ಶುಕ್ರವಾರ, ಆಗಸ್ಟ್ 30, 2013

ಶಶಿಕಲಾ ವೀರಯ್ಯಸ್ವಾಮಿ

ಶಶಿಕಲಾ ವೀರಯ್ಯಸ್ವಾಮಿ

ಕವಯಿತ್ರಿ ಶಶಿಕಲಾರವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಮೇ 1, 1948ರಂದು ಜನಿಸಿದರು. ಅವರ ತಂದೆ ಸಿದ್ಧಲಿಂಗಯ್ಯನವರು  ಮತ್ತು  ತಾಯಿ ಅನ್ನಪೂರ್ಣಾದೇವಿಯವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು  ಸಿಂದಗಿಯಲ್ಲಿ ನಡೆಸಿದ ಶಶಿಕಲಾ ಅವರು ಮುಂದೆ  ಕಾಲೇಜು ಕಲಿತದ್ದು ಬಿಜಾಪುರ, ಗುಲಬರ್ಗಾದಲ್ಲಿ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದ ಶಶಿಕಲಾ ಅವರು  ವೃತ್ತಿ ಜೀವನ ಆರಂಭಿಸಿದ್ದು ಸಿಂದಗಿ ಜ್ಯೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ನಂತರ ಬೀದರ್ ಅಕ್ಕಮಹಾದೇವಿ ಪದವಿ ಕಾಲೇಜು, ಚಿಟಗುಪ್ಪ ಸರಕಾರಿ ಕಾಲೇಜು, ಗೋಕಾಕ್ ಕಾಲೇಜು ಬೆಳಗಾವಿಗಳಲ್ಲಿ ಕೆಲಸ ನಿರ್ವಹಿಸಿದರು.  ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ. ಯಲಹಂಕ ಸರಕಾರಿ ಜ್ಯೂ. ಕಾಲೇಜು, ಬೆಂಗಳೂರಿನ ವಾಣಿವಿಲಾಸ ಕಾಲೇಜು, ಚಿಕ್ಕಮಗಳೂರಿನ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ನಂತರದಲ್ಲಿ  ಶಹಾಪೂರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯಗರಾಗಿ ಕಾರ್ಯ ನಿರ್ವಹಿಸಿದರು.

ಕೆಲಕಾಲ ಧಾರವಾಡದ ಪತ್ರಾಗಾರ ಇಲಾಖೆಯಲ್ಲಿ ಪತ್ರಪಾಲಕರಾಗಿ, ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆಯಾಗಿ, ಧಾರಾವಾಹಿ ಮತ್ತು ಚಲನಚಿತ್ರಗಳ ಆಯ್ಕೆ ಸಮಿತಿ, ಬೆಂಗಳೂರು ದೂರದರ್ಶನದ ಸದಸ್ಯೆಯಾಗಿ, ಪದವಿ ಪೂರ್ವ ಶಿಕ್ಷಣಾ ಮಂಡಳಿ, ಬೆಂಗಳೂರಿನ ಕನ್ನಡ ಪಠ್ಯ ಪುಸ್ತಕ ಸಮಿತಿಯ ಸದಸ್ಯೆಯಾಗಿ, ಅನೇಕ ಸಂಘ ಸಂಸ್ಥೆಗಳ ಧರ್ಮದರ್ಶಿಯಾಗಿ ಕೂಡಾ ಶಶಿಕಲಾ ಅವರು ಜವಾಬ್ದಾರಿಯುತ ಹೊಣೆ ನಿರ್ವಹಿಸಿದ್ದಾರೆ.

ಶಶಿಕಲಾ ಅವರ ಸಾಹಿತ್ಯ  ಕೃತಿಗಳೆಂದರೆ: ಕಾವ್ಯ-ಗುಬ್ಬಿಮನೆ, ಪ್ರಶ್ನೆ, ಜೀವ-ಸಾವುಗಳ ನಡುವೆ, ಹೆಂಗ ಹೇಳಲೆ ಗೆಳತಿ, ಮಧ್ಯಂತರದ ಒಂದು ಗದ್ಯಗೀತೆ, ಬಟ್ಟ ಬಯಲಲ್ಲಿ ನಿಂತು, ಒಂಚೂರು ನೆಲ-ಒಂಚೂರು ಮುಗಿಲು. ವ್ಯಕ್ತಿಚಿತ್ರ-ಶ್ರೀ ಗುರುಸಿದ್ದೇಶ್ವರ ಚರಿತ್ರೆ, ಅಪ್ಪ ಮತ್ತು ಮಣ್ಣು, ಕೋಡಿಕೊಪ್ಪ ಮಠದ ಬಸವರಾಜ ಶಾಸ್ತ್ರಿಗಳು. ಸಂಪಾದಿತ-ಆಧುನಿಕ ಕನ್ನಡ ಕವನಗಳು, ಸಂವೇದನೆಗಳು, ಪ್ರಣಯಿನಿ, ರಾಘವಾಂಕ, ಗಾಂ ಎಂಬ ಹೆಸರು, ಕುಂಕುಮ ಭೂಮಿ, ಕುಸುಮಾಂಜಲಿ, ಜೊತೆಗೆ ಹಲವಾರು ಸಂಭಾವನೆ ಗ್ರಂಥಗಳಿಗೆ ಬರೆದ ಲೇಖನಗಳು. ಮುನ್ನುಡಿ, ಬೆನ್ನುಡಿ ಪ್ರಸ್ತಾವನೆ ಇತ್ಯಾದಿ.

ಶಶಿಕಲಾ ಅವರು ವಿಚಾರ ಸಂಕಿರಣಗಳಲ್ಲಿ ಕಾವ್ಯ, ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿಯಾಗಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಕವಿಗೋಷ್ಠಿ, ಸಂವಾದ, ಪರಿಚಯ, ಚಿಂತನ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.  ಅವರ ಕಥೆ, ಕವಿತೆಗಳು ಹಿಂದಿ, ಉರ್ದು, ಮಲೆಯಾಳಂ ಭಾಷೆಗೆ ಅನುವಾದಗೊಂಡಿವೆ. ಇವರು ಇತರ ಭಾಷೆಯಿಂದ ಹಲವಾರು ಕೃತಿಗಳನ್ನು  ಕನ್ನಡಕ್ಕೆ  ಭಾಷಾಂತರ ಮಾಡಿದ್ದಾರೆ. ಬೆಂಗಳೂರು, ಕರ್ನಾಟಕ, ಮಂಗಳೂರು, ಮಹಿಳಾ ವಿಶ್ವವಿದ್ಯಾಲಯ ಮುಂತಾದ ವಿಶ್ವವಿದ್ಯಾಲಯಗಳ ಪಿ.ಯು.ಸಿ, ಬಿ.ಎಸ್ಸಿ. ಬಿ.ಎ. ತರಗತಿಗಳಿಗೆ ಪಠ್ಯಪುಸ್ತಕಗಳಲ್ಲಿ  ಇವರ ಕಾವ್ಯ, ಗದ್ಯ ಮುಂತಾದವುಗಳು  ಶೋಭಿಸಿವೆ.

ಬಿ.ಸರೋಜದೇವಿ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ,  ಮುಂತಾದ ಹಲವಾರು ಗೌರವಗಳು ಶಶಿಕಲಾ ವೀರಯ್ಯಸ್ವಾಮಿಯವರಿಗೆ ಸಂದಿವೆ.

ಈ ಮಹಾನ್ ಸಾಧಕರಿಗೆ ಗೌರವಪೂರ್ವಕವಾಗಿ ಹುಟ್ಟುಹಬ್ಬದ ಶುಭ ಹಾರೈಕೆಗಳು.

ಮಾಹಿತಿ ಕೃಪೆ: ಕಣಜ

Tag: Shashikala Veeraiah Swamy

ಕಾಮೆಂಟ್‌ಗಳಿಲ್ಲ: