ಶುಕ್ರವಾರ, ಆಗಸ್ಟ್ 30, 2013

ಜಯಾ ಬಚ್ಚನ್

ಜಯಾ ಬಚ್ಚನ್

ಅಂದಿನ ಜಯಾ ಭಾದುರಿ - ಇಂದಿನ ಜಯಾ ಬಚ್ಚನ್ ನನ್ನ ಮೆಚ್ಚಿನ ಅಭಿನೇತ್ರಿಯರಲ್ಲಿ ಒಬ್ಬರು.  ಮುಖ ಭಾವದಲ್ಲಿನ  ಪ್ರಶಾಂತತೆ, ಕಿರುನಗೆಯಲ್ಲಿ ತುಂಟತನ, ಎಲ್ಲೋ ನಮ್ಮ ನಡುವೆಯೇ ಬದುಕುತ್ತಿರುವ ಸಾಮಾನ್ಯ ಹುಡುಗಿಯಂತಹ ಸಹಜತೆ,  ಹಿತ ಮಿತವೆನಿಸುವ ಭಾವುಕತೆ,  ಸಹಜ ಸೌಂಧರ್ಯ, ಕೌತುಕಮಯ ನೇತ್ರಗಳು ಇವುಗಳೆಲ್ಲದರು ಜೊತೆಗೆ ಲೀಲಾಜಾಲವಾಗಿ, ಸಹಜವಾಗಿ ಅಭಿನಯಿಸುತ್ತಿದ್ದ ಅವರ ಪ್ರತಿಭೆ ಮನೋಜ್ಞವಾದುದು.   ಅಂದಿನ ದಿನಗಳಲ್ಲಿನ ಪ್ರಖ್ಯಾತ ನಿರ್ದೇಶಕರಾದ ಹೃಷಿಕೇಶ್ ಮುಖರ್ಜಿ, ಪ್ರತಿಭಾವಂತರಾದ ಸಂಜೀವ್ ಕುಮಾರ್, ಅಮಿತಾಬ್ ಮುಂತಾದ ಹಲವರನ್ನು ನೆನೆದಾಗ ಅದೇ ಸಾಲಿನಲ್ಲಿ ಜಯಾ ಬಾಧುರಿ ಕೂಡಾ ನೆನಪಾಗುತ್ತಾರೆ.  ಅವರು ಬಂಗಾಳದ ಕುಟುಂಬವೊಂದರಲ್ಲಿ ಏಪ್ರಿಲ್ 9, 1948ರಲ್ಲಿ ಜನಿಸಿದರು.  ಅವರು ಪುಣೆಯ ಚಲನಚಿತ್ರ ಶಾಲೆಯ ಪ್ರತಿಭಾಪೂರ್ಣ ವಿದ್ಯಾರ್ಥಿನಿ.

ಜಯಾ ಬಾಧುರಿ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದ್ದು ಪ್ರಖ್ಯಾತ ನಿರ್ದೇಶಕ ಸತ್ಯಜಿತ್‌ ರಾಯ್ ಅವರ ಬಂಗಾಳಿ ಚಲನಚಿತ್ರ ಮಹಾನಗರ್ನಲ್ಲಿ(1963) ಬಾಲನಟಿಯಾಗಿ.  ನಂತರದಲ್ಲಿ ಹಲವೊಂದು ಬೆಂಗಾಲಿ ಚಿತ್ರಗಳಲ್ಲಿ ನಟಿಸಿದ್ದರು.    ಹೃಷಿಕೇಶ್‌ ಮುಖರ್ಜಿ ನಿರ್ದೇಶಿಸಿದ, 1971ರಲ್ಲಿ ತೆರೆಕಂಡ ಗುಡ್ಡಿಚಲನಚಿತ್ರದಲ್ಲಿ ಶಾಲಾ ಬಾಲಕಿಯಾಗಿ, ಮುಗ್ಧಳಾಗಿ ಒಬ್ಬ ನಟನನ್ನು ವರಿಸುವ ಆಶಯ ಹೊಂದಿದ ಹುಡುಗಿಯಾಗಿ ಆಕೆ ಅಪಾರವಾಗಿ ಮನಸೆಳೆದುಬಿಟ್ಟರು.   ಜವಾನಿ ದಿವಾನಿ (1972), ಕೋಶಿಶ್‌ , ಅನಾಮಿಕಾ, ಪಿಯಾ ಕಾ ಘರ್‌, ಅನಾಮಿಕ,  ಬಾವರ್ಚಿ, ಪರಿಚಯ್  ಸೇರಿದಂತೆ, ಹಲವಾರು  ಹಿಂದಿ ಚಲನಚಿತ್ರಗಳಲ್ಲಿ ನಾಯಕಿಯಾಗಿ  ಅಭಿನಯಿಸಿದರು.

ಅಂದು ಅಮಿತಾಬ್ ಬಚ್ಚನ್ ನಟಿಸಿದ್ದ ಚಿತ್ರಗಳೆಲ್ಲಾ ತೋಪಾಗಿದ್ದವು.  ಹೀಗಾಗಿ ಅಂದು ಸಲೀಂ-ಜಾವೇದ್‌ ಜೋಡಿ ಚಿತ್ರಕಥೆ ಹೆಣೆದಿದ್ದ  ಜಂಝೀರ್’  ಚಲನಚಿತ್ರದಲ್ಲಿ ಅಮಿತಾಭ್‌ರೊಂದಿಗೆ ಹಲವು ನಾಯಕಿನಟಿಯರು ನಟಿಸಲು ನಿರಾಕರಿಸಿದಾಗ, ಜಯಾ ಈ ಚಲನಚಿತ್ರದ ನಾಯಕಿನಟಿಯಾಗಿ ಪ್ರವೇಶಿಸಿದರು. ಈ ಚಲನಚಿತ್ರವು ಭಾರೀ ಯಶಸ್ಸು ಗಳಿಸಿ, ಅಮಿತಾಬರನ್ನು  ಸಿನೆಮಾ ವಲಯದಲ್ಲಿ ಆಂಗ್ರಿ ಯಂಗ್ ಮ್ಯಾನ್‌ ಎಂದು ಗುರುತಿಸಲಾಯಿತು.  ಈ ಚಲನಚಿತ್ರದ ನಂತರ ಬಿಡುಗಡೆಯಾದ ಅಭಿಮಾನ್ (1973), ಹಾಸ್ಯಚಿತ್ರ ಚುಪ್ಕೆ ಚುಪ್ಕೆ (1975), ಮಿಲಿ (1975) ಮತ್ತು ಶೋಲೆ (1975) ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ  ಅಮಿತಾಬ್ ಮತ್ತು ಜಯಾ ನಾಯಕ-ನಾಯಕಿಯಾಗಿ ನಟಿಸಿದರು.  ತಾವು ನಟಿಸಿದ ಚಿತ್ರಗಳಲ್ಲೆಲ್ಲಾ ಅವರು ಪಾತ್ರಗಳಿಗೆ ನೀಡುತ್ತಿದ್ದ ಘನತೆ, ಪಾತ್ರಗಳಲ್ಲಿ ಅಭಿನಯಿಸುವಾಗ ತಮ್ಮ ಪೋಷಾಕುಗಳಲ್ಲಿ ಮತ್ತು ನಡತೆಗಳಲ್ಲಿ ತೋರಿಸಿಕೊಡುತ್ತಿದ್ದ ಸಂಭಾವ್ಯತೆ ಮುಂತಾದವು ಚಿತ್ರರಂಗದಲ್ಲೇ ಅಪೂರ್ವವೆನಿಸುವಂತದ್ದು.  ಪಕ್ಕದ ಮನೆ ಹುಡುಗಿಎಂದು ಅವರು ಗಳಿಸಿದ್ದ ನಾಣ್ಣುಡಿಅತ್ಯಂತ ಮಹತ್ವವಾದದ್ದು.     ಸಾಧಾರಣ ಕಥಾನಕ ಚಿತ್ರಗಳಲ್ಲೂ ಅವರು ಪಾತ್ರಗಳಿಗೆ ತುಂಬುತ್ತಿದ್ದ ವೈವಿಧ್ಯತೆ ಮತ್ತು ಸಹಜತೆ  ಅವರ ಪ್ರತಿಪಾತ್ರ ನಿರ್ವಹಣೆಯನ್ನೂ ನೆನಪಿನಲ್ಲಿ ಉಳಿಸುವಂತೆ ಮಾಡಿವೆ.

1973ರಲ್ಲಿ ಅಮಿತಾಬರನ್ನು ವಿವಾಹವಾಗಿ ಜಯಾ ಬಚ್ಚನ್ ಆದ  ಜಯಾ ಬಾಧುರಿ,   1981ರಲ್ಲಿ ಬಿಡುಗಡೆಯಾದ ಯಶ್‌ ಚೋಪ್ರಾ ನಿರ್ದೇಶನದ ಸಿಲ್‌ಸಿಲಾಬಿಡುಗಡೆಯ ನಂತರದಲ್ಲಿ ಹಲವಾರು ವರ್ಷಗಳವರೆಗೆ  ಚಿತ್ರರಂಗದಲ್ಲಿ ಕಾಣಿಸಿಕೊಂಡದ್ದು ಕಡಿಮೆ.  ಮುಂಬದ ವರ್ಷಗಳಲ್ಲಿ ಅವರು  ಕಲ್ ಹೋ ನಹೋ’, ‘ಕಭಿ ಖುಷಿ ಕಭಿ ಗಮ್ಮುಂತಾದ  ಹಲವಾರು ಹಿರಿತನದ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಹಲವಾರು ಉತ್ತಮ ನಟನೆಗಾಗಿನ ಪ್ರಶಸ್ತಿ, ಜೀವಮಾನ ಸಾಧನೆಗಾಗಿನ ಪ್ರಶಸ್ತಿ ಹಾಗೂ ಪದ್ಮಶ್ರೀಯಂತಹ ಪ್ರಶಸ್ತಿಗಳು ಜಯಾ ಬಚ್ಚನ್ ಅವರನ್ನು ಅರಸಿ ಬಂದಿವೆ.  ಅವರು ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಹಲವಾರು ಬಾರಿ ಆಯ್ಕೆಯಾಗಿದ್ದು ರಾಜಕೀಯದಲ್ಲೂ ಸಕ್ರಿಯವಾಗಿದ್ದಾರೆ.

ಜಯಾಬಾಧುರಿಯವರ ಸುಂದರ ನಗೆ ಎಂದೂ ಮಾಸದಿರಲಿ.  ಅವರ ಬದುಕು ಸುಂದರವಾಗಿರಲಿ.  ಅವರಿಂದ ಉತ್ತಮ ಸಾಧನೆಗಳು, ಉತ್ತಮ ಸಮಾಜ ಸೇವೆಗಳು ನಿರಂತರವಾಗಿ ಮುಂದುವರೆಯುತ್ತಿರಲಿ.Tag: Jaya Bacchan

ಕಾಮೆಂಟ್‌ಗಳಿಲ್ಲ: