ಶನಿವಾರ, ಆಗಸ್ಟ್ 31, 2013

ಅಮೀರ್ ಖಾನ್

ಅಮೀರ್ ಖಾನ್

ಚಿತ್ರರಂಗದ ಪ್ರಖ್ಯಾತನಾದ ಅಮೀರ್ ಖಾನ್ ಹುಟ್ಟಿದ ದಿನ ಮಾರ್ಚ್ 14, 1965.  ಅಮೀರ್ ಖಾನ್ ಒಬ್ಬ ಜನಪ್ರಿಯ ನಟ ಎಂಬುದಕ್ಕಿಂತ ಆತ ಕ್ರಿಯಾಶೀಲವಾಗಿ ತಾನಿರುವ ಚಿತ್ರ ಮಾಧ್ಯಮವನ್ನು ಉಪಯೋಗಿಸಿದ್ದಾನೆ ಎಂಬ ಕಾರಣಕ್ಕಾಗಿ ಆತನ ಬಗ್ಗೆ ಚಿಂತಿಸುವಂತಾಗುತ್ತದೆ. 

ಪುಟ್ಟ ಹುಡುಗನಾಗಿ ತನ್ನ ಮಿನುಗುವ ಕಂಗಳಿಂದ ಯಾದೋಂಕಿ ಬಾರಾತ್ಸಿನಿಮಾದಲ್ಲಿ ಕಂಡ ಅಮೀರ್, ಮುಂದೆ ಪಾಪಾ ಕೆಹತೆ ಹೈ ಬಡಾ ನಾಮ್ ಕರೇಗಎನ್ನುತ್ತಾ ಯುವಕನಾಗಿ ಬಂದ.  ಆಕರ್ಷಣೆಯ ದೃಷ್ಟಿಯಿಂದ ಮತ್ತೊಬ್ಬ ಖಾನನಾಗಿ, ಚೆಲುವನಾಗಿ ಚಿತ್ರರಂಗದಲ್ಲಿ ಕಾಣುತ್ತಿದ್ದ ಅಮೀರ್, ಸಿನಿಮಾದವರ ದಿನಬೆಳಗಾದರೆ  ಎಲ್ಲರಿಗೂ ಒಂದೊಂದು ಎಂದು ಹಂಚುವ ಪ್ರಶಸ್ತಿಗಳು; ದೊಡ್ಡ ಬ್ಯಾನರುಗಳು ಎಂದು ಅದೇ ಮರ ಸುತ್ತಿಸಿ ಸೃಷ್ಟಿಸುತ್ತಿದ್ದ ಚುರುಮುರಿಗಳಂತಹ ಚಿತ್ರಗಳ ನಿರ್ಮಾಪಕರನ್ನು ಕ್ಯಾರೆ ಅನ್ನದೆ ದೂರ ಇಟ್ಟು ಹೊಸ ರೀತಿಯಲ್ಲಿ ಇಮೇಜುಗಳ ಹುಡುಕಾಟದಲ್ಲಿ ತನ್ನ ಪಾತ್ರಗಳನ್ನು  ಆಯತೊಡಗಿದ.  ಜೋ ಜೀತಾ ವಹೀ ಸಿಕಂದರ್’, ‘ರಂಗೀಲ’, ‘ಸರ್ಫರೋಷ್’, ‘ಗುಲಾಂಇತ್ಯಾದಿಗಳು ಆತನನ್ನು ಸಾಮಾನ್ಯರ ಮಧ್ಯೆ ಕೂಡಾ ವಿಭಿನ್ನವಾಗಿ ತೋರಿದವು. 

ಹೀಗೆ ತನ್ನ ನೆಲೆಯನ್ನು ಅರಸುತ್ತ ಹೊರಟ ಅಮೀರ್ ತಾನೇ ನಿರ್ಮಾಪಕನಾಗಿ ಅಶುತೋಶ್ ಗೌರೀಕರ್  ನಿರ್ದೇಶನದಲ್ಲಿ  ಮೂಡಿಸಿದ ಲಗಾನ್ಚಿತ್ರದ ಮೂಲಕ ವಿಶ್ವವ್ಯಾಪಿಯಾಗಿಬಿಟ್ಟ.  ಅದೇ ಸಮಯದಲ್ಲಿ ಬಂದ, ನವ ಯುವಕ ಫರಾನ್ ಅಖ್ತರ್ ನಿರ್ದೇಶನದ 'ದಿಲ್ ಚಾಹ್ತಾ ಹೈ' ಕೂಡ ಅಮೀರ್ ಖಾನನ ಹೊಸತನ ಹುಡುಕುವಿಕೆಗೆ ಸಂದ ಗೆಲುವಾಗಿತ್ತು. 

ಲಗಾನ್ ವಿಶ್ವಪ್ರಸಿದ್ಧಿಗೆ ಹೊಂದಿಕೊಂಡಂತೆ ಆತನ ವೈಯಕ್ತಿಕ ಬುದುಕು ಗೊಂದಲಕ್ಕೆ ಸಿಲುಕಿ ಕೆಲ ಸಮಯ ಚಿತ್ರರಂಗದಿಂದ  ದೂರವಿದ್ದ ಅಮೀರ್ 'ತಾರೆ ಜಮೀನ್ ಪರ್' ನಿರ್ಮಾಣ ಮತ್ತು  ನಿರ್ದೇಶದ ಮೂಲಕ ತನ್ನ ಸಾಮರ್ಥ್ಯವನ್ನು ಲೋಕಕ್ಕೆ ಇನ್ನಿಲ್ಲದಂತೆ ಪರಚಯಿಸಿಕೊಟ್ಟ.  ತನ್ನ ಹೊಸತನದ ಆಯ್ಕೆಯಿಂದ 'ರಂಗ್ ದೇ ಬಸಂತಿ' ಕೂಡಾ ಯಶಸ್ಸು ಕಂಡದ್ದು ಆಮೀರ್ ಖಾನ್ ಗೆ ಮತ್ತಷ್ಟು ಹಿರಿಮೆ ಜೊತೆಗೂಡಿದಂತಾಯ್ತು.  ಆತ ವಿಭಿನ್ನತೆಗಾಗಿ ಆಯ್ದುಕೊಂಡ ತಮಿಳು ಅವತರಣಿಕೆಯ 'ಗಜನಿ' ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು. 

ಮುನ್ನಾಭಾಯಿ ಚಿತ್ರಗಳ ಸೂತ್ರಧಾರರಾದ ರಾಜ್ ಕುಮಾರ್ ಹಿರಾನಿ ರೂಪಿಸಿದ '3 ಈಡಿಯೇಟ್ಸ್' ಚಿತ್ರ  ಅಮೀರ್ ಮತ್ತು ರಾಜ್ ಕುಮಾರ್ ಹಿರಾನಿ ಅವರನ್ನು ಎಲ್ಲಾ ರೀತಿಯ ಜನಪ್ರಿಯತೆ, ಯಶಸ್ಸು, ಗೌರವಗಳ ಪರಾಕಾಷ್ಠೆಗೆ ಕೊಂಡೊಯ್ಯಿತು.  ಇವೆಲ್ಲವುಗಳ ಜೊತೆಗೆ ಉತ್ತಮ ಚಿತ್ರಗಳ ನಿರ್ಮಾಣದತ್ತ ಒಲವು ತೋರಿದ ಅಮೀರ್ 'ಪೀಪ್ಲಿ ಲವ್' ಚಿತ್ರವನ್ನು ನಿರ್ಮಿಸಿ ಪತ್ರಿಕೆ ಮತ್ತು ಪ್ರೇಕ್ಷಕರಿಬ್ಬರಿಂದಲೂ ಮತ್ತೊಮ್ಮೆ ಪ್ರಶಂಸೆ ಪಡೆದ.   ದೋಭಿ ಘಾಟ್’.  ‘ಡೆಲ್ಲಿ ಬೆಲ್ಲಿ’, ‘ಜಾನೇ ತೂ ಯಾ ಜಾನೇ ನಾಮುಂತಾದವು ಆತನ ನಿರ್ಮಾಣದ ಇನ್ನಿತರ ಚಿತ್ರಗಳು. ಕಳೆದ ವರ್ಷ ಬಿಡುಗಡೆಗೊಂಡ ‘ತಲಾಷ್’ ಚಿತ್ರದಲ್ಲಿ  ಆತ ಉತ್ತಮವಾಗಿ ಅಭಿನಯಿಸಿ ಗಮನ ಸೆಳೆದಿದ್ದರೆ ಇತ್ತೀಚಿನ ಮಾಸಗಳಲ್ಲಿ ಕಂಡ ಆತನ ‘ಧೂಮ್ 3’ ಚಿತ್ರ ಗಲ್ಲಾಪೆಟ್ಟಿಯಲ್ಲಿನ ಎಲ್ಲಾ ಹಿಂದಿನ ದಾಖಲೆಗಳನ್ನೂ ಮುರಿದ ವಿಜಯ ಸಾಧಿಸಿತು.

ಕಳೆದ ವರ್ಷ ಕಿರುತೆರೆಯಲ್ಲಿ ಸತ್ಯಮೇವ ಜಯತೇಎಂಬ ಕಾರ್ಯಕ್ರಮದ ಮೂಲಕ ದೇಶವನ್ನು ಕಾಡುತ್ತಿರುವ ಹಲವಾರು ಸಾಮಾಜಿಕ ಹಾಗೂ ವ್ಯವಸ್ಥಾತ್ಮಕ ಪಿಡುಗುಗಳ ಬಗೆಗೆ ಬೆಳಕು ಚೆಲ್ಲಿದ ರೀತಿ ಅಪಾರ ಜನಪ್ರಿಯತೆ ಪಡೆಯಿತು.  ಈ ಕಾರ್ಯಕ್ರಮ ಜನಪ್ರಿಯತೆಯ ಜೊತೆಗೆ ದೇಶದಾದ್ಯಂತ ಹಲವಾರು ಚರ್ಚೆಗಳನ್ನೂ ಹುಟ್ಟುಹಾಕಿತು. ಇದೀಗ ‘ಸತ್ಯ ಮೇವ ಜಯತೇ’ ಕಾರ್ಯಕ್ರಮದ ಎರಡನೇ ಸರಣಿ ಪ್ರಸಾರವಾಗುತ್ತಿದೆ.  ಈ ಕಾರ್ಯಕ್ರಮ ಭಾರತದ ಕಷ್ಟ, ಭ್ರಷ್ಟ, ಅನಿಷ್ಟಗಳ ಬಡತನವನ್ನು  ಬಿಂಬಿಸತ್ತಲೇ  ಈ ಖಾನನನ್ನು ಮಾತ್ರ ಬಹುಕೋಟಿ ಅಮೀರನನ್ನಾಗಿಸುತ್ತಾ ಮುಂದುವರೆಯುತ್ತಿದೆ.   

ಯಾವುದನ್ನೂ ಮಾಡಲೇಬೇಕು ಎಂದು ಮಾಡದೆ ಅದರ ಬಗ್ಗೆ ಸಾಕಷ್ಟು ಚಿಂತಿಸಿ, ಅಧ್ಯಯನ ಮಾಡಿ ನಂತರವೇ ಕೆಲಸಕ್ಕೆ ಕೈ ಹಾಕುವ ಅಮೀರ್ ಖಾನನ ಮುಂದಿನ ಚಿತ್ರ ಪ್ರಸಿದ್ಧ ನಿರ್ದೇಶಕ ರಾಜ್ ಕುಮಾರ್ ಹಿರಾನಿ ನಿರ್ದೇಶಿಸುತ್ತಿರುವ ‘ಪೀಕೆ’.  ಹೀಗೆ ಹೊಸ ಹೊಸ ದಿಕ್ಕಿನಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ಚಿತ್ರರಂಗವನ್ನು ತನ್ನ ಸಂತಸದ ಕ್ರೀಡಾಂಗಣವನ್ನಾಗಿ ಕಂಡಿರುವ ಅಮೀರ್ ಇನ್ನೂ ಹೆಚ್ಚು ಸಾಧಿಸಲಿ ಎಂದು ಹಾರೈಸಿ, ಹುಟ್ಟು ಹಬ್ಬದ ಶುಭಾಶಯ ಹೇಳೋಣ.


Tag: Amir Khan

ಕಾಮೆಂಟ್‌ಗಳಿಲ್ಲ: