ಶನಿವಾರ, ಆಗಸ್ಟ್ 31, 2013

ರಾಧಿಕಾ ಪಂಡಿತ್


ರಾಧಿಕಾ ಪಂಡಿತ್

ರಾಧಿಕಾ ಪಂಡಿತ್  ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರುವಾಸಿ.  ಮೊದಲಿಗೆ ಆಕೆ ಕನ್ನಡದ ಮಣ್ಣಿನ ಪ್ರತಿಭೆ.  ಕನ್ನಡ ಬಲ್ಲ ಪ್ರತಿಭೆ.  ಸುಂದರವಾಗಿ ಕನ್ನಡವನ್ನು ಸಂಭಾಷಿಸುವ ಹುಡುಗಿ.  ಇಂತಹ ವಿಷಯಗಳೆಲ್ಲ ಇಂದಿನ ನಮ್ಮ ಚಿತ್ರರಂಗದಲ್ಲಿ ಅಚ್ಚರಿಯ ಸಂಗತಿ ಎನ್ನುವಂತಾಗಿಬಿಟ್ಟಿದೆ.  ಮಾರ್ಚ್ 7 ರಾಧಿಕಾ ಪಂಡಿತ್ ಹುಟ್ಟುಹಬ್ಬ.  ಉತ್ತರ ಕನ್ನಡ ಜಿಲ್ಲೆಯಿಂದ  ಮೂಡಿಬಂದ ಈ ಪ್ರತಿಭೆ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿದವರು.

ರಾಧಿಕಾ ಪಂಡಿತ್ ಫಿಲ್ಮ್ ಫೇರ್ ಪ್ರಶಸ್ತಿಗಳಿಕೆಯಲ್ಲಿ ಹ್ಯಾಟ್ರಿಕ್ ಮಾಡಿರುವ ಸಾಧನೆ ಮತ್ತು ರಾಜ್ಯಪ್ರಶಸ್ತಿಯೂ ಸೇರಿದಂತೆ ಪಡೆದ ಹಲವಾರು ಗೌರವಗಳಿಂದ ಎಲ್ಲರ ಗಮನ ಸೆಳೆದವರು.  ಮೊದಮೊದಲು ನಂದಗೋಕುಲ, ಸುಮಂಗಲಿ, ಕಾದಂಬರಿ ಮುಂತಾದ  ದೂರದರ್ಶನ ಧಾರವಾಹಿಗಳಲ್ಲಿ ನಟಿಸಿದ ರಾಧಿಕಾ ಪಂಡಿತ್ಚಿತ್ರರಂಗಕ್ಕೆ ಬಂದು 2008ರ ಸಾಲಿನ ತಮ್ಮ  ಮೊದಲ ಚಿತ್ರ 'ಮೊಗ್ಗಿನ ಮನಸ್ಸು' ಅಭಿನಯಕ್ಕೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಜೊತೆಗೆ ಫಿಲಂಫೇರ್ ಪ್ರಶಸ್ತಿ ಪಡೆದರು. 2009ರ ಸಾಲಿನಲ್ಲಿ 'ಲವ್ ಗುರು' ಚಿತ್ರಕ್ಕೆ ಸತತ ಎರಡನೇ ವರ್ಷ ಫಿಲಂಫೇರ್ ಪ್ರಶಸ್ತಿ ಪಡೆದು  ಭೇಷ್ ಎನಿಸಿಕೊಂಡರು.  ಅಷ್ಟಕ್ಕೇ ಸ್ಟಾಪ್ ಆಗದ ರಾಧಿಕಾ ಪಂಡಿತ್ 2010ರ ಸಾಲಿನ 'ಕೃಷ್ಣನ್ ಲವ್ ಸ್ಟೋರಿ' ಚಿತ್ರಕ್ಕೆ ಮೂರನೇ ಬಾರಿಯೂ ಫಿಲಂಫೇರ್ ಪ್ರಶಸ್ತಿ ಸ್ವೀಕರಿಸಿ ಹ್ಯಾಟ್ರಿಕ್ ಸಾಧಿಸಿದರು.  ಮುಂದೆ  ಫಿಲಂ ಫೇರ್ ಪ್ರಶಸ್ತಿಗಳನ್ನು ಅವರು 2013ರ ಸಾಲಿಗೆ  ‘ಅದ್ಧೂರಿ’ ಹಾಗೂ 2014ರ ಸಾಲಿಗೆ ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ ಚಿತ್ರಗಳಿಗೂ ಸ್ವೀಕರಿಸಿದ್ದಾರೆ.   ಇದಲ್ಲದೆ ಸುವರ್ಣ ಪ್ರಶಸ್ತಿ, ಉದಯ ಟಿ ವಿ ಪ್ರಶಸ್ತಿ, ಲಯನ್ಸ್ ಕ್ಲಬ್ ಪ್ರಶಸ್ತಿ, ಸೌಂತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್  ಮುಂತಾದ ಹಲವಾರು ಪ್ರಶಸ್ತಿಗಳು ಕೂಡಾ ಅವರಿಗೆ ಸಂದಿವೆ. 

ಮೇಲ್ಕಂಡ ಚಿತ್ರಗಳಲ್ಲದೆ ಒಲವೆ ಜೀವನ ಲೆಖ್ಖಾಚಾರ, ಗಾನಾ ಬಜಾನಾ, ಹದಿನೆಂಟನೇ ಕ್ರಾಸ್, ಹುಡುಗರು, ಅಲೆಮಾರಿ, ಬ್ರೇಕಿಂಗ್ ನ್ಯೂಸ್, 18ನೇ ಕ್ರಾಸ್, ಸಾಗರ್, ಡ್ರಾಮಾ, ಕಡ್ಡಿಪುಡಿ, ದಿಲ್ವಾಲ, ಬಹದ್ದೂರ್, ಮಿಸ್ಟರ್ ಎಂದೆಂದಿಗೂ ಮುಂತಾದ ಚಿತ್ರಗಳಲ್ಲಿ ಅವರು ಕಂಡಿದ್ದಾರೆ.  ಅವರ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್ ಮಾನದಂಡ ಮತ್ತು  ಅವರ ಅಭಿನಯದ  ಕುರಿತ ವಿಮರ್ಶೆಗಳ ಮಾನದಂಡಗಳಲ್ಲೂ ಸೈ ಎನಿಸಿರುವುದು ಗಮನಾರ್ಹ.

ಜೂಮ್, ದೊಡ್ಡಮನೆ ಹುಡುಗ, ಮಂಜ  ಮುಂತಾದ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.  ರಾಧಿಕಾ ಪಂಡಿತ್ ಹೊಸ ಹೊಸ ನಾಯಕರಿಂದ ಪ್ರಾರಂಭಗೊಂಡು ಯಶಸ್ವೀ ನಾಯಕ ಪುನೀತ್, ಹಿರಿಯ ನಟ ಶಿವರಾಜ್ ಕುಮಾರ್  ವರೆಗೆ ವಿವಿಧ ನಟರೊಡನೆ ನಟಿಸಿದ್ದಾರೆ.  ಕ್ಲಾಸ್ ಮತ್ತು ಮಾಸ್ ನಿರ್ದೇಶಕರುಗಳ ಸಾಲಿಗೆ ಸೇರುವ ಯೋಗರಾಜ್ ಭಟ್, ನಾಗತಿಹಳ್ಳಿ ಚಂದ್ರಶೇಖರ್ ಅಂತಹ ನಿರ್ದೇಶಕರ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ.  ಕನ್ನಡ ಚಿತ್ರರಂಗದಲ್ಲಿ ಎಡಬಿಡದೆ ಮೂಡುವ ವಿವಾದಗಳ  ಯಾವುದೇ ಪಟ್ಟಿಯಲ್ಲೂ  ರಾಧಿಕಾ ಸೇರಿಲ್ಲ ಎನ್ನುವುದು ಗಮನಾರ್ಹ. 

ತಮ್ಮ ಅಭಿನಯದಿಂದ ಜನಪ್ರೀತಿ, ಯಶಸ್ಸು, ಪತ್ರಿಕಾ ಪ್ರಶಂಸೆ ಮತ್ತು ಪ್ರಶಸ್ತಿಗಳನ್ನೆಲ್ಲಾ ತಮ್ಮದಾಗಿಸಿಕೊಂಡಿರುವ ರಾಧಿಕಾ ಪಂಡಿತ್  ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳುಮತ್ತು ಉತ್ಕೃಷ್ಟ ಸಾಧನೆಗಳನ್ನೊಳಗೊಂಡ ಸಂತಸದ ಬದುಕಿಗಾಗಿ ಅವರಿಗೆ ಶುಭ ಹಾರೈಕೆಗಳು.


Tag: Radhika Pandit

ಕಾಮೆಂಟ್‌ಗಳಿಲ್ಲ: