ಶನಿವಾರ, ಆಗಸ್ಟ್ 31, 2013

ಎಸ್ ಎನ್ ಶಿವಸ್ವಾಮಿ

ಎಸ್ ಎನ್ ಶಿವಸ್ವಾಮಿ

ಗುಂಡಮ್ಮ ಇಲಿಗಳಿಗಾಗಿ ಮಾರ್ಕೆಟ್ಟಿನಿಂದ ಒಂದು ಬೋನು ತಂದಿದ್ಲು. ಅದರೊಳಗೆ ಸಿಕ್ಕಿಸುವುದಕ್ಕೆ ಮನೆಯಲ್ಲಿ ಏನೂ ಇರಲಿಲ್ಲ. ಅವಸರದಲ್ಲಿ ಆಫೀಸಿಗೆ ಹೋಗುತ್ತಿದ್ದ ಪತಿ ಗುಂಡಪ್ಪನನ್ನು ತಡೆದು,

"ರೀ, ಆಫೀಸಿನಿಂದ ಬರ್ತಾ ಇಲಿಗಳಿಗೆ ಬೋಂಡಾನೋ ವಡೇನೋ ತನ್ನಿ" ಅಂದ್ಳು.

ಗುಂಡಪ್ಪ ಅನ್ಯಮನಸ್ಕನಾಗಿ,

"ಇಲಿಗಳಿಗೆ ಬೋಂಡಾ, ವಡೆ ಬೇರೆ ಕೇಡು! ಮನೇಲಿ ಇರೋದನ್ನ ತಿಂದುಕೊಂಡು ಬಿದ್ದಿರೋದಾದರೆ ಬಿದ್ದಿರ್ಲಿ. ಇಲ್ದಿದ್ರೆ ಮನೆ ಬಿಟ್ ಎಲ್ಲಾದ್ರೂ ಹೋಗೋಕ್ ಹೇಳು" ಅಂದ.

-----

ಪ್ರತಿಷ್ಠಿತ ಹಿರಿಯರೊಬ್ಬರು ತಮ್ಮ ಮನೆಯ ಬಳಿಯೇ ಇದ್ದ ಕಲಾಮಂದಿರದಲ್ಲಿ ನಡೆಯಲಿದ್ದ ಭಾಷಣಕ್ಕೆ ಮಾಮೂಲಿನಂತೆ ದಯಮಾಡಿಸಿದರು. ಮಂದಿರದ ಬಾಗಿಲಲ್ಲೇ ಅವರನ್ನು ಸ್ವಾಗತಿಸಿದ ವ್ಯವಸ್ಥಾಪಕರೊಬ್ಬರು ಕಾಫಿ ತರಿಸಲೇ ಸಾರ್?” ಅಂತ ಕೇಳಿದರು.

ಹಿರಿಯರು ನುಡಿದರು, “ಬೇಡಪ್ಪಾ ಕಾಫಿ ಕುಡಿದರೆ ನನಗೆ ಭಾಷಣದ ಸಮಯದಲ್ಲಿ ನಿದ್ದೆ ಬರೋಲ್ಲ

-----

ಭಾವೀ ಅಳಿಯನ ಜತೆ ಮಾತನಾಡುತ್ತಾ ಅರವಿಂದಯ್ಯನವರು ಅಳಿಯನ ಅಭಿಪ್ರಾಯಗಳ ಕಡೆಗೆ ಗಮನ ಹರಿಸಿದರು.

ಸರೋಜಿನಿಗೆ ತನ್ನ ಬ್ಯಾಂಕ್ ಕೆಲಸಕ್ಕೆ ರಾಜಿನಾಮೆ ಕೊಡೋಕೆ ಇಷ್ಟ ಇಲ್ಲ; ರಾಜಿನಾಮೆ ಕೊಡಬೇಕೂಂತ ನೀವೇನೂ ಒತ್ತಾಯಪಡಿಸೋದಿಲ್ಲ ತಾನೆ?”

ಭಾವೀ ಅಳಿಯನ ಉತ್ತರ ಥಟ್ಟನೆ ಬಂತು:

ಎಲ್ಲಾದ್ರೂ ಉಂಟೆ! ಇಬ್ಬರಲ್ಲಿ ಒಬ್ಬರಾದರೂ ಕೆಲಸ ಮಾಡಿ ಸಂಪಾದಿಸದೆ ಇದ್ದರೆ ಸಂಸಾರ ರಥ ಸಾಗೋದಾದ್ರೂ ಹ್ಯಾಗೆ!

----

ಇವೆಲ್ಲಾ ಕನ್ನಡದ ಪ್ರಖ್ಯಾತ ಹಾಸ್ಯಲೇಖಕ ಎಸ್. ಎನ್. ಶಿವಸ್ವಾಮಿ ಅಂದರೆ ನೆನಪಿಗೆ ಬರುವ ಹಲವಾರು ಹಾಸ್ಯ ಬರಹಗಳು. 

ಹಾಸ್ಯಸಾಹಿತ್ಯಕ್ಕೊಂದು ಘನತೆ, ಗೌರವ ತಂದುಕೊಟ್ಟ ಸೇಲಂ ನಂಜುಂಡಯ್ಯ ಶಿವಸ್ವಾಮಿಯವರು ನಾಲ್ಕು ದಶಕಗಳ ಕಾಲ ಸತತವಾಗಿ ಹೊಸತನ್ನು  ಅನ್ವೇಷಿಸುತ್ತಲೇ ಕಡೆಯವರೆವಿಗೂ ಪತ್ರಿಕೆಗಳಿಂದ ಬೇಡಿಕೆಯಲ್ಲಿದ್ದು ಹಾಸ್ಯಬರಹಗಾರರಾಗಿ ವಿಜೃಂಭಿಸಿದವರು.  ಎಸ್ ಎನ್ ಶಿವಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲಿ ಫೆಬ್ರುವರಿ 9, 1920ರಂದು  ಜನಿಸಿದರು. ತಂದೆ ಸೇಲಂ ನಂಜುಂಡಯ್ಯನವರು ವಕೀಲಿ ವೃತ್ತಿಯಲ್ಲಿದ್ದರು. ತಾಯಿ ಶಾರದಮ್ಮನವರು. ಶಿವಸ್ವಾಮಿ ಅವರ ವಿದ್ಯಾಭ್ಯಾಸವೆಲ್ಲಾ ಬೆಂಗಳೂರಿನಲ್ಲೇ ಜರುಗಿತು.  1942ರ ವರ್ಷದಲ್ಲಿ  ಸೆಂಟ್ರಲ್‌ ಕಾಲೇಜಿನಿಂದ ಬಿ.ಎಸ್ಸಿ. (ಆನರ್ಸ್) ಪದವಿ ಪಡೆದರು.   ಬಿ.ಎಸ್ಸಿ. ಆದ ನಂತರ ಉದ್ಯೋಗ ದೊರೆಯದ ಕಾರಣ  ಬರವಣಿಗೆ ಮತ್ತು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರು. ಬರೋಡದ ಕಾಲೇಜೊಂದರಲ್ಲಿ ವಿಜ್ಞನ ಪಾಠ ಹೇಳುವ ಅವಕಾಶ ದೊರಕಿತು. ಆದರೆ ಅಲ್ಲಿನ ರಾಜಕೀಯದಿಂದ ಬೇಸತ್ತು ಸೇರಿದ್ದು ಆಲ್‌ ಇಂಡಿಯಾ ರೇಡಿಯೋ. ಆಗ ಇದ್ದ ಫೆಡರಲ್‌ ರಿಪಬ್ಲಿಕ್‌ ಸರ್ವೀಸ್‌ ಕಮೀಷನ್‌ನಿಂದ ಆಯ್ಕೆಯಾಗಿ 1944ರ ಜನವರಿ 1ರಿಂದ ಪ್ರೊಗ್ಯ್ರಾಂ ಅಸಿಸ್ಟೆಂಟ್‌ ಮದರಾಸಿನ ಆಲ್‌ ಇಂಡಿಯಾ ರೇಡಿಯೊ ಸೇರಿದರು. ಈ ಹುದ್ದೆಯಲ್ಲಿ ತಮಿಳು, ತೆಲುಗು, ಮಲಯಾಳಂ ಭಾಷೆಗಳ ಮಧ್ಯೆ ಕನ್ನಡವನ್ನೂ ಬಿಂಬಿಸುವ ಕೆಲಸವನ್ನು ಪ್ರಾರಂಭಿಸಿದರು. ಬೀಚಿಯವರ ಸ್ನೇಹ ದೊರೆತ ಮೇಲೆ ಅನೇಕ ಪ್ರಹಸನಗಳನ್ನು ಬರೆಸಿ ಪ್ರಸಾರ ಮಾಡತೊಡಗಿದರು.

ಶಿವಸ್ವಾಮಿಯವರು ನಂತರ ಬಂದುದು ಮೈಸೂರು ಆಕಾಶವಾಣಿಗೆ.  ಮೈಸೂರಿನಲ್ಲಿ ಅ.ನ.ಕೃ, ತ.ರಾ.ಸು. ನಿರಂಜನ, ಚದುರಂಗ ಮುಂತಾದವರ ಸ್ನೇಹಭಾಗ್ಯ ಅವರದ್ದಾಯಿತು. ಆಗ ರೇಡಿಯೋದಲ್ಲಿ ಯಾವುದೇ ಕಾರ್ಯಕ್ರಮ ಪ್ರಸಾರಮಾಡುವಲ್ಲಿ ಪ್ರತ್ಯೇಕ ಸ್ವರೂಪ, ಕಟ್ಟಳೆಗಳಿಲ್ಲದೆ ಕಾರ್ಯಕ್ರಮದ ಮುಖ್ಯ ಭಾಗಕ್ಕೆ ಬರುವ ವೇಳೆಗೆ ವೇಳೆಮೀರಿ ಕಾರ್ಯಕ್ರಮದ ಅಂತ್ಯ ಸಮೀಪಿಸಿಬಿಡುತ್ತಿತ್ತು.  ಶಿವಸ್ವಾಮಿಯವರು  ಇದಕ್ಕೊಂದು  ವ್ಯವಸ್ಥಿತವಾದ  ರೂಪರೇಷಯನ್ನು ಅಳವಡಿಸಿ ಕಾರ್ಯಕ್ರಮಗಳನ್ನು ನಿರ್ವಹಿಸತೊಡಗಿದರು. ಆಗಿನ ದಿನಗಳಲ್ಲಿ  ನಾಟಕಗಳೆಂದರೆ ಎ.ಎನ್‌. ಮೂರ್ತಿರಾಯರ ಆಷಾಢಭೂತಿ, ಕೈಲಾಸಂರವರ ಕೆಲ ನಾಟಕಗಳಿಗೆ ಸೀಮಿತವಾಗಿತ್ತು. ರೇಡಿಯೋ ನಾಟಕಗಳಿಗೆ ಶಬ್ದವೇ ಸರ್ವಸ್ವ. ದೃಶ್ಯಭಾಗವಿಲ್ಲದಿದ್ದುದರಿಂದ ಶಬ್ದಕ್ಕೇ ಪ್ರಾಮುಖ್ಯತೆ. ಶಿವಸ್ವಾಮಿಯವರು ಶಬ್ದದ ಸಾಧ್ಯತೆಗಳನ್ನು ಉಪಯೋಗಿಸಿಕೊಂಡು ರೇಡಿಯೋ ನಾಟಕಗಳಿಗೊಂದು ಸ್ಪಷ್ಟ ರೂಪ ಕೊಟ್ಟರು. ಇದಕ್ಕೆಂದೇ ಇವರು ಬರೆದ ನಾಟಕ ಹೃದಯಾಂತರಾಳಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮತ್ತೊಂದು ನಾಟಕ ಎಲ್ಲಿ ನನ್ನ ಕುದುರೆ ಹೋಯಿತು…..” ಇದರಲ್ಲಿ ಕುದುರೆಗಳ ದಾಂಧಲೆಗಳನ್ನೂ ಮಾತಿಲ್ಲದೆ ಶಬ್ದಗಳಲ್ಲೇ ನಿರೂಪಿಸಿದ ನಾಟಕ. ಆಗೆಲ್ಲ ನಾಟಕಗಳೆಂದರೆ ಅರ್ಧ ಘಂಟೆಗೆ ಸೀಮಿತವಾಗಿದ್ದ ಕಾಲದಲ್ಲಿ ಎಂಟೂವರೆ ನಿಮಿಷದ TNT ಎಂಬ ನಾಟಕ ಬರೆದು ದಾಖಲೆ ನಿರ್ಮಿಸಿದರು.

ಹೀಗೆ ಹೊಸತನ್ನು  ಹುಡುಕುತ್ತಾ, ಹಲವಾರು ಸಾಧ್ಯತೆಗಳನ್ನು ದುಡಿಸಿಕೊಳ್ಳುತ್ತಾ, ಹೈದರಾಬಾದು, ಗೌಹಾತಿ, ಜಲಂಧರ್, ಕೊಹಿಮಾ, ನವದೆಹಲಿ, ಮುಂಬಯಿ ಮುಂತಾದ ಕಡೆ ದುಡಿದು ಬಡ್ತಿ ಪಡೆದು ಡೈರೆಕ್ಟರ್ ಹುದ್ದೆಯವರೆಗೂ ತಲುಪಿದರು. ಮುಂಬೈ ಆಕಾಶವಾಣಿಯ ವಾಣಿಜ್ಯ ವಿಭಾಗಕ್ಕೆ ಸೇರ್ಪಡೆಯಾದರು. ಜಾಹೀರಾತಿನ ಕಲ್ಪನೆಯೇ ಇರದಿದ್ದ ಕಾಲದಲ್ಲಿ, ಸರಕುಗಳನ್ನು ಉತ್ಪಾದಿಸುವ ಕಂಪನಿಗಳನ್ನು ಸಂಪರ್ಕಿಸಿ, ಜಾಹೀರಾತು ನಿರ್ಮಿಸಿ, ಹಣಕಾಸು ವ್ಯವಹಾರದ ಜವಾಬ್ದಾರಿ ಹೊತ್ತು ರೇಡಿಯೋದಲ್ಲಿ ಅಳವಡಿಸಿದವರಲ್ಲಿ ಎಸ್ ಎನ್ ಶಿವಸ್ವಾಮಿ  ಮೊದಲಿಗರು.  ಈ ಸವಾಲನ್ನೂ ಅವರು ಯಶಸ್ವಿಯಾಗಿ ನಿರ್ವಹಿಸಿದ್ದನ್ನು ಮನಗಂಡು ದೂರದರ್ಶನ ಕೇಂದ್ರಕ್ಕೆ ಆಹ್ವಾನಿಸಿದಾಗ ಅಲ್ಲೂ ಲಾಭದಾಯಕವಾಗಿ ನಡೆಸಬಹುದೆಂಬುದನ್ನು  ನಿರೂಪಿಸಿದರು. ಆದರೆ ಕೆಲವರ ಕೈವಾಡದಿಂದ ಕಿರಿಕಿರಿ ಎನಿಸಿ ರಾಜೀನಾಮೆ ಕೊಟ್ಟು ಹೊರಬಂದರು.

ಮೊದಲಿನಿಂದಲೂ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್‌ ಪತ್ರಿಕೆಗಳನ್ನೂ ಓದುತ್ತಾ, ನಗೆಗಣ್ಣಿನಿಂದ ನೋಡುತ್ತ ಬಂದಿದ್ದರಿಂಧ ಶಿವಸ್ವಾಮಿಯವರು ಹಾಸ್ಯಲೇಖನಗಳನ್ನೂ ಯಶಸ್ವಿಯಾಗಿ ಸೃಷ್ಟಿಸತೊಡಗಿದರು. ವಿಕಟವಿನೋದಿನಿ, ನಗುವನಂದ ಮುಂತಾದ ಪತ್ರಿಕೆಗಳಿಗೆ ಅವರು ಖಾಯಂ ಬರಹಗಾರರಾದರು, ‘ಕಥೆಗಾರಎಂಬ ಪತ್ರಿಕೆಗೆ ತುಂತುರುಎಂಬ ಅಂಕಣವನ್ನು ಪ್ರಾರಂಬಿಸಿ ಪಿ.ಜಿ. ವುಡ್‌ಹೌಸ್‌ರ ಜೀವ್ಸ್ನನ್ನು  ಜೀವಣ್ಣ ನನಗಾಗಿಎಂದು ಬರೆದ ಅಂಕಣ ಬಹು ಪ್ರಸಿದ್ಧಿ ಪಡೆಯಿತು. ಇವರ ಮೊದಲ ಹಾಸ್ಯ ಲೇಖನಗಳ ಸಂಕಲನ ಲಕ್ಕವಳ್ಳಿಯಲ್ಲಿ ಲಾಲಿ ಪಾಪ್ಸ್‌ಗೆ (1949) ಎಂ. ಶಿವರಾಂ (ರಾಶಿ) ರವರೇ ಮುನ್ನುಡಿ ಬರೆದಿದ್ದಲ್ಲದೆ ತಮ್ಮ ಕೊರವಂಜಿ ಪತ್ರಿಕೆಗೂ ಬರೆಯಲು ಆಹ್ವಾನಿಸಿದರು. ಪುಂಗನೂರು  ಪಾಪಯ್ಯ ಎಂಬ ವ್ಯಕ್ತಿಯನ್ನು ಸೃಷ್ಟಿಸಿ ಪಾತಾಳದಲ್ಲಿ ಪಾಪಯ್ಯಎಂಬ ಅಂಕಣವನ್ನು ಕೊರವಂಜಿಗಾಗಿ ಬರೆದರು. ಇದರ ಜೊತೆಗೆ ಇಂಗ್ಲಿಷ್‌ನಲ್ಲಿ ಟೈಂಮ್ಸ್‌ ಆಫ್‌ ಇಂಡಿಯಾ ಪತ್ರಿಕೆಗಾಗಿ ‘NAMSKARA SAAR’, ಫೀನಿಕ್ಸ್‌ (ಟಿವಿ ವಿಮರ್ಶೆ) ಮತ್ತು ಬೆಂಗಳೂರು ಸನ್‌ಗಾಗಿ ಡೈಲಿ ಕ್ವಿಜ್‌, ಟ್ಯೂನ್‌ ಫುಲ್‌ ಎನ್‌ಕೌಂಟರ್ಸ್ ಮುಂತಾದ ಅಂಕಣಗಳ ನಿರ್ವಹಣೆ ಮಾಡತೊಡಗಿದರು.

ಎಸ್ ಎನ್ ಶಿವಸ್ವಾಮಿಯವರು ಹಲವಾರು ಶ್ರೇಷ್ಠ ಮಟ್ಟದ ಹಾಸ್ಯಲೇಖನಗಳನ್ನೂ, ರೇಡಿಯೋ ನಾಟಕಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು  ಲಕ್ಕವಳ್ಳಿಯಲ್ಲಿ ಲಾಲಿಪಾಪ್ಸ್‌ (1949)’, ‘ಏನೇ ಬರಲಿ ಕಮ್ಮಿ ಇರಲಿ (1972)’, ‘ಷಾಕ್‌, ಷಾಕ್‌, ಷಾಕ್‌ (1985)’, ‘ಮನೆಯೊಳಗೊಬ್ಬ ಮಿಲ್ಟ್ರಿಮಾಮ (1993)’, ‘ಬೂಸಾದಹನ (1998)’, ‘ಜಾತ್ರೆಯಲ್ಲಿ ಜಾಗರಣೆ (2001)’, ‘ಹಾಸ್ಯಾವತಾರಮತ್ತು ಕಡೆಯ ಸಂಕಲನ ಸಿನ್ಸಿನಾಟಿಯಲ್ಲಿ ಕರಿಬೇವಿನ ಸೊಪ್ಪು (2003)’. ಮುಂತಾದ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವುಗಳ  ಜೊತೆಗೆ ಸುಧಾವಾರ ಪತ್ರಿಕೆಯ ಕಾಲಂನಲ್ಲಿ ಇವರು ಬರೆದ ನಗೆಹನಿಗಳುಜೊತೆಗೆ  ಮತ್ತಷ್ಟು ಸೇರಿ  ನಗೆಮಿಂಚು’, ‘ನಗೆಗೊಂಚಲು’, ‘ನಗೆಮುಗಿಲುಸಂಕಲನಗಳಲ್ಲಿ ಸೇರಿವೆ. ರೇಡಿಯೋಗಾಗಿ ಬರೆದ ನಾಟಕಗಳು-ಹೃದಯಾಂತರಾಳ (ಐದು ನಾಟಕಗಳು), ಶಬ್ದಬ್ರಹ್ಮನ ಶಿರ ಹೋಯಿತು ಮತ್ತು TNT (ಎಂಟುವರೆ ನಿಮಿಷದ ನಾಟಕ). ಇದಲ್ಲದೆ ಗ್ರ್ಯಾಂಡ್‌ ಸ್ಲಾಮ್‌ರಾಷ್ಟ್ರೀಯ ಜಾಲದಲ್ಲಿ ಎಲ್ಲ ಭಾಷೆಗಳಲ್ಲೂ ಬಿತ್ತರಗೊಂಡ ವಿಡಂಬನೆಯ ನಾಟಕ, ‘ಮಹಾಸಾಮ್ರಾಜ್ಯ’ (ಐತಿಹಾಸಿಕ) ತೆಲುಗಿನಲ್ಲಿ ಪ್ರಸಾರವಾದ ಜನಪ್ರಿಯ ನಾಟಕ. ಬಿಂದುವೈಜ್ಞಾನಿಕ ಥ್ರಿಲ್ಲರ್ ನಾಟಕ. ನಿಯಾನ್‌ ಲೈಟ್‌ (ನಗೆ ನಾಟಕ).

ಹೀಗೆ ಹೊಸತರ ಹುಡುಕಾಟದಲ್ಲೇ ಸದಾ ತೊಡಗಿದ್ದದೇಶ ವಿದೇಶಗಳಲ್ಲಿ ಬಾನುಲಿ ಕುರಿತು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಗೌರವ ಪಡೆದ, ಹಾಸ್ಯಕ್ಕೆ ಮೀಸಲಾದ ಪರಮಾನಂದ ಪ್ರಶಸ್ತಿಪುರಸ್ಕೃತ, ಹಾಸ್ಯ ಸಾಹಿತ್ಯದ ಹಿರಿಯಜ್ಜರೆನಿಸಿದ್ದ ಶಿವಸ್ವಾಮಿಯವರು ಹಾಸ್ಯಲೋಕದಿಂದ ಮರೆಯಾದದ್ದು 2007ರ ಆಗಸ್ಟ್‌ 13ರಂದು.

ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಕೃಪೆ: ಕಣಜ, ಶತಮಾನದ ನಗೆಬರಹಗಳು ಮತ್ತು ಎಸ್ ಎನ್ ಶಿವಸ್ವಾಮಿಯವರ ವಿವಿಧ ಹಾಸ್ಯ ಬರಹಗಳ ಪುಸ್ತಕಗಳು

ಚಿತ್ರಕೃಪೆ: www.kamat.com

Tag: S. N. Shivaswamy

ಕಾಮೆಂಟ್‌ಗಳಿಲ್ಲ: