ಬುಧವಾರ, ಆಗಸ್ಟ್ 28, 2013

ಮುಸುರಿ ಕೃಷ್ಣಮೂರ್ತಿ

ಮುಸುರಿ ಕೃಷ್ಣಮೂರ್ತಿ

ಪಡುವಾರಳ್ಳಿ ಪಾಂಡವರು ಚಿತ್ರದ ಕನೆಕ್ಷನ್ ಕಾಳಪ್ಪನನ್ನು ಕನ್ನಡ ಚಿತ್ರಾಭಿಮಾನಿಗಳು ಮರೆತಿರಲಿಕ್ಕೆ ಸಾಧ್ಯವಿಲ್ಲ.  ಈ ಪಾತ್ರದಲ್ಲಿ ಮಿಂಚಿದ ಮುಸುರಿ ಕೃಷ್ಣಮೂರ್ತಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಕಂಡ ಒಂದು ಅದ್ಭುತ ಪ್ರತಿಭೆ.  ಮೈಸೂರಿನ ಹತ್ತಿರದಲ್ಲಿರುವ ಬೆಟ್ಟದಪುರದಲ್ಲಿ ಜುಲೈ 28, 1930ರ ವರ್ಷದಲ್ಲಿ ಮುಸುರಿ ಕೃಷ್ಣಮೂರ್ತಿ ಜನಿಸಿದರು.  ಅವರು ಬಾಲ್ಯದಿಂದಲೇ ಹಾಡುಗಾರಿಕೆ ಮತ್ತು ನಟನೆಯತ್ತ ಗಮನಹರಿಸಿದರು.  ಅವರು ಪ್ರೌಢಶಾಲೆಯಲ್ಲಿ ಓದುತ್ತಿದ್ದ ದಿನಗಳಲ್ಲೇ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಅವರಿಗೆ  ಚಾಮುಂಡೇಶ್ವರಿ ನಾಟಕ ಕಂಪೆನಿಯಲ್ಲಿ ಅವಕಾಶ ದೊರಕಿಸಿಕೊಟ್ಟಿದ್ದರು.  ಒಂದು ದಿನ ಅಂಗಡಿಯಲ್ಲಿ ಕುಳಿತು ಸುಶ್ರಾವ್ಯವಾಗಿ ಹಾಡುತ್ತಿದ್ದ ಈ ಹುಡುಗನ ಗಾಯನವನ್ನು ಕೇಳಿಸಿಕೊಂಡ ಗುಬ್ಬೀ ವೀರಣ್ಣನವರು ಈತನನ್ನು ತಮ್ಮ ನಾಟಕ ಸಂಸ್ಥೆಗೆ ಸೇರಿಸಿಕೊಂಡರಂತೆ.

ಕೃಷ್ಣಮೂರ್ತಿಯವರು ಹಿರಣ್ಣಯ್ಯನವರ ನಾಟಕ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳಲ್ಲಿ ಪಿಟೀಲು ಚೌಡಯ್ಯನವರು ನಿರ್ಮಿಸಿದ ವಾಣಿಚಿತ್ರದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಕಾಲಿಟ್ಟರು.  ಈ ಚಿತ್ರಕ್ಕಾಗಿ ಕೊಯಮತ್ತೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಸಿದ್ಧ ಸಂಗೀತಗಾರರಾದ ಮುಸುರಿ ಸುಬ್ರಮಣ್ಯ ಅಯ್ಯರ್ ಅವರ ಸಂಗೀತ ಕಚೇರಿಯಲ್ಲಿ ಇವರು ಹಾಡಿದ ಕಾರಣದಿಂದಾಗಿ ಕೃಷ್ಣಮೂರ್ತಿ ಎಂಬ ಅವರ  ಹೆಸರಿನಲ್ಲಿ ಮುಸುರಿ ಸೇರಿಕೊಂಡಿತು.  ಹೀಗಾಗಿ ಅವರು ಮುಸುರಿ ಕೃಷ್ಣಮೂರ್ತಿಯಾದರು. 

ಮುಂದೆ ಮುಸುರಿ ಕೃಷ್ಣಮೂರ್ತಿ ತಮ್ಮದೇ ನಾಟಕ ಸಂಸ್ಥೆಯನ್ನು ಕಟ್ಟಿದರು.  ಮಹಾತ್ಮ ಪಿಕ್ಚರ್ಸ್ ಅವರ ಚಿತ್ರಗಳಲ್ಲಿ ಅಭಿನಯಿಸಿದರು.  ಸಿ ವಿ ರಾಜು ಅವರ ಬಳಿ ಇದ್ದು ಸಂಕಲನ ಕೆಲಸ ಕಲಿತರು.  ಶುಭಮಂಗಳ ಚಿತ್ರದಲ್ಲಿ ಮುಸುರಿ ಕೃಷ್ಣಮೂರ್ತಿಯವರು ನೀನ್ ಪೌಡ್ರು ಮಾರೋದೂ ಬ್ಯಾಡ, ನಾನ್ ಅದನ್ನ ಕೊಂಡ್ಕೊಳ್ಳೋದು ಬೇಡ, ಸಂಜೆ ಬಂದ್ಬಿಡು ಹಾಯಾಗ್ ಒಂದು ವಾಕ್ ಹೋಗ್ಬರೋಣಎಂದು ಆರತಿಗೆ ಹೇಳಿದಾಗಆಕೆ ಸಿಟ್ಟಿನಿಂದ ತಾನು ಮಾರಾಟಕ್ಕೆ ತಂದ ಪೌಡರ್ ಅನ್ನು ಇವರ ಮೇಲೆ ಎರಚುತ್ತಾರೆ.  ಆಗ ಈ ಕರೀ ಮೊಕಕ್ ಯಾಕಮ್ಮಾ ಪೌಡ್ರು ವೆಸ್ಟ್ ಮಾಡ್ತೀಯಾ ಎಂದು ನಗೆ ಉಕ್ಕಿಸಿದ್ದುಮುಸುರಿ ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ ಪ್ರಧಾನವಾಗಿ ಸೆಳೆದ ಚಿತ್ರ.  ಇದಾದ ನಂತರದಲ್ಲಿ   ಪಡುವಾರಳ್ಳಿ ಪಾಂಡವರು ಚಿತ್ರದಲ್ಲಿ ಕನೆಕ್ಷನ್ ಕಾಳಪ್ಪನ ಪಾತ್ರವನ್ನು ನಿರ್ವಹಿಸಿದ ನಂತರ ಕನ್ನಡ ಚಿತ್ರೊಧ್ಯಮದಲ್ಲಿ ಅಪಾರ ಜನಪ್ರಿಯತೆ ದೊರಕಿ ಅವರಿಗೆ ಹಲವಾರು ಅವಕಾಶಗಳು ದೊರೆಯಲು ಪ್ರಾರಂಭವಾಯಿತು . ಕನೆಕ್ಷನ್ ಕಾಳಪ್ಪನಾಗಂತೂ ಅವರು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ರೀತಿಯ ನಗೆಯ ಬಿರುಗಾಳಿಯನ್ನೇ ಸೃಷ್ಟಿಸಿಬಿಟ್ಟಿದ್ದರು.  ಸಮಯದ ಗೊಂಬೆ, ಮುಳ್ಳಿನ ಗುಲಾಬಿ, ನಾ ನಿನ್ನ ಬಿಡಲಾರೆ, ಬಂಗಾರದ ಜಿಂಕೆ, ಗುರು ಶಿಷ್ಯರು, ಇಬ್ಬನಿ ಕರಗಿತು, ಬಂಧನ, ಉಪಾಸನೆ, ಮಹಾಪ್ರಚಂಡರು ಮುಂತಾದವು ಅವರ ಇನ್ನಿತರ ಪ್ರಸಿದ್ಧ ಚಿತ್ರಗಳು. 'ಬಂಧನ'ದಲ್ಲಿ ನಾಟಿ ವೈದ್ಯನಾಗಿ, 'ಗುರುಶಿಷ್ಯರು' ಚಿತ್ರದಲ್ಲಿ 'ಶಿಷ್ಯರನ್ನು' ಕೀಟಲೆ ಮಾಡಲಿಕ್ಕೆ ಹೋಗಿ ತಾನೇ ಅಪಾಯಕ್ಕೆ ಸಿಲುಕುವ ಕುಟಿಲಧಾರಿಯಾಗಿ ಅವರು ನೀಡಿರುವ ಅಭಿನಯ ಮನಸ್ಸಿನಲ್ಲಿ ಉಳಿದಿರುವಂತದ್ದು.   ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಮುಸುರಿ ಕೃಷ್ಣಮೂರ್ತಿಯವರು, ‘ನಂಬರ್ ಐದೂ ಎಕ್ಕಎಂಬ ಚಿತ್ರವನ್ನೂ ನಿರ್ಮಿಸಿದ್ದರು. ತಂದೆಯ ಮೇಲಿನ ಅಭಿಮಾನಕ್ಕಾಗಿ ಅವರ ಮಕ್ಕಳು ನಟ ಚಾಣಕ್ಯ ಮುಸುರಿಎಂಬ  ಸಾಕ್ಷ್ಯ ಚಿತ್ರವನ್ನು ತಯಾರಿಸಿದ್ದಾರೆ.

ಗೀತ ರಚನೆ, ಗಾಯನಗಳಲ್ಲೂ ಮುಸುರಿ ಕೃಷ್ಣಮೂರ್ತಿಯವರು ಅವರು ಬಹಳಷ್ಟು ಸಾಧಿಸಿದ್ದರು.  ಹಿಂದೆ ಪ್ರತೀ ವಾರ ರೇಡಿಯೋದಲ್ಲಿ ಪ್ರಸಾರವಾಗುತ್ತಿದ ರಂಗಗೀತೆಗಳಲ್ಲಿ. ಮುಸುರಿಯವರ ಧ್ವನಿಯಲ್ಲಿ ಕೇಳಿಬರುತ್ತಿದ್ದ ಸುಶ್ರಾವ್ಯ ರಂಗಗೀತೆಗಳು ನೆನಪಾಗುತ್ತವೆ. 

ಈ ಮಹಾನ್ ಪ್ರತಿಭಾವಂತ ಕಲಾವಿದರಾದ ಮುಸುರಿ ಕೃಷ್ಣಮೂರ್ತಿಯವರು 1985ರ ವರ್ಷದಲ್ಲಿ ಈ ಲೋಕವನ್ನಗಲಿದರು. 


Tag: Musuri Krishnamurthy

ಕಾಮೆಂಟ್‌ಗಳಿಲ್ಲ: