ಸೋಮವಾರ, ಆಗಸ್ಟ್ 26, 2013

ವಿ. ಕೃ. ಗೋಕಾಕ್

ವಿ. ಕೃ. ಗೋಕಾಕ್

ಡಾ. ವಿನಾಯಕ ಕೃಷ್ಣ ಗೋಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಚಿತ್ರ ಅಂತರಾಷ್ಟ್ರೀಯ ಖ್ಯಾತಿಯ ಎತ್ತರದ ವ್ಯಕ್ತಿ.  ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ ಧ್ವನಿ, ಗಂಭೀರ ನಿಲುವು.  ಈ ಪರಿಪಕ್ವ ವ್ಯಕ್ತಿತ್ವದ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಆಡಳಿತ ನಿರ್ವಹಿಸಿದ ಕುಲಪತಿಯ ವರ್ಚಸ್ಸಿದೆ. ಶಿಕ್ಷಣವೇತ್ತರ ವೈಚಾರಿಕ ಪ್ರಗಲ್ಪತೆ ಇದೆ, ಪ್ರಾಧ್ಯಾಪಕನ ಪ್ರತಿಭೆ ಇದೆ, ಅನುಭವ ತಪಸ್ಸಿದೆ, ಅನುಭಾವ ಸಿದ್ಧಿಯಿದೆ, ಪ್ರಪಂಚ ಪಯಣಿಗನ ವಿಶಾಲ ಜ್ಞಾನವಿದೆ, ಬೌದ್ಧಿಕ ಔನ್ನತ್ಯವಿದೆ, ಸೃಜನ ಕವಿಯ ಅಂತಃಸ್ಫುರಣವಿದೆ, ಯೋಗಿಯ ನಿಷ್ಕಾಮ ಬುದ್ಧಿಯಿದೆ. 

ಆಗಸ್ಟ್ 9, 1909 ವಿನಾಯಕ ಕೃಷ್ಣ ಗೋಕಾಕರು ಜನಿಸಿದ ದಿನ.  ಧಾರವಾಡದಲ್ಲಿ ಪ್ರಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಗೋಕಾಕರು ಮುಂದೆ  ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯಲು ಪರೀಕ್ಷೆಗೆ ಕುಳಿತರು.  ಅವರಿಗೆ ಅಲ್ಲಿ ಯಶಸ್ಸು ಪಡೆಯುವ ಸಂಪೂರ್ಣ  ಭರವಸೆ  ಇತ್ತು.  ಇನ್ನೂ ಮೌಖಿಕ ಪರೀಕ್ಷೆ ಆಗುವುದರಲ್ಲಿತ್ತು.  ತತ್ಪೂರ್ವದಲ್ಲಿ ಕಾಂಟಿನೆಂಟಲ್ ಪ್ರವಾಸಕ್ಕೆಂದು ಹೊರಟರೆ ದಾರಿಯಲ್ಲಿ ಎಡಿನ್ ಬರೋದಲ್ಲಿ ತೀವ್ರತರವಾದ ಕರುಳು ಬೇನೆಯಿಂದ ಬಳಲುತ್ತಾ ಚಿಕಿತ್ಸೆಗೆ ಒಳಗಾಗಬೇಕಾಯಿತು.  ವೈವಾ ತಪ್ಪಿ ಹೋಗಿ ಆಕ್ಸ್ ಫರ್ಡ್ ಪ್ರಥಮ ದರ್ಜೆಯ ಉತ್ತೀರ್ಣತೆಯ ಆಸೆ ಹುಸಿಯಾಯಿತು ಎಂದುಕೊಂಡರು.  ಗೋಕಾಕರ ಲಿಖಿತ ಪರೀಕ್ಷೆಯ ಉಜ್ವಲತೆ ಎಷ್ಟು ಶ್ರೇಷ್ಠವಾಗಿತ್ತೆಂದರೆ ವೈವಾ ಪರೀಕ್ಷೆ ಇಲ್ಲದೆಯೇ ಆಕ್ಸ್ ಫರ್ಡ್ ಪರಿಣತರು ಗೋಕಾಕರನ್ನು ಶ್ರೇಷ್ಠ ದರ್ಜೆಯ ಉತ್ತೀರ್ಣತೆಗೆ ಪರಿಗಣಿಸಿದರು.

ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪ ಪ್ರಾಧ್ಯಾಪಕರು, ಸಾಂಗ್ಲಿ ವಿಲಿಂಗ್ಡನ್ ಕಾಲೇಜು, ವೀಸನಗರ, ಕೊಲ್ಲಾಪುರ, ಧಾರವಾಡದ ಕರ್ನಾಟಕ ಕಾಲೇಜು ಮುಂತಾದೆಡೆ ಪ್ರಿನ್ಸಿಪಾಲರು, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ, ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರಿಂದ ಸ್ಥಾಪಿಸಲ್ಪಟ್ಟ 'ಪ್ರಶಾಂತಿ ನಿಲಯ'ದ ಪೂರ್ಣ ವಿದ್ಯಾಪೀಠದ ಕುಲಪತಿ ಹೀಗೆ ಹಲವಾರು ಪ್ರತಿಷ್ಟಿತ ಹುದ್ದೆಗಳನ್ನು ಗೋಕಾಕರು ನಿರ್ವಹಿಸಿದರು. 

ಕನ್ನಡ ಕಾವ್ಯಾಸಕ್ತರು ಗೋಕಾಕರ ಕವಿತೆಯ ಬಗ್ಗೆ ಆಸಕ್ತಿಯನ್ನೂ ಉತ್ಸಾಹವನ್ನು ಮೊದಲು ತಾಳಿದ್ದು ಅವರು 1936-37ರಷ್ಟು ಹಿಂದೆಯೇ ಬರೆದು  1940ರ ವೇಳೆಗೆ ಪ್ರಕಟಿಸಿದ ಸಮುದ್ರಗೀತೆಗಳುಸಂಗ್ರಹದಿಂದಲೇ.  ವಾಸ್ತವವಾಗಿ ಗೋಕಾಕರ ಸಮುದ್ರಗೀತಗಳುಅವರ ಕಾವ್ಯದ ನಿಲುವುಗಳನ್ನು ಅರ್ಥಮಾಡಿಕೊಳ್ಳಲು ಅಗತ್ಯವಾದ ಹಲವು ಮೂಲಮಾನಗಳನ್ನು ಒದಗಿಸುವ ಕೃತಿಯಾಗಿದೆ. ಈ ಕೃತಿ, ಅವರು ಇಂಡಿಯಾದಿಂದ ಇಂಗ್ಲೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಹಡಗಿನ ಮೇಲೆ ಪ್ರಯಾಣ ಹೊರಟಾಗ ಅವರು ಕಂಡುಂಡ ಅನುಭವಗಳನ್ನು ಕುರಿತದ್ದು. ಅಂದರೆ ಇದು ಒಬ್ಬ ಪ್ರವಾಸಿಯಾಗಿ ಗೋಕಾಕರು ಹಡಗಿನಲ್ಲಿ ಹೊರಟಾಗ, ಕಡಲ ಪಯಣದ ಉದ್ದಕ್ಕೂ ಅವರು ವಿವಿಧ ಋತುಮಾನಗಳಲ್ಲಿ ಕಂಡ ಕಡಲಿನ ದೃಶ್ಯವೈವಿಧ್ಯಗಳನ್ನೂ ಪಯಣದ ಹಾದಿಯೊಳಗಿನ ಹಲವು ದೇಶಗಳ ಇತಿಹಾಸ ನಾಗರಿಕತೆಗಳ ಬಗ್ಗೆ ತೋರಿದ ಪ್ರತಿಕ್ರಿಯೆಗಳನ್ನೂ, ಹಡಗಿನ ಹೊರಭಾಗದ ಹಾಗೂ ಒಳಭಾಗದ ಬದುಕನ್ನೂ ಕುರಿತ ನಿರೂಪಣೆಯಾಗಿದೆ. ಮತ್ತು ಈ ಬಗೆಯ ಬರೆಹ ಕನ್ನಡದಲ್ಲಿ ಆವರೆಗೆ ಇರಲಿಲ್ಲವೆಂಬುದನ್ನು ನೆನೆದರೆ, ಪ್ರವಾಸಾನುಭವದಂಥ ವಸ್ತುವೊಂದು ಕನ್ನಡ ಕಾವ್ಯದೊಳಕ್ಕೆ ಗೋಕಾಕರ ಮೂಲಕಬಂದಿತೆಂಬುದು, ವಿಶೇಷವಾದ ಸಂಗತಿಯಾಗಿದೆ. ಅಷ್ಟೇ ಅಲ್ಲ ಅವರ ಮುಂದಿನ ಬರೆವಣಿಗೆಯನ್ನು ನೋಡಿದರೆ, ಅವರ ಬರಹದ ಬಹುಪಾಲು ಈ ಬಗೆಯ ಪ್ರವಾಸಾನುಭವಗಳಿಂದ ತುಂಬಿಕೊಂಡಿದೆ ಎನ್ನುವುದು ಸ್ವಾರಸ್ಯದ ವಿಷಯವಾಗಿದೆ. ಅವರೇ ತಮ್ಮದು ಮೂಲತಃ ಪ್ರವಾಸಿಯ ಮನೋಧರ್ಮವೆಂದು ಹೇಳಿಕೊಂಡಿದ್ದಾರೆ. ನಾನು ಪಯಣಿಗ, ಎಲ್ಲಿ ನೆಲ ನೀರ್ ಗಾಳಿ ನನ್ನನು ಸೆಳೆವುವೋ’ (ಕಾಶ್ಮೀರ) ಎಂದು ತಮ್ಮನ್ನು ವರ್ಣಿಸಿಕೊಡಿದ್ದಾರೆ.

ಅವರ ದ್ಯಾವಾಪೃಥಿವೀ’,ತ್ರಿಶಂಕುವಿನ ಪ್ರಜ್ಞಾ ಪ್ರಭಾತ’, ‘ಸಮುದ್ರದಾಚೆಯಿಂದ’, ‘ಸಮುದ್ರದೀಚೆಯಿಂದ’,  ‘ಇಂದಲ್ಲ ನಾಳೆ’, ‘ಸಿಮ್ಲಾ ಸಿಂಫನಿ’, ‘ಕಾಶ್ಮೀರ’,  ‘ಉಗಮಇಂಥ ಕೃತಿಗಳು ಅವರು ನೀರಮೇಲೂ, ನಭದ ಮೇಲೂ, ನೆಲದ ಮೇಲೂ ಕೈಕೊಂಡ ಪ್ರವಾಸಾನುಭವಗಳನ್ನೂ ದೇಶ-ವಿದೇಶಗಳ ನಾಗರಿಕತೆ-ಇತಿಹಾಸ-ಸಂಸ್ಕೃತಿಗಳಿಗೆ ಹಾಗೂ ವಿವಿಧ ನಿಸರ್ಗ ರಮ್ಯಾದ್ಭುತಗಳಿಗೆ ಅವರು ಸ್ಪಂದಿಸುವ ಪರಿಯನ್ನೂ ತುಂಬ ಸ್ವಾರಸ್ಯವಾಗಿ ವರ್ಣಿಸುತ್ತವೆ.

ಸಮುದ್ರಗೀತಗಳು’ (1940) ಸಂಕಲನಕ್ಕೆ ಮೊದಲು ಪ್ರಕಟವಾದ ಪಯಣ’ (1937) ಮತ್ತು ಅದಕ್ಕೂ ಮುನ್ನ ಪ್ರಕಟವಾದ ಅವರ ಪ್ರಪ್ರಥಮ ಕವನಸಂಗ್ರಹವಾದ ಕಲೋಪಾಸಕ’ (1934) ಇವುಗಳನ್ನು ಗಮನಿಸಿದರೆ, ಅವುಗಳ ಹಣೆ ಹೆಸರುಗಳೇ ಒಂದು ರೀತಿಯಲ್ಲಿ ಗೋಕಾಕರ ಮನೋಧರ್ಮದ ಸಂಕೇತಗಳಂತೆ ತೋರುತ್ತವೆ. ಅವರ ಸಮುದ್ರ ಗೀತಗಳುಮತ್ತು ದ್ಯಾವಾಪೃಥಿವೀ’-ಈ ಎರಡೂ ಕೃತಿಗಳಲ್ಲಿ ನೀರಮೇಲೂ, ನಭದಮೇಲೂ ಅವರು ಕೈಕೊಂಡ ಪ್ರವಾಸಾನುಭವದ ದೃಶ್ಯ ವೈವಿಧ್ಯಗಳು ವರ್ಣೋಜ್ವಲವಾಗಿ ನಿರೂಪಿತವಾಗಿವೆ. ಸಮುದ್ರಗೀತಗಳಲ್ಲಿ ಅಪರಂಪಾರ ಪಾರವಾರದ ಜಲದ ತಾಳ ಲಯ ಛಂದೋಗತಿಗಳನ್ನು ಕಂಡ ಮನಸ್ಸು ದ್ಯಾವಾಪೃಥಿವಿಯಲ್ಲಿ ವಿಮಾನಯಾನದ ಸಂದರ್ಭದಲ್ಲಿ ಕಂಡ ನಭೋ ವಿಸ್ತಾರದ ನೀರದಲೋಕದ ದೃಶ್ಯವೈಭವಗಳನ್ನು ವರ್ಣಿಸುತ್ತದೆ. ಹಾಗೆಯೆ ಉಗಮ’, ‘ಸಿಮ್ಲಾ ಸಿಂಫನಿ’, ‘ಕಾಶ್ಮೀರಇಂಥ ಕೃತಿಗಳಲ್ಲಿ ಈ ಇಳೆಯ ಛಂದೋಲಯ ವಿನ್ಯಾಸಗಳನ್ನು, ಅದರ ಗಿರಿ-ದರಿ-ನದಿ-ಸರೋವರಗಳ ಸೊಗಸನ್ನು ತಕ್ಕ ತನ್ಮಯತೆಯಿಂದ ಚಿತ್ರಿಸುತ್ತದೆ.

ಅವರ ತ್ರಿಶಂಕುವಿನ ಪ್ರಜ್ಞಾ ಪ್ರಭಾತಮಹಾಕಾವ್ಯದ ಮಿಡಿ ಎಂದು ಅವರೇ ಕರೆದುಕೊಂಡಿರುವ ಪೌರಾಣಿಕ ಕೃತಿ. ಇಲ್ಲಿ ಅವರ ಗಗನಯಾನದ ವಿಸ್ಮಯಾದ್ಭುತಗಳನ್ನು ಅನುಭಾವಿಕ ಸಂಕೇತ ನಿರ್ಮಿತಿಗೆ ಬಳಸಿಕೊಂಡಿರುವ ಕ್ರಮವು ವಿಶಿಷ್ಟವಾದುದಾಗಿದೆ. ಈ ಎಲ್ಲ ಪ್ರವಾಸಾನುಭವ ನಿರ್ಮಿತಿಗಳಲ್ಲಿ ಸೌಂದರ್ಯದ ಯಥಾಸ್ವರೂಪ ಕಥನದ ಜತೆಜತೆಗೇ ಭಾರತೀಯ ಪೌರಾಣಿಕ ಸಂಕೇತ-ಪ್ರತೀಕಗಳ ಸಂಯೊಜನೆಯ ಕ್ರಮವೂ ಬೆಸೆದುಕೊಂಡಿದೆ. ಹೀಗಾಗಿ ಸಮುದ್ರ ಗೀತಗಳು ಮತ್ತು ದ್ಯಾವಾಪೃಥಿವಿಯ ಜಲವಿಸ್ತಾರ ಹಾಗೂ ನಭೋಮಂಡಲದ ಅನುಭವಗಳು ಪುರಾಣ ಸ್ಮರಣೆಯ ಶಬ್ದ ಚಿತ್ರಗಳ ಮೂಲಕ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ. ಸಮುದ್ರ ಕೇವಲ ರಾಜನಾಗಿ ಕಾಣುವುದಿಲ್ಲ. ಗೋಪುರಗಳ ಕಟ್ಟಿ ಗೋಪುರಗಳನಳಿಸುವ ರುದ್ರ ಪುರುಷನಂತೆ,  ‘ನಟಸಾಮಾಟ್ರನಂತೆ, ‘ಮಾರುತಿ ಬಲಭೀಮನಂತೆ ಕಾಣುತ್ತದೆ. ಕಡಲ ತೆರೆಗಳು  ಅರುಣನ ಕುದುರೆಗಳಂತೆ, ಕಾಳ ರಕ್ಕಸರ ಕೋರೆ ಹಲ್ಲುಗಳ ಹೊಳಪಿನಂತೆ. ಹೆಡೆಯಲ್ಲಿ ಪುಷ್ಪರಾಗವಿಹ ಕಾಳಸರ್ಪಗಳಂತೆಕಾಣುತ್ತದೆ. ಆಕಾಶದ ತುಂಬ ತುರುಗಿದ ತುಂಡು  ಮುಗಿಲುಗಳು ಗಾಳಿಕುರುಬ ತರುಬಿದ ಉಣ್ಣೆ ಕುರಿಮರಿಗಳಂತೆ ಕಾಣುವುದಷ್ಟೆ ಅಲ್ಲ, ನೀರದಗಳು ನಾರದನಂತೆ ತೋರುತ್ತವೆ; ವೀಣಾಪಾಣಿಯ ಮುಯೂರಗಳಂತೆ ತೋರುತ್ತವೆ; ದುರ್ಗಿಯ ವಾಹನದ ಪಂಚಾನನ (ಸಿಂಹ)ದಂತೆ ಕಾಣುತ್ತವೆ. ಗೋಕಾಕರ ಒಟ್ಟು ಕಾವ್ಯವನ್ನು ಗಮನಿಸಿದರೆ, ಅವರ ಮನಸ್ಸು ಪುರಾಣ ಹಾಗೂ ಇತಿಹಾಸಗಳನ್ನು ತನ್ನ ಕಲ್ಪನೆಗೆ ಹಾಗೂ ಚಿಂತನೆಗೆ ಅಳವಡಿಸಿಕೊಳ್ಳುವ ಸಾಹಸಕ್ಕೆ ಒಲಿದದ್ದು ಎಂಬ ಸಂಗತಿ ಸ್ಪಷ್ಟವಾಗುತ್ತದೆ.

ಊರ್ಣನಾಭಾವತಾರಎಂಬುದು ಗೋಕಾಕರ ಒಂದು ವಿಶಿಷ್ಟ ಕವನ. ಊರ್ಣನಾಭಎಂದರೆ ಜೇಡ.  ಗೋಕಾಕರು ಈ ಕವಿತೆಯಲ್ಲಿ ದೈತ್ಯ ಜೇಡವೊಂದನ್ನು ಕವಿತೆಯ ಕೇಂದ್ರವನ್ನಾಗಿ ವರ್ಣಿಸುತ್ತಾರೆ. ಈ ದೈತ್ಯಗಾತ್ರದ ಜೇಡ ಇಲ್ಲಿ ಕೇಡಿನ (evil)ನ ಒಂದು ಪ್ರತೀಕವಾಗಿದೆ. ಇದು ಅನಾದಿ ಕಾಲದಿಂದಲೂ, ಶೇಷಶಾಯಿಯ ತಲ್ಪವಾದ ಆದಿಶೇಷನ ಕೆಳಗೇಹಾಲ್ಗಡಲಿನ ತಳದೊಳಗೆ ಪಾಚಿಕಟ್ಟಿರುವ ಒಂದೆಡೆ ಮನೆ ಮಾಡಿಕೊಂಡಿದೆ. ಈ ಜೇಡ ಸಮಯ ಕಾದು ಮೇಲೆ ಬಂದು ತನ್ನ ಬಲೆಗಳನ್ನು ಹರಡುತ್ತದೆ. ಗಂಗಾಪಾನದಲ್ಲಿ, ದೈನಂದಿನ ಉಣಿಸಿನಲ್ಲಿ, ಧ್ಯಾನದಲ್ಲಿ, ನೀತಿ ನಿಯಮಗಳಲ್ಲಿ ತನ್ನ ಬಲೆ ಹರಡಿ ಎಲ್ಲವನ್ನೂ ಭ್ರಷ್ಟಗೊಳಿಸುತ್ತದೆ. ಇಂಥ ಜೇಡನು ಹರಡುವ ಜಾಲದ ವರ್ಣನೆಯನ್ನು ಗೋಕಾಕರು ಈ ಕವಿತೆಯೊಳಗೆ ವಿವಿಧ ಪ್ರತೀಕಗಳಲ್ಲಿ ಚಿತ್ರಿಸಿ, ಕವಿತೆಯ ಕೊನೆಯಲ್ಲಿ ಪ್ರಶ್ನೆಯೊಂದನ್ನು ಎತ್ತುತ್ತಾರೆ- ಯಾರು ಜಗತ್ತಿನ ಒಡೆಯ? ಪದ್ಮನಾಭನೋ, ಊರ್ಣನಾಭನೋ?’ ಎಂದು. ಆದರೆ ಕವಿತೆ ಇಲ್ಲಿಗೇ ನಿಲ್ಲುವುದಿಲ್ಲ. ಸತ್‌ಶಕ್ತಿಯಂತೆ ಅಸತ್ ಶಕ್ತಿಯೂ ಅನಾದಿಯಾದುದು ಹಾಗು ಸಮಾನಾಂತರವಾದುದು ಎಂಬುದು  ನಿಜವಾದರೂ, ಸತ್‌ಶಕ್ತಿಯ ಬಗ್ಗೆ ಶ್ರದ್ಧೆಯನ್ನು ಕಳೆದುಕೊಳ್ಳಬಾರದು-ಎಂಬ ಸೂಚನೆಯನ್ನು ಈ ಕವಿತೆ ನೀಡುತ್ತದೆ. ಅದೇ ಹಾಲ್ಗಡಲಿನ ಶೇಷಶಾಯಿಯ ಅಂಕಿತದಲ್ಲಿರುವ ವಾಯುದೇವನು ಬಂದು, ಆದಿಜೇಡ ನೆಯ್ದ ಬಲೆಗಳನ್ನು ಚಲ್ಲಾಪಿಲ್ಲಿಯನ್ನಾಗಿ ಮಾಡಿದಂತೆ, ಮತ್ತೆ ಆದಿಜೇಡ ಹಾಲುಗಡಲಿನ  ತಳದಲ್ಲಿ ಪಾಚಿಗಟ್ಟಿಕೊಂಡ ಮೂಲ ನೆಲೆಗೆ ಹಿಂದಿರುಗಿದಂತೆ ಈ ಕವಿತೆಯ ವರ್ಣನೆ ಮುಂದುವರಿಯುತ್ತದೆ. ಕೊನೆಯದಾಗಿ  ಮತ್ತದಕೌತಣವಿತ್ತಿರಬೇಡ ತಪ್ಪುದಾರಿ ಹಿಡಿದುಎಂಬ ಎಚ್ಚರಿಕೆಯ ದನಿಯಿಂದ  ಈ ಕವಿತೆ ಮುಕ್ತಾಯವಾಗುತ್ತದೆ. ಎಂದರೆ ಕೇಡಿಗೆ ಆಹ್ವಾನ ಕೊಡುವವರು ಕೊನೆಗೂ ನಾವೇ; ಆದ ಕಾರಣ, ತಪ್ಪುದಾರಿ ನಡೆದು ಮತ್ತೆ ಮತ್ತೆ ಕೇಡಿಗೆ ಔತಣ ಕೊಡುವುದು ಬೇಡ ಎಂಬ ಎಚ್ಚರವೆ ನಮಗೆ ರಕ್ಷೆಯಾಗಬೇಕು. ಕೇಡನ್ನು ಕುರಿತು, ಹೊಸ ಪುರಾಣ (myth)ವೊಂದನ್ನು ಗೋಕಾಕರು  ಈ ಕವಿತೆಯೆಲ್ಲಿ ನಿರ್ಮಿಸಿರುವ ಕ್ರಮ ಅತ್ಯಂತ ವಿಶಿಷ್ಟವಾಗಿದೆ. ಮತ್ತು ಇದು ಗೋಕಾಕರ ತಾತ್ವಿಕ ನಿಲುವನ್ನು ಸಮರ್ಥವಾಗಿ ಪ್ರತಿಪಾದಿಸುವಂಥದಾಗಿದೆ.

ಅವರ ಉಗಮವೆಂಬ ಕವನ ಸಂಗ್ರಹದೊಳಗಿನ ಕವಿತೆಗಳು. ಪರ್ವತಾರಣ್ಯಗಳ ಉತ್ತುಂಗ ಶೃಂಗಗಳಲ್ಲಿ ನಿಬಿಡಾರಣ್ಯಗಳ ರುದ್ರ ರಮಣೀಯತೆಯಲ್ಲಿ ಆ ಎಲ್ಲ ಸೌಂದರ್ಯದ ವ್ಯಕ್ತ ರಹಸ್ಯದಂತೆ ಹರಿಯುವ ಹೊಳೆಯೊಂದರ ಉಗಮವನ್ನು ಗುರುತಿಸುವ ಅನ್ವೇಷಕನ ಪ್ರತೀಕದಲ್ಲಿ ಬದುಕಿನ ಮೂಲ ಸೆಲೆಗಳನ್ನು ಹುಡುಕುವ ಹಂಬಲದ ಅಭಿವ್ಯಕ್ತಿಯಾಗಿದೆ. ಅವರ ಮಹತ್ವಾಕಾಂಕ್ಷೆಯ ಕೃತಿಯಾದ ಭಾರತ ಸಿಂಧು ರಶ್ಮಿಋಗ್ವೇದದಿಂದ ತನ್ನ ವಸ್ತುವನ್ನು  ಆಯ್ದುಕೊಂಡ, ಸುಮಾರು ಕ್ರಿಸ್ತ ಪೂರ್ವದ ಎರಡು ಸಾವಿರ ವರ್ಷಗಳ ಕಾಲಮಾನದ ಭಾರತೀಯ ಸಂಸ್ಕೃತಿಯ ಒಂದು ವ್ಯಾಖ್ಯಾನವಾಗಿದೆ. ಹೀಗೆ, ವರ್ತಮಾನದ ವ್ಯಾಖ್ಯಾನಕ್ಕೆ ಪುರಾಣವನ್ನು ಬಳಸಿಕೊಳ್ಳುವ ಮತ್ತು ಹೊಸ ಪುರಾಣಗಳನ್ನು ನಿರ್ಮಾಣ ಮಾಡುವ ಕೆಲಸ ಸಾಮಾನ್ಯವಾದದ್ದಲ್ಲ.

ಹೊಸಗನ್ನಡದಲ್ಲಿ ಮುಕ್ತ ಛಂದಸ್ಸನ್ನು ಮೊದಲಿಗೆ ತಂದ ಯಶಸ್ಸು ಗೋಕಾಕರಿಗೇ ಸಲ್ಲಬೇಕು. ವಾಸ್ತವವಾಗಿ ಮುಕ್ತ ಛಂದಸ್ಸು, ಅದರ ಸಮಸ್ತ ಸಾಧ್ಯತೆಗಳೊಂದಿಗೆ ವೈವಿಧ್ಯತೆಯನ್ನೂ ಪಡೆದದ್ದು ಐವತ್ತರ ದಶಕದ ನವ್ಯಕಾವ್ಯದ ಸಂದರ್ಭದಲ್ಲಿಯೇ. ಈ ದೃಷ್ಟಿಯಿಂದ ನವ್ಯ ಕಾವ್ಯದಲ್ಲಿ ಪ್ರಯೋಗಗೊಂಡ ಈ ನೂತನ ಛಂದೋಭಿವ್ಯಕ್ತಿಯ ಪ್ರೇರಣೆ ನವ್ಯರಿಗೆ ದೊರೆತದ್ದು ಬಹುಃಶ ಗೋಕಾಕರ ಸಮುದ್ರ ಗೀತಗಳಿಂದಲೇ ಎಂದು ಕಾಣುತ್ತದೆ.  ಅವರು ಮುಕ್ತ ಛಂದಸ್ಸಿನಲ್ಲಿ  ನವ್ಯ ಕವಿತೆಗಳು’ (1950) ಎಂಬ ಸಂಗ್ರಹವನ್ನು ಪ್ರಕಟಿಸಿ, ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ಅವರ ಕಲ್ಪನೆಯ ನವ್ಯಕಾವ್ಯದ ಘೋಷಣೆಯನ್ನು ಮಾಡಿದ್ದರು. ಈ ಕಾರಣದಿಂದಾಗಿ ಗೋಕಾಕರನ್ನು ಚಾರಿತ್ರಿಕವಾಗಿ ನವ್ಯ ಸಾಹಿತ್ಯದ ಪ್ರವರ್ತಕರೆಂದು ತಿಳಿಯಲಾಗಿದೆ.

ವಚನ ಸಾಹಿತ್ಯದ ಪ್ರೇರಣೆಯಿಂದ ಸಮುದ್ರಗೀತಗಳ ಅಭಿವ್ಯಕ್ತಿಯನ್ನು ರೂಪಿಸಿಕೊಂಡ ಗೋಕಾಕರು, ಹಿಂದಿನ ಚಂಪೂಕಾವ್ಯದ ತಂತ್ರವನ್ನು ಹೊಸಗನ್ನಡ ಕವಿತೆಗೆ ಅಳವಡಿಸಲು ಪ್ರಯತ್ನಿಸಿದ್ದಾರೆಂಬುದು ಕುತೂಹಲದ ಸಂಗತಿಯಾಗಿದೆ. ಅವರ ತ್ರಿವಿಕ್ರಮರ ಆಕಾಶಗಂಗೆ’ (1943) ಮತ್ತು ಇಂದಲ್ಲ ನಾಳೆ’ (1965)-ಈ ಎರಡೂ ಹೊಸ ಬಗೆಯ ಚಂಪೂಕಾವ್ಯಗಳೆಂದು ಕರೆಯಲ್ಪಟ್ಟಿವೆ. ಇವುಗಳಲ್ಲಿ ಮೊದಲನೆಯದು ಸೌಂದರ್ಯ ಗೆಳೆತನಗಳ ಆಳವಾದ ಅನುಭವಗಳ ಕಥನ. ಇಲ್ಲಿ  ಪದ್ಯ ಭಾಗ ಸರಳ ರಗಳೆಯಲ್ಲಿದ್ದರೆ, ಗದ್ಯಭಾಗ ಹೊಸಗನ್ನಡದಲ್ಲಿದೆ. ಇಂದಿಲ್ಲ ನಾಳೆಮೂಲತಃ ಇಂಡಿಯಾದಿಂದ ವಿಮಾನದಲ್ಲಿ ಹೊರಟು ವಿವಿಧ ದೇಶಗಳನ್ನು ನೋಡಿಕೊಂಡು ಅಮೆರಿಕಾವನ್ನು ತಲುಪಿದ ಒಂದು ಪ್ರವಾಸ ಕಥನ. ಇಲ್ಲಿ ಪದ್ಯಗಳು ವಿವಿಧ ಛಂದೋ ರೂಪಗಳಲ್ಲಿವೆ. ಗದ್ಯ ಹೊಸಗನ್ನಡದಲ್ಲಿದೆ. ಹಿಂದಿನ ಕಂದ ವೃತ್ತ-ಗದ್ಯ ಸಮ್ಮಿಶ್ರವಾದ ಚಂಪೂವಿಗೆ ಪ್ರತಿಯಾಗಿ ಹೊಸಕಾಲದ ಗದ್ಯ ಪದ್ಯಗಳ ಅಳವಡಿಕೆಯಿಂದ ಮೂಡುವ ಕಾವ್ಯವು ಹೇಗೆ ತೋರಬಹುದು ಎಂಬ ಕುತೂಹಲವೆ ಈ ಪ್ರಯೋಗಕ್ಕೆ ಪ್ರೇರಣೆಯಾಗಿರಬಹುದು. ಹೀಗೆಯೆ ಗೋಕಾಕರ ಬಾಳದೇಗುಲದಲ್ಲಿ’ (1955) ಎಂಬ ಕಾವ್ಯಗುಚ್ಛವುಮಾನವ ಜೀವನದ ವ್ಯಕ್ತಿತ್ವದ ವಿವಿಧ ಮಾದರಿಗಳನ್ನು ಕುರಿತ ಚಿಂತನೆಯ ಶಿಲ್ಪವಾಗಿ, ಮಾಸ್ತಿಯವರ ನವರಾತ್ರಿಯನ್ನು ಸ್ವಲ್ಪ ಮಟ್ಟಿಗೆ ಹೋಲುತ್ತದೆ. ಈ ಎಲ್ಲವೂ ಗೋಕಾಕರ ಪ್ರಯೋಗ ಪರಿಣತಮತಿಗೆ ಸಾಕ್ಷಿಯಾಗಿದೆ.

ಇದು ಮುಖ್ಯವಾಗಿ ಗೋಕಾಕರ ಪ್ರಯೋಗ ಪ್ರಪಂಚ. ಅದೇ ಅವರ ಸಾಹಿತ್ಯ ನಿರ್ಮಿತಿಯ ಬಹುಪಾಲನ್ನು ಒಳಗೊಳ್ಳುತ್ತದೆ. ಅವರು ಬಹು ಹಿಂದೆಯೇ ಬರೆದ, 1268 ಪುಟಗಳಷ್ಟು ಸುದೀರ್ಘವಾದ ಕಾದಂಬರಿ ಸಮರಸವೇ ಜೀವನಎನ್ನುವುದು ಬಹುಶಃ ಕನ್ನಡದಲ್ಲಿಯೇ ಬೃಹದ್ಗಾತ್ರದ ಕೃತಿ. ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆಯನ್ನು ಕುರಿತು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅವರು ಬರೆದ ಕೆಲವು ಕೃತಿಗಳು, ಪಶ್ಚಿಮದ ಕಾವ್ಯ ತತ್ವಗಳ ಗಾಢವಾದ ತಿಳವಳಿಕೆಯನ್ನೂ, ಭಾರತೀಯ ಕಾವ್ಯಮೀಮಾಂಸೆ ಹಾಗೂ ಅರವಿಂದರ ವಿಚಾರಧಾರೆಗಳನ್ನೂ ಪ್ರಕಟಿಸುತ್ತವೆ. ಅವರ ಭಾರತ ಸಿಂಧುರಶ್ಮಿಸುಮಾರು ಇಪ್ಪತ್ತು ನಾಲ್ಕು ಸಾವಿರ ಪಂಕ್ತಿಗಳಷ್ಟು ಸುದೀರ್ಘವಾಗಿ, ಸಂಕೀರ್ಣ ಛಂದೋ ರೂಪದಲ್ಲಿರುವ, ಋಗ್ವೇದದಿಂದ ಆಯ್ದ ವಸ್ತುವನ್ನೊಳಗೊಂಡು ಇಡೀ ಭಾರತೀಯ ಭಾಷೆಗಳಲ್ಲಿ ಈವರೆಗೆ ನಿರ್ವಹಿತವಾಗದ, ಮತ್ತು ಕನ್ನಡದಲ್ಲಿ ಮೊಟ್ಟ ಮೊದಲಿಗೆ ನಿರ್ಮಿತಿಯಾದ ಒಂದು ಮಹಾಕಾವ್ಯ. ಹೀಗೆ ಸಾಹಿತ್ಯವನ್ನು ಒಂದು ಕಾಯಕದಂತೆ ಅವಿರತವಾಗಿ ನಡೆಯಿಸಿಕೊಂಡು ಬಂದ ಗೋಕಾಕರ ಸಾಹಿತ್ಯ ನಿರ್ಮಿತಿಯ ಹರಹು ತುಂಬ ದೊಡ್ಡದು.  ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗೋಕಾಕರು ಅಸಂಖ್ಯಾತ ವಿದ್ವತ್ಪೂರ್ಣ ಬರವಣಿಗೆಗಳನ್ನು ಮೂಡಿಸಿದ್ದಾರೆ. ವಿನಾಯಕರ ಬರಹಗಳು ಕಾವ್ಯ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಇತರ ಗದ್ಯಸಾಹಿತ್ಯ, ಶೈಕ್ಷಣಿಕ ಮತ್ತು ಅಧ್ಯಾತ್ಮಕ ಹೀಗೆ ವಿವಿಧ ಶಾಖೆಗಳಲ್ಲಿ ವ್ಯಾಪಿಸಿಕೊಂಡಿದೆ.

ಗೋಕಾಕರು ಮಹಾಯೋಗಿ ಶ್ರೀ ಅರವಿಂದರಲ್ಲಿ, ಮಹಾಮಾತೆಯವರಲ್ಲಿ ಅಪಾರ ಶ್ರದ್ಧೆ ವಹಿಸಿ ಅವರ 'ದಿವ್ಯಜೀವನ' ಅಭ್ಯಾಸ, ಅನುಸಂಧಾನ, ಅನುಷ್ಟಾನಗಳಲ್ಲಿ ಮುಂದುವರೆದು 'Sri Aurobindo Seer and Poet' ಎಂಬ ಸ್ಫೂರ್ತಿದಾಯಕ ಗ್ರಂಥವನ್ನು ಪ್ರಕಟಿಸಿದರು.  ಗೊಕಾಕರು ತಮ್ಮ ಆಧ್ಯಾತ್ಮ ಗುರುಗಳೆಂದು ಪಂತಬಾಳೇ ಕುಂದ್ರಿ ಮಹಾರಾಜರು, ಶ್ರೀಮಾತಾರವಿಂದರು, ಭಗವಾನ್ ಶ್ರೀ ಸತ್ಯಸಾಯಿಬಾಬಾ - ಈ ವಿಭೂತಿ ಪುರುಷರನ್ನು ನಂಬಿ ನಡೆದುಕೊಂಡಿರುವ ಅಂಶವನ್ನಿಲ್ಲಿ ನೆನೆಯಬಹುದು. 

ಗೋಕಾಕರಿಗೆ 1960ರಲ್ಲಿ ದ್ಯಾವಾ ಪ್ರಥಿವಿಗೆ ಕೆಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1961ರಲ್ಲಿ ಕೆಂದ್ರ ಸರ್ಕಾರದಿಂದ ಪದ್ಮಶ್ರೀಪ್ರಶಸ್ತಿ, ‘ಭಾರತ ಸಿಂಧು ರಶ್ಮಿಮಹಾಕಾವ್ಯಕ್ಕೆ 1990ರ ಜ್ಞಾನಪೀಠ ಪ್ರಶಸ್ತಿ’, ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಅಮೆರಿಕಾದ ಪೆಸಿಫಿಕ್ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪದವಿ, 1958ರಲ್ಲಿ ಬಳ್ಳಾರಿಯಲ್ಲಿ ನಡೆದ 40ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಅನೇಕ ಗೌರವಗಳು ಸಂದವು. 

ವಿ. ಕೃ. ಗೋಕಾಕರು 1992ರ ಏಪ್ರಿಲ್ 28ರಂದು ಈ ಲೋಕವನ್ನಗಲಿದರು.  ಈ ಮಹಾನ್ ಸಾಹಿತ್ಯ ಚೇತನಕ್ಕೆ ನಮ್ಮ ಅನಂತ ಗೌರವಗಳು.


ಆಧಾರ: ಡಾ. ಜಿ ಎಸ್ ಶಿವರುದ್ರಪ್ಪನವರ ಸಮಗ್ರ ಗದ್ಯ - 2ಮತ್ತು ಎನ್ಕೆ ಅವರ ಸಾಲುದೀಪಗಳು ಬರಹ

Tag: V. Kru. Gokak, V. K. Gokak

ಕಾಮೆಂಟ್‌ಗಳಿಲ್ಲ: