ಶನಿವಾರ, ಆಗಸ್ಟ್ 31, 2013

ರಾ. ವಿಶ್ವೇಶ್ವರನ್

ರಾ. ವಿಶ್ವೇಶ್ವರನ್

ಘನವಾದ ಶುದ್ಧ ಸಂಗೀತ ಪರಂಪರೆಯನ್ನು ಎತ್ತಿ ಹಿಡಿದು ಅದನ್ನು ಪ್ರತಿಪಾದಿಸುತ್ತಾ ಆಚರಣೆಗೆ ತಂದವರೂ; ಗಹನವಾದ, ಗಾಢವಾದ, ಮೌಲಿಕ ಸಂಗೀತ ವಿಚಾರಗಳನ್ನು ವೈಚಾರಿಕ ಮನೋಭಾವದಿಂದ ವಿಶ್ಲೇಷಿಸಿ ಸತ್ವಪೂರ್ಣವಾದ ಸಂಗೀತ ಲಕ್ಷ್ಯಲಕ್ಷಣಗಳ ಅಭಿವ್ಯಕ್ತಿಗೆ ತಮ್ಮನ್ನು ತೊಡಗಿಸಿಕೊಂಡಿರುವವರೂ ನಾಡಿನ ಅಗ್ರ ಶ್ರೇಣಿಯ ವೈಣಿಕರೂ, ಈ ನಿಟ್ಟಿನಲ್ಲಿ ಅಪಾರ ಶಿಷ್ಯವರ್ಗಕ್ಕೆ ಮಾರ್ಗದರ್ಶನ ನೀಡುತ್ತಾ ಬಂದವರು ರಾಜ್ಯ ಸಂಗೀತ ವಿದ್ವಾನ್‌ ಪ್ರೊ. ರಾ. ವಿಶ್ವೇಶ್ವರನ್‌ ಅವರು.

ರಾ. ವಿಶ್ವೇಶ್ವರನ್  ಅವರು ವರಲಕ್ಷ್ಮಿ ರಾಮಯ್ಯ ದಂಪತಿಗಳ ಮಗನಾಗಿ  ಮಾರ್ಚ್ 15, 1931ರಂದು ಜನಿಸಿದರು. ಇವರದು ಹೆಸರಾಂತ ಸಂಗೀತ ಕುಟುಂಬ. ರಾ. ವಿಶ್ವೇಶ್ವರನ್‌ ಅವರು ತಮ್ಮ ತಾಯಿಯಿಂದ ಸಂಗೀತ ಸ್ಪೂರ್ತಿ ಪಡೆದು, ತಮ್ಮ ಐದನೇ ವಯಸ್ಸಿಗೇ ಅಣ್ಣ ರಾ. ಸೀತಾರಾಂ ಅವರಲ್ಲಿ ಕರ್ನಾಟಕ ಸಂಗೀತ ಗಾಯನ ಪಾಠವನ್ನು ಪಡೆಯಲಾರಂಭಿಸಿದರು. ಚಿಕ್ಕ ಬಾಲಕ ವಿಶ್ವೇಶ್ವರನ್‌ ಅವರು ತಮ್ಮ ಅಣ್ಣಂದಿರು ಹಾಡಿ ಕೊಳ್ಳುತ್ತಿದ್ದ ರಾಗಗಳ ಸ್ವರಗಳನ್ನು ನಿರರ್ಗಳವಾಗಿ, ನಿರಾಯಾಸವಾಗಿ ಯಾರ ಮಾರ್ಗದರ್ಶನವಿಲ್ಲದೆ ಹಾಡಿ ಮನೆ ಮಂದಿಗೆಲ್ಲಾ ಸೋಜಿಗವನ್ನುಂಟುಮಾಡುತ್ತಿದ್ದರು. ಬಾಲ ಪ್ರತಿಭಾವಂತರಾಗಿ  ತಮ್ಮ ಒಂಭತ್ತರ ಹರೆಯದಲ್ಲಿಯೇ ಗಾಯನ ಕಚೇರಿಗಳಿಂದ ತಮ್ಮ ಸಂಗೀತೋಪಾಸನೆಯನ್ನು ಆರಂಭಿಸಿದರು.  ತಾಯಿ ವಾಗ್ದೇವಿಯ ಮುಂದೆ ಕುಳಿತು ಪ್ರತಿನಿತ್ಯ ಮಾಡುವ ಸಂಗೀತ ಸಾಧನೆಯೇ ಇವರ ಪ್ರಗತಿಗೆ ದಾರಿದೀಪವಾಯಿತು. ಇದರೊಂದಿಗೆ ಅವರು ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. ಇಂಡಾಲಜಿ ಪದವೀಧರರು.

ವಾದನ, ಗಾಯನಗಳಲ್ಲಿ ರಾ. ವಿ. ಅವರದು ಒಂದು ವಿಶಿಷ್ಟ ಶೈಲಿ. ತಮ್ಮ ಸ್ವಂತ ಪ್ರತಿಭೆಯಿಂದ ವೀಣಾವಾದನದಲ್ಲಿ ತೊಡಗಿ, ತಮ್ಮದೇ ಆದ ವಾದನ ತಂತ್ರವನ್ನು ನಿರ್ಮಿಸಿಕೊಂಡು ಸತತವಾದ ಪ್ರಯೋಗ, ಸಂಶೋಧನೆಗಳ ಫಲದಿಂದ ಗಾಯನ ಶೈಲಿಯ ವೈಣಿಕ ಶ್ರೇಷ್ಠರು ಎಂದು ದೇಶ ವಿದೇಶಗಳಲ್ಲಿ ಮಾನ್ಯತೆ ಪಡೆದರು. ದಿವಂಗತ ಪದ್ಮಭೂಷಣ ವಿದ್ವಾನ್‌ ಎಸ್‌. ಬಾಲಚಂದರ್ ಅವರು ಇವರ ವಾದನ ಶೈಲಿಗೆ ಮರುಳಾಗಿ ಹಾಗೂ ಇವರ ವಾದನದ ಬಗೆಗೆ ಅಪಾರವಾದ   ಗೌರವವನ್ನು ತಳೆದವರು. ಅಂತೆಯೇ ಬಾಲಚಂದರ್ ಅವರ ವೀಣಾ ವಾದನದ ಬಗೆಗೂ ರಾ.ವಿ. ಅವರಿಗೆ ಅತ್ಯಂತ ಗೌರವ, ಹೆಮ್ಮೆ. ಒಂದು ಮೀಟಿನಿಂದ ಹಲವಾರು ಸ್ವರಗಳ ನಾದೋತ್ಪತ್ತಿ ಮಾಡುವ, ಬಲಗೈ ಬೆರಳುಗಳಿಂದ ತಂತಿಯನ್ನು ಮೀಟದೆಯೆ ಅದೆಷ್ಟೋ ನಿಮಿಷಗಳ ರಾಗಾಲಾಪನೆಯನ್ನು ನುಡಿಸುವ ಸಂಶೋಧನಾತ್ಮಕವಾದ ಇವರ ವಿಶೇಷ ವೀಣಾವಾದನ ತಂತ್ರವು ಅಪೂರ್ವವೆನಿಸಿವೆ.  ಅವರು ಮಹಾನ್ ಗಾಯಕರಾಗಿದ್ದರೂ ಸಹಾ ಸಂಗೀತ ಕ್ಷೇತ್ರದಲ್ಲಿ ವೈಣಿಕರಾಗಿ ಹೆಚ್ಚು ಗುರುತಿಸಲಾಗುತ್ತಿದೆ.  

ಮೈಸೂರು ವಿ.ವಿ.ದ ಲಲಿತಕಲಾ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಸಂಗೀತಶಾಸ್ತ್ರ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ವಿಶ್ವೇಶ್ವರನ್ ಅವರು ಅಪಾರವಾದ ಸೇವೆ ಸಲ್ಲಿಸಿದರು.  ದೇಶ ವಿದೇಶಗಳಲ್ಲಿ  ಅಸಂಖ್ಯಾತ ವೀಣಾವಾದನ ಕಚೇರಿಗಳನ್ನು ನಡೆಸಿದ ವಿಶ್ವೇಶ್ವರನ್ ಅವರು ಪ್ರತಿಷ್ಠಿತ ಸಭೆ, ಸಂಗೀತೋತ್ಸವ, ಸಮಾರಂಭಗಳಲ್ಲಿ, ಸರಕಾರದ ಅಕಾಡಮಿಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್ತು, ಶ್ರೀಕೃಷ್ಣ ಸಂಗೀತಸಭಾ, ತ್ಯಾಗರಾಜ ಗಾನಸಭಾಗಳಲ್ಲದೆ ಲಂಡನ್ನಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಂಗೀತ ಸಮ್ಮೇಳನ, ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಎಡಿನ್ಬರೋ ಸಂಗೀತೋತ್ಸವಗಳಲ್ಲಿ ಪಾಲ್ಗೊಂಡು ದೇಶಕ್ಕೆ ಗೌರವ ತಂದವರು.

ರಾ ವಿಶ್ವೇಶ್ವರನ್ ಅವರು ನೂರಾರು ಕೃತಿಗಳ ವಾಗ್ಗೇಯಕಾರರೂ ಹೌದು. ಅವರ ವಾಗ್ಗೇಯ ವಿಶ್ವೇಶ್ವರಿಕೃತಿಯಲ್ಲಿ ಅವರ 112 ರಚನೆಗಳಿವೆ.  ಅಪೂರ್ವ ರಾಗಗಳ, ಅಪೂರ್ವ ಮೇಳಗಳಲ್ಲಿ ಮಾರ್ವ, ಜೋಗ್, ಶುದ್ಧ ಕಲ್ಯಾಣ್, ಗೋರಖ್ ಕಲ್ಯಾಣ್ ಮುಂತಾದ ರಾಗಗಳ ಕರ್ತೃ.  ಅವರ ಹಲವಾರು ಧ್ವನಿ ಮುದ್ರಿಕೆಗಳನ್ನು  ಪ್ರತಿಷ್ಠಿತ ಕಂಪನಿಗಳು ಹೊರತಂದಿವೆ. ಆಕಾಶವಾಣಿ, ದೂರದರ್ಶನಗಳಲ್ಲೂ ಅವರು ಪ್ರಸಿದ್ಧ ಕಲಾವಿದರೆನಿಸಿದ್ದಾರೆ.

ಮದರಾಸಿನ ಕೃಷ್ಣ ಗಾನ ಸಭಾದ ಸಂಗೀತ ಚೂಡಾಮಣಿ, ರಾಜ್ಯ ಸರಕಾರದ ಸಂಗೀತ ವಿದ್ವಾನ್, ಗಾನ ಕಲಾ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷತೆ, ಗಾನಕಲಾ ಭೂಷಣ, ಸಂಗೀತ ಸಾರ್ವ ಭೌಮ, ಲಯಕಲಾ ನಿಪುಣ, ಕಲಾ ಜ್ಯೋತಿ ಮುಂತಾದ ಬಿರುದುಗಳು, ತ್ಯಾಗರಾಜ ಪ್ರಶಸ್ತಿ, ಸುಬ್ರಹ್ಮಣ್ಯ ಪಿಳ್ಳೈ ಪ್ರಶಸ್ತಿ, ಇಂಗ್ಲೆಂಡ್, ಐರ್ಲೆಂಡ್, ಸಿಂಗಪೂರ್, ಮಲೇಷಿಯಾ, ದುಬೈ ಮುಂತಾದ ಹೊರರಾಷ್ಟ್ರಗಳಿಂದ ಸನ್ಮಾನ ಹೀಗೆ ಹಲವಾರು ಗೌರವಗಳು ರಾ. ವಿಶ್ವೇಶ್ವರನ್ ಅವರಿಗೆ ಸಂದಿವೆ.

ಈ ಅಪಾರ ಸಾಧನೆಯ ಮಹಾನ್ ವಿದ್ವಾಂಸರು ಮೈಸೂರಿನಲ್ಲಿ ನೆಲೆಸಿದ್ದಾರೆ.  ಅವರ ಜನ್ಮದಿನದ ಸಂದರ್ಭದಲ್ಲಿ ಗೌರವ ಪೂರ್ವಕವಾದ ಶುಭ ಹಾರೈಕೆಗಳನ್ನು ಸಲ್ಲಿಸೋಣ.

ಆಧಾರ: ಕಣಜ ಮತ್ತು ದಿ ಹಿಂದೂಪತ್ರಿಕೆTag: Ra Visveswaran

ಕಾಮೆಂಟ್‌ಗಳಿಲ್ಲ: