ಮಂಗಳವಾರ, ಆಗಸ್ಟ್ 27, 2013

ಕಲ್ಯಾಣ್ ಕುಮಾರ್

ಕಲ್ಯಾಣ್ ಕುಮಾರ್

ಕನ್ನಡದ ಪ್ರಖ್ಯಾತ ನಾಯಕನಟರಲ್ಲಿ ಪ್ರಮುಖ ಹೆಸರಾದ ಕಲ್ಯಾಣ್ ಕುಮಾರ್ ಈ ಲೋಕವನ್ನಗಲಿದ ದಿನ ಆಗಸ್ಟ್ 1, 1999.  ಕನ್ನಡದ ಕುಮಾರತ್ರಯರಾದ ಕಲ್ಯಾಣ್ ಕುಮಾರ್, ರಾಜ್ ಕುಮಾರ್ ಮತ್ತು ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ತ್ರಿಮೂರ್ತಿಗಳೆನಿಸಿರುವ ಕುಮಾರತ್ರಯರು’.

1929ರ ವರ್ಷದಲ್ಲಿ ಜನಿಸಿದ ಕಲ್ಯಾಣ್ ಕುಮಾರರ  ಮುಂಚಿನ ಹೆಸರು ಸಂಪತ್ ಅಯ್ಯಂಗಾರ್. ಚೊಕ್ಕಣ್ಣ ಎಂಬುದು ಮನೆಯ ಮುದ್ದಿನ ಹೆಸರು.   ತಂದೆ ತಾಯಂದರಿಗೆ ಮಗ ವೈದ್ಯನಾಗಬೇಕೆಂಬ ಆಸೆ.  ಆದರೆ ಸಂಪತ್ ಅಯ್ಯಂಗಾರ್ಯರಿಗೆ ಕಲಾ ಲೋಕದಲ್ಲಿ ತಮ್ಮ ಕಲ್ಯಾಣ ಕೌಮಾರತ್ವ ಬೆಳಗಿಸಬೇಕೆಂಬ ಕನಸು. 

ಈ ಸುರದ್ರೂಪಿ ಯುವಕ ಕಲ್ಯಾಣ್  ಅಭಿನಯಿಸಿದ ಮೊದಲ ಚಿತ್ರ 1954ರಲ್ಲಿ ತೆರೆಕಂಡ ನಟ ಶೇಖರ’.  ಮುಂದೆ ಅವರು ತಮ್ಮ ಅಭಿನಯ ಸಾಮರ್ಥ್ಯದ ಮೂಲಕ ನಟಶೇಖರರೆಂಬ ಬಿರುದನ್ನೇ ತಮ್ಮದಾಗಿಸಿಕೊಂಡರು.  ದಕ್ಷಿಣ ಭಾರತದ ವಿವಿಧ ಭಾಷೆಗಳ ಸುಮಾರು 200ಚಿತ್ರಗಳಲ್ಲಿ ನಟಿಸಿದ್ದ ಕಲ್ಯಾಣ ಕುಮಾರ್ ತಮ್ಮ ಸುರದ್ರೂಪಯುಕ್ತ ಭಾವಭಿನಯಕ್ಕೆ ಹೆಸರಾಗಿದ್ದರು.  ಒಂದು ಕಾಲದಲ್ಲಿ ಬೇಡಿಕೆ, ಪ್ರಸಿದ್ಧಿ, ಸಂಭಾವನೆ, ಯಶಸ್ಸುಗಳ ಲೆಕ್ಕಾಚಾರದಲ್ಲಿ ಅವರದೇ ಪ್ರಥಮ ಸ್ಥಾನವಾಗಿತ್ತು. 

ಕನ್ನಡದ ಪ್ರಪ್ರಥಮ ವರ್ಣಚಿತ್ರ ಅಮರಶಿಲ್ಪಿ ಜಕಣಾಚಾರಿಯ ನಾಯಕರಾಗಿ ಕಲ್ಯಾಣ್ ಕುಮಾರ್ ಅವರ ಸುರದ್ರೂಪ, ಆ ರೂಪಕ್ಕೆ ತಕ್ಕ ಅಭಿವ್ಯಕ್ತಿ ಮತ್ತು  ಭಾವಪೂರ್ಣತೆಗಳು ಮರೆಯಲಾಗದಂತದ್ದು.   ಸುಬ್ಬಾಶಾಸ್ತ್ರಿ’, ‘ಬೆಳ್ಳಿ ಮೋಡ’, ‘ಸದಾರಮೆ’, ‘ರಾಯರ ಸೊಸೆ’, ‘ಬದುಕುವ ದಾರಿ’, ‘ಮಾವನ ಮಗಳು’,  ‘ಚಿನ್ನದ ಗೊಂಬೆ’, ‘ಪ್ರೇಮಕ್ಕೂ ಪರ್ಮಿಟ್ಟೇ’, ‘ಅರಿಶಿನ ಕುಂಕುಮ’, ‘ಬೇಡಿ ಬಂದವಳು’, ‘ಆನಂದ ಕಂದ’, ‘ಬೆಟ್ಟದ ಕಳ್ಳ’, ‘ತಾಯಿ ಕರುಳುಮತ್ತು ಕುಮಾರತ್ರಯರು ಕೂಡಿ ನಟಿಸಿದ ಭೂದಾನಇವೆಲ್ಲಾ ಕಲ್ಯಾಣ್ ಕುಮಾರರನ್ನು ಅತ್ಯಂತ ಹೆಸರುವಾಸಿಯಾಗಿಸಿದ್ದವು. 

ಕಲ್ಯಾಣ್ ಕುಮಾರ್ ಅಂದಿನ ಕಾಲದ ಪ್ರಖ್ಯಾತ ನಿರ್ಮಾಪಕ ನಿರ್ದೇಶಕರುಗಳಾದ ಜಿ ವಿ ಅಯ್ಯರ್, ಬಿ. ಆರ್. ಪಂತುಲು, ಬಿ ವಿಟ್ಟಲಾಚಾರ್ಯ ಮುಂತಾದವರ ಬಹಳಷ್ಟು ಬಹುಭಾಷಾ ಚಿತ್ರಗಳಲ್ಲಿ ನಟಿಸಿದ್ದರು.  ಆ ಚಿತ್ರಗಳು ಎಲ್ಲೆಡೆ ಯಶಸ್ವಿಯೂ ಆದ ಹಿನ್ನೆಲೆಯಲ್ಲಿ  ಅವರಿಗೆ ಪರಭಾಷಾ ಚಿತ್ರಗಳ  ಆಹ್ವಾನ ಸುಲಭವಾಗಿ ಕೂಡಿಬಂತು.   ತಮಿಳಿನಲ್ಲಿ ಅವರು ನಟಿಸಿದ ನೆಂಜಿಲ್ ಒರು ಆಲಯಂಸಾರ್ವಕಾಲಿಕವಾಗಿ ಪ್ರಖ್ಯಾತಗೊಂಡಿರುವ ಚಿತ್ರಗಳಲ್ಲೊಂದು. 

ಪರಭಾಷೆಗಳಲ್ಲಿ  ದೊರೆತ ಅದ್ಭುತ  ಜನಪ್ರಿಯತೆ ಮತ್ತು ವ್ಯಾವಹಾರಿಕವಾದ ಲಾಭದ ದೃಷ್ಟಿಯಿಂದ ಆ  ಭಾಷೆಗಳಿಗೆ ಹೆಚ್ಚು  ಪ್ರಾಶಸ್ತ್ಯ ನೀಡಿದ ಕಲ್ಯಾಣ್ ಕುಮಾರ್ ನಿಧಾನವಾಗಿ ಕನ್ನಡ ಚಿತ್ರರಂಗಕ್ಕೆ ದುರ್ಲಭರಾದರು.  ಕಲ್ಯಾಣ್ ಕುಮಾರರನ್ನು  ಕೆಲವೊಂದು ಕಾಲ ಅಪ್ಪಿಕೊಂಡಿದ್ದ ಇತರ ಭಾಷಾ ಚಿತ್ರರಂಗಗಳು, ಅಲ್ಲಿನ ರಾಜಕೀಯ ಗಾಳಿ ಪ್ರಬಲವಾಗುತ್ತಿದ್ದಂತೆ ಅವರನ್ನು ಕಡೆಗಾಣಿಸತೊಡಗಿದವು.  ಪುನಃ ಅವರು ಕನ್ನಡಕ್ಕೆ ಬರುವ ವೇಳೆಗೆ ಕನ್ನಡದಲ್ಲಿ ರಾಜ್ ಕುಮಾರ್ ಅವರ ಔನ್ನತ್ಯದ ಕಾಲದ ಜೊತೆಗೆ ಅನೇಕ ಯುವ ಪೀಳಿಗೆಯ ಯಶಸ್ವೀ ಕಲಾವಿದರು ಈ ರಂಗವನ್ನು ಆಳತೊಡಗಿದ್ದರು.  ಹೀಗಾಗಿ ಅವರು ಕನ್ನಡದಲ್ಲಿ ಸೀಮಿತ ಅವಕಾಶಗಳಿಗೆ ಮಾತ್ರ ಮೀಸಲಾಗಬೇಕಾಯಿತು. ಹೀಗಿದ್ದರೂ ಪುಟ್ಟಣ್ಣ ಕಣಗಾಲರು ತಮ್ಮ ಬೆಳ್ಳಿ ಮೋಡದಲ್ಲಿ ಮಿನುಗಿದ್ದ ಕಲ್ಯಾಣರನ್ನು ಕಥಾ ಸಂಗಮ’, ‘ಕಾಲೇಜು ರಂಗದಂತಹ ಚಿತ್ರಗಳಲ್ಲಿ ಉತ್ತಮವಾಗಿ ಬಳಸಿದರು.   ಆದರೆ ಇವ್ಯಾವುವೂ ಕಲ್ಯಾಣರಿಗೆ ಅವರ ಹಳೆಯ ಔನ್ನತ್ಯಗಳನ್ನು ಮರಳಿಸುವಷ್ಟು ಶಕ್ತಿಯುತವಾಗಿರಲಿಲ್ಲ.

ಕಲ್ಯಾಣ್ ಕುಮಾರರು ತಮ್ಮ  ಚಿತ್ರಗಳಲ್ಲಿನ ಸುಂದರ ಹಾಡುಗಳಿಂದ  ಹೆಚ್ಚು ನೆನಪಿಗೆ ಬರುತ್ತಾರೆ.  ಬೆಳ್ಳಿಮೊಡ’  ಚಿತ್ರದ ಬೆಳ್ಳಿಮೊಡದ ಅಂಚಿನಿಂದಾ ಮೂಡಿಬಂದಾ ಮಿನುಗುತಾರೆ’, ‘ಇದೇ ನನ್ನ ಉತ್ತರ’; ‘ಬೇಡಿ ಬಂದವಳುಚಿತ್ರದ ನೀರಿನಲ್ಲಿ ಅಲೆಯ ಉಂಗುರ’; ‘ಅಮರ ಶಿಲ್ಪಿ ಜಕ್ಕಣಾಚಾರಿಚಿತ್ರದ ನಿಲ್ಲು ನೀ, ನಿಲ್ಲು ನೀ, ನೀಲವೇಣಿ‘, ‘ಏನೋ, ಎಂತೋ, ಜುಮ್ಮೆಂದಿತು ತನುವು’; ‘ಸುಬ್ಬಾ ಶಾಸ್ತ್ರಿಚಿತ್ರದ ಏನು ಮಾಡಿದರೇನು ಭವಹಿಂಗದು’, ‘ತನು ನಿನ್ನದು ಜೀವನ ನಿನ್ನದು’; 'ಅರಿಶಿನ ಕುಂಕುಮ' ಚಿತ್ರದ 'ನಾನೂ ನೀನೂ ಜೊತೆಯಿರಲೂ';  ‘ಕಥಾ ಸಂಗಮಚಿತ್ರದ ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದಇವೇ ಮುಂತಾದ ಗೀತ ಚಿತ್ರಣಗಳಲ್ಲಿ ಕಲ್ಯಾಣ್ ಭವ್ಯರಾಗಿ ವಿಜ್ರಂಭಿಸಿದ್ದಾರೆ.

ಕೆಲವೊಂದು ಚಿತ್ರ ನಿರ್ಮಾಣ, ಅಲ್ಲಲ್ಲಿ ನಿರ್ದೇಶನಗಳಲ್ಲೂ ಕಲ್ಯಾಣ್ ಕುಮಾರ್ ಕೈಯಾಡಿಸಿದ್ದರು.  ಈ ಮಧ್ಯೆ ಅವರು ಚಲನಚಿತ್ರರಂಗದಿಂದ ಹೊರಗೆ ಕೆಲವೊಂದು ಉದ್ಯಮಗಳಲ್ಲಿಯೂ ಕೈಯಾಡಿಸಿದ್ದುಂಟು.  ಒಂದು ಕಾಲದಲ್ಲಿ ಅಭೂತಪೂರ್ವ ಯಶಸ್ಸನ್ನು ತಾವು ಕಾಲಿಟ್ಟಲ್ಲೆಲ್ಲಾ ಸಂಪಾದಿಸಿದ್ದ ಕಲ್ಯಾಣ್ ಕುಮಾರ್, ಮುಂದೆ ಅದೇ ರೀತಿಯ ಸೋಲನ್ನು ತಮ್ಮ  ಪ್ರತೀ ಹೆಜ್ಜೆಯಲ್ಲೂ ಕಾಣುವಂತಾಯಿತು. 

ತಮ್ಮ ಹಿರಿಯ ವಯಸ್ಸಿನಲ್ಲಿ ಅಪಾರ ಸ್ಪರ್ಧೆಗಳ ನಡುವೆ ಕೆಲವೊಂದು ಚಿತ್ರಗಳಲ್ಲಿ ಒದಗಿದ ಪೋಷಕ ಪಾತ್ರಗಳ ಮೂಲಕ  ಬದುಕನ್ನು ಅರಸುತ್ತಿದ್ದ ಕಲ್ಯಾಣ್ ಕುಮಾರ್, ದೂರದರ್ಶನದ ಕೆಲವೊಂದು ಧಾರಾವಹಿಗಳಿಗೂ ಕಾಲಿಟ್ಟಿದ್ದರು.  ಹೀಗೆ ಬಣ್ಣದ ಲೋಕದ ಏಳುಬೀಳುಗಳ ಪ್ರತೀಕವೋ ಎಂಬಂತೆ ತಮ್ಮ ಜೀವನವನ್ನು ಸಾಗಿಸಿದ ಕಲ್ಯಾಣ್ ಕುಮಾರರು ಆಗಸ್ಟ್ 1, 1999ರಂದು ಈ ಲೋಕದ ಯಾತ್ರೆಗೆ ವಿದಾಯ ಹೇಳಿದರು. 


ಈ ಮಹಾನ್ ಕಲಾಚೇತನಕ್ಕೆ ನಮ್ಮ ಗೌರವಗಳು.

Tag: Kalyan Kumar

ಕಾಮೆಂಟ್‌ಗಳಿಲ್ಲ: