ಶುಕ್ರವಾರ, ಆಗಸ್ಟ್ 30, 2013

ಎಸ್.ಮಂಗಳಾ ಸತ್ಯನ್

ಎಸ್.ಮಂಗಳಾ ಸತ್ಯನ್

ಕನ್ನಡದ ಜನಪ್ರಿಯ ಕತೆಗಾರ್ತಿ ಎಸ್. ಮಂಗಳಾ ಸತ್ಯನ್  ಅವರು 10ನೇ ಏಪ್ರಿಲ್ 1940ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು.

ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿ ತಳೆದ ಮಂಗಳಾ ಸತ್ಯನ್  ಅವರು 1968ರ ವರ್ಷದಲ್ಲಿ ಬಿಡುಗಡೆಗೊಂಡ ಹಣದ ಮಗಳುಕೃತಿಯಿಂದ ಮೊದಲ್ಗೊಂಡು ಮೂವತ್ತೈದು ಕಾದಂಬರಿಗಳನ್ನೂ  ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ರಚಿಸಿ ಕನ್ನಡದಲ್ಲಿ ತಮ್ಮದೇ ಆದ ಅಪಾರ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.  ಅವರ ಕಾದಂಬರಿಗಳಾದ ಭಾಗ್ಯಜ್ಯೋತಿ, ಮುಗ್ಧ ಮಾನವ, ಕಾನನದ ಕರುಣಾಳು, ವಿಷದ ಒಡಲು, ಪುತ್ರಕಾಮಿ, ನಿನಗಾಗಿ, ನವವಸಂತ, ಬಂಗಾರ ಭೂಷಿತೆ, ಹೂವೆರಡು ಕೊನೆಯೊಂದು, ವಂಚಿತೆ, ಆ ಮುಖ, ಅರಸಿ ಬಂದವಳು, ಸ್ವರ್ಗ ಸನ್ನಿಧಿ ಅಮೃತಮಯಿ, ಆಶಾದೀಪ, ಪ್ರಣಯ ತಾಂಡವ, ಒಡೆಯದ ಮುತ್ತು, ಶ್ರೀ ಅನ್ನಪೂರ್ಣೇಶ್ವರಿ, ಸಂಜೀವ  ಮುಂತಾದ ಕೃತಿಗಳು ಓದುಗ ಬಳಗವನ್ನು ಅಪಾರವಾಗಿ ಆಕರ್ಷಿಸಿವೆ.

ಎಪ್ಪತ್ತರ ದಶಕದಲ್ಲಿ ಚಲನಚಿತ್ರಗಳಾದ ಭಾಗ್ಯಜ್ಯೋತಿ, ಮುಗ್ದಮಾನವ ಚಿತ್ರಗಳು ಆ ಕಾಲದಲ್ಲಿ ಇಡೀ ನಾಡಿನಲ್ಲಿ ಜನಪ್ರಿಯಗೊಂಡು ನಾಡಿನಲ್ಲೆಲ್ಲಾ ಮಂಗಳಾ ಸತ್ಯನ್ ಅವರ ಹೆಸರನ್ನು ಮನೆಮಾತಾಗಿಸಿದ್ದವು.  ಮುಂದೆ ಅವರ ಕೃತಿಗಳಾದ ಆಮುಖ ಬಿಸಿಲು ಬೆಳದಿಂಗಳುಎಂಬ ಹೆಸರಿನಲ್ಲೂ ಮತ್ತು ಮುರಳೀಗಾನ ಅಮೃತಪಾನ ಎಂಬ ಕಥೆ ಅದೇ ಹೆಸರಿನಲ್ಲೂ ಚಲನಚಿತ್ರಗಳಾದವು.  ಅವರ ಸೂರ್ಯದಂತಹ ಕೃತಿಗಳು ದೂರದರ್ಶನದ ಧಾರಾವಾಹಿಗಳಾಗಿ ಕೂಡಾ ಜನಪ್ರಿಯಗೊಂಡಿವೆ. 

ಮಂಗಳಾ ಅವರು ಕೆಲವೊಂದು ಚಲನಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಯನ್ನು ಕೂಡಾ ರಚಿಸಿದ್ದಾರೆ.  ಅವರ ಕಥೆಗಳಾದ ಸಂಬಂಧ’, ‘ದೇವರ ಕೂಗುಮತ್ತು ಸಹಚರ್ಯೆಗಳು ಆಕಾಶವಾಣಿಯ ಕಥಾನಕ ರೂಪಕಗಳಾಗಿ ಮನೆ ಮನೆಯನ್ನು ತಲುಪಿದ್ದವು.  ಮದ್ವೆ ಮಸಲತ್, ಧೀರೋದ್ಧಾತ ಕಂಸ, ಭೋಜ ಕಾಳಿದಾಸ,  ಇವು ಅವರ ನಾಟಕಗಳು.  ಮಕ್ಕಳಿಗಾಗಿ ನಾಟಕ ನಿರ್ದೇಶನ ಸಹಾ ಮಾಡಿದ್ದರು.

ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಸ್ತ್ರೀಯರ ಸಮಸ್ಯೆಗಳ ಬಗೆಗೆ ಅಂತಃಕರಣ ಪೂರಿತ ದೃಷ್ಟಿಯನ್ನು ಕೇವಲ ತಮ್ಮ ಕಥೆಗಳಲ್ಲಷ್ಟೇ ಅಲ್ಲದೆ ತಮ್ಮ ಕ್ರಿಯಾಶಕ್ತಿಯಲ್ಲೂ ಮೆರೆದಿರುವ ಎಸ್. ಮಂಗಳಾ ಸತ್ಯನ್ ಅವರು  ನಡೆಸುತ್ತಿರುವ ಸ್ತ್ರೀ ಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ಟ್”  ಎಂಬ ಸಂಘಟನೆ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಪ್ರತಿಷ್ಟಿತ ಸಂಸ್ಥೆಯಾಗಿದೆ.

ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಬರಹಗಾರ್ತಿಯರಿಗೆ ಸಲ್ಲುವ ಉಚ್ಚತಮ ಪ್ರಶಸ್ತಿಯಾದ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿಯಲ್ಲದೆ, ಸಾಹಿತ್ಯ ರತ್ನ, ಕಾದಂಬರಿ ರತ್ನ, ಮೈಸೂರು ರತ್ನ, ಸಾಹಿತ್ಯ ಕಲಾ ಪ್ರಪೂರ್ಣೆ, ಸಾಹಿತ್ಯ ಕಲಾ ಶಾರದೆ ಮುಂತಾದ ಹಲವು ಗೌರವಗಳೂ,   ಹಲವಾರು ಪ್ರತಿಷ್ಟಿತ ಸಾಹಿತ್ಯ ಸಮಾವೇಶಗಳ ಅಧ್ಯಕ್ಷತೆಯ ಹಿರಿಮೆಗಳೂ  ಎಸ್. ಮಂಗಳಾ ಸತ್ಯನ್ ಅವರನ್ನು ಅರಸಿ ಬಂದಿದೆ.

ಮಂಗಳಾ ಸತ್ಯನ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ಹೃತ್ಪೂರ್ವಕವಾಗಿ ಶುಭಾಶಯ ಹೇಳೋಣ.  ಅವರ ಬದುಕು ಸುಂದರವಾಗಿರಲಿ.  ಸುಖ, ಸಾಧನೆ, ಯಶಸ್ಸು, ಶ್ರೇಯಸ್ಸು ನಿರಂತರವಾಗಿರಲಿ.


Tag: S. Mangala Satyan

ಕಾಮೆಂಟ್‌ಗಳಿಲ್ಲ: