ಗುರುವಾರ, ಆಗಸ್ಟ್ 29, 2013

ಸಿ ಆರ್ ಸಿಂಹ


ಸಿ ಆರ್ ಸಿಂಹ

ನಮ್ಮ ಸಿ. ಆರ್. ಸಿಂಹ ಅಂದರೆ ಅದೊಂದು ಅನುಭವ!  ಸಿ ಆರ್ ಸಿಂಹ ಅವರನ್ನು ನಾಟಕಗಳಲ್ಲಿ, ಸಿನಿಮಾದಲ್ಲಿ, ದೂರದರ್ಶನದಲ್ಲಿ ಹೀಗೆ ಎಲ್ಲೇ  ನೋಡಿರಲಿ, ಅದೊಂದು ರೀತಿಯ ಪ್ರೇಮ ಹುಟ್ಟಿಬಿಡುತ್ತಿತ್ತು.  ಆ ತರಹ ಪ್ರೇಮ ಭಾವ ಹುಟ್ಟಿಸೋ ಕಲಾವಿದರು ತುಂಬಾ ತುಂಬಾ ಕಡಿಮೆ. ಜೂನ್ 16, 1942 ಸಿಂಹರು ಜನಿಸಿದ ದಿನ.

ಸಿ ಆರ್. ಸಿಂಹರನ್ನ ನೀವೇನಾದ್ರೂ ಟಿಪಿಕಲ್ ಟಿ. ಪಿ. ಕೈಲಾಸಂ, ತುಘಲಕ್ ನಾಟಕದಲ್ಲಿ ನೋಡಿದ್ರಂತೂ ಆ ಪ್ರತಿಭೆಯ ಮಹಾಸಾಗರದ ಅಲೆಯಲ್ಲಿ ಎಲ್ಲೋ ಕರಗಿಹೋಗಿರುತ್ತೀರಿ. ಅವರ 'ಒಥೆಲೊ'. 'ಚೆಗೆವಾರ', 'ಭೈರವಿ', ‘ರಸ-ಋಷಿಮುಂತಾದವುಗಳ ಪಾತ್ರ ನಿರ್ವಹಣೆ ಬಗ್ಗೆ ಓದಿದ್ದೇವೆ.   ಕಾಕನಕೋಟೆಚಿತ್ರವನ್ನು ಮೈಸೂರಿನ ಪ್ರಭುದೇವ ಚಿತ್ರಮಂದಿರದಲ್ಲಿ 35 ಪೈಸಾ ಕೊಟ್ಟು ನೋಡಿದ್ದು ಇನ್ನೂ ನೆನಪಲ್ಲಿದೆ.   ನಮ್ಮ ಸಿ ಆರ್ ಸಿಂಹ  ಅವರು ಅದೆಷ್ಟು ಚೊಕ್ಕವಾಗಿ ಎಲ್ಲರಿಗೂ ಇಷ್ಟ ಆಗೋ ಹಾಗೆ ಆ ಸಿನಿಮಾ ಮಾಡಿದ್ದಾರೆ ಅಂತ ಈಗ್ಲೂ ಅಚ್ಚರಿಯಾಗುತ್ತೆ.  ಮುಂದೆ ಅವರು ಶಿಕಾರಿ, ಅಶ್ವಮೇಧ ಮುಂತಾದ ಕೆಲವು ಚಿತ್ರ ಕೂಡಾ ಮಾಡಿದ್ದರು.  ಆದ್ರೆ ಕಾಕನಕೋಟೆ ಚಿತ್ರ ಮಾತ್ರ ವಿಶೇಷವಾದದ್ದು, ಅದರಲ್ಲಿ ಸಿ. ಅಶ್ವಥ್ ಮೊದಲಬಾರಿಗೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು, ಅದರಲ್ಲಿನ ಮಾಸ್ತಿಯವರ ಕಥಾನಕ, ಹಾಡು, ಚಿತ್ರಣ, ಪರಿಸರ, ಜಾನಪದ ವಿನ್ಯಾಸ, ಅಭಿನಯ ಒಂದು ರೀತಿಯಲ್ಲಿ ಒಟ್ಟಾರೆ ambience ಅಂತ ಏನು ಹೇಳತೆವೋ ಇವೆಲ್ಲಾ ತುಂಬಾ ಇಷ್ಟ ಆಗೋ ಹಾಗಿತ್ತು.  ಅದೊಂದು ಮರೆಯಲಾಗದ ಅನುಭವ.

ಶೂದ್ರಕನಿಂದ ಶೇಕ್ಸ್‌ಪಿಯರ್‌ವರೆಗೂ ಅನೇಕ ವಿಶ್ವಶ್ರೇಷ್ಠ ನಾಟಕಗಳ ಜತೆಗೆ ನಮ್ಮವರೇ ಆದ ಮಾಸ್ತಿ, ಲಂಕೇಶ್‌ ನಾಟಕಗಳನ್ನೂ ತಮ್ಮ ಅರ್ಥಪೂರ್ಣ ನಿರ್ದೇಶನದ ಮೂಲಕ ಪರಿಣಾಮಕಾರಿ ಪ್ರಯೋಗಗಳಾಗಿಸಿ ನಟರಂಗಹಾಗೂ ವೇದಿಕೆತಂಡಗಳಿಂದ ಸಿಂಹದಂತೆ ಅವರು ಮುನ್ನಡೆದವರು. ಬಿ. ಎಲ್‌.ಟಿ.(Bangalore Little Theatre) ಮೂಲಕ ಇಂಗ್ಲೀಷ್‌ ನಾಟಕಗಳಲ್ಲೂ ಹೆಸರು ಮಾಡಿದ್ದಲ್ಲದೆ ಕರ್ಣ, ಭೈರವಿ, ರಸಋಷಿ ಗಳಂಥ ನಾಟಕ ರಚನೆಗಳಲ್ಲಿ ಸೈ ಎನಿಸಿಕೊಂಡು ಸಿಂಹ ನಾಟಕಕಾರರೂ ಆಗಿದ್ದರು.

ಅಮೆರಿಕಾದಲ್ಲಿ ಗೊರೂರುಧಾರಾವಾಹಿಗಾಗಿ ಗೊರೂರರ ಪಾತ್ರಕ್ಕೆ ಜೀವ ತುಂಬುವ ಮೂಲಕ ಕನ್ನಡದ ಇನ್ನೂ ಒಬ್ಬ ಸಾಹಿತಿಯ ಬದುಕು-ಸಾಧನೆಗಳು ಕಿರುತೆರೆಯ ಮೇಲೆ ಮೂಡಿಬರಲು ಸಿಂಹ ಪೂರಕ ಕೊಡುಗೆ ನೀಡಿದ್ದರು.

ಸಿ ಆರ್ ಸಿಂಹ ಅಂದ್ರೆ ಅದೊಂದು ರೀತಿಯ ಸಿಂಹ ಗಾಂಭೀರ್ಯವೇ.  ಸಿಂಹ ಹೇಗೆ ನಡೆದರೂ ಅದಕ್ಕೊಂದು ಘನತೆ ಇದ್ದ ಹಾಗೆ.  ಅದೊಂದು ನೀ ತಂದ ಕಾಣಿಕೆಅಂತ ಹಿಂದಿಯ ಶರಾಭಿಚಿತ್ರದ ಕೆಟ್ಟ ಕನ್ನಡದ ರೀಮೇಕ್.  ಆದ್ರೆ ಅದರಲ್ಲಿ ಸಿಂಹ ಮಾಡಿರೋ ಅಭಿನಯ ಇಂದೂ ಮರೆಯೋಕ್ಕಾಗೋಲ್ಲ.  ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳುಸಿನಿಮಾದಲ್ಲಿ ಸಿಂಹ ಅವರು ಅನಂತ್ ನಾಗ್ ಅವರ ಅಪ್ಪನಾಗಿ  ಮಾಡಿರೋ ಹಾಸ್ಯ ಪೂರ್ಣ, ಚೆಲ್ಲು ಚೆಲ್ಲು ಮತ್ತು ಗಾಂಭೀರ್ಯಗಳ ವಿವಿಧ ಮುಖ ದರ್ಶನಗಳು ಮತ್ತು ಸಂಭಾಷಣೆ ಹೇಳುವ ಪರಿಯ ಆ  ಪಾತ್ರ ಕೂಡಾ ಮರೆಯಲಾಗದ್ದು.  ಇವೆಲ್ಲಕ್ಕೂ ಮೀರಿದಂತದ್ದು ಇಂದಿನ ರಾಮಾಯಣಎಂಬ ಚಿತ್ರದಲ್ಲಿ ಅವರು ರಾಮಾಚಾರ್ಯರಾಗಿ ಮನೆಯ ಹಿರಿಯರಾಗಿ  ನಿರ್ವಹಿಸಿರುವ ಪಾತ್ರ.

ಸಿ ಆರ್ ಸಿಂಹ ಅವರನ್ನು ವಾಣಿಜ್ಯ ಚಿತ್ರಗಳಿಂದ ಕಲಾತ್ಮಕ ಚಿತ್ರಗಳ ಪರಿಧಿಗೆ ತಂದಾಗ ಅದು ಮತ್ತಷ್ಟು ಸೊಗಸಿನದು.  ಅವರು ಎಂ. ಎಸ್. ಸತ್ಯು ಅವರ ಚಿತೆಗೂ ಚಿಂತೆ, ಬರಲಂಕೇಶರ ಅನುರೂಪ ಮುಂತಾದ  ಚಿತ್ರಗಳಲ್ಲಿ  ನೀಡಿರುವ ಅಭಿನಯ ಅವಿಸ್ಮರಣೀಯವಾದದ್ದು.  ಅಂದಿನ ದಿನಗಳಲ್ಲಿ ಜನ ಕಲಾತ್ಮಕ ಚಿತ್ರಗಳಿಗೂ ಯಾಕೆ ಮುಗಿಬಿದ್ದು ನೋಡ್ತಾ ಇದ್ರೂ ಎಂಬುದಕ್ಕೆ ಇಂಥಹ ಸೊಗಸು, ಹಾಸ್ಯಗಳ ಅಭಿವ್ಯಕ್ತಿ ಕೂಡಾ ಕಾರಣ ಇರಬಹುದೇ ಅಂತ ಅನ್ನಿಸುತ್ತೆ.  ಚಿತೆಗೂ ಚಿಂತೆಯಲ್ಲಿ ಅವರ ಅಭಿನಯ ನಮ್ಮ ಕಾಲದ  ಸೂಪರ್ ಸ್ಟಾರ್ ಗಳ ಅಭಿನಯವನ್ನೂ ಮೀರಿಸುವಂತದ್ದು.

ಸಿಂಹರನ್ನು ವೈಯಕ್ತಿಕವಾಗಿ ನಾನು  ಯಾವ ಯಾವ ನಾಟಕದಲ್ಲಿ, ಸಭೆಗಳಲ್ಲಿ, ಸಿನಿಮಾದಲ್ಲಿ ನೋಡಿದ್ದೇನೋ ಅಷ್ಟು ಮಾತ್ರ ಹೇಳ್ದೆ.  ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ ಹಾಗೂ ಕಲೆಯ ಆವರಣದಲ್ಲಿ ಅವರು ಮೀಯ್ದು ಬಂದಿರುವ ಸಾಗರ ಬೃಹತ್ತಾದದ್ದು ಎಂಬುದು ಇಡೀ ನಾಡಿಗೇ ಗೊತ್ತಿದೆ. ಸಿಂಹ ಏನೇ ಮಾಡಿದರೂ ಅದೊಂದು ಅಚ್ಚುಕಟ್ಟು.  ಅವರು ಭಾಷಣ ಮಾಡ್ಲಿ,  ‘ನಾನು ಕೊಳೀಕೆ ರಂಗಅಂತ  ಹಾಡು ಹೇಳ್ಲಿ, ಸುಮ್ಮನೆ ಸೌಜನ್ಯದಿಂದ ನಗಲಿ, ಗಾಂಭೀರ್ಯದಲ್ಲಿ ಮೇಳೈಸಲಿ, ‘ನಿಮ್ಮ ಸಿಮ್ಮಎಂಬ ಅವರ ಪತ್ರಿಕೆಯ ಬರವಣಿಗೆಯಲ್ಲಿರಲಿ, ಅವರು ಮನೆ ಕಟ್ಟಿರುವ ರೀತಿಯಲ್ಲಾಗಲೀ ಎಲ್ಲವೂ ವಿಶೇಷವೇ.

ಸಿಂಹ ಅವರಿಗೆ ಹಲವಾರು ಪ್ರಶಸ್ತಿಗಳು ಅದರಲ್ಲೂ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೂಡಾ ಬಂದಿದೆ.

ಅವರ ಮನೆ ಗುಹೆಬಗ್ಗೆ ಟಿ.ವಿ.ಯಲ್ಲಿ ನೋಡಿದ್ದೇವೆ.  ಪತ್ರಿಕೆಯಲ್ಲಿ ತುಂಬಾ ಜನ ಬರೆದಿರೋದನ್ನ ಓದಿದ್ದೇವೆ.  ಅದರ ಚಿತ್ರಗಳನ್ನು ನೋಡಿದ್ದೇವೆ. ಟಿ.ವಿ ಯಲ್ಲಿ ನೋಡಿದ ಅವರ ಮನೆಯಲ್ಲಿರುವ ಚಾರ್ಲಿ ಚಾಪ್ಲಿನ್ ಅಂತೂ ಮನದಲ್ಲಿ ತುಂಬಾ ನಿಂತಿದ್ದಾನೆ.  ಒಂದು ರೀತಿ ಸಿ. ಆರ್. ಸಿಂಹ ಅವರು ನಮ್ಮೆಲ್ಲರ ಮನದಲ್ಲಿ ನಿಂತಿರೋ ತರಹ. 

ಸಿಂಹ ಅವರು 2014 ಫೆಬ್ರುವರಿ ಮಾಸದಲ್ಲಿ ಈ ಲೋಕವನ್ನಗಲಿದರು. ಅವರ ಉಳಿಸಿರುವ ನೆನಪು ಅಮರವಾದದ್ದು.  ಈ ಮಹಾನ್ ಚೇತನಕ್ಕೆ ನಮ್ಮ ನಮನ.


Tag: C. R. Simha

ಕಾಮೆಂಟ್‌ಗಳಿಲ್ಲ: