ಶನಿವಾರ, ಆಗಸ್ಟ್ 31, 2013

ಬಿರ್ಜು ಮಹಾರಾಜ್

ಬಿರ್ಜು ಮಹಾರಾಜ್

ಬ್ರಿಜ್ಮೋ ಮಿಶ್ರಾ ಅವರು ಪಂಡಿತ್ ಬಿರ್ಜು ಮಹಾರಾಜ್ ಎಂಬ ಹೆಸರಿನಿಂದ  ಕಥಕ್ ನೃತ್ಯದಲ್ಲಿ ಇಂದು ವಿಶ್ವಪ್ರಖ್ಯಾತರು.  ಪಂಡಿತ ಬಿರ್ಜು ಮಹಾರಾಜರು ಫೆಬ್ರುವರಿ 4, 1938ರಂದು ರಾಯಗರದಲ್ಲಿ  ಜನಿಸಿದರು.  ಕಥಕ್ ನೃತ್ಯದ ಕಲ್ಕಾ ಬಿಂದಾದಿನ್ ಘರಾನಾವನ್ನು ಅತ್ಯಂತ ಪ್ರಸಿದ್ಧಿಪಡಿಸಿದ ಖ್ಯಾತಿ ಬಿರ್ಜು ಮಾಹಾರಾಜ್ ಅವರದ್ದು.   ಕಥಕ್ ನೃತ್ಯ ಅವರ ಕುಟುಂಬದಲ್ಲಿ ವಂಶಪಾರಂಪರ್ಯವಾಗಿ ಬಂದದ್ದು.  ಅವರ ಕುಟುಂಬದವರೆಲ್ಲ  ರಾಜಮನೆತನದ ಆಸ್ಥಾನ ವಿದ್ವಾಂಸರೆಂದು ಪ್ರಖ್ಯಾತರು.  ಅವರ ಚಿಕ್ಕಪ್ಪಂದಿರಾದ ಶಂಭು ಮಹಾರಾಜ್, ಲಚ್ಚು ಮಹಾರಾಜ್ ಮತ್ತು ಅಚ್ಚನ್ ಮಹಾರಾಜ್ ಎಂದು ಪ್ರಖ್ಯಾತರಾದ ಅವರ ತಂದೆ ಜಗನ್ನಾಥ್ ಮಹಾರಾಜ್ ಇವರಲ್ಲಿ ಪ್ರತಿಯೋರ್ವರೂ ಮಹಾನ್ ನೃತ್ಯ ಕಲಾವಿದರೇ.  ಬಿರ್ಜು ಮಹಾರಾಜ್ ಅವರಿಗೆ ಅವರ ತಂದೆಯೇ ಗುರು. 

ಬಿರ್ಜು ಮಹಾರಾಜ್ ತಮ್ಮ ಏಳನೆಯ ಕಿರುವಯಸ್ಸಿನಲ್ಲೇ  ಮೊದಲ ನೃತ್ಯ ಪ್ರದರ್ಶನ ನೀಡಿದರು.  ಅವರು ಒಂಭತ್ತು ವರ್ಷದವರಾಗಿದ್ದಾಗ ಅವರ ತಂದೆ ನಿಧನರಾದರು.  ಹೀಗಾಗಿ ಅವರ ಕುಟುಂಬ ದೆಹಲಿಗೆ ವಲಸೆ ಬಂತು.  ಬಿರ್ಜು ಮಹಾರಾಜ್ ಅವರಿಗೆ ನೃತ್ಯವೇ ಪ್ರಥಮ ಆಸಕ್ತಿಯಾದರೂ, ಅವರಿಗೆ ಹಿಂದೂಸ್ಥಾನಿ ಸಂಗೀತ ಗಾಯನದಲ್ಲೂ ಅದ್ಭುತವಾದ ಪಾಂಡಿತ್ಯವಿದೆ.  ಅನೇಕ ವಾದ್ಯಗಳ ವಾದನದಲ್ಲೂ ಅವರದು  ಅಪ್ರತಿಮವೆನಿಸುವಂತಹ ಪಾಂಡಿತ್ಯ.  ಕಥಕ್ ನೃತ್ಯದ ಮೂಲಕ ಅನೇಕ ನೃತ್ಯ ರೂಪಕಗಳನ್ನು ಮತ್ತು ನೃತ್ಯ ನಾಟಕಗಳನ್ನು  ಸೃಷ್ಟಿಸುವುದರ ಮೂಲಕ ಬಿರ್ಜು ಮಹಾರಾಜ್  ಕಥಕ್ ನೃತ್ಯಕ್ಕೆ ವ್ಯಾಪಕವಾದ ವಿಸ್ತಾರವನ್ನು ತಂದುಕೊಟ್ಟರು. 

ಕಲಾಶ್ರಮನೃತ್ಯ ಶಿಕ್ಷಣಕ್ಕೆ ಬಿರ್ಜು ಮಹಾರಾಜ್ ಅವರ ಕೊಡುಗೆ ಮಹತ್ವಪೂರ್ಣವಾದುದು.  ಬಿರ್ಜು ಮಹಾರಾಜ್  ಅವರು ವಿಶ್ವದಾದ್ಯಂತ ಸಂಚರಿಸಿ ಸಹಸ್ರಾರು ನೃತ್ಯ ಪ್ರದರ್ಶನಗಳನ್ನು ನೀಡುವುದರ ಜೊತೆಗೆ ಕಥಕ್ ವಿದ್ಯಾರ್ಥಿಗಳಿಗಾಗಿ ಅಸಂಖ್ಯಾತ ಶಿಕ್ಷಣ ಶಿಬಿರಗಳನ್ನೂ ನಡೆಸಿದ್ದಾರೆ.  ಬಿರ್ಜು ಮಹಾರಾಜ್ ತಮ್ಮ ಹದಿಮೂರನೆಯ ಎಳೆಯ ವಯಸ್ಸಿನಲ್ಲೇ ದೆಹಲಿಯ ಸಂಗೀತ ಭಾರತಿಯಲ್ಲಿ ನೃತ್ಯ ಶಿಕ್ಷಣ ನೀಡಲು ಪ್ರಾರಂಭಿಸಿದರು.  ತಮ್ಮ ಚಿಕ್ಕಪ್ಪನವರಾದ ಶಂಭು ಮಹಾರಾಜ್ ಅವರೊಂದಿಗೆ ಭಾರತೀಯ ಕಲಾಕೇಂದ್ರದಲ್ಲಿ ಕಾರ್ಯನಿರ್ವಹಿಸಿದ ಬಿರ್ಜು ಮಹಾರಾಜ್, ಮುಂದೆ ನವದೆಹಲಿಯ ಕಥಕ್ ಶಿಕ್ಷಣ ಕೇಂದ್ರದ ಶಿಕ್ಷಕರಾಗಿ ಮತ್ತು ಕ್ರಮೇಣವಾಗಿ ಅದರ ಪ್ರಧಾನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ 1998ರ ವರ್ಷದಲ್ಲಿ ತಮ್ಮ ನಿವೃತ್ತಿಯ ನಂತರದಲ್ಲಿ ತಮ್ಮದೇ ಆದ ಕಲಾಶ್ರಮನೃತ್ಯ ಕಲಾಶಾಲೆಯನ್ನು ಹುಟ್ಟುಹಾಕಿದರು.

ಬಿರ್ಜು ಮಹಾರಾಜ್ ಅವರು ಸತ್ಯಜಿತ್ ರೇ ಅವರ ಶತರಂಜ್ ಖಿಲಾರಿ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವುದರ ಜೊತೆಗೆ ಗಾಯನವನ್ನೂ ನೀಡಿದರು.  ದೇವದಾಸ್ ಚಿತ್ರದ ಪ್ರಸಿದ್ಧ ಗೀತೆಯಾದ ಕಾಹೆ ಛೇದ್ ಮೋಹೆಗೀತೆಯ ನೃತ್ಯವನ್ನು ಸಹಾ ಬಿರ್ಜು ಮಹಾರಾಜ್ ಅವರು ನಿರ್ದೇಶಿಸಿದರು.   ದಿಲ್ ತೋ ಪಾಗಲ್ ಹೈ, ಗದರ್ ಏಕ್ ಪ್ರೇಮ್ ಕಥಾ ಚಿತ್ರಗಳಿಂದ ಇತ್ತೀಚಿನ  'ವಿಶ್ವರೂಪಂ'ವರೆಗೆ ಚಲನಚಿತ್ರ ಶಾಸ್ತ್ರೀಯ ನೃತ್ಯಗಳನ್ನು ಬಿರ್ಜು ಮಹಾರಾಜರು ಸಂಯೋಜಿಸಿದ್ದಾರೆ.


ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಾಳಿದಾಸ್ ಸಂಮಾನ್, ಗಾಂಧೀ ಶಾಂತಿ ಪುರಸ್ಕಾರ, ಸೋವಿಯತ್ ಲ್ಯಾಂಡ್ ಪ್ರಶಸ್ತಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಖೈರಾಗರ್ ವಿಶ್ವವಿದ್ಯಾಲಯಗಳ  ಡಾಕ್ಟರೇಟ್, ಲತಾ ಮಂಗೇಶ್ಕರ್ ಪುರಸ್ಕಾರ ಮುಂತಾದ ಅನೇಕ ಮಹತ್ವದ ಗೌರವಗಳು ಬಿರ್ಜು ಮಹಾರಾಜ್ ಅವರಿಗೆ ಸಂದಿವೆ.  ಈ ಮಹಾನ್ ಕಲಾವಿದರಿಗೆ ಅವರ ಜನ್ಮದಿನ ಸಂದರ್ಭದಲ್ಲಿ ಹಾರ್ದಿಕ ಶುಭ ಹಾರೈಕೆಗಳು ಮತ್ತು ಗೌರವಗಳು.

Tag: Birju Maharaj

ಕಾಮೆಂಟ್‌ಗಳಿಲ್ಲ: