ಕ್ರಾಂತಿಕಾರಿ ಕೃಷಿಕ: ಫುಕೋಕ
-ಪಿ. ಲಂಕೇಶ್
(ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನೀನಾಸಂ ಅವರ ಸಾಹಿತ್ಯ ಶಿಬಿರದಲ್ಲಿ ನನಗೆ ಸಿಕ್ಕ ಪುಟ್ಟ
ಪುಸ್ತಕ ಕೆ. ಪಿ. ಪೂರ್ಣಚಂದ್ರ ತೇಜಸ್ವಿಯವರು ಬರೆದ ‘ಸಹಜ
ಕೃಷಿ’. ಇದು ಜಪಾನಿನ ಫುಕೋಕನ ಸಾರ್ಥಕ ಬದುಕಿನ ಒಂದು ಕಥೆ.
ಈ ನಿಜ ಜೀವನದ ಅಧ್ಯಾತ್ಮಿಕ ಕೃಷಿಕ ನಾಯಕನ ಹೆಸರು ಮಸನೋಬು ಫುಕೋಕ. ಇವರ ಜೀವಿತ ಕಾಲ
ಫೆಬ್ರವರಿ 2, 1913 ರಿಂದ ಆಗಸ್ಟ್ 16,
2008. ಕೃಷಿಕರಲ್ಲದ ನಮ್ಮಂಥಹವರಿಗೂ ಬದುಕಿನಲ್ಲಿ ಸಂತಸ ಬೇಕೆಂದರೆ
ಪ್ರಕೃತಿಯೊಂದಿಗೆ ಒಂದಾಗಿ ಹೇಗೆ ಬದುಕಬಹುದೆಂಬುದಕ್ಕೆ ಒಂದು ಮುದ ನೀಡುವ ಪಾಠ. ಈ ಕಿರು
ಪುಸ್ತಕವನ್ನು ಓದಿದ ಸೌಭಾಗ್ಯ ನನ್ನಲ್ಲಿ ಹೃದಯ ತುಂಬಿನಿಂತಿದೆ. ಇಂತಹ ಪುಟದಲ್ಲಿ ಇಡೀ
ಪುಸ್ತಕದ ಸಮಸ್ತವನ್ನೂ ನೀಡಲು ಸಾಧ್ಯವಿಲ್ಲದ ಕಾರಣ, ಈ ಪುಸ್ತಕದಲ್ಲಿನ
ತೇಜಸ್ವಿಯವರ ಬರಹಕ್ಕೆ ಪೂರ್ವಭಾವಿಯಾಗಿ ತೆರೆಯುವ ಲಂಕೇಶರ ಕಿರುಬರಹವನ್ನು ನಿಮ್ಮೊಂದಿಗೆ
ಹಂಚಿಕೊಳ್ಳುತ್ತಿದ್ದೇನೆ.)
ಇಪ್ಪತ್ತು ವರ್ಷದ ಎಲ್ಲರಂತಹ ಹುಡುಗ. ತೀವ್ರವಾಗಿ ಬದುಕಲು ಇಷ್ಟಪಡುವ
ಯೌವನಿಗ. ವಿಜ್ಞಾನದ ವಿದಾರ್ಥಿಯಾಗಿದ್ದು ಒಳ್ಳೆಯ ಅಂಕ ತೆಗೆದು ಪಾಸು ಮಾಡಿದ.
ಪ್ರಯೋಗಶಾಲೆಯಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸಕ್ಕೆ ಸೇರಿದ. ಸಸ್ಯಗಳ
ಸ್ನಾಯುಗಳ ತಜ್ಞ ಈತ; ಸಸ್ಯಗಳಿಗೆ ಬರುವ ರೋಗ, ಅವುಗಳ
ಚಿಕಿತ್ಸೆಯಲ್ಲಿ ನಿಷ್ಣಾತ. ಆತನನ್ನು ಕಂಡರೆ ಅವನ ಮೇಲಧಿಕಾರಿಗೆ ತುಂಬಾ ಇಷ್ಟ.
ಸಹೋದ್ಯೋಗಿಗಳಿಗಂತೂ ಈ ಜೋತೆಗಾರನೆಂದರೆ ಪಂಚಪ್ರಾಣ. ಎಷ್ಟು ಸಹಜನೆಂದರೆ, ಜಪಾನಿನ ಎಲ್ಲ ಹುಡುಗರಂತೆ ಫೋಟೋ ತೆಗೆಯುತ್ತ, ಪಿಕ್ನಿಕ್ಕುಗಳಲ್ಲಿ
ಸಂತೋಷಪಡುತ್ತ, ನೃತ್ಯಕೂಟದಲ್ಲಿ ಹಿಗ್ಗಿ ಕುಣಿಯುತ್ತ ಕಾಲ
ಕಳೆಯುತ್ತಿದ್ದ.
ಹುಡುಗನ ಹೆಸರು ಫುಕೋಕಾ. ಜಪಾನಿನ ದಕ್ಷಿಣದ ಮೂಲೆಯಲ್ಲಿರುವ ಶಿಕೋಕು
ದ್ವೀಪದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದವನು. ಜಪಾನಿನ ಅತ್ಯುತ್ತಮ ಕಾಲೇಜಿನಲ್ಲಿ ಓದಿ
ಪ್ರತಿಭಾವಂತ ಶಿಕ್ಷಕ ಪ್ರೊಫೆಸರ್ ಕುರಾಸೋವನ ಅಚ್ಚು ಮೆಚ್ಚಿನ ಶಿಷ್ಯನಾಗಿದ್ದನು. ಆತನಿಗೆ
ಎಲ್ಲಾ ಇತ್ತು. ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯ, ಅಚ್ಚುಮೆಚ್ಚಿನ ಗೆಳೆಯರು, ಒಳ್ಳೆಯ ಉದ್ಯೋಗ, ಇಲಾಖೆಯ ಮುಖ್ಯಸ್ಥರ ವಿಶ್ವಾಸ ಎಲ್ಲವೂ ಇತ್ತು. ಆದರೆ ಇಪ್ಪತ್ತೈದು ವಯಸ್ಸು
ಮುಟ್ಟಿದ ಫುಕೊಕಾನ ಆಳದಲ್ಲಿ ಅತೃಪ್ತಿ ಇತ್ತು. ಅಲ್ಲದೆ, ಅವನಲ್ಲಿ
ಅಳುಕು ಹುಟ್ಟಿಸುವಂತೆ ಫುಕೋಕಾ ಆಗಾಗ ಪ್ರಜ್ಞೆ ತಪ್ಪಿ ಬೀಳುತ್ತಿದ್ದ. ತನ್ನ ಜೀವನ
ವಿಧಾನವೇ ಇದಕ್ಕೆ ಕಾರಣವೆಂದು ಅರಿತ ಫುಕೋಕಾ ಒಂದು ದಿನ ತನ್ನ ಕೆಲಸಕ್ಕೆ ರಾಜಿನಾಮೆ
ನೀಡಿದ. ಗೆಳೆಯರಿಗೆಲ್ಲ ಆಶ್ಚರ್ಯ, ಆಘಾತವಾಯಿತು.
ಮೇಲಾಧಿಕಾರಿಗಳು ಚಕಿತರಾದರು. ಅವನನ್ನು ಬೀಳ್ಕೊಡುವ ದಿನ ಎಲ್ಲರೂ
ಖಿನ್ನರಾಗಿದ್ದರು; ಅವತ್ತು ಫುಕುವೋಕಾ ಒಬ್ಬನೇ ನಗು ನಗುತ್ತ
ಪಂಜರದಿಂದ ಹೊರಬಂದ ಹಕ್ಕಿಯಂತಿದ್ದ. ತಾನು ರಾಜಿನಾಮೆ ನೀಡಿದ್ದಕ್ಕೆ ಆತ ಕಾರಣವನ್ನೇ
ಕೊಡಲಿಲ್ಲ; ಯಾಕೆಂದರೆ ಅವನಿಗೇ ಸರಿಯಾಗಿ ಗೊತ್ತಿರಲಿಲ್ಲ.
ರಾಜಿನಾಮೆ ನೀಡಿ ಫುಕೋಕಾ ತನ್ನ ಹಳ್ಳಿಗೆ ಹೋದ. ತಂದೆ
ನೋಡಿಕೊಳ್ಳುತ್ತಿದ್ದ ತೋಟವನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದ. ಆ ವರ್ಷ ನಿಂಬೆಗಿಡಗಳ
ಮೇಲೆ ಪ್ರಯೋಗಮಾಡಲು ಹೋಗಿ, ಅವುಗಳನ್ನು ಕುಡಿಕೊಂಬೆ ತರಿಯದೆ ಹಾಗೇ ಬಿಟ್ಟು ನೂರಾರು
ಗಿಡಗಳು ರೋಗದಿಂದ ಸತ್ತು ಹೋದವು. ಅವನ ತಂದೆ ಬೇಸರಗೊಂಡು, “ದಯವಿಟ್ಟು
ನೀನು ಕೆಲಸದ ಮೇಲೆ ಹೋಗು” ಎಂದು ಕಳಿಸಿದ. ಮತ್ತೆ ಆರೇಳು ವರ್ಷ
ಅದೂ ಇದೂ ನೌಕರಿ ಮಾಡಿಕೊಂಡಿದ್ದ ಪುಕೊಕಾ ಗಿಡಗಳ ಬಗ್ಗೆ, ಭೂಮಿಯ ಬಗ್ಗೆ
ಚಿಂತಿಸುತ್ತಲೇ ಇದ್ದ. ಒಂದು ದಿನ ದಾರಿಯಲ್ಲಿ ಹೋಗುತ್ತಿದ್ದಾಗ ಹಲವು ವರ್ಷಗಳಿಂದ
ಬೀಳುಬಿದ್ದಿದ್ದ ಗದ್ದೆಯಲ್ಲಿ ಕಳೆಯ ನಡುವೆ ಭತ್ತದ ಗಿಡಗಳು ಹುಲುಸಾಗಿ ಬೆಳೆದು ತೆನೆ
ಬಿಟ್ಟಿದ್ದು ನೋಡಿ ಆಶ್ಚರ್ಯಪಟ್ಟ. ಈ ದೃಶ್ಯ ಆತನ ಜೀವನವನ್ನೇ ಬದಲಿಸಿತು.
ಹಳ್ಳಿಗೆ ಹಿಂತಿರುಗಿದ ಫುಕೋಕಾ ತನ್ನ ಕ್ರಾಂತಿಕಾರಿ ಚಟುವಟಿಕೆಗಳನ್ನು
ಆರಂಭಿಸಿದ. ಇದು ಎರಡನೇ ಜಾಗತಿಕ ಯುದ್ಧದಲ್ಲಿ ಜಪಾನ್ ತೊಡಗಿದ್ದ ಕಾಲ; ಜಪಾನಿನ ಸರ್ಕಾರ ಅದೆಂತೋ ಫುಕುವೋಕಾನನ್ನು ಯುದ್ಧದಿಂದ
ಹೊರಗೆ ಬಿಟ್ಟಿತ್ತು. ತನಗಿದ್ದ ಒಂದೂ ಕಾಲು ಎಕರೆ ಗದ್ದೆ ಮತ್ತು ಎರಡೆಕರೆ ಬೆಟ್ಟದ
ತಪ್ಪಲಿನ ಹಣ್ಣಿನ ತೋಟವನ್ನು ತನ್ನ ವ್ಯಕ್ತಿತ್ವದೊಂದಿಗೆ ಬೆಸೆದುಕೊಂಡ ಫುಕೋಕಾ. ಇದು
ಕೇವಲ ಕೃಷಿಯಾಗಿರಲಿಲ್ಲ; ಅವನ ವ್ಯಕ್ತಿತ್ವದ ಕೃಷಿ ಕೂಡಾ
ಆಗಿತ್ತು. ಫಸಲು ಬೆಳೆಯುವ ಕೆಲಸ ತನ್ನ ವೈಯಕ್ತಿಕ ಆರೋಗ್ಯ ಮತ್ತು ಆಧುನಿಕ ನಾಗರೀಕತೆಯ
ಉದ್ದೇಶಗಳನ್ನು ಹುಡುಕುವ ಕೆಲಸ ಕೂಡಾ ಆಗಿತ್ತು. ಇದೊಂದು ದೊಡ್ಡ ವಿಪರ್ಯಾಸ. 1945ರಲ್ಲಿ ಎರಡನೆ ಮಹಾಯುದ್ಧ ಮುಗಿದಿತ್ತು, ಹಿರೋಶಿಮಾ, ನಾಗಸಾಕಿಗಳನ್ನು ಅಣುಬಾಂಬ್ ತೊಡೆದುಹಾಕಿ, ಜಪಾನ್
ಶರಣಾಗತವಾಗಿ ಮತ್ತೊಮ್ಮೆ ರಾಷ್ಟ್ರವನ್ನು ಕಟ್ಟುವ ಬೃಹತ್ ಕ್ರಿಯೆಯಲ್ಲಿ ತೊಡಗಿತ್ತು;
ಯುದ್ಧದ ನಂತರ ಜಪಾನ್ ಅಮೆರಿಕಾದ ಪ್ರಭಾವಕ್ಕೊಳಗಾಗಿ ತನ್ನ ಪರಂಪರಾಗತ
ಕೃಷಿಯನ್ನು ಬದಲಾಯಿಸಿಕೊಂಡಿತು; ಸುಮಾರು ಶೇಕಡಾ ಎಂಭತ್ತು ಭಾಗ
ಜನ ಆಗ ಕೃಷಿಯಲ್ಲಿ ತೊಡಗಿದ್ದರು. ಹೈಬ್ರಿಡ್ ಬೀಜಗಳು, ರಾಸಾಯನಿಕ
ಗೊಬ್ಬರಗಳು, ಕ್ರಿಮಿನಾಶಕಗಳು ಜಪಾನಿನ ಮೇಲೆ ದಾಳಿ ಆರಂಭಿಸಿದ್ದವು.
ಲಕ್ಷ ಎಕರೆಯಷ್ಟು ಹೊಲದಲ್ಲಿ ಗೋಧಿ ಬೆಳೆಯುವ ಅಮೆರಿಕನ್ ರೈತ ಈ ಗೊಬ್ಬರ, ಕ್ರಿಮಿನಾಶಕಗಳ ನೆರವಿನಿಂದ ಒಂದೊಂದು ಎಕರೆಗೆ ಐನೂರು ಡಾಲರಿನಷ್ಟು ಲಾಭ ಗಳಿಸುತ್ತಾನೆ;
ಎಕರೆಗೆ ಸಾವಿರ ನಷ್ಟವಾದರೆ ಒಂದು ಲಕ್ಷ ಡಾಲರಿನಷ್ಟು ಮುಗ್ಗರಿಸುತ್ತಾನೆ.
ಹತ್ತು ಹದಿನೈದು ಎಕರೆಯ ಒಡೆತನದ ಜಪಾನಿನ ರೈತ ಇದನ್ನು ಯೋಚಿಸಲು ಕೂಡಾ ಹೋಗದೆ ತನ್ನ
ಭೂಮಿಯನ್ನು ರಾಸಾಯನಿಕಗಳ ಆಘಾತಕ್ಕೆ ಒಡ್ಡಿದ. ಇದೇ ಸಮಯದಲ್ಲಿ ಫುಕೋಕಾ ತನ್ನ ಅರ್ಥಪೂರ್ಣ
ಪ್ರಯೋಗ ನಡೆಸಿದ್ದ.
ತನ್ನ ಪ್ರಯೋಗ ಆರಂಭಿಸಿದ ಫುಕೋಕಾ ತನ್ನ ಮೂವತ್ತು ವರ್ಷಗಳ ಕಾಲ ಹೊರ
ಜಗತ್ತಿನ ಸಂಬಂಧವನ್ನು ಪೂರ್ತಿ ಕಡಿದುಕೊಂಡು ತನ್ನ ಜಮೀನು ಮತ್ತು ಹಳ್ಳಿಗೆ ತನ್ನ ಬದುಕನ್ನು
ಸೀಮಿತಗೊಳಿಸಿಕೊಂಡ. ಯಾರ ಹಂಗೂ ಇಲ್ಲದೆ, ನೆರವೂ
ಇಲ್ಲದೆ, ಗೊಬ್ಬರ ಹಾಕುವವರಿಲ್ಲದೆ ಗಗನಕ್ಕೆ ಮುತ್ತಿಡುವಷ್ಟು
ಎತ್ತರವಾಗಿ, ದೃಢವಾಗಿ ಬೆಳೆಯುವ ಅರಣ್ಯದ ಮರಗಳು ಕೂಡಾ ಅವನಿಗೆ ಶಿಕ್ಷಣ
ನೀಡತೊಡಗಿದವು. ಅರಣ್ಯದ ನೆಲವನ್ನು ಯಾರು ಉತ್ತರು, ಕೂರಿಗೆ
ಹೂಡಿ ಬಿತ್ತಿದರು, ಗೊಬ್ಬರ ಹಾಕಿದರು? ಯಾರೂ ಇಲ್ಲ. ತಾವೇ ವರ್ಷವರ್ಷಕ್ಕೆ ಉತ್ತಮವಾದ, ಗಟ್ಟಿಯಾದ
ಬೀಜ ರೂಪಿಸಿ, ನೆಲಕ್ಕೆ ಬೀಳಿಸಿ, ಎಲೆಗಳನ್ನು,
ಹೂವು ಕಾಯಿ, ಎಲೆ, ಹಕ್ಕಿಗಳ
ಹಿಕ್ಕೆ ಇತ್ಯಾದಿಗಳನ್ನು ಬೀಳಿಸಿ, ಭೂಮಿ ಅವನ್ನು ಗೊಬ್ಬರವಾಗಿಸಿ ಬೀಜ
ಮೊಳೆತು ಮರವಾಗುತ್ತದೆ. ಅರಣ್ಯದ ನೆಲ ಸಾರಗೊಳ್ಳುತ್ತಾ ಹೋಗುತ್ತದೆ. ಇದರಿಂದ ರೈತ
ಕಲಿತದ್ದು ತೀರಾಕಮ್ಮಿ.
ಫುಕೂಕಾ ಕ್ರಮೇಣ ತನ್ನ ಗದ್ದೆಯನ್ನು ಉಳುವುದನ್ನು ನಿಲ್ಲಿಸಿದ. ಆತನ
ಹೊರಜಗತ್ತಿನ ಜಪಾನ್ ಟ್ರ್ಯಾಕ್ಟರ್, ಟಿಲ್ಲರ್ ಗಳನ್ನು
ಆಮದು ಮಾಡಿಕೊಂಡು ಅಥವಾ ತಾನೇ ತಯಾರಿಸಿ ನೆಲ ಉಳುತ್ತಿದ್ದಾಗಲೇ ಪುಕೊಕಾ ತನ್ನ ಭೂಮಿಯನ್ನು
ಉಳುವುದು ನಿಲ್ಲಿಸಿದ. ಮನುಷ್ಯನ ಅಹಂಕಾರದ ಒಂದು ರೂಪ ಭೂಮಿಯನ್ನು ಅನಗತ್ಯವಾಗಿ
ಛಿದ್ರಗೊಳಿಸುತ್ತಾ ಹೋಗಿ ಅದನ್ನು ಉಳುಮೆ ಎಂದು ಕರೆಯುವುದನ್ನು ಫುಕೋಕಾ ಗಮನಿಸಿದ್ದ.
ಭೂಮಿಯೇ ಬೀಜಕ್ಕೆ ನೆರವಾಗುವಂತೆ ವರ್ತಿಸುತ್ತದೆ ಎಂಬುದನ್ನು ಕಂಡುಕೊಂಡ.
ಆಗ ಜಪಾನಿನಲ್ಲಿ ಬಹಳ ಅಪರೂಪವಾಗುತ್ತಿದ್ದ ಅಸಲಿ ಭತ್ತದ ಬೀಜಗಳನ್ನು, ಬಾರ್ಲಿ ಬೀಜಗಳನ್ನು ಆರಿಸಿ ಗಟ್ಟಿ ತಳಿಗಳನ್ನೇ ವಿಂಗಡಿಸಿಕೊಂಡ. ಜಪಾನಿನ
ಬೇಸಿಗೆ ಮುಗಿದೊಡನೆ ನೆಲಕ್ಕೆ ಭತ್ತದ ಬೀಜಗಳನ್ನು ಸುಮ್ಮನೆ ಚೆಲ್ಲಿದ. ಅವುಗಳ ಮೇಲೆ
ಭತ್ತದ ಹುಲ್ಲನ್ನು ತಂದು ದಟ್ಟವಾಗಿ ಎಸೆಯುತ್ತ ಹೋದ. ಕತ್ತರಿಸಿದ ಹುಲ್ಲಲ್ಲ, ಒಕ್ಕಲಾದ ಮೇಲೆ ಇದ್ದ ಪೂರ್ತಿ ಉದ್ದನೆಯ ಹುಲ್ಲು. ಹುಲ್ಲಿನ ಕೆಳಗೆ ಭತ್ತದ
ಬೀಜಗಳಿದ್ದಾಗಲೇ ಬಾರ್ಲಿಯ ಬೀಜಗಳನ್ನು ಹಾಕಿದ. ಅನೇಕ ತಿಂಗಳು ಜಮೀನಿನಲ್ಲಿ ಹುಲ್ಲು ಮಾತ್ರ
ಕಾಣುತ್ತಿತ್ತು. ಮುಂಗಾರು ಮಳೆ ಬಂದಮೇಲೆ ಹುಲ್ಲು ಕೊಳೆತು ಮಣ್ಣಿನೊಂದಿಗೆ
ಬೆರೆಯತೊಡಗಿದಂತೆ ಭತ್ತದ ಸಸಿ ಅವುಗಳ ನಡುವೆ ಹುಟ್ಟಿದವು. ಇವೆರಡರ ಸ್ಪರ್ಧೆಯಲ್ಲಿ ಕಳೆಗೆ
ಅಷ್ಟು ಅವಕಾಶವಿರಲಿಲ್ಲ. ಇದ್ದ ಅಲ್ಪಸ್ವಲ್ಪ ಕಳೆಯನ್ನು ಕಿತ್ತು ಹಾಕಿದ. ಭತ್ತ
ಬೆಳೆದು ಸ್ವಲ್ಪ ದೊಡ್ಡದಾದಾಗ, ಅದರ ನಡುವಿನ ಕಳೆಯನ್ನು ತೊಡೆದು ಹಾಕಲು,
ಭತ್ತಕ್ಕೆ ಅಗತ್ಯವಾದಷ್ಟು ನೀರು ಕೊಡುವುದಕ್ಕಾಗಿ, ಬಾರ್ಲಿಗಿಂತ
ಮುಂಚೆ ಕೊಯ್ಲಿಗೆ ಬಂದ ಭತ್ತವನ್ನು ಹುಶಾರಾಗಿ ಕೊಯ್ದುಕೊಂಡು, ಒಣಗಿಸಿ,
ಒಕ್ಕಲು ಮಾಡಿ, ಭತ್ತದ ಹುಲ್ಲನ್ನು (ಬಾರ್ಲಿಗೆ
ತೊಂದರೆಯಾಗದಂತೆ) ಭೂಮಿಗೆ ಚೆಲ್ಲಿದ.
“ಕನಿಷ್ಠ ದುಡಿಮೆ” ಎಂದು ಫುಕೋಕಾ
ಕರೆಯುವ ಈ ಬಗೆಯ ಕೃಷಿಯಲ್ಲಿ ಬೀಜವನ್ನು ಗಟ್ಟಿಗೊಳಿಸುತ್ತ ಹೋಗುವುದು, ಭೂಮಿಗೆ
ಧಾನ್ಯವೊಂದನ್ನು ಬಿಟ್ಟು ಎಲ್ಲವನ್ನೂ ಹಿಂದಿರುಗಿಸುತ್ತ ಹೋಗುವುದು ಮುಖ್ಯ. ಫುಕೋಕಾನ
ಬೀಜಗಳು ಹೈಬ್ರಿಡ್ ಬೀಜಗಳಂತಲ್ಲ. ಹೈಬ್ರಿಡ್ ಬೀಜ ಗಟ್ಟಿಯಾಗಿ, ಆಳಕ್ಕೆ
ಬೇರು ಬಿಡುವುದಿಲ್ಲ; ಗಿಡದ ಕಾಂಡಗಳು ರೋಗಳನ್ನು ತಡೆಯುವಷ್ಟು
ದೃಢವಾಗಿರುವುದಿಲ್ಲ; ಅವುಗಳಿಗೆ ಕೃತಕ ಗೊಬ್ಬರ, ಕಾಂಪೋಸ್ಟ್ ಗೊಬ್ಬರ ಅತ್ಯಗತ್ಯ. ಆದರೆ ಫುಕೋಕಾ ಅನೇಕ ವರ್ಷಗಳ ಕಾಲ ದುಡಿದು
ಕಂಡುಕೊಂಡಂತೆ, ಭೂಮಿಯು ತನ್ನ ಸಾರ ರೂಪಿಸಿಕೊಳ್ಳುವುದಕ್ಕೆ ಮಾತ್ರ
ನೆರವಾಗಬೇಕು. ಗದ್ದೆಯನ್ನು ರಾಸಾಯನಿಕಗಳಿಂದ ಮುಕ್ತವಾಗಿಟ್ಟು ಒಳ್ಳೆಯ ಬೀಜಗಳನ್ನು
ರೂಪಿಸುತ್ತ ಹೋದರೆ ಹೈಬ್ರಿಡ್ ಅವಾಂತರವೇ ಅಗತ್ಯವಾಗುವುದಿಲ್ಲ.
ಮೂವತ್ತು ವರ್ಷಕಾಲ ಭೂಮಿಯೊಂದಿಗೆ ಸ್ನೇಹ ಬೆಳೆಸಿಕೊಂಡ ಫುಕೋಕಾ ಸಂಗೀತ, ಸಾಹಿತ್ಯ ರಚನೆಗೆ ಅನಿವಾರ್ಯವಾಗುವಷ್ಟು ಸೂಕ್ಷ್ಮಜ್ಞತೆಯನ್ನು
ರೂಢಿಸಿಕೊಂಡ. ಈ ಸೂಕ್ಷ್ಮಜ್ಞತೆ ಭೂಮಿಯ ಪರಿವರ್ತನೆ, ಬೆಳೆಗಳನ್ನು
ತೆಗೆಯುವುದು, ಇವೆಲ್ಲವೂ ಈತನ ವ್ಯಕ್ತಿತ್ವವನ್ನೇ ರೂಪಿಸಿ ಈತನ
ಕಾಣ್ಕೆಯತ್ತ ಇವನನ್ನು ಕೊಂಡೊಯ್ದವು. ಮೊದಲನೆಯದಾಗಿ ಫುಕೋಕಾ ಅಪ್ಪಟ ಕೃಷಿಕ. ತನ್ನ
ಒಂದೂಕಾಲು ಎಕರೆಯಲ್ಲಿ ಫುಕೋಕಾ ಒಟ್ಟು 27ರಿಂದ 30 ಕ್ವಿಂಟಾಲ್ ಭತ್ತ ಬೆಳೆದ. ಈತನ ಒದೊಂದು ಭತ್ತದ ತೆನೆಯಲ್ಲಿ 250ರಿಂದ 300 ಕಾಳುಗಳಿರುತ್ತವೆ.
ಹಣ್ಣಿನ ತೋಟದಲ್ಲೂ ಫುಕೋಕನ ಪ್ರಯೋಗ-ಅಂದರೆ ಕನಿಷ್ಠ ದುಡಿಮೆಯ ಶೈಲಿ – ನಡೆದಿತ್ತು. ಮರಗಳನ್ನು ಅನಗತ್ಯವಾಗಿ ತರಿದು ಹಾಕದೆ
ಅವು ನೈಸರ್ಗಿಕವಾಗಿ ಬೆಳೆಯಲು ಬಿಟ್ಟ; ಅವು ತಮ್ಮ ಎಲೆ,
ಹೂವು ಹಣ್ಣುಗಳ ಮೂಲಕವೇ ಗೊಬ್ಬರ ರೂಢಿಸಿಕೊಂಡು ಬಲಗೊಳ್ಳಲು ಅವಕಾಶ ನೀಡಿದ.
ತೋಟದ ಪಕ್ಕದಲ್ಲಿದ್ದ ಬಂಜರು ಗುಡ್ಡದ ಇಳಿಜಾರಿನ ನಾಲ್ಕೈದು ಎಕರೆ ಕೊಂಡು ಕೆಲವೇ
ವರ್ಷಗಳಲ್ಲಿ ಹಣ್ಣಿನ ಮರಗಳ ದಟ್ಟ ಅರಣ್ಯವಾಗುವಂತೆ ನೋಡಿಕೊಂಡ. ಆತನ ಕೆಲಸದ ರೀತಿಗೆ ಒಂದು
ಉದಾಹರಣೆ ಕೊಡಬಹುದು. ಒಂದು ಗಿಡದ ಬೀಜ ನೆಟ್ಟು ಬೆಳೆಯಲು ಬಿಡುತ್ತಾನೆ. ಅದರ ಹೂವು,
ಎಲೆ, ಹಣ್ಣುಗಳೆಲ್ಲ ಭೂಮಿಯಲ್ಲಿ ಬೆರೆಯಲು ಅವಕಾಶ
ಕೊಡುತ್ತಾನೆ. ಗಿಡ ಸಾಕಷ್ಟು ಬಲಗೊಂಡ ಮೇಲೆ ಮಾತ್ರ ಹಣ್ಣು ಕೀಳುತ್ತಾನೆ. ಇದೊಂದು
ರೀತಿಯಲ್ಲಿ ಹೆಚ್ಚುವರಿ ಮೌಲ್ಯ ಮಾತ್ರ. ಗಿಡಕ್ಕೆ ಬಹಳ ಕಾಲ ತನ್ನ ಒಡಲಿನ ವಸ್ತುಗಳೇ
ಭೂಮಿಯಲ್ಲಿ ಗೊಬ್ಬರವಾಗಿ ಹಿಂತಿರುಗುವುದು ಅಗತ್ಯವಾಗಿರುತ್ತದೆ.
ಮೂವತ್ತು ವರ್ಷ ಮಣ್ಣು, ಸಸ್ಯ, ಸೂರ್ಯನ ಕಿರಣ,ಪ್ರಕೃತಿಯ ಅದ್ಭುತಗಳನ್ನು ಕಂಡುಕೊಂಡ ಫುಕೋಕಾ
ಪರಂಪರಾಗತ ಕೃಷಿಯ ಕೆಲವು ಅಂಶಗಳನ್ನು ಪಡೆದು ನೈಸರ್ಗಿಕ ಕೃಷಿಯನ್ನು ರೂಪಿಸಿದ್ದ.
ಇದರಲ್ಲಿ ಆತನಿಗೆ ತನ್ನ ವಿಜ್ಞಾನ ಶಿಕ್ಷಣ ನೆರವಾಗಿರಬಹುದು; ಆತನ ಮಾನಸಿಕ, ದೈಹಿಕ ಆರೋಗ್ಯಕ್ಕೆ ಇದು ಅನಿವಾರ್ಯವಾಗಿರಬಹುದು.
ಆದರೆ ಇದೆಲ್ಲದರಿಂದ ಆದ ಫಲಿತಾಂಶ ಮಾತ್ರ ಅರ್ಥಪೂರ್ಣವಾಗಿತ್ತು. ಫುಕೋಕಾ ಅಪ್ಪಟ ಕೃಷಿಕನಾಗಿಯೇ
ಮಾನವನ ಬದುಕಿನ ಬಗ್ಗೆ, ಆತನ ನಾಗರಿಕತೆಯ ದ್ವಂದ್ವಗಳ ಬಗ್ಗೆ ಕೆಲವು
ಸತ್ಯಗಳನ್ನು ಕಂಡುಕೊಂಡಿದ್ದ. ಮನುಷ್ಯನು ಫಸಲು ಬೆಳೆಯುವ ವಿಧಾನಕ್ಕೂ ಆತ ತಿನ್ನುವ
ಆಹಾರಕ್ಕೂ ಸಂಬಂಧವಿರುವುದು; ತಿನ್ನುವ ಆಹಾರಕ್ಕೂ ಆತ ಯೋಚಿಸುವ
ರೀತಿಗೂ ಸಂಬಂಧವಿರುವುದು; ಆತ ಯೋಚಿಸುವ ರೀತಿ ಆತ
ಸೃಷ್ಟಿಸಿಕೊಂಡ ನಾಗರಿಕತೆ ಮತ್ತು ಅದರ ಅಳಿವು ಉಳಿವಿಗೂ ಸಂಬಂಧವಿರುವುದು – ಫುಕೋಕಾಗೆ ಗೊತ್ತಾಗಿತ್ತು. ಕನಿಷ್ಠ ದುಡಿಮೆಯ ಕೃಷಿಕನು ಹಾಡು ಹೇಳುವ, ನಾಟಕ ಆಡುವ ಸಮಯ ಪಡೆಯುತ್ತಾನೆ; ಈ ಕೃಷಿ ಆತನ ಸರ್ವತೋಮುಖ
ಬೆಳವಣಿಗೆಗೆ ನೆರವಾಗುತ್ತದೆ.
ಫುಕೋಕಾ ಇಂಥ ಅಪೂರ್ವ ಕಾಣ್ಕೆಯನ್ನು ದಕ್ಕಿಸಿಕೊಳ್ಳುತ್ತಿದ್ದ ವರ್ಷಗಳಲ್ಲಿಯೇ
ಜಪಾನ್ ವೈಜ್ಞಾನಿಕ ಕೃಷಿಯ ಭ್ರಮೆ ಹಾದಿ ಹಿಡಿದಿತ್ತು. ಎರಡನೆ ಮಹಾಯುದ್ಧದ ತರುವಾಯ
ಅಮೆರಿಕಾದ ಪ್ರಭಾವಕ್ಕೆ ಜಗ್ಗಿದ ಜಪಾನ್ ಸಸ್ಯಗಳನ್ನು ಕತ್ತರಿಸಿ ಅವುಗಳ ಗುಣ ಅಭ್ಯಸಿಸುತ್ತ
ಹೋದಂತೆ ಸಸ್ಯಗಳ ‘ವ್ಯಕ್ತಿತ್ವ’ದ ಬಗ್ಗೆ
ಅಜ್ಞಾನಿಯಾಗುತ್ತ ಹೋಯಿತು’ ಒಂದು ಗಿಡವನ್ನು ಇಡಿಯಾಗಿ ನೋಡುವ
ಶಕ್ತಿ ಕಳೆದುಕೊಳ್ಳುತ್ತ ಹೋಯಿತು. ಸಸ್ಯ ಜಗತ್ತಿಗೂ ಕೀಟಗಳ ಜಗತ್ತಿಗೂ ಇರುವ ಹೊಂದಾಣಿಕೆ
ಮತ್ತು ಘರ್ಷಣೆಯನ್ನೂ ಅರಿಯಲಾರದ ವಿಜ್ಞಾನಿಗಳು ಒಂದೊಂದು ಕೀಟದ ಬಗ್ಗೆ ಒಂದೊದು ತಜ್ಞನಾಗುತ್ತಾ
ಹೋದಂತೆ, ಒಂದೊಂದು ರೋಗಕ್ಕೆ ಒಬ್ಬೊಬ್ಬ ತಜ್ಞನಾಗುತ್ತಾ ಸಾಗಿದಂತೆ
ಸಸ್ಯದ ಒಟ್ಟಾರೆ ಗುಣ, ಜೀವ ಅವರ ಗ್ರಹಿಕೆಯ ಹೊರಕ್ಕೇ ಉಳಿಯಿತು.
ಹೈಬ್ರಿಡ್ ಬೀಜಗಳು ಹೆಚ್ಚಿ, ಕೀಟನಾಶಕಗಳ ಅವಶ್ಯಕತೆಯೂ ಹೆಚ್ಚಿ,
ರಾಸಾಯನಿಕ ಗೊಬ್ಬರ ಅನಿವಾರ್ಯವಾಗಿ ಜಪಾನಿನ ಭೂಮಿ ವಿಷ ಉಣ್ಣತೊಡಗಿತು.
ಅಷ್ಟೇ ಅಲ್ಲ, ಟ್ರಾಕ್ಟರು, ಟಿಲ್ಲರ್
ಗಳ ಉತ್ಪಾದನೆ ವಿತರಣೆ, ಪ್ರಚಾರ, ಜಾಹೀರಾತುಗಳಂತೆಯೇ
ಕೃಷಿಯ ಔಷದಿಗಳ ವ್ಯವಹಾರಗಳ ಮೇಲೆ ಅಂತರ್ ರಾಷ್ಟ್ರೀಯ ಹಿಡಿತಗಳು ತೀವ್ರವಾದವು.
ಕೃಷಿಯನ್ನೂಳಗೊಂಡು ತನ್ನ ಬದುಕನ್ನು ಕೈಗಾರೀಕರಣಗೊಳಿಸಿತು. ಇದರ ಪರಿಣಾಮವಾಗಿ
ಒಂದು ಕಡೆ ಕೃಷಿಯಲ್ಲಿ ಭಾಗವಹಿಸುತ್ತಿದ್ದ ಜಪಾನಿನ ಜನಸಂಖ್ಯೆ ಶೇಕಡಾ ಎಪ್ಪತ್ತೈದರಿಂದ ಶೇಕಡಾ
ಹದಿನೈದಕ್ಕೆ ಇಳಿಯಿತು; ಇನ್ನೊಂದು ಕಡೆ ಕೈಗಾರಿಕೆಯ ಮೂಲಕ
ಶ್ರೀಮಂತವಾದ ಜಪಾನ್ ತನ್ನ ಕೃಷಿಯ ಭೂಮಿಯನ್ನು ಕೈಗಾರಿಕೆಗೆ ಕಬಳಿಸುತ್ತಾ ಉಣ್ಣುವ ಅಭ್ಯಾಸಗಳನ್ನು
ಕೂಡ ಬದಲಿಸಿಕೊಂಡು ಮಾನಸಿಕವಾಗಿ ಅನಾರೋಗ್ಯದ ಸ್ಥಿತಿ ತಲುಪಿತು. ಜಪಾನಿನ ಮನೋರೋಗಿಗಳ
ಸಂಖ್ಯೆ ಹೆಚ್ಚಾದಂತೆ ಹೊಸ ಹೊಸ ದೈಹಿಕರೋಗಗಳ ಸಂಖ್ಯೆಯೂ ಹೆಚ್ಚಾಯಿತು. ನಿಸರ್ಗದ
ಸಾನ್ನಿಧ್ಯದಿಂದ ಬೇರ್ಪಡಿಸಲ್ಪಟ್ಟ ಜಪಾನಿನ ಪ್ರಜೆ ಬೆಳೆ, ಆಹಾರ,
ಚಿಂತನೆ, ನಾಗರೀಕತೆ ಇವುಗಳಿಗಿರುವ ಸಂಬಂಧವನ್ನು
ಮರೆತ. ಫುಕುವೋಕಾನ ಆದರ್ಶ ಪ್ರಜೆ ಜಪಾನಿನಲ್ಲಿ ರೂಪುಗೊಳ್ಳತೊಡಗಿದ ಪ್ರಜೆಯಿಂದ
ಭಿನ್ನವಾದ.
ಆಧುನಿಕತೆಯ ಭ್ರಮೆ ಮತ್ತು ವಿಕೃತ ಬದುಕು - ಹಿಂಸೆ, ದಬ್ಬಾಳಿಕೆ, ಅನ್ಯಾಯ ಬೆಳೆಯುವ
ಸ್ಥಳವೆಂದು ಫುಕೋಕಾನ ನಂಬಿಕೆ. ವಿಕೃತ ಮನುಷ್ಯ ಋತುಗಳಿಗೆ ಬದ್ಧನಾಗಿ ಬೆಳೆಯದೆ ಗಾಜಿನ
ಮನೆಯಲ್ಲಿ, ಕೃತಕ ವಾತಾವರಣದಲ್ಲಿ ಬೆಳೆ ತೆಗೆಯಲು ಯತ್ನಿಸುವುದು,
ಪ್ರಕೃತಿಯನ್ನು ತನ್ನ ಸ್ವಪ್ರತಿಷ್ಠೆಗೆ ತಕ್ಕಂತೆ ತಿರುಚಲು ಯತ್ನಿಸುವುದು,
ಫುಕೋಕಾನ ಕಟು ಟೀಕೆಗೆ ಗುರಿಯಾಗುತ್ತಾನೆ. ತನ್ನ ಪುಟ್ಟಗದ್ದೆ, ತೋಟದಲ್ಲಿ ಪ್ರಕೃತಿ ತಾನಾಗಿಯೇ ಋತುಮಾನಕ್ಕೆ ತಕ್ಕಂತೆ ನೀಡುವ ಮೀನು, ಹೂವು, ಹಣ್ಣು, ಧಾನ್ಯಗಳನ್ನು
ವಿವರಿಸುತ್ತಾನೆ. ಫುಕೋಕಾ ಟ್ರಾಕ್ಟರುಗಳಿಗೆ ಬದಲು ಇಪ್ಪತ್ತೈದು ವರ್ಷದಿಂದ ನೇಗಿಲನ್ನೂ
ಕೂಡಾ ಬಳಸದೆ ಎಲ್ಲರಿಗಿಂತ ಹೆಚ್ಚು ಬೆಳೆ ತೆಗೆದದ್ದು, ತನ್ನ ಭೂಮಿ
ವರ್ಷವರ್ಷಕ್ಕೆ ಫಲವತ್ತಾಗುತ್ತಾ ಹೋದದ್ದು ವಿವರಿಸುತ್ತಾನೆ. ತನ್ನ ತೋಟದ ಕನಿಷ್ಟ
ದುಡಿಮೆಯಿಂದಾಗಿ ತನಗೆ ಉಳಿಯುವ ಸಮಯ, ತನ್ನ ಜೀವನ ವಿಧಾನವನ್ನು
ವರ್ಣಿಸುತ್ತಾನೆ. ರೈತನಿಗೆ ಕೃಷಿ ಮುಖ್ಯವೆಂಬುದು ನಿಜ; ಆದರೆ
ಎಲ್ಲರಂತೆ ಆತನಿಗೆ ಸಾಹಿತ್ಯ, ಸಂಸ್ಕೃತಿಯ ಆಸ್ವಾದನೆ ಕೂಡ ಮುಖ್ಯ;
ತತ್ವಜ್ಞಾನಿಯಾಗುವುದು, ಬದುಕಿನಲ್ಲಿ
ಸಾರ್ಥಕತೆ ಪಡೆಯುವುದು ಮುಖ್ಯ. ಆರೋಗ್ಯವಂತ ದೇಹ, ಮನಸ್ಸು
ಪಡೆದು ಕ್ರೌರ್ಯ, ಸ್ವಾರ್ಥದಿಂದ ಮುಕ್ತನಾಗಿ ಸೂಕ್ಷ್ಮಜ್ಞನೂ
ಸುಸಂಸ್ಕೃತನೂ ಆದ ವ್ಯಕ್ತಿ ಮುಖ್ಯ.
ದ್ವೈತ ನಾಗರೀಕತೆಯ ಎದುರು ನಿಂತು ಸರಳವಾಗಿ, ಸ್ಪಷ್ಟವಾಗಿ ಮಾತಾಡುವ ಫುಕೋಕಾನ ಎಲ್ಲ ಮಾತುಗಳಿಗೆ ಮಾಂತ್ರಿಕ ಶಕ್ತಿ ಬರುವುದು ಆತನ
ಯಶಸ್ವಿಯಾದ ಕೃಷಿಕ ಕ್ರಿಯೆಯಿಂದ. ಆತ ಕೇವಲ ಹೇಳುವವನಲ್ಲ. ಮಾಡಿ ತೋರಿಸುವ
ವ್ಯಕ್ತಿ. ಇಲ್ಲಿ ಒಂದು ಸೂಕ್ಷ್ಮವನ್ನು ಅರಿಯಬೇಕು. ಫುಕೋಕಾನ ಸೂಕ್ಷ್ಮಜ್ಞತೆ,
ತಿಳುವಳಿಕೆ, ತಾದ್ಯಾತ್ಮವಿಲ್ಲದೆ ಆತನ ಶೈಲಿಯ
ಕೃಷಿಗಾಗಿ ಪ್ರಯತ್ನಿಸುವುದು ಕಷ್ಟ. ಹಕ್ಕಿ ತನ್ನ ವಂಶದ ಆರಂಭದ ದಿನಗಳಲ್ಲಿ ಸಾವಿರಾರು
ವರ್ಷ ಪ್ರಯತ್ನಿಸಿ, ಸೋತು ಮತ್ತೆ ಮತ್ತೆ ಯತ್ನಿಸಿ ಗೂಡು ಕಟ್ಟುವ
ಕಲೆಯನ್ನು ಕಲಿತಂತೆ ಫುಕೋಕಾ ಮೂವತ್ತು ವರ್ಷ ಮಣ್ಣಿನೊಂದಿಗೆ, ಸಸ್ಯದೊಂದಿಗೆ
ಸಂಬಂಧ ಬೆಳೆಸಿ ತನ್ನ ಗದ್ದೆಯ, ತನ್ನ ವ್ಯಕ್ತಿತ್ವದ ಕೃಷಿ ಮಾಡಿಕೊಂಡ.
ಫುಕೊಕಾನ ಸಾಧನೆಯ ಆಕರ್ಷಣೆ ಅದರ ಲಾಭದಾಯಕ, ಆರೋಗ್ಯವಂತ
ಗುಣದಲ್ಲಿದೆ. ಗಾಂಧೀಜಿ ಕನಸಿನ ಆರೋಗ್ಯವಂತ ಸರಳ, ಕೃತ್ರಿಮವಿಲ್ಲದ
ಪ್ರಜೆಯನ್ನು ಫುಕೋಕಾನ ಪ್ರಜೆ ಹೋಲುತ್ತಾನೆ. ಗಾಂಧೀಜಿಯಂತೆಯೇ ಫುಕುವೋಕಾ ಪ್ರಕೃತಿಯ
ಋತುಮಾನಕ್ಕೆ ತಕ್ಕಂಥ ನಾಗರಿಕತೆಯ ಮನುಷ್ಯನ ಕ್ರಿಯೆಯ ಪುನರ್ರಚನೆಯನ್ನು ಬಯಸುತ್ತಾನೆ. ಗಾಂಧೀಜಿಯಂತೆಯೇ
ಫುಕುವೋಕಾ ಕೂಡ ಆಧುನಿಕ ಆಶ್ಚರ್ಯ ಮತ್ತು ನಿರ್ಲಕ್ಷಕ್ಕೆ ತುತ್ತಾಗುವ ಅಪಾಯವಿದೆ.
ಯಾಕೆಂದರೆ ಆಧುನಿಕ ಮನುಷ್ಯನ ವೈಜ್ಞಾನಿಕ ತಪ್ಪು ಹೆಜ್ಜೆ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ
ಗೀಳು, ಕೃಷಿಯನ್ನು ಕೂಡಾ ಅಂತರರಾಷ್ಟ್ರೀಯ ಶೋಷಣೆಯ
ಭಾಗವಾಗಿರಿಸಿರುವುದು ಎಲ್ಲರಿಗೆ ಸ್ಪಷ್ಟವಾಗಿ ಕಾಣುವುದು ಈ ಶತಮಾನದಲ್ಲಿ ಎಲ್ಲವೂ ವೇಗವಾಗಿ ದಾಳಿ
ನಡೆಸಿದ್ದರಿಂದ. ಫುಕುವೋಕಾ ಮತ್ತು ಗಾಂಧೀಜಿಯವರ ಆದರ್ಶ ಮನುಷ್ಯ ಪ್ರಶಾಂತ, ಸರಳ, ನಿರಪೇಕ್ಷಿ ಮತ್ತು ಆರೋಗ್ಯವಂತ; ಆದರೆ ಸಾವಿರಾರು ವರ್ಷಗಳಿಂದ ಕೃಷಿ, ಪಾಕಶಾಸ್ತ್ರ, ವಸ್ತ್ರಾಲಂಕಾರದ ವೈವಿಧ್ಯಮಯ ವಾಂಛಲ್ಯಗಳಿಗೆ ಬಿದ್ದಿರುವಾತ ಮನುಷ್ಯ; ಪ್ರಕೃತಿಯನ್ನು ತನ್ನ ಮೂಗಿನ ನೇರಕ್ಕೆ ತಿದ್ದಲು ಯತ್ನಿಸಿದವನು ಈತ. ಅಷ್ಟೇ
ಅಲ್ಲ, ಮಹಾಭಾರತದ ಧರ್ಮರಾಯ ಕೂಡ ಜೂಜಿನ ಮೋಜಿಗೆ ಶರಣಾಗಿ, ಕೃಷ್ಣನು ರಾಜಕೀಯ ತಂತ್ರದ ನಿಷ್ಣಾತನಾಗಿ ನಾಗರಿಕತೆ ಪಡೆಯುವ ಚಿತ್ರ ವಿಚಿತ್ರ
ಆಯಾಮಗಳನ್ನು ಪ್ರದರ್ಶಿಸಿ ಫುಕೋಕಾ, ಗಾಂಧೀಜಿಯ ತಣ್ಣನೆಯ ಮನುಷ್ಯನ
ಪ್ರಕೃತಿಯ ಅಂಗವಾಗಿಯೇ ಕೆಲಸ ಮಾಡುತ್ತ ಪೂರ್ಣವಾಗಿ ತೊಲಗಲು ನಿರಾಕರಿಸುತ್ತದೆ. ಸಿಟ್ಟು
ನೈಸರ್ಗಿಕವೆನ್ನಿಸಿಕೊಂಡು ಕ್ರೌರ್ಯದೊಂದಿಗೆ ಮಿಲನಗೊಳ್ಳುವ ಅಪಾಯ ಸದಾ ಇರುತ್ತದೆ.
ಆದರೆ ಫುಕೋಕಾ ತನಗೆ ವೈಯಕ್ತಿಕವಾಗಿ ಅಗತ್ಯವೆಂದು ಆರಂಭಿಸಿದ ಅನ್ವೇಷಣೆ, ನಾಗರಿಕತೆಯ ಅನಿವಾರ್ಯ ದ್ರವ್ಯವೆನಿಸುತ್ತದೆ. ಮನುಷ್ಯ
ತನ್ನ ಐಲುಗಳ ನಡುವೆಯೂ ಕೈಚಾಚಿ ಪಡೆಯಬಲ್ಲ ನಿಧಿ ಫುಕೊಕಾನ ಕೃಷಿ ಮತ್ತು ತತ್ವದಲ್ಲಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ