡುತ್ತಿರುವವರು ಸುಬೋಧ ರಾಮರಾವ್ ಅವರು. 

ರಾಮರಾವ್ ಅವರು  ಆಗಸ್ಟ್‌ 25, 1890ರ ವಿನಾಯಕ ಹಬ್ಬದ ದಿನದಂದು ಚಿಕ್ಕಮಗಳೂರಿನಲ್ಲಿ ಜನಿಸಿದರು.  ಅವರ ತಂದೆ ಹನುಮಂತರಾಯರು ಮತ್ತು  ತಾಯಿ ಭಾರತೀಬಾಯಿಯವರು.   ಆರು ಮಕ್ಕಳ ಕಡುಬಡತನದ ಸಂಸಾರದಲ್ಲಿ  ತಾಯಿ ಆಕಸ್ಮಿಕ ಮರಣಕ್ಕೆ ತುತ್ತಾದರು.  ತಂದೆಗೆ ನಿಗದಿತ ಉದ್ಯೋಗವಿಲ್ಲದೆ, ಯಾರೋ ಮಾಡಿದ ತಪ್ಪಿಗಾಗಿ ತಲೆಮರೆಸಿಕೊಂಡು ಮಕ್ಕಳೊಡನೆ ಊರೂರು ಸುತ್ತಾಟ ನಡೆಸುವಂತಹ ಪರಿಸ್ಥಿತಿ ತಲೆದೋರಿತ್ತು.   ಹೀಗಾಗಿ ರಾಮರಾಯರಿಗೆ ಕ್ರಮಭರಿತ ವಿದ್ಯಾಭ್ಯಾಸದ ಕೊರತೆಯುಂಟಾಯಿತು.  ಮುಂದೆ ಕುಟುಂಬ ಹೊನ್ನಾಳಿಯಲ್ಲಿ ನೆಲೆಗೊಂಡಿತು ಎನ್ನುವಷ್ಟರಲ್ಲಿ ತಂದೆ ನಿಧನರಾದರು.  ಇದಲ್ಲದೆ ಪ್ಲೇಗ್‌ ಹಾವಳಿ ಮುಂತಾದ ಘಟನೆಗಳಿಂದ ಅವರ  ಓದು ಸಾಂಗವಾಗಿ ಸಾಗದೆ  1906ರ ವರ್ಷದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ತೇರ್ಗಡೆಯಾದರು.

ಮುಂದೆ ರಾಮರಾವ್ ಅವರು ಇಂಗ್ಲಿಷ್‌ ಕಲಿಯುವ ಆಸೆಯಿಂದ ಬೆಂಗಳೂರಿಗೆ ಬಂದು ಚಿಕ್ಕಪ್ಪನ ಮನೆಯಲ್ಲಿ ವಾಸ ಮಾಡಲಾರಂಭಿಸಿದರು. ಅಮೆರಿಕನ್‌ ಅಡ್ವೆಂಟ್‌ ಮಿಷನ್‌ ಸ್ಕೂಲಿನಲ್ಲಿ ಒಂದು ವರುಷ ಕಲಿತರು.  1908ರಲ್ಲಿ ಸೇಂಟ್‌ ಅಲೋಷಿಯಸ್‌ ಹೈಸ್ಕೂಲು ಸೇರಿದರಾದರೂ ದುಶ್ಚಟಗಳಿದ್ದ ಹುಡುಗರ ಜೊತೆ ಸೇರಿದ್ದಾನೆಂಬ ಕಾರಣದಿಂದ ಇವರನ್ನು   ಶಾಲೆಯಿಂದ ಉಚ್ಚಾಟನೆ ಮಾಡಲಾಯಿತು.  ಕಡೆಗೆ ಎಸ್‌.ಎಲ್‌.ಎನ್‌. ಹೈಸ್ಕೂಲು ಸೇರಿ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದರು.  ಮುಂದೆ ಓದುವ ಆಸೆಯಿದ್ದರೂ ಓದಲಾಗದೆ, ಅಮಲ್ದಾರರೊಬ್ಬರ ಪ್ರಭಾವದಿಂದ ಹೊನ್ನಾಳಿಯ ತಾಲ್ಲೂಕ ಕಚೇರಿಯಲ್ಲಿ  ಗುಮಾಸ್ತರ ಕೆಲಸ ಪಡೆದುಕೊಂಡರು.  ಮುಂದೆ ಭಡ್ತಿ ಪಡೆದು ಸಬ್‌ ರಿಜಿಸ್ಟ್ರಾರ್ ಕಚೇರಿಯಲ್ಲಿ ಮುಖ್ಯ ಗುಮಾಸ್ತರ ಹುದ್ದೆ ಗಳಿಸಿದರು.

ಒಮ್ಮೆ ಕೈಗೆ ಸಿಕ್ಕಿದ ಭಗವದ್ಗೀತೆಯನ್ನು ಓದಿ ಪ್ರಭಾವಿತರಾಗಿ ಬರವಣಿಗೆಯ ಅಭ್ಯಾಸದಲ್ಲಿ ತೊಡಗಿದರು. ಹಲವಾರು ಕಷ್ಟಗಳನ್ನು ತಾರುಣ್ಯದಲ್ಲೇ ಅನುಭವಿಸಿದ್ದ  ರಾಯರಿಗೆ ಸ್ವತಂತ್ರವಾಗಿ ಯಾವುದಾದರೊಂದು ವೃತ್ತಿಯನ್ನೂ ಕೈಗೊಳ್ಳುವ ಆಸೆ ಹುಟ್ಟಿ  ದಿನಸಿ ಅಂಗಡಿ ತೆರೆದರು. ಆದರೆ ಪ್ರತಿಸ್ಪರ್ಧಿಗಳ ನಡುವೆ ಹೋರಾಡಲಾಗದೆ ನಷ್ಟ ಅನುಭವಿಸಿ ಅಂಗಡಿಯನ್ನು ತಮ್ಮ ಅಣ್ಣನಿಗೊಪ್ಪಿಸಿ  ಬೆಂಗಳೂರಿನಲ್ಲಿ   ಅಕ್ಕನ ಮನೆಯಲ್ಲಿ ವಾಸ್ತವ್ಯ ಹೂಡಿದರು.  ಆಗ ಶಿಶುವಿಹಾರವೊಂದರಲ್ಲಿ  ಶಿಕ್ಷಕರ ಕೆಲಸ ದೊರಕಿತು. ಶಾಲೆಯ ಇನ್‌ಸ್ಪೆಕ್ಷನ್‌ಗೆ ಬಂದ ಅಧಿಕಾರಿ ಶ್ರೀನಿವಾಸ ಅಯ್ಯಂಗಾರ್ಯರು ರಾಮರಾಯರ ಸಾತ್ವಿಕ ಸ್ವಭಾವ, ವಿದ್ಯೆ ಕಲಿಸುವಲ್ಲಿದ್ದ ಶ್ರದ್ಧೆ, ನಿಷ್ಕಪಟತೆಗಳನ್ನು ಕಂಡು ಪುರಸಭಾ ಶಾಲೆಯಲ್ಲಿ ಉಪಾಧ್ಯಾಯರ ಹುದ್ದೆ ದೊರಕಿಸಿಕೊಟ್ಟರು.  ಮುಂದೆ ತರಬೇತಿಗೂ ಆಯ್ಕೆಯಾಗಿ ನಂತರ ದೊಡ್ಡಕುಂಟೆ ಪುರಸಭಾ ಶಾಲೆಯಲ್ಲಿ   ಮುಖ್ಯೋಪಧ್ಯಾಯರ ಕೆಲಸ ಗಳಿಸಿದರು.

ಭಗವದ್ಗೀತೆಯ ಅನುವಾದದಲ್ಲಿ ತೊಡಗಿದ್ದ ರಾಯರಿಗೆ ಸಾಹಿತ್ಯದಲ್ಲಿ ಏನಾದರೊಂದು ಸಾಧಿಸಬೇಕೆನಿಸಿ ಕುಸುಮಾಂಜಲಿ ಮಾಲೆಯನ್ನು ಪ್ರಾರಂಭಿಸಿ ಚಂದ್ರಹಾಸ (1915), ಧ್ರುವ (1916), ಪ್ರಹ್ಲಾದ, ಸಾವಿತ್ರಿ (1917) ಮುಂತಾದವುಗಳನ್ನೂ ಪ್ರಕಟಿಸಿದರು. ಇವುಗಳನ್ನು ಮುದ್ರಿಸಲು ಬೆಂಗಳೂರಿಗೆ ಓಡಾಟ  ಮಾಡಬೇಕಾಗಿಬಂದು ತೊಂದರೆಯಾದಾಗ ಬೆಂಗಳೂರಿನ ಆರ್.ಬಿ.ಎ.ಎನ್‌.ಎಂ  ಶಾಲೆಯಲ್ಲಿ  ಉಪಾಧ್ಯಾಯರ ಹುದ್ದೆಗೆ ಸೇರಿಕೊಂಡರು.

ರಾಮರಾವ್ ಅವರು ತಾವು ಬರೆದ ಕೆಲವು ಮಕ್ಕಳ ಪುಸ್ತಕಗಳನ್ನು ಆರ್ಕಾಟ್‌ ಶ್ರೀನಿವಾಸಾಚಾರ್ಯರ ರಸ್ತೆಯಲ್ಲಿದ್ದ ಮುದ್ರಣಾಲಯದಲ್ಲಿ ಮುದ್ರಣ ಮಾಡಿಸುತ್ತಿದ್ದರು. ಒಮ್ಮೆ ಮಾಲೀಕರೊಡನೆ ಮಾತಿನ ಚಕಮಕಿ ನಡೆದಾಗ ತಾವೇ ಯಾಕೊಂದು ಮುದ್ರಣಾಲಯವನ್ನು ಸ್ಥಾಪಿಸಬಾರದೆಂದು ನಿರ್ಧರಿಸಿ 1925ರ ವರ್ಷದಲ್ಲಿ  ಸುಬೋಧ ಮುದ್ರಣ ಮತ್ತು ಪ್ರಕಟಣಾಲಯವನ್ನು ಸ್ಥಾಪಿಸಿ  ಉಪಾಧ್ಯಾಯ ವೃತ್ತಿಗೆ ರಾಜಿನಾಮೆ ನೀಡಿ ಪ್ರಕಟಣೆಯ ಕೆಲಸವನ್ನೇ ಕೈಗೊಂಡರು.

ರಾಮರಾವ್ ಅವರು 1933ರಲ್ಲಿ ನಗುವನಂದಎಂಬ ಹಾಸ್ಯ ಪತ್ರಿಕೆಯನ್ನು ಪ್ರಾರಂಭಿಸಿ ಹಾಸ್ಯಪ್ರಿಯರಿಗೆ ರಸದೌತಣ ನೀಡಿದರು.  ಈ ಪತ್ರಿಕೆ ಜಿ.ಎಸ್‌. ಕೃಷ್ಣರಾಯರ ಸಂಪಾದಕತ್ವದಲ್ಲಿ 1949ರವರೆವಿಗೂ ನಡೆಯಿತು. ಮುಂದೆ 1949-50ರಲ್ಲಿ ಇದನ್ನು  ರಂಗನಾಥರಾಯರು ವಹಿಸಿಕೊಂಡರಾದರೂ ಆರ್ಥಿಕ ಸಂಕಷ್ಟಕ್ಕೊಳಗಾದಾಗ ಸುಬೋಧ ರಾಮರಾಯರೇ ವಹಿಸಿಕೊಂಡು ಸುಬೋಧ ಪ್ರಹ್ಲಾದರಾಯರ ಸಂಪಾದಕತ್ವದಲ್ಲಿ ನಡೆಸಿದರು.

ಭಾರತೀಯ ಇತಿಹಾಸ, ಸಂಸ್ಕೃತಿ, ನಾಗರಿಕತೆಗಳನ್ನು ತಮ್ಮ ಕಾಲದ  ಯುವಕರಿಗೆ ತಿಳಿಸಿಕೊಡಬೇಕೆಂಬ ನಿಟ್ಟಿನಲ್ಲಿ ಸಾಹಿತ್ಯ ಪ್ರಚಾರದಲ್ಲಿ ತೊಡಗಿದ್ದ ರಾಮರಾವ್ ಅವರು   ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರ  ಜೊತೆಗೆ ಸುಬೋಧ ಮಾಸ ಪತ್ರಿಕೆಯ ಮೂಲಕ ನಾಡುನುಡಿ, ಸಂಸ್ಕೃತಿ, ಆಧ್ಯಾತ್ಮಿಕ ವಿಷಯಗಳ ಪ್ರಸಾರವನ್ನು ಕೈಗೊಂಡರು. ಇದರಿಂದ ಹಲವಾರು ಗಣ್ಯರ ಪರಿಚಯವಾಗಿ ವ್ಯಾವಹಾರಿಕವಾಗಿಯೂ ಸಮಾಜದಲ್ಲಿ ಗುರುತಿಸಲ್ಪಟ್ಟರು.

ನಗರದ ಶಾಲೆಗಳಲ್ಲಿ ಹಳ್ಳಿಯಿಂದ ಓದಲು ಬರುತ್ತಿದ್ದ ಮಕ್ಕಳು  ಪಡುತ್ತಿದ್ದ ಬವಣೆಯನ್ನೂ ನೋಡಿ 1945ರಲ್ಲಿ ಮಾಧ್ವ ಯುವಕ ಸಂಘವನ್ನು ಸ್ಥಾಪಿಸಿ ದಾನಿಗಳ ಸಹಾಯದಿಂದ ಸ್ವಂತ ಕಟ್ಟಡವನ್ನೂ ಹೊಂದುವಂತೆ ಮಾಡಿದರು.

ಸಮಾಜದಲ್ಲಿ ಗಣ್ಯರೆನಿಸಿಕೊಂಡ ಸುಬೋಧ ರಾಮರಾಯರನ್ನು ಬೆಂಗಳೂರು ನಗರ ಸಭೆ ಸದಸ್ಯತ್ವವು ಹುಡುಕಿಕೊಂಡುಬಂತು.  ಆ ಹುದ್ಧೆಗೆ ಅವಿರೋಧವಾಗಿ ಆಯ್ಕೆಗೊಂಡು ಮೂರು ವರ್ಷಗಳ ಅವಧಿಯವರೆಗೆ ಕೆಲಸಮಾಡಿ ಆ ನಂತರದಲ್ಲಿ ಅಲ್ಲಿನ  ಹಲವರ ರೀತಿ-ನೀತಿಗಳು ಹಿಡಿಸದೆ ಆ ವ್ಯವಹಾರಗಳಿಂದ ದೂರವಾದರು.

ತಮ್ಮಲ್ಲಿ ತುಂಬಿದ್ದ  ಸ್ವಾಭಿಮಾನ, ಸ್ವಾತಂತ್ರಪ್ರೇಮ, ರಾಷ್ಟ್ರಭಕ್ತಿಗಳಿಂದ ರಾಮರಾವ್ ಅವರು  ಸ್ವತಂತ್ರ ಮುದ್ರಣಾಲಯವನ್ನು ಸ್ಥಾಪಿಸಿದರು, ಹಿಂದು ಧರ್ಮ ಮತ್ತು ಸಂಸ್ಕೃತಿಯ ತಿರುಳನ್ನು ಅರ್ಥಮಾಡಿಕೊಂಡು ತಮ್ಮ ಕಾಲದ  ಯುವ ಪೀಳಿಗೆಗೆ ಅನುಕೂಲವಾಗುವಂತೆ ಸುಬೋಧ ಕುಸುಮಾಂಜಲಿಯ ಮೂಲಕ ಶ್ರೀರಾಮ, ಕೃಷ್ಣ, ಭಗವಾನ್‌ ಬುದ್ಧ, ಮಧ್ವಾಚಾರ್ಯ, ಶಂಕರಾಚಾರ್ಯಬಸವೇಶ್ವರ, ರಾಮಾನುಜ, ಮಹಮದ್‌ ಪೈಗಂಬರ್, ಏಸುಕ್ರಿಸ್ತ ಮೊದಲಾದ ಕೃತಿಗಳನ್ನು ಪರಿಚಯಿಸಿದರು.  ಇದಲ್ಲದೆ  ಲೋಕನಾಯಕರಾದ ಅಬ್ರಹಾಂ ಲಿಂಕನ್‌, ಜೋಸೆಫ್‌ ಮ್ಯಾಝೆನಿಲಿಯೋಟಾಲ್‌ಸ್ಟಾಯ್‌, ಸಾಕ್ರೆಟಿಸ್‌ ಮುಂತಾದವರುಗಳ ಬಗ್ಗೆಯೂ ಪರಿಚಯ ಪುಸ್ತಕಗಳನ್ನು ಬರೆದು ಪ್ರಕಟಿಸಿದರು.

ರಾಮರಾವ್ ಅವರ ಸುಬೋಧ ಮಾಸಪತ್ರಿಕೆಯಲ್ಲಿ ವೈವಿಧ್ಯಮಯ ಲೇಖನಗಳು ಪ್ರಕಟಗೊಳ್ಳುತ್ತಿದ್ದವು. ಲಘುಕವನಗಳು, ಹರಟೆ, ನಾಟಕಗಳ ಅನುವಾದ, ಐಸಾಕ್‌ ನ್ಯೂಟನ್‌ಬೆಂಜಮಿನ್‌ ಫ್ರಾಂಕ್ಲಿನ್‌, ಥಾಮಸ್‌ ಆಲ್ವ ಎಡಿಸನ್‌ ಮುಂತಾದವರುಗಳ ವ್ಯಕ್ತಿ ಚಿತ್ರಣಗಳೂ ಪ್ರಕಟವಾದವು.

ರಾಮರಾಯವರು ತಾವು 1915ರಲ್ಲಿ ಪ್ರಾರಂಭಿಸಿದ ಸುಬೋಧ ಕುಸುಮಾಂಜಲಿಮಾಲೆಯಲ್ಲಿ 1933ರವರೆವಿಗೆ ಸುಮಾರು 140 ಪುಸ್ತಕಗಳನ್ನು  ಪ್ರಕಟಿಸಿದ್ದರು. ಈ ಮಾಲಿಕೆಯಲ್ಲಿ ಭಗವದ್ಭಕ್ತರು-26, ಧರ್ಮೋದ್ಧಾರಕರು-21, ಪೌರಾಣಿಕ ವ್ಯಕ್ತಿಗಳು-33,  ಚಾರಿತ್ರಿಕ ವ್ಯಕ್ತಿಗಳು-21, ಆಧುನಿಕ ಮಹಾಪುರುಷರು-19, ವಿದೇಶಿ ಮಹಾಪುರುಷರು-18 ಕೃತಿಗಳು ಪ್ರಕಟಗೊಂಡವು.   ಇವುಗಳ ಜೊತೆಗೆ ಎರಡು ಹಾಡುಹಬ್ಬಗಳೂ, ಯುವ ಜನಾಂಗಕ್ಕಾಗಿ ಬರೆದ ಕೃತಿ ಜೀವನಕ್ಕೆ ಬೆಳಕುಎಂಬ ಜ್ಞಾನ ಕೈಪಿಡಿಯೂ ಪ್ರಕಟಗೊಂಡವು.  ಜೀವನಕ್ಕೆ ಬೆಳಕುಕೃತಿಯು ನೀತಿಬೋಧನೆ, ಮಾನವೀಯ ಉಪದೇಶ ನಿದರ್ಶನಗಳಿಂದ ಕೂಡಿದ ಕೃತಿಯಾಗಿದೆ.

1925ರಿಂದ 29ರ ಅವಧಿಯಲ್ಲಿ ಕರ್ನಾಟಕ ಹರಿದಾಸ ಕೀರ್ತನ ತರಂಗಿಣಿಮಾಲೆಯಲ್ಲಿ ಶ್ರೀಪಾದರಾಜರು, ವ್ಯಾಸರಾಯರು, ವಾದಿರಾಜರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಮತ್ತು ಮೋಹನದಾಸರ ಕೀರ್ತನೆಗಳನ್ನು ಸಂಗ್ರಹಿಸಿ 9 ಸಂಪುಟಗಳಲ್ಲಿ  ಪ್ರಕಟಿಸಿದರು. ಇವರ ಇತರ ಕೃತಿಗಳೆಂದರೆ ಶ್ರೀರಾಮಾಯಣ ಕಥಾಸಾರ, ಶ್ರೀಮದ್ಭಾಗವತ ಕಥಾಸಾರ, ಶ್ರೀಮನ್ಮಹಾಭಾರತ ಕಥಾಸಾರ, ಮೈಸೂರಿನ ರಾಜ್ಯಲಕ್ಷ್ಮಿಯರು, ಮಧ್ವಸಿದ್ಧಾಂತ ಬಾಲಬೋಧೆ ಮುಂತಾದವು.  ಇವುಗಳಲ್ಲದೆ ಹೆಲನ್‌ಕೆಲ್ಲರ್, ಹೆನ್ರಿಫೋರ್ಡ್ ಕೃತಿಗಳನ್ನು ಇಂಗ್ಲಿಷ್‌ನಿಂದ  ಮತ್ತು ರಾಜಾಸ್ಥಾನಿ ಕಥಾವಳಿ ಕೃತಿಯನ್ನು ತೆಲುಗಿನಿಂದ ಅನುವಾದಿಸಿದ್ದರು.

ಸುಬೋಧ ರಾಮರಾವ್ ಅವರು ಶ್ರೀ ಜಗನ್ನಾಥದಾಸರ ಹರಿಕಥಾಮೃತ ಸಾರವನ್ನು ಟೀಕಾ ತಾತ್ಪರ್ಯ ಸಮೇತ ಬರೆದಿರುವುದಲ್ಲದೆ ಹರಿದಾಸರ ಸುಧಾಬಿಂದು ಎಂಬ ಶೀರ್ಷಿಕೆಯಲ್ಲಿ ಸಾವಿರದ ಏಳು ನೂರ ಹದಿನಾಲ್ಕು ಸೂಕ್ತಿಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ.

ಹೀಗೆ ತಮ್ಮ ಬಾಳಿನಲ್ಲಿ ಬೆಳಕು ಕಂಡು ಕೊಂಡಿದ್ದಲ್ಲದೆ ಇತರರ ಬಾಳಿಗೂ ಬೆಳಕಾಗುವಂತೆ ಬಾಳಿದ ಸುಬೋಧ ರಾಮರಾಯರು ಬರೆದ ಮೈಸೂರಿನ ರಾಜ್ಯಲಕ್ಷ್ಮಿಯರು ಎಂಬ ಪುಸ್ತಕವನ್ನು ಮೈಸೂರು ಸಂಸ್ಥಾನದ ಲೋಯರ್ ಸೆಕೆಂಡರಿ ತರಗತಿಗೆ ಪಠ್ಯವಾಗಿ ಆಯ್ಕೆಮಾಡಲಾಗಿತ್ತು.  ಕೆಂಗಲ್‌ ಹನುಮಂತಯ್ಯನವರ ಅಧ್ಯಕ್ಷತೆಯಲ್ಲಿ  ಜ್ಞಾನಶಿಲ್ಪಿಬಿರುದು ಗೌರವ, ಸಂಪದ್ಗಿರಿರಾಯರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಕನ್ನಡ ಕೂಟದಿಂದ ಸನ್ಮಾನ  ಹೀಗೆ ಹಲವಾರು ಸಂಸ್ಥೆಗಳಿಂದ ಸುಬೋಧ ರಾಮರಾವ್ ಅವರಿಗೆ ಸನ್ಮಾನ ಸಂದಿತ್ತು. 

ಕನ್ನಡ ನಾಡಿನ ಅದಮ್ಯ ಚೇತನರಾದ ಸುಬೋಧರಾಮರಾಯರು 1970ರ ಮಾರ್ಚ 14ರಂದು ಈ ಲೋಕವನ್ನಗಲಿದರು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


ಮಾಹಿತಿ ಕೃಪೆ: ಕಣಜ

Tag: Subodha Ramarao

ಕಾಮೆಂಟ್‌ಗಳಿಲ್ಲ: