ಶುಕ್ರವಾರ, ಆಗಸ್ಟ್ 30, 2013

ಬಿಂದೇಶ್ವರ್ ಪಾಠಕ್

ಬಿಂದೇಶ್ವರ್ ಪಾಠಕ್

ಪ್ರತಿ ದಿನ ರಸ್ತೆಯಲ್ಲಿ ತಿರುಗಾಡುವಾಗ ಎಲ್ಲೆಂದರಲ್ಲಿ ಕಸ ರಾರಾಜಿಸುತ್ತಿರುತ್ತದೆ.  ಅದೂ ಪ್ಲಾಸ್ಟಿಕ್ ಯುಗ ಬಂದ ಮೇಲಂತೂ ಹಲವು ಯುಗಯುಗಾಂತರಗಳ ಕಸ ನಮ್ಮ ಸುತ್ತಲಿನ ಪರಿಸರದಲ್ಲಿ ಕರಗಿದ್ದೇ ಇಲ್ಲ.  ವಾಯುವಿಹಾರಕ್ಕೋ, ಪ್ರಶಾಂತವಾದ ಉದ್ಯಾನವನಕ್ಕೋ, ಸಮುದ್ರತೀರಕ್ಕೋ ಹೋದಾಗ ಈ ಕರಗದ ಕಸ ನಮ್ಮ ಮನಮುದುಡುವಂತೆ ಮಾಡಿ ನಮ್ಮ ಹೃದಯಕ್ಕೆ ಬೇಕಾದ ಅರಳುವಿಕೆಯನ್ನು ನೀಡುವುದನ್ನು ದೂರವಾಗಿಯೇ ಇರಿಸುತ್ತದೆ.  ಅಂತಹ ಕ್ಷಣಿಕ  ಕಂಪನ್ನು ಪಡೆಯಬೇಕೆಂದರೂ ವಿಮಾನದಲ್ಲಿ ಹಾರಿ ಯಾವುದೋ ಸಂರಕ್ಷಿತ ವಿಹಾರ ಸ್ಥಳಕ್ಕೆ ಹೋಗಿ ಲಕ್ಷಾಂತರ ಹಣ ಖರ್ಚು ಮಾಡುವ ಮತ್ತು ಸಾಧ್ಯವಾದರೆ ಅಲ್ಲೂ ನಮ್ಮ ಒಂದಷ್ಟು ಕಸವನ್ನು ಹರಡಿ ಬರುವ ಖಯಾಲಿ ನಮ್ಮದಾಗುತ್ತಿದೆ.     ಅಂದು ಋಷಿ ಮುನಿಗಳು ತಪಸ್ಸು ಮಾಡುವಾಗ ಅವರ ಸುತ್ತ ಹುತ್ತ ಕಟ್ಟಿದ್ದರೂ ಅವರ ಚಿತ್ತ ಕೆಡುತ್ತಿರಲಿಲ್ಲ.  ಇಂದು ನಾವೂ ಒಂದು ರೀತಿಯಲ್ಲಿ ಋಷಿ ಮುನಿಗಳೇ.  ನಮ್ಮ ಸುತ್ತ ಕಸದ ಹುತ್ತ ಸುತ್ತುಗಟ್ಟಿದ್ದರೂ ನಾವು ನಿರ್ಲಿಪ್ತರು.  ಹಿಮಾಲಯದ ಮೌಂಟ್ ಎವರೆಸ್ಟ್ ಶಿಖರದಲ್ಲಿ ಎಷ್ಟೋ ವರ್ಷಗಳಷ್ಟು ಕಾಲ ಕದಲಿಸಲೂ ಆಗದಂತಹ ಕಸಪವರ್ತ ಹಿಮಪರ್ವತಕ್ಕೆ ಪರ್ಯಾಯವಾಗಿ ರೂಪುಗೊಳ್ಳುತ್ತಿದೆ ಎಂಬುದು  ಈ ಎತ್ತರದ ಶಿಖರವನ್ನು ಏರಿದವರ ಅಳಲು.  ಮುಂದುವರೆದ ದೇಶಗಳಲ್ಲೂ ನಮ್ಮಷ್ಟು ರಾಜಾರೋಷವಾಗಿ ಕಸ ಪರ್ವತ ನಿರ್ಮಾಣವಾಗದಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಅಂಡರ್ ದ ಕಾರ್ಪೆಟ್ಅಥವಾ ಪಕ್ಕದಲ್ಲಿರುವ ನಮ್ಮಂತಹ ದೇಶಗಳನ್ನು ಅದಕ್ಕಾಗಿ ಪುಕ್ಕಟೆ ಖಾಲಿ ಸೈಟುಗಳಾಗಿಮಾಡಿಕೊಂಡ ಮನೋಭಾವನೆ ಸಾಕಷ್ಟಿರುವುದು ಕಂಡುಬರುತ್ತದೆ.  ಒಂದೇ ವೆತ್ಯಾಸವೆಂದರೆ ಅಲ್ಲಿ ಆಗ್ಗಿಂದಾಗ್ಗೆ ಕಸ ತೆಗೆಯುವರು ಮೈಬಗ್ಗಿಸಿ ಕಸ ತೆಗೆಯುತ್ತಾರೆ.  ನಮ್ಮವರು ಇರುವ ಕಸವನ್ನು ಕೆದಕಿ ಹರಡಿ ವ್ಯಾಪಿಸಿ ಅಭಿವೃದ್ಧಿಸಿ ಹೋಗುತ್ತಾರೆ.

ಇದು ಕಸವೆಂಬ ನಮ್ಮ ಕಲ್ಮಶ ಪ್ರವೃತ್ತಿಯ ಬಣ್ಣನೆಯಾದರೆ, ಕಕ್ಕಸವೆಂಬುದು ನಮ್ಮಲ್ಲಿ ಯುಗಯುಗಾಂತರಗಳ ಭೀಕರತೆಯೇ ಸರಿ.  ಒಂದು ಕಾಲದಲ್ಲಿ ಜನ ಸಂಖ್ಯೆ ಕಡಿಮೆ ಇದ್ದಾಗ ಜನ ಹೊಲಗದ್ದೆಗಳ ವಿಶಾಲವಾದ ಪ್ರಪಂಚದಲ್ಲಿ ತಮ್ಮ ಬಹಿರ್ದೆಶೆಗಳನ್ನೆಲ್ಲಾ ಪ್ರಾಕೃತಿಕವಾಗಿ ರಸಗೊಬ್ಬರವಾಗಿಸುತ್ತಿದ್ದರು.  ಬರಬರುತ್ತಾ ಜನಸಂಖ್ಯೆ ಏರುತ್ತಿದ್ದಂತೆ ಒಬ್ಬನಿಲ್ಲದೆ ಇರುವಾಗ ಮತ್ತೊಬ್ಬ ಎಂಬ ಪ್ರವೃತ್ತಿಯಿಂದ, ಆತ ಹಿರಿಯ ಆತ ಗಂಡಸು ಆತ ಶ್ರೀಮಂತ ಹಾಗಾಗಿ ಆತನಿಗೆ ಸ್ವಾತಂತ್ರ್ಯವಿದೆ ಆತನಿಗೆ ಅನಾನುಕೂಲವಾಗದಂತೆ ಮಾತ್ರ ಇನ್ನಿತರರು; ನಾನು ಸೃಷ್ಟಿಸುತ್ತಿರುವುದು  ಹೇಯತೆಯಾದರೂ  ಪರವಾಗಿಲ್ಲ ಆದರೆ ನನ್ನ ಗುರುತು ಸಿಗಬಾರದು ಎಂದು  ರೈಲು ಬದಿಗಳಲ್ಲಿ ಕಾಣುವ ಮುಖ ಮುಚ್ಚಿಕೊಳ್ಳುವಿಕೆಒಬ್ಬ ಸೃಷ್ಟಿಸಿದ ಭೀಕರತೆಯನ್ನು ಅಥವಾ ಹೇಯವನ್ನು  ಮತ್ತೊಬ್ಬ ಬಳಿಯಬೇಕುಅದಕ್ಕೆ ಮನೆಗೆ ಬರುವ ಸೊಸೆಯೇ ಆಗಬೇಕು ಅಥವಾ ಅದಕ್ಕೊಬ್ಬ ಕೂಲಿ ಆಳು ಇರಬೇಕು ಮತ್ತು ಹಾಗೆ ಬಳಿಯುವವ ಹೀನಕುಲದವ ಎಂದು ಕಡೆಗಾಣಿಸಬೇಕು ಇವೇ ಮುಂತಾದ ಅನೇಕ ಅಮಾನುಷೀಯ ಬೆಳವಣಿಗೆಗಳು ಈ ಲೋಕದಲ್ಲಿ ಅಪಾರವಾಗಿ  ಜರುಗಿವೆ.  ಇನ್ನೂ ಜರುಗುತ್ತಲೇ ಇವೆ.

ಇಂತಹದ್ದು ಬಹಳಷ್ಟು ಜನರ ಬುದ್ಧಿವಂತಿಕೆಗೆ ವಸ್ತುವಾಗಿರುತ್ತದೆ ಎಂಬುದು ನಿಜ.  ಹಲವಾರು ಮನಸ್ಸುಗಳನ್ನು ಮರುಗುವಂತೆ ಮಾಡುತ್ತಿದೆ ಎಂಬುದೂ ನಿಜ.  ಆದರೆ ಇಂಥಹ  ಕಕ್ಕಸವೆಂಬ ನಿಷ್ಠುರ ದೃಶ್ಯವಿರಲಿ, ಆ  ಮಾತು ಬರುವುದಕ್ಕೆ ಮುಂಚೆಯೇ ಮೂಗುಹಿಡಿಯುವವರು ಬಹುತೇಕರು.  ಆದರೆ ಒಬ್ಬರು ಮಾತ್ರ  ಇದಕ್ಕೊಂದು ಅರ್ಥಪೂರ್ಣ ಪರಿಹಾರ ಕಂಡುಹಿಡಿದು ಅದನ್ನು ತನಗೆಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅದನ್ನು  ಜನರ ಬಳಿ ಕೊಂಡೊಯ್ಯುವವರೆಗೆ ವಿಶ್ರಮಿಸಲೇ ಇಲ್ಲ.  ಇವರೇ ಈ ಸಮಸ್ಯೆಗೆ ಸಂಪೂರ್ಣ ಪರಿಹಾರ ಕಾಣುವವರೆಗೂ  ನಾನು ವಿಶ್ರಮಿಸುವುದಿಲ್ಲಎಂದು ಅಹರ್ನಿಶಿ ದುಡಿಯುತ್ತಿರುವ  ಬಿಂದೇಶ್ವರ್ ಪಾಠಕ್.  ಮೇಲೆ ಹೇಳಿದ ವೈಪರೀತ್ಯಗಳನ್ನೆಲ್ಲಾ  ಅವರೂ ಕಂಡರು, ಅನುಭವಿಸಿದರು, ಚಿಂತಿಸಿದರು, ಮರುಗಿದರು.  ಆದರೆ  ಅಷ್ಟಕ್ಕೇ ನಿಲ್ಲಲಿಲ್ಲ.  ನಿತ್ಯ ಕಾರ್ಯಪ್ರವೃತ್ತರಾದರು. ಬದಲಾವಣೆಯ ಕ್ರಾಂತಿಯನ್ನೇ ತಂದರು. 

ಇಂದು ಬಿಂದೇಶ್ವರ್ ಪಾಠಕ್ ಅವರನ್ನು ಅರಿಯದವರೇ ಇಲ್ಲ.  ಎಲ್ಲ ರಾಷ್ಟ್ರಗಳ ಮಹಾನ್ ಪ್ರಶಸ್ತಿಗಳೂ ಅವರನ್ನರಸಿ ಬಂದಿವೆ.  ಸರ್ಕಾರೇತರ ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಇಂದು  ಸುಲಭ್ ಇಂಟರ್ ನ್ಯಾಷನಲ್ ಪ್ರತಿಷ್ಠಿತ ಸ್ಥಾನಮಾನ ಪಡೆದಿದೆ.  ವಿಶ್ವಸಂಸ್ಥೆ ಸಹಾ ಈ ಸಂಸ್ಥೆಯನ್ನು ಗೌರವದಿಂದ ಕಾಣುತ್ತಿದೆ.    ಇಂದು ಭಾರತದ ಹಳ್ಳಿಹಳ್ಳಿಗಳಲ್ಲೂ  ಸುಲಭ್ ಶೌಚಾಲಯಗಳು  ಸಾರ್ವಜನಿಕವಾಗಿ ಮತ್ತು ಗೃಹಗಳಲ್ಲಿ ಅಳವಡಿತಗೊಂಡಿವೆ.  ನಗರಗಳಲ್ಲೂ ಹಣ ಕೊಟ್ಟು ಉಪಯೋಗಿಸಿ ಎಂಬ ಫಲಕಗಳಡಿಯಲ್ಲಿ ವ್ಯಾಪಿಸಿವೆ.  ಒಂದು ರೀತಿಯಲ್ಲಿ ಸಾರ್ವಜನಿಕ ಶೌಚಾಲಯಗಳೆಂದರೆ ಯಾರೂ ಪ್ರವೇಶಿಸಲಾಗದ ದುರ್ಗಮ ದುರ್ಗಂಧ ಪ್ರದೇಶಗಳೆಂಬ ಕುಖ್ಯಾತಿಗಳಿಂದಮೂಲಭೂತ ಅವಶ್ಯಕಗಳ ರೂಪದಲ್ಲಿ ಸಹ್ಯವಾಗಿ  ಪರಿಗಣಿತಗೊಂಡಿವೆ. 

ಶ್ರದ್ಧೆ ಮತ್ತು ಹೃದಯಂತರಾಳದ ಸಂವೇದನೆ ಉಳ್ಳವರುಗಳಿಗೆ ಎಂಥದ್ದೇ ಸಮಸ್ಯೆಗಾಗಲಿ  ಅತ್ಯುತ್ತಮ ಪರಿಹಾರಗಳೇ ದೊರಕುತ್ತವೆ.   ಬಿಂದೇಶ್ವರ್ ಪಾಠಕ್ ಅವರಿಗೂ ಇಂತಹ ಪರಿಹಾರ ಕಾಣಿಸಿತು.  ಪಾಠಕ್ಕರು ಕಂಡು ಹಿಡಿದ ಪರಿಹಾರಕ್ಕೆ  ಬೇಕಾದ  ಹಣಕಾಸು ಕೂಡಾ ಅತ್ಯಲ್ಪದ್ದು.  ಸುಲಭ್ ಎಂಬುದು ಎರಡು ಗುಳಿಗಳನ್ನು ಒಳಗೊಂಡ ಪವರ್ ಫ್ಲಶ್ ಕಾಂಪೋಸ್ಟ್ ಟಾಯ್ಲೆಟ್’.   ಇದರಲ್ಲಿರುವ ತಂತ್ರಜ್ಞಾನವೆಂದರೆ ಕೇವಲ  ಒಂದು ಚೊಂಬು ನೀರಿನಲ್ಲಿ ಸುಲಲಿತವಾಗಿ ಹರಿದು ಹೋಗುವಂತಹ   ಅತ್ಯಂತ ಇಳಿಜಾರಾದ ಟಾಯ್ಲೆಟ್ ಪಾತ್ರ ಮತ್ತು ಅದಕ್ಕೆ ಹೊಂದಿಕೊಂಡಂತೆ ‘Y’ ಅಕಾರದ ಸಂಪರ್ಕದ ಮೂಲಕ  ಹೊಂದಿಕೊಂಡಂತಹ ಎರಡು ಶೇಕರಣಾ ಘಟಕಗಳೆಂಬ ಹಳ್ಳಗಳು.  ಇದರಲ್ಲಿ ಒಂದು ಶೇಕರಣಾ ಹಳ್ಳ ತುಂಬಿಕೊಂಡೊಡನೆಯೇ ಅದರಲ್ಲಿರುವ ಹೆಚ್ಚಳದ ತೇವಾಂಶ  ಎರಡನೇ ಹಳ್ಳಕ್ಕೆ  ನುಗ್ಗುತ್ತದೆ. 

ಯಾವುದೇ ಚರಂಡಿ ಪೈಪುಗಳಾಗಲೀ, ಯಾವುದೇ ನಿರಂತರ ಶುದ್ಧೀಕರಣ ತೊಟ್ಟಿಗಳಾಗಲಿ ಇಲ್ಲಿ ಅವಶ್ಯಕವಿಲ್ಲ.  ಇವೆಲ್ಲಕ್ಕೂ ಮಿಗಿಲಾದದ್ದೆಂದರೆ  ಮೊದಲನೇ ಹಳ್ಳದಲ್ಲಿ ಶೇಕರಗೊಂಡ ಕಲ್ಮಶ, ಕೆಲಸಮಯದಲ್ಲಿ  ಅತ್ಯಂತ ಗುಣಾತ್ಮಕ ಗೊಬ್ಬರವಾಗಿ ಪರಿವರ್ತನಗೊಂಡಿರುತ್ತದೆ.  ಯಾವುದೇ ದುರ್ಗಂಧ, ಯಾವುದೇ ನಾರುವಿಕೆಯ ಹಳ್ಳ ನಿರ್ಮಾಣ, ಅಥವಾ ಮನುಷ್ಯರ ಅವಲಂಬನೆಯ ಶುದ್ಧೀಕರಣದ ಅವಶ್ಯಕತೆ ಇಲ್ಲಿರುವುದಿಲ್ಲ.  ಇದನ್ನು  ಸ್ವತಃ ಬಿಂದೇಶ್ವರ್ ಅವರೇ  ವಿಧ ವಿಧದ ಮೂಲವಸ್ತುಗಳಿಂದ ತಯಾರಿಸಿದ್ದರು.  ಇದು ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಹಾ ಪರಿಸರ ಸ್ನೇಹಿ, ಮಾನವೀಯ ಹಿತದೃಷ್ಟಿಯ ಅತ್ಯುತ್ತಮ ತಂತ್ರಜ್ಞಾನವೆಂದು ಶ್ಲಾಘಿಸಲ್ಪಟ್ಟಿದೆ.

ವ್ಯವಸ್ಥೆಯನ್ನು ನಿರ್ಮಿಸುವುದಕ್ಕಿಂತ ಜನಗಳಲ್ಲಿ ಅದರಲ್ಲಿ ನಂಬಿಕೆ ಹುಟ್ಟಿಸುವುದು, ಅದರಲ್ಲೂ ಸರ್ಕಾರಿ ವ್ಯವಸ್ಥೆಗಳಿಂದ ಅದನ್ನು ಜಾರಿಗೊಳಿಸುವುದು ಎಷ್ಟು ಹಿಂಸೆಯ ಕೆಲಸ ಎಂಬುದು ಭಾರತೀಯರಾದ ನಮಗೆ ಗೊತ್ತಿಲ್ಲದ ವಿಚಾರವಲ್ಲ.  ಬಿಂದೇಶ್ವರ್ ಈ ಎಲ್ಲಾ ಮೆಟ್ಟಿಲುಗಳನ್ನೂ ಹತ್ತಿ ಇಳಿದಿದ್ದಾರೆ.  ಹಲವಾರು ಬಾರಿ ಅರ್ಧಚಂದ್ರಾಕಾರ ಪ್ರಯೋಗಗಳಿಂದ ಹೊರದಬ್ಬಲ್ಪಟ್ಟಿದ್ದಾರೆ.  ಹಣಕಾಸಿನ ಮುಗ್ಗಟ್ಟಿನಿಂದ ತಮ್ಮ ಪತ್ನಿಯ ಬಳಿಯಲ್ಲಿದ್ದ ಅಲ್ವ ಸ್ವಲ್ಪ ಆಭರಣಗಳನ್ನೂ ಮಾರಾಟ ಮಾಡಿ  ಕೆಲಸ ಮಾಡುವ ಸಂಕಷ್ಟಗಳನ್ನು ಎದುರಿಸಿದ್ದಾರೆ.  ಆದರೂ ಛಲ ಬಿಡದೆ  ಮಾಡಿದ  ಅವರ ಕೆಲಸ ಕ್ರಮೇಣವಾಗಿ  ಎಲ್ಲೆಲ್ಲೂ ಪ್ರತಿಫಲಿಸ ತೊಡಗಿದೆ.  ಯಾವ ವ್ಯವಸ್ಥೆಗಳು ಅವರನ್ನು ಸಂದೇಹವಾಗಿ ಕಂಡಿದ್ದವೋ ಅದೇ ವ್ಯವಸ್ಥೆಗಳು ಅವರನ್ನು ಸನ್ಮಾನಿಸಿವೆ.  ಹೇಗಾದರೂ ಮಾಡಿ ಕೆಲಸ ನಮಗೂ ಈ ಕೆಲಸ ಮಾಡಿಕೊಡಿ ಎಂದು ದುಂಬಾಲು ಬೀಳುತ್ತಿವೆ.

ಇಂದು ಬಿಂದೇಶ್ವರ್ ಪಾಠಕ್ ಅವರ ಸುಲಭ್  ಸಂಸ್ಥೆಯ ಕಾಯಕದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು  ಜನ ಕಾರ್ಯನಿರ್ವಹಿಸುತ್ತಿದ್ದಾರೆ.  ಪಾಠಕ್ಕರು ಹಳ್ಳಿ ಹಳ್ಳಿಗೂ, ಪ್ರತೀ ಊರಿಗೂ ಹೋಗಿ ಬದಲಾವಣೆಯ ಜಾಗೃತಿ ತಂದಿದ್ದಾರೆ.  ಟಾಯ್ಲೆಟ್ ಇಲ್ಲದ ಮನೆಯಲ್ಲಿ ನಾನಿರುವುದಿಲ್ಲಎಂದು ಹೊರಬಂದ ಸೊಸೆಯರಿಗೆ ಬೆಂಬಲ ಕೊಟ್ಟಿದ್ದಾರೆ.  ಅವರನ್ನೇ ಜಾಗೃತಿ ಪ್ರಸಾರ ಕಾರ್ಯಕ್ಕೆ ಮುಂದು ಮಾಡಿದ್ದಾರೆ. ಸುಲಭ್ ಕಾರ್ಯನಿರ್ವಹಣೆಯ ಕುರಿತಾಗಿ ತರಬೇತಿ ಸಂಸ್ಥೆಯನ್ನೂ  ಪ್ರಾರಂಭಿಸಿದ್ದಾರೆ.    ತಮ್ಮ ಕಾರ್ಯಕರ್ತರನ್ನು ಅಭಿವೃದ್ಧಿಶೀಲ  ರಾಷ್ಟ್ರಗಳಲ್ಲಿನ ಕಾರ್ಯಾಗಾರಗಳಿಗೆ ಗೌರವಯುತ ಪ್ರತಿನಿಧಿಗಳಾಗಿ ಹೊಗಿಬರಲು ಅನುವು ಮಾಡಿಕೊಟ್ಟಿದ್ದಾರೆ.  ಸ್ವತಃ ವಿಶ್ವಸಂಸ್ಥೆಯ ವೇದಿಕೆಗಳೂ ಸೇರಿದಂತೆ ಎಲ್ಲ ರಾಷ್ಟ್ರಗಳ ವೇದಿಕೆಗಳಲ್ಲಿ ಉಪನ್ಯಾಸ ಮಾಡಿದ್ದಾರೆ.  ಎಲ್ಲಾ ರಾಷ್ಟ್ರಗಳಲ್ಲೂ ಪ್ರಶಸ್ತಿ ಗೌರವಗಳನ್ನು ಸ್ವೀಕರಿಸಿದ್ದಾರೆ, ಜೊತೆಗೆ ಅಂತಹ ದೇಶಗಳಲ್ಲೂ ಸುಲಭ್ ತಂತ್ರಜ್ಞಾನವನ್ನು ಅಳವಡಿಸಲು ಸಹಾಯ ಮಾಡಿದ್ದಾರೆ. 

ಬಿಂದೇಶ್ವರ್ ಪಾಠಕ್ ಅವರು ತಮ್ಮ ಬಾಲ್ಯದಲ್ಲಿ ಬಹಿರ್ದೆಶೆಗೆ ಹೋಗಬೇಕಾದಾಗ ವಾಸನೆ ತಡೆಯಲಿಕ್ಕಾಗಿ  ವಿಕ್ಸ್ ಹಚ್ಚಿಕೊಳ್ಳುವ ಪಾಠವನ್ನು ತಮ್ಮ ಹಿರಿಯರಿಂದ ಕಲಿತ ಪಾಠವನ್ನು ಅನುಭವಿಸಿದವರು.   ಬಾಲ್ಯದಲ್ಲಿ ಅವರು  ಅದನ್ನು ಎತ್ತುವವನೊಬ್ಬನನ್ನು  ಒಮ್ಮೆ ಮುಟ್ಟಿಬಿಟ್ಟಿದ್ದರಂತೆ.   ಆತ ಹೀನಕುಲದವನು ಅವನನ್ಯಾಕೆ ಮುಟ್ಟಿದೆ ಎಂಬ ಬೈಗುಳ ಮಾತ್ರವಲ್ಲದೆ, ಅವನನ್ನು ಮುಟ್ಟಿದ ಮೈಲಿಗೆಯಿಂದಾದ  ದೇಹ ಶುದ್ಧೀಕರಣಕ್ಕೆ ಹಸುವಿನ ಸಗಣಿಯನ್ನು ತಿನ್ನಿಸಲ್ಪಟ್ಟಿದ್ದರು.  ಹೀಗೆ  ಬದುಕಿನ ಒಂದು ಕಠೋರತೆಯ ಅನಿವಾರ್ಯವನ್ನು ಸ್ವಯಂ ಅನುಭವಿಸಿದ ಬಿಂದೇಶ್ವರ ಪಾಠಕ್ ಅವರು,  ಅದಕ್ಕೆ ಹುಡುಕಿದ ಪರಿಹಾರವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ.  ಈ ಮಹಾನ್ ಸಾಧಕ ಏಪ್ರಿಲ್ 2, 1943ರಲ್ಲಿ ಬಿಹಾರದ ರಾಂಪುರದಲ್ಲಿ ಜನಿಸಿದವರು.  ಎಲ್ಲಾ ರೀತಿಯಲ್ಲಿ ಉನ್ನತ ಶಿಕ್ಷಣ ಪಡೆದು, ಅನುಕೂಲಕರವಾದ ಮನೆಯಲ್ಲಿ ಬಾಳಬಹುದಾಗಿದ್ದ ಈ ವ್ಯಕ್ತಿ ತನ್ನ ಮೇಲೆ ನೂರಾರು  ಕಷ್ಟಗಳನ್ನು, ವಿರೋಧಿಗಳನ್ನು  ಎಳೆದುಕೊಂಡು ಎಲ್ಲರೂ ಮೂಗುಮುಚ್ಚಿ, ಮುಖಕಿವಿಚಿಕೊಂಡು, ಹೀನವೆಂದು ಜನರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಒಂದು ವ್ಯವಸ್ಥೆಯನ್ನು ಅಟ್ಟಿಸಿಕೊಂಡು ಹೋಗಿ ಅಳಿಸಲೆತ್ನಿಸಿದ್ದು ಒಂದು ಶ್ರೇಷ್ಠ ಕೆಲಸ ಎಂದರೆ ತಪ್ಪಾಗಲಾರದು. 


ಬಿಂದೇಶ್ವರ್ ಪಾಠಕ್ ಅಂತಹ ಸಮರ್ಥರು, ಧೈರ್ಯವಂತರು, ಹೃದಯವಂತರು, ಶ್ರದ್ಧಾವಂತರು ನಮ್ಮ ಬದುಕಿಗೆ ಇಂದು ಅವಶ್ಯಕವಾದ ದಾರಿ ದೀಪಗಳು.

Tg: Bhindheshwar Pathak

ಕಾಮೆಂಟ್‌ಗಳಿಲ್ಲ: