ಬುಧವಾರ, ಆಗಸ್ಟ್ 28, 2013

ಬಿ. ಕೆ. ಸುಮಿತ್ರಾ

ಬಿ. ಕೆ. ಸುಮಿತ್ರಾ

ಬಿ. ಕೆ . ಸುಮಿತ್ರಾ ಅಂದರೆ ಹಲವು ಸುಮಧುರ ಗೀತೆಗಳ ನಾದ ಸೌರಭದ ತಂಗಾಳಿ ನಮ್ಮನ್ನಾವರಿಸುತ್ತದೆ.  ಕನ್ನಡ ನಾಡಿನಿಂದ ಸಿನಿಮಾ ಗಾಯನ  ಕ್ಷೇತ್ರಕ್ಕೆ ಕಾಲಿಟ್ಟವರಲ್ಲಿ ಖಂಡಿತವಾಗಿ ಅವರು ಅಗ್ರರ ಸಾಲಿನಲ್ಲಿ ನಿಲ್ಲುವವರು.  ಅಷ್ಟೇ ಅಲ್ಲ ಚಿತ್ರರಂಗದ ಪ್ರಮುಖ ಗಾಯಕರ ಸಾಲಿನಲ್ಲಿ ನಿರಂತರ ಶೋಭಾಯಮಾನರು.

ಬಿ.ಕೆ ಸುಮಿತ್ರಾ ಅವರು ಹುಟ್ಟಿದ್ದು ಜುಲೈ 1, 1946 ಚಿಕ್ಕಮಗಳೂರು ಜಿಲ್ಲೆಯ ಬಿಳಿಲುಕೊಪ್ಪ ಗ್ರಾಮದಲ್ಲಿ.  ಮೊದಲು ತಾಯಿ, ನಂತರದಲ್ಲಿ ಸಂಗೀತ ವಿದ್ವಾಂಸ  ಶಾಮಣ್ಣ ಅವರಿಂದ ಸಂಗೀತ ಕಲಿತು ಸಂಗೀತ ಪರೀಕ್ಷೆಗಳಲ್ಲೂ ಉತ್ತೀರ್ಣರಾದ ಬಿ ಕೆ ಸುಮಿತ್ರಾ ಎಂ. ಪ್ರಭಾಕರ್ ಅವರಿಂದ ಸುಗಮಸಂಗೀತ ಕಲಿತರು.  ಎಂ. ಪ್ರಭಾಕರ್ ಅವರ ಸಹೋದರಿ ಪ್ರಸಿದ್ಧ ನಟಿ ಪಂಡರೀಬಾಯಿ ಅವರು ಬಿ. ಕೆ. ಸುಮಿತ್ರಾ ಅವರ ಸಂಗೀತ ಸಾಮರ್ಥ್ಯವನ್ನು  ಚಲನಚಿತ್ರರಂಗದ ಹಲವು ಪ್ರಮುಖರಿಗೆ ಪರಿಚಯ ಮಾಡಿಕೊಟ್ಟರು.

1964ರಲ್ಲಿ ಜಿ. ಕೆ. ವೆಂಕಟೇಶ್ ಅವರ ಸಂಗೀತ ನಿರ್ದೇಶನದಲ್ಲಿ ‘ಕವಲೆರಡು ಕುಲವೊಂದು’ ಚಿತ್ರದಲ್ಲಿ ಸುಮಿತ್ರಾ ಮೊದಲ ಬಾರಿಗೆ ಹಾಡಿದರು.  ಆ ನಂತರದಲ್ಲಿ ಮೊದಲು ಪದವೀಧರೆಯಾಗಿ ನಂತರ ಸಂಗೀತ ಸಾಧನೆ ಮಾಡುವ ಹಂಬಲದಿಂದ ಶಿವಮೊಗ್ಗೆಗೆ ಮರಳಿ ಪದವೀಧರರಾದರು.  ಆಗಿನ ದಿನಗಳಲ್ಲಿ ಸಿನಿಮಾ ಸಂಗೀತದ ರೆಕಾರ್ಡಿಂಗ್ ಅಂದರೆ ಚನ್ನೈಗೆ ಹೋಗಬೇಕಾದ ಪರಿಸ್ಥಿತಿ.  ಶಿವಮೊಗ್ಗೆಯಲ್ಲಿದ್ದ ಸುಮಿತ್ರಾ ಅವರಿಗೆ ಚನ್ನೈಗೆ ಓಡಿಯಾಡುವುದು ಸುಲಭವಿರಲಿಲ್ಲ.  ಆದರೂ ಸಂಗೀತ ಸಾಧನೆಯಲ್ಲಿ ಉತ್ಸಾಹವಿದ್ದ ಸುಮಿತ್ರಾ ನಿರಂತರ ಪ್ರಯಾಣ ಕೈಗೊಳ್ಳುತ್ತಿದ್ದರು.  ಇವರ ಪ್ರತಿಭೆಯ ಬಗ್ಗೆ ಹೆಮ್ಮೆ ಪಡುತ್ತಿದ್ದ ತಂದೆ, ಸ್ವಲ್ಪ ದಿನ ಇವರಿಗಾಗಿ ಮದರಾಸಿನಲ್ಲಿ ಮನೆಯನ್ನೂ ಮಾಡಿಕೊಟ್ಟಿದ್ದರು.

ಮನೆಯವರ ಪ್ರೋತ್ಸಾಹ, ಗುರುಗಳ ಆಶೀರ್ವಾದದ ಬಲದಿಂದ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದ ಸುಮಿತ್ರಾ ಅನುರಾಧ, ಮಹಾತಪಸ್ವಿ, ಸತಿಸುಕನ್ಯ, ಚಕ್ರತೀರ್ಥ, ಸುವರ್ಣ ಭೂಮಿ, ಅಪರಾಜಿತೆ, ಎರಡುಮುಖ, ಮದುವೆ ಮದುವೆ ಮದುವೆ, ಬೃಂದಾವನ, ಉಪಾಸನೆ, ಹಂಸಗೀತೆ   ಹೀಗೆ ಹಲವು ಕನ್ನಡ ಚಿತ್ರಗಳಲ್ಲಿ ಹಾಡಿ ಮನೆಮಾತಾದರು. ಆಕಾಶವಾಣಿಯಲ್ಲೂ ಇವರ ಗೀತೆಗಳು ಮೊಳಗುತ್ತಿದ್ದವು.

ಬಿ. ಕೆ. ಸುಮಿತ್ರಾ ಅವರು ಹಾಡಿರುವ ಒಂದೊಂದೂ ಗೀತೆಯೂ ಆ ಗೀತೆಯ ಧ್ವನಿಯಾಳದಿಂದ ಮನಸ್ಸಿನಲ್ಲಿ ಸ್ಥಿರವಾಗಿ ನಿಂತಿರುವಂತದ್ದು.  ಸುಮಿತ್ರಾ ಅವರು ಪಿ.ಬಿ. ಶ್ರೀನಿವಾಸರೊಂದಿಗೆ ಹಾಡಿರುವ ‘ಮಧುರ ಮಧುರವೀ ಮಂಜುಳಗಾನ’ ಕನ್ನಡ ಚಿತ್ರರಂಗದ ಅಮರ ಗೀತೆಗಳಲ್ಲೊಂದು.  ‘ಸಂಪಿಗೆ ಮರದ ಹಸುರೆಲೆ ನೋಡುವೆ ಕೋಗಿಲೆ ಹಾಡಿತ್ತು’ ಹಾಡನ್ನು ಸವಿಯದ ಕನ್ನಡಿಗರೇ ಇಲ್ಲ.  ಬಿ. ಕೆ ಸುಮಿತ್ರಾ ಅವರ ಆಗಾಧ ಪ್ರತಿಭೆಗೆ ಹೋಲಿಸಿದಲ್ಲಿ ಸುಮಿತ್ರಾ ಅವರ ಹಾಡಿರುವ ಚಿತ್ರಗೀತೆಗಳ ಸಂಖ್ಯೆ ಕಡಿಮೆ ಎಂಬ ನಿಟ್ಟಿನಲ್ಲಿ ನನಗಂತೂ ಅವರು ಈ ಚಿತ್ರರಂಗವೆಂಬ ಸಂಪಿಗೆ ಮರದ ಹಸುರೆಲೆಗಳ ನಡುವೆ ಆಗಾಗ  ಅಪರೂಪಕ್ಕೆ ಕೋಗಿಲೆಯಂತೆಯೇ ಹಾಡಿ ಮನೋಜ್ಞ ಹಾಡುಗಳನ್ನು ನೀಡಿದವರು ಎಂಬ ಭಾವ ಸ್ಫುರಿಸುತ್ತದೆ.  ಅವರಿಗೆ ಸಂದಿರುವ ‘ಕನ್ನಡದ ಕೋಗಿಲೆ’ ಎಂಬ ಬಿರುದು ಕೂಡಾ ಅತ್ಯಂತ ಸಾರ್ಥಕವಾದದ್ದು.

ಬಿ. ಕೆ. ಸುಮಿತ್ರಾ ಅವರ ಬಹುತೇಕ ಹಾಡುಗಳು ನೆನಪಿನಲ್ಲಿ ಉಳಿದಿವೆ.  ‘ಗಾಂಧೀ ತಾತನ ಸನ್ನಿಧಿಗೊಂದು’,  ‘ಓಡಿಬಾ ಓಡೋಡಿ ಬಾ’, ‘ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಣ್ಣದ ಅಂಗಿ ತೊಟ್ಟ ತಂಗಿ’, ‘ಅ ಆ ಇ ಈ ಕನ್ನಡದ ಅಕ್ಷರ ಮಾಲೆ’, ‘ಕೋಪವೇಕೆ ಕೋಪವೇಕೆ ಅಜ್ಜಿ’, ‘ನಿನ್ನೊಲುಮೆ ನಮಗಿರಲಿ ತಂದೆ’, ‘ವೀಣಾ ನಿನಗೇಕೋ ಈ ಕಂಪನ’, ‘ಮನೆಯೇ ಬೃಂದಾವನ ಮನಸೇ ಸುಖ ಸಾಧನ’, ‘ಧರಣಿ ಮಂಡಲ ಮಧ್ಯದೊಳಗೆ’, 'ಒಂದು ದಿನ ರಾತ್ರಿಯಲಿ ಕಂಡೆ ಕನಸನ್ನು ಬಣ್ಣ ಬಣ್ಣದ ಬೆಳಕಲಿ ಕಂಡೆ ನಿನ್ನ ಪ್ರೇಮ ಸ್ವರೂಪವನ್ನು' , ‘ನೀಲ ಗಗನಕೆ ಹಾರುವ ಹಾರಾಡುವ ಓ ಗಾಳಿಪಟ’  ಇವುಗಳಲ್ಲಿ ಪ್ರಮುಖವಾದವು. ಹಂಸಗೀತೆ ಚಿತ್ರದಲ್ಲಿ ಡಾ. ಬಾಲಮುರಳೀ ಕೃಷ್ಣ, ಪಿ. ಲೀಲಾ ಅವರ ಜೊತೆಯಲ್ಲಿ ಬಿ.ಕೆ. ಸುಮಿತ್ರಾ ಅವರ ಗಾಯನ ಕೂಡಾ ಅಮರವಾಗಿ ನಿಲ್ಲುವಂತದ್ದು.

ಬಿ.ಕೆ. ಸುಮಿತ್ರಾ ಅವರಿಗೆ ಸುಗಮ ಸಂಗೀತದ ಕಡೆ ಹೆಚ್ಚು ಒಲವು.  ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಅವರ ‘ಯಾವ ಮೋಹನ ಮುರಳಿ ಕರೆಯಿತು’ ಒಂದು ರೀತಿಯಲ್ಲಿ ಹರಿವ ನೀರಿನಂತೆ ಮೃದುವಾದದ್ದು.  ಅಂತೆಯೇ ‘ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ ಬೇಗ ಸಖಿ’ಯಲ್ಲಿ ತುಂಬಿರುವ ಪ್ರೇಮ ಭಾವ ಅನನ್ಯವಾದದ್ದು.  ‘ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು’ ಹಾಡಿನಲ್ಲಿ ಹೊರಸೂಸುವ ಕಂದನ ಪ್ರೀತಿ ಸ್ಮರಣೀಯವಾದದ್ದು.  ‘ದೇವ ನಿನ್ನ ಮಾಯೆಗಂಜಿ ನಡುಗಿ ಬಾಡೆನು, ನಿನ್ನ ಇಚ್ಚೆಯಂತೆ ನಡೆವೆ ಅಡ್ಡಿ ಮಾಡೆನು’, ‘ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು’ ಅಂತಹ ಹಾಡಿನಲ್ಲಿರುವ ಮೊರೆ, ಆರ್ದ್ರತೆ ಒಳಗಿನ ಅಂತರಾತ್ಮನನ್ನು ಸ್ಪರ್ಶಿಸುವಂತದ್ದು.

ಅಂದಿನ ದಿನಗಳಲ್ಲಿ ಪ್ರಾತಃಕಾಲದ ಭಕ್ತಿಗೀತೆಗಳು ಅವಿಸ್ಮರಣೀಯವಾದದ್ದು.  ಎಸ್. ಜಾನಕಿ ಅವರ ‘ಗಜಮುಖನೆ ಗಣಪತಿಯೇ’, ಪಿ.ಬಿ.ಎಸ್. ಅವರ ‘ಎದ್ದೇಳು ಮಂಜುನಾಥ’, ವಾಣಿ ಜಯರಾಂ ಅವರ ‘ಶಾಂತರಸ ಹರಿದಿಹುದು ತುಂಗೆಯಾಗಿ’ ಇವು ಪ್ರಮುಖವಾದದ್ದು.  ಈ ಸಾಲಿನಲ್ಲಿ ಪ್ರತಿಷ್ಠಿತವಾದ ಮತ್ತೊಂದು ಗೀತೆ ಸುಮಿತ್ರಾ ಅವರ ‘ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೇ, ಮಹಾಮಹಿಮ ಮಂಜುನಾಥ ನಮೋ ಎನ್ನುವೆ”.  ಹ್ಞಾ, ಅಷ್ಟೇ ಅಲ್ಲ.  ‘ಅಧರಂ ಮಧುರಂ, ವದನಂ ಮಧುರಂ, ನಯನಂ ಮಧುರಂ, ಹಸಿತಂ ಮಧುರಂ, ಹೃದಯಂ ಮಧುರಂ, ಗಮನಂ ಮಧುರಂ, ಮಧುರಾಧಿಪತೆ ಅಖಿಲಂ ಮಧುರಂ’ ಎಂದು ಪ್ರಾರಂಭವಾಗುವ ‘ಉಡುಪಿಯಿದು ಉಡುಪಿಯಿದು ಗೀತಾಚಾರ್ಯನ ಕ್ಷೇತ್ರವಿದು’ ಹಾಡು.... ಅದೊಂದು ‘ಕ್ಲಾಸ್’.  ‘ಶರಣರ ಕಾಯೇ ಚಾಮುಂಡೇಶ್ವರಿ ಶಂಕರಿ ಶಾಂಬವಿ ಶ್ರೀ ಭುವನೇಶ್ವರಿ’, ‘ನೋಡು ನೋಡು ಕಣ್ಣಾರ ನಿಂತಿಹಳು’, ‘ಇಂದು ಶುಕ್ರವಾರ ಶುಭವ ತರುವ ವಾರ’ ಮುಂತಾದ ಹಾಡುಗಳು ಕೂಡಾ ಆಪ್ತಸ್ಮರಣೀಯವಾದುದು..

ಜನಪದ ಗೀತೆಗಳನ್ನು ನಗರದ ಜನರ ಕಿವಿಗಳಿಗೆ ತಲುಪಿಸುವ ಕಾರ್ಯದಲ್ಲಿ ಬಿ. ಕೆ. ಸುಮಿತ್ರಾ ಅವರ ಮಾಡಿರುವ ಕೆಲಸ ಕೂಡಾ ಮಹತ್ತರವಾದದ್ದು.  ಅವರು ಜನಪದ ಗೀತೆಗಳ ಕ್ಯಾಸೆಟ್ಟು ಕನ್ನಡಿಗರಿಗೆ ಸಾರ್ವಕಾಲಿಕವಾಗಿ ದೊರೆತಿರುವ ಮಹತ್ತರವಾದ ಕೊಡುಗೆ.   ಅವರ ‘ನಿಂಬೀಯಾ ಬನಾದ ಮ್ಯಾಗ ಚಂದ್ರಾಮಾ ಚೆಂಡಾಡಿದ’ ಹಾಡಂತೂ ಜನಪದ ಗೀತೆಗಳ ಬಗ್ಗೆಯೇ ಮೋಹ ಹುಟ್ಟಿಸುವಂತದ್ದು.

ಅಂದಿನ ದಿನಗಳಲ್ಲಿ ಬಿ. ಕೆ. ಸುಮಿತ್ರಾ ಮತ್ತು ಅವರ ಪತಿ ಸುಧಾಕರ್ ಅವರು ನಡೆಸುತ್ತಿದ್ದ ವಾದ್ಯಗೋಷ್ಠಿಗಳನ್ನು ಎಲ್ಲೆಲ್ಲಿ ನಡೆದರೂ ಹೋಗಿ ಕೇಳುತ್ತಿದ್ದ ನೆನಪಾಗುತ್ತದೆ.  ಪ್ರಖ್ಯಾತ ಸಂಗೀತ  ನಿರ್ದೇಶಕ ಇಳೆಯರಾಜಾ ಅವರು ಕೂಡಾ ತಮ್ಮ  ಪ್ರಾರಂಭಿಕ ದಿನಗಳಲ್ಲಿ ಬಿ. ಕೆ. ಸುಮಿತ್ರಾ ಅವರ ವಾದ್ಯಗೋಷ್ಠಿಯಲ್ಲಿ ಓರ್ವ ವಾದ್ಯಗಾರರಾಗಿದ್ದರು.

ಇಂದು ಬಿ.ಕೆ ಸುಮಿತ್ರಾ ಅವರ ಪುತ್ರಿ ಸೌಮ್ಯ ಹಿಂದೀ ಚಿತ್ರರಂಗದಲ್ಲಿ ಪ್ರಮುಖ ಹೆಸರು.  ಮಗ ಸುನಿಲ್ ಚಿತ್ರ ನಟ.  ಬಹುಷಃ ಬಿ. ಕೆ. ಸುಮಿತ್ರಾ ಅವರಿಗೆ ಇಂದಿದ್ದ ಬೆಂಗಳೂರಿನ ಧ್ವನಿಮುದ್ರಣ ವ್ಯವಸ್ಥೆಗಳು ಲಭ್ಯವಿದ್ದಿದ್ದಲ್ಲಿ ಅವರು ಸಮಸ್ತ ಭಾರತ ಸಂಗೀತಲೋಕದಲ್ಲಿ ವಿಖ್ಯಾತರಾಗುತ್ತಿದ್ದುದರಲ್ಲಿ ಸಂದೇಹವಿಲ್ಲ.  ಕನ್ನಡ ನಾಡು ಕೂಡಾ ತನ್ನದೇ ಆದ ‘ಕೋಗಿಲೆ’ಯ ಝೇಂಕಾರವನ್ನು ಎಲ್ಲೆಲ್ಲಿಯೂ ಅಣುರಣಿಸಿತ್ತು ಎಂಬ ಹೆಮ್ಮೆಯನ್ನು ನಮ್ಮೆಲ್ಲರಿಗೆ ತಂದ ಬಿ.ಕೆ. ಸುಮಿತ್ರಾ ಅವರಿಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ.

ಬಿ. ಕೆ. ಸುಮಿತ್ರಾ ಅವರಿಗೆ ಹಲವಾರು ಗೌರವಗಳು ಸಂದಿವೆ ನಿಜ.  ಅವರು ಇನ್ನೂ ಹೆಚ್ಚಿನದಕ್ಕೆ ಅರ್ಹರು.  ಅವೆಲ್ಲವೂ ಅವರಿಗೆ ಸಲ್ಲಲಿ. ಅವರ ಬದುಕು ಸುಂದರವಾಗಿರಲಿ, ಸಂತಸಪೂರ್ಣವಾಗಿರಲಿ ಎಂಬುದು ನಮ್ಮೆಲ್ಲರ ಹಾರೈಕೆ.

Tag: B. K. Sumitra

ಕಾಮೆಂಟ್‌ಗಳಿಲ್ಲ: