ಶನಿವಾರ, ಆಗಸ್ಟ್ 31, 2013

ಜಗಜಿತ್ ಸಿಂಗ್

ಜಗಜಿತ್ ಸಿಂಗ್

ಶ್ರೇಷ್ಠ ಗಜಲ್ ಗಾಯಕರಾದ  ದಿವಂಗತ ಜಗಜಿತ್ ಸಿಂಗ್ ಅವರು ಜನಿಸಿದ ದಿನ  ಫೆಬ್ರವರಿ 8.

ಪ್ರೇಮ್ ಗೀತ್ಎಂಬ ಒಂದು ಚಿತ್ರ.  ಆ ಚಿತ್ರದಲ್ಲಿ `ಹೋಟೊಂ ಸೆ ಚೂ ಲೊ ತುಮ್` ಎಂದು ಪ್ರಾರಂಭವಾಗುವ ಒಂದು  ಸುಮಧುರ ಗೀತೆ ವಿಶ್ವವಿಖ್ಯಾತ ಗಜಲ್ ಗಾಯಕ ಜಗಜಿತ್ ಸಿಂಗ್ ಅವರ ಸಿರಿಕಂಠದಿಂದ ಹೊರಹೊಮ್ಮಿ ಬಂತು, ಅದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಪ್ರಸಿದ್ಧ `ಮಾರೊ ಬಿಹಾಗ್` ರಾಗದ ಆಧಾರಿತ ಗೀತೆ. ಸಂಗೀತ ಇಷ್ಟಪಡದೇ ಇರುವವರನ್ನೂ ನಾದ ಲೋಕದಲ್ಲಿ ಕಟ್ಟಿಹಾಕಿತ್ತು. ಮನದ ಭಾವನೆಗಳನ್ನು ಅದುಮಿಡದೆ ಎದೆಯಾಂತರಾಳದಿಂದ ಹಾಡಿ ಕೇಳುಗರನ್ನು ರೋಮಾಂಚನಗೊಳಿಸಿದ್ದೇ ಈ ಗೀತೆ ಬಹಳಷ್ಟು ಜನಪ್ರಿಯವಾಗಲು ಕಾರಣವಾಯಿತು.

"ಈ ತಲೆಮಾರಿನ ಶ್ರೇಷ್ಠ ಗಜಲ್ ಗಾಯಕ ಜಗಜಿತ್ ಸಿಂಗ್. ಯಾವುದೇ ಅನುಕರಣೆಯಿಲ್ಲದೆ ತಮ್ಮದೇ ಶೈಲಿಯಲ್ಲಿ ಗಜಲ್‌ನ ಕಂಪನ್ನು ಕೇಳುಗರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಿದ್ದ ರೀತಿ ಅನನ್ಯ.  ದೇಶ ವಿದೇಶಗಳ ಕೋಟಿ, ಕೋಟಿ ಜನರ ಹೃದಯ ತಟ್ಟಿದ ಮಹಾನ್ ಗಾಯಕರು ಸಿಂಗ್` ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಪಂ. ಜಸ್‌ರಾಜ್ ಪ್ರಶಂಸಿಸಿದ್ದು ಜಗಜಿತ್‌ಸಿಂಗ್ ಅವರ ಗಾನ ಮಾಧುರ್ಯಕ್ಕೆ ಮರುಳಾಗಿಯೇ!

ಸಂಗೀತ ಪರಂಪರೆಯಲ್ಲಿ ಗಜಲ್ ಪ್ರಕಾರದ ಹಾಡುಗಾರಿಕೆಗೆ ವಿನೂತನ ಮತ್ತು ವಿಭಿನ್ನ ಆಯಾಮ ನೀಡಿದವರು ಪದ್ಮಭೂಷಣ ಜಗಜಿತ್ ಸಿಂಗ್. ಹಿಂದಿ, ಪಂಜಾಬಿ, ನೇಪಾಳಿ, ಗುಜರಾತಿ ಮತ್ತು ಬಂಗಾಳಿ... ಪಂಚ ಭಾಷೆಗಳಲ್ಲಿ ಗಜಲ್‌ನ ಸವಿಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರಸ್ತುತಪಡಿಸುತ್ತಿದ್ದುದಲ್ಲದೆ ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡಿದ್ದು ಸಿಂಗ್ ಅವರ ಅದ್ಭುತ ಕಂಠಸಿರಿ. ಹೀಗೆ ಗಜಲ್ ಲೋಕದಲ್ಲಿ ದೊರೆಸ್ಥಾನ ಗಿಟ್ಟಿಸಿಕೊಂಡ ಜಗಜಿತ್ ಸಿಂಗ್ ಈ ಶೈಲಿಯ ಗಾಯನಕ್ಕೆ ಅನ್ವರ್ಥನಾಮವಾಗಿಯೂ ಮೆರೆದರು.

ಗಜಲ್ ಪ್ರಿಯರು ಎಂದಿಗೂ ಇಷ್ಟಪಡುವ  ಜುಕಿ ಜುಕಿ ಸಿ ನಜರ್..`,  `ಯೆ ಕಾಗಜ್ ಕಿ ಕಷ್ತಿ` ಈ ಅರ್ಥಪೂರ್ಣ ಗಜಲ್‌ಗಳನ್ನು ಹಾಡಿ ಗಜಲ್ ಎಂಬ ಸಂಗೀತ ಪ್ರಕಾರವನ್ನು ಜನಪ್ರಿಯಗೊಳಿಸಿದವರು ಜಗಜಿತ್ ಸಿಂಗ್. ಸಂಗೀತ ಸಂಯೋಜನೆ, ನಿರ್ದೇಶನ ಮತ್ತು ಗಾಯನ ಅವರ ಪರಿಪೂರ್ಣ ಸಂಗೀತ ವ್ಯಕ್ತಿತ್ವ`ಕ್ಕೆ ಹಿಡಿದ ಕನ್ನಡಿ..!

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಗಜಲ್ ಒಂದು ವಿಶಿಷ್ಟ ಪ್ರಕಾರ. ಮನಸೆಳೆಯುವ ಗಾನಕಲೆ. ಕನ್ನಡದಲ್ಲಿ ಸುಮಧುರ ಭಾವಗೀತೆ ಇರುವ ಹಾಗೆ ಹಿಂದಿಯಲ್ಲಿ ಗಜಲ್ ಮಾಧುರ್ಯ..!  ತಮ್ಮ ಮನದ ಭಾವನೆಗಳನ್ನು ಮನಮುಟ್ಟುವಂತೆ ನವಿರಾಗಿ ರೂಪಿಸಲು ಗಜಲ್ ಒಂದು ಅತ್ಯುತ್ತಮ ಸಂಗೀತ ಪ್ರಕಾರ. ಹೀಗಾಗಿ ಶಾಸ್ತ್ರೀಯ ಸಂಗೀತ ಪರಂಪರೆಯಲ್ಲಿ ಗಜಲ್‌ಗೆ ವಿಶೇಷ ಸ್ಥಾನ; ಎಲ್ಲಿಲ್ಲದ ಮಹತ್ವ.

ಸಾಮಾನ್ಯವಾಗಿ ಒಂದು ಗಜಲ್ ಬೇರೆ ಬೇರೆ ವಿಷಯಗಳಿಂದ ಕೂಡಿದ ಅರ್ಥಪೂರ್ಣ ಸಾಹಿತ್ಯ ಹೊಂದಿರುತ್ತದೆ. ಇದನ್ನು ಹಾಡುವಾಗ ವಿಶೇಷವಾಗಿ ಭಾಷೆಯ ಪ್ರಭುತ್ವ, ಸಂಗೀತದಲ್ಲಿ ಆಳವಾದ ಜ್ಞಾನ, ಸ್ವರಶುದ್ಧಿ, ಗೀತ ಸಾಹಿತ್ಯದ ಅರ್ಥವನ್ನು ಅನುಭಾವಿಸಿ ಹಾಡುವ ಚಾಕಚಕ್ಯತೆ ಮುಖ್ಯ. ಅಲ್ಲದೆ ಗಜಲ್ ಗಾಯನದಲ್ಲಿ ವಿಸ್ತಾರವಾದ ಆಲಾಪ, ತಾನ್‌ಗಳು ಇರುವುದಿಲ್ಲ. ಆದರೆ ಸಾಹಿತ್ಯ ಮನಸ್ಸಿಗೆ ತಟ್ಟುವಂತಿರುತ್ತದೆ. ಸಂಗೀತ ಹೃದಯ ತುಂಬಿ ಬರುತ್ತದೆ.

ಗಜಲ್‌ನಲ್ಲಿರುವ ಸಂಗೀತ ರಚನೆ ಕೇವಲ ಒಂದೇ ರಾಗದ ಮೇಲೆ ಆಧಾರಿತವಾಗಿರದೆ ಅನೇಕ ರಾಗಗಳನ್ನು ಒಳಗೊಂಡ ಸಮ್ಮಿಶ್ರ ರಾಗದಿಂದ ಕೂಡಿರುತ್ತದೆ. ಒಂದು ಗೀತೆಯ ಚರಣವನ್ನು ಒಂದು ರಾಗದಿಂದ ಹಾಡಲು ಆರಂಭಿಸಿ ಮಧ್ಯೆ ಮಧ್ಯೆ ಬೇರೆ ಬೇರೆ ರಾಗಗಳ ಸ್ವರಗಳನ್ನು ಸೇರಿಸಿ ಹಾಡುತ್ತಾ ಕೊನೆಗೆ ಮೊದಲ ರಾಗದ ಸ್ವರ ಸ್ವಮೂಹವನ್ನೇ ಹಾಡಿ ಮುಗಿಸುವುದು ಗಜಲ್‌ನ ವೈಶಿಷ್ಟ್ಯ.

1970ರ ದಶಕದಲ್ಲಿ ಜಗಜಿತ್ ಸಿಂಗ್ ದಿ ಅನ್‌ಫರ್ಗೆಟಬಲ್ಸ್` ಎಂಬ ಆಲ್ಬಂ ಹೊರತಂದರು. ಅದು ಸಂಗೀತ ಲೋಕದಲ್ಲಿ ಮರೆಯಲಾಗದ ಆಲ್ಬಂ ಆಗಿ ಮೆರೆಯಿತು. ಜಗಜಿತ್ ಅವರಿಗೆ ಸಾಕಷ್ಟು ಮಾನ್ಯತೆಯನ್ನೂ ತಂದುಕೊಟ್ಟಿತು. ಮಾರಾಟದಲ್ಲೂ ದಾಖಲೆ ನಿರ್ಮಿಸಿ ಸಂಗೀತ ರಸಿಕರನ್ನು ಬೇರೊಂದು ಲೋಕದಲ್ಲಿ ವಿಹರಿಸುವಂತೆ ಮಾಡಿತು. ಅವರ ಸಮ್ ವನ್ ಸಮ್ ವೇರ್` ಮತ್ತೊಂದು ಜಗತ್ಪಸಿದ್ಧ ಆಲ್ಬಂ. ಜೊತೆಗೆ ವಿಘ್ನವಿನಾಶಕ ವಿನಾಯಕನ ಕುರಿತಾದ ಹಾಡುಗಳನ್ನು ಒಳಗೊಂಡ ವಕ್ರತುಂಡ ಮಹಾಕಾಯ’, ಸಂವೇದನಾ, ಜೀವನ್ ಕ್ಯಾ ಹೈ, ಆಯಿನಾ, ತುಮ್‌ತೊ ನಹೀ ಹೋ ಅವರ ಪ್ರಮುಖ ಆಲ್ಬಂಗಳು.  ಇವೆಲ್ಲವೂ  ಜಗತ್ತಿನಾದ್ಯಂತ ಜನಮನ್ನಣೆ ಗಳಿಸಿವೆ.

ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಜೊತೆಗೂಡಿ ಹೊರತಂದ ಸಜ್ದಾ` ಆಲ್ಬಂ ಕೂಡ ದಾಖಲೆ ನಿರ್ಮಿಸಿತು. ತುಮ್ ಜೋ ಇತ್‌ನಾ ಮುಸ್ಕುರಾ ರಹೇ ಹೋ, ಏ ತೇರಾ ಘರ್ ಏ ಮೇರಾ ಘರ್.. ಹೀಗೆ ಲವಾರು ಸಿನಿಮಾ ಗೀತೆ ಮತ್ತು ಗಜಲ್ ಆಲ್ಬಂಗಳನ್ನು ಹೊರತಂದು ಸಂಗೀತದಲ್ಲಿ ಗಟ್ಟಿ ನೆಲೆಯಾಗಿ ನಿಂತ ಸಿಂಗ್, ಗಜಲ್ ಲೋಕದಲ್ಲಿ ದಂತಕತೆಯಾದರು. ಗಜಲ್ ಪ್ರಪಂಚದ ಈ ಅಪರೂಪದ ಪ್ರತಿಭೆಗೆ ಕೇಂದ್ರ ಸರ್ಕಾರ 2003ರಲ್ಲಿ ಪದ್ಮಭೂಷಣ ಪ್ರಶಸ್ತಿ ಸಂದಿತು.

ಗಜಲ್‌ನಲ್ಲಿ ಸದಾ ಹೊಸತನ ನೀಡುವುದು ಸಿಂಗ್ ಅವರ ಮಹತ್ವದ ಸಾಧನೆ. ಗಜಲ್‌ಗಳಿಗಾಗಿಯೇ ಮೊದಲ ಬಾರಿಗೆ 12 ತಂತಿಗಳ ಗಿಟಾರ್ ಮತ್ತು ಬೇಸ್ ಗಿಟಾರ್‌ಗಳನ್ನು ಬಳಸಿದ್ದು ಕೂಡ ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಮಹತ್ವದ ಕೊಡುಗೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಸಾಥಿ ವಾದ್ಯಗಳಾದ ತಬಲಾ, ಹಾರ್ಮೋನಿಯಂಗಳನ್ನು ಜಗಜಿತ್ ಗಜಲ್‌ಗಳಿಗೆ ವಿಭಿನ್ನವಾಗಿ ಬಳಸಿದರು. ಗಜಲ್‌ನ ಇಂಪು ಇನ್ನಷ್ಟು ಹೆಚ್ಚಿಸಲು ಸ್ಯಾಕ್ಸೊಫೋನ್ ಅನ್ನೂ ತಮ್ಮ ಗಾಯನಕ್ಕೆ ಸಾಥಿಯನ್ನಾಗಿ ಮಾಡಿಕೊಂಡರು. ವಿವಿಧ ವಾದ್ಯಗಳೊಂದಿಗೆ ಹಾಡಿ, ಪ್ರಯೋಗ ಮಾಡಿ ಯಶಸ್ವಿಯೂ ಆದರು.

ಜಗಜಿತ್ ಸಿಂಗ್ ಹುಟ್ಟಿದ್ದು 1941 ಫೆಬ್ರುವರಿ 8ರಂದು ರಾಜಸ್ತಾನದ ಗಂಗಾ ನಗರದಲ್ಲಿ. ಖಾಯಂ ಆಗಿ ನೆಲೆ ಊರಿದ್ದು ಮುಂಬಯಿಯಲ್ಲಿ.  ತಂದೆ ಅಮರ್‌ಸಿಂಗ್ ಧಿಮಾನ್ ಸರ್ಕಾರಿ ಅಧಿಕಾರಿ. ತಾಯಿ ಸರ್ದಾರ್ನ್ ಬಚ್ಚನ್ ಕೌರ್ ಗೃಹಿಣಿ. ಹುಟ್ಟೂರಿನಲ್ಲೇ ಆರಂಭದ ಶಿಕ್ಷಣ. ಜಲಂಧರ್‌ನಲ್ಲಿ ಕಲಾ ಪದವಿ. ಮುಂದೆ ಹರಿಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಹೀಗೆ ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದರೂ ಸಂಗೀತದತ್ತಲೇ ಅವರಿಗೆ  ವಿಶೇಷ ಒಲವು. ಖ್ಯಾತ ಸಂಗೀತಗಾರ ಪಂಡಿತ್ ಛಗನ್‌ಲಾಲ್ ಶರ್ಮ ಅವರಿಂದ ಶಾಸ್ತ್ರೀಯ ಸಂಗೀತ ಕಲಿಕೆ. ಖಯಾಲ್, ಠುಮ್ರಿ, ಧ್ರುಪದ್‌ನಲ್ಲಿ ಪರಿಣತಿ ಸಾಧಿಸಿದ್ದರೂ ಗಜಲ್‌ನತ್ತಲೇ ಅವರಿಗೆ ವಿಶೇಷ ಆಕರ್ಷಣೆ. ಗಜಲ್‌ನಲ್ಲಿ ಮಹತ್ಸಾಧನೆ ಮಾಡಬೇಕೆಂಬ ಆಶಯ  ಹೊತ್ತು, 1965ರಲ್ಲಿ ಮುಂಬಯಿಯತ್ತ ಪಯಣಿಸಿ ಸಾಧನೆಯ ಶಿಖರಕ್ಕೇರಿದರು, ಗಾಯಕಿ ಚಿತ್ರಾ ಅವರನ್ನು ಪ್ರೀತಿಸಿ ಮದುವೆಯಾದರು. ಅವರ ಒಬ್ಬನೇ ಪುತ್ರ ಕೆಲ ವರ್ಷಗಳ ಹಿಂದೆ (20ನೇ ವಯಸ್ಸಿನಲ್ಲಿ) ರಸ್ತೆ ಅಪಘಾತವೊಂದರಲ್ಲಿ ಅಸುನೀಗಿದ್ದರು. ಮಗನ ಅಗಲಿಕೆಯಿಂದ ವ್ಯಾಕುಲರಾದರೂಜಗಜಿತ್ ನಂತರ ಸಾಕಷ್ಟು ಗೀತೆಗಳನ್ನು ಹಾಡಿದ್ದರು. ಪ್ರತಿ ಗೀತೆಯಲ್ಲೂ ಅವರ ಅಂತರಾಳದ  ಭಾವಗಳನ್ನು ಹೊರಹೊಮ್ಮಿಸಿ ನಿರುಮ್ಮಳವಾಗಿ ಹಾಡಿದರು.

ಗಜಲ್‌ನಲ್ಲಿ ಆಗಲೇ ಮನೆಮಾತಾಗಿರುವ ಜಗತ್ಪ್ರಸಿದ್ಧ ಗುಲಾಂ ಅಲಿ ಅವರ ನಿಕಟ ಒಡನಾಡಿಯಾಗಿದ್ದರು. ಸಿಂಗ್ ಅವರ ಗಾಯನ ಗಜಲ್ ಪ್ರಿಯರನ್ನು ಭಾವನಾ ಪ್ರಪಂಚಕ್ಕೆ ಕೊಂಡೊಯ್ಯುತ್ತಿತ್ತು. ಪ್ರೀತಿ, ನೋವು, ಬೇಸರ ಮುಂತಾದ ಭಾವನಾತ್ಮಕ ಸಂವೇದನೆಗಳಿಗೆ ಅವರ ಗಾಯನ ಸ್ಪಂದಿಸುತ್ತಿತ್ತು ಎನ್ನುವುದು ಅವರ ಗಾಯನವನ್ನು ಎಂದಿಗೂ ಇಷ್ಟಪಡುತ್ತಿದ್ದ ಹಿರಿಯ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರ ಮನದಾಳದ ಮಾತು.

ಅನೇಕ ಹಿಂದಿ ಸಿನಿಮಾಗಳಿಗೆ ಕಂಠದಾನ ಮಾಡಿದ ಕೀರ್ತಿ ಜಗಜಿತ್ ಸಿಂಗ್ ಅವರದು. ಅಮೀರ್‌ಖಾನ್, ಸೋನಾಲಿ ಬೇಂದ್ರೆ, ನಾಸಿರುದ್ದೀನ್ ಶಾ ಅವರ  ಅಭಿನಯದ ಪ್ರಸಿದ್ಧ ಚಿತ್ರ  ‘ಸರ್ಫರೋಶ್` ಸಿನಿಮಾದಲ್ಲಿ ಕೇಳಿಬರುವ ಇಂಪಾದ ಹಾಡುಗಳು ಸಿಂಗ್ ಅವರ ಕಂಠದಲ್ಲಿಯೇ ಮೊಳಗಿದ್ದವು. ಇದಲ್ಲದೆ ಅನೇಕ ಹಿಂದಿ ಸಿನಿಮಾ ಹಾಡುಗಳನ್ನು ಕೂಡಾ ಅವರು ಹಾಡಿದ್ದರು. ಈ `ಗಜಲ್ ದೊರೆ` ಅಕ್ಟೋಬರ್ 2011ರಲ್ಲಿ ಈ ಲೋಕವನ್ನಗಲಿದರು. ಆದರೆ ಇವರ ಗಾಯನದ ಜೇನಹನಿ ಮಾತ್ರ ಎಂದಿಗೂ ನಿತ್ಯನೂತನ..!


ನಿರೂಪಣೆ:  ಉಮಾ ಅನಂತ್, ಕೃಪೆ ಪ್ರಜಾವಾಣಿ ದಿನಾಂಕ 16 ಅಕ್ಟೋಬರ್ 2011

Tag: Jagajit Singh

ಕಾಮೆಂಟ್‌ಗಳಿಲ್ಲ: