ಶುಕ್ರವಾರ, ಆಗಸ್ಟ್ 30, 2013

ಶ್ರೀವಾದಿರಾಜರು

ಶ್ರೀವಾದಿರಾಜರು

ಶ್ರೀಮಧ್ವಾಚಾರ್ಯರ ಬಳಿಕ ದ್ವೈತಮತದ ಪ್ರವರ್ತಕರಾಗಿ ಮೆರೆದು ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. 120 ವರ್ಷಗಳ ಕಾಲ ಈ ನೆಲದಲ್ಲಿ ನಡೆದಾಡಿ (ಕ್ರಿ.ಶ. 1480-1600) ಸ್ವೇಚ್ಛೆಯಿಂದ ದೇವಲೋಕಕ್ಕೆ ನಡೆದ ಮಹಾನ್‌ ಯೋಗಿ, ಯೋಗಿಗಳ ರಾಜ ಶ್ರೀವಾದಿರಾಜರು.  ಆಚಾರ್ಯ ಮಧ್ವರಿಗೊಲಿದ ಕಡೆಗೋಲ ಕೃಷ್ಣ ನೆಲೆನಿಂತ ಉಡುಪಿಯ ಇತಿಹಾಸಕ್ಕೆ ಚಿನ್ನದ ಮೆರುಗನ್ನಿತ್ತವರು ಶ್ರೀವಾದಿರಾಜರು.  ಸಾಮಾಜಿಕ ಸುಧಾರಣೆಗಳ ಜತೆಗೆ ಅಧ್ಯಾತ್ಮದ ಬದುಕಿಗೊಂದು ಕಲಾತ್ಮಕತೆಯನ್ನಿತ್ತು ಲೌಕಿಕಕ್ಕೆ ಅಲೌಕಿಕದ ಬೆರಗನ್ನಿತ್ತವರು ಶ್ರೀವಾದಿರಾಜರು. ಕನಕದಾಸರಿಗೊಲಿದು ಕೃಷ್ಣ ಅವರಿಗೆ ದರ್ಶನವಿತ್ತ ಗೋಡೆಯ ಬಿರುಕಿನಲ್ಲೆ ಕಿಂಡಿಯೊಂದನ್ನಿರಿಸಿ, ಅದನ್ನು ಕನಕನ ಕಿಂಡಿ' ಎಂದು ಕರೆದು, ಕೃಷ್ಣನ ಮೊದಲ ಧೂಳಿ ದರ್ಶನ' ಅದರ ಮೂಲಕವೆ ನಡೆಯಬೇಕು ಎಂಬ ಪದ್ಧತಿಯನ್ನು ಬಳಕೆಗೆ ತಂದು, ಕನಕ ಭಕ್ತಿಗೆ ಉಡುಪಿಯಲ್ಲೊಂದು ಐತಿಹಾಸಿಕ ದಾಖಲೆ ನಿರ್ಮಿಸಿದ ದೂರದರ್ಶಿ ಶ್ರೀವಾದಿರಾಜರು.

ಕನಕದಾಸರು ಕೃಷ್ಣನಿಗೆ ಗೆರಟೆಯಲ್ಲಿ ಅಂಬಲಿ ಅರ್ಪಿಸುತ್ತಿದ್ದರೆಂದು ಕೃಷ್ಣನ ನಿತ್ಯಪೂಜೆಯಲ್ಲಿ ಇಂದಿಗೂ ಗೆರಟೆ ಗಂಜಿ' ಸಮರ್ಪಣೆ ನಡೆಯುವಂತೆ ಏರ್ಪಡಿಸಿದ ಇತಿಹಾಸ ಪುರುಷ ಶ್ರೀವಾದಿರಾಜರು.

ವೇದಾಂತ ಸಾಮ್ರಾಜ್ಯದ ಸಂಕೇತವಾದ ತೀರ್ಥ' ಪದವನ್ನು ತೊರೆದು, ಬರಿದೆ ಬಿಡಿ ಸಂನ್ಯಾಸಿಯಂತೆ ವಾದಿರಾಜ'ರೆಂದೆ ಕರೆಸಿಕೊಂಡ ಮಹಾನ್‌ ವಿರಕ್ತ ಶಿಖಾಮಣಿ ಶ್ರೀವಾದಿರಾಜರು. ಹೂವಿನಕೆರೆಯಲ್ಲಿ ಅರಳಿ, ಜಗದಗಲಕ್ಕೆ ಕಂಪು ಬೀರಿದ ಬಂಗಾರದ ಹೂವು ಶ್ರೀವಾದಿರಾಜರು.ದುಷ್ಟರಿಗೆ, ದುರಹಂಕಾರಿಗಳಿಗೆ ನಾಗರಹಾವು ಶ್ರೀವಾದಿರಾಜರು.

ಕನ್ನಡದಲ್ಲಿ ದೇವರ ನಾಮಗಳನ್ನು ಹೊಸೆದು ಮಡಿವಂತಿಕೆಯ ಬಾಯಲ್ಲಿ ಕನ್ನಡದ ಮಂತ್ರ ನುಡಿಸಿದವರು ಶ್ರೀವಾದಿರಾಜರು.  ಪ್ರತಿಯೊಂದು ಪೂಜೆಗೂ, ವೇದಮಂತ್ರಗಳ ಜತೆಗೆ, ಕನ್ನಡದ ಹಾಡುಗಳನ್ನು ಹೊಸೆದು, ಅದಕ್ಕೆ ಒಪ್ಪುವ ರಾಗಗಳನ್ನು ಬೆಸೆದು, ಅದನ್ನು ಹಾಡುವ ಭಾಗವತರ ಪರಂಪರೆಯನ್ನು ಹುಟ್ಟು ಹಾಕಿದವರು ಶ್ರೀವಾದಿರಾಜರು.  ಕೃಷ್ಣನ ಮುಂದೆ ತಾನೆ ಹಾಡುತ್ತ, ನಿರ್ಮಾಲ್ಯದ ತಟ್ಟೆ ತಲೆಯ ಮೇಲಿರಿಸಿ ನಾಟ್ಯವಾಡುವ ಪರಿಯನ್ನು ರೂಢಿಗೆ ತಂದ ಭಕ್ತ ಶಿರೋಮಣಿ ಶ್ರೀವಾದಿರಾಜರು. ತತ್ವವಾದಿಗಳಿಗೆಲ್ಲ ರಾಜರಾಗಿ ಮೆರೆದವರು ಶ್ರೀವಾದಿರಾಜರು.

ಆದರೂ ಶ್ರೀವಾದಿರಾಜರು  ತಮ್ಮ ಹೆಸರಿಗೆ ಹೊಸತೊಂದು ಅರ್ಥವನ್ನು ಹೇಳುತ್ತಾರೆ.   ಆಚಾರ್ಯ ಮಧ್ವರು ನಿಜವಾದ ವಾದಿಗಳು. ಅವರು ನನಗೆ ರಾಜ. ಅದಕೆಂದೆ ನಾನು ವಾದಿರಾಜ. ಇದು ಅವರ ಕೃಪೆಯ ಬಲ ಹೊರತು ನನ್ನ ಸ್ವಂತ ಸಾಮರ್ಥ್ಯವಲ್ಲ. ಅವರು ವೈಣಿಕ. ನಾನು ಅವರು ನುಡಿಸಿದಂತೆ ನುಡಿವ ವೀಣೆ.”   ವಿದ್ಯಾ ದದಾತಿ ವಿನಯಂ ಎಂಬ ಮಾತಿಗೆ ಬೇರೆ ನಿದರ್ಶನ ಬೇಕೆ? ದೊಡ್ಡವರ ಸೌಜನ್ಯಕ್ಕೆ ಸಾಟಿಯಿಲ್ಲ. ಸಣ್ಣವರು ದೊಡ್ಡಸ್ತಿಕೆಯ ನಾಟಕವಾಡುತ್ತಾರೆ. ದೊಡ್ಡವರು ಸಣ್ಣವರಿಗಿಂತ ಸಣ್ಣವರಾಗಿ, ಮಗುವಿಗಿಂತ ಮಗುವಾಗಿ ನಡೆದುಕೊಳ್ಳುತ್ತಾರೆ. ಈ ಸಣ್ಣಸ್ತಿಕೆ'ಯೇ ದೊಡ್ಡಸ್ತಿಕೆಯ ದೊಡ್ಡ ಲಕ್ಷಣ. ಧರ್ಮರಾಜನ ರಾಜಸೂಯದಲ್ಲಿ ಶ್ರೀಕೃಷ್ಣ, ಬಂದ ವಿಪ್ರರ ಕಾಲು ತೊಳೆಯುವ ಕಾಯಕಕ್ಕೆ ನಿಂತನಂತೆ. ಕೃಷ್ಣ ಭಕ್ತರಿಗೆ ಇದೊಂದು ಮಾದರಿ. ವಾದಿರಾಜರು ಇಂತ ಆದರ್ಶದ ಬದುಕನ್ನು ಬದುಕಿದವರು.

ಕು೦ದಾಪುರ ತಾಲ್ಲೂಕಿನ ಕೋಟೇಶ್ವರದ ಸಮೀಪ ಹೂವಿನಕೆರೆಯಲ್ಲಿ ರಾಮಾಚಾರ್ಯ ಸರಸ್ವತಿ ದೇವಿ ದಂಪತಿಗಳಿಗೆ ಇವರ ಜನನ. ಬಹಳ ವರ್ಷಗಳಿಂದ ಪುತ್ರ ಸಂತಾನವಾಗದೇ ಈ ದಂಪತಿಗಳು ಬಹಳ ಚಿಂತೆಯಲ್ಲಿದ್ದರು. ಅದೇ ಸಮಯದಲ್ಲಿ ಅಲ್ಲಿಗೆ ಸಮೀಪದ ಕುಂಬಾಸಿ (ಆನೆಗುಡ್ಡೆ) ಯಲ್ಲಿ ಚಾತುರ್ಮಾಸಕ್ಕೆ ತಂಗಿದ್ದ ಉಡುಪಿಯ ಯತಿಗಳಾಗಿದ್ದ ಶ್ರೀ ವಾಗೀಶ ತೀರ್ಥರಿಗೆ ಈ ದಂಪತಿಗಳು ತಮ್ಮ ಮನಸ್ಸಿನ ಕೊರಗನ್ನು ನಿವೇದಿಸಿಕೊಳ್ಳುತ್ತಾರೆ. ಅವರು ಭಗವ೦ತನನ್ನು ಪ್ರಾರ್ಥಿಸಿ ದಂಪತಿಗಳಿಗೆ ಫಲ ಮಂತ್ರಾಕ್ಷತೆಯನ್ನು ನೀಡಿ ಹುಟ್ಟಿದ ಮಗುವನ್ನು ಶ್ರೀ ಮಠಕ್ಕೆ ಕೊಡುವಂತೆ ತಿಳಿಸುತ್ತಾರೆ.

ಇದರಿಂದ ಒಂದೆಡೆ ಸಂತೋಷವಾದರೆ ಇನ್ನೊಂದೆಡೆ ದುಃಖವಾಗುತ್ತದೆ. ದಂಪತಿಗಳ ಮನಸ್ಸಿನ ದುಗುಡವನ್ನು ಅರಿತ ಶ್ರೀ ವಾಗೀಶತೀರ್ಥರು ಮಗು ಮನೆ ಒಳಗೆ ಜನಿಸಿದರೆ ನೀವೇ ಇಟ್ಟುಕೊಳ್ಳಿ, ಮನೆಯಿಂದ ಹೊರಗೆ ಜನಿಸಿದರೆ ಮಠಕ್ಕೆ ಕೊಡಿ ಎಂದು ಸಮಾಧಾನ ಮಾಡುತ್ತಾರೆ. ಇದರಿಂದ ತೃಪ್ತರಾದ ರಾಮಾಚಾರ್ಯ ದಂಪತಿಗಳು ಮನೆಗೆ ಮರಳುತ್ತಾರೆ.

ರಾಮಾಚಾರ್ಯರು ಬಹಳ ಎಚ್ಚರಿಕೆಯಿಂದ ಪತ್ನಿಯನ್ನು ನೋಡಿಕೊಳ್ಳುತ್ತಾರೆ. ಹೆರಿಗೆ ದಿನ ಹತ್ತಿರ ಬಂದಾಗ ಹೆಂಡತಿಯು ಯಾವ ಕಾರಣಕ್ಕೂ ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಾರೆ. ಆದರೆ ವಿಧಿಯ ಸಂಕಲ್ಪದ ಮುಂದೆ ಮಾನವನ ಪ್ರಯತ್ನ ಎಷ್ಟು ಫಲ ನೀಡೀತು? ಮಾಘ ಶುದ್ಧ ದ್ವಾದಶಿ ದಿನ ರಾಮಾಚಾರ್ಯರು ದ್ವಾದಶಿ ಪಾರಣೆಗೆ ಕುಳಿತಿದ್ದರು. ಹೆ೦ಡತಿ ಸರಸ್ವತಿ ದೇವಿ ಗಂಡನಿಗೆ ಬಡಿಸುತ್ತಿದ್ದರು. ಆಗ ಮನೆಯ ಎದುರಿನ ಗದ್ದೆಯಲ್ಲಿ ದನವೊಂದು ಬೆಳೆದ ಫಸಲನ್ನು ತಿನ್ನುತ್ತಿತ್ತು. ಅದನ್ನು ಓಡಿಸಲೆಂದು ಸರಸ್ವತಿ ದೇವಿ ಗದ್ದೆಗೆ ಇಳಿಯುತ್ತಾರೆ. ದನ ಓಡಿ ಹೋಗುತ್ತದೆ. ಆದರೆ ಸರಸ್ವತಿ ದೇವಿಗೆ ಹೊಟ್ಟೆ ನೋವು ಪ್ರಾರಂಭವಾಗಿ ಅಲ್ಲೇ ಹೆರಿಗೆ ಆಗುತ್ತದೆ. ಅಂದು ಶಾರ್ವರಿ ಸಂವತ್ಸರ ಶುದ್ಧ ದ್ವಾದಶಿ ಸ್ವಾತಿ ನಕ್ಷತ್ರ ಬುಧವಾರ (ಕ್ರಿ. ಶ. 1480) ಹುಟ್ಟಿದ್ದ ಮಗುವಿಗೆ ರಾಮಾಚಾರ್ಯ ದಂಪತಿಗಳು ಭೂ ವರಾಹನೆಂದು ನಾಮಕರಣ ಮಾಡುತ್ತಾರೆ.

ಬಾಲ್ಯದಿಂದಲೇ ವಿಲಕ್ಷಣ ಪ್ರತಿಭೆ ಪಡೆದಿದ್ದ ಭೂ ವರಾಹ ತನ್ನ ಓರಗೆಯ ಹುಡುಗರು ಅಚ್ಚರಿ ಪಡುವಂತೆ ವಿದ್ಯಾಸಂಪನ್ನನಾದ. ಎಂಟನೆಯ ವಯಸ್ಸಿಗೆ ಶ್ರೀ ವಾಗೀಶ ತೀರ್ಥರು ಶಾಸ್ತ್ರೋಕ್ತವಾಗಿ ಸನ್ಯಾಸ ದೀಕ್ಷೆಯನ್ನು ಕೊಟ್ಟು ದ್ವೈತ ಸಿದ್ಧಾಂತವನ್ನು ಉಪದೇಶಿಸಿ "ಶ್ರೀ ವಾದಿರಾಜ ತೀರ್ಥ" ಎಂಬ ಅನ್ವರ್ಥನಾಮವನ್ನಿತ್ತು ಹರಸಿದರು. ಶ್ರೀವಾದಿರಾಜರು ಉಡುಪಿಯ ಕು೦ಬಾಸಿ ಮಠದ 20 ನೇ ಯತಿಗಳಾದರು. ಒಂದು ದಿನ ಬೆಳಗಿನ ಜಾವದಲ್ಲಿ ಶ್ರೀ ಹಯವದನ ಸ್ವಾಮಿಯು ವಾದಿರಾಜರಿಗೆ ಕನಸಿನಲ್ಲಿ ದರ್ಶನವಿತ್ತು ಆಶೀರ್ವದಿಸಿದನು.

ವಾದಿರಾಜರು ಪುಳಕಿತರಾಗಿ ಶ್ರೀ ಹಯವದನನನ್ನು ಸ್ತೋತ್ರ ಮಾಡಿದರು. ಅನಂತರದಲ್ಲಿ ಶ್ರೀ ಹಯವದನನ ಅ೦ಕಿತದಲ್ಲಿ ಶ್ರೀವಾದಿರಾಜರು "ತಾಳುವಿಕೆಗಿಂತ ತಪವು ಇನ್ನಿಲ್ಲ" ಇಂತಹ ಅಸಂಖ್ಯ ಕೀರ್ತನೆ, ಉಗಾಭೋಗಗಳನ್ನು ರಚಿಸಿದರು.

ಶ್ರೀ ಮಧ್ವಾಚಾರ್ಯರ ಕಾಲದಿ೦ದಲೂ ಉಡುಪಿಯಲ್ಲಿ ಎರಡು ತಿಂಗಳಿಗೊಮ್ಮೆ ಪರ್ಯಾಯವಾಗುತ್ತಿತ್ತು. ಆರ್ಥಿಕವಾಗಿ ಉಡುಪಿಯ ಮಠಗಳು ದುಃಸ್ಥಿತಿಯಲ್ಲಿದ್ದವು. ಶ್ರೀವಾದಿರಾಜರು ಅದನ್ನು ಮನಗ೦ಡು ಎಲ್ಲಾ ಮಠಾಧೀಶರ ಒಪ್ಪಿಗೆ ಪಡೆದು 2 ವರ್ಷಗಳಿಗೆ ಬದಲಾಯಿಸಿದರು. ಇದರಿಂದ ಉಳಿದ ಮಠಾಧೀಶರಿಗೆ 14 ವರ್ಷಗಳ ಬಿಡುವು ದೊರೆತು ಅವರು ಆ ಸಮಯದಲ್ಲಿ ದೇಶಾಟನೆ ಮಾಡಿ ಜ್ಞಾನ ಸಂಪಾದನೆ, ಕ್ಷೇತ್ರದರ್ಶನ, ಶಿಷ್ಯರ ಸ೦ಪರ್ಕ ಮಾಡಬಹುದಾಯಿತು. ಈ ಪರಿವರ್ತನೆಯಿಂದ ಮಧ್ವ ಮತ ಪ್ರಚಾರವಾಯಿತು.

ಶ್ರೀ ವಾದಿರಾಜರ ಪರ್ಯಾಯ ಕಾಲದಲ್ಲಿ ಭಕ್ತ ಶ್ರೇಷ್ಠ ಕನಕದಾಸರು ಉಡುಪಿಗೆ ಬಂದಿದ್ದರು. ಶ್ರೀ ವ್ಯಾಸರಾಯರೊಡನೆ ಕನಕದಾಸರನ್ನು ಕಂಡಿದ್ದ ಶ್ರೀವಾದಿರಾಜರು ಅವರನ್ನು ಪ್ರೀತಿಯಿಂದ ಸ್ವಾಗತಿಸಿದ್ದರು. ಅವರಿಗೆ ಶ್ರೀ ಕೃಷ್ಣ ಮಠದ ಪಕ್ಕದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಅವರ ನಿರಂತರ ಕೃಷ್ಣ ಪ್ರಜ್ಞೆಗೆ ಮೆಚ್ಚಿ ಅವರಿಗೆ ಅನವರತ ಕೃಷ್ಣ ದರ್ಶನವಾಗುವಂತೆ ಪಕ್ಕದ ಗೋಡೆಯಲ್ಲಿ ಕಿಟಕಿ ಮಾಡಿಸಿಕೊಟ್ಟಿದ್ದರು. ಅವರ ಭಕ್ತಿಯ ನೆನಪಿಗಾಗಿ ಅವರು ಕೃಷ್ಣನಿಗೆ ಸಮರ್ಪಿಸಿದ್ದ ಕರಟದಲ್ಲಿ ಗಂಜಿ ಮತ್ತು ರೊಟ್ಟಿಯನ್ನು ಕೃಷ್ಣನಿಗೆ ನಿತ್ಯವೂ ನೈವೇದ್ಯ ಮಾಡುವ ಕ್ರಮವನ್ನು ಜಾರಿಗೆ ತಂದಿದ್ದರು. ಮಹಾ ಜ್ಞಾನಿಗಳಾದ ಶ್ರೀವಾದಿರಾಜರು ಶ್ರೀ ಕನಕದಾಸರ ಅಂತರಂಗದ ಕೃಷ್ಣ ಭಕ್ತಿಯನ್ನು ಅರಿತು ಅವರನ್ನು ಗೌರವಿಸಿದ್ದರು. ವಾದಿರಾಜರ ಔದಾರ್ಯಕ್ಕೆ ಬೆರಗಾದ ಕನಕದಾಸರು "ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು" ಎಂದು ಹೃದಯ ತುಂಬಿ ಹಾಡಿದರು.

ಶ್ರೀವಾದಿರಾಜರು ತಾವು ರಚಿಸಿದ ಅಸಂಖ್ಯಾತ ಕೀರ್ತನೆಗಳಿಗಷ್ಟೇ ಅಲ್ಲದೆ ಬೃಹತ್ ಸಾಹಿತ್ಯರಚನೆಯಲ್ಲಿಯೂ ಪ್ರಸಿದ್ಧರಾಗಿದ್ದಾರೆ.  ಅವರ ಸಾಹಿತ್ಯದ ಪ್ರೌಢಿಮೆ ಅತ್ಯಮೋಘವಾದುದು. ಕನ್ನಡ, ತುಳು, ಸಂಸ್ಕೃತ ಭಾಷೆಗಳ ಅವರ ಪದ ಪ್ರಯೋಗ ಪ್ರಾವೀಣ್ಯ ಇನ್ನಾರಲ್ಲೂ ಕಾಣಸಿಗದು. ಇಡೀ ಭರತಖಂಡವನ್ನು ನಾಲ್ಕು ಬಾರಿ ಸಂಚರಿಸಿ ಪ್ರಪ್ರಥಮ ಪ್ರವಾಸ ಸಾಹಿತ್ಯವೆನ್ನಬಹುದಾದ "ತೀರ್ಥ ಪ್ರಬಂಧ" ರಚಿಸಿದರು. ಅವರ "ರುಕ್ಮಿಣೇಶ ವಿಜಯ" ಎಂಬುದು ಮತ್ತೊಂದು ಭವ್ಯ ಸಂಸ್ಕೃತ ಗ್ರಂಥ.   ಅವರು ತಾಯಿಯ ಹರಕೆಗಾಗಿ ರಚಿಸಿದ "ಲಕ್ಷಾಲಂಕಾರ" ಎಂಬ ಕೃತಿಯೂ ಅಮೋಘವಾದುದು. "ಸ್ವಾಪ್ನ ವೃಂದಾ ವನಾಖ್ಯಾನ" ಎನ್ನುವುದು ಅವರ ಅತಿ ವಿಶಿಷ್ಠ ಆತ್ಮಕಥೆ ಎನ್ನಬಹುದು.  ವಾದಿರಾಜರ ಕಾವ್ಯ ಶಾಸ್ತ್ರಮಯ ಮತ್ತು ಶಾಸ್ತ್ರ ಕಾವ್ಯಮಯ. ಸಂಸ್ಕೃತದಲ್ಲಿ ಮೊದಲ ಪ್ರವಾಸ ಸಾಹಿತ್ಯ ವೆಂಕಟಾಧ್ವರಿಯ ವಿಶ್ವಗುಣಾದರ್ಶ ಚಂಪೂ. ಎರಡನೆಯದು ಶ್ರೀವಾದಿರಾಜರ ತೀರ್ಥ ಪ್ರಬಂಧ.   ಅವರ ಯುಕ್ತಿ ಮಲ್ಲಿಕೆ ವೇದಾಂತಪ್ರಪಂಚದಲ್ಲೆ ಸಾಟಿಯಿಲ್ಲದ ಮೇರು ಕೃತಿ. ಕಾವ್ಯಮಯವಾದ ಸುಂದರ ಪದ್ಯಗಳ ದಿವ್ಯ ಪ್ರಪಂಚ. ಕನ್ನಡದಲ್ಲೂ ಅವರು ಅಮೋಘ ಕೃತಿಗಳನ್ನು ರಚಿಸಿದರು.

ವಿಶ್ವತೋಮುಖೀಯಾದ ವಾದಿರಾಜರು ಸಮಾಜಮುಖಿಯಾದ ಬಗೆ, ಸಮಾಜದ ಸಾಮರಸ್ಯಕ್ಕೆ ಅವರು ನೀಡಿದ ಕೊಡುಗೆ ಅನನ್ಯ.  ಸ್ವರ್ಣಕಾರರಾದ ವಿಶ್ವಕರ್ಮ ಬ್ರಾಹ್ಮಣರು ವಾದಿರಾಜರ ತಪಃಶಕ್ತಿಯಿಂದ ಪ್ರಭಾವಿತರಾಗಿ ಅವರ ಶಿಷ್ಯರಾದರು. ಇಡಿಯ ವಿಶ್ವಕರ್ಮ ಜನಾಂಗ ವಾದಿರಾಜರ ಅನನ್ಯ ಅನುಯಾಯಿಗಳಾದರು.  ಕೋಟೇಶ್ವರದ ಬ್ರಾಹ್ಮಣರು ಮೂಲತಃ ಕೋಟದ ಸ್ಮಾರ್ತ ಪರಂಪರೆಗೆ ಸೇರಿದವರು. ಕೋಟದವರಂತೆ ತಮಗೂ ಗುರುಮಠವಿಲ್ಲ ಎಂದು ನಂಬಿ ಬದುಕಿದವರು. ಇಡಿಯ ಗ್ರಾಮಕ್ಕೆ ಗ್ರಾಮವೆ ಈ ನಂಬಿಕೆಗೆ ವಿರುದ್ಧವಾಗಿ ಸಿಡಿದೆದ್ದಿತು. ತಮಗೊಬ್ಬ ಮಾರ್ಗದರ್ಶಕ ಗುರು ಬೇಕು ಎಂದು ನಿರ್ಧರಿಸಿತು. ಪರಿಣಾಮವಾಗಿ ಕೋಟೇಶ್ವರದ ಸಮಗ್ರ ಮಂದಿ ಸ್ಮಾರ್ತ ಸಂಪ್ರದಾಯವನ್ನು ತೊರೆದು, ವಾದಿರಾಜರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ವಾದಿರಾಜರ ಶಿಷ್ಯರಾಗಿ ಮಾಧ್ವ ದೀಕ್ಷೆಯನ್ನು ಪಡೆದರು. ಮಟ್ಟಿಯ ಬ್ರಾಹ್ಮಣರದು ಇನ್ನೊಂದೇ ಕಥೆ. ಯಾವುದೋ ಕ್ಷುದ್ರ ಕಾರಣಕ್ಕಾಗಿ ಪರಿಸರದ ಬ್ರಾಹ್ಮಣ ವರ್ಗ ಅವರನ್ನು ದೂರ ಇಟ್ಟಿತ್ತು.  ಗುಂಪನ್ನು ಒಡೆದು, ಜಗಳ ಮುಂದುವರಿಸಿ ಖುಶಿಪಡುವ ಕ್ಷುದ್ರ ಬುದ್ಧಿಯ ಮಂದಿಯನ್ನು ಸಮಾಜದಲ್ಲಿ ನಾವಿಂದೂ ನೋಡಬಹುದು. ಇಂಥವರು ಮಠಗಳಲ್ಲೂ ಸೇರಿಕೊಂಡು ತಮ್ಮ ಕೊಳಕು ಬುದ್ಧಿಯಿಂದ ಮಠದ ಪರಿಸರವನ್ನೂ ಕೆಡಿಸಿಬಿಡುತ್ತಾರೆ. ಪ್ರೀತಿಯ ಸಾಮರಸ್ಯವನ್ನು ಹಂಚಬೇಕಾದ ಮಠಗಳು ಇಂಥವರಿಂದ ಜಗಳದ ಕೇಂದ್ರಗಳಾಗಿ ಬಿಡುತ್ತವೆ. ಒಡಕಿನ ಬೀಜವನ್ನು ಬಿತ್ತುವ ಹೊಲಸು ಹೊಲಗಳಾಗಿ ಬಿಡುತ್ತವೆ.  ವಾದಿರಾಜರು ಇಂಥ ಕೊಳಕು ರಾಜಕೀಯ, ಮಠದ ಹತ್ತಿರ ಸುಳಿಯದಂತೆ ನೋಡಿಕೊಂಡರು. ಅವರು ಸಾಮರಸ್ಯದ ಸಂದೇಶವನ್ನು ಸಾರಿದರು. ಒಡೆದ ಬಗೆಯನ್ನು, ಮನೆಯನ್ನು ಒಂದುಗೂಡಿಸುವ ಹರಿಕಾರರಾದರು. ಅದಕೆಂದೆ ಅವರು ಮಟ್ಟಿಯ ಬ್ರಾಹ್ಮಣರನ್ನು ಮಡಿವಂತರ ತೆಕ್ಕೆಗೆ ಸೇರಿಸಿದರು. ಅಚ್ಚರಿಯೆಂದರೆ, ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್‌ ಸೇರಿಸಿದರು. ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ'.  ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು -

ತಿನ್ನಬೇಡಿ ಗುಳ್ಳ
ತಿಂದರೆ ವಾದಿರಾಜಗುಳ್ಳ

ಹೀಗೆ ಮಹಾಮಹಿಮರಾದ ಶ್ರೀವಾದಿರಾಜರು ಸತತವಾಗಿ ಭರತ ಖಂಡವನ್ನು ನಾಲ್ಕು ಬಾರಿ ಸಂಚರಿಸಿ ಹರಿಭಕ್ತಿ, ಮಧ್ವ ಸಿದ್ಧಾಂತವನ್ನು ಪ್ರಚಾರ ಪಡಿಸಿದರು. ಉಡುಪಿಯಲ್ಲಿ 5 ಬಾರಿ ಪರ್ಯಾಯವನ್ನು ನಡೆಸಿದರು. ನೂರ ಇಪ್ಪತ್ತು ವರ್ಷ ಬಾಳಿದ ಮಹಾಮಹಿಮರಾದ ಶ್ರೀವಾದಿರಾಜರು ಕ್ರಿ. ಶ. 1600 ರಲ್ಲಿ ಸಶರೀರರಾಗಿ ತಾವು ಪೂಜಿಸುತ್ತಿದ್ದ ಭಗವಂತನ ಸಾನಿಧ್ಯವಿದ್ದ ವೃಂದಾವನವನ್ನು ಪ್ರವೇಶಿಸಿದರು.


ಆಧಾರ:  ಬನ್ನಂಜೆ ಗೋವಿಂದಾಚಾರ್ಯ ಮತ್ತು ಮಾರ್ಕೋಡ್ ತ್ರಿವಿಕ್ರಮ ಪುರಾಣಿಕ್ ಅವರ ಬರಹಗಳು.

Tag: Sri Vadiraja

ಕಾಮೆಂಟ್‌ಗಳಿಲ್ಲ: