ಶುಕ್ರವಾರ, ಆಗಸ್ಟ್ 30, 2013

ಜಯಪ್ರದ

ಜಯಪ್ರದ

ಭಾರತೀಯ ಚಿತ್ರರಂಗದಲ್ಲಿ ವಿವಿಧ ಭಾಷಾ ಚಿತ್ರಗಳಲ್ಲಿ ಯಶಸ್ಸು ಗಳಿಸಿ, ಪ್ರಸಿದ್ಧರಾದ ಸೌಂಧರ್ಯವತಿ ಜಯಪ್ರದ ಅವರು ಏಪ್ರಿಲ್ 3, 1958ರಲ್ಲಿ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದರು.  ಅಂದಿನ ವರ ಹೆಸರು ಲಲಿತಾ ರಾಣಿ. 

ಶಾಲೆಯಲ್ಲಿ ಓದುತ್ತಿರುವ ದಿನಗಳಲ್ಲಿ ಸಿನಿಮಾಮಂದಿಯ ಕಣ್ಣಿಗೆ ಬಿದ್ದ ಹುಡುಗಿ ಹತ್ತು ರೂಪಾಯಿ ಸಂಭಾವನೆ ಸ್ವೀಕರಿಸಿ ಭೂಮಿಕೋಸಂಎಂಬ ತೆಲುಗು ಚಿತ್ರದಲ್ಲಿ ನಟಿಸಿದಳು.  ಮುಂದೆ ಈ ನಟನೆ ಆಕೆಗೆ ಅತ್ಯಂತ ಮೌಲ್ಯಯುತ ಪಾತ್ರಗಳು ಮತ್ತು ಶ್ರೀಮಂತಿಕೆಯನ್ನು ಪ್ರಸಾದಿಸಿದವು.  ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಬೆಂಗಾಳಿ, ಮರಾಠಿ ಭಾಷೆಗಳಲ್ಲಿ ನಟಿಸಿದ ಈಕೆ ನಟನೆಗಾಗಿನ ಪ್ರಶಂಸೆ ಮತ್ತು ಜನಪ್ರಿಯತೆಗಳನ್ನು ಹೋದೆಡೆಗಳಲ್ಲೆಲ್ಲಾ ಗಳಿಸಿದರು.  ಉತ್ತಮ ಸಂಗೀತ ನೃತ್ಯ ಮೌಲ್ಯಗಳನ್ನು ಚಲನಚಿತ್ರದಲ್ಲಿ ಬಿಂಬಿಸಿದ ಕೆ. ವಿಶ್ವನಾಥ್ ಅವರ ಪ್ರಸಿದ್ಧ ಚಿತ್ರಗಳಾದ ತೆಲುಗಿನ ಸಿರಿ ಸಿರಿ ಮುವ್ವ’ , ಇದೇ ಚಿತ್ರದ  ಹಿಂದಿಯ ಅವತರಿಣಿಕೆ  ಸರ್ಗಂ’, ‘ಸಾಗರ ಸಂಗಮಂ’, ‘ಸೀತಾ ಕಲ್ಯಾಣಂ’ ;  ಕೆ. ಬಾಲಚಂದರ್ ಅವರ ಅಂತುಲೆನಿ ಕಥಾ’, ‘ನಿನೈತ್ತಾಲೆ ಇನಿಕ್ಕುಂ’  ಮುಂತಾದ ಪಸಿದ್ಧ ಚಿತ್ರಗಳಲ್ಲಿ ನಟಿಸಿದ ಜಯಪ್ರದಾ ಅವರಿಗೆ ಮುಂದೆ ಅವಕಾಶಗಳು ಎಲ್ಲಾ ಭಾಷೆಗಳಲ್ಲೂ ಹರಿದು ಬರಲಾರಂಭಿಸಿದವು.  ಹಿಂದಿಯಲ್ಲಿ ಹಲವಾರು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ ಜಯಪ್ರದಾ ಅವರ ಚಿತ್ರಗಳಲ್ಲಿ  ಅಮಿತಾಬ್ ಬಚ್ಚನ್ ಅವರೊಂದಿಗೆ ನಟಿಸಿದ ಪ್ರಕಾಶ್ ಮೆಹ್ರಾ ಅವರ ಶರಾಭಿಚಿತ್ರ ಪ್ರಖ್ಯಾತವಾದುದು.  ಅಮಿತಾಬ್ ಬಚ್ಚನ್, ಜಿತೇಂದ್ರ ಅವರ ಜೊತೆಯಲ್ಲಿ ಹಲವಾರು ಚಿತ್ರಗಳಲ್ಲಿ ಅವರು ಅಭಿನಯಿಸಿರುವಂತೆಯೇ ಆ ಕಾಲದ ತಮ್ಮ ಸಮಕಾಲೀನ ಪ್ರಸಿದ್ಧ ನಟಿ ಶ್ರೀದೇವಿ ಅವರೊಂದಿಗೆ ಸಹಾ ಅವರು ಬಹಳಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. 

ಭಾರತದ ಚಿತ್ರರಂಗದ ಪ್ರಖ್ಯಾತರಾದ ಸತ್ಯಜಿತ್ ರೇ ಅವರಿಂದ ಅತ್ಯಂತ ಸುಂದರಿ ಎಂದು ಹೊಗಳಿಸಿಕೊಂಡ ಜಯಪ್ರದಾ ಕೆಲವೊಂದು ಬಂಗಾಳಿ ಚಿತ್ರಗಳಲ್ಲಿ ನಟಿಸಿದರಾದರೂ, ಸತ್ಯಜಿತ್ ರೇ ಅವರ ಚಿತ್ರಗಳಲ್ಲಿ ನಟಿಸಬೇಕೆಂದಿದ್ದ ಅವರ ಕನಸು ನನಸಾಗಲಿಲ್ಲ.  ಮಲಯಾಳಂ, ಮರಾಠಿ ಚಿತ್ರಗಳಲ್ಲಿ ಕೂಡಾ ಅವರು ನಟಿಸಿದ್ದಾರೆ.

ಜಯಪ್ರದಾ ಅವರು ತಮ್ಮ ಜನಪ್ರಿಯ ದಿನಗಳಲ್ಲಿ ಕನ್ನಡದ ಪ್ರಸಿದ್ಧ ಚಿತ್ರಗಳಾದ ಸನಾದಿ ಅಪ್ಪಣ್ಣ’, ‘ಕವಿರತ್ನ ಕಾಳಿದಾಸ’, ‘ಹುಲಿಯ ಹಾಲಿನ ಮೇವು’, ‘ಹಬ್ಬ, ‘ಈ ಬಂಧನ’ ಅಲ್ಲದೆ ಇನ್ನೂ ಕೆಲವು ಚಿತ್ರಗಳಲ್ಲಿ ನಟಿಸಿದ್ದರು.  ಅವರು ಅಭಿನಯಿಸಿದ ಕರೆದರೂ ಕೇಳದೆ’, ‘ರಾಗ ಅನುರಾಗ’,  ‘ಸದಾ ಕಣ್ಣಲಿ’, ‘ಓ ಪ್ರಿಯತಮಾ ಕರುಣೆಯಾ ತೋರೆಯಾ’,  ‘ಜೇನಿನ ಗೂಡು ನಾವೆಲ್ಲಾ’, ‘ಅಯ್ಯೊ ಸುಮ್ಮನಿರ್ರಿ ಸುಮ್ಮನಿರ್ರಿ ನಾವು ಯಾರ್ಗೂ ಕಮ್ಮಿ ಇಲ್ಲಮುಂತಾದ ಹಾಡುಗಳು ಇಂದಿಗೂ ಜನಪ್ರಿಯವೆನಿಸಿವೆ.  ಕೇವಲ ನಾಟ್ಯ ಪಾತ್ರಗಳಲ್ಲಿ ಮಾತ್ರವಲ್ಲದೆ ಭಾವುಕತೆ ತುಂಬಿದ ಪಾತ್ರಗಳಲ್ಲಿ ಕೂಡಾ ಅವರ ಅಭಿನಯ ಮನಸೆಳೆಯುವಂತಿತ್ತು.  ಅವರ ಅಭಿನಯಕ್ಕೆ ಶೋಭೆಯಿಟ್ಟಂತೆ ಇದ್ದುದು ಅವರ ಸೌಂಧರ್ಯ.

ಎಲ್ಲವೂ ದೊರಕುವ ಸಿನಿಮಾಮಂದಿಗೆ ಸಂಸಾರ ಜೀವನವೊಂದು ಮಾತ್ರ ವಿಚಿತ್ರವೆಂಬಂತೆ ಚಂಚಲವಾದದ್ದು.  ಇಂಥಹ ಸೌಂಧರ್ಯವತಿ ಕೂಡಾ ಸಿನಿಮಾ ನಿರ್ಮಾಪಕನೊಬ್ಬನ ಎರಡನೇ ಸಂಸಾರವಾದರು.  ಅತೀ ಹೆಚ್ಚು ನಿದ್ರೆಮಾತ್ರೆ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದುದು ಬೆಂಗಳೂರಿಗರಿಗೆ ತಿಳಿದ ವಿಷಯ.  ಸಿನಿಮಾ ಮಂದಿಯ ಮತ್ತೊಂದು ಇರಾದೆ ಎಂದರೆ ರಾಜಕೀಯ.  ಒಮ್ಮೆ ಪ್ರವಾಹ ಪೀಡಿತ ಪ್ರದೇಶ ನೋಡಲು ಹೋಗಿದ್ದ ಇವರು ಗಳ ಗಳ ಅತ್ತರು.  ಜನರ ತಾಪತ್ರಯ ನೋಡಿಯಲ್ಲ.  ಆ ಪ್ರವಾಹ ನೋಡಲಿಕ್ಕೆ ಭಯವಾಗಿ.  ಆದರೂ ಒಂದಿಲ್ಲೊಂದು ರೀತಿಯಿಂದ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂದು ಜಿಗಿಯುತ್ತಾ ಎನ್ ಟಿ ರಾಮರಾವ್ ತೆಲುಗು ದೇಶಂ, ಚಂದ್ರ ಬಾಬು ನಾಯ್ಡು ದೇಶಂ, ಸಮಾಜವಾದಿ ಪಕ್ಷ, ಹಾಗೂ ಇತ್ತೀಚೆಗೆ ಅಜಿತ್ ಸಿಂಗ್ ಪಕ್ಷ  ಹೀಗೆ ಅವರು ರಾಜಕೀಯ ಜೀವನ ಸಾಗಿಸಿದ್ದಾರೆ.     ಏನು ಮಾಡುವುದು ಭಾರತೀಯರಿಗೆ ಎಲ್ಲವನ್ನೂ ತಾಳಿಕೊಂಡು ಅಭ್ಯಾಸವಿದೆ!!!


ಇವೆಲ್ಲದರ ಪರಿದಿಯಾಚೆಗೆ ಜಯಪ್ರದಾ ಒಬ್ಬ ಸೌಂಧರ್ಯಯುತ ಕಲಾವಿದೆಯಾಗಿ ಸಿನಿಮಾರಸಿಕರ ಮನಗೆದ್ದದ್ದು ಮಾತ್ರ ನಿಜ.  ಈ ಕಲಾವಿದೆಗೆ ಬದುಕು ಸಹ್ಯವಾಗಿರಲಿ.  ಅವರು ರಾಜಕೀಯದಲ್ಲಿದ್ದಾರೆ ಎಂಬ ನಿಟ್ಟಿನಿಂದ ಇವರುಗಳಿಂದ ಸಾಮಾನ್ಯರ ಬಾಳೂ ಸಹ್ಯವಾಗಿರಲಿ ಎಂದು ಹೇಳಿದರೆ ತಪ್ಪಿಲ್ಲ ಎಂದುಕೊಳ್ಳುತ್ತೇನೆ.

Tag: Jayaprada

ಕಾಮೆಂಟ್‌ಗಳಿಲ್ಲ: