ಗುರುವಾರ, ಆಗಸ್ಟ್ 29, 2013

ಎಸ್. ಎಸ್. ಕುಕ್ಕೆ

ಎಸ್. ಎಸ್. ಕುಕ್ಕೆ

ಎಸ್. ಎಸ್. ಕುಕ್ಕೆ ಎಂದು ಪ್ರಸಿದ್ಧರಾದ ಕಲಾವಿದ ಶ್ರೀಕಂಠಶಾಸ್ತ್ರಿ ಕುಕ್ಕೆ ಅವರು ಜೂನ್ 8, 1918ರಂದು ಶಿವಮೊಗ್ಗದಲ್ಲಿ ಜನಿಸಿದರು.  ತಂದೆ ಮಹಾನ್ ವಿದ್ವಾಂಸರಾಗಿದ್ದ ಸುಬ್ರಹ್ಮಣ್ಯ ಶಾಸ್ತ್ರಿಗಳು.  ತಾಯಿ ಸಂಕಮ್ಮನವರು.  ಚಿಕ್ಕಂದಿನಿಂದಲೂ ಕುಕ್ಕೆಯವರಿಗೆ ಚಿತ್ರ ಬರೆಯುವ ಗೀಳು.  ಶಾಲೆಯಲ್ಲೂ ಪಾಠ ಕೇಳುವುದಕ್ಕಿಂತ ಚಿತ್ರ ರಚಿಸುವ ಗೀಳೇ ಹೆಚ್ಚಾಗಿತ್ತು.  ಒಮ್ಮೆ ಶಾಲೆಯಲ್ಲಿ ಉಪಾಧ್ಯಾಯರು ಪಾಠಮಾಡುತ್ತಿದ್ದರೆ ಅವರ ಚಿತ್ರವನ್ನೇ ಬಿಡಿಸುತ್ತಾ ಕುಳಿತಿದ್ದ ಬಾಲಕ ಕುಕ್ಕೆಯವರಿಗೆ ಪ್ರಶ್ನೆ ಕೇಳಿದ್ದೇ ಗಮನಕ್ಕೆ ಬರಲಿಲ್ಲ.  ಉತ್ತರ ಹೇಳಲಿಲ್ಲ ಎಂದು ಸಿಟ್ಟುಗೊಂಡ ಉಪಾಧ್ಯಾಯರು ನಾಗರಬೆತ್ತದ ಏಟುಕೊಟ್ಟರೆ, ಸಿಟ್ಟಿನ ಭರದಲ್ಲಿ ಹುಡುಗ ಕುಕ್ಕೆಯವರೂ ಬೆತ್ತ ಕಿತ್ತುಕೊಂಡು ಶಿಕ್ಷಕರಿಗೇ ತಿರುಗೇಟುಕೊಟ್ಟರಂತೆ.  ಸರಿ ಶಾಲೆಯಿಂದ ಉಚ್ಛಾಟನೆಗೊಂಡರು.

ಶ್ರೀಕಂಠಶಾಸ್ತ್ರಿ ಬರೆಯುತ್ತಿದ್ದ ಚಿತ್ರಗಳನ್ನು ನೋಡಿದ ಚಿತ್ರಕಲಾ ಶಿಕ್ಷಕರಾದ ರಾಮಕೃಷ್ಣರು ಪ್ರಶಂಸಿಸಿದರು. ಮದರಾಸಿನ ಲೋಯರ್‌ ಆರ್ಟ್ಸ್‌ ಪರೀಕ್ಷೆಯಲ್ಲಿ ಮತ್ತು ಹೈಯರ್‌ ಆರ್ಟ್ಸ್ ಪರೀಕ್ಷೆಯಲ್ಲಿ  ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು.  ಮುಂದೆ ಕುಕ್ಕೆಯವರು ಮೈಸೂರಿನ ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯಲ್ಲಿ ಕ್ರಾಫ್ಟ್ಸ್ ಮನ್ ಹುದ್ದೆಗೆ ಸೇರಿದರು. ಅದ್ಯಾಕೋ ಸರಿ ಎನಿಸದೆ ಅದನ್ನು ತೊರೆದು ಶಿವಮೊಗ್ಗೆಯಲ್ಲಿ ಫೋಟೋ ಸ್ಟುಡಿಯೋ ತೆರೆದರು. ಮದುವೆಯ ನಂತರ ಬೆಂಗಳೂರಿಗೆ ಬಂದು  ಕುಕ್ಕೆ ಬ್ರದರ್ಸ್ ಹೆಸರಿನಲ್ಲಿ ಸ್ಟುಡಿಯೋ ತೆರೆದರು.

ಮುಂದೆ ಕುಕ್ಕೆಯವರು  ಹೊನ್ನಪ್ಪ ಭಾಗವತರ ಸಂಪರ್ಕಕ್ಕೆ ಬಂದು ಮಹಾಕವಿ ಕಾಳಿದಾಸ ಮತ್ತು ಕು. ರಾ. ಸೀತಾರಾಮ ಶಾಸ್ತ್ರಿಗಳ ಸಂಪರ್ಕದಿಂದ ಕೈವಾರ ಮಹಾತ್ಮೆ ಚಲನಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದರು.

ಕುಕ್ಕೆಯವರದು ವೈವಿಧ್ಯಪೂರ್ಣ ಪ್ರತಿಭೆ.  ಚಿತ್ರಮಾಧ್ಯಮದಲ್ಲಷ್ಟೇ ಅಲ್ಲದೆ  ತೇಗ, ಬೀಟೆ, ಪ್ಲಾಸ್ಟರ್‌ ಆಫ್ ಪ್ಯಾರಿಸ್ ಮುಂತಾದ ಸಾಧನಗಳಲ್ಲೂ ಕೃತಿರಚನೆ ಮಾಡಿದರು. ಕೆಂಗಲ್ ಹನುಮಂತಯ್ಯನವರ ಆಶಯದಂತೆ ಕಾಂಗ್ರೆಸ್ ಅಧಿವೇಶನದ ಮುಖ್ಯದ್ವಾರದ ಕಲಾತ್ಮಕ ರಚನೆಯನ್ನು ಮಾಡಿದರು. ಇದನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು ಕಲಾವಿದರ ಸಂಸ್ಥೆ ತೆರೆಯಲು ನೆರವು ನೀಡಿದರು. ಮೈಸೂರಿನ ಚಿತ್ರಕಲಾ ಪರಿಷತ್ ಪ್ರಾರಂಭಿಸಿದ ಚಿತ್ರಕಲಾ ವಿದ್ಯಾಲಯ ಮತ್ತು ಅ.ನ. ಸುಬ್ಬರಾಯರ ಕಲಾಮಂದಿರಗಳಲ್ಲಿ ಹಲವು ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.

ಕುಕ್ಕೆಯವರು ಬಸವನಗುಡಿ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌, ವೆಂಕಟಪ್ಪ ಕಲಾ ಭವನ, ಮೈಸೂರಿನ ಲಲಿತ ಕಲಾ ಭವನ, ಮ್ಯಾಕ್ಸ್‌ ಮುಲ್ಲರ್‌ ಭವನ, ರಾಮ್‌ನೀಲ್ ಆರ್ಟ್ ಗ್ಯಾಲರಿ, ಮುಂತಾದೆಡೆ ಅನೇಕ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳನ್ನು ನಡೆಸಿದರು.

ಕುಕ್ಕೆಯವರಿಗೆ ಮೈಸೂರಿನ ವಸ್ತು ಪ್ರದರ್ಶನದಲ್ಲಿ ಸತತವಾಗಿ ಏಳು ವರ್ಷ ಪ್ರಥಮ ಬಹುಮಾನ ಸಂದಿತ್ತು. ಚಿಕ್ಕಮ್ಮ  ಚಿತ್ರಕ್ಕೆ ಪ್ರಜಾವಾಣಿ ಬಹುಮಾನ, ಕರ್ನಾಟಕ ಚಿತ್ರಕಲಾ ಪ್ರದರ್ಶನದಲ್ಲಿ ಪ್ರಥಮ ಬಹುಮಾನ, ಸಾಹಿತ್ಯ ಪರಿಷತ್ತಿನಿಂದ ಸನ್ಮಾನ, ರಾಜ್ಯ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಶ್ರೀಕಂಠಶಾಸ್ತ್ರಿ ಕುಕ್ಕೆ ಅವರಿಗೆ ಸಂದವು.

ಈ ಮಹನೀಯ ಕಲಾವಿದರು ಜನವರಿ 1, 1991ರಂದು ಈ ಲೋಕವನ್ನಗಲಿದರು.

Tag: S. S. Kukke

ಕಾಮೆಂಟ್‌ಗಳಿಲ್ಲ: