ಗುರುವಾರ, ಆಗಸ್ಟ್ 29, 2013

ಉಷಾ ಪಿ ರೈ

ಉಷಾ ಪಿ ರೈ

ಮೇ 23ರಂದು  ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಉಷಾ ಪಿ ರೈ ಅವರ ಹುಟ್ಟಿದ ಹಬ್ಬ.  ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಬರಹಗಳಲ್ಲದೆ ಉಷಾ ಅವರು  ಚಿತ್ರಕಲೆಗಳಂತಹ ವಿಭಿನ್ನ ಕಲಾಮಾಧ್ಯಮಗಳಲ್ಲಿ ಕೂಡಾ ಪರಿಣತಿ ಸಾಧಿಸಿದವರು.  ಬ್ಯಾಂಕಿನ ಜವಾಬ್ಧಾರಿಯುತ ಕಾರ್ಯ ನಿರ್ವಹಣೆಗಳ ಜೊತೆ ಜೊತೆಗೆ ಅವರ ಸಾಹಿತ್ಯ, ಕಲಾಭಿರುಚಿ, ಸಮಾಜ ಸೇವೆ ಮತ್ತು ಸಂಘಟನಾ ಚತುರತೆಗಳು ಹೆಸರವಾಸಿಯಾಗಿವೆ.

ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯಲ್ಲಿ ಮೇ 23, 1945ರಲ್ಲಿ ಜನಿಸಿದ ಉಷಾ  ಎಂ.ಎ. ಪದವೀಧರೆ. ತಂದೆ ಸ್ವಾತಂತ್ರ್ಯ ಹೋರಾಟಗಾರ ಹಾಗು ನವಯುಗ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತರಾದ ದಿ. ಕೆ ಹೊನ್ನಯ್ಯಶೆಟ್ಟಿ ಮತ್ತು ತಾಯಿ ಕೆ.ಪದ್ಮಾವತಿ ಶೆಟ್ಟಿ. ಪತಿ ಪ್ರಭಾಕರ ರೈಯವರು ಕೂಡಾ ತುಳು ಮತ್ತು ಕನ್ನಡ ಲೇಖಕ.

ಉಷಾ ಪಿ ರೈ ಅವರಿಗೆ ಅವರ ಅಭಿಮಾನಿಗಳು ಅರ್ಪಿಸಿದ ಸಮೃದ್ಧಿಅಭಿನಂದನಾ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಹಿರಿಯ ಬರಹಗಾರ್ತಿ ಕಮಲ ಹಂಪನಾ  ಬರಹಗಾರರ ಬದುಕು ಹಾಗೂ ಬರಹಗಳು ಪ್ರಾಮಾಣಿಕ, ಪಾರದರ್ಶಕ ಹಾಗೂ ವಸ್ತುನಿಷ್ಠವಾಗಿರಬೇಕು. ಇದನ್ನು ಸಾಹಿತಿ ಕೆ.ಉಷಾ ಪಿ.ರೈ ಅವರ ಬರಹಗಳಲ್ಲಿ ಕಾಣಬಹುದಾಗಿದೆ. ಉಷಾ ಅವರು ತಮ್ಮ  ಬದುಕಿನಲ್ಲಿ ಏನನ್ನು ಕಂಡಿದ್ದಾರೆ. ಅದನ್ನು ತಮ್ಮ ಬರಹ ಹಾಗೂ ಚಿತ್ರಕಲೆಯಲ್ಲಿ ಹೇಳಿದ್ದಾರೆ. ಇಂತಹ ಗುಣ ಪ್ರತಿಯೊಬ್ಬ ಲೇಖಕರು ಬೆಳೆಸಿ ಕೊಳ್ಳಬೇಕಾದ ಅವಶ್ಯಕತೆ ಇದೆ”  ಎಂದು ನುಡಿದ ಮಾತುಗಳು ಉಷಾ ಅವರ ಸಾಧನೆಗೆ ಹಿಡಿದ ಕನ್ನಡಿಯಂತಿದೆ.

ಉಷಾ ಪಿ ರೈ ಅವರ  ಇಪ್ಪತ್ತಕ್ಕೂ  ಹೆಚ್ಚು  ಕೃತಿಗಳು ಪ್ರಕಟಗೊಂಡಿವೆ.  ಉಷಾ ಅವರ  ಮೊದಲ ಕಾದಂಬರಿ "ಅನುಬಂಧ"1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಂಬರಿಗಳು, ಸಣ್ಣಕಥೆಗಳು, ಪ್ರವಾಸ ಕಥನ , ಲೇಖನಗಳು, ಚಿಂತನಗಳು ಪ್ರಕಟಗೊಂಡಿವೆ.

ಪರಿಭ್ರಮಣ, ಅನುಬಂಧ, ಉತ್ತರಣ, ಸುಪ್ತಸ್ವರ, ನಿಶಾನೆ, ಜಾಗೃತಿ, ನಿಯತಿ ಉಷಾ ಅವರ ಕಾದಂಬರಿಗಳಾದರೆ, ಕನಸುಗಳು ನನಸುಗಳು, ಹಕ್ಕಿ ಮತ್ತು ಗಿಡುಗ, ಊರುಕೋಲು (ತುಳುವಿನಲ್ಲಿ) ಕವನ ಸಂಕಲನಗಳು. ಬದುಕೆಂಬ ಚದುರಂಗದಾಟದ ದಾಳಗಳು, ಒಂದೇ ದೋಣಿಯ ಪ್ರಯಾಣಿಕರು, ಆಂತರ್ಯ ಉಷಾ ಅವರ ಪ್ರಸಿದ್ಧ ಕತೆಗಳು. ಲಕ್ಷದ್ವೀಪಕ್ಕೆ ಲಗ್ಗೆ ಇಟ್ಟಾಗ ಅವರ ಪ್ರವಾಸ ಕಥನ.  ಉಷಾ ಅವರ ಸಂಪಾದಿತ ಕೃತಿಗಳಲ್ಲಿ  ನವಯುಗದ ಪ್ರವರ್ತಕ’, ‘ಲೇಖಕಿ’, ‘ಲೇಖಲೋಕ’, ‘ಲೇಖಕಿಯರ ಸಣ್ಣ ಕಥೆಗಳು’, ‘ಎಪ್ಪತ್ತರ ವಯಸು ಇಪ್ಪತ್ತರ ಮನಸು’, ‘ತುಳು ಕಬಿತೆಲು’, ’ಬೊಕ್ಕ ಗಾದೆಲುಪ್ರಮುಖವಾಗಿವೆ. 

ಸಾಹಿತ್ಯಲೋಕದಲ್ಲಷ್ಟೇ  ಅಲ್ಲದೆ  ಚಿತ್ರಕಲಾವಿದರಾಗಿ ಸಹಾ  ಉಷಾ ಪಿ ರೈ ಅವರ ಪ್ರತಿಭೆ  ಹೊರಹೊಮ್ಮಿದ್ದು  ಅವರ  ಚಿತ್ರಗಳು  ಅನೇಕ  ಪ್ರತಿಷ್ಟಿತ ತಾಣಗಳಲ್ಲಿ  ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ. 

ಉಷಾ ಅವರಿಗೆ ಹಲವಾರು ಗೌರವಗಳು ಪ್ರಾಪ್ತವಾಗಿದ್ದುಅತ್ತಿಮಬ್ಬೆ ಗೊರೂರು ಪ್ರತಿಷ್ಠಾನ ಸುವರ್ಣ ಸ್ವಾತಂತ್ರ್ಯೋತ್ಸವ ಸನ್ಮಾನ, ಕುರುಂಜಿ ವೆಂಕಟರಮಣ ಪ್ರತಿಭಾ ಪುರಸ್ಕಾರ, ವಿಜಯಾ ಬ್ಯಾಂಕ್ ಕನ್ನಡ ಸಂಘದ ಗೌರವ, ಸಾಹಿತ್ಯ ಪರಿಷತ್ತಿನಿಂದ ಕೊಡಲಾಗುವ ಬಿ ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿನಿಧಿ ಬಹುಮಾನ, ಅಮ್ಮ ಪ್ರಶಸ್ತಿ, ಬಲಿಯೇಂದ್ರ ಪುರಸ್ಕಾರಗಳು ಪ್ರಮುಖವಾಗಿವೆ. 

ಹಲವಾರು ಕವಿಗೋಷ್ಠಿಗಳಲ್ಲಿ , ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಉಷಾ ಪಿ ರೈ ಅವರು  ಸ್ತ್ರೀಲೋಕ ಕಾಯ೯ಕ್ರಮಗಳ ಮೂಲಕ ಸ್ತ್ರೀಯರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ವ್ಯಾಪಕವಾಗಿ ಚಚಿ೯ಸಿದ್ದಾರೆ. ಐದು ವರ್ಷ 'ಕರ್ನಾಟಕ ಲೇಖಕಿಯರ ಸಂಘದ' ಸಮಥ೯ ಅಧ್ಯಕ್ಷಿಣಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕೃಷಿಯ ಜೊತೆಗೆ 'ಮಹಿಳಾ ದಕ್ಷತಾ ಸಮಿತಿ' ಮತ್ತು 'ವನಿತಾ ಸಹಾಯವಾಣಿ' ಕೇಂದ್ರ ಮುಂತಾದ  ಅನೇಕ  ಸಮಾಜಸೇವಾ  ಸಂಸ್ಥೆಗಳಲ್ಲಿ  ಅವರ  ಸೇವೆ  ಸಲ್ಲುತ್ತಾ ಸಾಗಿದೆ.


ಹೀಗೆ ವಿಭಿನ್ನ ನೆಲೆಗಳಲ್ಲಿ ಮಹತ್ವದ ಸೇವೆ ಸಲ್ಲಿಸಿ ಸಕಲರಿಗೂ ಆದರ್ಶಪ್ರಾಯರಾಗಿ ಸ್ನೇಹ ಜೀವಿಯಾಗಿರುವ ಉಷಾ ಪಿ. ರೈ ಅವರಿಗೆ ಜನ್ಮದಿನದ ಹಾರ್ದಿಕ ಶುಭ ಹಾರೈಕೆಗಳು.

Tag: Usha P. Rai

ಕಾಮೆಂಟ್‌ಗಳಿಲ್ಲ: