ಶುಕ್ರವಾರ, ಆಗಸ್ಟ್ 30, 2013

ಪ್ರಕಾಶ್ ರೈ

ಪ್ರಕಾಶ್ ರೈ

ನಮ್ಮ ಪುತ್ತೂರಿನ ಪ್ರಕಾಶ್ ರೈ ಹುಟ್ಟಿದ ಹಬ್ಬ ಮಾರ್ಚ್ 26.  ಬೆಂಗಳೂರಿನಲ್ಲಿ ಸೈಂಟ್ ಜೋಸೆಫ್ಸ್ ಓದಿನ ಸಮಯದಲ್ಲಿ ನಾಟಕಗಳಲ್ಲಿ ನಟಿಸಿ ಮುಂದೆ ಹವ್ಯಾಸಿ ರಂಗಭೂಮಿ ಮತ್ತು ದೂರದರ್ಶನದ ಪಾತ್ರಗಳಿಗೆ ಬಂದರು.  ಅಂದಿನ ದಿನದಲ್ಲಿ ಬರುತ್ತಿದ್ದ ಗುಡ್ಡದ ಭೂತ, ಬಿಸಿಲು ಕುದುರೆ ಇತ್ಯಾದಿ ದೂರದರ್ಶನದ ಪಾತ್ರ ಹಾಗೂ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಲ ನೂಕುತ್ತಿದ್ದ ಈ  ಹುಡುಗ.

ಹೀಗಿದ್ದ ದಿನಗಳಲ್ಲಿ  ಹರಕೆಯ ಕುರಿಎಂಬ ಚಿತ್ರದಲ್ಲಿನ ಪ್ರಕಾಶ್ ರೈ  ಅಭಿನಯ ವಿಮರ್ಶಕರ ಮೆಚ್ಚುಗೆ ಗಳಿಸಿತು.  ಜೊತೆಗೆ ಆ ಚಿತ್ರದಲ್ಲಿ ನಟಿಸಿದ್ದ ಪ್ರಸಿದ್ಧ ನಟಿ  ಗೀತ ಅವರು ನಮ್ಮ ಹುಡುಗನನ್ನು ದಕ್ಷಿಣ ಭಾರತದ ಪ್ರಖ್ಯಾತ ನಿರ್ದೇಶಕ ಕೆ. ಬಾಲಚಂದರ್ ಅವರಿಗೆ ಪರಿಚಯಿಸಿದರು.  ಮುಂದಿನದು ಇತಿಹಾಸ.  ಬಾಲಚಂದರ್ ಗರಡಿಯಲ್ಲಿ ಪಳಗಿ ಯಶಸ್ಸು ಗಳಿಸಿದ ಮೇಲೆ ಕೇಳಬೇಕೆ!  ಆತನಿಗೆ ಬಿಡುವು ಸಿಗದಷ್ಟು ನಿರಂತರ ಕೆಲಸ.  ಆತನ ಹೆಸರು ಪ್ರಕಾಶ್ ರಾಜ್ ಎಂದಾಗಿ ಬದಲಾಯಿತು.  ಎಲ್ಲಾ ತಮಿಳು ಚಿತ್ರಗಳಲ್ಲೂ, ತೆಲುಗು ಚಿತ್ರಗಳಲ್ಲಿಯೂ ಆತ ಇರಲೇಬೇಕು ಎನ್ನುವಂತಾಗಿ ಹೋಯಿತು.  ಮಲಯಾಳಂನಲ್ಲೂ ಪ್ರಸಿದ್ಧರಾದರು.  ಆತ ಸರಾಗವಾಗಿ ನಟಿಸುವ ರೀತಿ, ಸಂಭಾಷಣೆ ಹೇಳುವ ಪರಿ, ಶಾರೀರಿಕ ಅಭಿವ್ಯಕ್ತಿ ಆತನನ್ನು ಉತ್ತುಂಗಕ್ಕೇರಿಸಿತು.  ಬಹಳಷ್ಟು ನಿರ್ಮಾಪಕ ನಿರ್ದೇಶಕರು ಆತನನ್ನು ಉಪಯೋಗಿಸಿಕೊಂಡು ಆತನನ್ನೂ ಶ್ರೀಮಂತನನ್ನಾಗಿಸಿ ತಾವೂ ಶ್ರೀಮಂತರಾಗುವಂತಹ ವಾಣಿಜ್ಯಕ ವ್ಯವಹಾರ ಧ್ಯೇಯದ ಚಿತ್ರಗಳನ್ನು ನಿರ್ಮಿಸಿದ್ದೇ ಹೆಚ್ಚು.  ಅವುಗಳಲ್ಲಿ ನಾಯಕಿಗೆ ಅಪ್ಪನಾಗಿ ನಾಯಕನಿಗೆ  ಖಳನಾಗಿ ಮೂಡಿದ್ದುದು ಬಹುಪಾಲು.  ಆದರೆ ಕೆ. ಬಾಲಚಂದರ್, ಮಣಿರತ್ನಂ, ಪ್ರಿಯದರ್ಶನ್, ನಾಗಾಭರಣ ಅಂತಹವರಿಗೆ ಆತನ ಸಾಮರ್ಥ್ಯ ಕೂಡಾ ಗೊತ್ತಿತ್ತು.

ಪ್ರಕಾಶ್ ರೈ 1998ರ ವರ್ಷದಲ್ಲಿ ಇರುವರ್ ಚಿತ್ರದಲ್ಲಿನ  ಪೋಷಕ ಪಾತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದರು.  1999, 2002, 2003ರ ವರ್ಷಗಳಲ್ಲಿ  ಆತನ ಅಭಿನಯ ರಾಷ್ಟ್ರಪ್ರಶಸ್ತಿ ಆಯ್ಕೆ ಮಂಡಳಿಯ ವಿಶೇಷ ಜ್ಯೂರಿಗಳ ಮೆಚ್ಚುಗೆ ಪಡೆಯಿತು.  2003ರ ವರ್ಷದಲ್ಲಿ ವಿಶೇಷ ಜ್ಯೂರಿ ಮೆಚ್ಚುಗೆಯ ಬಹುಮಾನ ನೀಡುವಾಗ ಆ ವರ್ಷದ ತಮಿಳು, ಕನ್ನಡ ಮತ್ತು ತೆಲುಗಿನ ಒಟ್ಟು ಹನ್ನೆರಡು ಚಿತ್ರಗಳಲ್ಲಿ ಪ್ರಶಂಸನೀಯ ಅಭಿನಯ ನೀಡಿದ್ದಾನೆ ಎಂದು ಕೊಂಡಾಡಿತು.  ಇದು ಈ ನಟ ಎಷ್ಟು ಸಮರ್ಥ ಎಂಬುದಕ್ಕೆ ಒಂದು ನಿದರ್ಶನ. ರಾಷ್ಟ್ರಪ್ರಶಸ್ತಿಗಳಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಅಂದರೆ ಅವರು ರಾಷ್ಟ್ರಪ್ರಶಸ್ತಿ ಪಡೆಯುವಲ್ಲಿ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ ಎಂದು ಕೂಡಾ ಅರ್ಥವಿದೆ.   ಹೀಗೆ ಹಲವು ಬಾರಿ ರಾಷ್ಟ್ರಪ್ರಶಸ್ತಿ ಪ್ರಕಾಶ್ ರೈ ಬಾಗಿಲ ಹೊಸ್ತಿಲವರೆಗೂ ಬಂದು ಕೈಗೆ ಸಿಗದಂತೆ ತಪ್ಪಿಸಿಕೊಳ್ಳುತ್ತಿತ್ತು.   2008ರ ವರ್ಷದಲ್ಲಿ ಕಾಂಚೀವರಂ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಕಾಶ್ ರೈ ಅವರಿಗೆ ಕಡೆಗೂ ಶ್ರೇಷ್ಠ ನಟ ಪ್ರಶಸ್ತಿ ಸಂದಿತು.  ಕಳೆದ ವರ್ಷ ಅವರು ಪೋಷಕ ಪಾತ್ರದಲ್ಲಿ ‘ಭಾಗ್ ಮಿಲ್ಖಾ ಭಾಗ್’ ಚಿತ್ರದಲ್ಲಿ ನೀಡಿರುವ ಅಭಿನಯ ಕೂಡಾ ಮನನೀಯವಾಗಿದ್ದು ಅವರಿಗೆ ಮತ್ತೊಂದು ಇಂಥಹ ರಾಷ್ಟ್ರಮಟ್ಟದ ಪ್ರಶಸ್ತಿ ಬಂದರೂ ಅಚ್ಚರಿಯಿಲ್ಲ.

ತಮಿಳು, ತೆಲುಗಿನ ಚಿತ್ರಗಳಲ್ಲಿ ಪ್ರಕಾಶ್ ರೈ ಅವರಿಗೆ ಸಂದಿರುವ ರಾಜ್ಯ ಮತ್ತು ಫಿಲಂ ಫೇರ್ ಅಂತಹ ಪ್ರಶಸ್ತಿಗಳು ಹಲವಾರು.  ಸುಮಾರು 300 ಚಿತ್ರಗಳಲ್ಲಿ ನಟಿಸಿರುವ ಪ್ರಕಾಶ್ ರೈ ಆಗಾಗ ಕನ್ನಡದಲ್ಲೂ ಬಂದು ನಟಿಸಿ ಹೋಗುತ್ತಿದ್ದಾರೆ.  ಅವರು ನಟಿಸಿದ ನಾಗಮಂಡಲದಲ್ಲಿನ ಅವರ ಅಭಿನಯ ಜನರ ಮನಸ್ಸಿನಲ್ಲಿ ಚಿರಸ್ಮರಣೀಯ.  ಇತ್ತೀಚಿನ ವರ್ಷದಲ್ಲಿ ತಾವೇ ತಮ್ಮದೇ ಚಿಂತನೆಯಾದ  ತಮಿಳು ಚಿತ್ರದ ಅವತರಣಿಕೆಯ ಕನ್ನಡ  ಚಿತ್ರವೊಂದನ್ನು  ಗೆಳೆಯ ಸುರೇಶ್ ಜೊತೆಗೂಡಿ  ನಾನು ನನ್ನ ಕನಸುಎಂಬ ಚಿತ್ರವಾಗಿಸಿ, ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸು ಕೂಡಾ ಕಂಡರು. ಇನ್ನೂ ಕೆಲವು ಚಿತ್ರಗಳನ್ನು ಅವರು ನಿರ್ಮಿಸುತ್ತಿದ್ದಾರೆ.  ಕನ್ನಡದ ಪ್ರೀತಿಗಾಗಿ ಉತ್ತಮ ಚಿತ್ರಕತೆ ಇದ್ದ ಪಕ್ಷದಲ್ಲಿ ಕೆಲವೊಮ್ಮೆ ಹಣ ಕೂಡಾ ಸ್ವೀಕರಿಸದೆ ಕೆಲಸ ಮಾಡಿರುವ ಈತನ ಹೃದಯವಂತಿಕೆ ಕೂಡಾ ದೊಡ್ಡದೇ.

ನಮ್ಮ ಕನ್ನಡದ ಪ್ರತಿಭೆಗಳು ಕನ್ನಡಕ್ಕೆ ಹೆಚ್ಚು ಉಪಯೋಗವಾಗಲಿಲ್ಲವಲ್ಲ ಎಂದು ಒಮ್ಮೊಮ್ಮೆ ಅನಿಸುವುದು ಸಹಜ.  ಆದರೆ ನಮ್ಮ ಉದ್ಯಮ ವೈಶಾಲ್ಯತೆ, ಅರ್ಥಪೂರ್ಣತೆ ಮತ್ತು ಆರ್ಥಿಕ ಸಮಂಜಸತೆ ಕಾಣುವವರೆಗೆ ಅದನ್ನು ನಾವು ಪೂರ್ಣ ಬಯಸುವುದು ಕಷ್ಟಕರ.  ನಮ್ಮ ರಜನೀಕಾಂತ್, ಪ್ರಕಾಶ್ ರೈ, ಕೋಕಿಲಾ ಮೋಹನ್, ಅರ್ಜುನ್  ಅಂತಹವರಿಗೆ ಅವರು ಬೇರೆಡೆಗಳಿಸಿದ ಯಶಸ್ಸನ್ನು ನಾವು ಕೊಡಲು ಸಾಧ್ಯವಿತ್ತು ಎಂದು ಊಹಿಸುವುದಕ್ಕೆ ಕೂಡಾ ಕಷ್ಟ ಸಾಧ್ಯ.  ಇಂದು ಇಲ್ಲಿ ತಯಾರಾಗುತ್ತಿರುವ ಬಹುತೇಕ ಚಿತ್ರಗಳಾದರೋ  ಸೃಜನಶೀಲತೆ ಅತಿ ಕಡಿಮೆ ಇರುವ  ಬೇರೆ ಬಾಷೆಗಳಲ್ಲಿ ತಯಾರಾಗಿ ಬಂದಿರುವ ರೀಮೇಕ್ ಚಿತ್ರಗಳೇ.  ಈ ಹಲವು ಹಿನ್ನೆಲೆಗಳನ್ನು ಗಮನಿಸಿದಲ್ಲಿ ನಾವು ನಮ್ಮ ಕನ್ನಡದ ಹುಡುಗರು ಎಲ್ಲಿದ್ದರೂ ಕೀರ್ತಿವಂತರಾಗಿ ಯಶಸ್ವಿಗಳಾಗಿರಲಿ ಎಂದು ಮಾತ್ರ ಹೇಳುವ ಸ್ಥಿತಿಯಲ್ಲಿದ್ದೇವೆ.  ಎಪ್ಪತ್ತು ಎಂಭತ್ತರ ದಶಕದಲ್ಲಿ ನಾವು ನಿರ್ಮಿಸಿದ ಚಿತ್ರಗಳಿಂದ ರಾಷ್ಟ್ರದೆಲ್ಲೆಡೆ ಕೀರ್ತಿಗಳಿಸಿದ ದಿನಗಳನ್ನು ನಮ್ಮ ಚಿತ್ರರಂಗ  ಪುನಃ ಸಂಸ್ಥಾಪಿಸಬೇಕಿದೆ.  ನಮ್ಮ ಗಿರೀಶ್ ಕಾಸರವಳ್ಳಿ, ನಾಗಾಭರಣ, ಶೇಷಾದ್ರಿ ಅಂತಹ ಪೀಳಿಗೆಯವರು ಚಿಂತಕಪ್ರಧಾನ ಚಿತ್ರಗಳ ನಿಟ್ಟಿನಲ್ಲಿ ಇನ್ನೂ ಆ ಕೀರ್ತಿ ಪತಾಕೆಯನ್ನು ಉಳಿಸಿದ್ದಾರೆ ಎಂಬುದು ನಿಜವಾದರೂ ಒಟ್ಟಾರೆ ಕನ್ನಡ ಚಿತ್ರರಂಗ ಇನ್ನೂ ಆ ನಿಟ್ಟಿನಲ್ಲಿ ಬಹು ದೂರದಲ್ಲಿದೆ ಎಂಬುದನ್ನು ನಾವೆಲ್ಲರೂ ಒಪ್ಪಲೇ ಬೇಕಾಗುತ್ತದೆ. ಈ ಪರಿಸ್ಥಿತಿ ಮುಂಬರುವ ದಿನಗಳಲ್ಲಿ ಬದಲಾಗಲಿ ಎಂದು ಆಶಿಸೋಣ.

ಈ ಲೇಖನ ಬರೆದ ಸಂದರ್ಭದಲ್ಲಿ ಪ್ರಕಾಶ್ ರೈ ನಾಗತಿ ಹಳ್ಳಿ ಚಂದ್ರಶೇಖರ ಅವರ ಜೊತೆ ಮಾತನಾಡ್ತಾ ಇರೋದನ್ನು ಕೇಳಿದೆ.  ಆತ ಕನ್ನಡದಲ್ಲಿ ಆತ್ಮೀಯವಾಗಿ ಸ್ವಚ್ಚವಾಗಿ ಉತ್ತಮ ಓದುಗನಾಗಿ, ಉತ್ತಮ ಅಭಿರುಚಿಯವನಾಗಿ  ಮಾತನಾಡುವುದನ್ನು ಕೇಳಿ ತುಂಬಾ ಸಂತೋಷವಾಯಿತು ಆತ ಅತ್ಯುತ್ಕೃಷ್ಟ ಓದುಗ ಮತ್ತು ಚಿಂತಕ ಎಂದು ಕೂಡಾ ತಿಳಿದು ಸಂತೋಷವಾಗುತ್ತದೆ.

ನಮ್ಮ ಪ್ರಕಾಶ್ ರೈ ಅವರಿಗೆ ಶುಭ ಕೋರುತ್ತಾ ಅವರ ಬದುಕು ಸುಖಮಯವಾಗಿರಲಿ, ಹರ್ಷಮಯವಾಗಿರಲಿ, ಅವರಿಂದ ಕನ್ನಡಲ್ಲಿ ಹೊಸ ಉತ್ಸಾಹದ ಚಿಲುಮೆ ದೊರಕಿ ಉತ್ತಮ ಚಿತ್ರಗಳ ನಿರ್ಮಾಣಕ್ಕೆ ಸಹಾಯವಾಗಲಿ ಎಂದು ಆಶಿಸೋಣ.


Tag: Prakash Rai, Prakash Raj

ಕಾಮೆಂಟ್‌ಗಳಿಲ್ಲ: