ಗುರುವಾರ, ಆಗಸ್ಟ್ 29, 2013

ಇಳಯರಾಜಾ

ಇಳಯರಾಜಾ

ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ 2, 1943ರ ವರ್ಷದಲ್ಲಿ ಜನಿಸಿದರು.  ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದೀ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಅವರ  ಸಂಗೀತ ಸಂಯೋಜನೆಯಲ್ಲಿ ಸುಮಧುರ ಗೀತೆಗಳು ಹರಿದು ಬಂದಿವೆ.  ಅವರು ಗಾಯನ, ಗೀತರಚನೆಗಳಲ್ಲೂ ಪ್ರಸಿದ್ಧರು. ಬಹುಮುಖ ಪ್ರತಿಭಾವಂತರಾದ ಅವರಿಗೆ ಚಿತ್ರರಚನೆಯಲ್ಲೂ  ಕೈಚಳಕವಿದೆ.

ಸಿನಿಮಾ ಕ್ಷೇತ್ರ ಹಲವು ಕಾರಣಗಳಿಗೆ ಜನಪ್ರಿಯ.  ಕೆಲವೊಂದು ಕಾರಣಗಳಿಗೆ ಗಣ್ಯವೆನಿಸಿದ್ದರೆ  ಬಹಳಷ್ಟು ಕಾರಣಗಳಿಗೆ ಅಗಣ್ಯ ಕೂಡಾ.  ಆದರೆ, ಕೆಲವೊಂದು ಮಹನೀಯರನ್ನು ಕಂಡಾಗ ಮಾತ್ರ ಅದಕ್ಕೊಂದು ಗೌರವ ಮೂಡುತ್ತದೆ.  ಈ ರೀತಿ ತಾವು ಮಾಡುವ ಕ್ಷೇತ್ರಕ್ಕೆ ಗೌರವ ನೀಡುವ ಮಂದಿ ಹಲವು ಕೋಟಿಗಳಿಗೆ ಒಬ್ಬರು.  ಇಳಯರಾಜಾ ಅಂತಹ ಶ್ರೇಷ್ಠರ ಪಂಕ್ತಿಗೆ ಸೇರಿದವರು.

ಇಳಯರಾಜಾ ಈ ಇಳೆಯ ಸಂಗೀತ ಲೋಕದ ರಾಜರೇ ಹೌದು.  ಆದರೆ ರಾಜ ಎನ್ನುವುದು ಒಂದು ಸ್ಥಾನಮಾನಕ್ಕೆ ಸೀಮಿತವಾದ ಪದ.  ಇಳಯರಾಜಾ ಸಂಗೀತ ಲೋಕದ ಅಂತರಂಗದ ಒಂದು ಎಳೆಗೆ ಸಮೀಪರು.  ಅವರ ಪ್ರಸಿದ್ಧ ಚಿತ್ರಗಳನ್ನು ಹೇಳುತ್ತಾ ಹೋದರೂ ಕೂಡಾ ಹಲವು ಪುಟಗಳು ಬೇಕಾದೀತು.  ಅವರಿಗೆ ರಾಷ್ಟ್ರ ಪ್ರಶಸ್ತಿ ತಂದ 'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ), 'ತರೈ ತಪ್ಪಟ್ಟೈ'(ತಮಿಳು)  ಚಿತ್ರಗಳ ಆಚೆಗೆ ಕೂಡಾ ಅವರು ಸಂಗೀತ ಸಂಯೋಜಿಸಿರುವ ಸುಮಾರು ಸಾವಿರ ಚಿತ್ರಗಳ ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಲ್ಲಿ ಸಂಗೀತ ಲೋಕದ ಮುತ್ತುರತ್ನಗಳು ವಿಶಿಷ್ಟವಾಗಿ ಅರಳಿವೆ.  ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.

ಕನ್ನಡದಲ್ಲಿ ಕೂಡಾ ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಮುಂತಾದ  ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.ಇತ್ತೀಚೆಗೆ   ಕೂಡಾ  ಅವರು  'ಮೈತ್ರಿ', 'ಒಗ್ಗರಣೆ', 'ದೃಶ್ಯಮುಂತಾದ  ಕನ್ನಡ  ಚಿತ್ರಗಳಲ್ಲಿ  ಕಂಡಿದ್ದಾರೆ.   ಹಿಂದಿಯಲ್ಲೂ  ಇತ್ತೀಚಿನ ವರ್ಷಗಳಲ್ಲಿ ಬಂದ 'ಚೀನೀ ಕಂ', 'ಪಾ', 'ಶಮಿತಾಬ್' ವರೆಗಿನ ಹಲವು ಚಿತ್ರಗಳಲ್ಲಿ ಕೂಡಾ ಅವರ ಗಾನ ಗಂಗೆ ಹರಿದಿದೆ.  ಇಂಗ್ಲಿಷ್  ಚಿತ್ರಗಳಲ್ಲೂ   ಸಂಗೀತ  ನಿರ್ದೇಶನ  ನೀಡಿದ್ದಾರೆ.

ಪ್ರಾರಂಭದ ದಿನಗಳಲ್ಲಿ ನಮ್ಮ ಬಿ.ಕೆ ಸುಮಿತ್ರ ಅವರ ಗಾನಗೊಷ್ಟಿಗಳಲ್ಲಿ ವಾದ್ಯಗಾರರಾಗಿ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದ ಇಳಯರಾಜಾ, ಇಂದು ಚಲನಚಿತ್ರರಂಗದ ಮೇರು ಪರ್ವತವೇ ಆಗಿದ್ದಾರೆ.     


ಇಳಯರಾಜಾ ಅವರಿಗೆ ಬಂದಿರುವ ಪದ್ಮಭೂಷಣ, ಸಂಗೀತ  ನಾಟಕ  ಅಕಾಡೆಮಿ   ಗೌರವಗಳನ್ನೂ  ಒಳಗೊಂಡಂತೆ ಬಂದ  ರಾಷ್ಟ್ರೀಯ, ಅಂತರರಾಷ್ಟ್ರೀಯ ಮತ್ತು  ವಿವಿಧ  ಪ್ರಾಂತೀಯ  ಪುರಸ್ಕಾರ ಸಮ್ಮಾನಗಳು ಅಸಂಖ್ಯಾತ.  ಅವರು ಅವೆಲ್ಲವನ್ನೂ ಮೀರಿದ ಕಲಾಸಾಧಕ ಅವರು ಎಂಬುದು ಇಡೀ ಲೋಕವೇ ಒಪ್ಪುವ ಮಾತು.  ಇಂತಹ ಹೆಮ್ಮೆಯ ಸಾಧಕನಿಗೆ ಶುಭಪ್ರದ ಹುಟ್ಟು ಹಬ್ಬದ ಆಶಯಗಳನ್ನು ಹೇಳುವಲ್ಲಿ ಲೋಕದ ಸಂಗೀತಪ್ರಿಯರೊಂದಿಗೆ ನಾವೂ ಸೇರೋಣ.  ಇಳಯರಾಜಾರ ಬದುಕು ಸುಂದರವಾಗಿರಲಿ.  ಅವರ ಸುಂದರ ಸಂಗೀತ ಸಂಯೋಜನೆಗಳನ್ನು ನಿರಂತರ ಕೇಳುತ್ತಿರುವಂತಾಗಲಿ.

Tag: Ilayaraja

ಕಾಮೆಂಟ್‌ಗಳಿಲ್ಲ: