ಶನಿವಾರ, ಆಗಸ್ಟ್ 31, 2013

ನಾಟಕ ಶಿರೋಮಣಿ ಎ. ವಿ. ವರದಾಚಾರ್

ನಾಟಕ ಶಿರೋಮಣಿ ಎ. ವಿ. ವರದಾಚಾರ್

ಕನ್ನಡ ರಂಗಭೂಮಿಯ ವಿಷಯದಲ್ಲಿ ಆಸ್ಥೆ ತಳೆದವರಿಗೆ ನಾಟಕದ ವರದಾಚಾರ್ಯರ ಹೆಸರು ತುಂಬಾ ಪರಿಚಿತ.  ‘ನಾಟಕ ವರದಾಚಾರ್ಯರ ಪೂರ್ಣ ಹೆಸರು ಅನಮನಪಲ್ಲಿ ವೆಂಕಟ ವರದಾಚಾರ್. ಹುಟ್ಟಿದ್ದು ಚಿತ್ರದುರ್ಗದಲ್ಲಿ 1869ನೇ ವರ್ಷದ ಫೆಬ್ರವರಿ 2 ದಿನಾಂಕದಂದು. ತಂದೆ, ರಂಗಸ್ವಾಮಿ ಅಯ್ಯಂಗಾರರು ರೆವಿನ್ಯೂ ಶಿರಸ್ತೇದಾರರು. ಶಾಸ್ತ್ರೀಯಸಂಗೀತ ಎಂದರೆ ಅವರಿಗೆ ತುಂಬ ಆಸಕ್ತಿ. ಅದರಿಂದ ತಮ್ಮ ಮಗನಿಗೆ ಬಾಲ್ಯದಿಂದಲೇ ವಿದ್ವಾನ್ ವೆಂಕಟೇಶ ಶಾಸ್ತ್ರಿಗಳಲ್ಲಿ ಸಂಗೀತದ ಶಿಕ್ಷಣ ಕೊಡಿಸಿದರು. ಬಾಲಕನ ಸೊಂಪು ದೇಹಕ್ಕೆ ತಕ್ಕ ಸುಂದರ ಮುಖ; ಚುರುಕು ಬುದ್ಧಿ. ಸಂಗೀತ ಕಲಿಯುತ್ತಲೇ ಶಾಲೆಗಳಲ್ಲಿಯೂ ಮುಂದಾಗಿ, ಹದಿನೈದು ವರ್ಷ ವಯಸ್ಸಿನ ಒಳಗಾಗಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಮೊದಲವರ್ಗದ ಯಶಸ್ಸು ಪಡೆದ. ಅನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ ಎಫ್.ಎ. ತರಗತಿಯಲ್ಲಿ ಅಭ್ಯಾಸ ನಡೆಸಿದ. ಆ ಸಮಯದಲ್ಲಿ ಎರಗಿದ ಅಘಾತವೆಂದರೆ ತಾಯಿಯ ಮರಣ. ಅದರಿಂದಾಗಿ ಬಾಲಕನ ಬಾಳಿನಲ್ಲಿ ಬಿರುಗಾಳಿ ಬೀಸಿ ಬಡಿದಂತಾಗಿ, ಉತ್ಸಾಹ ಬತ್ತಿ, ಶಾಲೆಗೆ ಶರಣು ಹೊಡೆದು ಸಂಗೀತ ಕಛೇರಿ, ನಾಟಕ ಎಂದು ಕಾಲ ಕಳೆಯತೊಡಗಿದ. ಹಿಂದಿನ ವರ್ಷವೇ ಮದುವೆಯಾಗಿದ್ದ ತಂಗಿಯ ಮನೆಯಲ್ಲಿ ಬಿಡಾರ ಹೂಡಿದ್ದುದರಿಂದ ಊಟ, ನೆರಳುಗಳಿಗೆ ಕೊರತೆ ಇಲ್ಲದಿದ್ದರೂ ಜೀವನದ ನೆಲೆ ತಪ್ಪಿ ಮುಂದಿನ ಗುರಿ ಕಾಣದಾಗಿತ್ತು.

ವರದಾಚಾರ್ಯರು ಕಾಲ ಕಳೆಯುವ ಸಲುವಾಗಿ ನಾಟಕಗಳನ್ನು ನೋಡಿ, ಸಂಗೀತ ಕಛೇರಿಗಳನ್ನು ಕೇಳತೊಡಗಿದಾಗ, ತಮಗೇ ಅರಿವಿಲ್ಲದೆಯೆ ಅನುಕರಣ ಕಲೆ ಮೈ ಹತ್ತಿಕೊಂಡಿತು. ಕಂಡಕಂಡ ಕಂಪೆನಿ ನಾಟಕಗಳಲ್ಲಿ ತಾವೇ ಮುಂದಾಗಿ ಹೋಗಿ ಬೇಡಿ ಮಾಡಿದ ಪಾತ್ರಗಳಿಗಾಗಿ ಪುಡಿಗಾಸು ಮಾತ್ರವಲ್ಲದೆ,  ಇವರ ಪಾತ್ರನಿರ್ವಹಣೆಯನ್ನು ನೋಡಿದ ಪ್ರೇಕ್ಷಕರು ಸಾಮಾನ್ಯ ಪಾತ್ರಗಳಿಗೆ ಕೂಡ ಕಳೆಯನ್ನೇರಿಸಿದ ಕಲಾವಂತಿಕೆಗೆ ತಲೆ ದೂಗಿ, ಚಪ್ಪಾಳೆಯನ್ನಿಕ್ಕಿ ಹುರಿದುಂಬಿಸಿದರು. ವರದಾಚಾರ್ಯರು ಆಗ ಬೆಂಗಳೂರಿನಲ್ಲಿ ಪ್ರಸಿದ್ಧವಾಗಿದ್ದ ಗೊಲ್ಲರ ಪೇಟೆ ನಾಟಕ ಕಂಪೆನಿಯಿಂದ ಮೊದಲುಗೊಂಡು ಕರೆದ ಕಡೆ ಓಗೊಟ್ಟು ಪಾತ್ರಗಳನ್ನು ಅಭ್ಯಾಸ ಮಾಡಿ, ಹಾಡುಗಳಿಗೆ ತಾವೇ ಮಟ್ಟು ಕೂಡಿಸಿ, ಪಾತ್ರಕ್ಕೆ ತಮ್ಮದೇ ವಿಶಿಷ್ಟರೀತಿಯ ಅಭಿನಯ ಮೆರಗು ಕೊಟ್ಟು ಪ್ರಸಿದ್ಧಿಗೆ ಬಂದರು.

ಆಚಾರ್ಯರನ್ನು ಪ್ರಸಿದ್ಧ ನಟರನ್ನಾಗಿ ಮಾಡಿದ ಕೀರ್ತಿ ಗೌರೀ ನರಸಿಂಹಯ್ಯನವರದು. ರಂಗ ಸಂಗೀತದಲ್ಲಿ, ಪಾತ್ರಾಭಿನಯದಲ್ಲಿ ಗೌರೀ ನರಸಿಂಹಯ್ಯನವರ ನಿರ್ದೇಶನದಂತೆ ಆಚಾರ್ಯರು ಅಸಮಾನ್ಯ ಸಾಧನೆ ಮಾಡಿದನಂತರ, ಮೈಸೂರಿನಲ್ಲಿ  ಸತ್ಯ ಸಂಧೋಪಾಖ್ಯಾನ’, ‘ರತ್ನಾವಳಿಮುಂತಾದ ನಾಟಕಗಳು ಅಪಾರ ಜನಪ್ರಿಯತೆ ಗಳಿಸಿದವು.  ಈ ಮಧ್ಯೆ ಆಚಾರ್ಯರ ಮಗಳು ಮತ್ತು ಪತ್ನಿ ನಿಧನರಾದರು. ಯಶಸ್ಸಿನ ಆಕಾಶದಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದ ಆಚಾರ್ಯರಿಗೆ, ಪ್ರಪಾತಕ್ಕೆ ಕಡೆದು ಉರುಳಿದ ಅನುಭವವಾಯಿತು. ಮನಸ್ಸಿನ ತುಂಬ ಕತ್ತಲೆ ತುಂಬಿ, ಜೀವನ ದುರ್ಭರವಾಯಿತು. ನನಗಿನ್ನು ನಾಟಕರಂಗ ಬೇಡಎಂದು ಮಂಡಳಿಯನ್ನು ಬಿಟ್ಟು ಬೆಂಗಳೂರಿನಲ್ಲಿಯೇ ನಿಂತುಬಿಟ್ಟರು. ಜೀವನ ನಿರ್ವಹಣಕ್ಕಾಗಿ ಬ್ರಿಟಿಷ್ ರೆಸಿಡೆಂಟರ ಕಚೇರಿಯಲ್ಲಿ ಕಾರಕೂನರಾಗಿ ಕೆಲಸಕ್ಕೆ ಸೇರಿದರು. ಕಾಲ ಉರುಳಿತು, ತಳಮಳಿಸುತ್ತಿದ್ದ ಜೀವಕ್ಕೆ ತಂಪು ಕಾಣಲಿಲ್ಲ. ಪಿಡುಗು ಅಡಗಿ ವರ್ಷವಾಗುತ್ತ ಬಂತು. ವರದಾ ಚಾರ್ಯರು ಯಾಂತ್ರಿಕವಾಗಿ ಉದ್ಯೋಗದಲ್ಲಿ ತೊಡಗಿದ್ದರು. ಸ್ನೇಹಿತರೂ ಅಭಿಮಾನಿಗಳೂ ಅವರನ್ನು ಮತ್ತೆ ರಂಗಭೂಮಿಗೆ ಎಳೆತರಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಬಂಧುಗಳು ದುಂಬಾಲುಬಿದ್ದರೂ ಅವರು ಮತ್ತೆ ಮದುವೆ ಮಾಡಿಕೊಳ್ಳಲಿಲ್ಲ. ಮೈಸೂರು ಬೇಡ, ನಿಮ್ಮ ಸಲುವಾಗಿ ಬೆಂಗಳೂರಿನಲ್ಲಿಯೇ ನಾಟಕ ಮಂಡಳಿ ಕಟ್ಟೋಣಎಂದು ಆಚಾರ್ಯರ ಅಭಿಮಾನಿಗಳು 1900ರಲ್ಲಿ ಬೆಂಗಳೂರು ಯೂನಿಯನ್ಎಂಬ ಹೆಸರಿನಿಂದ ನಾಟಕ ಸಭೆಯನ್ನೂ ಸ್ಥಾಪಿಸಿದರು. ಕಡೆಗೊಮ್ಮೆ ವರದಾಚಾರ್ಯರು ರೆಸಿಡೆಂಟರ ಕಚೇರಿಯ ಉದ್ಯೋಗವನ್ನು ಬಿಟ್ಟು ನಾಟಕ ಸಭೆಯ ಕಾರ್ಯನಿರ್ವಹಕ್ಕೆ ನಿಂತರು. ಬಂಡವಾಳಕ್ಕಾಗಿ ಐದು ಸಾವಿರ ರೂಪಾಯಿ ಕೂಡಿತು.

ಮೊದಲ ನಾಟಕ ರತ್ನಾವಳಿ’. ಅದರ ಪ್ರಯೋಗವಾದ ನಂತರ ಕ್ರಮವಾಗಿ ಗುಲೇಬಕಾವಲಿ’, ‘ಮನ್ಮಥ ವಿಜಯ’, ‘ಹರಿಶ್ಚಂದ್ರ’, ‘ಶಾಕುಂತಲ’, ‘ಪ್ರತಾಪಸಿಂಹಎಂಬ ನಾಟಕಗಳು. ಗುಲೇಬಕಾವಲಿನಾಟಕದಲ್ಲಿ ವರದಾಚಾರ್ಯರದೇ ರಾಜಕಿರೀಟಿ ಪಾತ್ರ. ಅವರು ಮಂದಾರವಲ್ಲಿಯ ಉದ್ಯಾನವನಕ್ಕೆ ಮಂದಾರಪುಷ್ಪಕ್ಕಾಗಿ ಪ್ರವೇಶಿಸುವಾಗ ಒಳಗಿನಿಂದಲೇ ಕೇದಾರಗೌಳ ರಾಗದಲ್ಲಿ ಎಸ್. ಜೆ. ನರಸಿಂಹಾಚಾರ್ಯರು ರಚಿಸಿಕೊಟ್ಟಿದ್ದ ಉದ್ಯಾನವನದ ವರ್ಣನೆಯ ಹಾಡನ್ನು ಹಾಡಿಕೊಂಡು ರಂಗಮಂಟಪಕ್ಕೆ ಬರುತ್ತಿದ್ದರು. ಅವರ ಆ ವೇಷಭೂಷಣಗಳನ್ನು ನೋಡಿ, ಪ್ರೇಕ್ಷಕರು ಕರತಾಡನ ಮಾಡುತ್ತ ಆನಂದ ಪರವಶರಾಗುತ್ತಿದ್ದರು. ಶಬ್ದ ನಿಂತ ತಕ್ಷಣ ರಾಜಕಿರೀಟಿಯು, “ಈ ವನವನೆಂತು ಬಣ್ಣಿಪೆಎಂದು ಅನೇಕ ಸಂಗತಿಗಳನ್ನು ಹಾಕಿ, ಪಿಟೀಲ್ ವಾದ್ಯಗಾರರ ಕೈಗಳು ಬಿದ್ದು ಹೋಗುತ್ತದೆಯೋ ಏನೋ ಎಂಬಂತೆ ಸಂಗತಿಗಳನ್ನು ಸೇರಿಸಿ ಹಾಡಿದಾಗ ಪ್ರೇಕ್ಷಕರು ಆನಂದದಿಂದ ಮೈಮರೆಯುತ್ತಿದ್ದರು.  ಮುಂದೆ ಮೈಸೂರಿನಲ್ಲಿ  ಮೈಸೂರು ರತ್ನಾವಳೀ ನಾಟಕ ಸಭಾಎಂಬ ಹೊಸ ಮಂಡಳಿಯನ್ನು 1902ರಲ್ಲಿ ಪ್ರಾರಂಭಿಸಲಾಯಿತು.

ಮುಂದಿನ ಎರಡು ದಶಕಗಳ ಕಾಲ, ಆಗಾಗ ಸಣ್ಣಪುಟ್ಟ ಎಡರುಗಳು ಅಡ್ಡ ಬಂದರೂ ಒಟ್ಟಾರೆ ವರದಾಚಾರ್ಯರ ದಿಗ್ವಿಜಯದ ಕಾಲವೆನಿಸಿ, ಕನ್ನಡ ವೃತ್ತಿರಂಗದ ಇತಿಹಾಸದಲ್ಲಿ ಅದು ಸ್ವರ್ಣಯುಗವೇ ಆಯಿತು. ಅವರ ರತ್ನಾವಳೀ ಕಂಪೆನಿ ಮನೆ ಮಾತಾಯಿತು. ವರದಾಚಾರ್ಯರ ಸೋದರ ಕೃಷ್ಣಸ್ವಾಮಿ ಅಯ್ಯಂಗಾರರು (ಶಾಮಣ್ಣ) ರೈಲ್ವೆ ಗಾರ್ಡ್ ಉದ್ಯೋಗದಲ್ಲಿದ್ದವರು ಕೆಲಸಬಿಟ್ಟು ಅಣ್ಣನ ನಾಟಕ ಕಂಪೆನಿಯನ್ನು ಸೇರಿ ಆಡಳಿತದ ಮೇಲ್ವಿಚಾರಣೆ ನೋಡಿಕೊಂಡರು. ಅವರೂ ಒಳ್ಳೆಯ ನಟರು. ಹಲವರು ಪರಿಣತ ಕಲಾವಿದರು ಮಂಡಳಿಯನ್ನು ಸೇರಿದರು. ಕ್ರಮವಾಗಿ ಶಾಕುಂತಲ, ರತ್ನಾವಳೀ, ಮನ್ಮಥವಿಜಯ, ಹರಿಶ್ಚಂದ್ರ, ಸತ್ಯವರ್ಮ, ಮಂದಾರವಲ್ಲೀ ಪರಿಣಯ, ಮಾಳವಿಕಾಗ್ನಿಮಿತ್ರ, ನಿರುಪಮಾ, ರಾಮವರ್ಮ-ಲೀಲಾವತಿ, ಕಾಮಪಾಲ, ಪ್ರತಾಪ ಸಿಂಹ, ಸದಾರಮೆ, ಮಕರಂಧಿಕಾಪರಿಣಯ ಇವುಗಳಲ್ಲದೆ, ಸ್ವತಃ ವರದಾಚಾರ್ಯರೇ ರಚಿಸಿದ ಇಂದಿರಾನಂದ, ವಿಮಲಾ ವಿಜಯ ಮೊದಲಾದ ನಾಟಕಗಳು ರಂಗದ ಮೇಲೆ ಬಂದವು. ಮೊದಲಿಗೆ ಶನಿವಾರದಂದು ವಾರಕ್ಕೆ ಒಂದು ನಾಟಕ ಮಾತ್ರ ಪ್ರದರ್ಶನವಾಗುತ್ತಿದ್ದುದು, ಜನತೆಯ ಒತ್ತಾಯದ ಕಾರಣ, ಬುಧವಾರ, ಭಾನುವಾರಗಳ ರಾತ್ರಿಯಲ್ಲಿಯೂ ನಾಟಕಗಳು ಪ್ರಯೋಗಗೊಂಡವು. ನಿಂತ ನೀರಾಗದೆ ಮಂಡಳಿ ಹೊಸ ನಾಟಕಗಳನ್ನು ರೂಢಿಸಿಕೊಂಡು, ದೃಶ್ಯ ಸಂಯೋಜನೆ, ರಂಗ ಸಂಗೀತ, ವೇಷಭೂಷಣಗಳ ನಿಟ್ಟಿನಿಂದ ಹೊಸ ಹಾದಿಯನ್ನೇ ನಿರ್ಮಿಸಿ ಕನ್ನಡನಾಡಿನ ಮುಖ್ಯ ಪಟ್ಟಣಗಳಲ್ಲಿ ಬೀಡುಬಿಟ್ಟು, ವೃತ್ತಿನಾಟಕದ ವಿಷಯದಲ್ಲಿ ಜನತೆಯಿಂದ ಅಪಾರ ಅನುರಾಗವನ್ನು ಸಂಪಾದಿಸಿತು.  ಸಂಸ್ಥೆಯಲ್ಲಿದ್ದ ನಟವರ್ಗದವರು ಮತ್ತು ಸಿಬ್ಬಂದಿಯವರನ್ನು ತಮ್ಮ ಬಂಧುಗಳು ಎಂದೇ ಆಚಾರ್ಯರು ಕಾಣುತ್ತಿದ್ದರು. ಅವರಿಗೆ ತಾವು ಯಜಮಾನ ಎಂಬ ಗರ್ವವಿರಲಿಲ್ಲ. ಎಲ್ಲರೊಡನೆ ಸ್ನೇಹದಿಂದ ಬೆರೆಯುತ್ತಿದ್ದರು. ಅನೇಕರ ಮುಂಜಿ, ಮದುವೆಗಳಿಗೆ ಸಹಾಯಮಾಡಿ ಕಲೆಯ ಅಭಿವೃದ್ದಿಗಾಗಿಯೇ ಸದಾ ಚಿಂತಿಸುತ್ತ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟರು.
ಅಪಾರವಾದ ಕೀರ್ತಿಯನ್ನು ಗಳಿಸಿದ ವರದಾಚಾರ್ಯರಿಗೆ 1913ರಲ್ಲಿ, ನಗರದ ಪ್ರಮುಖರು ಒಟ್ಟಾಗಿ ಮಹತ್ ಸತ್ಕಾರಮಾಡಿ ಗಿಫ್ಟೆಡ್ ಆಕ್ಟರ್ಎಂಬ ಪ್ರಶಸ್ತಿಯನ್ನು ರತ್ನಖಚಿತವಾದ ತೋಡದೊಂದಿಗೆ ಅರ್ಪಿಸಿದರು. ಉಡುಪಿಯಲ್ಲಿದ್ದಾಗ ಶ್ರೀಕೃಷ್ಣ ದೇಗುಲದಲ್ಲಿ, ಅಷ್ಟ ಮಠಾಧೀಶರೆಲ್ಲರ ಸಮ್ಮುಖದಲ್ಲಿ ಪ್ರಹ್ಲಾದ ಚರಿತ್ರೆಪ್ರಯೋಗಗೊಂಡಾಗ ಯತಿಗಳು ಅತ್ಯಾನಂದಪಟ್ಟು ಆಚಾರ್ಯರಿಗೆ ನಾಟ್ಯಕಲಾ ಚತುರಎಂಬ ಪ್ರಶಸ್ತಿಯನ್ನು ಬಂಗಾರದ ತೋಡ ಖಿಲ್ಲತ್ತುಗಳೊಂದಿಗೆ ಕೊಟ್ಟು ಸನ್ಮಾನಿಸಿದರು. ತಿರುಚನಾಪಳ್ಳಿಯ ಪ್ರಮುಖರು ಆಚಾರ್ಯರಿಗೆ ನಾಟಕ ಶಿರೋಮಣಿಎಂಬ ಮಹಾಪ್ರಶಸ್ತಿಯನ್ನು ರತ್ನಖಚಿತವಾದ ತೋಡಾ ಖಿಲತ್ತುಗಳೊಂದಿಗೆ ಅರ್ಪಿಸಿದರು. ಆಚಾರ್ಯರು ತಮಿಳುನಾಡಿನ ಹಲವು ನಗರಗಳಲ್ಲಿ ನಾಟಕಗಳನ್ನು ಆಡಿ, ಜನರ ಮನಸ್ಸನ್ನು ಸೂರೆಗೊಂಡರು. ಅನೇಕ ಕಡೆ ಜನ ಅವರನ್ನು ಸವರನ್‌ಗಳ ಸರಗಳಿಂದ ಅಲಂಕರಿಸಿದರು.

ಹಲವಾರು ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದರೂ ಎಂಥಹ  ಪರಿಸ್ಥಿತಿಯಲ್ಲಿಯೂ ಎಂದಿನಿಂದಲೂ ಹೆಸರಾದ ವರದಾಚಾರ್ಯರ ದಾನಶೀಲತೆ ಬಡವಾಗಲಿಲ್ಲ. ಅವರನ್ನೇ ನಂಬಿ ನಿಂತಿದ್ದ ವಿದ್ಯಾಸಂಸ್ಥೆಗಳಿಗೂ ವಿದ್ಯಾರ್ಥಿ ನಿಲಯಗಳಿಗೂ ಅನಾಥಾಲಯಗಳಿಗೂ ವಾಚನಾಲಯಗಳಿಗೂ ಧರ್ಮಛತ್ರ-ದೇಗುಲಗಳಿಗೂ ಬಿಡಿಬಿಡಿಯಾಗಿ ಸುತ್ತವರಿದ ಎಲ್ಲ ಜಾತಿಯ ಬಡ ವಿದ್ಯಾರ್ಥಿಗಳಿಗೂ ಚೌಲ, ಮುಂಜಿ, ಮದುವೆ, ಯಾತ್ರೆ ತೀರ್ಥಗಳಿಗೆಂದು ಕೈನೀಡಿ ಸಾಲುಗಟ್ಟಿ ಬಂದ ಬಡವರಿಗೂ ಸಾಲ ಮಾಡಿಯಾದರೂ ಒಂದು ಕೇಳಿದರೆ ಹತ್ತು ಕೊಟ್ಟರೇ  ವಿನಾ ಎಂದೆಂದಿಗೂ ತಮ್ಮ ಆರ್ಥಿಕ ಅಡಚಣೆ ಕುರಿತು ಯಾರಲ್ಲಿಯೂ ಚಕಾರ ಎತ್ತಲಿಲ್ಲ. ಬಡವರ ಬಂಧು ಅವರು.

1925ರಲ್ಲಿ ಬೆಂಗಳೂರಿಗೆ ಬಂದರು. ಯಾವಾಗಲೂ ವಾಸಕ್ಕೆ ದೊಡ್ಡ ಬಂಗಲೆಯನ್ನೇ ಗೊತ್ತುಮಾಡುತ್ತಿದ್ದವರು ಚಿಕ್ಕ ಮನೆಯನ್ನು ಗೊತ್ತುಮಾಡಬೇಕಾಯಿತು. ಹಲವಾರು ನಟರು ನಾಟಕಮಂದಿರದಲ್ಲೆ ಮಲಗುತ್ತಿದ್ದರು. ಅನಾರೋಗ್ಯದಿಂದ ಆಚಾರ್ಯರು ಒಂದೊಂದು ದಿನ ಮಾತ್ರ ಪಾತ್ರ ವಹಿಸುತ್ತಿದ್ದರು. 1926ರ ಜನವರಿಯಲ್ಲಿ ಒಂದು ದಿನ ಗುಲೇಬಕಾವಲಿಯಲ್ಲಿ ಅವರು ಅಭಿನಯಿಸುತ್ತಾರೆ ಎಂದು ಪ್ರಕಟಿಸಿ ಆಗಿಹೋಗಿತ್ತು. ಅಂದು ಅವರಿಗೆ ತೀರ ಅನಾರೋಗ್ಯ. ಹೊಟ್ಟೆ ಉಬ್ಬರಿಸಿಕೊಂಡಿತ್ತು, ಏಳುವುದು ಕೂಡುವುದು ಕಷ್ಟ. ಆದರೂ ಕಷ್ಟದಿಂದ ಅಭಿನಯಿಸಿ, ಹಾಡಿ ಜನರನ್ನು ತೃಪ್ತಿಗೊಳಿಸಿದರು. ನಾಟಕ ಮುಗಿಯುವ ಹೊತ್ತಿಗೆ ಅವರು ಮಾತಾಡುವ ಸ್ಥಿತಿಯಲ್ಲೆ ಇರಲಿಲ್ಲ. ಅದೇ ಅವರ ಕಡೆಯ ಅಭಿನಯ ಆಯಿತು. 1926ರ ಏಪ್ರಿಲ್ 4ನೆಯ ದಿನದಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆಚಾರ್ಯರು ತಮ್ಮ 57ನೆಯ ವಯಸ್ಸಿನಲ್ಲಿ ನಿಧನರಾದರು.

ಕಾಲು ಶತಮಾನದ ತಮ್ಮ ರಂಗಜೀವನದಲ್ಲಿ ಆಚಾರ್ಯರು ಕನ್ನಡ ವೃತ್ತಿರಂಗದ ನಡೆಯನ್ನು ಏರ್ಪಡಿಸಿದರು. ಅದನ್ನು ಕತ್ತಲೆಯಿಂದ ಬೆಳಕಿನ ಹಾದಿಗೆ ತಂದರು. ರಂಗದಲ್ಲಿ ಅವರು ಸಾಧಿಸಿತಂದ ಸುಧಾರಣೆಗಳು ಈ ಮಾತಿಗೆ ಸಾಕ್ಷಿ ನುಡಿಸಿದವು. ವರದಾಚಾರ್ಯರ ಕಾಲವೆಂದರೆ ಕನ್ನಡ ವೃತ್ತಿ ರಂಗದ ಸ್ವರ್ಣಯುಗವೆನಿಸಿತು; ಆಚಾರ್ಯರು ಆ ಯುಗವನ್ನಾಳಿದ ಸ್ವರ್ಣಮೂರ್ತಿಯೆನಿಸಿಕೊಂಡರು.

(ಆಧಾರ:  ರಾಷ್ಟ್ರೋತ್ಥಾನ ಪ್ರಕಟಿಸಿದ ಡಾ. ಎಚ್. ಕೆ. ರಂಗನಾಥ್ ಅವರ ಬರಹವನ್ನು ಇಲ್ಲಿ ಸಂಕ್ಷಿಪ್ತವಾಗಿ ಬಳಸಿಕೊಂಡಿದ್ದೇನೆ.  ಗಮನಕ್ಕೆ ಬಂದದ್ದು ಕಣಜದ  ಕೃಪೆಯಿಂದ)

ಚಿತ್ರ: ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ.

Tag: A. V. Varadachar

ಕಾಮೆಂಟ್‌ಗಳಿಲ್ಲ: