ಗುರುವಾರ, ಆಗಸ್ಟ್ 29, 2013

ಎಚ್. ಟಿ. ಸಾಂಗ್ಲಿಯಾನ

ಎಚ್. ಟಿ. ಸಾಂಗ್ಲಿಯಾನ

ನಮ್ಮ ನಾಡಿನ ಪ್ರಸಿದ್ಧ ಪೋಲೀಸ್ ಅಧಿಕಾರಿಗಳಾಗಿ ಹೆಸರು ಮಾಡಿದ ಸಾಂಗ್ಲಿಯಾನ ಅವರು ಜನಿಸಿದ ದಿನ ಜೂನ್ 1, 1942.  ಮಿಜೋರಾಂ ಪ್ರದೇಶದಿಂದ ಬಂದ ಎಚ್. ಟಿ. ಸಾಂಗ್ಲಿಯಾನ ಅವರು 1967ರ ಭಾರತೀಯ ಪೋಲಿಸ್ ಸೇವೆಯ ತಂಡದಿಂದ ಕರ್ನಾಟಕವನ್ನು ಕಾರ್ಯಕ್ಷೇತ್ರವಾಗಿಸಿಕೊಂಡು ಬಂದವರು.

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ ಸಾಂಗ್ಲಿಯಾನ  ಮುಂದೆ ಶಿವಮೊಗ್ಗೆ, ಚಿಕ್ಕಮಗಳೂರು ಮುಂತಾದೆಡೆಗಳಲ್ಲಿ  ಸೂಪರಿಂಟೆಂಡೆಂಟ್ ಆದರು. 

ನಮ್ಮ ಸಿನಿಮಾ ಹೀರೋಗಳು ಪ್ರಾಮಾಣಿಕ ಪೋಲೀಸ್ ಅಧಿಕಾರಿಗಳಾಗಿ ಡಿಶುಂ ಡಿಶುಂ ಪಾತ್ರಗಳಲ್ಲಿ ಜನಪ್ರಿಯರಾದ ಸಾಕಷ್ಟು ನಿದರ್ಶನಗಳಿವೆ.  ಆದರೆ ನಿಜ ಜೀವನದ ಪೋಲೀಸ್ ಅಧಿಕಾರಿಗಳು ಜನಸಾಮಾನ್ಯರ ಕಣ್ಣಲ್ಲಿ ಹಾಗೆ ಜನಪ್ರಿಯರಾಗಿ ಕಂಡಿರುವುದು ಕಡಿಮೆ ಎನ್ನಲಡ್ಡಿಯಿಲ್ಲ.  ಹಾಗೆ ಜನಪ್ರಿಯರಾಗಿರುವ ಪೋಲೀಸ್ ಅಧಿಕಾರಿಗಳ ಪಟ್ಟಿಯಲ್ಲಿ ಸಾಂಗ್ಲಿಯಾನ ಪ್ರಮುಖರು. 

ಅಂದಿನ ದಿನಗಳಲ್ಲಿ ಸಾಂಗ್ಲಿಯಾನ ಅವರನ್ನು ವರ್ಣರಂಜಿತ ಚಲನಚಿತ್ರ ನಾಯಕನಂತೆ ಹಲವು ಕತೆಗಳೊಂದಿಗೆ ಬಣ್ಣಿಸುವುದು ಕಾಣಬರುತ್ತಿತ್ತು.  ಸಾಂಗ್ಲಿಯಾನ ಅವರ ಹೆಸರಿನಲ್ಲಿ ಕನ್ನಡದಲ್ಲಿ ಎರಡು ಮಸಾಲೆ ಚಿತ್ರಗಳಾದವು.  ಇತ್ತೀಚಿಗೆ  ಅವರು  ಚಲನಚಿತ್ರಗಳಲ್ಲಿ  ನಟಿಸಿದ  ಸುದ್ಧಿಯೂ  ಇದೆ.   ಕತೆ ಎಂಬುದು ನೈಜತೆಗಿಂತ ಹೆಚ್ಚು ಅಥವಾ ಕಡಿಮೆ ಇರುತ್ತದೆ.  ಕಾರಣವಿಷ್ಟೇ.  ನಮಗೆ ಇಷ್ಟವಾಗದವರನ್ನು ತೆಗಳಲಿಕ್ಕೆ ಸಮಾಜ ಎಷ್ಟೆಷ್ಟು ವಿಮರ್ಶಾ ಗ್ರಂಥಗಳನ್ನು ಮೂಡಿಸುತ್ತದೋ, ಇಷ್ಟಪಟ್ಟವರನ್ನು ವೈಭವೀಕರಿಸಲು ಕೂಡಾ ಅಷ್ಟೇ ವೈವಿಧ್ಯಮಯ ಸಂಕಲನಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ!  ಒಂದು ರೀತಿಯಲ್ಲಿ ಸಾಂಗ್ಲಿಯಾನ ಅವರನ್ನು ಇಂದು ಕಾಣಹೊರಟಾಗ ಈ ಎರಡೂ ವಿಭಿನ್ನತೆಗಳ ದ್ವಂದ್ವಮುಖಿಯಾಗಿ ನಮ್ಮ ಕಣ್ಮುಂದೆ ನಿಲ್ಲುತ್ತಾರೆ!

ಇಷ್ಟಂತೂ ನಿಜ ಸಾಂಗ್ಲಿಯಾನ ತಾವು  ಕಾರ್ಯನಿರ್ವಹಿಸಿದ ಪ್ರದೇಶಗಳಲ್ಲಿ, ಪೋಲೀಸ್ ಇಲಾಖೆಯಂತಹ ಕ್ಲಿಷ್ಟ ಇಲಾಖೆಯಲ್ಲಿ  ಕೂಡಾ ಜನರ ಬಳಿ ಯಾವುದೇ ಮುಲಾಜುಗಳಿಲ್ಲದೆ ಕೂಡಾ ಹೇಗೆ ಸೌಜನ್ಯಪೂರ್ಣ, ಮಾನವೀಯ ಸಹಾನುಭೂತಿಗಳ ಆವರಣದಲ್ಲಿ ಕೆಲಸ ಮಾಡಬಹುದು ಎಂಬ ಪ್ರಜ್ಞೆಯನ್ನು ಜಾಗೃತಗೊಳಿಸಿದರು.  ಸಾಂಗ್ಲಿಯಾನ ಅವರ ಇತ್ತೀಚಿನ  ವರ್ಷಗಳಲ್ಲಿನ ಹಲವಾರು ವೈರುಧ್ಯದ ರಾಜಕೀಯದ ನಿಲುವುಗಳ ಆಧಾರದ ಮೇಲೆ ಅವರನ್ನು ಯಾವಾಗಲೂ ಪ್ರಚಾರ ಪ್ರಿಯ ಎಂದು ಹೀಗೆಳೆಯುವ ಮಾತುಗಳು ಕೇಳಿಬರುತ್ತಿವೆ.  ಆದರೆ ಈ ಮಾತನ್ನು ಒಬ್ಬ ಪೋಲೀಸ್ ಅಧಿಕಾರಿಯಾಗಿ ಅವರು ಮಾಡಿದ್ದ ಕೆಲಸಕ್ಕೆ ಸಮೀಕರಿಸುವುದು ಅಸಮಂಜಸವಾದೀತು.  ಜನರೊಂದಿಗೆ ಸ್ಪಂದಿಸುವ ಮನೋಭಾವ ಹೊಂದಿರುವ ವ್ಯಕ್ತಿಯಲ್ಲಿ ಜನಪ್ರಿಯತೆಯ ಪೂರಕಗಳು ಸ್ವಾಭಾವಿಕವಾಗಿ ನೆಲೆಗಟ್ಟಿರುತ್ತವೆ.  ಅದು ವೈಪರೀತ್ಯಗಳಿಗೆ ಸಾಗಿರುವ ಸಾಕಷ್ಟು ಉದಾಹರಣೆಗಳು ಇರುವವಾದರೂ ಅವರುಗಳಲ್ಲಿದ್ದ ಜನಸ್ಪಂದನೆಯ ಮೂಲನೆಲೆಯನ್ನು ಗೌರವಿಸುವುದು ಕೂಡಾ ಅಷ್ಟೇ ಮುಖ್ಯ.  ಈ ನಿಟ್ಟಿನಲ್ಲಿ ಸಾಂಗ್ಲಿಯಾನ ಅವರು ಖಂಡಿತ ಗೌರವಕ್ಕೆ ಅರ್ಹರು. 

ಸಾಂಗ್ಲಿಯಾನ ಕಳ್ಳಕಾಕರನ್ನು ಗುರುತಿಸಿ ಹದ್ದುಬಸ್ತಿನಲ್ಲಿಡುತ್ತಿದ್ದ ರೀತಿ; ಅವರು ಟ್ರಾಫಿಕ್ ಮುಖ್ಯಸ್ಥರಾಗಿದ್ದಾಗ ಅಡ್ಡಾದಿಡ್ಡಿ ಪಾರ್ಕಿಂಗ್, ಕೆಟ್ಟ ರೀತಿಯ ವಾಹನ ಚಾಲನೆ, ಬೀದಿಗಳಲ್ಲಿ ಮನೆಯ ಪ್ರಾಣಿಗಳನ್ನು ಮೇಯಲು ಬಿಡುತ್ತಿದ್ದ ಜನಸ್ತೋಮ, ರಸ್ತೆ ದಾಟುವಾಗ ಜನ ತೋರುವ ಕಾನೂನು ನಿರ್ಲಕ್ಷ ಇವುಗಳ ಕುರಿತು ಯಾವುದೇ ಮುಲಾಜಿಲ್ಲದೆ ನಡೆದುಕೊಂಡ ರೀತಿ ಖಂಡಿತ ಅಜರಾಮರವಾದದ್ದು.  ಸಾಂಗ್ಲಿಯಾನ ರಾಜಕೀಯದ ಮಂತ್ರಿಗಳಿಗೆ, ಪುಡಾರಿಗಳಿಗೆ ಈ ವಿಚಾರದಲ್ಲಿ ಎಂದೂ ಬಗ್ಗಲಿಲ್ಲ.   ಹೀಗಾಗಿ ಸಾಂಗ್ಲಿಯಾನ ರಾಜಕೀಯ ಮತ್ತು ಆಡಳಿತಶಾಹಿಗಳಿಗೆ ಯಾವಾಗಲೂ ನುಂಗಲಾರದ ತುಪ್ಪವಾಗಿದ್ದರು.  ಹಾಗೆಯೇ ಅವರನ್ನು ಉಗುಳುವುದು ಕೂಡಾ ಸಾಧ್ಯವಿರಲಿಲ್ಲ.  ಅವರ ಜನಪ್ರಿಯ ವಲಯವನ್ನು ಭೇದಿಸುವ ನೈತಿಕ ಶಕ್ತಿ ಆಡಳಿತಶಾಹಿಗೆ ಎಂದೂ ಇರಲಿಲ್ಲ.  ಹಾಗಾಗಿ ಅವರನ್ನು ಎಲ್ಲೋ ಒಂದು ಕಡೆ ಕುರ್ಚಿಕೊಟ್ಟು ಕೆಲಸ ಮಾಡಲಾಗದಂತಹ ಸ್ಥಾನಗಳಲ್ಲಿ ಕೂರಿಸುತ್ತಿದ್ದ ಪ್ರಯತ್ನಗಳು ನಿರಂತರವಾಗಿ ನಡೆದಿತ್ತು.  ಕೋದಂಡರಾಮಯ್ಯನವರು ಪೋಲೀಸ್ ಕಮಿಷನರ್ ಆಗಿದ್ದ ಸಮಯದಲ್ಲಿ ಅವರ ಪಕ್ಕದ ಕಚೇರಿಯಲ್ಲಿ ಸಾಂಗ್ಲಿಯಾನ ಅವರನ್ನು ಮತ್ತೊಬ್ಬ ಅಧಿಕಾರವಿಲ್ಲದ ಪೋಲೀಸ್ ಕಮಿಷನರ್ ಆಗಿ ಕೂರಿಸಿದ್ದ ನಿದರ್ಶನ ಜನರಿಗೆ ಇನ್ನೂ ನೆನಪಿನಲ್ಲಿದೆ.

ಪೋಲೀಸ್ ಅಧಿಕಾರದಲ್ಲಿದ್ದಾಗ ಕೂಡಾ ಛಾಪಾಕಾಗದದ ಭ್ರಷ್ಟಾಚಾರದ ವಿಚಾರದಲ್ಲಿ ಮಂತ್ರಿಗಳ ಹೆಸರುಗಳನ್ನು ಹೇಳುವ ತಾಕತ್ತು ಅವರಲ್ಲಿತ್ತು.  ಆದರೆ ಅವರನ್ನು ಬಾಯಿಮುಚ್ಚಿಸಿ ನಿಷ್ಕ್ರಿಯರಾಗಿ ಮಾಡಲು ಏನೇನು ಬೇಕೋ ಅವೆಲ್ಲವನ್ನೂ ರಾಜಕೀಯ ಮತ್ತು ಆಡಳಿತಶಾಹಿಗಳು ನೋಡಿಕೊಂಡವು.

ಒಮ್ಮೆ ದೂರದರ್ಶನದಲ್ಲಿ ಅವರನ್ನೊಂದು ಪ್ರಶ್ನೆ ಕೇಳಲಾಯಿತು,  “ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಪೋಲೀಸ್ ಠಾಣೆಗೆ ಹೋದಾಗ ಅಲ್ಲಿ ಯಾಕೆ ಒಂದು ರೀತಿಯ ಒರಟು ತನವೇ ಕಾಣುತ್ತೆ, ಸಭ್ಯ ನಡವಳಿಕೆ ಯಾಕೆ ಕಾಣುವುದಿಲ್ಲ?”  ಸಾಂಗ್ಲಿಯಾನ ನೀಡಿದ ಉತ್ತರ ಇಡೀ ಸಮಾಜ ಚಿಂತಿಸುವಂತಿದೆ, “ಪೋಲೀಸ್ ಸ್ಟೇಷನ್ನಿಗೆ ಬರುವವರೆಲ್ಲಾ, ಮೈ ಕೈಯೆಲ್ಲಾ ಏಟು ಮಾಡಿಕೊಂಡೋ, ಕಳೆದುಕೊಂಡೋ, ಅಳುತ್ತಲೋ, ಕೂಗಾಡುತ್ತಲೋ ಬರುವಂತಹ ವಾತಾವರಣವೇ ಹೆಚ್ಚು.   ಅಲ್ಲಿ ಕಾಣುವ ವಾತಾವರಣವೆಂದರೆ ಹಿಂಸೆ, ನೋವು, ಸಿಡುಕು ಇತ್ಯಾದಿ.  ಪೋಲೀಸ್ ಸ್ಟೇಷನ್ನಿಗೆ ಬಂದು ಯಾರೂ ಇವತ್ತು ಬರ್ತ್ ಡೇ ಇದೆ ಅಂತ ಕೇಕ್ ಹಂಚೋಲ್ಲ.  ನಮ್ಮ ಮನೇಲಿ ಸಮಾರಂಭ ಇದೆ ಊಟಕ್ಕೆ ಬನ್ನಿ ಅಂತ ಕರೆಯೋಲ್ಲ.  ಅಂದ್ರೆ ಅಲ್ಲಿ ಪ್ರೀತಿಯ ಕೊರತೆ ಇದೆ.  ಇದನ್ನು ಕೊಡಲಿಕ್ಕೆ ಸಮಾಜ ಪ್ರಯತ್ನಿಸಬೇಕು.  ಆಗ ಅಲ್ಲೂ ಬದಲಾವಣೆ ಬರೋಕೆ ಸಾಧ್ಯ ಇದೆ”.   ಇದು ಎಷ್ಟರಮಟ್ಟಿಗೆ ಸಾಧ್ಯವೋ ಹೇಳುವುದು ಕಷ್ಟ.  ಆದರೆ ಇದನ್ನೆಲ್ಲಾ ಅರ್ಥಮಾಡಿಕೊಂಡಿದ್ದ ಒಬ್ಬ ಪ್ರಾಜ್ಞ ತಪಸ್ವಿ ನಮ್ಮ ಪೋಲೀಸ್ ಇಲಾಖೆಯಲ್ಲಿದ್ದ ಎಂಬುದು ಮಾತ್ರ ಖಂಡಿತವಾಗಿ ಸ್ಮರಿಸಬೇಕಿರುವ ವಿಚಾರ.

ಸಾಂಗ್ಲಿಯಾನ ತಮ್ಮ ಪೋಲೀಸ್ ಸೇವೆಯಿಂದ ನಿವೃತ್ತಿಯಾದಾಗ ರಾಜಕೀಯಕ್ಕೆ ಬಂದರು.  ಅವರಿಗೆ ಅಲ್ಲಿ ಏನು ಮಾಡಬೇಕು ಹೇಗಿರಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆಗಳು ಮೂಡಿಲ್ಲದಿರುವುದು ಸುಸ್ಪಷ್ಟ.  ಅವರು ತಾವು ಗೆದ್ದ ಪಕ್ಷದ ವಿರುದ್ಧವಾಗಿ ಓಟು ಮಾಡಿದ್ದು ಸರಿಯೇ ಎಂಬ ಪ್ರಶ್ನೆ ಇದೆ.  ಆದರೆ ಅವರಿದ್ಧ ಪಕ್ಷ ತಾನು ತಂದ ಪರಮಾಣು ನೀತಿಯ ಮುಂದಿನ ಹಂತವನ್ನು ಆಡಳಿತಾರೂಢ ಸರ್ಕಾರ ಮಾಡಹೊರಟಾಗ ಅದರ ಕಾಲೆಳೆಯಲು ಹೊರಟಿದ್ದನ್ನು ಸಾಂಗ್ಲಿಯಾನ ಅಂತ ಒಬ್ಬ ವ್ಯಕ್ತಿ ಬೆಂಬಲಿಸಬೇಕಿತ್ತೇ ಎಂಬುದು ಕೂಡಾ ಚಿಂತನೆಗೆ ಯೋಗ್ಯ.  ಮುಂದೆ ಅವರು ತಮ್ಮ ಲೋಕಸಭಾ ಸದಸ್ಯತ್ವ ಕಳೆದುಕೊಂಡರು ಮುಂದೆ ಮತ್ತೊಂದು ಪಕ್ಷಕ್ಕೆ ಹೋಗಿ ಸೋತರು.  ಸೋಲು ಗೆಲುವುಗಳ ಆಟದಲ್ಲಿ ರಾಜಕೀಯ ಎಂಬ ವಿಚಿತ್ರ ಪದ್ಧತಿಯಲ್ಲಿ ಯಾವುದು ಸರಿ?’, ‘ಯಾವುದು ಸರಿಯಲ್ಲ?’.

ಮತ್ತೊಂದು ವಿಚಾರವೆಂದರೆ ಅವರು ತಾವು ಸದಸ್ಯತ್ವ  ಹೊಂದಿದ್ದ ಪಕ್ಷ  ಅಧಿಕಾರದಲ್ಲಿದ್ದಾಗ ಅಲ್ಪಸಂಖ್ಯಾತರ ಆಯೋಗದ ಮುಖ್ಯಸ್ಥರಾಗಿದ್ದರು ಎನ್ನುವುದು.   ನಾವೆಲ್ಲರೂ ಒಂದೇ ಎಂಬುವ ವಾತಾವರಣ ನಮ್ಮಲ್ಲಿ ಸೃಷ್ಟಿಯಾಗುವುದು ಯಾವಾಗ.  ಈ ನಾಡಿನಲ್ಲಿ ಪ್ರತಿಯೊಬ್ಬನಿಗೂ ಜಾತಿ ಧರ್ಮಗಳ ಆಚೆಗೆ ನ್ಯಾಯ ಸಮಾನತೆ ಸಿಗುವುದು ಯಾವಾಗ.  ಸಾಂಗ್ಲಿಯಾನ ಅಂತಹ ಎಲ್ಲರಿಗೂ ಬೇಕಾದ ಒಬ್ಬ ವ್ಯಕ್ತಿಯನ್ನು ಯಾವುದೋ ಒಂದು ಗುಂಪು ಸೃಷ್ಟಿ ಮಾಡಿ ಅದರ ನೇತೃತ್ವ ನೀಡಿ ಹೆಚ್ಚು ಜನರಿಗೆ ಆತನನ್ನು ಬಹುತೇಕರಿಗೆ  ಅಪ್ರಿಯನನ್ನಾಗಿಸುತ್ತಿರುವ ನಮ್ಮ ವ್ಯವಸ್ಥೆ ನಾವು ಹೇಗೆ ವಿನಾಶದ ಅಂಚಿಗೆ ಸಾಗುತ್ತಿದ್ದೇವೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳದೆ ವಿಧಿಯಿಲ್ಲ. 

ಸಾಂಗ್ಲಿಯಾನ ಅವರು ಯಾರಿಗೆ ಸಹಾಯದ ಅವಶ್ಯಕತೆಯಿದೆಯೋ ಅವರ ಪರವಹಿಸುವುದು ತಪ್ಪಲ್ಲ.  ಆದರೆ ಅವರು ತಮ್ಮ ಚೇತನವನ್ನು ಅನಿಕೇತನ ಪ್ರಜ್ಞೆಯಲ್ಲಿ ಉಳಿಸಿಕೊಳ್ಳುವುದು ಕೂಡಾ ಅಷ್ಟೇ ಮುಖ್ಯ ಎಂಬುದನ್ನು ನೆನಪಿನಲ್ಲಿಡಬೇಕು.  ಅವರು ತಮ್ಮ  ವೈಶಿಷ್ಟ್ಯಗಳನ್ನು ಮೂರ್ಖತನದ ರಾಜಕೀಯದಲ್ಲಿ ಬಲಿಪಶುವಾಗಿಸಿಕೊಳ್ಳಬಾರದು.

2008ರ ವರ್ಷದಲ್ಲಿ ಅಮೆರಿಕದ ಅಧ್ಯಕ್ಷರಾದ ಒಬಾಮ ಅವರು 160 ಅಂತರರಾಷ್ಟ್ರೀಯ ಮಟ್ಟದ ವಿಶಿಷ್ಟ ವ್ಯಕ್ತಿಗಳಿಗೆ ಔತಣಕೂಟ ಏರ್ಪಡಿಸಿದ್ದರು.  ಅವರಲ್ಲಿ ಸಾಂಗ್ಲಿಯಾನ ಕೂಡಾ ಒಬ್ಬ ಆಹ್ವಾನಿತರಾಗಿದ್ದರು. 


ಹೀಗೆ ಹಲವು ನೆಲೆಗಳಲ್ಲಿ ಕಾಣುವ ಎಚ್. ಟಿ. ಸಾಂಗ್ಲಿಯಾನ ಅವರಿಗೆ ಶುಭವಾಗಲಿ.  ಅವರಿಂದ ಜನರಿಗೆ ಉತ್ತಮ ನಾಯಕತ್ವ ಸಿಗುವಂತಾಗಲಿ ಎಂದು ಹಾರೈಸೋಣ.

Tag: H. T. Sangliana

ಕಾಮೆಂಟ್‌ಗಳಿಲ್ಲ: