ಸೋಮವಾರ, ಆಗಸ್ಟ್ 26, 2013

ಸುಹಾಸಿನಿ

ಸುಹಾಸಿನಿ

ಸುಹಾಸಿನಿ ಅವರ ಹುಟ್ಟಿದ ಹಬ್ಬ ಕೂಡಾ ಆಗಸ್ಟ್ 15ರಂದು.  ಸುಹಾಸಿನಿ ಎಂದರೆ ಅಲ್ಲೊಂದು ಮಂದಹಾಸ.  ಸುಹಾಸಿನಿ ಎಂದರೆ  ಸಹಜತೆ.  ಸರಳತೆ.  ಚಿತ್ರರಂಗದಂತಹ ತಳುಕಿನ ಲೋಕದಲ್ಲಿ ಪೂರ್ಣ ವಿಭಿನ್ನವಾಗಿದ್ದೂ ವಿಶಿಷ್ಟರೆಂದರೆ ಸುಹಾಸಿನಿ.  ಅವರು ಸಿನಿಮಾ ಕ್ಷೇತ್ರದಲ್ಲಿ ಕ್ಯಾಮರಾ ಹಿಂದೆ ಕೆಲಸ ಮಾಡಬೇಕು ಅಂತ ಬಂದರೆ ಸಿನಿಮಾದ ಜನ ಅವರನ್ನು ಕ್ಯಾಮರಾ ಮುಂದೆ ತಂದು ನಿಲ್ಲಿಸಿದರು.  ಅಂದು ನೆಂಜತ್ತೆ ಕಿಳ್ಳಾದೆಚಿತ್ರದಲ್ಲಿ ಆಕಸ್ಮಿಕವಾಗಿ ಕ್ಯಾಮರಾ ಮುಂದೆ ಬಂದ ಸುಹಾಸಿನಿ ಇಂದು ಮಹಾನ್ ತಾರೆಯಾಗಿ, ದಕ್ಷಿಣ ಭಾರತದ ಎಲ್ಲಾ ಚಿತ್ರಗಳಲ್ಲೂ ಜನಸಾಗರಗಳ  ಮನವನ್ನು ಗೆದ್ದು, ನಟನೆ, ನಿರ್ದೇಶನ, ನಿರ್ಮಾಣ, ಹೀಗೆ ಹೋದಲ್ಲೆಲ್ಲಾ ತಮ್ಮ ಪ್ರತಿಭೆಯ ಸುಗಂಧವನ್ನು ಪಸರಿಸಿದವರು.

ಕನ್ನಡದಲ್ಲಿ ಉಷಾ, ಬೆಂಕಿಯಲ್ಲಿ ಅರಳಿದ ಹೂವು ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ  ಪರಿಚಿತರಾದ ಸುಹಾಸಿನಿ ಮುಂದೆ  ಸುಪ್ರಭಾತ, ಬಂಧನ, ಹೊಸ ನೀರು, ಮುತ್ತಿನ ಹಾರ, ಹಿಮಪಾತ, ಅಮೃತವರ್ಷಿಣಿ, ಯಾರಿಗೆ ಸಾಲುತ್ತೆ ಸಂಭಳ, ಮಾತಾಡು ಮಾತಾಡು ಮಲ್ಲಿಗೆ, ಹೆಂಡ್ತೀಗೆ ಹೇಳ್ತೀನಿ, ಸ್ಕೂಲ್ ಮಾಸ್ಟರ್, ಎರಡನೇ ಮದುವೆ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಕನ್ನಡಿಗರಿಗೆ ಅತ್ಯಂತ ಪ್ರಿಯರಾದ ಕಲಾವಿದೆಯರಲ್ಲಿ ಒಬ್ಬರಾಗಿದ್ದಾರೆ.   ಅದರಲ್ಲೂ ಸುಪ್ರಭಾತ, ಬಂಧನ, ಅಮೃತವರ್ಷಿಣಿಗಳಂತೂ ಅವಿಸ್ಮರಣೀಯ ದೃಶ್ಯಕಾವ್ಯಗಳು.

ಸಿಂಧು ಭೈರವಿಚಿತ್ರದಲ್ಲಿ ನೀಡಿದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿತು.  ದಕ್ಷಿಣ ಭಾರತದ ಪ್ರಸಿದ್ಧ ಕಲಾವಿದರಾದ ವಿಷ್ಣುವರ್ಧನ್, ಅನಂತನಾಗ್,   ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ಎಲ್ಲಾ ಪ್ರಸಿದ್ಧ ನಾಯಕನಟರು, ಎಲ್ಲಾ ಪ್ರಸಿದ್ಧ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ ತಾವೂ ಕೂಡಾ ಇಂದಿರಾಎಂಬ ಚಿತ್ರವನ್ನೂ, ‘ಪೆಣ್’  ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದರು.  ತಮ್ಮ ಪತಿ ಪ್ರಸಿದ್ಧ ನಿರ್ದೇಶಕರಾದ ಮಣಿರತ್ನಂ ಅವರೊಂದಿಗೆ ಉತ್ತಮ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳು.  ಇಷ್ಟೇ ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ಭಾಗವಹಿಕೆ ಹೀಗೆ ಅವರು ಬಿಡುವಿಲ್ಲದೆ ನಿರಂತರ ನಿರತ ವ್ಯಕ್ತಿ.  ಮುಕ್ತ ಚಿಂತನೆ, ನೇರ ನುಡಿ, ಸ್ನೇಹಶೀಲ ಪ್ರವೃತ್ತಿ, ಸೃಜನಶೀಲ ಚಟುವಟಿಕಗಳಿಂದ ಸುಹಾಸಿನಿ ಅವರು ಎಲ್ಲೆಲ್ಲೂ ಹೆಸರುವಾಸಿ.

ಕನ್ನಡ ಚಿತ್ರರಂಗದಲ್ಲಿ ತಮಗೆ ದೊರೆತ ಉತ್ತಮ ಅಭಿನಯದ ಅವಕಾಶಗಳ ಬಗೆಗೆ ಸದಾ ಸಂತಸಹೊಂದಿರುವ ಸುಹಾಸಿನಿ ಅವರು ಕನ್ನಡದಲ್ಲಿ ಯಾವುದೇ ಅವಕಾಶ ಬಂದರೂ ಅದಕ್ಕೆ ಸಹೃದಯತೆಯಿಂದ ಬಂದಿದ್ದಾರೆ.  ಒಂದು ರೀತಿಯಲ್ಲಿ ಕನ್ನಡಕ್ಕೂ ಅವರಿಗೂ ಒಂದು ರೀತಿಯ ಅಪೂರ್ವ ನಂಟು.  ಅವರ ತಂದೆ ಚಾರುಹಾಸನ್ ಅವರು ಕನ್ನಡದ ಗಿರೀಶ್ ಕಾಸರವಳ್ಳಿ ಅವರು ನಿರ್ದೇಶಿಸಿದ ತಬರನ ಕತೆಚಿತ್ರದಲ್ಲಿನ ಅಭಿನಯಕ್ಕೆ  ರಾಷ್ಟ್ರಪ್ರಶಸ್ತಿ ಪಡೆದರು;   ಅವರ ಚಿಕ್ಕಪ್ಪ ಕಮಲಹಾಸನ್ ಅವರು ಕನ್ನಡದಲ್ಲಿ ಕೋಕಿಲಾ, ಬೆಂಕಿಯಲ್ಲಿ ಅರಳಿದ ಹೂವು, ಪುಷ್ಪಕ ವಿಮಾನ , ರಾಮ ಶಾಮ ಭಾಮ ಮುಂತಾದ ಚಿತ್ರಗಳಲ್ಲಿ ನಟಿಸಿ ಪುಷ್ಪಕ ವಿಮಾನದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು; ಸುಹಾಸಿನಿ ಅವರ ಪತಿ ಮಣಿರತ್ನಂ ಮೊದಲು ಚಿತ್ರ ನಿರ್ದೇಶಿಸಿದ್ದು ಕನ್ನಡದ ಪಲ್ಲವಿ ಅನುಪಲ್ಲವಿ, ಸುಹಾಸಿನಿ ಅವರ ಮೊದಲ ಚಿತ್ರ 'ನೆಂಜತ್ತೆ ಕಿಳ್ಳಾದೆಚಿತ್ರದ ನಾಯಕ ಕನ್ನಡದ ಮೋಹನ್.  ಸುಹಾಸಿನಿ ಅವರು ಕನ್ನಡದಲ್ಲಿ ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಇನ್ನೂ ಅವರ ಪ್ರತಿಭೆ ಕನ್ನಡದಲ್ಲಿ ಮತ್ತಷ್ಟು ವಿಸ್ತಾರ ಕಾಣಲಿ ಎಂಬುದು ಕನ್ನಡಿಗರ ಆಶಯ.


ಸುಹಾಸಿನಿ ಅವರ ಸೃಜನ ಶೀಲ ಬದುಕು ನಿರಂತರ ಪ್ರಜ್ವಲಿಸುತ್ತಿರಲಿ.  ಅವರ ಬದುಕು ಸಂತಸ, ಸಾಧನೆ, ಯಶಸ್ಸುಗಳಿಂದ ತುಂಬಿರಲಿ ಎಂದು ಹಾರೈಸಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳೋಣ.

Tag: Suhasini

ಕಾಮೆಂಟ್‌ಗಳಿಲ್ಲ: