ಶನಿವಾರ, ಆಗಸ್ಟ್ 31, 2013

ಜಕೀರ್ ಹುಸ್ಸೇನ್

ಜಕೀರ್ ಹುಸ್ಸೇನ್

ಮಹಾನ್ ವಿದ್ವಾಂಸ, ರಾಷ್ಟ್ರಭಕ್ತ, ಶಿಕ್ಷಣ ತಜ್ಞ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ರಾಷ್ಟ್ರಪತಿ ಜಕೀರ್ ಹುಸ್ಸೇನ್ ಜನಿಸಿದ್ದು ಫೆಬ್ರವರಿ 8, 1897ರಂದು.  ತಂದೆ ತಾಯಂದಿರನ್ನು ಓದುವ ದಿನಗಳಲ್ಲೇ ಕಳೆದುಕೊಂಡ ಜಕೀರ್ ಹುಸ್ಸೇನರು ಎಟ್ಟಾವ ಎಂಬಲ್ಲಿ ಶಾಲೆ ಮತ್ತು ಆಂಗ್ಲೋ ಮಹಮಡನ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನೂ ನಡೆಸಿದರು.  ಕಾಲೇಜಿನ ದಿನಗಳಲ್ಲಿ ಅವರು ವಿದ್ಯಾರ್ಥಿ ನಾಯಕರಾಗಿದ್ದರು.

ತಮ್ಮ 23ನೆಯ ವಯಸ್ಸಿನಲ್ಲೇ ಹಲವು ಅಧ್ಯಾಪಕರು ಹಾಗೂ ಆಸಕ್ತರ ಜೊತೆಗೂಡಿ ಜಾಮಿಯ ಮಿಲಿಯ ಇಸ್ಲಾಮಿಯಾ  ವಿಶ್ವವಿದ್ಯಾಲಯವನ್ನು ಹುಟ್ಟು ಹಾಕಲು ಜಕೀರ್ ಹುಸ್ಸೇನ್ ದುಡಿದರು.  ಇಂದು ಈ ವಿಶ್ವವಿದ್ಯಾಲಯವು ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯವೆಂದೆನಿಸಿದೆ.  ಮುಂದೆ ಜಕೀರ್ ಹುಸೇನರು ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಆರ್ಥಶಾಸ್ತ್ರದ ಪಿ.ಎಚ್. ಡಿ ಪದವಿ ಪಡೆದು ಭಾರತಕ್ಕೆ  ಹಿಂದಿರುಗಿದರು.  ಜರ್ಮನಿಯಲಿದ್ದ ದಿನಗಳಲ್ಲಿ ‘ಮಿರ್ಜಾ ಗಾಲಿಬ್’ ಕವಿಯ ಉರ್ದು ಕಾವ್ಯಕ್ಕೆ ಹುಸ್ಸೇನ್ ಉಲ್ಲೇಖ ಮೂಡಿಸಿದರು.

1927ರಲ್ಲಿ ಜಕೀರ್ ಹುಸ್ಸೇನರು  ಭಾರತಕ್ಕೆ ಹಿಂದಿರುಗಿದ ಸಂದರ್ಭದಲ್ಲಿ ಜಾಮಿಯ ಮಿಲಿಯ ಇಸ್ಲಾಮಿಯ ವಿಶ್ವವಿದ್ಯಾಲಯವು ಮುಚ್ಚಿಹೋಗುವ ಅಪಾಯದಲ್ಲಿತ್ತು.  ಅದರ ಪುನರುಜ್ಜೀವನಕ್ಕೆ ಟೊಂಕಕಟ್ಟಿ ನಿಂತ ಹುಸ್ಸೇನರು ಮುಂದೆ   ತಮ್ಮ 21 ವರ್ಷಗಳನ್ನು ಈ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸುವುದಕ್ಕೆ ಉಪಯೋಗಿಸಿದರು. ಜಕೀರ್ ಹುಸ್ಸೇನರ ನೇತೃತ್ವದ ಈ ವಿಶ್ವವಿದ್ಯಾಲಯವು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿತು.      ಮಹಾತ್ಮ ಗಾಂಧೀಜಿ ಮತ್ತು ಹಕಿಂ ಅಜಮಲ್ ಖಾನ್ ಅವರ ಮೌಲ್ಯಯುತ ಶಿಕ್ಷಣವೇ ಜಕೀರ್ ಹುಸ್ಸೇನರಿಗೆ ಪ್ರೇರಣೆಯಾಗಿತ್ತು.  ತಮಗಿದ್ದ ಪ್ರತೀಕೂಲ ಪರಿಸ್ಥಿತಿಗಳ ಎದುರಾಗಿ ಸಮರ್ಥವಾಗಿ ಈಜಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಮೂಡಿಸಿದ ಪ್ರಗತಿ ಅವರಿಗೆ ಎಲ್ಲೆಡೆಯಲ್ಲೂ ಅಪಾರ ಕೀರ್ತಿಯನ್ನು ತಂದಿತು.  

ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶವು ಇಬ್ಭಾಗವಾದ ಹಿನ್ನಲೆಯಲ್ಲಿ ಒಂದು ವರ್ಗದ  ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು  ಪಾಕಿಸ್ಥಾನದ ಪರವಾದ ಅಭಿಪ್ರಾಯ ಹೊಂದಿದ್ದ ಹಿನ್ನಲೆಯಲ್ಲಿ  ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯವು ಹಲವಾರು ಸಂಕಷ್ಟಗಳನ್ನು ಎದುರಿಸಿತು.   ಇವೆಲ್ಲವನ್ನೂ  ಸಮರ್ಥವಾಗಿ ನಿರ್ವಹಿಸಿದ ಜಕೀರ್ ಹುಸ್ಸೇನರು 1948ರಿಂದ 1956ರ ಅವಧಿಯವರೆಗೆ ಈ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಮಹತ್ವದ ಸೇವೆ ಸಲ್ಲಿಸಿದರು.

1956ರಲ್ಲಿ ರಾಜ್ಯಸಭೆಗೆ ಆಯ್ಕೆಗೊಂಡ ಜಕೀರ್ ಹುಸೇನರು 1957ರಿಂದ 1962ರವರೆಗೆ ಬಿಹಾರದ ರಾಜ್ಯಪಾಲರ ಹುದ್ಧೆಯನ್ನು ನಿರ್ವಹಿಸಿದರು.  ಅವರು 1962ರಿಂದ 1967ರ ಅವಧಿಯಲ್ಲಿ ಭಾರತದ ಎರಡನೇ ಉಪರಾಷ್ಟ್ರಪತಿಗಳಾಗಿ ಕಾರ್ಯನಿರ್ವಹಿಸಿದರು.  1963ರ ವರ್ಷದಲ್ಲಿ ಜಕೀರ್ ಹುಸೇನರಿಗೆ ‘ಭಾರತರತ್ನ’ ಪ್ರಶಸ್ತಿ ಗೌರವವನ್ನು ಪ್ರಧಾನ ಮಾಡಲಾಯಿತು.   1967ರ ಮೇ ತಿಂಗಳಿನಲ್ಲಿ ಜಕೀರ್ ಹುಸೇನರು ಭಾರತದ ರಾಷ್ಟ್ರಪತಿಗಳಾಗಿ ಅಧಿಕಾರವಹಿಸಿಕೊಂಡರು.  ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿ “ಇಡೀ ಭಾರತವೇ ನನ್ನ ಮನೆ, ಸಮಸ್ತ ಭಾರತೀಯರೂ ನನ್ನ ಕುಟುಂಬದವರು” ಎಂದು ಜಕೀರ್ ಹುಸೇನರು  ನುಡಿದರು.

ಜಕೀರ್ ಹುಸೇನರು ತಾವು ರಾಷ್ಟ್ರಪತಿಗಳಾಗಿ ಅಧಿಕಾರ ವಹಿಸಿಕೊಂಡ ಎರಡು ವರ್ಷಗಳ ಒಳಗೇ ಅಂದರೆ ಮೇ 3, 1969ರ ವರ್ಷದಲ್ಲಿ ಈ ಲೋಕವನ್ನಗಲಿದರು.

Tag: Zakir Hussain

ಕಾಮೆಂಟ್‌ಗಳಿಲ್ಲ: