ಶುಕ್ರವಾರ, ಆಗಸ್ಟ್ 30, 2013

ಆನಂದಕಂದ - ಡಾ.ಬೆಟಗೇರಿ ಕೃಷ್ಣಶರ್ಮ

ಆನಂದಕಂದ - ಡಾ.ಬೆಟಗೇರಿ ಕೃಷ್ಣಶರ್ಮ

ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯುಎಂದು ಹಾಡಿದವರು ನಮ್ಮ ಆನಂದಕಂದರು.  ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶುಸಾಹಿತ್ಯ, ಮೀಮಾಂಸೆ, ವಿಮರ್ಶೆ, ಸಂಶೋಧನೆ, ಸಂಪಾದನೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಇಡೀ ನಾಡನ್ನು ಬೆಳಗಿ ಕನ್ನಡ ನಾಡಿನ ಅಸಂಖ್ಯಾತ ಪ್ರತಿಭೆಗಳನ್ನೂ ಹುಟ್ಟುಹಾಕಿದರು.  ಭಾರತದ ಸ್ವಾತಂತ್ರ್ಯ ಪ್ರಾಪ್ತಿ, ಕರ್ನಾಟಕತ್ವದ ಜಾಗೃತಿ ಮತ್ತು ಕರ್ನಾಟಕ ಏಕೀಕರಣಗಳಿಗೆ ತಮ್ಮ ಶಕ್ತಿ ಸರ್ವಸ್ವವನ್ನೂ ಧಾರೆಯೆರೆದು ದುಡಿದ ಕನ್ನಡ ಸಾಹಿತಿಗಳಲ್ಲಿ ಇವರದು ಸಿಂಹಪಾಲು.

ಆನಂದಕಂದಕನ್ನಡ ನಾಡಿನ ಸಾಹಿತಿಗಳಲ್ಲಿ ಅಗ್ರಗಣ್ಯರು.    ಬೆಟಗೇರಿ ಕೃಷ್ಣಶರ್ಮ ನಾಮಧೇಯ.  ಆನಂದಕಂದಇವರ ಕಾವ್ಯನಾಮ.  ಅವರು 1900ನೆಯ ಏಪ್ರಿಲ್ ತಿಂಗಳ 16ರಂದು ಗೋಕಾಕ ತಾಲ್ಲೂಕಿನ ಬೆಟಗೇರಿ ಎಂಬ ಹಳ್ಳಿಯಲ್ಲಿ ಜನಿಸಿದರು.  ತಂದೆ ಶ್ರೀನಿವಾಸರಾವ್.  ತಾಯಿ ರಾಧಾಬಾಯಿ.  ಬೆಳೆಯುವ  ವಯಸ್ಸಿನಲ್ಲೇ ಮಾತಾಪಿತೃ ವಿಯೋಗ.  ಹಲವಾರು ಬಾರಿ ವಿಷಮಶೀತಜ್ವರ, ಪ್ಲೇಗ್ ರೋಗಗಳಿಗೆ ಸ್ವಯಂ ತುತ್ತಾಗಿ ನಮ್ಮ ನಾಡಿನ ಪುಣ್ಯದಫಲವಾಗಿ ಪವಾಡವೆಂಬಂತೆ ಬದುಕುಳಿದರು. ಪ್ಲೇಗಿನ ಪರಿಣಾಮದಿಂದ ಅವರ ಕೈಕಾಲುಗಳ ಮೇಲೆ ಶಾಶ್ವತ ಪರಿಣಾಮ ಬೀರಿ ನಡೆಯುವಿಕೆಗೆ ಮತ್ತು ಬರೆಯುವಿಕೆಗೆ ತೀವ್ರ ಅಡಚಣೆಗಳನ್ನು ಒಡ್ಡಿದ್ದವು.  ಆದರೆ ಅವರ ಚೈತನ್ಯ, ದುಡಿಮೆಯ ಹಾದಿಯಲ್ಲಿ ಇವ್ಯಾವುವನ್ನೂ ಲೆಖ್ಖಿಸದೆ ನಿರಂತರವಾಗಿ ಮುಂದುವರೆದಿರುವುದನ್ನು ಅವರ ಅಸಂಖ್ಯಾತ ಸಾಧನೆಗಳ ರೂಪದಲ್ಲಿ ಕಾಣಬಹುದಾಗಿದೆ.

ಶ್ರೀ ಬೆಟಗೇರಿ ಕೃಷ್ಣಶರ್ಮರು ಹೆಚ್ಚಿನ ಶಿಕ್ಷಣ ಪಡೆದವರಲ್ಲ.  ಕನ್ನಡ ಮುಲ್ಕಿ ಪರೀಕ್ಷೆಯೇ (1917) ಅವರ ಕೊನೆಯ ಪರೀಕ್ಷೆ.   ಆದರೆ ಕನ್ನಡ, ಸಂಸ್ಕೃತ, ಮರಾಠಿ ಬಾಷೆಗಳ ಮೇಲೆ ಅವರ ಪ್ರಭುತ್ವ ಅಪರಿಮಿತ.  ಹಿಂದಿ ಇಂಗ್ಲಿಷ್ ಭಾಷೆಗಳನ್ನೂ ಬಲ್ಲವರಾಗಿದ್ದರು.  ಅವರ ಭಾಷಾ ಪಾಂಡಿತ್ಯಕ್ಕೆ ಸ್ವಪ್ರಯತ್ನ ಮತ್ತು ಅಪಾರವಾದ ಜ್ಞಾನಾಕಾಂಕ್ಷೆಗಳೇ ಮೂಲ ಕಾರಣ.  ಬೆಳಗಾವಿಯಲ್ಲಿ ಪ್ರಾರಂಭವಾಗಿದ್ದ ರಾಷ್ರೀಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಶರ್ಮರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು.  ಕರ್ನಾಟಕದ ಸಿಂಹರೆನಿಸಿದ್ದ ಶ್ರೀ ಗಂಗಾಧರರಾವ್ ದೇಶಪಾಂಡೆ ಮುಂತಾದವರ ಸಂಪರ್ಕದಿಂದ ಇವರ ರಾಷ್ಟ್ರೀಯತೆ ಸ್ಪಷ್ಟ ರೂಪ ಪಡೆಯಿತು.  ರಾಷ್ಟ್ರೀಯತೆಗೆ ಪೂರಕವಾಗುವ ಅನೇಕ ಹಾಡುಗಳನ್ನು ಈ ಅವಧಿಯಲ್ಲಿ ರಚಿಸಿದರು.  ಭಾವತೀವ್ರತೆ ಮತ್ತು ಗೇಯತೆಯಿಂದೊಡಗೂಡಿ ಜನತೆಯಲ್ಲಿ ದೇಶಾಭಿಮಾನ ಪ್ರಜ್ವಲಿಸುವಂತೆ ಮಾಡುವಲ್ಲಿ ಈ ಹಾಡುಗಳು ಯಶಸ್ವಿಯಾಗಿ ಅತ್ಯಂತ ಜನಪ್ರಿಯವಾದವು.  ಇಂಥ ಕೆಲವು ಹಾಡುಗಳು ರಾಷ್ರೀಯ ಪದ್ಯಾವಳಿ, ಗಾಂಧೀ ಗೀತ ಸಪ್ತಕ, ರಾಷ್ರೀಯ ಪದ್ಯಮಾಲೆ ಎಂಬ ಹೆಸರಿನಿಂದ 1921ರ ವರ್ಷದಲ್ಲಿ ಬೆಳಗಾವಿಯಲ್ಲಿ ಮುದ್ರಣಗೊಂಡವು.  ಈ ಹಾಡುಗಳು ಹೆಜ್ಜೆ ಹಾಕುತ್ತ ತಾಳಮೇಳದೊಂದಿಗೆ ಹಾಡುತ್ತ ಪಾದ ಸಂಚಲನ ಮಾಡಲು ಬಹಳ ಹೊಂದುತಿದ್ದವು.  ಅಂತೆಯೇ ಈ ಹಾಡುಗಳನ್ನು ಅನೇಕರು ಹೆಜ್ಜೆಯ ಹಾಡುಗಳೆಂಬುದಾಗಿಯೇ ಅಂದು ಕರೆಯುತ್ತಿದ್ದರು. 

ಎನಿತು ಇನಿದುಮತ್ತು ನನ್ನದು ಈ ಕನ್ನಡ ನಾಡುಎಂಬ ಕವನಗಳು ಮರಾಠಿ ಮೊಹಿತವಾದ ಬೆಳಗಾವಿಯಲ್ಲಿ ಕನ್ನಡ ಜಾಗೃತಿಯನ್ನು ಮೂಡಿಸಿತು.   ಬೆಳಗಾವಿಯಲ್ಲಿದ್ದಾಗ ಮಾತೃಭೂಮಿಪತ್ರಿಕೆಯ ಸಂಪಾದಕತ್ವದ ಹೊಣೆಯೂ ಶರ್ಮರ ಮೇಲೆ ಬಂದಿತು.  1925ರಲ್ಲಿ ಧಾರವಾಡಕ್ಕೆ ಬಂದು ಸ್ವಧರ್ಮಪತ್ರಿಕೆಯ ಸಂಪಾದಕತ್ವ ವಹಿಸಿದರು.  ಕನ್ನಡ ಏಳ್ಗೆಗಾಗಿ ಮನೋಹರ ಗ್ರಂಥಮಾಲೆಪ್ರಾರಂಭಕ್ಕೆ ಪ್ರೇರಣೆಯಾದರು.  ನವರಾತ್ರಿಯನ್ನು ನಾಡಹಬ್ಬವಾಗಿ ಆಚರಿಸುವಂತೆ ಕರೆಕೊಟ್ಟರು.  ಅದು ಎಲ್ಲರಿಗೂ ಆಕರ್ಷಕವೆನಿಸಿತು.  ಕರ್ನಾಟಕದ ಎಲ್ಲೆಡೆ ನಾಡಹಬ್ಬದ ಆಚರಣೆ ಮೊದಲಾಗಿ, ಕನ್ನಡದ ಜಾಗೃತಿಯ ಕಾರ್ಯಕ್ಕೆ ಅದೊಂದು ಸಾಧನವಾಯಿತು. 

1926ರಲ್ಲಿ ಬೆಟಗೇರಿಯವರು ಆರ್ಯವಿದ್ಯಾ ಶಾಲೆಯ ಶಿಕ್ಷಕರಾಗಿ ಬೆಂಗಳೂರಿಗೆ ಬಂದರು.  ಅವರ ಪ್ರತಿಭೆ ಅರಳಲು, ಪಾಂಡಿತ್ಯ ವರ್ಧಿಸಲು ದೇವುಡು, ಮಾಸ್ತಿ ಮುಂತಾದವರ ಪರಿಚಯ ಮತ್ತು ಒಡನಾಟಗಳಿಂದಾಗಿ ಬಹಳಷ್ಟು ನೆರವಾಯಿತು.  ಈ ವೇಳೆಗಾಗಲೇ ಅವರ ಕವನಗಳು ಸಾಹಿತಿಗಳ ಬಳಗದಲ್ಲಿ ವಿಶೇಷ ಸ್ಥಾನ ಗಳಿಸಿದ್ದವು.  ಮುದ್ಧನ ಮಾತುಮತ್ತು ಅರುಣೋದಯಎಂಬ ಎರಡು ಕವನಸಂಕಲನಗಳನ್ನು ಇದೇ ಅವಧಿಯಲ್ಲಿ ಪ್ರಕಟಿಸಿದರು.  ಇವುಗಳಿಂದಾಗಿ ಬೆಟಗೇರಿಯವರು ಶ್ರೇಷ್ಠಕವಿಗಳ ಸಾಲಿನಲ್ಲಿ ಸೇರಿಬಿಟ್ಟರು.  ಇಂಪಾದ ದನಿ, ಆಕರ್ಷಕ ಶೈಲಿಯ ಕಾವ್ಯ ವಾಚನದ ರೀತಿಗಳಿಂದ ಇವರು ಜನಮನ ಗೆದ್ದರು.  ಅನಂತರ ಇವರ ಗದ್ಯಕೃತಿಗಳೂ ಹೊರಬಂದವು.  1931ರಲ್ಲಿ ಸಣ್ಣಕಥೆಗಳ ಸಂಕಲನ ಬಡತನದ ಬಾಳುಮತ್ತು ಪ್ರಥಮ ಕಾದಂಬರಿ ಸುದರ್ಶನ1933ರಲ್ಲಿ ಪ್ರಕಟವಾದವು.  ಈಗ ಬೆಟಗೇರಿಯವರು ಅಗ್ರಗಣ್ಯ ಸಾಹಿತಿಗಳಾಗಿ ಮನ್ನಣೆ ಪಡೆದರು.

ಡಾ. ಬೆಟಗೇರಿ ಕೃಷ್ಣಶರ್ಮರು ಸದ್ದಿಲ್ಲದ ದುಡಿಮೆಗಾರರು; ಸಂಯೋಜಕರು.  ಹೊಟ್ಟೆ ಬಟ್ಟೆಯ ಚಿಂತೆ ಸದಾ ಬೆಂಬತ್ತಿರುತ್ತಿದ್ದರೂ ಬಾಡಿಗೆಯ ಮನೆಯೇ ನೆಲೆಯಾಗಿದ್ದರೂ ಇವರ ಕರ್ತೃತ್ವಶಕ್ತಿಗೆ ಇವಾವೂ ಅಡ್ಡಿಯನ್ನುಂಟು ಮಾಡಲಿಲ್ಲ.  1938ರಲ್ಲಿ ಜಯಂತಿಹೆಸರಿನ ಪತ್ರಿಕೆ ಪ್ರಾರಂಭಿಸಿದರು.  ಅಂದಿನ ಅತ್ಯಂತ ಮಹತ್ವದ ಪತ್ರಿಕೆಯನ್ನಾಗಿ ಅದನ್ನು ಬೆಳಗಿಸಿದರು.  ಜಯಂತಿಹೊಸ ಲೇಖಕರಿಗೆ ಗರಡಿಯಾಯಿತು, ಹಿರಿಯ ಬರಹಗಾರರ ಅಭಿವ್ಯಕ್ತಿಗೆ ವೇದಿಕೆ ಆಯಿತು.  ಜಯಂತಿಯ ಮೂಲಕ ಹೊಸಬರನೇಕರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಟ್ಟು ಅತ್ಯಂತ ಶ್ರೇಷ್ಠ ಸಾಹಿತಿಗಳೆನಿಸಿದ್ದಾರೆ.  ಎನ್ಕೆ, ಕಣವಿ, ಕಾಯ್ಕಿಣಿ, ಧಾರವಾಡಕರ, ಮಿರ್ಜಿ, ಸಿಂಪಿ, ಗದಗಕರ, ವಾಡಪ್ಪಿ ಮುಂತಾದವರು ಜಯಂತಿಯಿಂದ ಬೆಳಕಿಗೆ ಬಂದವರಲ್ಲಿ ಕೆಲವರು.  ಜಯಂತಿಕೃಷ್ಣಶರ್ಮರ 23 ವರ್ಷ ಕಾಲದ ಶ್ರಮ, ದೃಢ ಸಂಕಲ್ಪಗಳಿಂದ  ಅವ್ಯಾಹತವಾಗಿ ನಡೆದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ವೈಶಿಷ್ಟ್ಯದಿಂದ ಮೆರೆಯಿತು. 

ಡಾ. ಬೆಟಗೇರಿಯವರ ಕವನ ಸಂಗ್ರಹಗಳು ಒಟ್ಟಿಗೆ ಹದಿಮೂರು.  ಇವುಗಳಲ್ಲಿ ಐದು ಸಂಗ್ರಹಗಳು ರಾಷ್ರೀಯ ಭಾವನೆ ಪ್ರಚೋದಕ ಗೀತೆಗಳ ಸಂಕಲನಗಳು.  ಅಂದಿನ ಸ್ವಾತಂತ್ರ್ಯ ಚಳುವಳಿಯ ಯೋಧರಿಗೆ ಈ ಹಾಡುಗಳು ಮಂತ್ರಗಳಾಗಿದ್ದವು.  1926ರಿಂದ 1981ರ ಅವಧಿಯಲ್ಲಿ ಪ್ರಕಟಗೊಂಡ ಎಂಟು ಕವನ ಸಂಗ್ರಹಗಳು ಇವರ ವಿಕಾಸಗೊಂಡ ಪ್ರತಿಭೆಯ ಫಲಗಳು.  ಮುದ್ದನ ಮಾತು (1926), ಅರುಣೋದಯ (1926), ಕಾರಹುಣ್ಣಿಮೆ (1953), ವಿರಹಿಣಿ (1956), ಒಡನಾಡಿ (1956), ನಲ್ವಾಡುಗಳು (1598)ಉತ್ಸಾಹಗಾಥ (1972) ಇವು ಭಾವಗೀತೆಗಳ ಸಂಕಲನಗಳು, ಸಾಮಾಜಿಕ ಸಂವಚನಗಳು (1981) ವಚನ ಗೀತೆಗಳ ಸಂಕಲನ, ವಚನದ ಮಾದರಿಯ ರಚನೆಗಳಲ್ಲಿವೆ.

ಮುದ್ದನ ಮಾತುಮಗುವಿನ ಮುಗ್ಧಭಾವನೆಗಳನ್ನೂ, ವಿಧಾಯಕ ವಿಧ್ವಂಸಕ ಪ್ರವೃತ್ತಿಗಳನ್ನು, ವಿವಿಧ ವರ್ತನೆಗಳನ್ನು ಸುಂದರವಾಗಿ ಹಿಡಿದಿಟ್ಟಿವೆ.  ಅರುಣೋದಯ ಕೃತಿ ಎನಿತು ಇನಿದು ಈ ಕನ್ನಡ ನುಡಿಯುಅಂತಹ ಸುಂದರ ದೇಶ ಭಕ್ತಿ, ನಾಡು-ನುಡಿ ಅಭಿಮಾನ, ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಪ್ರಚೋದಕ ಕವನಗಳನ್ನು ಹೊರತಂದವು.  ಕಾರಹುಣ್ಣಿಮೆಪ್ರಕೃತಿ ಪ್ರೇಮದೊಂದಿಗೆ ಕವಿಯ ಆದರ್ಶಗಳನ್ನು ಬೆಸೆದಿವೆ.  ವಿರಹಿಣಿ’, ‘ಒಡನಾಡಿಮತ್ತು ನಲ್ವಾಡುಗಳುಪ್ರಣಯ, ಪ್ರೇಮ, ವಿರಹ, ಪ್ರೀತಿ ಮುಂತಾದ ಮಧುರ ಭಾವಗಳ ಸುತ್ತ ರಚಿತವಾದ ಸುಂದರ ಕವನಗಳನ್ನು ಹೊತ್ತು ತಂದಿವೆ.  ಉತ್ಸಾಹಗಾಥಾಸಾಮಾಜಿಕ ಕಳಕಳಿ ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ವಿವಿಧ ಭಾವಗಳನ್ನೊಳಗೊಂಡ ಕೃತಿಯಾಗಿದ್ದು ಆಶಾವಾದಿತ್ವ, ಮಾನವತೆಗಳಿಗೆ ಪ್ರಾಧಾನ್ಯತೆ ನೀಡುತ್ತ ವೈಚಾರಿಕತೆಗೆ ಹೊಳಹು ನೀಡುತ್ತದೆ. 

ಕನ್ನಡ ಸಣ್ಣಕಥೆಗಳ ಪ್ರಾರಂಭದ ಕಾಲದಲ್ಲಿಯೇ ಕೃಷಿ ಪ್ರಾರಂಭಿಸಿದವರಲ್ಲಿ ಡಾ. ಬೆಟಗೇರಿಯವರು ಪ್ರಮುಖರು.  ಇವರು 1932ರಿಂದ ಪ್ರಾರಂಭಗೊಂಡಂತೆ ಬಡತನದ ಬಾಳು, ಸಂಸಾರ ಚಿತ್ರ, ನಮ್ಮ ಬದುಕು, ಜನಪದ ಜೀವನ, ಮಾತನಾಡುವ ಕಲ್ಲು, ಕಳ್ಳರ ಗುರು ಮತ್ತು ಇತರ ಕಥೆಗಳು ಎಂಬ ಆರು ಕಥಾಸಂಕಲನಗಳನ್ನು ಹೊರ ತಂದಿದ್ದಾರೆ.  ಇವುಗಳಲ್ಲಿಯ ಹತ್ತು ಕಥೆಗಳನ್ನು ಆಯ್ದು ದಶಮಂಜರಿಹೆಸರಿನಿಂದ ಪ್ರಕಟಿಸಿದ್ದಾರೆ.  ತಾವು ಕಂಡುಂಡ ಜೀವನದ ಪ್ರಸಂಗಗಳನ್ನು ತಮ್ಮ ದೃಷ್ಟಿ ಧೋರಣೆಗಳ ಮೂಸೆಯಲ್ಲಿ ಪುಟಗೊಳಿಸಿ ಕತೆಗಳನ್ನು ರಚಿಸಿರುವುದು ಬೆಟಗೇರಿಯವರ ವೈಶಿಷ್ಟ್ಯ. 

ಆನಂದಕಂದಅವರ ಐದು ಕಾದಂಬರಿಗಳು ಮಾತ್ರ ಪ್ರಕಟವಾಗಿವೆ.  ಸುದರ್ಶನ, ರಾಜಯೋಗಿ, ಅಶಾಂತಿಪರ್ವ, ಮಲ್ಲಿಕಾರ್ಜುನ ಮತ್ತು ಮಗಳ ಮದುವೆ ಈ ಐದು ಕೃತಿಗಳಾಗಿವೆ.  ಸುದರ್ಶನಮತ್ತು ಮಗಳ ಮದುವೆಸಾಮಾಜಿಕ ಕಾದಂಬರಿಗಳು.  ಇನ್ನುಳಿದ ಮೂರೂ ಐತಿಹಾಸಿಕ ಕಾದಂಬರಿಗಳಾಗಿದ್ದು ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನೊಳಗೊಂಡಿವೆ. 

ಸಂಶೋಧನೆ, ಮೀಮಾಂಸೆ ಮತ್ತು ವಿಮರ್ಶೆಗೆ ಸಂಬಂಧಿಸಿದ ಬೆಟಗೇರಿಯವರ  'ಕರ್ನಾಟಕ ಜನಜೀವನ', 'ಸಾಹಿತ್ಯವು ಸಾಗಿರುವ ದಾರಿ', 'ನಮ್ಮ ಸಂಸ್ಕೃತಿ ಪರಂಪರೆ', 'ಸಾಹಿತ್ಯ ವಿಹಾರ' ಎಂಬ ಅವರ ನಾಲ್ಕು ಗ್ರಂಥಗಳು ಅವರ ಪಾಂಡಿತ್ಯ, ಪ್ರತಿಭೆ ಹಾಗೂ ಚಿಂತನಶೀಲತೆಗಳ ಮಧುರ ಫಲಗಳು.  ನಮ್ಮ ನಾಡಿನ ಚರಿತ್ರೆಯನ್ನು ಅಭ್ಯಸಿಸ ಬಯಸುವವರೆಲ್ಲರೂ ಓದಲೇ ಬೇಕಾದ ಮೇರುಗ್ರಂಥಗಳು.

1950ರಿಂದ ಬೆಟಗೇರಿಯವರು ಬಾನುಲಿ ರೂಪಕ ರಚನೆ ಪ್ರಾರಂಭಿಸಿದರು.  ಒಟ್ಟಿಗೆ ಇವರ 37ರೂಪಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ.  ಇವುಗಳಲ್ಲಿ ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿ ಗಂಡುಗಲಿ ಪಂಚಗಂಗಾ ಮುಂತಾದ ಹದಿನೇಳು ರೂಪಕಗಳು ನಾಲ್ಕು ಗ್ರಂಥಗಳಲ್ಲಿ ಪ್ರಕಟಗೊಂಡಿವೆ. 

ಜಾನಪದ ಕ್ಷೇತ್ರಕ್ಕೆ ಡಾ. ಬೆಟಗೇರಿಯವರು ಸಲ್ಲಿಸಿದ ಕೊಡುಗೆ ಅಪಾರ.  ಅವರು ಗ್ರಂಥ ರೂಪದಲ್ಲಿ ಸಲ್ಲಿಸಿದ ಸೇವೆಗಿಂತ ಮೌಖಿಕವಾಗಿ ಭಾಷಣ, ಚರ್ಚೆ, ವಿಚಾರವಿನಿಮಯ, ಮಾರ್ಗದರ್ಶನಗಳ ರೂಪದಲ್ಲಿ ಮಾಡಿದ ಕಾರ್ಯದ ವ್ಯಾಪ್ತಿ ಅಪರಿಮಿತ, ಅಮೂಲ್ಯ.  ಬೀಸುವ ಕಲ್ಲಿನ ಹಾಡುಗಳು’, ‘ನಾಗಮಂಗಲ ಜಾನಪದ ಸಮ್ಮೇಳನದ ಅಧ್ಯಕ್ಷೀಯ ಭಾಷಣಮತ್ತು ಕನ್ನಡ ಜಾನಪದ ಸಾಹಿತ್ಯಡಾ. ಬೆಟಗೇರಿ ಕೃಷ್ಣಶರ್ಮರ ಪ್ರಕಟಿತ ಜಾನಪದ ಕೃತಿಗಳು.  ಇದರಾಚೆಗೆ  ಜಯಂತಿಪತ್ರಿಕೆಯನ್ನೊಳಗೊಂಡಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟವಾದ ಜಾನಪದ  ಬರಹಗಳು ಅಸಂಖ್ಯವಾಗಿವೆ. 

ಡಾ, ಬೆಟಗೇರಿಯವರು ದಾಸ ಸಾಹಿತ್ಯ ಮತ್ತು ಬೇರೆ ಕೆಲವು ಗ್ರಂಥಗಳನ್ನು ಬಹಳ ಶಾಸ್ತ್ರೀಯವಾಗಿ ಸಂಪಾದಿಸಿದ್ದಾರೆ.  ಪುರಂದರದಾಸರ ಸಮಗ್ರ ಸಾಹಿತ್ಯ ಸಂಪಾದನೆ, ಕನಕದಾಸರ ಭಕ್ತಿಗೀತೆಗಳು ಮುಂತಾದವನ್ನು ಶಾಸ್ತ್ರೀಯವಾಗಿ ಸಂಗ್ರಹ ಮಾಡಿರುವ ಕೀರ್ತಿ ಬೆಟಗೇರಿಯವರಿಗೆ ಸಲ್ಲುತ್ತದೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿರ್ವಹಿಸಿದ ಸಣ್ಣ ಅವಧಿಯ ಕಾರ್ಯದಲ್ಲಿ  ಅಕ್ರೂರಚರಿತ್ರೆ’, ‘ಮೋಹನ ತರಂಗಿಣಿ’, ‘ಕುಮಾರವ್ಯಾಸ ಭಾರತಕೃತಿಗಳು ಪ್ರಕಟವಾಗಲು ಪ್ರಧಾನ ಪಾತ್ರ ನಿರ್ವಹಿಸಿದರು.  ನಂತರದಲ್ಲಿ ಪ್ರಸನ್ನ ವೆಂಕಟದಾಸರ ಭಾಗವತ’, ‘ಹರಿದಾಸ ಭಕ್ತಿಸಾಧನೆಎಂಬ ಎರಡು ಗ್ರಂಥಗಳನ್ನು ಪ್ರಕಟಿಸಿದರು. 

ಕನ್ನಡ ಪ್ರಾಥಮಿಕ ಶಾಲೆಯ ತರಗತಿಗಳಿಗಾಗಿ ವಾಚನ ಮತ್ತು ಪೂರಕ ಜವಾಬ್ಧಾರಿಯನ್ನೂ ಸಹಾ ಸೊಗಸಾಗಿ ನಿರ್ವಹಿಸಿದ ಕೀರ್ತಿ ಬೆಟಗೇರಿಯವರದು.  ಪೂರಕ ಪಾಠಗಳಾಗಿ ಅವರು ನಿರ್ಮಿಸಿದ ಚಂದ್ರಹಾಸ, ಭೀಷ್ಮ, ಲವಕುಶದಂತಹ ಕೃತಿಗಳು ವಿದ್ಯಾರ್ಥಿಗಳಿಂದಲೂ ಶಿಕ್ಷಕರಿಂದಲೂ ಪ್ರಶಂಸಿಸಲ್ಪಟ್ಟ ಸುಂದರ ಕಾರ್ಯಗಳು.  ಮಕ್ಕಳಿಗಾಗಿ ಬಸವಣ್ಣನವರು ಎಂಬ ಕೃತಿಯನ್ನು ಸಹಾ ಬೆಟಗೇರಿಯವರು ಪ್ರಕಟಿಸಿದ್ದರು.  ಸಂಸ್ಕೃತ ಭಾಷೆಯ ಮಧ್ಯಮ ಪ್ರಯೋಗಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದರು. 

ಆರು ದಶಕಗಳಿಗೂ ಮಿಕ್ಕಿ ಅವ್ಯಾಹತವಾಗಿ ಶ್ರೀ ಬೆಟಗೇರಿ ಕೃಷ್ಣಶರ್ಮರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಬಹುಮುಖ ಕೊಡುಗೆಗಳಿಗೆ ಸಂದ ಗೌರವಗಳು ಅನೇಕ.  ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ಸಮ್ಮೇಳನದ ಅಧ್ಯಕ್ಷತೆ, ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದವು ಅವರಿಗೆ ಸಂದವು. 

ಡಾ. ಬೆಟಗೇರಿ ಕೃಷ್ಣಶರ್ಮರು ನಮ್ಮ ನಾಡಿಗೆ ಅಪರಿಮಿತವಾಗಿ ಶ್ರಮಿಸಿ 1982ನೆಯ ಅಕ್ಟೋಬರ್ ತಿಂಗಳ 30ರಂದು ಧಾರವಾಡದ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು.  ಡಾ. ಬೆಟಗೇರಿ ಕೃಷ್ಣಶರ್ಮರು ಬರಹ ಮತ್ತು ಬದುಕುಗಳೆರಡರಲ್ಲಿಯೂ ಅಸದೃಶರಾಗಿ ಜನ-ಮನ ರೂಪಿಸಿದ ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳಾಗಿದ್ದವರು.  ಈ ಮಹಾನ್ ರಾಯಭಾರಿಗಳಿಗೆ ನಾವೆಷ್ಟು ಋಣಿಗಳಾಗಿದ್ದರೂ ಕಡಿಮೆಯೇ.  ಈ ಮಹಾನ್ ವ್ಯಕ್ತಿತ್ವದ ತೇಜೋ ಚೇತನಕ್ಕೆ ನಮ್ಮ ಭಕ್ತಿಪೂರ್ವಕ  ನಮನಗಳು.

(ಆಧಾರ: ಜ್ಯೋತಿ ಹೊಸೂರ ಅವರು ಬರೆದಿರುವ ಆನಂದಕಂದ ಬರಹವನ್ನು ಈ ಲೇಖನ ಆಧರಿಸಿದೆ)
ಚಿತ್ರಕೃಪೆ: ಮೋಹನ್ ವರ್ಣೇಕರ್

Tag: Ananda Kanda, Betageri Krishna Sharma

ಕಾಮೆಂಟ್‌ಗಳಿಲ್ಲ: